ರಶ್ಯಾ ಬಗ್ಗೆ ಕಳವಳಗೊಂಡಿರುವ ಲ್ಯಾಟ್ವಿಯಾ

– ಅನ್ನದಾನೇಶ ಶಿ. ಸಂಕದಾಳ.

Latvia_flag_map

ಲ್ಯಾಟ್ವಿಯಾ ( lativia ) ನಾಡಿನ ಒಂದು ದೊಡ್ದ ಪ್ರದೇಶ – ಲ್ಯಾಟ್ಗೇಲ್ ( latgale ). ಲ್ಯಾಟ್ವಿಯಾ ನಾಡಿನ ಮೂಡಣ ದಿಕ್ಕಿಗೆ ಇರುವ ಲ್ಯಾಟ್ಗೇಲ್, ರಶ್ಯಾ ಮತ್ತು ಬೆಲಾರಸ್ ನಾಡುಗಳ ಗಡಿಗಳನ್ನು ತಾಗುತ್ತದೆ. ಹಿನ್ನಡವಳಿಯ (history) ಮತ್ತು ನಡೆ-ನುಡಿಯ ಆಯಾಮದಿಂದ ಲ್ಯಾಟ್ವಿಯಾ ನಾಡಿಗೆ ಅರಿದಾಗಿರುವ (main) ಈ ಪ್ರದೇಶವನ್ನು, ಲ್ಯಾಟ್ವಿಯಾದಿಂದ ಬೇರೆ ಮಾಡಿ ರಶ್ಯಾಗೆ ಸೇರಿಸುವಂತ ಕೆಲಸಗಳು ನಡೆಯುತ್ತಿರುವಂತೆ ಕಂಡುಬರುತ್ತಿದೆ. ಕೆಲ ತಿಂಗಳ ಹಿಂದೆ, ಲ್ಯಾಟ್ವಿಯಾದಿಂದ ಬಿಡುಗಡೆ ಹೊಂದಿದ ನಾಡಾಗಿ ಲ್ಯಾಟ್ಗೇಲನ್ನು ಮಿಂದಾಣವೊಂದರಲ್ಲಿ (website) ತೋರಿಸಲಾಗಿತ್ತು. ಹಾಗೆ ಬೇರೆಯಾಗಿ ತೋರಿಸಿರುವ ಲ್ಯಾಟ್ಗೇಲ್ ಗೆ ಬಾವುಟದ ಗುರುತು ನೀಡಿ, ರಶ್ಯನ್ ಲಿಪಿಯಲ್ಲಿ ‘ಪೀಪಲ್ಸ್ ರಿಪಬ್ಲಿಕ್ ಆಪ್ ಲ್ಯಾಟ್ಗೇಲ್’ ಎಂದೂ ಬರೆಯಲಾಗಿತ್ತು ಎಂದು ಹೇಳಲಾಗುತ್ತದೆ. ಈ ಬೆಳವಣಿಗೆ ಹಿಂದೆ ರಶ್ಯಾದ ಕೈವಾಡವಿದೆ ಎಂದು ಕಂಡುಕೊಂಡಿರುವ ಲ್ಯಾಟ್ವಿಯಾ ನಾಡಿನ ಆಳುವವರು, ನಾಡು ಒಡೆಯುವ ಇಂತ ನಡೆಗಳ ಬಗ್ಗೆ ಕಳವಳಕ್ಕೀಡಾಗಿದ್ದಾರೆ.

1921 ಜನವರಿ 26 ರಂದೇ ಬಿಡುಗಡೆಗೊಂಡು ತನ್ನಾಳ್ವಿಕೆಯನ್ನು ಹೊಂದಿದ್ದ ಲ್ಯಾಟ್ವಿಯಾ, ನಂತರ ಜಗತ್ತಿನ ಎರಡನೇ ಮಹಾ ಕಾಳಗದ ಸಮಯದಲ್ಲಿ ರಶ್ಯಾದ ದಬ್ಬಾಳಿಕೆಯಿಂದ ಸೋವಿಯತ್ ಒಕ್ಕೂಟವನ್ನು ಸೇರಬೇಕಾಯಿತು. ಸೋವಿಯತ್ ಒಕ್ಕೂಟ ಕುಸಿತದ ಹಾದಿ ಹಿಡಿಯುತ್ತಿದ್ದಂತೆ, ಅದರ ಆಡಳಿತದಿಂದ ಬಿಡಿಸಿಕೊಂಡು 1991 ಆಗಸ್ಟ್ 21 ರಂದು ಮತ್ತೊಮ್ಮೆ ತನ್ನಾಳ್ವಿಕೆಯನ್ನು ಪಡೆಯಿತು. ನಡೆ-ನುಡಿಯ (culture) ನೆಲೆ ಮೇಲೆ ಲ್ಯಾಟ್ವಿಯಾವನ್ನು ಕೆಲ ಪಾಲುಗಳಾಗಿ ಮಾಡಲಾಗಿದ್ದು, ಅದರಲ್ಲಿ ಲ್ಯಾಟ್ಗೇಲ್ ಒಂದು ಅರಿದಾಗಿರುವ latgale1ಪ್ರದೇಶವಾಗಿದೆ. ನಡೆತನದಲ್ಲಿ (ethnicity) ಹೆಚ್ಚಾಗಿ ರಶ್ಯನ್ನರನ್ನು ಹೊಂದಿರುವ ಈ ಪ್ರದೇಶದಲ್ಲಿ, ಲ್ಯಾಟ್ವಿಯನ್ ನುಡಿಯ ಒಳಬಗೆಯನ್ನು (dialect) ಹೆಚ್ಚಾಗಿ ಬಳಸಲಾಗುತ್ತದೆ. ಆ ಒಳನುಡಿಯನ್ನು ಲ್ಯಾಟ್ಗೇಲಿಯನ್ (latgalian) ಎಂದು ಕರೆಯಲಾಗುತ್ತದೆ. 1921 ರ ಲ್ಯಾಟ್ವಿಯಾ ಆಡಳಿತದಲ್ಲಿ ತನ್ನಾಳ್ವಿಕೆಯನ್ನು ಹೊಂದಿದ್ದ ಲ್ಯಾಟ್ಗೇಲ್, ಸೋವಿಯತ್ ಒಕ್ಕೂಟದವರ ಆಳ್ವಿಕೆಯಲ್ಲಿ ಹೆಚ್ಚು ತೊಂದರೆಗೆ ಒಳಗಾಗಿತ್ತು. ಸೋವಿಯತ್ ಒಕ್ಕೂಟದ ಆಳ್ವಿಕೆಯಲ್ಲಿ ಲ್ಯಾಟ್ಗೇಲಿಯನ್ ನುಡಿಯಲ್ಲಿ ಮಾತಾಡುವುದಕ್ಕೆ ಮತ್ತು ಲ್ಯಾಟ್ಗೇಲಿಯನ್ನರ ನಡೆ-ನುಡಿಗೆ ತಡೆ ಹಾಕಲಾಗಿತ್ತು.

ಸೋವಿಯತ್ ಒಕ್ಕೂಟ ಒಂದು ಕಾಲದಲ್ಲಿ ಹಲವಾರು ನಾಡುಗಳನ್ನು ಒಳಗೊಂಡ ಬಹು ದೊಡ್ಡ ಒಕ್ಕೂಟವಾಗಿತ್ತು. ಸೋವಿಯತ್ ಒಕ್ಕೂಟದ ಆಳ್ವಿಕೆಯಲ್ಲಿ ರಶ್ಯನ್ ನುಡಿಯನ್ನು ಹೆಚ್ಚು ಬಳಸುವಂತ ಮತ್ತು ರಶ್ಯನ್ನರಿಗೆ ಎಲ್ಲಾ ಕಡೆ ಅನುಕೂಲವಾಗುವಂತ ಕಟ್ಟಲೆಗಳನ್ನು ಸೋವಿಯತ್ ಒಕ್ಕೂಟ ಹೊಂದಿತ್ತು. ಈ ಕಾರಣದಿಂದ ಸೋವಿಯತ್ ಒಕ್ಕೂಟ ಕುಸಿತ ಕಂಡರೂ, ಒಕ್ಕೂಟದಿಂದ ಬಿಡುಗಡೆಗೊಂಡು ತನ್ನಾಳ್ವಿಕೆ ಪಡೆದ ನಾಡುಗಳಲ್ಲಿ ರಶ್ಯನ್ ನುಡಿ ಬಲ್ಲವರ ಮತ್ತು ರಶ್ಯನ್ನರ ಎಣಿಕೆ ಹೆಚ್ಚೇ ಇದೆ. ಲ್ಯಾಟ್ವಿಯಾದಲ್ಲಿ ಶೇ 26 ರಶ್ಟು ಮಂದಿ ರಶ್ಯನ್ ನುಡಿಯಾಡುಗರಿದ್ದಾರೆ. ಆದರೂ ಕೂಡ ಲ್ಯಾಟ್ವಿಯಾದ ರಶ್ಯನ್ನರಿಗೆ ಮತ ಚಲಾಯಿಸದಂತ ಮತ್ತು ದೊಡ್ಡ ದೊಡ್ಡ ಸರಕಾರೀ ಹುದ್ದೆಗಳಿಗೆ ರಶ್ಯನ್ನರನ್ನು ಆಯ್ಕೆ ಮಾಡದಂತ ಕಟ್ಟಲೆಗಳನ್ನು ಲ್ಯಾಟ್ವಿಯಾ ಹೊಂದಿದೆ. ರಶ್ಯನ್ನರು ತನ್ನ ಸುತ್ತ ಮುತ್ತಲಿನ ಯಾವುದೇ ನಾಡಿನಲ್ಲಿದ್ದರೂ ಅವರ ಹಿತಾಸಕ್ತಿಯನ್ನು ಕಾಪಾಡುವ ನೆವ ಮಾಡಿಕೊಂಡು ಜಗಳಕ್ಕಿಳಿಯುವ ರಶ್ಯಾ, ಆ ಮೂಲಕ ದೊಡ್ಡದಾಗಿದ್ದ ಹಳೆಯ ರಶ್ಯಾ ಸಾಮ್ರಾಜ್ಯವನ್ನು ಮರಳಿ ಕಟ್ಟುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಯುಕ್ರೇನಿನ ಜೊತೆಯಲ್ಲಿ ರಶ್ಯಾವು ಇತ್ತೀಚೆಗಶ್ಟೇ ನಡೆಸಿದ ಕಾಳಗ ಈ ಕಾರಣಗಳಿಂದಲೇ ಎಂದು ಬಲ್ಲವರು ಹೇಳುತ್ತಾರೆ.

ಯುಕ್ರೇನಿನಲ್ಲಿ ಶೇ 17 ರಶ್ಟು ಮಂದಿ ರಶ್ಯನ್ ನುಡಿಯಾಡುಗರಿರುವುದನ್ನೇ ಮುಂದು ಮಾಡಿಕೊಂಡು ಯುಕ್ರೇನಿನ ಜೊತೆ ರಶ್ಯಾವು ಕಾದಾಡಿತ್ತು. ಹೀಗಿರುವಾಗ ತಮ್ಮ ನಾಡಲ್ಲಿ ರಶ್ಯನ್ ನುಡಿಯಾಡುಗರ ಎಣಿಕೆ ಶೇ 26 ರಶ್ಟಿರುವುದರಿಂದ, ರಶ್ಯಾದ ಮುಂದಿನ ನಡೆಗಳನ್ನು ಊಹಿಸಿ ಲ್ಯಾಟ್ವಿಯಾ ಸರಕಾರದವರು ಸಹಜವಾಗಿ ಚಿಂತೆಗೊಳಗಾಗಿದ್ದಾರೆ. ಯುಕ್ರೇನಿನ ಜೊತೆ ಕಾಳಗ ನಡೆಸಿ ಕ್ರೈಮಿಯಾವನ್ನು ತನ್ನ ಹಿಡಿತಕ್ಕೆ ಪಡೆದುಕೊಂಡ ರಶ್ಯಾದ ಮೇಲೆ ಹಲವಾರು ನಾಡುಗಳು ಹಣಕಾಸಿನ ಕಡಿವಾಣಗಳನ್ನು ಹೇರಿದ್ದವು. ಆದರಿಂದ ತನ್ನ ಹರವು ಹೆಚ್ಚಿಸಿಕೊಂಡು ಇನ್ನೂ ಹೆಚ್ಚಿನ ಬಲ ಹೊಂದುವುದನ್ನು ರಶ್ಯಾವು ಗುರಿಯಾಗಿಸಿಕೊಂಡಿದೆ ಎಂದು ಲ್ಯಾಟ್ವಿಯಾದ ಹೊರನಾಡು ಕಾತೆಯ ಸೆಕ್ರೆಟರಿಯಾಗಿರುವ ಆಂಡ್ರೆಸ್ ಪೈಲ್ಡೆಗೋವಿಕ್ಸ್ (Andrejs Pildegovics) ಅವರು ಹೇಳುವರು.

ರಶ್ಯನ್ನರ ನಾಡಿಗತನಕ್ಕೆ (citizenship) ಕೆಲ ಮಿತಿಗಳನ್ನು ಹಾಕಿರುವ ಲ್ಯಾಟ್ವಿಯಾದ ಸರಕಾರದ ಕುರಿತು ರಶ್ಯನ್ನರಿಗೆ ಸಿಟ್ಟಿದೆ. ಇದನ್ನೇ ಮುಂದು ಮಾಡಿಕೊಂಡು ಜಗತ್ತಿನ ಮುಂದೆ ಲ್ಯಾಟ್ವಿಯಾವನ್ನು ಕೆಟ್ಟದಾಗಿ ತೋರಿಸುವ ಇರಾದೆ ರಶ್ಯಾದವರದು. ಕಾಳಗಕ್ಕೆ ಇಳಿಯುವ ಮೊದಲು ಮಂದಿಯನ್ನು ಆಳುವವರ ವಿರುದ್ದವಾಗಿ ಎತ್ತಿಕಟ್ಟುವುದು, ಅದಕ್ಕೆ ತಕ್ಕಂತೆ ಸಾಮಾಜಿಕೆ ಮಾದ್ಯಮಗಳನ್ನು ಬಳಸಿಕೊಳ್ಳುವುದು ರಶ್ಯಾದವರ ಸಂಚಾಗಿದೆ. ರಶ್ಯಾ ಇನ್ನೂ ಏನೇನು ತಂತ್ರಗಳನ್ನು ಮಾಡುವುದು, ಲ್ಯಾಟ್ವಿಯಾದವರು ರಶ್ಯಾವನ್ನು ಹೇಗೆ ಎದುರಿಸುವರು-ಏನು ಮಾಡುವರು, ರಶ್ಯಾ-ಲ್ಯಾಟ್ವಿಯಾದ ತಿಕ್ಕಾಟ ಯಾವ ಹಂತ ತಲುಪಲಿದೆ ಎಂಬುದನ್ನು ಮುಂದೆ ನೋಡಬೇಕಿದೆ.

(ಚಿತ್ರ ಸೆಲೆ : byroncourtschool.co.ukseligman.org.il )

(ಮಾಹಿತಿ ಸೆಲೆ :  latimes.compostsovietstates.combaltictimes.com, wiki-latvia-cultural-regions, wiki-latvia, wiki-latgale )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: