ಪೆರಾರಿಯ ಸೂಪರ್ ಅಮೇರಿಕಾ ಕಾರು

ಜಯತೀರ‍್ತ ನಾಡಗವ್ಡ.

410ಕೆಲವು ಕಾರು, ಬಯ್ಕುಗಳೇ ಹೀಗೆ ಅವುಗಳ ತಯಾರಿಕೆ ನಿಂತರೂ ಅವುಗಳ ಮೇಲಿರುವ ಒಲವು ನಮ್ಮನ್ನು ಅವುಗಳತ್ತ ಸೆಳೆಯುತ್ತಲೇ ಇರುತ್ತದೆ. ಪೋರ‍್ಡ್ ನವರ ಹೆಸರುವಾಸಿ ಮುಸ್ಟಾಂಗ್ (Mustang), ಇಂಡಿಯಾದಲ್ಲಿ ಹಳೆಯ ಮಾರುತಿ – 800 ಕಾರು, ಇಲ್ಲವೇ ಯಮಹಾ ಆರ್ ಎಕ್ಸ್ 100/125 ಇಗ್ಗಾಲಿ ಬಂಡಿ, ಹೀಗೆ ಇವುಗಳ ತಯಾರಿಕೆ ನಿಂತರೂ ಇವುಗಳತ್ತ ಮಂದಿಯ ಪ್ರೀತಿ ಕಡಿಮೆಯಾಗಿಲ್ಲ. ಒಳ್ಳೆಯ ಗೆಯ್ಮೆ, ಅಳವುತನ ಮತ್ತಿತರೆ ವಿಶಯಗಳ ಮೂಲಕ ಇಂದಿಗೂ ಈ ಬಂಡಿಗಳು ಮಂದಿಗೆ ಅಚ್ಚುಮೆಚ್ಚು.

ಪೆರಾರಿಯ ಸೂಪರ್ ಅಮೇರಿಕಾ ಕಾರು ಕೂಡ ಇಂತಹುದೇ ಬಂಡಿಗಳ ಸಾಲಿಗೆ ಸೇರುತ್ತದೆ. ಇತ್ತೀಚೆಗೆ ಅಮೇರಿಕಾದ ಊರೊಂದರಲ್ಲಿ ಹಳೆಯ ಸೂಪರ್ ಅಮೇರಿಕಾ-410 ಕಾರೊಂದು ಮಾರ‍್ಕೂಗಿನಲ್ಲಿ(Auction) 20 ಕೋಟಿಗೂ ಹೆಚ್ಚು ಬೆಲೆಗೆ ಮಾರಾಟವಾಗಿದ್ದು, ಮಂದಿಗೆ ಈ ಕಾರುಗಳ ಬಗೆಗಿನ ಒಲವಿಗೆ ಹಿಡಿದ ಕನ್ನಡಿಯಾಗಿದೆ. ದುಬಾರಿ ಹಾಗೂ ಆಟೋಟದ ಕಾರುಗಳ ತಯಾರಕ, ಇಟಲಿಯ ಪೆರಾರಿ ಕೂಟ, ಅಮೇರಿಕಾದ ಮಾರುಕಟ್ಟೆಗೆಂದೇ ಸೂಪರ್ ಅಮೇರಿಕಾ ಕಾರನ್ನು ತಯಾರಿಸಿತ್ತು. 1950-60ರ ಹೊತ್ತಿಗೆ ಪೆರಾರಿ ಅಮೇರಿಕಾ ಎಂಬ ಕಾರುಗಳನ್ನು ಬಿಡುಗಡೆ ಮಾಡಲು ಆರಂಬಿಸಿತ್ತು. ಬಗೆಬಗೆಯ ಪೆರಾರಿ ಕಾರುಗಳು ಅಮೇರಿಕಾದ ಮಾರುಕಟ್ಟೆಗೆ ಲಗ್ಗೆ ಇಟ್ಟು ಜನರ ಮೆಚ್ಚುಗೆ ಪಡೆದವು.

ವರುಶಗಳೆದಂತೆ ಈ ಕಾರುಗಳನ್ನು ಹೊಸದಾಗಿಸುತ್ತ ಸಾಗಿದ ಪೆರಾರಿ ಕೂಟದವರು 1955-56ರ ಹೊತ್ತಿಗೆ ಮೊದಲ “ಪೆರಾರಿ ಸೂಪರ್ ಅಮೇರಿಕಾ” ಹೆಸರಿನ ಕಾರು ಹೊರತಂದರು. 1955-59 ರವರೆಗೆ ಸೂಪರ್ ಅಮೇರಿಕಾ-410 ಹೆಸರಿನ ಕಾರುಗಳನ್ನು ತಯಾರಿಸಿ ದಾರಿಗಿಳಿಸಲಾಯಿತು. ಒಟ್ಟು 35 ಕಾರುಗಳು ಮಾರಾಟಗೊಂಡು ಅಮೇರಿಕಾದಲ್ಲಿ ಸುದ್ದಿಯಾದವು. ಆ ಹೊತ್ತಿನಲ್ಲಿ 35 ದುಬಾರಿ ಕಾರುಗಳು ಮಾರಾಟವಾಗುವುದೆಂದರೆ ದೊಡ್ಡ ವಿಚಾರವೇ ಸರಿ. ಹೋಲಿಕೆಯಲ್ಲಿ ನೋಡಿದರೆ ಇಂದಿಗೂ ನಮ್ಮ ದೇಶದಲ್ಲಿ ಪೆರಾರಿ ಕೂಟ ಮಾರಿದ ಕಾರುಗಳ ಸಂಕೆ ಅಯ್ವತ್ತು ದಾಟುವುದಿಲ್ಲ. ಕ್ಯಾತ ಕ್ರಿಕೆಟ್ ದಾಂಡಿಗ ಸಚಿನ್ ತೆಂಡುಲ್ಕರ್ ಬಳಿಯು ಪೆರಾರಿ ಕೂಟದ ಆಟೋಟದ ಬಂಡಿಯೊಂದಿದೆ.

