ಕರ‍್ಮ
– ಬಸವರಾಜ್ ಕಂಟಿ.
(ಬರಹಗಾರರ ಮಾತು : ಎಲ್ಲೋ ಓದಿದ ಇಂಗ್ಲಿಶ್ ಕತೆಯನ್ನು ಕನ್ನಡಕ್ಕೆ ಇಳಿಸಿದ್ದೇನೆ.)
ಅಂದು ಸ್ಟೀವ್ ಗೆ ಆಪೀಸಿನಲಿ ತುಂಬಾ ಕೆಲಸವಿತ್ತು. ಕೆಲಸ ಮುಗಿಯುವ ಹೊತ್ತಿಗೆ, ಬಿಟ್ಟೂ ಬಿಡದೆ ಓಡಿಸಿದ ಕಾರಿನ ಬಿಣಿಗೆಯಂತೆ, ಅವನ ತಲೆ ಬಿಸಿಯಾಗಿತ್ತು. ಕೂದಲು ಸುಡುವುದೊಂದೇ ಬಾಕಿ ಎಂದು ಅನಿಸಿತು ಅವನಿಗೆ. ಹೇಗೂ ಕೆಲಸ ಮುಗಿದಿತ್ತು, ನೇರ ಮನೆಗೆ ಹೋಗಿ ಮಾಡುವುದಾದರೂ ಏನು? ಅದೇ ಜೋಲು ಮುಕದ ಹೆಂಡತಿಯನ್ನು ನೋಡಲೆ? ಬೇಡ ಎನಿಸಿತು ಮನಸ್ಸಿಗೆ. ತಟ್ಟನೆ ತನಗೆ ಇಶ್ಟವಾದ ಬಾರಿನ ನೆನಪಾಯಿತು. ಅಲ್ಲಿಗೆ ಹೋಗಿ, ಒಂದೆರಡು ಪೆಗ್ಗು ಹಾಕಿ, ಸ್ವಲ್ಪ ಸಮಯ ಕಳೆದು ಮನೆಗೆ ಹೋದರಾಯಿತು ಎಂದುಕೊಂಡು ಅತ್ತ ಕಾರನ್ನು ನಡೆಸಿದ. ಅವನಿಗೆ ಆ ಬಾರು ಇಶ್ಟವಾಗಲು ಬೇರೊಂದು ಕಾರಣವೂ ಇತ್ತು. ಆರು ತಿಂಗಳ ಹಿಂದೆ ಜೆಸಿಕಾ ಅವನಿಗೆ ಪರಿಚಯವಾದದ್ದೇ ಆ ಬಾರಿನಲ್ಲಿ. ಎರಡೇ ವಾರದಲ್ಲಿ ಇಬ್ಬರೂ ಸ್ನೇಹಿತರಾಗಿ, ಸ್ನೇಹ ಒಲವಿಗೆ ತಿರುಗಿ, ಜೆಸಿಕಾಳ ಗಂಡ ಮನೆಯಲ್ಲಿ ಇರದಾಗ, ಅವಳ ಮನೆಗೆ ಹೋಗಿ ಬರುವಶ್ಟು ಇಬ್ಬರು ಹತ್ತಿರವಾಗಿ, ತಮ್ಮ ತಮ್ಮ ಸಂಸಾರದ ಮಿತಿಗಳನ್ನು ಮೀರಿದ್ದರು. ಇಬ್ಬರೂ ಬೆರೆಯುತ್ತಿದ್ದದ್ದು ಜೆಸಿಕಾಳ ಮನೆಯಲ್ಲಿಯೇ. ಅವಳ ಗಂಡ ಆಗಾಗ ಕೆಲಸದ ದೆಸೆಯಂದ ಊರೂರು ಅಲೆಯುತ್ತಿದ್ದ. ಅವನು ಊರಿಗೆ ಹೋದಾಗಲೆಲ್ಲ, ತಾನೂ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಬೇಕಾಗಿ ಬಂದಿದೆ ಎಂದು ಸ್ಟೀವ್ ತನ್ನ ಹೆಂಡತಿಗೆ ಸುಳ್ಳು ಹೇಳಿ ಜೆಸಿಕಾಳ ಮನೆಯಲ್ಲಿ ಇದ್ದು ಬರುತ್ತಿದ್ದ.
ಬಾರಿಗೆ ಬಂದು ತನಗೆ ಇಶ್ಟವಾದ ವಿಸ್ಕಿ ತರಿಸಿ ಒಂದು ಪೆಗ್ ಗಟಗಟನೇ ಇಳಿಸಿ, ಇನ್ನೊಂದನ್ನು ತುಸು ತುಸುವೇ ಹೀರಲು ಮೊದಲುಮಾಡಿದ. ಆಗ ಅವನಿಗೆ, ತನ್ನ ಜೊತೆ ಜೆಸಿಕಾ ಇದ್ದಿದ್ದರೆ ಎಶ್ಟು ಚೆನ್ನಾಗಿರುತ್ತಿತ್ತು ಎನಿಸಿತು. ಆ ದಿನ ಜೆಸಿಕಾಳ ಗಂಡ ಊರಲ್ಲೇ ಇದ್ದಿದ್ದುದರಿಂದ ಅವಳನ್ನು ನೋಡಲು ಆಗಿರಲಿಲ್ಲ. ಕಯ್ಯಲ್ಲಿದ್ದ ವಿಸ್ಕಿಯನ್ನು ಗುಟುಕಿಸುತ್ತಿರುವಾಗ, ಅವನ ಟೇಬಲ್ಲಿನ ಬಲಬದಿಯ ಸಾಲಿನಲ್ಲಿ, ತುಸು ದೂರದಲ್ಲಿ ಕುಳಿತಿದ್ದ ಒಬ್ಬನ ಮೇಲೆ ಅವನ ಕಣ್ಣು ಹಾಯಿತು. ಅವನನ್ನು ಮತ್ತೆ ಮತ್ತೆ ನೋಡಿದ, ಆತನಿಗೆ ಗೊತ್ತಾಗದ ಹಾಗೆ. ಎಲ್ಲೋ ನೋಡಿದ ನೆನಪು. ಇವನಾರಿರಬಹುದು? ಪರಿಚಯದ ಮುಕ ಎನಿಸುತ್ತಿದೆಯಲ್ಲಾ. ಅವನನ್ನು ಇನ್ನಶ್ಟು ನೋಡಿ, ತನ್ನ ನೆನಪುಗಳ ಚೀಲವನ್ನು ತಡಕಾಡಿದ. ಅವನೆಡೆಗೆ ನೆಟ್ಟ ನೋಟವನ್ನು ಬದಲಿಸಿದೇ ಇದ್ದಾಗ, ಅದು ಅವನಿಗೆ ಗೊತ್ತಾಗಿ ಅವನೂ ಸ್ಟೀವ್ ಕಡೆಗೆ ನೋಡಿದ. ಸ್ಟೀವ್ ತಕ್ಶಣ ನೋಟ ಸರಿಸಿದ. ಬೇರೆಡೆ ನೋಡುತ್ತ ಇನ್ನೊಂದು ಗುಟುಕಿಳಿಸಿದ. ಕಣ್ಣ ಮುಂದೆ ಅವನ ಮುಕವೇ ನಿಂತು ಕಾಡುತ್ತಿತ್ತು. ಆ ಕ್ಶಣದಲ್ಲೇ ಹೊಳೆಯಿತು. ಅವನ ತಿಟ್ಟವನ್ನು ಜೆಸಿಕಾಳ ಮನೆಯ ಮಲಗುವ ಕೋಣೆಯಲ್ಲಿ ನೋಡಿದ್ದ. ಮಂಚದ ಪಕ್ಕದಲ್ಲಿದ್ದ ಮೇಜಿನ ಮೇಲೆ. ಅವನು ಮತ್ತು ಜೆಸಿಕಾ ಒಟ್ಟಿಗೆ ನಿಂತು ತೆಗೆಸಿಕೊಂಡ ತಿಟ್ಟ.
“ಅಂದರೆ! ಇವನೇ ಜೆಸಿಕಾಳ ಗಂಡ!” ಎಂದು ಅವನ ಮನಸ್ಸಿಗೆ ನಿಕ್ಕಿಯಾಯಿತು. ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡ ಕಳ್ಳನಂತೆ ಅವನ ಮನಸ್ಸು ಡವ ಡವ ಹೊಡೆದುಕೊಳ್ಳಲು ಮೊದಲುಮಾಡಿತು. ಮೆಲ್ಲನೆ ಕಣ್ಣೆತ್ತಿ ಮತ್ತೆ ಅವನೆಡೆಗೆ ನೋಡಿದ. ಅವನಿನ್ನೂ ತನ್ನನ್ನೇ ನೋಡುವುದನ್ನು ಕಂಡು ಕಣ್ಣಿಳಿಸಿದ. ತನ್ನ ಮತ್ತು ಜೆಸಿಕಾಳ ಒಡನಾಟ ಇವನಿಗೇನಾದರೂ ಗೊತ್ತಾಯಿತೇ? ಇವನ್ಯಾಕೆ ತನ್ನನ್ನು ದುರುಗುಟ್ಟಿ ನೋಡುತ್ತಿದ್ದಾನೆ? ಜೆಸಿಕಾ ಜೊತೆ ಇದ್ದುದ್ದನ್ನು ಇವನು ಎಲ್ಲಿಯಾದರೂ ನೋಡಿದ್ದಾನೆಯೇ? ಹಾಗಾಗಿರಲಿಕ್ಕೆ ಸಾದ್ಯವೇ ಇರಲಿಲ್ಲ. ಅವರು ಕೂಡುತ್ತಿದ್ದದ್ದು ಯಾರಿಗೂ ಗೊತ್ತಾಗದ ಹಾಗೆ, ಅದೂ ಜೆಸಿಕಾಳ ಗಂಡ ಊರಿನಲ್ಲಿ ಇರದಿದ್ದಾಗ. ಇಲ್ಲವೇ ಬೇರೆ ಯಾರಾದರೂ ನೋಡಿ ಇವನಿಗೆ ಹೇಳಿದ್ದರೆ? ಮತ್ತೊಮ್ಮೆ ಅವನೆಡೆಗೆ ನೋಡಿದ. ಅವನು ಬಿಡದೆ ಇವನನ್ನೇ ನೋಡುತ್ತಿದ್ದ. ಸ್ಟೀವ್ ನ ಎದೆಬಡಿತ ಹೆಚ್ಚಾಯಿತು. ಮಯ್ಕಟ್ಟಿನಲ್ಲಿ ಸ್ಟೀವ್ ಗಿಂತ ಗಟ್ಟಿಯಾಗಿ ಕಾಣುತ್ತಿದ್ದ. ಅವನಿಗೆ ಹೇಗೋ ತಮ್ಮ ಸಂಬಂದ ಗೊತ್ತಾಗಿ ತನ್ನ ಮೇಲೆ ಕಯ್ ಮಾಡಿದರೆ? ಎಂದು ಹೆದರಿದನು. ಅರೆಕುಡಿದ ವಿಸ್ಕಿ ಕಯ್ಯಲ್ಲೇ ಇದ್ದರೂ ಕುಡಿಯುವ ಮನಸ್ಸಾಗಲಿಲ್ಲ. ಇನ್ನು ಅಲ್ಲಿ ಇರುವುದು ಒಳ್ಳೆಯದಲ್ಲ ಎಂದುಕೊಂಡು, ಬಿಲ್ ತರಲು ಹೇಳಿ, ದುಡ್ಡು ಕೊಟ್ಟು ಅಲ್ಲಿಂದ ಎದ್ದು ಹೊರಟ.
ಬಾಗಿಲಿನ ಹತ್ತಿರ ಬರುತ್ತಿದ್ದಂತೆಯೇ, ಹಿಂದಿನಿಂದ ಅವನ ಬೆನ್ನಮೇಲೆ ಯಾರೋ ಕಯ್ಯಿಟ್ಟರು. ಗಾಬರಿಯಲ್ಲಿ ತಿರುಗಿ ನೋಡಿದ. ಜೆಸಿಕಾಳ ಗಂಡ. ಇವನ ಮುಕವೆಲ್ಲಾ ಬೆವರಿತು. ಅವನು ತಾಳ್ಮೆಯಿಂದಲೇ ಮಾತಾಡಿದ,
“ಸರ್ ನಿಮ್ಮನ್ನು ಎಲ್ಲಿಯೋ ನೋಡಿದ ನೆನಪು. ಎಲ್ಲಿ ಅಂತ ನೆನಪಾಗ್ತಾಯಿಲ್ಲ” ಅಂದ. ಸ್ಟೀವ್ ನ ಎದೆಬಡಿತ ಇನ್ನೂ ಹೆಚ್ಚಾಗಿ, ಮಾತು ಹೊರಡದೆ ತಡವರಿಸಿದ. ಅವನೇ ಮುಂದುವರೆಸಿ,
“ನಿಮ್ ಹೆಸರು ಹೇಳ್ತಿರಾ? ನೆನಪಾದ್ರು ಆಗ್ಬಹುದು” ಅಂದ.
ಸ್ಟೀವ್ ನ ಮುಕ ಅವನಿಗೂ ಸಾಕಶ್ಟು ಕಾಡಿದಂತೆ ಕಾಣುತ್ತಿತ್ತು. ತಡವರಿಸುತ್ತಲೇ, “ಬೇಡ, ಬೇಡ” ಎಂದು ಅಲ್ಲಿ ನಿಲ್ಲಲಾಗದೇ ಹೊರಟು ಬಿಟ್ಟ ಸ್ಟೀವ್.
ಕಾರು ಹತ್ತಿ, ಮನೆಕಡೆ ಹೊರಟ. ಕೆಲಸದ ಸುಸ್ತು, ಅಶ್ಟೋ ಇಶ್ಟೋ ಏರಿದ್ದ ಅಮಲು ಎಲ್ಲಾ ಇಳಿದುಹೋಗಿ, ಅವನ ತಲೆಯ ತುಂಬ ಜೆಸಿಕಾಳ ಗಂಡನೇ ತುಂಬಿದ್ದ. ಅವಳ ಮಲಗುವ ಕೋಣೆಯಲ್ಲಿ ನೋಡಿದ ಆ ತಿಟ್ಟ, ಈಗ ನೋಡಿದ ಅವನ ಮುಕ ಎರಡೂ ಅವನ ಕಣ್ಣು ಬಿಟ್ಟು ಸರಿಯಲಿಲ್ಲ. ಅವನಿಗೇನಾದರೂ ತಮ್ಮ ಸಂಬಂದದ ಬಗ್ಗೆ ಗೊತ್ತಾದರೆ ಏನು ಗತಿ ಎಂದು ಹೆದರಿದ. ಎಲ್ಲಿ ಜೆಸಿಕಾ ತನ್ನಿಂದ ದೂರವಾಗಿಬಿಡುತ್ತಾಳೋ ಎಂದು ತಳಮಳಗೊಂಡ. ಎರಡು ವರ‍್ಶಗಳಿಂದ ಅದೇ ಮನೆ, ಅದೇ ಹೆಂಡತಿ, ಅದೇ ಕೆಲಸ, ಅದೇ ಜೀವನ ಅವನಿಗೆ ಬೇಸರ ತರಿಸಿದ್ದ ಹೊತ್ತಿನಲ್ಲಿ ಹೊಸ ಬೆಳಕಾಗಿ ಬಂದಿದ್ದಳು ಜೆಸಿಕಾ. ಅವಳ ಬರುವಿಕೆಯಿಂದ ಅವನ ಜೀವನದಲ್ಲಿ ಹುರುಪು ಮೂಡಿತ್ತು. ಅವಳನ್ನು ಕಳೆದುಕೊಳ್ಳುವ ಯೋಚನೆಯನ್ನೂ ಅವನಿಗೆ ಸಹಿಸಲಾಗಲಿಲ್ಲ. ಅವಳ ಗಂಡನಿಗ ತನ್ನ ಬಗ್ಗೆ ಹೇಗಾದರೂ ಗೊತ್ತಾದರೆ, ಮುಂದೇನಾಗುವುದೋ ಎಂದು ಚಿಂತಿಸುತ್ತ ಮನೆಗೆ ಬಂದ.
ತನ್ನಲ್ಲಿದ್ದ ಬೀಗದ ಕಯ್ಯಿಂದ ಬಾಗಿಲು ತೆಗೆದು ಒಳಬಂದ. ರಾತ್ರಿಯಾಗಿತ್ತು. ನೇರ ಮಲಗುವ ಕೋಣೆಗೆ ಬಂದ. ಅವನ ಹೆಂಡತಿ ಆಗಲೇ ಮಲಗಿದ್ದಳು. ಅವಳನ್ನು ನೋಡಿ ಬೇಸರವಾಯಿತು. ತನ್ನನ್ನು ಪ್ರೀತಿಸದ ಇಂತ ಹೆಂಡತಿ ಇದ್ದರೆಶ್ಟು ಬಿಟ್ಟರೆಶ್ಟು ಅಂದುಕೊಂಡ. ಈ ಕೆಲವು ತಿಂಗಳಿಂದ ತಾನು ಏನೇನೋ ಕಾರಣ ಹೇಳಿ ಪದೇ ಪದೇ ಜೆಸಿಕಾಳ ಮನೆಗೆ ಹೋದಾಗಲೂ, ಯಾಕೆ, ಏನು, ಯಾವಾಗ ಬರುತ್ತೀಯಾ ಅಂತ ಒಂದು ಮಾತೂ ಕೇಳಲಿಲ್ಲ. ಇವಳಿಗೇನು, ನಾನು ಇದ್ದರೂ ಅಶ್ಟೆ ಬಿಟ್ಟರೂ ಅಶ್ಟೇ. ಅವನ ಮನಸ್ಸು ಅವಳನ್ನು ಜೆಸಿಕಾಳಿಗೆ ಹೋಲಿಸಿತು.
ಜೆಸಿಕಾಳ ಸ್ವಬಾವ ಇವಳಿಗೆ ಎದುರಾದದ್ದು ಎನಿಸಿತು. ಇವಳು ಬಾಡಿದ ಹೂವಾದರೆ, ಅವಳು ಸದಾ ಅರಳಿ, ಕಂಪು ಬೀರುವ ಹೂವು. ಹೀಗೆ ಬಗೆ ಬಗೆಯ ಹೋಲಿಕೆ ಮಾಡಿತು ಅವನ ಮನಸ್ಸು. ತಕ್ಶಣ ಜೆಸಿಕಾಳ ಗಂಡನ ನೆನೆಪಾಯಿತು. ಅಶ್ಟೊತ್ತು ಬಾರದ ವಿಚಾರವೊಂದು ಅವನ ತಲೆಗೆ ಬಂತು. ಅವನು ತನ್ನನ್ನು ಎಲ್ಲಿ ನೋಡಿರಬಹುದೆಂದು. ತನ್ನ ಮತ್ತು ಜೆಸಿಕಾಳ ಸಂಬಂದದ ಬಗ್ಗೆ ಅವನಿಗೆ ಗೊತ್ತಿಲ್ಲ. ಹಾಗಾಗಿ ಹೆದರುವ ಮಾತಿಲ್ಲ ಎಂದುಕೊಂಡನು. ಹಾಗಾದರೆ ಇನ್ನೆಲ್ಲಿ ನೋಡಿರಬಹುದು? ಎಶ್ಟೊತ್ತು ಯೋಚನೆ ಮಾಡಿದರೂ ಅವನಿಗೆ ಯಾವ ಸುಳಿವೂ ಸಿಗಲಿಲ್ಲ. ಅದೇ ಬಾರಿನಲ್ಲೇ ಮೊದಲಾವಾಗಾದರೂ ನೋಡಿರಬಹುದು ಎಂದು ಮನಸ್ಸಿಗೆ ಸಮಾದಾನ ತಂದುಕೊಂಡು ನಿಟ್ಟುಸಿರು ಬಿಟ್ಟ. ಅಶ್ಟೋತ್ತೂ ತನ್ನ ಹೆಂಡತಿಯ ಮೇಲೆ ನೆಟ್ಟಿದ್ದ ಅವನ ನೋಟ ಮಂಚದ ಪಕ್ಕದಲ್ಲಿದ್ದ ಮೇಜಿನ ಮೇಲೆ ಹಾಯಿತು. ಅಲ್ಲಿದ್ದ ತನ್ನ ಮತ್ತು ತನ್ನ ಹೆಂಡತಿಯ ತಿಟ್ಟ ನೋಡಿ ಅವನ ಮುಕ ಕಪ್ಪಿಟ್ಟಿತು.
(ಚಿತ್ರಸೆಲೆ: toyarave.deviantart.com )
nudi cennaagide, aadre katana arta aagalilla