ಸಾವು…ಸಂಕಟ…ಸಂತಸ

– ಸಿ.ಪಿ.ನಾಗರಾಜ.

happy-sad-faces
ನಮ್ಮ ವಿದ್ಯಾರ‍್ತಿನಿಲಯದಲ್ಲಿ ಒಂದು ಮಜಬೂತಾದ ವಿಲಾಯ್ತಿ ಹೋರಿಯಿತ್ತು . ಅದರ ಮಯ್ಯಿನ ಆಕಾರ ಮತ್ತು ಅದು ಗತ್ತಿನಿಂದ ಹೆಜ್ಜೆಗಳನ್ನಿಡುವ ರೀತಿಯು ನೋಡುವವರ ಕಣ್ಮನಗಳನ್ನು ಸೆಳೆಯುವಂತಿತ್ತು. ಕಾಳಮುದ್ದನದೊಡ್ಡಿಯ ಸುತ್ತಮುತ್ತಣ ಹತ್ತಾರು ಹಳ್ಳಿಗಳ ನೂರಾರು ಮಂದಿ ಬೇಸಾಯಗಾರರು ಒಳ್ಳೆಯ ತಳಿಯ ಈ ಹೋರಿಯಿಂದ ತಮ್ಮ ಹಸುಗಳಿಗೆ ‘ಹೋರಿ ಬಿಡಿಸಿಕೊಳ್ಳುತ್ತಿದ್ದರು’. ಇದರಿಂದ ವಿದ್ಯಾರ‍್ತಿನಿಲಯಕ್ಕೆ ನಿರಂತರವಾಗಿ ಆದಾಯ ಬರುತ್ತಿತ್ತು. ಈ ಹೋರಿಯ ಮಯ್ಯಿನ ಅಳತೆಗೆ ಸರಿಯಾಗಿ ಹೊಂದುವಂತೆ ಒಂಟೆತ್ತಿನ ಗಾಡಿಯನ್ನು ಮಾಡಿಸಲಾಗಿದ್ದು, ಗಾಡಿಗೆ ಎಶ್ಟೇ ಬರ‍್ತಿ ತುಂಬಿದರೂ, ಅದನ್ನು ಹೋರಿಯು ಲೆಕ್ಕಿಸದೆ ಸರಾಗವಾಗಿ ಎಳೆದು ತರುತ್ತಿತ್ತು. ಹೀಗೆ ನಮ್ಮ ವಿದ್ಯಾರ‍್ತಿನಿಲಯದ ಆವರಣದಲ್ಲಿ ಹೋರಿಯು ಎಲ್ಲರ ಅಚ್ಚುಮೆಚ್ಚಿನ ಹಾಗೂ ಉಪಯುಕ್ತ ಜೀವಿಯಾಗಿತ್ತು.

ಏನಾಯಿತೋ,ಏನು ಕತೆಯೋ! ಇದ್ದಕ್ಕಿದ್ದಂತೆ ಒಂದು ದಿನ ಹೋರಿಯು ‘ಹರುಶ ತಪ್ಪಿ’ ಕಾಯಿಲೆಯಿಂದ ನರಳತೊಡಗಿತು. ಪಶುವಯ್ದ್ಯರಿಂದ ಸಕಾಲದಲ್ಲಿ ಒಳ್ಳೆಯ ಚಿಕಿತ್ಸೆ ಮಾಡಿಸಿದರೂ, ಹೋರಿಯು ಚೇತರಿಸಿಕೊಳ್ಳಲಿಲ್ಲ. ಮೂರೇ ದಿನಗಳಲ್ಲಿ ಅದರ ಸ್ತಿತಿಯು ಚಿಂತಾಜನಕವಾಯಿತು. ನೆಲದ ಮೇಲೆ ತಲೆಯಿಟ್ಟು ನಾಲ್ಕು ಕಾಲುಗಳನ್ನು ನೆಲದ ಉದ್ದಕ್ಕೂ ಚಾಚಿ, ಮೂಕವಾಗಿ ನರಳುತ್ತಾ ಮಲಗಿದ್ದ ಹೋರಿಯ ಕಣ್ಣುಗಳಲ್ಲಿ ಹನಿ ಹನಿಯಾಗಿ ಉರುಳುತ್ತಿದ್ದ ಕಣ್ಣೀರು, ನಮ್ಮೆಲ್ಲರ ಮನಸ್ಸಿಗೆ ತಡೆಯಲಾರದ ಸಂಕಟವನ್ನುಂಟುಮಾಡಿತು. ಕೆಲವೇ ದಿನಗಳ ಹಿಂದೆ ಮತ್ತಮದಗಜದಂತೆ ಕಂಗೊಳಿಸುತ್ತಿದ್ದ ಹೋರಿಯು, ಇಂದು ಕಂಗಾಲಾಗಿ ನೆಲದ ಮೇಲೆ ಒರಗಿರುವುದನ್ನು ಕಂಡಾಗ ಕೆಲವೇ ಗಳಿಗೆಗಳಲ್ಲಿ ಜೀವಿಗಳ ಬಾಳಿನಲ್ಲಿ ಉಂಟಾಗುವ ಏಳುಬೀಳಿನ ಬಗ್ಗೆ ಬೆಚ್ಚಿಬೀಳುವಂತಾಯಿತು. ನಾಲ್ಕನೆಯ ದಿನ ಹೋರಿಯು ಸಾವನ್ನಪ್ಪಿತು. ವಿದ್ಯಾರ‍್ತಿನಿಲಯದಲ್ಲಿದ್ದ ನಾವೆಲ್ಲಾ ಅದರ ಸಾವಿಗಾಗಿ ಕಣ್ಣೀರುಗರೆದೆವು. ನಮ್ಮ ವಿದ್ಯಾರ‍್ತಿನಿಲಯದ ಮುಂದಿನ ತೋಟದಲ್ಲಿ ಅದನ್ನು ಮಣ್ಣುಮಾಡಿದೆವು.

ಹೋರಿಯ ಸತ್ತ ಎರಡು ತಿಂಗಳ ನಂತರ ‘ಹಾಸ್ಟಲ್ ಡೇ’ ಆಚರಣೆಯು ಬಂತು. ‘ಮರಿ ಊಟಕ್ಕೆಂದು’ ಒಂದು ದೊಡ್ಡ ಟಗರನ್ನು ಪಕ್ಕದ ಹಳ್ಳಿಯಿಂದ ಕೊಂಡು ತರಲಾಗಿತ್ತು. ಅಂದು ಅದರ ಕೊರಳನ್ನು ಕೊಯ್ದು, ಅದರ ತೊಗಲನ್ನು ಸುಲಿದು ಕಾಲುಗಳನ್ನು ಕತ್ತರಿಸಿ ಬೇರೆಯಿಟ್ಟು,  ಉಳಿದ ಮಯ್ಯನ್ನು ತುಂಡು ತುಂಡು ಮಾಡಿ, ಗುಡ್ಡೆ ಹಾಕುತ್ತಿರುವುದನ್ನು ಕಂಡು ನಮ್ಮ ಕಣ್ಣುಗಳು ಹಿರಿಹಿರಿ ಹಿಗ್ಗಿದವು. ‘ಹಾಸ್ಟಲ್ ಡೇ’ ಕಳೆದ ನಂತರವೂ, ಅನೇಕ ದಿನಗಳ ಕಾಲ ಬಾಡಿನೂಟದ ರುಚಿಯನ್ನು ಹಾಡಿ ಹೊಗಳುತಿದ್ದೆವು.

ಹೋರಿ ಮತ್ತು ಟಗರಿನ ಸಾವಿನ ಸಮಯದಲ್ಲಿ ನಾವು ಪ್ರತಿಕ್ರಿಯಿಸಿದ ರೀತಿಯು ಅನಂತರದ ದಿನಗಳಲ್ಲಿ ನನ್ನನ್ನು ಬಹಳವಾಗಿ ಕಾಡತೊಡಗಿತು. ಒಂದು ಜೀವಿಯ ಸಾವಿಗಾಗಿ ಸಂಕಟಪಟ್ಟು, ಮತ್ತೊಂದು ಜೀವಿಯ ಸಾವಿನಿಂದ ಸಂತಸಪಟ್ಟ ಈ ಬಗೆಯ ಇಬ್ಬಗೆಯ ಮನದ ಮಿಡಿತಗಳಿಗೆ ಕಾರಣಗಳನ್ನು ತಡಕಾಡಿದಾಗ “ಯಾವುದೇ ಪ್ರಾಣಿಯಿಂದ ಇಲ್ಲವೇ ವ್ಯಕ್ತಿಯಿಂದ ನಾವು ಪಡೆಯುವ ಲಾಬ ಇಲ್ಲವೇ ನಶ್ಟಗಳಿಗೆ ತಕ್ಕಂತೆ ನಮ್ಮ ಮನದಲ್ಲಿ ಒಳಮಿಡಿತಗಳು ಮೂಡಿ ಬರುತ್ತವೆ” ಎಂಬ ಸತ್ಯದ ಅರಿವಾಯಿತು.

(ಚಿತ್ರ ಸೆಲೆ: kayemeyak.blogspot.in )

 

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.