Ferrari 410ಸೂಪರ್ ಅಮೇರಿಕಾ-410 ಕಾರು, 5 ಲೀಟರ್ ಅಳತೆಯ ವಿ-ಆಕಾರದ ಬಿಣಿಗೆ ಪಡೆದಿತ್ತು. ಇದರ ಕಸುವು ಹಿಂದಿನ ಪೆರಾರಿ ಅಮೇರಿಕಾ ಕಾರುಗಳಿಗಿಂತ ಹೆಚ್ಚಿದ್ದು 250 ಕಿಲೋವ್ಯಾಟ್ ನಶ್ಟಿತ್ತು. ಈ ಕಾರಿನ ಪ್ರಮುಕ ವಿಶೇಶತೆಯೆಂದರೆ ಕೊಳ್ಳುಗರ ಬೇಡಿಕೆಗೆ ತಕ್ಕಂತೆ ಕಾರಿನ ಮಯ್ಕಟ್ಟನ್ನು ಮಾಡಿಕೊಡಲಾಗುತ್ತಿತ್ತು. ಪೆರಾರಿ ಕೂಟದ ಪ್ರಮುಕ ಈಡುಗಾರ ಪಿನಿನ್ ಪರಿನಾ (Pinin Farina) ಇದರ ಹೊಣೆ ಹೊತ್ತಿದ್ದರು. ನಾಲ್ಕಯ್ದು ವರುಶಗಳ ನಂತರ ಇವುಗಳ ತಯಾರಿಕೆ ನಿಲ್ಲಿಸಿ, ಸೂಪರ್ ಅಮೇರಿಕಾ-400 ಹೆಸರಿನ ಕಾರನ್ನು ಹೊರತರಲಾಯಿತು.

ಸೂಪರ್ ಅಮೇರಿಕಾ-400 ಕಾರಿನಲ್ಲಿ ಮೊದಲಿದ್ದ 410 ಕಾರಿಗಿಂತ ಕಡಿಮೆ ಅಳತೆಯ ಬಿಣಿಗೆ ಅಂದರೆ 4 ಲೀಟರ್ ಗಾತ್ರದ ಬಿಣಿಗೆ ಅಳವಡಿಸಲಾಗಿತ್ತು. ಆದರೆ ಇದು ನೀಡುವ ಕಸುವು ಮಾತ್ರ ಮುಂಚಿನ ಕಾರಿನಶ್ಟೇ ಆಗಿತ್ತು. ಈ ಬಂಡಿಯಲ್ಲೂ ಪಿನಿನ್ ಪರಿನಾರವರು ಸಿದ್ದಪಡಿಸಿದ ಮಯ್ಕಟ್ಟನ್ನು ಕೊಳ್ಳುಗರ ಇಚ್ಚೆಯಂತೆ ಮಾಡಿಕೊಡುವುದಲ್ಲದೇ ಹೊಸದೊಂದು ವಿಶೇಶತೆ ಕೊಡಲಾಗಿತ್ತು. ಬಂಡಿಯ ನಾಲ್ಗಾಲಿಗಳಿಗೂ ತಟ್ಟೆ ತಡೆತವನ್ನು ನೀಡಲಾಗಿತ್ತು. ಸೂಪರ್ ಅಮೇರಿಕಾ – 410 ರ ತಯಾರಿಕೆ ನಿಲ್ಲಿಸಿದ ವರುಶದಿಂದ ಸೂಪರ್ ಅಮೇರಿಕಾ – 400 ಕಾರುಗಳ ತಯಾರಿಕೆ ನಡೆಯಿತು, 1959-64 ರವರೆಗೆ ಒಟ್ಟು 47 ಕಾರುಗಳು ಮಾರಾಟಗೊಂಡು ಪೆರಾರಿಗೆ ದೊಡ್ಡ ಲಾಬತಂದವು. ಪೆರಾರಿ ಕೂಟದವರ ಈ ಸೂಪರ್ ಅಮೇರಿಕಾ ಕಾರುಗಳು ಹಿಂದಿನ ಎಲ್ಲ ಪೆರಾರಿ ಕಾರುಗಳಿಗಿಂತ ಹೆಚ್ಚಿನ ವೇಗ ಹೊಂದಿದ್ದು ಇವುಗಳ ಇನ್ನೊಂದು ವಿಶೇಶ. ಇಂತಹ ಸಿರಿತನ ಹಿರಿಮೆಗಳಿಂದ ಕೂಡಿದ ಕಾರುಗಳನ್ನು ತಯಾರಿಸುತ್ತಲೇ ಸಾಗಿರುವ ಪೆರಾರಿ ಜಗತ್ತಿನ ಮುಂಚೂಣಿ ಕಾರು ಕೂಟಗಳಲ್ಲಿ ಸ್ತಾನ ಪಡೆದುಕೊಂಡಿದೆ.

ಈ ಕಾರುಗಳ ಹೆಚ್ಚಿನ ವಿವರ ಕೆಳಗೆ ಪಟ್ಟಿ ಮಾಡಲಾಗಿದೆ:

Picture1(ಮಾಹಿತಿ ಮತ್ತು ಚಿತ್ರ ಸೆಲೆ: forbes.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: