ಸರ‍್ಕಾರಿ ಆಸ್ಪತ್ರೆ

– ಬಸವರಾಜ್ ಕಂಟಿ.

hospita

 

( ಈ ಕತೆಯು ಎರಡು ಕಂತುಗಳಲ್ಲಿ ಮೂಡಿಬರುತ್ತದೆ )

ಕಂತು – 1

ಸರ‍್ಕಾರಿ ಆಸ್ಪತ್ರೆ. ಕಗ್ಗತ್ತಲ ಜೊತೆ ಮಳೆಯೂ ಸೇರಿ, ಪಾತಕದ ಜಗತ್ತಿಗೆ ವೇದಿಕೆ ಸಿದ್ದ ಮಾಡಿ ಕೊಟ್ಟಿದ್ದವು. ವಾರ‍್ಡಿನ ಒಳಗಿನ ಸಾಮಾನುಗಳೆಲ್ಲ ಜೋರು ಗಾಳಿಗೆ ಹಾರಲು ಶುರುವಾದಾಗ, ರಾತ್ರಿ ಪಾಳಿಯ ನರ‍್ಸು, ಸಾವಿತ್ರಿ, ಕಿಡಕಿಗಳನ್ನೆಲ್ಲ ಮುಚ್ಚಿದಳು. ಮೋಡಗಳ ಗುಡು ಗುಡು ಬಿಟ್ಟರೆ ಬೇರಾವ ದನಿಯೂ ಇಲ್ಲ. ಆಗಾಗ ರಾತ್ರಿ ಪಾಳಿಯ ನರ‍್ಸ್ ಗಳು ಮತ್ತು ಡಾಕ್ಟರ್ ಗಳು ಅಡ್ಡಾಡುವುದು ಬಿಟ್ಟರೆ ಬೇರಾವ ಜನರ ಸುಳಿವೂ ಇರಲಿಲ್ಲ. ಹದಿಮೂರನೇ ಮಂಚದ ಮೇಲೆ ಮಲಗಿದ್ದ ಪೇಶಂಟು ಕಣ್ಣು ತೆರೆದೂ ತೆರೆಯದಂತೆ ಎದುರಿನ ಗೋಡೆಯ ಮೇಲಿದ್ದ ಗಡಿಯಾರ ನೋಡಿದಳು. ರಾತ್ರಿ ಹನ್ನೊಂದು. ಇನ್ನೊಂದು ಗಂಟೆ ತನ್ನ ಬಿಡುಗಡೆಗೆ ಎಂದುಕೊಂಡಳು. ಜಯ್ಲಿನಿಂದ ಬಿಡುಗಡೆ, ಒಂಟಿತನದಿಂದ ಬಿಡುಗಡೆ, ನಾಲ್ಕು ಗೋಡೆಗಳ ನಡುವೆಯೇ ಇನ್ನೂ ಹತ್ತು ವರ‍್ಶ ಕೊಳೆಯುವುದರಿಂದ ಬಿಡುಗಡೆ. ತನ್ನ ಮತ್ತು ಹೊರ ಜಗತ್ತಿನ ನಡುವೆ ಇರುವುದು ಈ ಆಸ್ಪತ್ರೆ, ಈ ರಾತ್ರಿಯೊಂದೇ ಅಂದುಕೊಂಡಳು. ಮೂರು ತಿಂಗಳುಗಳ ಕಾಲ ಈ ದಿನಕ್ಕಾಗಿ ಕಾದಿದ್ದಳು. ಆದಶ್ಟು ಬೇಗ ಈ ಬಂದನದಿಂದ ತಪ್ಪಿಸಿಕೊಳ್ಳಲು ಮನಸ್ಸು ಹಾತೊರೆಯುತ್ತಿತ್ತು.

“ಏನ್ರಿ ಸಾವಿತ್ರಿ. ಹದಿಮೂರನೇ ಮಂಚದ ಮೇಲೆ ಯಾವ್ದೋ ಪೇಶಂಟಿದೆ?” ರಾತ್ರಿ ಪಾಳಿಯ ಇನ್ನೊಬ್ಬ ನರ‍್ಸು, ಸಾವಿತ್ರಿ ಕುಳಿತಿದ್ದ ಟೇಬಲ್ಲಿನ ಹತ್ತಿರ ಬಂದು ಕೇಳಿದಳು.

“ಅಯ್ಯೋ ಯಾಕ್ ಕೇಳ್ತೀರಾ?” ಮಾತು ಶುರುಮಾಡಿದಳು ಸಾವಿತ್ರಿ, ಮೂವತ್ತರ ಮುಗ್ದ ಹೆಂಗಸು. “ಮೂರು ತಿಂಗಳಿಂದ ಮೂರು ಜನ ಅದೇ ಬೆಡ್ ಮೇಲೆ ಸತ್ತಿದಾರೆ. ನಿನ್ನೆ ಅಶ್ಟೇ ಡೆಂಗ್ಯು ಬಂದು ಒಬ್ಬ ಹೆಂಗಸು ಸತ್ತಳು. ಈ ಬೆಡ್ ಮೇಲೆ ಯಾರನ್ನೂ ಹಾಕಬೇಡಿ ಅಂತ ಸುದಾ ಮೇಡಮ್ ಗೆ ಎಶ್ಟು ಹೇಳಿದ್ವಿ. ಇಂತ ಮೂಡನಂಬಿಕೆ ಇರಬಾರ‍್ದು, ನೀವೆಲ್ಲಾ ಓದಿರೋರಾ? ಅಂತ ನಮ್ಮನ್ನೇ ದಬಾಯಿಸಿ ಬಿಟ್ರು ಕಣ್ರಿ. ಏನ್ ಮಾಡೋದ್ ಹೇಳಿ” ಅಂದಳು.

“ಈಗ ಇರೋ ಪೇಶಂಟ್ ