ಹೂವಿನ ಸಿಹಿ ಜೇನಾಗುವುದು ಹೇಗೆ?

– ರತೀಶ ರತ್ನಾಕರ.
Jenu

ಹೂವಿನಿಂದ ಸಿಹಿಯನ್ನು ಕದಿಯುವ ಜೇನುಹುಳವು ತನ್ನ ಗೂಡಿಗೆ ಹಿಂದಿರುಗಿ, ಆ ಸಿಹಿಯನ್ನು ಕೂಡಿಟ್ಟು ಜೇನನ್ನಾಗಿ ಮಾರ‍್ಪಾಡುಗೊಳಿಸುತ್ತದೆ. ಹಾಗಾದರೆ, ಜೇನುಹುಳವು ತರುವ ಹೂವಿನ ಸಿಹಿ(nectar) ಮತ್ತು ಜೇನುಗೂಡಿನಲ್ಲಿ ಸಿಗುವ ಜೇನುತುಪ್ಪ ಬೇರೆ ಬೇರೆಯೇ? ಹೂವಿನ ಸಿಹಿ ಜೇನುತುಪ್ಪವಾಗಿ ಮಾರ‍್ಪಾಡಾಗುವ ಬಗೆ ಹೇಗೆ? ಈ ವಿಶಯಗಳ ಸುತ್ತ ಬೆಳಕು ಚೆಲ್ಲುವ ಪ್ರಯತ್ನವೇ ಈ ಬರಹ.

ಜೇನುಹುಳಗಳಿಗೆ ಎರಡು ಹೊಟ್ಟೆಯಿರುತ್ತವೆ. ಒಂದರಲ್ಲಿ ಊಟವನ್ನು ತಿಂದು ಅರಗಿಸಿಕೊಂಡು ಮೈಗೆ ಬೇಕಾದ ಹುರುಪನ್ನು ಪಡೆದರೆ, ಇನ್ನೊಂದು ಹೊಟ್ಟೆಯಲ್ಲಿ ಹೂವಿನಿಂದ ಹೀರಿದ ಸಿಹಿಯನ್ನು ತುಂಬಿಕೊಳ್ಳುತ್ತವೆ. ಸಿಹಿ ತುಂಬಿಕೊಂಡಿರುವ ಹೊಟ್ಟೆಯನ್ನು ಸಿಹಿಚೀಲ (nectar sac) ಎಂದು ಕರೆಯುತ್ತಾರೆ. ಸಿಹಿಚೀಲದಲ್ಲಿ ಒಮ್ಮೆಗೆ ಸುಮಾರು 70 ಮಿ.ಗ್ರಾಂ ನಶ್ಟು ಸಿಹಿಯನ್ನು ಹುಳಗಳು ತುಂಬಿಕೊಳ್ಳಬಲ್ಲವು. ಇದನ್ನು ತುಂಬಿಸಿಕೊಳ್ಳಲು ಜೇನುಹುಳಗಳು ಸುಮಾರು 100 ರಿಂದ 1500 ಹೂವುಗಳನ್ನು ಬೇಟಿ ಮಾಡಬೇಕು! ತುಂಬಿದ ಸಿಹಿಚೀಲ ಮತ್ತು ಜೇನುಹುಳ ಹೆಚ್ಚುಕಡಿಮೆ ಒಂದೇ ತೂಕವಿರುತ್ತವೆ.anatomy

ಹೂವಿನಿಂದ ಸಿಹಿಯನ್ನು ಗೂಡಿಗೆ ತರುವ ಜೇನುಹುಳವು ತಿರುಗಿ ಅದೇ ಜಾಗಕ್ಕೆ ಸಿಹಿಯನ್ನು ತರಲು ಹೋಗುತ್ತದೆ. ಮೊದಲ ಬಾರಿ ಹೂವಿನ ಜಾಗವನ್ನು ತಿಳಿಯಲು ಅದು ಬೇಹುಗಾರ ಹುಳದ ‘ಕುಣಿತ’ದ ಮೂಲಕ ಮೇವಿನ ಜಾಗವನ್ನು ಅರಿಯುತ್ತದೆ. ಬಳಿಕ ಹೂವಿನ ಜಾಗದಿಂದ ಜೇನುಗೂಡಿಗೆ ಹುಳವು ಹಲವಾರು ಬಾರಿ ತಿರುಗುತ್ತದೆ. ಹಾಗಾದರೆ ಹುಳವು ಈ ಹೂವಿನ ಜಾಗವನ್ನು ಹೇಗೆ ನೆನಪಿಟ್ಟುಕೊಳ್ಳುತ್ತದೆ ಎಂಬುದರ ಮೇಲೆ ಸಾಕಶ್ಟು ಅರಕೆಗಳು ನಡೆದಿವೆ, ನಡೆಯುತ್ತಿವೆ. ಹೂವಿರುವ ಜಾಗದಲ್ಲಿ ಸಿಹಿಚೀಲವನ್ನು ತುಂಬಿಸಿಕೊಳ್ಳುವ ಹುಳವು, ಆ ಜಾಗದ ಎದುರು ಇಲ್ಲವೇ ಹತ್ತಿರದಲ್ಲಿ ಎಲ್ಲಾದರು ಗುರುತಿಟ್ಟುಕೊಳ್ಳಬಹುದಾದ ಒಂದು ನೆಲಗುರುತನ್ನು (landmark), ತನ್ನ ಕೂಡುಗಣ್ಣಿನ (compound eyes) ಮೂಲಕ ಚಿತ್ರ ತೆಗೆದುಕೊಂಡು ನೆನಪಿಟ್ಟುಕೊಳ್ಳುತ್ತದೆ. ಸಿಹಿಯನ್ನು ಗೂಡಿಗೆ ಸಾಗಿಸಿ ಹೂವಿನ ಜಾಗಕ್ಕೆ ಹಿಂದಿರುಗುವಾಗ ಮೊದಲು ತೆಗೆದುಕೊಂಡ ನೆಲಗುರುತಿನ ಚಿತ್ರವನ್ನು ದಾರಿದೀಪವಾಗಿ ಬಳಸುತ್ತದೆ ಎಂದು ಹಲವು ಅರಿಗರು ಅಬಿಪ್ರಾಯಪಟ್ಟಿದ್ದಾರೆ.

ಹೂವಿನ ಸಿಹಿಯು ಸುಮಾರು 80% ನಶ್ಟು ನೀರು ಮತ್ತು ಸಿಕ್ಕಲು ಸಕ್ಕರೆ(Complex Sugars)ಯಾದ ‘ಸುಕ್ರೋಸ್’ ಅನ್ನು ಹೊಂದಿರುತ್ತದೆ ಅಲ್ಲದೇ ರುಚಿಯಲ್ಲಿ ಸಿಹಿಯಾಗಿದ್ದು, ಮಂದ(viscous)ವಾಗಿರುತ್ತದೆ. ಹೂವಿನ ಸಿಹಿಯು ಹುಳದ ಸಿಹಿಚೀಲವನ್ನು ತಲುಪುವಾಗ ಹುಳದ ಜೊಲ್ಲುಸುರಿಗೆಯಿಂದ (salaivary gland) ಹೊರಬರುವ ‘ಇನ್ವರ‍್ಟೇಸ್ ದೊಳೆ‘(invertase enzyme) ಮತ್ತು ಅರಗಿಸುವ ಹುಳಿ(Digestive acid)ಯೊಡೆನೆ ಬೆರೆಯುತ್ತದೆ. ಈ ದೊಳೆ ಮತ್ತು ಹುಳಿಯು ಸಿಹಿಯಲ್ಲಿರುವ ಸುಕ್ರೋಸ್ ಅನ್ನು ಒಡೆದು ಸಡಿಲ ಸಕ್ಕರೆ(Simple Sugars)ಗಳಾದ ಪ್ರುಕ್ಟೋಸ್ (fructose) ಮತ್ತು ಗ್ಲೂಕೋಸ್(glucose)ಗಳಾಗಿ ಮಾರ‍್ಪಾಡುಗೊಳ್ಳಲು ನೆರವು ನೀಡುತ್ತವೆ. ಇದಲ್ಲದೇ, ಹುಳದ ಜೊಲ್ಲಿನಲ್ಲಿರುವ ಪಾರ‍್ಮಿಕ್ ಆಸಿಡ್ (formic acid) ಸಿಹಿಯ ಜೊತೆ ಬೆರೆಯುತ್ತದೆ, ಇದರಿಂದ ಜೇನುತುಪ್ಪವು ಕೊಳೆಯುವುದಿಲ್ಲ ಮತ್ತು ಜೇನು ಕೊಳೆಯಳಿಕ (antiseptic) ಗುಣವನ್ನು ಪಡೆದುಕೊಳ್ಳುತ್ತದೆ.

Honey

ಸಿಹಿಯನ್ನು ತುಂಬಿಕೊಂಡು ಗೂಡಿನತ್ತ ಬರುವ ಹುಳವು ಗೂಡಿಗೆ ಬಂದೊಡನೆ ಸಿಹಿಯನ್ನು ಗೂಡಿನ ಕೋಣೆಗಳಲ್ಲಿ ನೇರವಾಗಿ ಇರಿಸುವುದಿಲ್ಲ. ತಾನು ಹೊತ್ತು ತಂದ ಸಿಹಿಯನ್ನು ಗೂಡಿನಲ್ಲಿರುವ ಇನ್ನೊಂದು ದುಡಿಮೆಗಾರ ಹುಳಕ್ಕೆ ಸಾಗಿಸುತ್ತದೆ. ಸಿಹಿಯನ್ನು ಹೊತ್ತುತಂದ ಹುಳವು ತನ್ನ ಸಿಹಿಚೀಲದಲ್ಲಿರುವ ಸಿಹಿಯನ್ನು ಎಳೆದು, ತನ್ನ ನಾಲಗೆಯ ಬುಡದಲ್ಲಿ ಹನಿಯ ರೂಪದಲ್ಲಿ ಹೊರತರುತ್ತದೆ. ಮತ್ತೊಂದು ದುಡಿಮೆಗಾರ ಹುಳವು ತನ್ನ ಉದ್ದ ನಾಲಗೆಯನ್ನು ಬಳಸಿ ಸಿಹಿಯ ಹನಿಯನ್ನು ಹೀರಿ, ಕೆಲವು ಹೊತ್ತು ಅದನ್ನು ಬಾಯಿಯಲ್ಲಿಯೇ ಅಗಿಯುತ್ತದೆ. ಇದರಿಂದ ಸಿಹಿಯಲ್ಲಿರುವ ಸುಕ್ರೋಸ್ ಮತ್ತಶ್ಟು ಒಡೆದು ಪ್ರುಕ್ಟೋಸ್ ಮತ್ತು ಗ್ಲೂಕೋಸ್ ಗಳಾಗುತ್ತಾ ಹೋಗುತ್ತದೆ. ಹೀಗೆ ಸಿಹಿಯನ್ನು ಸಾಗಿಸುವಾಗ ಗೂಡಿನ ಬಿಸುಪಿಗೆ ಸಿಹಿಯಲ್ಲಿನ ನೀರಿನ ಅಂಶವು ಕಡಿಮೆಯಾಗುತ್ತಾ ಹೋಗುತ್ತದೆ. ಒಟ್ಟಿನಲ್ಲಿ, ಸಿಹಿಯಲ್ಲಿರುವ ಸಿಕ್ಕಲು ಸಕ್ಕರೆಗಳು ಒಡೆದು ಸಡಿಲ ಸಕ್ಕರೆಗಳಾಗುವುದು ಮತ್ತು ಅದರಲ್ಲಿರುವ ನೀರು ಆರಿದರೆ ಅದು ಜೇನಾದಂತೆ.

ಸಿಹಿಯಲ್ಲಿರುವ ಹೆಚ್ಚಿನ ಸುಕ್ರೋಸ್ ಒಡೆದು ಗ್ಲುಕೋಸ್ ಮತ್ತು ಪ್ರುಕ್ಟೋಸ್‍ಗಳಾಗಿ, ಅದು ಜೇನಾಗಿದೆ ಎಂದು ಹುಳಗಳಿಗೆ ಅನಿಸಿದ ಮೇಲೆ ಸಿಹಿಯನ್ನು ಗೂಡಿನ ಕೋಣೆಯಲ್ಲಿರಿಸುತ್ತವೆ. ಆದರೆ ಇದೇ ಪೂರ‍್ತಿಯಾದ ಜೇನಲ್ಲ! ಗೂಡಿನಲ್ಲಿರುವ ಜೇನಿನಲ್ಲಿ ಇನ್ನೂ 40-50% ನೀರಿನ ಅಂಶ ಇರುತ್ತದೆ. ಆಗ ಗೂಡಿನ ಹುಳಗಳು ತನ್ನ ರೆಕ್ಕೆಯನ್ನು ಬಡಿದು, ಗಾಳಿಯನ್ನು ಬೀಸಿ ನೀರು ಆರುವಂತೆ ಮಾಡುತ್ತವೆ. ರೆಕ್ಕೆ ಬಡಿತದ ಗಾಳಿ ಮತ್ತು ಗೂಡಿನ ಬಿಸುಪಿಗೆ ಜೇನಿನಲ್ಲಿರುವ ನೀರು ಆರಿಹೋಗಿ ನೀರಿನಂಶವು 20% ಗಿಂತ ಕಡಿಮೆಯಾಗುತ್ತದೆ. ಆಗ ಇದು ಹುಳಗಳ ಊಟಕ್ಕೆ ತಕ್ಕುದಾದ ಜೇನಾದಂತೆ. ಹೂವಿನಿಂದ ಹೊತ್ತು ತರುವ ಸಿಹಿಯನ್ನು ಅಗಿದು, ಹುಳದಿಂದ ಹುಳಕ್ಕೆ ಸಾಗಿಸಿ, ಬಳಿಕ ಕೋಣೆಯಲ್ಲಿರಿಸಿ, ಗಾಳಿ ಬೀಸಿ ಗುಣಮಟ್ಟದ ಜೇನಾಗಿಸಲು ಸುಮಾರು 4 ದಿನಗಳು ಬೇಕಾಗುತ್ತವೆ.

