ಕೆರೆ ಕಟ್ಟುವ ಹಾದಿಯಲ್ಲಿ

ಸುನಿತಾ ಹಿರೇಮಟ.kere

ಸ್ವಾತಂತ್ರ್ಯದ ಬಳಿಕ ನೀರಾವರಿ ಯೋಜನೆಗಳ ಸಪಲತೆಗಿಂತ ವಿಪಲತೆ ಹೆಚ್ಚು ಕಾಡುತ್ತದೆ. ನೂರಾರು ಕೋಟಿ ರೂಪಾಯಿ, ಮಾನವ ಶಕ್ತಿ ಮತ್ತು ಸಮಯ ಈವರೆಗೆ ವ್ಯರ‍್ತವಾಗಿ ಹರಿದು ಹೋಗಿವೆ. ಎಶ್ಟೋ ಸಂದರ‍್ಬಗಳಲ್ಲಿ ಯೋಜನೆಗಳು ಕಾಗದದ ರೂಪದಲ್ಲಿಯೇ ಉಳಿದಿರಬಹುದು, ಆದರೂ ಹೊಸ ಹೊಸ ಹೆಸರಿನಲ್ಲಿ ದೊಡ್ದ ದೊಡ್ಡ ಯೋಜನೆಗಳ ಕೆಲಸ ಮುಂದುವರಿದೇ ಇದೆ. ಹೆಚ್ಚಿನ ಯೋಜನೆಗಳು ಪಲ ನೀಡಿಲ್ಲ, ಆದರೂ ನಾವು ರೂಪಿಸುವ ಯೋಜನೆಗಳು ಎಶ್ಟು ಪರಿಣಾಮಕಾರಿ ಎಂಬ ಬಗ್ಗೆ ಯೋಚಿಸುತ್ತಿಲ್ಲ.

ಆ ಎಲ್ಲಾ ಆಲೋಚನೆಗಳ ನಡುವೆ ನಾನೊಂದು ಕೆರೆ ಕಟ್ಟುವ ಸುಂದರ ಸುಮದುರ ಕಲ್ಪನಾಲಹರಿ ನನ್ನಲ್ಲಿ ಹರಿಯತೊಡಗಿತ್ತು. ಆ ಕೆರೆ ಹೇಗಿರಬೇಕು? ಎಲ್ಲಿರಬೇಕು? ಎಂತಹ ತೋಪಿರಬೇಕಲ್ಲಿ? ಹೀಗೆ ಯಾವುದೇ ಕಾಸಿನ ಕರ‍್ಚಿಲ್ಲದೆ ನನ್ನ ಯೋಚನಾಲಹರಿ ಹರಿದಿತ್ತು. ಕೆರೆ ಕಟ್ಟುವ ಆ ನನ್ನ ಕನಸಿನ ಯೋಜನೆಗೆ ಆ ಕ್ಶಣಕ್ಕೆ ತಡೆ ಒಡ್ಡಿದ್ದು ಒಂದು ಮಿಂಚಂಚೆ. ಹೌದು ನನ್ನ ಆ ಯೋಚನಾಲಹರಿಗೆ ಇದೋ ಇಲ್ಲಿದೆ ಆ ಹಾದಿ ಎಂದು ಹೇಳಿದ್ದು ಒಂದು ಮಿಂಚಂಚೆ. ನನ್ನ ಕೆರೆಕಟ್ಟುವ ಆಲೋಚನೆಗಳಿಗೆ (ಕಾಗದ ರೂಪದಲ್ಲಾದರೂ) ಆ ಮಿಂಚಂಚೆ ತೋರಿದ್ದು ಆಂದ್ರ ಪ್ರದೇಶದ ಕಡಪ ಹತ್ತಿರವಿರುವ ಪುಟ್ಟ ಹಳ್ಳಿಯ ದಾರಿ, ಮತ್ತು ಆ ಊರಿನಲ್ಲಿ ದೊರೆತ ಶಾಸನ. ಆ ಶಾಸನವೇ ಪೋರುಮಿಲ್ಲ ಶಾಸನ. ಅದು ನಮ್ಮ ಹಿರಿಯರು ಕೆರೆ ಕಟ್ಟುವ ತಾಂತ್ರಿಕತೆ ಮತ್ತು ಪದ್ದತಿಗಳ ಬಗ್ಗೆ ಬೆಳಕು ಚೆಲ್ಲುವ ವಿಜಯನಗರದ ಅರಸರ ಕಾಲದ ಶೀಲಾಶಾಸನ.

ಆ ಶೀಲಾಶಾಸನದ ಬರಹ ಯಾವುದೇ ತಾಂತ್ರಿಕ ವಿಶ್ವವಿದ್ಯಾಲಯದ ಪಾಟಕ್ರಮಕ್ಕೂ ಮೀರಿದ್ದು ಎನಿಸಿದ್ದು ಸುಳ್ಳಲ್ಲ. ಇದೇ ವಿಶಯದ ಬಗ್ಗೆ ಗೆಳೆಯರನ್ನು ಹಾಗು ಪರಿಣಿತರನ್ನು ಮಾತಿಗೆಳೆದಾಗ, ಇದಲ್ಲದೆ ನೂರಾರು ಶಾಸನಗಳಿರುವ ಬಗ್ಗೆ ಮಾಹಿತಿ ಸಿಕ್ಕಿತು.
ಪೋರುಮಿಲ್ಲ ಶಾಸನದ ಪಾಟವನ್ನ ಓದಿದ ಬಳಿಕ ನಾ ಅರಿತ ಸಾರಾಂಶ ಹೀಗಿದೆ;

 1. ಕೆರೆ ಕಟ್ಟುವವ ಸಂತ್ರುಪ್ತನಾಗಿರಬೇಕು.
 2. ನೀರಿನ ಅರಿಮೆಯಲ್ಲಿ ಪರಿಣಿತನಾಗಿರಬೇಕು.
 3. ಕೆರೆಯ ಬೂಮಿ ಜೇಡಿಮಣ್ಣಿನಿಂದಾಗಿರಬೇಕು.
 4. ನದಿಯ ಮೂಲವಾದರೆ ಅದು ಕೆರೆಯಿಂದ ಮೂರು ಯೋಜನಗಳಶ್ಟು ದೂರದಲ್ಲಿರಬೇಕು.
 5. ಕೆರೆ ಕಟ್ಟುವ ಜಾಗದ ಸಮೀಪವೇ ಕಲ್ಲು ಗಣಿಗಳಿರಬೇಕು.
 6. ಕೆರೆ ಕಟ್ಟುವ 12 ಮಂದಿ ಪರಿಣಿತರ ತಂಡವಿರಬೇಕು.
 7. ಕೆರೆಯ ತೂಬಿನ ಕಲ್ಲು ಅತವಾ ಇತರ ನಿಯಂತ್ರಕಗಳು ಗಟ್ಟಿಯಾಗಿರಬೇಕು.
 8. ಕೆರೆ ಒಸರಬಾರದು. ಕೆರೆಯ ಆಯಕಟ್ಟು ಪ್ರದೇಶದಲ್ಲಿ ಉಪ್ಪಿನಂಶ ಇರಬಾರದು. ಕೆರೆ ಕಟ್ಟುವಿಕೆಗೆ ಗಡಿ ಪ್ರದೇಶವನ್ನು ಆರಿಸಬಾರದು (ಸೇನೆ ಕಾರ‍್ಯಗಳಿಗೆ ಅನುಕೂಲವಾಗುವಂತೆ )

ಹೀಗೆ ಬೆಳೆಯುತ್ತಲೇ ಇತ್ತು ಆ ಶಾಸನದ ಪಾಟ… ಪ್ರಾಚೀನ ಕಲೆಗಳು ಎಂದಾಕ್ಶಣ ನಮಗೆ ನೆನಪಿಗೆ ಬರುವುದು ಶಿಲ್ಪಕಲೆ, ನಾಟ್ಯಕಲೆ, ಸಂಗೀತ ಹೀಗೆ ಹಲವು. ಆದರೆ ಪ್ರಾಚೀನ ಕಾಲದಿದಂದಲೂ ಜೀವನಕ್ಕೆ ಆಸರೆಯಾಗಿರುವ ಈ ನೀರಾವರಿಯನ್ನು ಒಂದು ಕಲೆ ಎಂದರೆ ತಪ್ಪಾಗಲಾರದೇನೋ. ಆ ಕಲೆಯ ಒಂದೆರಡು ಮಜಲುಗಳನ್ನಾದರು ಕಲಿಯಬೇಕೆನ್ನುವ ತವಕದಲ್ಲಿ ಓದುತ್ತಾ ಹೋದಂತೆ ಅದರ ಆಳದ ಪರಿಚಯವಾಗಿತ್ತು.
ಯಾವುದೇ ಕೆರೆಯನ್ನ ಕಟ್ಟುವಲ್ಲಿ ಕೆಲವು ಮುಕ್ಯ ಜಾಗಗಳು ಇಲ್ಲಿ ಬಹಳ ಮಹತ್ವ ಪಡೆಯುತ್ತವೆ.
1. ಆಯಕಟ್ಟು ಪ್ರದೇಶ
2. ಅಚ್ಚುಕಟ್ಟು ಪ್ರದೇಶ

AAಯಾವುದೇ ಆಯಕಟ್ಟಿನ ಪ್ರದೇಶ ಕಾಡಿನಿಂದ ಕೂಡಿದ್ದಲ್ಲಿ ಬಹುಉಪಯೋಗಿ. ಆ ಪ್ರದೇಶದಲ್ಲಿನ ಮಣ್ಣು ಮತ್ತು ಹಸಿರು ಸಂಪತ್ತು ನೀರಿನ ಗುಣಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎನ್ನುವ ಜಾಣ್ಮೆಯೂ ನಮ್ಮ ಹಿರಿಯರಿಗಿತ್ತು. ಆಯಕಟ್ಟು ಪ್ರದೇಶದಿಂದ ಹರಿದು ಬರುವ ನೀರಿನ ಪ್ರಮಾಣದಿಂದ ಅಚ್ಚುಕಟ್ಟು ಪ್ರದೇಶದ ಬೆಳವಣಿಗೆಯನ್ನು ಗುರುತಿಸಲಾಗುತ್ತಿತ್ತು. ಅಲ್ಲದೆ ಆ ಬಾಗದ ಬೆಳೆಗಳನ್ನು ಸಹ ಆರಿಸಿಕೊಳ್ಳಲಾಗುತ್ತಿತ್ತು.

contour
ಅಂಚುಪಟ್ಟಿ

ಮಳೆಯ ನೀರನ್ನು ಅವಲಂಬಿಸಿ ಕಟ್ಟುವ ಕೆರೆಗಳಲ್ಲಿ ಪ್ರತಿ ಹನಿ ನೀರನ್ನು ಪೋಲು ಮಾಡದ ರೀತಿಯಲ್ಲಿ, ಆ ನೆಲದ ಅಂಚುಕಟ್ಟಿನ ಉಬ್ಬು ತಗ್ಗುಗಳ ಮತ್ತು ಏರಿಳಿತಗಳ ಅಳತೆಯ ಪ್ರಕಾರ ಕೆರೆಯ ಜಾಗವನ್ನು ಗುರುತು ಮಾಡುವ ಪ್ರಕ್ರಿಯೆ ಇಲ್ಲಿ ಪ್ರಮುಕವಾದದ್ದು. ಸಹಜವಾಗಿ ಅಂತಹ ಏರ‍್ಪಾಟುಗಳು ಸರಪಳಿಯ ಮಾದರಿಯಲ್ಲಿರುತ್ತವೆ. ಅಂದರೆ ಒಂದು ಕೆರೆಯ ಕೋಡಿ ಹರಿದಾಗ(ಕೆರೆ ತುಂಬಿದಾಗ) ಆ ನೀರು ಅದರ ಕೆಳ ಮಟ್ಟದಲ್ಲಿರುವ ಇನ್ನೊಂದು ಕೆರೆಗೆ ಹರಿಯುವುದು. ಆ ಕೆರೆ ಕೋಡಿ ಹರಿದಾಗ ಅದರ ಕೆಳ ಮಟ್ಟದ ಕೆರೆಗೆ ನೀರು ಸರಾಗವಾಗಿ ಹರಿಯುವುದು. ಇದಕ್ಕೆ ತಕ್ಕುದಾದ ಏರಿ ಎತ್ತರವನ್ನು ನಿರ‍್ದರಿಸಲಾಗುತ್ತಿತ್ತು.

ಯಾವುದೇ ನೀರಾವರಿ ಕಟ್ಟಡ ಕಟ್ಟುವ ಮೊದಲು ಆ ಜಾಗದ ಅಂಚುಪಟ್ಟಿಯ(contours) ಉಬ್ಬು, ತಗ್ಗುಗಳನ್ನು ಅಳೆಯಲಾಗುತ್ತದೆ. ಈ ಅಳತೆಗಳನ್ನು ಆ ಕಟ್ಟಡದ ಅಡಿಪಾಯದ ಮಣ್ಣು ಅಗೆತಕ್ಕೆ ಬೇಕಾಗುವ ಸಂಪನ್ಮೂಲಗಳ ಲೆಕ್ಕಾಚಾರಕ್ಕೆ ಬಳಸಲಾಗುತ್ತದೆ. ಇಂದಿನ ದಿನಗಳಲ್ಲಿ ನಾವು ಆದುನಿಕ ಸಲಕರಣೆಗಳನ್ನ ಉಪಯೋಗಿಸುತ್ತೇವೆ. ಆದರೆ ಅಂದಿನ ದಿನಗಳಲ್ಲಿ ಅಶ್ಟು ಕರಾರುವಕ್ಕಾಗಿ ಹೇಗೆ ಮಾಡಿರಬಹುದು ಎಂಬ ಪ್ರಶ್ನೆಗೆ ಉತ್ತರ ಹುಡಕಬೇಕಿದೆ.

ಕೆರೆಗಳು ನಮ್ಮ ದಕ್ಶಿಣ ಬಾರತದ ಪ್ರಮುಕ ನೀರಿನ ಆಕರಗಳು. ಈ ಬಾಗದ ಹವಾಮಾನ ಮತ್ತು ನೆಲದ ಗುಣಗಳು ಕೆರೆಗಳ ನಿರ‍್ಮಾಣಕ್ಕೆ ಇಂಬು ಕೊಡುತ್ತವೆ. ದೇಶದ ಉತ್ತರ ಬಾಗದಲ್ಲಿ ನಿರಂತರವಾಗಿ ಹರಿಯುವ ನದಿಗಳು ಇವೆ. ಅವಕ್ಕೆ ನೀರಿನ ಮೂಲ – ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ಕರಗುವ ಹಿಮ. ಹಾಗಾಗಿ ಅಲ್ಲಿ ಕಾಲುವೆಗಳ ಸಹಾಯದಿಂದ 360 ದಿನಗಳು ನೀರನ್ನು ಪಡೆಯುವ ಪದ್ದತಿ ಬೆಳೆಯಿತು. ಅಲ್ಲದೆ ಬಾವಿಗಳನ್ನ ತೊಡುವ ಪರಿಪಾಟವು ಬೆಳೆದಿತ್ತು. ದಕ್ಶಿಣ ಬಾರತದ ರಾಜ್ಯಗಳು ಬಹುಪಾಲು ಮಳೆಯಾಶ್ರಿತವಾಗಿದ್ದರಿಂದ ಪ್ರಾಚೀನ ಕಾಲದಿಂದಲೂ ಇಲ್ಲಿ ಕೆರೆಗಳ ವ್ಯವಸ್ತೆ ಬೆಳೆದು ಬಂದಿತು.

sarapali
ಕೆರೆಗಳ ಸರಪಳಿ

ಕೆರೆಗಳನ್ನು ಸರಪಳಿಯ ಮಾದರಿಯಲ್ಲಿ ಒಂದಕ್ಕೊಂದು ಸೇರಿಸುವ ಪದ್ದತಿಯಲ್ಲಿ ಮುಕ್ಯವಾಗಿ ಹಲವು ಲಾಬವನ್ನು ಕಾಣಬಹುದು. ಈ ಸರಪಳಿ ವ್ಯವಸ್ತೆಯಲ್ಲಿ ಮೊದಲ ಕೆರೆಯ ಒಳಹರಿವು ಬರುವುದು ಆಯಕಟ್ಟು ಪ್ರದೇಶದಲ್ಲಾಗುವ ಮಳೆಯಿಂದ ಇಲ್ಲವೇ ಯಾವುದೇ ನದಿಯ ಹರಿವಿನಿಂದ. ಮುಂದೆ ಇದರ ಹೊರಹರಿವು ಮುಂದಿನ ಕೆರೆಗೆ ಹರಿಯುವ ದಾರಿಯಲ್ಲಿ ಹಲವು ಪಾತ್ರಗಳಾಗಿ ಬದಲಾಗುತ್ತದೆ. ಅವುಗಳಲ್ಲಿ ಆವಿಯಾಗುವ ನೀರಿನ ಪ್ರಮಾಣ, ಕೆರೆಯಲ್ಲಿನ ಸೋರುವಿಕೆಯ ಪ್ರಮಾಣ, ಕೆರೆಯ ತಳದ ಮೂಲಕ ನೆಲಕ್ಕೆ ಬಸಿಯುವ ನೀರಿನ ಪ್ರಮಾಣ ಮತ್ತು ಕೋಡಿ ಹರಿದಾಗ ಹರಿಯುವ ನೀರು, ಹೀಗೆ ನಾವು ನೀರಿನ ಪ್ರಮಾಣವನ್ನು ಅರಿಯಬಹುದು. ಮುಕ್ಯ ಕೆರೆಯನ್ನ ಬಿಟ್ಟು ಆ ಸರಪಳಿಯಲ್ಲಿ ಬರುವ ಮುಂದಿನ ಕೆರೆಯ ಒಳಹರಿವಿನ ಲೆಕ್ಕಾಚಾರದಲ್ಲಿ ಸ್ವಲ್ಪ ಬದಲಾವಣೆ ಇದ್ದು, ಆ ಕೆರೆಗಳ ಒಳ ಹರಿವು ಮೊದಲ ಕೋಡಿ ಹರಿದು ಬರುವ ನೀರುನ್ನು ನೆಚ್ಚಿಕೊಂಡಿರುತ್ತದೆ.

ಈ ಸರಪಳಿ ಕೆರೆಗಳಿಂದ ಹಲವು ಉಪಯೋಗಗಳಿವೆ. ಅವನ್ನು ಈ ಕೆಳಗೆ ನೀಡಲಾಗಿದೆ;

 1. ಅತೀ ಹೆಚ್ಚಿನ ಮಳೆಯಾದಾಗ ಕೆರೆಯ ಪ್ರಮಾಣಕ್ಕಿಂತ ಹೆಚ್ಚಿನ ನೀರು ಪ್ರವಾಹ ರೂಪ ಪಡೆಯಬಹುದು. ಇದನ್ನು ತಪ್ಪಿಸಲು ಹೆಚ್ಚಿನ ನೀರನ್ನು ದಾರಿಯಲ್ಲಿ ಹಿಡಿದಿಡುವಂತೆ ಸಣ್ಣ ಕೆರೆಗಳನ್ನು ಮಾಡಿರುತ್ತಾರೆ.
 2. ನೆಲದ ಸವೆತ ಮತ್ತು ಮಣ್ಣಿನ ಗುಣಮಟ್ಟವನ್ನು ಇದು ಕಾಪಾಡುವುದು. ಪ್ರವಾಹ ರೂಪದಲ್ಲಿ ಮಳೆಯ ನೀರು ರಬಸವಾಗಿ ಹರಿದಾಗ ಅದು ತನ್ನ ಜೊತೆ ಪಲವತ್ತಾದ ಮಣ್ಣನ್ನು ಹೊತ್ತೊಯುತ್ತದೆ, ಅಲ್ಲದೆ ಆ ಜಾಗದ ಮಣ್ಣು ಮತ್ತೊಂದೆಡೆ ಹರಿದು ಹೋಗಿ ನೆಲದ ಸವಕಳಿ ಉಂಟಾಗುತ್ತದೆ. ಸರಪಳಿ ಕೆರೆಗಳಿಂದ ಇದನ್ನು ತಡೆಗಟ್ಟಲಾಗುತ್ತಿತ್ತು.
 3. ಪ್ರವಾಹದ ನೀರು ಕೆರೆಯನ್ನು ತುಂಬಿದ ಮೇಲೆ ಹೆಚ್ಚಿನ ನೀರು ಹರಿದು ಹೋಗುತ್ತದೆ. ಹರಿದು ಹೋಗುವ ದಾರಿಯಲ್ಲಿ ಅದನ್ನು ಕೂಡಿಡದಿದ್ದರೆ ಆ ನೀರು ಮುಂದೆ ಹರಿದು ಪೋಲಾಗಬಹುದು ಇಲ್ಲವೇ ಸಮುದ್ರ ಸೇರಬಹುದು. ಮುಂದಿನ ಬರದ ನಿರ‍್ವಹಣೆಗೆ ಇದು ಸಹಕಾರಿಯಾಗುವುದಿಲ್ಲ.
 4. ಪ್ರವಾಹ ರೂಪದಲ್ಲಿ ಹರಿದು ಹೋಗುವ ನೀರು ಇರುವ ಕೆಲವೇ ಕೆರೆಗಳಲ್ಲಿ ಹೂಳು ತುಂಬಲು ಕಾರಣವಾಗುತ್ತದೆ.
 5. ನೆಲದಡಿಯ ಬಸಿವ ನೀರಿನ ಮಟ್ಟವನ್ನು ಕಾಪಾಡುವಲ್ಲಿ ಈ ಮಾದರಿಯ ಕೆರೆಗಳ ವಿನ್ಯಾಸ ಬಹಳ ಪರಿಣಾಮಕಾರಿ.

ಜೊತೆಗೆ ಇವುಗುಳಿಂದ ನೇರವಾಗಿ ಎರಡು ರೀತಿಯ ಪ್ರಯೋಜನಗಳಾಗುತ್ತಿದ್ದವು.
1. ಕೆರೆ ಕೋಡಿ ಹರಿದು ಹೆಚ್ಚುವರಿ ನೀರು ಸರಾಗವಾಗಿ ಇನ್ನೊಂದು ಕೆರೆಗೆ ಹರಿವುದರಿಂದ ಕೆರೆಯ ಏರಿಗೆ ಅಪಾಯವಾಗತ್ತಿರಲಿಲ್ಲ. ಹಾಗಾಗಿ ಕೆರೆ ಸುರಕ್ಶಿತವಾಗಿರುತ್ತಿತ್ತು. ನಮ್ಮ ಹಿರಿಯರು ನಿಸರ‍್ಗದ ಪರಿಸ್ತಿತಿಗನುಗುಣವಾಗಿ ತಾಂತ್ರಿಕತೆಯ ಕದ ತೆರೆಯುತ್ತಿದ್ದರು.
2. ಕೆರೆ ತುಂಬಿ ಕೋಡಿ ಹರಿದು ಹೆಚ್ಚುವರಿ ನೀರು ಇನ್ನೊಂದು ಕೆರೆಗೆ ಹರಿಯುವುದರಿಂದಾಗಿ ಒಂದೊಂದು ಹನಿ ನೀರನ್ನು ಕೂಡಿಡುವ ಜಾಣತನ ಎದ್ದು ಕಾಣುತ್ತಿತ್ತಲ್ಲಿ.
ಇದಕ್ಕೆ ಉದಾಹರಣೆಯಾಗಿ ಬೆಂಗಳೂರಿನ ಕೆರೆಗಳ ಚಿತ್ರವನ್ನ ಗಮನಿಸಿ,

ಬೆಂಗಳೂರಿನ ಕೆರೆಗಳ ಸರಪಳಿ
ಬೆಂಗಳೂರಿನ ಕೆರೆಗಳ ಸರಪಳಿ
varturu
ವರ‍್ತೂರು ಕೆರೆ ಸರಪಳಿ

ವರ‍್ತೂರು ಕೆರೆ ಸರಪಳಿಯ ಜೋಡಣೆಯಲ್ಲಿ ಬೈಯಪ್ಪನ ಹಳ್ಳಿ ಕೆರೆ, ಹರಳೂರು ಕೆರೆ, ಕಸವನಹಳ್ಳಿ ಕೆರೆ, ಕೈಕೊಂಡನಹಳ್ಳಿ ಕೆರೆ, ಕುಂಡಲ ಹಳ್ಳಿ ಕೆರೆ, ಚಿನ್ನಪ್ಪನಹಳ್ಳಿ ಕೆರೆ ಹೀಗೆ ಹಲವು ಕೆರೆಗಳು ಒಂದಕ್ಕೊಂದು ಜೋಡಣೆಗೊಂಡು, ಒಂದು ಒಳ್ಳೆಯ ಮಾದರಿ ಕೆರೆ ವ್ಯವಸ್ತೆ ಬೆಂಗಳೂರಿನಲ್ಲಿ ಕಂಡು ಬರುತ್ತದೆ. ಅಲ್ಲದೆ ಕಟ್ಟಡ ಸಾಮಾಗ್ರಿಗಳು, ಕೆರೆ ಕಟ್ಟುವ ನೈಪುಣ್ಯತೆ ಇರುವ ಮಂದಿ, ಹಣಕಾಸು ವಿಚಾರ, ಕೆರೆ ನಿರ‍್ಮಾಣದ ನಂತರದ ನಿರ‍್ವಹಣೆ, ಇವುಗಳೆಲ್ಲದರ ಬಗ್ಗೆ ವಿವರವಾಗಿ ಹಲವಾರು ಶಾಸನಗಳಲ್ಲಿ ಬರೆಯಲಾಗಿದೆ. ಕೆರೆ ಕಟ್ಟುವ ಎಲ್ಲಾ ಸಣ್ಣಪುಟ್ಟ ವಿಶಯಗಳ ಬಗ್ಗೆಯೂ ನಮ್ಮ ಹಿರಿಯರಲ್ಲಿ ಜಾಣ್ಮೆಯಿತ್ತು ಅನ್ನುವುದನ್ನು ಅವುಗಳ ಶತಮಾನಗಳ ಬಾಳಿಕೆ ಹೇಳುತ್ತದೆ.

ಕೊನೆಹನಿ:
ಗಗನದ ಮೇಘಂಗಳು ಸುರಿದಲ್ಲಿ ಒಂದು ಹಿರಿಯ ಕೆರೆ ತುಂಬಿತ್ತು.
ಆ ಕೆರೆಗೆ ಏರಿ ಮೂರು;
ಅಲ್ಲಿ ಒಳಗೆ ಹತ್ತು ಬಾವಿ ಹೊರಗೆ ಐದು ಬಾವಿ |
ಆ ಏರಿಯೊಳಗೆ ಒಂಬತ್ತು ತೂಬನುಚ್ಚಿದಡೆ
ಆಕಾಶವೆಲ್ಲ ಜಲಮಯವಾಗಿತ್ತು |
ತುಂಬಿದ ಜಲವನುಂಡುಂಡು ಬಂದು…
ಅಲ್ಲಮಪ್ರಭುದೇವರು

(ಮಾಹಿತಿ ಸೆಲೆ: wgbis.ces, parisaramahiti.kar.nic.in, vachanasanchaya.net, ಶಾಸನದ ಮಾಹಿತಿ – ಹಂಪಿ ಸಂಪುಟ, ನೆರವು – ಡಾ. ಎಸ್. ವೈ. ಸೋಮಶೇಕರ, ಕನ್ನಡ ವಿಶ್ವವಿದ್ಯಾಲಯ ಹಂಪಿ)

(ಚಿತ್ರ ಸೆಲೆ: facebook.com, firefightermath.org, cpreec.org)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.