ನಮ್ಮ ಇಸ್ರೋಕ್ಕೆ ಸಂದ ವಿಶ್ವ ಗೌರವ
ಇಸ್ರೋದ ಮಂಗಳ ಬಾನಬಂಡಿ ಪರಿಣತರ ತಂಡಕ್ಕೆ 2015ರ ಸ್ಪೇಸ್ ಪಯೊನೀರ್ ಎಂಬ ವಿಶ್ವ ಗೌರವ ಸಂದಿದೆ. ಅಮೆರಿಕದ ದೇಶೀಯ ಬಾನರಿಮೆ ಕೂಟ (The National Space Society-NSS) ಎಂಬುದು ಅಲ್ಲಿಯ ರಾಜದಾನಿ ವಾಶಿಂಗ್ಟನ್ನಿನಲ್ಲಿರುವ ಒಂದು ನಾಗರಿಕರ ಅರಿಮೆಯ ಅಂಗಣ. ಮಾನವರು ಬಾನಿನಲ್ಲಿ ಎಲ್ಲಾ ಕಡೆಗಳಿಗೂ ಅರಿತು ಓಡಾಡಬಲ್ಲಂತಹ ಜನಾಂಗವನ್ನಾಗಿ ಮಾಡುವುದಕ್ಕೆ ಬೇಕಾದ ಅರಿಮೆಯನ್ನು ತಿಳಿಸಿ ಕೊಡುವುದು ಈ ಕೂಟ ಹಮ್ಮಿಕೊಂಡಿರುವ ಗುರಿ.
ಬಾನರಿಮೆಯ ಚಟುವಟಿಕೆಗಳಲ್ಲಿ ನಿರತವಾಗಿರುವ ಹಲವು ದೇಶಗಳಿಂದ ಬಂದ ಅರಿಮೆಯನ್ನು ತನ್ನ ಮಿಂದಾಣದಲ್ಲಿ ತಿಳಿಸುತ್ತದೆ. ಪ್ರತಿವರ‍್ಶ ತನ್ನ ಗಮನಕ್ಕೆ ಬಂದ ಸಾದನೆಗಳಲ್ಲಿ ಹಿರಿದಾದ್ದನ್ನು ಗುರುತಿಸಿ ಅದನ್ನು ಮಾಡಿದವರನ್ನುಈ ಕೂಟವು ತನ್ನ ವಾರ‍್ಶಿಕ ಸಮ್ಮೇಳನಗಳಲ್ಲಿ ಒಂದು ಬಹುಮಾನವನ್ನಿತ್ತು ಅಬಿನಂದಿಸುತ್ತದೆ. ಈ ವರುಶ (2015) ಇಂತಹ ಹೆಗ್ಗಳಿಕೆಗೆ 2014 ರಲ್ಲಿ ಬಾನಬಂಡಿಯನ್ನು ಒಂದೇ ಬಾರಿಗೆ ಮಂಗಳಕ್ಕೆ ತಲಪಿಸುವುದರಿಂದ ತಮ್ಮ ಹಿರಿಮಟ್ಟದ ವೈಜ್ನಾನಿಕ ಮತ್ತು ಯಾಂತ್ರಿಕ ಅರಿಮೆಯನ್ನು ತೋರಿಸಿದ ನಮ್ಮ ಇಸ್ರೋ ಪರಿಣತರ ತಂಡವನ್ನು ಗುರುತಿಸಲಾಗಿದೆ. ಈ ಸುದ್ದಿಯನ್ನು ಇದೇ ಜನವರಿಯ 12ರಂದು ಆ ಬಾನರಿಮೆ ಕೂಟವು ಅತಿ ನಲಿವಿನೊಂದಿಗೆ ತನ್ನ ಮಿಂದಾಣದಲ್ಲಿ ಸಾರಿತು.
ಆ ಅರಿಮೆಕೂಟದ ಹೇಳಿಕೆಯಂತೆ ಈ ಬಹುಮಾನದ ಹೆಸರು 2015ರ ವೈಜ್ನಾನಿಕ ಹಾಗೂ ಯಾಂತ್ರಿಕ ಅರಿಮೆಯಲ್ಲಿ ಬಾನಯಾನದ ಮೊದಲಿಗ ( 2015 Space Pioneer Award in the Science and Engineering category). ಮಂಗಳ ಬಾನಬಂಡಿ ಹಮ್ಮುಗೆಯಲ್ಲಿ ಕೆಲಸ ಮಾಡಿದ ಇಸ್ರೋ ಪರಿಣತರ ತಂಡಕ್ಕೆ 2015ರ ಮೇ 20 ರಿಂದ 24ರವರೆಗೆ ಕೆನಡಾದ ಟೊರಾಂಟೊ ನಗರದಲ್ಲಿರುವ ಹಯಾಟ್ ರೀಜೆಂಸಿ ಕಟ್ಟಡದಲ್ಲಿ ನಡೆಯುವ ತನ್ನ 34ನೇ ಅಂತರರಾಶ್ಟ್ರೀಯ ಬಾನರಿಮೆ ಬೆಳವಣಿಗೆ ಸಮ್ಮೇಳನದಲ್ಲಿ (The National Space Society’s 2015 International Space Development Conference, the 34th ISDC) ಈ ಬಹುಮಾನವಿತ್ತು ಗೌರವಿಸಲಾಗುತ್ತದೆ.
ಈ ಬಹುಮಾನದ ರೂಪ ಮತ್ತು ತಯಾರಿಕೆಯ ವಿವರ:
ಸ್ಪೇಸ್ ಪಯೊನೀರ್ ಬಹುಮಾನವು ತವರ ಮತ್ತು ಸೀಸದ ಮಿಶ್ರಲೋಹದಲ್ಲಿ ತಯಾರಿಸಿ ಬೆಳಗುವಂತೆ ಗೋಳಾಕಾರದಲ್ಲಿ ಮಾಡಿದ್ದು ಚಂದ್ರನ ನೆಲದಂತಿದೆ. ಬಾನರಿಮೆ ತಜ್ನರಾದ ಡಾನ್ ಡೇವಿಸ್ ಅವರ ಎರಕದ ನಕ್ಶೆಯ ರೀತಿಯಲ್ಲೇ ಕ್ಯಾಲಿಪೋರ‍್ನಿಯಾದಲ್ಲಿರುವ ಬೇಕರ್ ಆರ‍್ಟ್ ಪೌಂಡ್ರಿಯಲ್ಲಿ ಎರಕಿಸಲಾಗಿದೆ.
(ಸ್ಪೇಸ್ ಪಯೊನೀರ್ ಬಹುಮಾನದ ಮಾದರಿ)
ಈ ತಿಟ್ಟದಲ್ಲಿರುವಂತೆ ಚಂದ್ರಗೋಳವನ್ನು ಮೇಲಕ್ಕೆತ್ತಿಡಲು ಮೂರು ಬೆರಳುಗಳೊಂದಿಗೆ ಬೆಳಗುವ ಹಿತ್ತಾಳೆಯಲ್ಲಿ ಮಾಡಿ ರಮ್ಯವಾಗಿ ಕಾಣುವ ಆನಿಕೆಯನ್ನು ಡ್ರಿಪ್ಟ್-ವುಡ್, ಟೆಕ್ಶಾಸ್ ಅಲ್ಲಿರುವ ಸ್ತುಡಿಯೋ ಪೌಂಡ್ರಿಯಲ್ಲಿ ಮೈಕೇಲ್ ಹಾಲ್ ಎಂಬುವರು ಅಂದವಾಗಿ ಮಾಡಿ ಅದನ್ನು ಚೌಕವಾಗಿ ಟ್ರಪೀಜಿಯಂ ರೂಪದಲ್ಲಿರುವ ಮರದ ಅಡಿಪಾಯದ ಮೇಲೆ ಕೂರಿಸಿ ಅದರ ಮುಂದೆ ಹೆಸರು ಬರೆಯಲು ಒಂದು ಹಿತ್ತಾಳೆ ತಗಡಿನ ಚೌಕವನ್ನು ಅಂಟಿಸಿ ಕೊಟ್ಟಿದ್ದಾರೆ. ಅನೇಕ ಬಗೆಯ ಸಾದನೆಗಳಿಗಾಗಿ ಈ ರೀತಿಯ ಬಹುಮಾನಗಳನ್ನು 1988 ರಿಂದಲೇ ಈ ಬಾನರಿಮೆ ಕೂಟವು ಕೊಡುತ್ತಲೇ ಬಂದಿದೆ. ಇಸ್ರೋವಿಗೆ ಈ ಬಹುಮಾನದ ಹೆಗ್ಗಳಿಕೆ ಈ ವರುಶ ಸಂದಿದೆ.
ಬಾರತದ ಮಂಗಳ ಬಾನಬಂಡಿಯಾನದಲ್ಲಿ ಇಸ್ರೋ ಪರಿಣತರ ಹೆಗ್ಗಳಿಕೆ ಏನೆಂಬುದನ್ನು NSS ಕೂಟವು ಹೀಗೆ ಗುರುತಿಸಿ ವಿವರಿಸುತ್ತದೆ,
ಈ ಬಾನಬಂಡಿಯಾನವು ನೆಲದಿಂದ ಮಂಗಳನ ಕಡೆಗೆ 2013ರ ನವೆಂಬರ್ 5ರಂದು ಹಾರಿದ್ದು 2014ರ ಸಪ್ಟೆಂಬರ್ 24ರಂದು ಮಂಗಳನನ್ನು ತಲಪಿ ಅದನ್ನು ಸುತ್ತಲು ಶುರು ಮಾಡಿತು. ಹಿಂದೆಂದೂ ಆಗಿರದ, ಈ ಯಾನದಲ್ಲಿ ಮಾತ್ರ ಆಗಿರುವ ಮೊದಲ ಎರಡು ಹೆಗ್ಗಳಿಕೆಗಳು ಹೀಗಿವೆ. ಒಂದನೆಯದಾಗಿ ಮೊದಲನೇ ಯತ್ನದಲ್ಲೇ ಬಾರತದ ಬಾನಬಂಡಿಯು ಮಂಗಳನ ಹತ್ತಿರ ಬಂದ ಕೂಡಲೇ ಅದರ ಸುತ್ತುವ ಸಾಗುದಾರಿಯನ್ನು ಸೇರಿಕೊಂಡಿತು. ಇಂತಹ ಸಾದನೆಯನ್ನು ಬೇರಾವ ದೇಶವೂ ಮಾಡಿಲ್ಲ.
ಎರಡನೆಯದಾಗಿ ಬಾರತದ ಈ ಬಾನಬಂಡಿಯ ಸಾಗುದಾರಿಯು ಮಂಗಳನ ಸುತ್ತ ಹೆಚ್ಚು ದೂರ ಹೋಗಿಬರುವ ಮೊಟ್ಟೆಯಾಕಾರದ ರೀತಿಯಲ್ಲಿದ್ದು (elliptical orbit with a high apoapsis) ಜೊತೆಗೆ ಇದರಲ್ಲೊಂದು ಹೆಚ್ಚಿನ ಗುಣಮಟ್ಟದ ಬಣ್ಣದ ತಿಟ್ಟಕವೂ (high resolution color camera) ಇದೆ. ಇದರಿಂದ ಮಂಗಳನ ಪೂರ‍್ತಿಬಿಲ್ಲೆಯ ಬಣ್ಣದೊಂದಿಗಿನ ತಿಟ್ಟಗಳನ್ನು (full-disk color imagery) ಅನೇಕ ಬಾರಿ ಪಡೆಯಲಾಗುತ್ತಿದ್ದು ಒಂದು ಹೆಗ್ಗಳಿಕೆಯೇ ಆಗಿದೆ.
ಈ ತಿಟ್ಟಗಳು ಮಂಗಳನ ನೆಲದ ಮೇಲಿನ ವಿವರಗಳ ಬಗ್ಗೆ ಆಳವಾದ ಅರಿಮೆ ಹೊಂದಬಯಸುವವರಿಗೆ ಅನುಕೂಲವಾಗಿವೆ. ಇದೇಕೆಂದರೆ ಇಲ್ಲಿಯವರೆಗೆ ಮಂಗಳನ ಬಳಿ ಹೋದ ಬೇರೆ ದೇಶಗಳ ಬಾನಬಂಡಿಗಳು ಕೆಲವೇ ಪೂರ‍್ತಿಬಿಲ್ಲೆಯ ತಿಟ್ಟಗಳನ್ನು ಪಡೆದಿದ್ದು ತಾವು ಇಳಿಯುವ ತಾಣದ ಬಳಿ ನೇರವಾಗಿ ಕೆಳಗೆ ಕಾಣುತ್ತಿದ್ದ ನೆಲದ ತಿಟ್ಟಗಳನ್ನು ಮಾತ್ರವೇ ಹೆಚ್ಚಾಗಿ ಕಳಿಸುತ್ತಿದ್ದವು.
ಒಟ್ಟಿನಲ್ಲಿ ನಮ್ಮ ಇಸ್ರೋ ಬಾನರಿಮೆಯ ಜಗತ್ತಿನಲ್ಲಿ ತನ್ನ ಅರಿಮೆಯ ಗಟ್ಟಿಯಾದ ಅಚ್ಚೊತ್ತುತ್ತಿದೆ.
ಇತ್ತೀಚಿನ ಅನಿಸಿಕೆಗಳು