ನಮ್ಮ ಬಾನಬಂಡಿ ಕಳಿಸಿದ ಚಿತ್ರಪಟಗಳು

ಡಾ. ಮಂಡಯಂ ಆನಂದರಾಮ.

ಈಗ ಆರು ವಾರಗಳಿಂದ ನಮ್ಮ ಬಾನಬಂಡಿಯು ಮಂಗಳನನ್ನು ಸುತ್ತುತ್ತಲೇ ಇದ್ದು ಹಲವಾರು ರಮ್ಯವಾಗಿ ಅರಿಮೆಯುಕ್ತ ಬಣ್ಣದ ಚಿತ್ರಗಳನ್ನು ತನ್ನ ಕ್ಯಾಮರದಿಂದ ತೆಗೆದು ನಮಗೆ ಕಳಿಸಿರುತ್ತದೆ. ಇವುಗಳು ನಮ್ಮ ಇಸ್ರೋದ ಚಿತ್ರಗಳಾಗಿದ್ದು ಇಲ್ಲಿ ಆರಿಸಿಕೊಟ್ಟಿದ್ದೇನೆ.

MOM_first_pic

ಪಟ–1: ಬಾನಬಂಡಿಯ ಮೊಟ್ಟಮೊದಲನೇ ಚಿತ್ರ ಬೂಮಿಯದು, ಬೂಮಿಗೆ ಸುಮಾರು 77000 ಕಿಮೀ ದೂರದಿಂದ ಇದನ್ನು 19.11.2013 ರಂದು ತೆಗೆದ ಮೇಲೆ ಆ ಬಂಡಿಯ ಕ್ಯಾಮರಾ ಸಮರ‍್ಪಕವಾಗಿದೆ ಎಂದು ತಿಳಿಯಿತು.

 

MOM_MangaLa

ಪಟ–2: 74500 ಕಿ ಮೀ ದೂರದಿಂದ 28-09-2014ರಂದು ತೆಗೆದ ಈ ಪಟದಲ್ಲಿ ಗುಂಡು ತಗ್ಗುಗಳಿಂದ ಕೂಡಿದ ಮಂಗಳನ ನಸುಗೆಂಪು ನೆಲವನ್ನು ನೋಡಬಹುದು.

ಈ ಪಟದ ಮದ್ಯ ಬಾಗವು ನಮ್ಮ ದೇಶದಂತೆ ಕಾಣಿಸುತ್ತಿದೆ ಅಂತ ಅನೇಕರು ಸಂತಸಪಟ್ಟರು. ಈ ಪಟದ ಮೇಲೆ ಎಡಗಡೆಗೆ ಕಾರ‍್ಬನ್ ಡೈಆಕ್ಸೈಡ್ ಹಿಮದ ದೂಳಿನ ದೊಡ್ಡ ಮೋಡವು ಕಾಣಿಸುತ್ತದೆ. ಕಾರ‍್ಬನ್ ಡೈಆಕ್ಸೈಡ್  ಬಿಳೀ ಹಿಮದ ಹೊದಿಕೆಯನ್ನು ಕೆಳಕ್ಕೆ ಬಲಗಡೆ ಮೂಲೆಗೆ ನೋಡಬಹುದಾಗಿದೆ. ಇವುಗಳ ಬಿಸುಪು 193 ಕೆಲ್ವಿನ್ (ಅಂದರೆ -80 ಸೆಂಟಿಗ್ರೇಡ್)ಗಿಂತ ಕಡಿಮೆ ಇರುತ್ತದೆ. ಇದನ್ನು ನೋಡಿದ ಮೇಲೆ ಮಂಗಳನ ವಾಯುಮಂಡಲ ಹೇಗೆ ಇರಬಹುದೆಂದು ಕುತೂಹಲ ಆಗುತ್ತದೆ. ಇದರ ಆಳದ ಅಳತೆಯು ಮುಂದಿರುವ ಪಟ-3 ರಲ್ಲಿ ನೋಡಿದಾಗ ಅರಿವಾಗುತ್ತದೆ.

 

MOM_MangaLa_2

ಪಟ–3: ಮಂಗಳನ ಬಿಂಬದ ಅಂಚಿನಲ್ಲಿ ತೆಳುವಾದ ಹೊದಿಕೆಯಂತೆ ಕಾಣಿಸುವ ವಾಯುಮಂಡಲವನ್ನು ಕೇವಲ 8449 ಕಿ ಮೀ ಗಳ ದೂರದಿಂದ ನಮ್ಮ ಬಂಡಿಯು ಸೆರೆ ಹಿಡಿಯಿತು. ಬೂಮಿಯ ನೆಲದ ಮೇಲಿನ ಒತ್ತಡವು ಒಂದು ನೂರಿದ್ದರೆ ಮಂಗಳನ ನೆಲದ ಮೇಲಿನ ಒತ್ತಡವು ಒಂದು ಪಾಲಿಗಿಂತ ಕಡಿಮೆ ಇದೆಯೆಂದು ಅಂದಾಜು.

ಮಂಗಳನ ನೆಲದಲ್ಲಿ ಕೆಲವು ಬೆಂಕಿಬೆಟ್ಟಗಳ (Volcano) ಅವಶೇಶಗಳು ಇವೆ ಎಂದು ಮೊದಲೇ ತಿಳಿದಿದ್ದರೂ ಅವುಗಳ ಒಂದು ರೋಮಾಂಚಕಾರಿ ಪಟವನ್ನು ನಮ್ಮ ಬಂಡಿಯು 17-10-2014 ರಂದು ಸೆರೆ ಹಿಡಿದು ಕಳಿಸಿತು. ಇದಿರುವ ಪಟ – 4 ರಲ್ಲಿ ಎಡದಿಂದ ಬಲಕ್ಕೆ ಕ್ರಮವಾಗಿ ಒಲಿಂಪಸ್ ಮೋನ್ಸ್ (Olympus Mons) ಎಂಬ ಅಗಾದ ಗಾತ್ರದ ಅವಶೇಶವನ್ನೂ, ತಾರ‍್ಸಿಸ್ ಬಲ್ಜ್ (Tharsis Bulge) ಎಂಬ ಮೂರಕ್ಕೆ ಮೇಲೆ ಅವಶೇಶಗಳೊಂದಿಗೆ ಕೂಡಿದ ಉಬ್ಬಿದ ನೆಲವನ್ನೂ ಮತ್ತು ಕರಿ ಗೆರೆಯಂತಿರುವ ವಾಲಿಸ್ ಮಾರಿನೆರಿಸ್ (Valles Marineris) ಎಂಬ ಅಗಾದ ಗಾತ್ರದ ಕಣಿವೆಯನ್ನೂ ಕಾಣಬಹುದಾಗಿದೆ.

 

MOM_volvanoಪಟ–4: ಹಲವು ಗುರಾಣಿಯಂತಿರುವ ಬೆಂಕಿಬೆಟ್ಟಗಳ ಅವಶೇಶಗಳನ್ನೂ ಆಳವಾದ ಕಣಿವೆಯನ್ನೂ ಕಾಣಿರಿ. ಇವೆಲ್ಲ ಮಂಗಳನ ಸಮಪಾಲ ಗೆರೆಯ ಬಳಿ ಇದ್ದು ಸೂರ‍್ಯನ ಇತರ ಗ್ರಹ, ಕಿರುಗ್ರಹಗಳ ನೆಲದ ಮೇಲೆ ಕಾಣುವ ಪ್ರಕಾರಗಳಿಗಿಂತ ಅತ್ಯಂತ ಹಿರಿದೆಂಬ ಕೀರ‍್ತಿಯನ್ನು ಹೊಂದಿವೆ. ಇವುಗಳ ಗಾತ್ರದ ಬಗ್ಗೆ ಇನ್ನಶ್ಟು ವಿವರಗಳು ಹೀಗಿವೆ. ಒಲಿಂಪಸ್ ಮೋನ್ಸ್ ಎಂಬುದು ಒಂದು ಗುರಾಣಿಯಂತಿರುವ ಬೆಂಕಿಬೆಟ್ಟವಾಗಿದ್ದು (Shield Volcano) ಅದು ಕೇಂದ್ರದಲ್ಲಿ 25 ಕಿಮೀ ಎತ್ತರವಾಗಿದ್ದು ಅದರ ಇಳಿಜಾರಿನ ದುಂಡಳತೆಯು 624 ಕಿಮೀಗಳಿದ್ದು ಇದರ ಅಂಚಿನಲ್ಲಿ 6 ಕಿಮೀ ಎತ್ತರದ ಸುತ್ತುಕಟ್ಟೆಯು ಇರುತ್ತದೆ. ಅದರ ಅಗಾದ ಗಾತ್ರಕ್ಕೆ ಉದಾಹರಣೆಯೊಂದನ್ನು ಪಟ-5 ರಲ್ಲಿ ಕಾಣಬಹುದು. ಈ ಒಲಿಂಪಸ್ ಗುರಾಣಿಯು ನಮ್ಮ ಹಿಮಾಲಯದಲ್ಲಿರುವ ಎವರೆಸ್ತ್ ಬೆಟ್ಟದ ಶಿಕರಕ್ಕಿಂತ ಮೂರು ಪಟ್ಟು ಎತ್ತರವಾಗಿದೆ.

 

MOM_olympus_moonಪಟ-5: ನಾಸಾದವರ ಪ್ರಕಟಣೆಯಂತೆ ಅಮೆರಿಕದ ಅರಿಜೋನಾಗಿಂತ ಒಲಿಂಪಸ್ ಮೋನ್ಸ್ ಹಿರಿದಾಗಿದೆ.

 

MOM_wiking

ಪಟ-6: ನಾಸಾದವರು 1970ರಲ್ಲಿ ವೈಕಿಂಗ್-1 ಬಂಡಿಯಿಂದ ತೆಗೆದ ಮಾರಿನೆರಿಸ್ ಕಣಿವೆಯ ಚಿತ್ರವಿದು.
ಹಾಗೆಯೇ ಮಾರಿನೆರಿಸ್ ಕಣಿವೆಯು ಮಂಗಳನ ಗ್ರಾಂಡ್ ಕಾನ್ಯನ್ ಎನಿಸಿದ್ದು 4000 ಕಿಮೀ ಉದ್ದವೂ, 600 ಕಿಮೀ ಅಗಲವೂ ಹಾಗೂ 7 ಕಿಮೀ ಆಳವಾಗಿಯೂ ಇದ್ದು ಪಟ-6ರಲ್ಲಿ ಇದರ ಪೂರ‍್ತಿ ವಿಸ್ತಾರವನ್ನು ನೋಡಬಹುದಾಗಿದೆ. ಹಾಗೆಯೇ ಉಳಿದಂತೆ ತಾರ‍್ಸಿಸ್ ಉಬ್ಬುನೆಲದಲ್ಲಿರುವ ಮೂರು ದೊಡ್ಡ ಗುರಾಣಿ ಬೆಂಕಿಬೆಟ್ಟಗಳಾದ ಅರ‍್ಸಿಯ ಮೋನ್ಸ್, ಪಾವೊನಿಸ್ ಮೋನ್ಸ್ ಮತ್ತು ಆಸ್-ಕ್ರೆಯಾಸ್ ಮೋನ್ಸ್ ಎಂಬಿವು ವಿಸ್ತಾರವಾದ ಪ್ರದೇಶವನ್ನು ಆಕ್ರಮಿಸಿಕೊಂಡಿವೆ. ಇವುಗಳನ್ನು ಪಟ-4 ರ ಮದ್ಯದಲ್ಲಿ ನೋಡಬಹುದು.

 

MOM_3d_photo

ಪಟ-7: ನಮ್ಮ ಬಾನಬಂಡಿಯು 28-09-2014 ರಂದು ಕಳಿಸಿದ 3-ಡಿ ನೀಲಿ-ಕೆಂಪು ಜೋಡಿ ಬಣ್ಣದಪಟವಿದು.
ನಮ್ಮ ಬಾನಬಂಡಿಯು ಸುಮಾರು 76000 ಕಿಮೀ ದೂರದಿಂದ ತೆಗೆದು ಕಳಿಸಿದ 3-ಡಿ ನೀಲಿ-ಕೆಂಪು ಜೋಡಿ ಚಿತ್ರವನ್ನು ಪಟ-7 ರಲ್ಲಿ ತೋರಿಸಿದೆ. ಇದನ್ನು ಸರಿಯಾಗಿ ನೋಡಲು ನೀಲಿ-ಕೆಂಪು ಸೇರ‍್ಕನ್ನಡಿಯ (lens) ವಿಶೇಶ ಕನ್ನಡಕವೊಂದನ್ನು ಆಸಕ್ತರು ಬಳಸಿ ಆನಂದಿಸಬೇಕು.

ಮಂಗಳ ಮತ್ತು ಬೂಮಿಯ ಹೋಲಿಕೆ:

ಮೇಲೆ ಮಂಗಳ ಕಳುಹಿಸಿದ ಬಣ್ಣದ ಚಿತ್ರಪಟಗಳನ್ನು ನೋಡಿದೆವು. ಈಗ ನಮ್ಮ ಬೂಮಿ ಮತ್ತು ಮಂಗಳದ ಕೆಲವು ಪರಿಚೆಗಳನ್ನು ನೋಡೋಣವೆ.

ಪರಿಚೆಗಳು

      ಮಂಗಳ

      ಬೂಮಿ

ಕಂಡುಹಿಡಿದ ಕಾಲ ಮಾನವನಿಗೆ ಅರಿವಾದಾಗಿನಿಂದ ಮಾನವನಿಗೆ ಅರಿವಾದಾಗಿನಿಂದ
ಸೂರ‍್ಯನಿಂದ ಸರಾಸರಿ ದೂರ 22,79,43,824 ಕಿಮೀ
(1.52 AU)
14,95,98,262 ಕಿಮೀ            (1.00 AU)
ಸೂರ‍್ಯನಿಂದ ಅತಿ ಹೆಚ್ಚಿನ ದೂರ 20,66,55,215 ಕಿಮೀ 14,70,98,291 ಕಿಮೀ
ಸೂರ‍್ಯನಿಂದ ಅತಿ ಹೆಚ್ಚಿನ ದೂರ 24,92,32,432 ಕಿಮೀ 15,20,98,233 ಕಿಮೀ
ಸುತ್ತುವ ದಾರಿಯ ಅಂಡಾಕಾರತೆ (e) 0.0933941 0.01671123
ಸರಾಸರಿ ಸುತ್ತುವೇಗ 86,677 ಕಿಮೀ / ಗಂಟೆಗೆ 1,07,218 ಕಿಮೀ / ಗಂಟೆಗೆ
ಸುತ್ತುವ ಕಾಲಮಾನ (sidereal) 1.8808476 ವರ‍್ಶಗಳು(687 ದಿನ) 1.0000174 ವರ‍್ಶ(365.25 ದಿನ)
ತನ್ನ ದಾರಿಯಲ್ಲಿ ಸುತ್ತುಕಾಲ (sidereal) 1.026 ದಿನಗಳು(24 ಗಂ 37 ನಿ) 0.99726968 ದಿನ(23ಗಂ 56 ನಿ)
ರಾಶಿ (mass)  6.4185×1023 ಕೆ.ಜಿ.    5.98 x 1024 ಕೆ.ಜಿ.
ದಟ್ಟಣೆ (density) 3934 ಕೆಜಿ / ಗನ ಮೀಟರ್ 5513 ಕೆಜಿ / ಗನ ಮೀಟರ್
ರಾಶಿಸೆಳೆತದಿಂದಾಗುವ ವೇಗಮಾರ‍್ಪು
(acceleration due to gravity)
3.71 ಮೀ /ಸೆxಸೆ 9.80665 ಮೀ /ಸೆxಸೆ
ಸೆಳೆತ ಮೀರುವ ವೇಗ 18,108 ಕಿಮೀ / ಗಂಟೆಗೆ 40,284 ಕಿಮೀ / ಗಂಟೆಗೆ
ನೆಲದ ಒಟ್ಟು ಚದರಳತೆ 14,43,71,391 ಚದರ.ಕಿಮೀ 51,00,64,472 ಚದರ.ಕಿಮೀ
ನೆಲದವರೆಗೆ ಗೋಳದ ಒಟ್ಟು ಗಾತ್ರ 163,115,609,799 ಗನ ಕಿಮೀ 1083,206,916,846 ಗನ.ಕಿಮೀ
ಸಮಪಾಲ ಗೆರೆಯಲ್ಲಿ ದುಂಡಿ (radius) 3389.5 ಕಿಮೀ 6371.0 ಕಿಮೀ
ಸರಾಸರಿ ದುಂಡಿ (radius) 3397.0 ಕಿಮೀ 6378.0 ಕಿಮೀ
ಸುತ್ತುದಾರಿಯ ಓರೆಕೋನ 25.2 ಡಿಗ್ರಿಗಳು 23.4393 ಡಿಗ್ರಿಗಳು
ಎಕ್ಲಿಪ್ಟಿಕ್ ಗೆ ಸುತ್ತುದಾರಿ ಓರೆಕೋನ 1.85 ಡಿಗ್ರಿಗಳು 0.00005 ಡಿಗ್ರಿಗಳು
ಸಹಜ ಉಪಗ್ರಹ ಗಳು ಎರಡು (ಪೋಬೋಸ್, ಡೈಮೋಸ್) ಒಂದೇ ಒಂದು ( ಚಂದ್ರ)
ವಾಯುಮಂಡಲದ ಮುಕ್ಯ ಅನಿಲಗಳು ಕಾರ‍್ಬನ್ ಡೈಆಕ್ಸೈಡ್ (CO2) 95.32 %, ನೈಟ್ರೋಜನ್ 2.7 %, ಅರ್ಗಾನ್ 1.6 % ಉಸಿರ‍್ಗಾಳಿ 0.15 %, ಕಾರ‍್ಬನ್ ಮೋನೋಕ್ಶೈಡ್ 0.07 %, ನೈಟ್ರಿಕ್ ಆಕ್ಸೈಡ್ 0.01 %, ನೀರಾವಿ 0.03 %, ಕೊಂಚವೇ ಮಿತೇನ್ ಇತ್ಯಾದಿ ನೈಟ್ರೋಜನ್77 %, ಉಸಿರ‍್ಗಾಳಿ 21 %, ಆರ್ಗಾನ್ 1.0 %, ನೀರಾವಿ 1.0 %, ಕಾರ‍್ಬನ್ ಡೈಆಕ್ಸೈಡ್ 0.038 %,ಅತಿ ಕೊಂಚ ಮಿತೇನ್ ಮತ್ತು ಇತರ ಅನಿಲಗಳು.
ನೆಲದ ಮೇಲಿನ ಗಾಳಿಯೊತ್ತಡ ಸರಾಸರಿ 7 ಮಿಲಿಬಾರ್ (ಹಳ್ಳದಲ್ಲಿ 9; ಒಲಿಂಪಸ್ ಮೋನ್ಸ್ ಮೇಲೆ 1 ) ಸರಾಸರಿ 1013 ಮಿಲಿಬಾರ್
ನೆಲದ ಬಿಸುಪು  — ಸರಾಸರಿ   -55 ಸೆಂಟಿಗ್ರೇಡ್ (218 ಕೆಲ್ವಿನ್) 14 ಸೆಂಟಿಗ್ರೇಡ್ (287 ಕೆಲ್ವಿನ್)
  ಬೇಸಿಗೆ – ಸಮಪಾಲ ಗೆರೆ    27 ಸೆಂಟಿಗ್ರೇಡ್ (300 ಕೆಲ್ವಿನ್)
  ಚಳಿಗಾಲ – ತುದಿ ಪ್ರದೇಶಗಳು -133 ಸೆಂಟಿಗ್ರೇಡ್ (140 ಕೆಲ್ವಿನ್)
ಹಿಂಪುಟಿದ ಬಿಸಿಲು  (Bond Albedo) 0.16 0.29
ಮಂಗಳ-ಬೂಮಿ ನಡುವಿನ ದೂರ 0.52 AU ಇಂದ 2.52 AU ತನಕ 0.52 AU ಇಂದ 2.52 AU ತನಕ
ಬೆಳಕಿನ ವೇಗ(2,99,792.458 ಕಿಮೀ/ಸೆ)ದಲ್ಲಿ ಈ ಕೆಳಗಿನವುಗಳಿಗೆ ತಗಲುವ ಹೊತ್ತು
ಬೂಮಿ ಇಂದ ಮಂಗಳ ಬಾನಬಂಡಿಗೆ 260 ಇಂದ 1260 ಸೆಕೆಂಡುಗಳು
ಬೂಮಿ – ಬಾನಬಂಡಿ – ಬೂಮಿಗೆ 520 ಇಂದ 2520 ಸೆಕೆಂಡುಗಳು

(ಮಾಹಿತಿ ಸಲೆಗಳು: 1. ಇಸ್ರೊ ಮಂಗಳಯಾನದ ಮಿಂಬಲೆಯಲ್ಲಿನ ಸುದ್ದಿಗಳು ಮತ್ತು ಚಿತ್ರಗಳು. 

2. www.universetoday.com/114923, /114887, /114780, /114839, /115020 ಇತ್ಯಾದಿ.

3. ಗುರಾಣಿ ಬೆಂಕಿಬೆಟ್ಟಗಳ ಬಗ್ಗೆ ವಿಕಿಪೀಡಿಯದಲ್ಲಿರುವ ಬರಹಗಳು

4. ಪ್ರಶಾಂತ ಸೊರಟೂರರ ಸಪ್ಟಂಬರ್ 23ರ ಅರಿಮೆ ಬರಹ ನಾಳೆ ಬಾನಬಂಡಿ ತಲುಪಲಿದೆ ಮಂಗಳ’)

ಇವುಗಳನ್ನೂ ನೋಡಿ

ಯಾವುದೇ ಅನಿಸಿಕೆಗಳಿಲ್ಲ

ಅನಿಸಿಕೆ ಬರೆಯಿರಿ: