ನಾಳೆ ಬಾನಬಂಡಿ ತಲುಪಲಿದೆ ಮಂಗಳ

ಪ್ರಶಾಂತ ಸೊರಟೂರ.

ಕಳೆದ ವರುಶ ನವಂಬರ್ 5, 2013 ರಂದು ಬಾನಿಗೆ ಚಿಮ್ಮಿದ್ದ ಇಸ್ರೋದ ಬಾನಬಂಡಿ ನಾಳೆ, 24.09.2014 ಬೆಳಿಗ್ಗೆ 7.18 ಕ್ಕೆ ಮಂಗಳದ ತಿರುಗುದಾರಿಯಲ್ಲಿ (orbit) ನೆಲೆಗೊಳ್ಳಲಿದೆ. ಈ ಮೂಲಕ 299 ದಿನಗಳ ಪಯಣವನ್ನು ಚಾಚು ತಪ್ಪದೇ ಮುಗಿಸಿದ ಬಾನಬಂಡಿ ಹಿರಿದಾದ ಮೈಲಿಗಲ್ಲನ್ನು ದಾಟಿದಂತಾಗುತ್ತದೆ. ಮಂಗಳ ಸುತ್ತುವ ಹಮ್ಮುಗೆ (Mars Orbiter Mission-MOM) ಎಂದು ಕರೆಯಲಾಗುವ ಈ ಹಮ್ಮುಗೆ ಗೆಲುವಿನ ನಗೆ ಬೀರಲಿರುವುದು ಈಗ ಇನ್ನಶ್ಟು ನಿಚ್ಚಳವಾಗಿದೆ.

 

ಮಂಗಳದ ತಿರುಗುದಾರಿಯಲ್ಲಿ ನೆಲೆಗೊಂಡ ಮೇಲೆ ಬಾನಬಂಡಿ ಮಂಗಳಕ್ಕೆ 365.3 ಕಿ.ಮೀ. ಕಿರುದೂರದಲ್ಲಿ (perigee) ಮತ್ತು 80,000 ಕಿ.ಮೀ. ಹಿರಿದೂರದಲ್ಲಿ (apogee) ಮೊಟ್ಟೆಯಾಕಾರದ ದಾರಿಯಲ್ಲಿ ಸುತ್ತಲಿದೆ. ಮಂಗಳದ ಸುತ್ತ ಸುತ್ತುತ್ತ ಈ ಬಾನಬಂಡಿಯು ಮಂಗಳದ ಮೇಲ್ಮೈಯ ಪರಿಚೆಗಳು, ಮಂಗಳದಲ್ಲಿರುವ ಅದಿರುಗಳು, ಅಲ್ಲಿಯ ಸುತ್ತಣದ (environment) ಕುರಿತ ಮಾಹಿತಿಗಳನ್ನು ಒದಗಿಸಲಿದೆ.

ಮಂಗಳ ಮತ್ತು ನೆಲದ ನಡುವಿರುವ ದೂರ ಸರಾಸರಿ 225 ಮಿಲಿಯನ್ ಕಿ.ಮೀ.ಗಳಾಗಿವೆ. ಮಂಗಳದ ತಿರುಗುದಾರಿ ಸೇರಲು ಬಾನಬಂಡಿ ಒಟ್ಟು 680 ಮಿಲಿಯನ್ ಕಿ.ಮೀ. ಗಳಶ್ಟು ಪಯಣಿಸಬೇಕಾಗುತ್ತದೆ. ಇಶ್ಟು ದೂರದಿಂದ ಬಾನಬಂಡಿ ಕಳಿಸುವ ಸಂದೇಶಗಳನ್ನು ಒರೆಗೆಹಚ್ಚುವುದು, ಅದರ ಬಾಗಗಳನ್ನು ಅಶ್ಟು ದೂರದಲ್ಲಿ ಅಂಕೆಯಲ್ಲಿಡುವುದು ಇಸ್ರೋದ ಮುಂದಿದ್ದ ದೊಡ್ಡ ಸವಾಲು. ಈ ಸವಾಲನ್ನು ಗೆದ್ದು ನಮ್ಮ ಇಸ್ರೋ ಜಗತ್ತಿನ ಕೆಲವೇ ಕೆಲವು ಬಾನರಿಮೆಯ ಕೂಟಗಳ ಸಾಲಿಗೆ ಸೇರಲಿದೆ. ಇಲ್ಲಿಯವರೆಗೆ ಇಂತಹ ಹಮ್ಮುಗೆಗಳನ್ನು ಕೈಗೊಂಡು ಅದರಲ್ಲಿ ಗೆಲುವು ಕಂಡಿರುವುದು ರಶ್ಯಾದ ಸೋವಿಯತ್ ಸ್ಪೇಸ್ ಪ್ರೋಗ್ರಾಮ್, ಅಮೇರಿಕಾದ ನಾಸಾ ಮತ್ತು ಯರೋಪಿಯನ್ ಸ್ಪೇಸ್ ಎಜೆನ್ಸಿಗಳಶ್ಟೇ.

ನೆಲದಿಂದ ಸುಮಾರು 2 ಲಕ್ಶ ಕಿ.ಮೀ.ಗಳಾಚೆಯ ದೂರದಲ್ಲಿ ಸಂದೇಶ ಕಳಿಸುವುದನ್ನು, ಪಡೆಯುವುದನ್ನು ಆಳವಾದ ಬಾನ ಒಡನಾಟ (Deep Space Communication) ಎಂದು ಕರೆಯುತ್ತಾರೆ. ಮೇಲೆ ತಿಳಿಸಿದಂತೆ ಸುಮಾರು 225 ಮಿಲಿಯನ್ ಕಿ.ಮೀ. ದೂರ ಸಾಗುವ ಬಾನಬಂಡಿಯೊಂದನ್ನು ಹಿಡಿತದಲ್ಲಿಡಲು ’ಆಳವಾದ ಬಾನ ಒಡನಾಟ’ದಲ್ಲಿ ಪಳಗಿರಬೇಕು. ಈ ಅರಿಮೆಯ ಕವಲಿನಲ್ಲಿ ಪಳಗುವುದು ಇಸ್ರೋದ ಮುಕ್ಯ ಗುರಿಯಾಗಿತ್ತು. ಬಾರತದ ಆಳವಾದ ಬಾನ ಒಡನಾಟದ ಮೊದಲಿಗ (father of deep space communication) ಎಂದು ಗುರುತಿಸಲಾಗುವ ಕನ್ನಡಿಗರಾದ ಎಸ್.ಕೆ.ಶಿವಕುಮಾರ್ ಅವರು ಇಸ್ರೋದ ಈ ಗುರಿಯನ್ನು ಈಡೇರಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಕಳೆದ ನವೆಂಬರ್‍ 18 ರಂದು ತೆರಳಿದ್ದ ಅಮೇರಿಕಾದ ಮಾವೆನ್ (MAVEN) ಹೆಸರಿನ ಬಾನಬಂಡಿ ಕೂಡ ಮೊನ್ನೆ ಬಾನುವಾರ ಮಂಗಳದ ತಿರುಗುದಾರಿಯನ್ನು ಸೇರಿದೆ. ಮಂಗಳದ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಲು ಇವೆರಡೂ ಬಾನಬಂಡಿಗಳು ಮುಂದಿನ ದಿನಗಳಲ್ಲಿ ನೆರವಾಗಲಿವೆ.

ಮಂಗಳ ಸುತ್ತುವ ಹಮ್ಮುಗೆಯಲ್ಲಿ ಎಡೆಬಿಡದೇ ತೊಡಗಿರುವ ಇಸ್ರೋದ ನೂರಾರು ಅರಿಗರಿಗೆ ನಲ್ಮೆಯ ಹಾರೈಕೆಗಳನ್ನು ತಿಳಿಸೋಣ ಬನ್ನಿ.

(ತಿಳಿವಿನ ಮತ್ತು ತಿಟ್ಟಗಳ ಸೆಲೆಗಳು: ಇಸ್ರೋ ಮಿಂಬಲೆದಾಣ, ವಿಕಿಪೀಡಿಯಾ)

2 ಅನಿಸಿಕೆಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.