ಬೇರು ಕಳಚಿದ ಬಳ್ಳಿ

– ಸಿ.ಪಿ.ನಾಗರಾಜ.

batta
ಮಂಡ್ಯ ನಗರದಲ್ಲಿರುವ ಒಂದು ಕಾಲೇಜಿನಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದ್ದ ಬೋರಪ್ಪನವರು ಕಾಲದಿಂದ ಕಾಲಕ್ಕೆ ಬಡ್ತಿ ಪಡೆದು , ಈಗ ಕಚೇರಿಯ ಮೇಲ್ವಿಚಾರಕ ಹುದ್ದೆಯಲ್ಲಿದ್ದರು . ಮಂಡ್ಯಕ್ಕೆ ಹತ್ತು ಕಿಲೊಮೀಟರ್ ದೂರದಲ್ಲಿರುವ ಗದ್ದೆಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದು , ಮದುವೆಯಾದ ಮೇಲೆ ನಗರದಲ್ಲೇ ಸುಮಾರು ಮೂವತ್ತು ವರುಶಗಳಿಂದ ನೆಲೆಯೂರಿದ್ದರೂ , ತಾವು ಹುಟ್ಟಿ ಬೆಳೆದ ಹಳ್ಳಿಯ ಸಂಪರ‍್ಕವನ್ನು ಮಾತ್ರ ಕಳೆದುಕೊಂಡಿರಲಿಲ್ಲ . ಹಿರಿಯರ ತಲೆಮಾರಿನಿಂದ ಬಂದಿದ್ದ ಎರಡು ಎಕರೆ ಗದ್ದೆಯನ್ನು ಆಳುಕಾಳುಗಳಿಗೆ ಗುತ್ತಿಗೆ ನೀಡಿ ತಾವೇ ಸಾಗುವಳಿ ಮಾಡಿಸುತ್ತಿದ್ದರು . ಬೋರಪ್ಪನವರಿಗಿದ್ದ ಬೂಮಿಯ ಮೇಲಣ ಒಲವು , ಅವರ ಹೆಂಡತಿಗಾಗಲಿ ಇಲ್ಲವೇ ಇದ್ದ ಒಬ್ಬನೇ ಮಗ ಉಮೇಶನಿಗಾಗಲಿ ಇರಲಿಲ್ಲ . ವರುಶಕ್ಕೊಮ್ಮೆ ಬರುವ ಮಾರ‍್ಲಮಿ ಹಬ್ಬದ ತಿಂಗಳಿನಲ್ಲಿ ಮಾಳಪಕ್ಶದ ದಿನದಂದು ಬೆಳಗ್ಗೆ ಹೆಂಡತಿ ಮಗ ಇಬ್ಬರೂ ಬೋರಪ್ಪನವರೊಡನೆ ಹಳ್ಳಿಗೆ ಬಂದು , ಹಿರಿಯರಿಗೆ ಎಡೆಯನ್ನು ಒಪ್ಪಿಸಿ , ನೆಂಟರಿಶ್ಟರ ಜತೆಯಲ್ಲಿ ಒಂದೆರಡು ತೋರಿಕೆಯ ಮಾತುಗಳನ್ನಾಡಿ , ಊಟೋಪಚಾರ ಮುಗಿಸಿಕೊಂಡು , ಅಂದೇ ರಾತ್ರಿ ಮಂಡ್ಯ ನಗರಕ್ಕೆ ಹಿಂತಿರುಗುತ್ತಿದ್ದ ಅವರಿಬ್ಬರ ಪಾಲಿಗೆ ಹಳ್ಳಿಯೆಂಬುದು ಸಂಪ್ರದಾಯ ಪಾಲನೆಗಾಗಿ ಹೋಗಿಬರುವ ಜಾಗವಾಗಿತ್ತು .

ನಗರದ ವಾತಾವರಣಕ್ಕೆ ಒಗ್ಗಿಕೊಂಡಿದ್ದ ಹೆಂಡತಿಗೆ , ತನ್ನ ಗಂಡ ಹಳ್ಳಿಗೆ ಎಡೆಬಿಡದೆ ಅಲೆದು ಜಮೀನು ಮಾಡಿಸುತ್ತಿದ್ದುದು ಸುತಾರಾಂ ಇಶ್ಟವಿರಲಿಲ್ಲ . ಅದರ ಬದಲು ಗದ್ದೆಯನ್ನು ಮಾರಿ , ಈಗ ಇರುವ ಮನೆಯ ಮೇಲೆ ಮಹಡಿಯನ್ನು ಕಟ್ಟಿಸಿದರೆ , ಏನಿಲ್ಲವೆಂದರೂ ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ಬಾಡಿಗೆಯು ಕುಳಿತಲ್ಲಿಯೇ ಬರುತ್ತದೆ ಎಂಬುದು ಅವರ ವಾದವಾಗಿತ್ತು . ಆದರೆ ಹಿರಿಯರಿಂದ ಬಂದಿದ್ದ ಆಸ್ತಿಯನ್ನು ಕಳೆದುಕೊಂಡರೆ , ತಾವು ಹುಟ್ಟಿ ಬೆಳೆದ ಹಳ್ಳಿಯ ಜನರ ಜತೆಗಿನ ಕರುಳುಬಳ್ಳಿಯ ನೆಂಟು ಸಂಪೂರ‍್ಣವಾಗಿ ಕಡಿದುಹೋಗುವುದೆಂಬ ಆತಂಕದಿಂದ ಬೋರಪ್ಪನವರು ಹೆಂಡತಿಯ ಮಾತಿಗೆ ಕಿವಿಗೊಟ್ಟಿರಲಿಲ್ಲ .

ಮಗ ಉಮೇಶ ಇಂಜಿನಿಯರಿಂಗ್ ಪದವಿಯನ್ನು ಪಡೆದು ಕೆಲಸವಿಲ್ಲದೆ ಆರು ತಿಂಗಳಿನಿಂದ ಮನೆಯಲ್ಲಿ ಕುಳಿತಾಗ , ಬೋರಪ್ಪನವರು ಒತ್ತಾಯ ಮಾಡಿ ಮಗನನ್ನು ಆಗಾಗ್ಗೆ ಗದ್ದೆಯ ಬಳಿಗೆ ಕರೆದುಕೊಂಡು ಹೋಗುತ್ತಿದ್ದರು . ಒಲ್ಲದ ಮನಸ್ಸಿನಿಂದ ಅಪ್ಪನೊಡನೆ ಸ್ಕೂಟರ್ ಏರಿ ಬರುತ್ತಿದ್ದ ಮಗನ ಮನದಲ್ಲಿ ಬೂಮ್ತಾಯಿಯ ಬಗ್ಗೆ ಒಲವು ಹುಟ್ಟುವಂತೆ ಮಾಡಬೇಕೆಂದು ಬೋರಪ್ಪನವರು ಇನ್ನಿಲ್ಲದ ಸಾಹಸವನ್ನು ಮಾಡುತ್ತಿದ್ದರು . ಮಗನೊಡನೆ ಹಳ್ಳಿಗೆ ಹೋಗಿಬರುವಾಗಲೆಲ್ಲಾ ಉಳುಮೆಯಿಂದ ಹಿಡಿದು ಬೆಳೆ ಕುಯ್ಲಾಗುವ ತನಕ ಬೇಸಾಯಗಾರರು ಮಾಡುವ ಎಲ್ಲಾ ಬಗೆಯ ಗೇಮೆಗಳನ್ನು ಮತ್ತು ಆಚರಣೆಗಳನ್ನು ಅವನಿಗೆ ತಿಳಿಯ ಹೇಳುತ್ತಿದ್ದರು . ಅಪ್ಪನ ಮಾತುಗಳಿಗೆ ಉಮೇಶ ಹೂಗುಟ್ಟುತ್ತಿದ್ದನೇ ಹೊರತು , ಅವನ ಮನಸ್ಸೆಲ್ಲಾ ಬೆಂಗಳೂರು , ಮಯ್ಸೂರು , ಬಾಂಬೆ , ದೆಹಲಿ ಮುಂತಾದ ದೊಡ್ಡ ದೊಡ್ಡ ನಗರಗಳಲ್ಲಿ ದೊರೆಯಬಹುದಾಗಿದ್ದ ಕೆಲಸದ ಬಗ್ಗೆ ಕನಸು ಕಾಣುತ್ತಿತ್ತು .

ಒಂದು ದಿನ ಮಗನೊಡನೆ ಗದ್ದೆಯ ಬಳಿಗೆ ಬಂದ ಬೋರಪ್ಪನವರು ಎಂದಿನಂತೆ ಪಂಚೆ-ಶರಟನ್ನು ಕಳಚಿಟ್ಟು , ಗದ್ದೆಯ ಒಳಕ್ಕೆ ಇಳಿದು ಸಣ್ಣಪುಟ್ಟ ಕೆಲಸವನ್ನು ಮಾಡುವದರಲ್ಲಿ ತೊಡಗಿಕೊಂಡರು . ಬತ್ತದ ಪಯಿರು ಚೆನ್ನಾಗಿ ತೆಂಡೆಯೊಡೆದು ಹಚ್ಚಹಸಿರಿನಿಂದ ಕಂಗೊಳಿಸುತ್ತಿತ್ತು . ಪಯಿರು ಗರ‍್ಬಕಟ್ಟಿ ಅಲ್ಲಲ್ಲಿ ಹೊಡೆ ಬಿಚ್ಚುತ್ತಿತ್ತು . ಇತ್ತ ಬೋರಪ್ಪನವರು ಪ್ರತಿಯೊಂದು ಪಾತಿಗಳಲ್ಲಿ ಕಂಡು ಬರುತ್ತಿದ್ದ ನಳ್ಳಿಮೊಳೆಗಳನ್ನು ತುಳಿದು , ಪಾತಿಗಳಲ್ಲಿ ನೀರು ನಿಲ್ಲುವಂತೆ ಮಾಡುವುದರಲ್ಲಿ ಮಗ್ನರಾಗಿದ್ದರೆ , ಅತ್ತ ಉಮೇಶನು ಗದ್ದೆ ತೆವರಿಯ ಮೇಲೆ ಏನೊಂದರಲ್ಲೂ ಆಸಕ್ತಿಯಿಲ್ಲದೆ ಸುಮ್ಮನೆ ನಿಂತಿದ್ದ . ಮಗನ ಈ ಬಗೆಯ ವರ‍್ತನೆಯಿಂದ ಬೇಸರಗೊಳ್ಳದ ಬೋರಪ್ಪನವರು ಎಂತಾದರೂ ಮಾಡಿ ಬೇಸಾಯದ ಬಗ್ಗೆ ಮಗನ ಮನದಲ್ಲಿ ಆಸೆ ಹುಟ್ಟುವಂತೆ ಮಾಡಬೇಕೆಂದು , ಆಗಾಗ್ಗೆ ಅದು-ಇದು ಮಾತಾಡುತ್ತಿದ್ದರು. ಈಗ ಅಲ್ಲಲ್ಲೇ ಕಂಡು ಬರುತ್ತಿದ್ದ ಕಳೆಯನ್ನು ಬಗ್ಗಿಕೊಂಡು ಕೀಳುತ್ತಿದ್ದವರು…ಅಲ್ಲಿಂದಲೇ ಮಗನನ್ನು ಕುರಿತು-

” ಉಮೇಶ…ಹೊಡೆ ಬಂದಿರೂದ ನೋಡು ” ಎಂದರು . ಅಪ್ಪನ ಮಾತು ಉಮೇಶನಿಗೆ ಸರಿಯಾಗಿ ಕೇಳಿಸಲಿಲ್ಲ .

” ಏನಪ್ಪ ? ” ಎಂದ .

” ಹೊಡೆ ಬಂದಿರೂದ ನೋಡು ಅಂದೆ ” ಎಂದು ಮತ್ತೊಮ್ಮೆ ಗಟ್ಟಿಯಾಗಿ ಹೇಳಿದರು . ತಾನು ನಿಂತಿದ್ದ ಕಡೆಯಿಂದ ಗದ್ದೆಯ ಸುತ್ತಲೂ ಒಮ್ಮೆ ಕಣ್ಣಾಡಿಸಿದ ಉಮೇಶನು-

” ಇಲ್ಲ ಕಣಪ್ಪ ” ಎಂದು ಉತ್ತರಿಸಿದ . ಗದ್ದೆಯ ಎಲ್ಲೆಡೆಯಲ್ಲಿಯೂ ಅಲ್ಲಲ್ಲಿ ಪಯಿರು ಹೊಡೆಬಿಚ್ಚಿರುವುದು ಚೆನ್ನಾಗಿ ಎದ್ದುಕಾಣುತ್ತಿದ್ದರೂ ಮಗನು ಅದನ್ನು ಗುರುತಿಸಲಿಲ್ಲವೆಂಬ ನೋವಿನಿಂದ-

” ಸರಿಯಾಗಿ ನೋಡೋ… ” ಎಂದರು . ಈಗ ಉಮೇಶನು ಕೆಲವು ಗಳಿಗೆ ಗದ್ದೆಯ ಸುತ್ತಮುತ್ತ ಬಹು ದೂರದವರೆಗೂ ನೋಡುತ್ತಿದ್ದು-

” ಎಲ್ಲೂ ಕಾಣಿಸ್ತಿಲ್ಲ ಕಣಪ್ಪ…ಇಲ್ಲಿಗ್ಯಾರಪ್ಪ ವಡೆ ತಕೊಂಡು ಬರ‍್ತರೇ ! ” ಎಂದು ಅಚ್ಚರಿಯಿಂದ ಕೇಳಿದ .

” ಏನನ್ನೋ…ನಾನು ಹೇಳಿದ್ದು ? ”

” ಅದೇ ತಿನ್ನುವ ವಡೆ ಅಲ್ವೇನಪ್ಪ ? ”

” ಅಯ್ಯೋ…ತಿನ್ನೂ ವಡೆಯಲ್ಲ ಕಣೊ ” ಎಂದು ಹೇಳಿ…ಗದ್ದೆಯಲ್ಲಿ ಹೊಡೆ ಕಡೆದಿದ್ದ ಪಯಿರೊಂದನ್ನು ಹಿಡಿದು ತೋರಿಸುತ್ತಾ-

” ಇದನ್ನು ಹೊಡೆ ಅಂತಾರೆ . ತೆನೆ ಕಟ್ಟಿ…ಕಾಳು ಗಟ್ಟಿಯಾಗುವುದಕ್ಕೆ ಮುಂಚೆ…ಪಯಿರಿನೊಳಗಿಂದ ಮೂಡಿ ಬರುವ ಬಾಗ ಕಣೊ ಇದು ” ಎಂದು ವಿವರಿಸಿದರು . ಈಗ ತುಸು ಪೆಚ್ಚಾದಂತೆ ಕಂಡು ಬಂದ ಉಮೇಶನು-

” ಇದಕ್ಕೂ ವಡೆ ಅಂತಾರೆ ಅಂತ ನಂಗೇನ್ ಗೊತ್ತು ” ಎಂದು ರಾಗವೆಳೆದಾಗ , ಮಗನ ಮಾತನ್ನು ಕೇಳಿ ಬೋರಪ್ಪನವರಿಗೆ ನಗಬೇಕೋ ಇಲ್ಲ ಅಳಬೇಕೋ ತಿಳಿಯಲಿಲ್ಲ .

(ಚಿತ್ರ ಸೆಲೆ: natureimagesblog.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: