ನಮ್ಮ ಮಯ್ಯಿ ಕಂಡಗಳ ಅರಿವು

ಯಶವನ್ತ ಬಾಣಸವಾಡಿ.

ಹುರಿಕಟ್ಟಿನ ಏರ್‍ಪಾಟು ಬಾಗ-3

ನಮ್ಮ ಮಯ್ಯಿ ಕುರಿತಾದ ನನ್ನ ಹಿಂದಿನ ಬರಹಗಳ (1, 2, 3) ಮುಂದುವರೆದ ಬಾಗವಾಗಿ ಕಂಡಗಳ (muscles) ಬಗ್ಗೆ ತಿಳಿಯೋಣ ಬನ್ನಿ.

ಕಂಡದೇರ್‍ಪಾಟು/ಹುರಿಏರ್‍ಪಾಟು (muscular system), ನಮ್ಮ ಮಯ್ಯಲ್ಲಿರುವ ಅಂಗಗಳೇರ್‍ಪಾಡಿನ ಬಗೆಗಳಲ್ಲೊಂದು. ಈ ಏರ್‍ಪಾಟು ಮೂರು ಬಗೆಯ ಕಂಡಗಳನ್ನು ಹೊಂದಿರುತ್ತದೆ.

1) ಗುಂಡಿಗೆ ಕಂಡ (cardiac muscle): ಇದು ಎದಿಗುಂಡಿಗೆಯಲ್ಲಿ ಕಾಣಸಿಗುತ್ತದೆ.

2) ನುಣುಪು ಕಂಡ (smooth muscle): ಎದೆಗುಂಡಿಗೆಯನ್ನು ಹೊರತು ಪಡಿಸಿ, ಉಳಿದ ಅಂಗಗಳ ಗೋಡೆಗಳು ನುಣುಪುಕಂಡದಿಂದ ಮಾಡಲ್ಪಟ್ಟಿರುತ್ತವೆ

3) ಕಟ್ಟಿನ ಕಂಡ (skeletal muscle): ಕಟ್ಟಿನ ಕಂಡವು ಎಲುಬುಗಳ ಜೊತೆಗೂಡಿ ಹುರಿಕಟ್ಟಿನ ಏರ್‍ಪಾಡನ್ನು ಮಾಡುತ್ತದೆ.

titta 1

ಈ ಬರಹದಲ್ಲಿ, ಕಟ್ಟಿನ ಕಂಡಗಳ ಕೆಲಸ ಹಾಗು ಬಗೆಗಳ ಬಗ್ಗೆ ತಿಳಿಸಿಕೊಡುತ್ತೇನೆ. ಮನುಶ್ಯರ ಮಯ್ಯಿ ಒಳನೋಟ ಬರಹದ ಸರಣಿಯಲ್ಲಿ ಸರಿ ಎನಿಸಿದ ಕಡೆ ಒಂದೆರಡು ಕಂತುಗಳಲ್ಲಿ ಮೂರೂ ಬಗೆಯ ಕಂಡಗಳ ಒಟ್ಟು ಹಾಗು ಸೀರುತೋರ್‍ಪಿನ (microscopic) ಇಟ್ಟಳಗಳ ಜೊತೆಗೆ ಅವುಗಳ ಉಸಿರಿಯರಿಮೆಯನ್ನೂ (physiology) ತಿಳಿಸಿಕೊಡುತ್ತೇನೆ.

ಕಟ್ಟಿನ ಕಂಡದ ಮುಕ್ಯ ಕೆಲಸಗಳು: 

1) ಮಯ್ ಅಲುಗಾಟ ಹಾಗು ಓಡಾಟ 

2) ಮಯ್ ಕಂಡಿಗಳ (orifice) ಕೆಲಸವನ್ನು ಅಂಕೆಯಲ್ಲಿಡುವುದು: ಕಟ್ಟಿನ ಕಂಡಗಳು, ಗೆಂಡೆಗಳನ್ನು (sphincter) ಮಾಡುವುದರ ಮೂಲದ ಮಯ್ಯಲ್ಲಿರುವ ಬಾಯಿ ಹಾಗು ಇತರ ಕಂಡಿಗಳ ಕೆಲಸವನ್ನು ಅಂಕೆಯಲ್ಲಿಡಲು ನೆರವಾಗುತ್ತವೆ.

3) ನಿಲುವು ಮತ್ತು ನೆಲೆತ (posture & stability): ಯಾವುದೇ ಗಳಿಗೆಯಲ್ಲೂ ಮಯ್ಯಲ್ಲಿನ ಕಂಡಗಳು ಒಂದು ಮಟ್ಟಕ್ಕಾದರೂ, ಕುಗ್ಗಿದ (contract) ಪಾಡಿನಲ್ಲಿರುವುದರ ಮೂಲಕ ತನ್ನ ಕೆಲಸವನ್ನು ಮಾಡುತ್ತಿರುತ್ತವೆ. ಇದರಿಂದ, ನೆಲದ ಹಿರಿಸೆಳೆತವನ್ನು (gravity) ಇದಿರಿಸುವ ಹಾಗು ಬೇಡದೆ ಇರುವ ಮಯ್ ಅಲುಗಾಡಿಸುವಿಕೆಯನ್ನು ತಪ್ಪಿಸುವ ಕೆಲಸವನ್ನು ಮಾಡುತ್ತಾ ನಮ್ಮ ಮಯ್ಗೆ ನೆಲೆತವನ್ನು (stability) ಕೊಡುತ್ತದೆ.

4) ಮಯ್ ಬಿಸುಪನ್ನು ಅಂಕೆಯಲ್ಲಿಡುವುದು: ನಾವು ತಿನ್ನುವ ಕೂಳಿನ ಅಂಶಗಳನ್ನು ಕಸುವನ್ನಾಗಿ (energy) ಮಾಡುವ ಹಮ್ಮುಗೆಯನ್ನು ತರುಮಾರ್‍ಪಿಸುವಿಕೆ (metabolism) ಎಂದು ಹೇಳುತ್ತೇವೆ. ಮಯ್ ಸೂಲುಗೂಡುಗಳಲ್ಲಿ (cell) ನಡೆಯುವ ಈ ತರುಮಾರ್‍ಪಿನಿಂದ ಹುಟ್ಟುವ ಹುರುಪಿನಲ್ಲಿ, ಹೆಚ್ಚಿನ ಬಾಗವು ಬಿಸಿ (heat) ರೂಪದಲ್ಲಿ ಹೊರ ಹಾಕಲ್ಪಡುತ್ತದೆ.

ಮನುಶ್ಯನ 40% ಮಯ್ಯಿ ಕಂಡದಿಂದ ಮಾಡಲ್ಪಟ್ಟಿದೆ. ಮಯ್ ಕಂಡವು ಹುರುಪಿನ ಕೆಲಸದಲ್ಲಿ ತೊಡಗಿಕೊಂಡಾಗ, ತರುಮಾರ್‍ಪಿನ (metabolism) ಹಮ್ಮುಗೆಯಿಂದ ಹೆಚ್ಚಿನ ಮಟ್ಟದಲ್ಲಿ ಬಿಸಿ ಹೊಮ್ಮುತ್ತದೆ. ಹೀಗೆ ಮಾಡಲ್ಪಟ್ಟ ಬಿಸಿಯು ರಕ್ತದ ನೆರವಿನಿಂದ ನಮ್ಮ ಇಡೀ ಮಯ್ಯಿಗೆ ಹರಡುವು ಮೂಲಕ ಮಯ್ ಬಿಸುಪನ್ನು ಕಾಪಾಡುತ್ತದೆ.

5) ಅರುಹುವಿಕೆ (communication): ಮುಕನುಡಿತ (facial expression), ಮಯ್ಮಾತು (body language), ಕಯ್ ಸನ್ನೆ, ಬರೆಯುವಿಕೆ, ಉಲಿಯುವಿಕೆ ಹೀಗೆ ಹಲವು ಬಗೆಯಲ್ಲಿ ಮತ್ತೊಬ್ಬರೊಡನೆ ಒಡನಾಡಲು ಕಟ್ಟಿನಕಂಡವು ನೆರವಾಗುತ್ತದೆ.

ಕಟ್ಟಿನ ಕಂಡಗಳನ್ನು (skeletal muscles) ಅವುಗಳ ಆಕಾರದ ಮೇಲೆ 7 ಗುಂಪುಗಳಾಗಿಸಬಹುದು:

titta 2

1) ಡುಂಡನೆಯ ಕಂಡ (circular): ಈ ಬಗೆಯ ಕಂಡವು ದುಂಡಗಿರುತ್ತದೆ. ಇಂತ ಬಗೆಯ ಕಂಡಗಳು ಮನುಶ್ಯನ ಮಯ್ ಕಂಡಗಳನ್ನು ಮಾಡುವ ಗೆಂಡೆಗಳಲ್ಲಿ (sphincter) ಇರುತ್ತವೆ. ಎತ್ತುಗೆಗೆ ಬಾಯಿಯನ್ನು ಸುತ್ತುವರಿದ ಬಾಯ್ಸುತ್ತರಿ ಕಂಡ (orbicularis oris) ಮತ್ತು ಕಣ್ಣನ್ನು ಸುತ್ತುವರಿದ ಕಣ್ಸುತ್ತರಿ ಕಂಡ (orbicularis oculi).

2) ಒಮ್ಮುಕದ ಕಂಡ (convergent) : ಯಾವುದೇ ಕಂಡವನ್ನು ಗುರುತಿಸುವಾಗ ಅದು ಯಾವ ಮೂಳೆಯಲ್ಲಿ (ಮೂಳೆಯ ಬಾಗ) ಹುಟ್ಟಿ, ಯಾವ ಮೂಳೆಯ ಬಾಗವನ್ನು ಸೇರುತ್ತದೆ/ಅಂಟುತ್ತದೆ (insertion) ಎನ್ನುವ ಅಂಶವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಒಮ್ಮುಕದ ಕಂಡಗಳು, ಹುಟ್ಟುವ ಬಾಗದಲ್ಲಿ ಅಗಲವಾಗಿದ್ದು, ಸೇರುವ (insertion) ತುದಿಯಲ್ಲಿ ಸಣ್ಣದಾಗಿರುತ್ತದೆ.

ಈ ಬಗೆಯ ಕಂಡದ ನಾರುಗಳ (muscle fiber) ಜೋಡಣಿಯು, ಹೆಚ್ಚಿನ ಬಲವನ್ನು ಹೊಮ್ಮಿಸುವಲ್ಲಿ ನೆರವಾಗುತ್ತದೆ. ಈ ಕಂಡಗಳನ್ನು ಮುಮ್ಮೂಲೆ (triangle) ಕಂಡವೆಂದೂ ಕರೆಯುವುದುಂಟು. ಎತ್ತುಗೆಗೆ: ಎದೆಯ ಬಾಗದಲ್ಲಿ ಇರುವ ‘ಹಿರಿಯೆದೆಗಲ ಕಂಡ‘ (pectoralis major).

3) ಗರಿತೆರದ ಕಂಡ (unipinnate): ಈ ಬಗೆಯ ಕಂಡಗಳಲ್ಲಿ, ಕಂಡದ ನಾರುಗಳು ಕಂಡರಗಳೊಂದಿಗೆ (tendons) ಅಡ್ಡಬದಿಯಲ್ಲಿ (diagonal) ಸೇರಿಕೊಳ್ಳಲು (insertion) ನೆರವಾಗಲು, ಪುಕ್ಕದ ಕೊಂಬೆಗಳಂತೆ ಜೋಡಿಸಲ್ಪಟ್ಟಿರುತ್ತವೆ. ಈ ಬಗೆಯ ಜೋಡಣೆಯು, ಕಂಡಗಳ ಬಲವನ್ನು ಹೆಚ್ಚಿಸುತ್ತದೆ. ಎತ್ತುಗೆಗೆ: ಕಯ್ಯಲ್ಲಿ ಕಂಡುಬರುವ ‘ಹುಳುಬಗೆ‘ ಕಂಡ (lumbricals).

4) ಸರಿತೆರಪಿನ ಕಂಡ (parallel):. ಇವುಗಳಲ್ಲಿ ಕಂಡರದ ನಾರುಗಳು ಒಂದೇ ತೆರಪಿನ (parallel) ದಿಕ್ಕಿನಲ್ಲಿ ಜೋಡಿಸಲ್ಪಟ್ಟಿರುತ್ತವೆ. ಇಂತಹ ಕಂಡಗಳನ್ನು ಬಾರು/ಮಿಳಿ (strap) ಕಂಡವೆಂದೂ ಕರೆಯಬಹುದು. ಇವು ಉದ್ದನೆಯ ಕಂಡಗಳ ಜಾತಿಗೆ ಸೇರಿದ್ದು, ಅಶ್ಟೇನು ಗಟ್ಟಿಯಾಗಿರುವುದಿಲ್ಲ. ಆದರೆ ಇವು ಹೆಚ್ಚಿನ ತಾಳಿಕೆಯನ್ನು (endurance) ಹೊಂದಿರುತ್ತವೆ. ಎತ್ತುಗೆಗೆ: ಹೊಲಿಗ ಕಂಡ (Sartorius/tailor muscle).

5) ಇಗ್ಗರಿತೆರದ ಕಂಡ (bipinnate): ಹಕ್ಕಿಯ ಪುಕ್ಕವನ್ನು ಹೋಲುವ ಈ ಕಂಡವು, ಎದುರು-ಬದುರು ದಿಕ್ಕಿನಲ್ಲಿ ಸಾಗುವ ಎರಡು ಸಾಲುಗಳ ನಾರುಗಳನ್ನು ಹಾಗು ನಡುವಿನಲ್ಲಿ ಕಂಡರದ (tendon) ಕಡ್ಡಿಯನ್ನು ಹೊಂದಿರುತ್ತದೆ. ಈ ಬಗೆಯ ಜೋಡಣೆಯು, ಕಂಡದ ಬಲವನ್ನು ಹಿಗ್ಗಿಸುತ್ತದೆಯಾದರೂ, ಅದರ ಅಲುಗಾಟದ ಮಟ್ಟವನ್ನು ಕುಗ್ಗಿಸುತ್ತದೆ. ನೆಟ್ಟನೆಯ ತೊಡೆಕಂಡವು (rectus femoris) ಇಗ್ಗರಿತೆರದ ಗುಂಪಿಗೆ ಸೇರುತ್ತದೆ.

6) ಕದಿರು/ಕಡುಬು ಬಗೆ ಕಂಡ (fusiform): ಈ ಬಗೆಯ ಕಂಡಗಳಲ್ಲಿ, ತುದಿಗಳಿಗೆ ಹೋಲಿಸಿದರೆ ನಡುಬಾಗವು ಅಗಲವಾಗಿರುತ್ತದೆ. ಎತ್ತುಗೆಗೆ: ಇತ್ತಲೆ ತೋಳ್ ಕಂಡ (ತೋಳ್=brachii; ಇತ್ತಲೆ/ಎರಡು ತಲೆ=biceps).

7) ಹಲಗರಿತೆರ ಕಂಡ (multipinnate): ಈ ಬಗೆಯ ಕಂಡದಲ್ಲಿ ನಡು ಕಂಡರವು, ಎರಡಕ್ಕಿಂತ ಹೆಚ್ಚು ಕವಲುಗಳನ್ನು ಹೊಂದಿದ್ದು, ಈ ಕಂಡರದ ಕವಲುಗಳ ಮೇಲೆ, ಇಕ್ಕೆಲಗಳಲ್ಲೂ ಕಂಡದ ನಾರುಗಳು ಜೋಡಿಸಲ್ಪತ್ತಿರುತ್ತವೆ. ಎತ್ತುಗೆಗೆ: ಮೂರು ಕಂಡದ ಕಂತೆಗಳನ್ನು (ಮುಂದಿನ, ಹಿಂದಿನ ಮತ್ತು ನಡುವಿನ ಕಂತೆ) ಹೊಂದಿರುವ ಡೆಳ್ಟಾ ಕಂಡ (delta) (ಈ ಕಂಡವು ಗ್ರೀಕ್ ಲಿಪಿಯ “ಡೆಳ್ಟಾ” ಬರಿಗೆಯನ್ನು ಹೋಲುವುದರಿಂದ, ಈ ಹೆಸರು ಬಂದಿದೆ).

ನಮ್ಮ ಮಯ್ಯಲ್ಲಿರುವ ಹತ್ತು ಹಲವು ಬಗೆಯ ಕಟ್ಟಿನ ಕಂಡಗಳು, ಅವುಗಳ ಹುಟ್ಟು (origin) & ಸೇರುವಿಕೆ (insertion) ಮತ್ತು ಅವುಗಳು ಮಾಡುವ ಗೊತ್ತಾದ (specific) ಕೆಲಸಗಳು ಹೀಗೆ ಕಂಡಗಳ ಬಗ್ಗೆನೇ ತಿಳಿದುಕೊಳ್ಳಬೇಕಾದ ವಿಶಯಗಳು ಹಲವಾರಿವೆ. ಕಂಡಗಳ ಬಗ್ಗೆ ಇನ್ನಶ್ಟು ಆಳವಾಗಿ ಮುಂದೊಮ್ಮೆ ಬರೆಯುವೆ. ಮಯ್ಯಿಯ ಒಳನೋಟದ ಈ ಸರಣಿಯನ್ನು ಹುರಿಕಟ್ಟಿನ ಮತ್ತೊಂದು ಅರಿದಾದ ಬಾಗವಾದ ಎಲುಬಿನ ಕೀಲುಗಳ ಕುರಿತು ತಿಳಿಸುವತ್ತ ಮುಂದುವರೆಯುವೆ.

ಸರಿ, ಹಾಗಾದರೆ ‘ನಮ್ಮ‘ ಮಯ್ಯಿಯ ಒಳಹೊಕ್ಕುವ ಮುಂದಿನ ಬರಹದಲ್ಲಿ ಮತ್ತೇ ಸಿಗೋಣ.

(ತಿಟ್ಟ ಸೆಲೆಗಳು: 1. intranet.tdmu.edu, 2. myrevolution)Categories: ಅರಿಮೆ

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , , , , , , , , , , , , , , , , ,

1 reply

Trackbacks

  1. ಕೀಲು ಸವೆತದ ಬೇನೆ | ಹೊನಲು

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s