ಕೀಲು ಸವೆತದ ಬೇನೆ

ಡಾ.ಸಂದೀಪ ಪಾಟೀಲ.

ಹರೆಯ ಮುದಿಪಿನೆಡೆಗೆ ಸರಿಯಿತೆಂದರೆ ಸಾಕು ಕಾಲು-ಕೀಲು ನೋವುಗಳದ್ದೇ ಗೋಳು. ಹುರಿಕಟ್ಟು ಏರ‍್ಪಾಟಿಗೆ ಸೇರಿದ ಬೇನೆಗಳಲ್ಲಿ ಹೆಚ್ಚು ಕಂಡುಬರುವುದು ಕೀಲು ಸವೆತದ ಬೇನೆ (Osteoarthritis-OA). ಮನುಶ್ಯನ ಅಳವಿಲ್ಲದಿಕೆಗೆ (disability) ಮುಕ್ಯವಾದ ಕಾರಣ ಇದಾಗಿದೆ. ಮುಪ್ಪಾದವರಲ್ಲಿ ಕೀಲು ನೋವು, ಕೀಲು ಬಾವು ಮತ್ತು ಕೀಲು ಅಳಕುವುದು ಈ ಬೇನೆಯ ಮುಕ್ಯ ಕುರುಹುಗಳು (symptoms). ಮಯ್ಯಿಯ ಯಾವುದೇ ಕೀಲುಗಳಲ್ಲಿ ಕಾಣಿಸಿಕೊಳ್ಳಬಹುದಾದ ಈ ಬೇನೆ ಮುಕ್ಯವಾಗಿ ಮಂಡಿಯಲ್ಲಿಯೇ ಕಾಣಿಸಿಕೊಳ್ಳುವುದು ಹೆಚ್ಚು (ತೂಕ ಹೊರುವ ಕೀಲುಗಳಾದ್ದರಿಂದ).

ವಿಶ್ವ ಹದುಳ ಕೂಟದ (WHO) ಪ್ರಕಾರ, ಬೆನ್ನು ನೋವಿನ (50%) ನಂತರ ಎಲ್ಲಕ್ಕಿಂತ ಹೆಚ್ಚು ಮಂದಿಯನ್ನು ಕಾಡುವ ಹುರಿಕಟ್ಟಿನ ತೊಂದರೆ ಎಂದರೆ ಇದೇ. ಮಂಡಿ ಕೀಲು ಸವೆತಕ್ಕೆ ಎಡೆಮಾಡಿಕೊಡುತ್ತಿರುವ ಮುಕ್ಯ ಕಾರಣಗಳೆಂದರೆ – ಬೊಜ್ಜು, ಹೊಗೆಸೊಪ್ಪು, ಕಸುಬಿನಲ್ಲಿ ಮಂಡಿ ಮಡಿಸುವಿಕೆ ಮತ್ತು ಮಿತಿಮೀರಿದ ಕೆಲಸ. ಹರೆಯ ಹೆಚ್ಚಾದಂತೆಲ್ಲ ಬೇನೆಯ ಕುರುಹುಗಳು ಹೆಚ್ಚುತ್ತಾ ಹೋಗುತ್ತವೆ. ಹೆಂಗಸರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬೊಜ್ಜು ಇರುವವರಲ್ಲಿ ಕೀಲು ಸವೆತದ ಬೇನೆ ಕಾಣಿಸಿಕೊಳ್ಳುವುದು ಹೆಚ್ಚು.

ಬೇನೆಯ ಹುಟ್ಟುಬಗೆ (Pathogenesis):

ಕೀಲುಸವೆತದಲ್ಲಿ ಮುಕ್ಯವಾಗಿ ಸವೆಯುವುದು ಮೆಲ್ಲೆಲುಬು. ಎರಡು ಮೂಳೆಗಳು ಕೂಡಿಕೊಂಡು ಕೀಲುಗಳಾಗುವ ಎಡೆಯಲ್ಲಿ ಮೆಲ್ಲೆಲುಬು ಮೂಳೆಯ ಮೇಲೆ ಹೊದ್ದುಕೊಂಡಿರುತ್ತದೆ. ಮೆಲ್ಲೆಲುಬು ಹೊಂದಿಕೊಳ್ಳುವಂತಹ (flexible) ಆದರೆ ಗಟ್ಟಿಯಾದ ’ನೆರವಿನ ಕೂಡಿಸುವ ಗೂಡುಕಟ್ಟು’ಗಳಲ್ಲೊಂದು (supportive connective tissue).

ಕೂಡಿಸುವ ಬೇರೆ ಗೂಡುಕಟ್ಟುಗಳಲ್ಲಿ ಇರುವ ಹಾಗೆ ಮೆಲ್ಲೆಲುಬುಗಳಲ್ಲಿ ನೆತ್ತರಗೊಳವೆಗಳು ಇರುವುದಿಲ್ಲ. ಈ ಒಂದು ಕಾರಣದಿಂದಾಗಿ ಮೆಲ್ಲೆಲಬುಗಳಿಗೆ ಮರುಹುಟ್ಟುವ/ಮರುಬೆಳೆಯುವ ಕಸುವು ಕಡಿಮೆಯಿರುತ್ತದೆ. ಗೂಡುಕಟ್ಟಿನ ಸರಿಯಾದ ಕೆಲಸಕ್ಕೆ ಆರಯ್ವಗಳ ಸಾಗಣೆ ತುಂಬಾ ಬೇಕಾದದ್ದು ಮತ್ತು ನೆತ್ತರಗೊಳವೆಗಳೇ ಆರಯ್ವಗಳ ಸಾಗಣೆಯನ್ನು ಮಾಡುತ್ತವೆ. ಆದರೆ ಮೆಲ್ಲೆಲುಬುಗಳಲ್ಲಿ ನೆತ್ತರಗೊಳವೆಗಳು ಇಲ್ಲದಿರುವುದರಿಂದ, ಅವುಗಳು ತೊಂದರೆಗೆ ಈಡಾಗುವುದು ಹೆಚ್ಚು.

ಮೆಲ್ಲೆಲುಬಿನಲ್ಲಿ ಮೆಲ್ಲೆಲುಗೂಡು (Chondrocytes), ನೀರು, ಎರಡನೆ ಬಗೆಯ ಅಂಟುಟ್ಟುಕ (type II collagen) ಮತ್ತು ಮುನ್ನಿರ‍್ಸಕ್ಕರೆ ಸರಗಳು (proteoglycans) ಇರುತ್ತವೆ. ಮೆಲ್ಲೆಲುಗೂಡುಗಳು ಸೂಲುಗೂಡು ಅಚ್ಚುಗೆಡುಕ ದೊಳೆಗಳನ್ನು (matrix metelloproteinases-MMPs) ಒಸರುತ್ತವೆ. ಇವುಗಳು ಅತಿಯಾಗಿ ಸೋರಿದರೆ ಇಡೀ ಮೆಲ್ಲೆಲುಬಿನ ಇಟ್ಟಳ ಹಾಳಾಗಬಲ್ಲದು.

ಮೆಲ್ಲೆಲುಬಿನಲ್ಲಿ ಒತ್ತುವಿಕೆಯಿಂದಾಗಿ (compressive force) ನೀರು ಹೊರಹೋದರೆ, ಪೊರೆತೂರ‍್ಪಿನ ಒತ್ತಡದಿಂದ (osmotic pressure) ನೀರು ಒಳಬರುತ್ತದೆ. ಈ ತೆರನಾಗಿ ಮೆಲ್ಲೆಲುಬಿನಲ್ಲಿ ನೀರಿನ ಮಟ್ಟ ಸರಿದೂಗಲ್ಪಡುತ್ತದೆ. ಅಂಟುಟ್ಟುಕ ನಾರುಗಳು (collagen fibers) ಒತ್ತುವಿಕೆಯಿಂದಾಗಿ ನೀರನ್ನು ಹೊರದೂಡುತ್ತವೆ ಮತ್ತು ಮುನ್ನಿರ‍್ಸಕ್ಕರೆ ಸರಗಳು (proteoglycans) ಪೊರೆತೂರ‍್ಪಿನ ಒತ್ತಡದಿಂದ ನೀರನ್ನು ಒಳಗೆಳೆಯುತ್ತವೆ. ನೀರಿನ ಈ ಒಡನಾಟದ ಮಟ್ಟ ಏರುಪೇರಾದರೆ ಕೀಲು ಸವೆತ ಕಾಣಿಸಿಕೊಳ್ಳುತ್ತದೆ.

Osteoarthritis_left_knee

(ಮೊದಲ ಹಂತದಲ್ಲಿರುವ ಎಡಬದಿಯ ಕೀಲು ಸವೆತದ ಬೇನೆ)

ಕೀಲು ಸವೆತದ ಕುರುಹುಗಳು (Symptoms):
• ಕೀಲಿನ ಒಳಗೆ ಮತ್ತು ಸುತ್ತ ನೋವು
• ಕೆಲಸ ಮಾಡುತ್ತಿರುವಾಗ ನೋವು ಹೆಚ್ಚಿದ್ದರೆ, ಸುಮ್ಮನಿರುವಾಗ ಕಡಿಮೆಯಾಗುತ್ತದೆ
• ಬರಬರುತ್ತ ನೋವು ಯಾವಾಗಲೂ ಉಳಿದುಕೊಳ್ಳುತ್ತದೆ
• ಕೀಲಿನ ಬಿಗಿತ (stiffness) ಬೆಳಗ್ಗೆ ಎದ್ದಮೇಲೆ 5 ರಿಂದ 30 ನಿಮಿಶಗಳವರೆಗೆ ಇರುತ್ತದೆ
• ಬಾವು, ನೀರ‍್ದುಂಬುವಿಕೆ (effusion), ಅಳಕು (crepitus) ಅಲುಗಾಟಕ್ಕೆ ಅಡೆತಡೆ (restricted movements)
• ಕೀಲಿನ ಕೊಂಗು (deformity), ಕಂಡದ ಕಸುವಳಿಕೆ(muscle weakness) ಮತ್ತು ಸೊರಗುವಿಕೆ (muscle wasting)
• ಸವೆತಕ್ಕೊಳಗಾಗುವ ಹೆಚ್ಚಿನ ಕೀಲುಗಳೆಂದರೆ ಮಂಡಿ, ಅಂಗಯ್ ಕೀಲುಗಳು ಮತ್ತು ಬೆನ್ನುಮೂಳೆಯ ಕೀಲುಗಳು

ಕುತ್ತತಿಳಿವು (Diagnosis):
ಬೇನೆಯ ಹಿನ್ನಡವಳಿ ಮತ್ತು ಒರೆತದಿಂದಲೇ ಕೀಲು ಸವೆತವನ್ನು ಕಂಡುಕೊಳ್ಳಬಹುದು. X-ಕದಿರ ತಿಟ್ಟದಿಂದ ಕುತ್ತತಿಳಿವನ್ನು ಸರಿಯಾಗಿ ತಿಳಿಯಬಹುದು.

ಮಾಂಜುಗೆ (treatment):
• ಬಾಳಬಗೆ ಮಾರ‍್ಪಾಡು (Lifestyle management)
• ನೋವಳಿಕಗಳು (Analgesics)
• ಒಡಲ್ಕಟ್ಟುಕವಲ್ಲದ ಉರಿಯೂತ ಅಳಿಕಗಳು (Non Steroidal Anti-inflammatory Drugs)

(ತಿಟ್ಟಸೆಲೆ: ವಿಕಿಪೀಡಿಯಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: