ಮಾಡಿ ನೋಡಿ ಮೊಸರಿನ ಸಾರು
– ಪ್ರೇಮ ಯಶವಂತ.
ಬೇಸಿಗೆಯ ಬಿರು ಬಿಸಿಲಿಗೆ ತಂಪಾದ ಮೊಸರಿನ ಸಾರು.
ಬೇಕಾಗಿರುವ ಅಡಕಗಳು:
ಮೆಂತ್ಯೆ ಸೊಪ್ಪು- 1.5 ಬಟ್ಟಲು (ಸಣ್ಣಗೆ ಹೆಚ್ಚಿದ್ದು)
ಕರಿಬೇವು – 10-15 ಎಲೆ
ಕೊತ್ತಂಬರಿ ಸೊಪ್ಪು – 1/2 ಬಟ್ಟಲು
ಮೊಸರು – 1 ಬಟ್ಟಲು
ಬೆಳ್ಳುಳ್ಳಿ – 3-4 ಎಸಳು
ಹಸಿ ಶುಂಟಿ – 2 ಇಂಚು (ಸಣ್ಣಗೆ ಹೆಚ್ಚಿದ್ದು)
ಈರುಳ್ಳಿ – 1 (ಸಣ್ಣಗೆ ಹೆಚ್ಚಿದ್ದು)
ಬೆಂಡೆಕಾಯಿ – 1 ಬಟ್ಟಲು ( ಬೆಂಡೆಕಾಯಿನ್ನು ಕತ್ತರಿಸಿದಾಗ ಗೋಂದಿನ ಎಳೆಗಳು ಕಾಣಿಸಿಕೊಳ್ಳುತ್ತವೆ. ಇವನ್ನು ಕಡಿಮೆ ಮಾಡಲು, ಬೆಂಡೆಕಾಯಿಯನ್ನು ಬಿಲ್ಲೆಗಳಾಗಿ ಕತ್ತರಿಸಿ, ಎಣ್ಣೆಯನ್ನು ಹಾಕದೆ ಬಾಣಲೆಯಲ್ಲಿ ಹುರಿದುಕೊಳ್ಳಿ.)
ಗೋಡಂಬಿ – (ಆಯ್ಕೆಗೆ ಬಿಟ್ಟಿದ್ದು)
ಹಸಿ ಮೆಣಸಿನಕಾಯಿ – 3-4 (ಕಾರಕ್ಕೆ ತಕ್ಕಶ್ಟು)
ಅರಿಸಿನ ಪುಡಿ – 1/8 ಚಮಚ
ಉಪ್ಪು – ರುಚಿಗೆ ತಕ್ಕಶ್ಟು
ಒಗ್ಗರಣೆಗೆ:
ಸಾಸಿವೆ – 1/4 ಚಮಚ
ಜೀರಿಗೆ – 1/2 ಚಮಚ
ಉದ್ದಿನಬೇಳೆ – 1/2 ಚಮಚ
ಮಾಡುವ ಬಗೆ:
ತೆಳುವಾದ ತಳವುಳ್ಳ ಪಾತ್ರೆಯಲ್ಲಿ 1 ದೊಡ್ಡ ಚಮಚದಶ್ಟು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ಮೇಲೆ ಸಾಸಿವೆ, ಜೀರಿಗೆ, ಉದ್ದಿನಬೇಳೆ ಹಾಗು ಗೋಡಂಬಿಯನ್ನು ಹಾಕಿ. ಉದ್ದಿನಬೇಳೆ ಮತ್ತು ಗೋಡಂಬಿ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಹೆಚ್ಚಿಟ್ಟ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಟಿ ಹಾಕಿ. ಇವುಗಳ ಹಸಿ-ವಾಸನೆ (raw smell) ಇಲ್ಲವಾಗುವವರೆಗೆ ಬಾಡಿಸಿದ ಮೇಲೆ, ಕತ್ತರಿಸಿದ ಈರುಳ್ಳಿ, ಕರಿಬೇವು, ಚಿಟಿಕೆ ಉಪ್ಪು ಹಾಗು ಅರಿಸಿನ ಪುಡಿ ಸೇರಿಸಿ. ಈರುಳ್ಳಿ ಬೆಂದ ಮೇಲೆ ಕತ್ತರಿಸಿದ ಮೆಂತ್ಯೆ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕ ಉಪ್ಪನ್ನು ಹಾಕಿ, ಹಸಿ-ವಾಸನೆ ಹೋಗುವವರೆಗೆ ಬಾಡಿಸಿ ಒಲೆಯ ಉರಿಯನ್ನು ಆರಿಸಿ. ಈ ಬಗೆಯಲ್ಲಿ ಬೇಯಿಸಿದ ಅಡಕಗಳು ತಣ್ಣಗಾದ ಮೇಲೆ ಮೊಸರನ್ನು ಹಾಕಿ ಕಲಸಿ. ಅನ್ನದ ಜೊತೆಗೆ ತಿನ್ನಬಹುದಾದ ರುಚಿಯಾದ ಮೊಸರಿನ ಸಾರನ್ನು ಈ ಬಗೆಯಲ್ಲಿ ಅಣಿಗೊಳಿಸಬಹುದಾಗಿದೆ.
ಏನ್ ಮಸ್ತ್ ಮಜ್ಜಿಗೆ ಹುಳಿ ಮಾಡೀರಿ….ಸುವಾಸನೆ ಅಮೇರಿಕದ ಕೊಲಂಬಸ್ ದಿಂದ ಬೆಂಗ್ಳೂರಿನ ಗರುಡಾಚಾರ್ ಪಾಳ್ಯದ ತನಕ ಬರ್ತಾ ಇದೆ!!!!…