ಸ್ಪೇನಿನಲ್ಲಿರುವ 8000 ವರುಶಗಳಶ್ಟು ಹಳೆಯದಾದ, ಅರನ್ಯ ಹೆಸರಿನ ಕಲ್ಲುಗುಹೆಗಳಲ್ಲಿ ಕಂಡುಬಂದ ಜೇನುಕೀಳುವ ಕೆತ್ತನೆ. (ಅದರ ಚಿತ್ರರೂಪವಿದು)
ಸ್ಪೇನಿನಲ್ಲಿರುವ 8000 ವರುಶಗಳಶ್ಟು ಹಳೆಯದಾದ, ಅರನ್ಯ ಹೆಸರಿನ ಕಲ್ಲುಗುಹೆಗಳಲ್ಲಿ ಕಂಡುಬಂದ ಜೇನುಕೀಳುವ ಕೆತ್ತನೆ. (ಅದರ ಚಿತ್ರರೂಪವಿದು)

ಸಿಹಿಯಲ್ಲಿರುವ ನೀರನ್ನು ಗೂಡಿನ ಕೋಣೆಯಲ್ಲಿಟ್ಟು ಆರಿಸುವಾಗ ಹುಳಗಳು ತಮ್ಮ ಜಾಣತನವನ್ನು ತೋರುತ್ತವೆ. ಮೊದಲು ಬರಿದಾಗಿರುವ ಕೋಣೆಯ ಕಾಲುಬಾಗದಶ್ಟು ಮಾತ್ರ ಸಿಹಿಯನ್ನು ತುಂಬಿಸುತ್ತವೆ. ಆಗ ಆ ಸಿಹಿಯು ಗಾಳಿ ಮತ್ತು ಬಿಸುಪಿಗೆ ಬೇಗ ಆರುತ್ತದೆ. ಸಿಹಿಯಲ್ಲಿರುವ ನೀರು ಆರಿದ ಮೇಲೆ ಆ ಕೋಣೆಯಲ್ಲಿ ಅರ‍್ದ ಬಾಗದಶ್ಟು ಸಿಹಿಯನ್ನು ತುಂಬಿಸುತ್ತವೆ. ಅದೂ ಆರಿದ ಮೇಲೆ ಮತ್ತಶ್ಟು ಸಿಹಿಯನ್ನು ತುಂಬಿಸುತ್ತವೆ. ಹೀಗೆ ಹಂತ ಹಂತವಾಗಿ ಕೋಣೆಯಲ್ಲಿ ಸಿಹಿಯನ್ನಿರಿಸಿ ಅದರ ನೀರನ್ನು ಆರಿಸಿ ಜೇನಾಗಿಸುತ್ತದೆ. ಒಂದು ಕೋಣೆಯಲ್ಲಿರುವ ಸಿಹಿಯು ಪೂರ‍್ತಿಯಾಗಿ ಜೇನಾದ ಮೇಲೆ ಹುಳವು ಕೊಣೆಯ ಬಾಯನ್ನು ತೆಳುವಾದ ಮೇಣದ ಪದರವನ್ನು ಬಳಸಿ ಮುಚ್ಚುತ್ತವೆ. ಇದು ಜೇನು ಹಾಳಾಗದಂತೆ ಕಾಪಾಡುತ್ತದೆ.

ಜೇನಿನಲ್ಲಿ ನೀರಿನಂಶವಿದ್ದರೆ ಏನಾಗುತ್ತೆ?
ಹೂವಿನ ಸಿಹಿಯಲ್ಲಿ ಸುಮಾರು 80% ನೀರಿನಂಶ ಇರುತ್ತದೆ. ಸಿಹಿಯು ಒಡೆದು ಜೇನಾದ ಮೇಲೆ ಹುಳವು ಅದರಲ್ಲಿರುವ ನೀರನ್ನು ಆರಿಸಲು ದುಡಿಯುತ್ತದೆ. ಒಂದು ವೇಳೆ ಆ ಜೇನಿನಲ್ಲಿ ನೀರಿನಂಶ 20% ಗಿಂತ ಹೆಚ್ಚಿದ್ದರೆ ಮತ್ತು ಸುತ್ತಲಿನ ಬಿಸುಪು 25 ಡಿಗ್ರಿ ಸೆಲ್ಶಿಯಸ್ ಗಿಂತ ಹೆಚ್ಚಿದ್ದರೆ, ಜೇನಿನಲ್ಲಿರುವ ಹುದುಗೆಬ್ಬಿಸುವ ಅಣಬೆ(Yeast)ಗಳು ತಮ್ಮ ಕೆಲಸ ಮಾಡಲು ಹುರುಪನ್ನು ಪಡೆಯುತ್ತವೆ. ಇವು ಜೇನಿನ ಸಕ್ಕರೆಯನ್ನು ಹುದುಗೆಬ್ಬಿಸಿ ಹೆಂಡವಾಗಿ (alcohol) ಮಾರ‍್ಪಾಟುಗೊಳಿಸುತ್ತವೆ. ಜೇನನ್ನು ಹೆಚ್ಚು ದಿನಗಳ ಕಾಲ ಕಾಪಿಡಬೇಕಾದರೆ ಅದರ ನೀರಿನಂಶವು 20% ಗಿಂತ ಮೇಲಿರಬಾರದು ಮತ್ತು ಬಿಸುಪು 25 ಡಿಗ್ರಿಗಿಂತ ಹೆಚ್ಚಿರಬಾರದು, ಇವೆರಡೂ ಅಂಶಗಳನ್ನು ಜೇನುಹುಳಗಳು ಗೂಡಿನಲ್ಲಿ ಕಾದುಕೊಳ್ಳುತ್ತವೆ.

ಜೇನಿನಲ್ಲಿ ಏನಿದೆ?
ಜೇನು ನೀರಿನಲ್ಲಿ ಕರಗುವಂತಹ ಮಂದವಾದ ರಸ. 10 ರಿಂದ 18 ಡಿಗ್ರಿ ಸೆಲ್ಸಿಯಸ್ ಬಿಸುಪಿನಲ್ಲಿ ಕಾಳು-ಕಾಳಾಗುವ ಗುಣವನ್ನು ಹೊಂದಿದೆ. ಜೇನುತುಪ್ಪವು ಕೊಂಚ ಹುಳಿಯ ಅಂಶವನ್ನು ಹೊಂದಿದ್ದು ಇದರ ಹುಳಿಯಳತೆ (pH) 3.4-6.1 ಇರುತ್ತದೆ. ಜೇನಿನಲ್ಲಿ ಹೆಚ್ಚಿರುವ ಸಕ್ಕರೆ, ಹುಳಿ, ಹೈಡ್ರೋಜನ್ ಪೆರಾಕ್ಸೈಡ್, ಪ್ಲೆವೊನಾಯ್ಡ್ಸ್(flavonoids), ಪಿನಾಲಿಕ್ಸ್ (phenolics) ಮತ್ತು ಟರ‍್ಪೆನೆಸ್ (terpenes)ಗಳಿರುವುದರಿಂದ ಜೇನು ಒಳ್ಳೆಯ ಕೊಳೆಯಳಿಕ (antiseptic) ಹಾಗು ಸೀರುಸಿರಿಗಳ (micro-organisms) ಬೆಳವಣಿಗೆ ತಡೆಯುವ ಗುಣವನ್ನು ಪಡೆದುಕೊಂಡಿದೆ.

ಜೇನಿನಲ್ಲಿರುವ ಮತ್ತಶ್ಟು ಅಡಕಗಳು:Jenu_aDaka

ಬಾಳುಳುಪು (Vitamins): ಎ, ಬೀಟಾ ಕೆರೋಟೀನ್ (Beta carotene), ಬಿ1 ತಯಾಮೀನ್(B1 Thiamin), ಬಿ2 ರೈಬೋಪ್ಲವಿನ್ (B2 Riboflavin), ಬಿ3 ನಯಾಸಿನ್ (B3 Niacin), ಬಿ5 ಪೆಂಟಾತನಿಕ್ ಹುಳಿ (B5 Pantothenic acid), ಬಿ6 ಪೈರಿಡೊಕ್ಸಿನ್ (B6 Pyridoxine), ಬಿ8 ಬಯೋಟಿನ್ (B8 Biotin), ಬಿ9 ಪೊಲೇಟ್ (B9 Folate), ಸಿ, ಡಿ, ಇ ಮತ್ತು ಕೆ.

ಮಿನರಲ್ಸ್: ಕ್ಯಾಲ್ಸಿಯಂ, ತಾಮ್ರ, ಅಯೋಡಿನ್, ಕಬ್ಬಿಣ, ಮೆಗ್ನೇಶಿಯಂ, ಮ್ಯಾಂಗನೀಸ್, ಪೊಟಾಸಿಯಂ, ಸೋಡಿಯಂ, ಸಲ್ಪರ್, ಪಾಸ್ಪರಸ್ ಮತ್ತು ಜಿಂಕ್.

ಅಮೈನೊ ಹುಳಿಗಳು ಮತ್ತು ಕಳೆವಣಿಕಾಪು (Anti-oxidants) ಗಳು ಜೇನಿನಲ್ಲಿರುವ ಇತರ ಕೆಲವು ಮುಕ್ಯವಾದ ಅಡಕಗಳು. ಜೇನುತುಪ್ಪದ ತಿಣ್ಮೆ(Density) 1.36 ಕಿ.ಗ್ರಾಂ/ಲೀಟರ್ (ನೀರಿಗಿಂತ 36% ಹೆಚ್ಚಿನ ತಿಣ್ಮೆಯನ್ನು ಇದು ಹೊಂದಿದೆ.)

ಜೇನು ಕೆಡದಿರಲು ಕಾರಣವೇನು?
ಜೇನಿನಲ್ಲಿರುವ ನೀರಿನ ಅಂಶವು 20% ಕಡಿಮೆ ಇರುವುದರಿಂದ ಇದರ ನೀರಿನ ಚಟುವಟಿಕೆ (water activity) 0.6 (0 ಯಿಂದ 1 ರ ಅಳತೆಯಲ್ಲಿ) ಇರುತ್ತದೆ. ಬ್ಯಾಕ್ಟೀರಿಯಾ ಹಾಗು ಪಂಗಸ್ ನಂತಹ ಸೀರುಸಿರುಗಳು ತಮ್ಮ ಕೆಲಸವನ್ನು ನಡೆಸಲು ನೀರಿನ ಚಟುವಟಿಕೆಯು 0.75 ಗಿಂತ ಹೆಚ್ಚಿರಬೇಕು. ಹಾಗಾಗಿ ಜೇನಿನಲ್ಲಿ ಯಾವುದೇ ಸೀರಿಸುರಿಗಳು ತಮ್ಮ ಕೆಲಸ ಮಾಡಲಾಗದೇ ಜೇನು ಹಲವು ಕಾಲ ಕೆಡದಂತೆ ಇರುತ್ತದೆ. ಇದಲ್ಲದೇ ಜೇನಿನ ಹುಳಿಯಳತೆ (pH), ಜೇನಿನಲ್ಲಿರುವ ಗ್ಲೂಕೊನಿಕ್ ಆಸಿಡ್ ಹಾಗು ಇತರೆ ಅಡಕಗಳು ಇದನ್ನು ಕೆಡದಂತೆ ಇರಲು ನೆರವಾಗುತ್ತವೆ. ಹೀಗೆ ಹಲವು ಹಂತಗಳ ಮೂಲಕ ಹೂವಿನ ಸಿಹಿಯು ಜೇನಾಗಿ ಹಲವು ವರುಶಗಳ ಕಾಲ ಕೆಡದಂತೆ ಉಳಿಯುವ ತಿನಿಸಾಗಿ ಮಾರ‍್ಪಾಡಾಗುತ್ತದೆ.

(ಮಾಹಿತಿ ಸೆಲೆ: westmtnapiary.com)
(ಚಿತ್ರ ಸೆಲೆ: ಅಬಿಲಾಶ್ ಬಾಲಚಂದ್ರ, ವಿಕಿಪೀಡಿಯಾ)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.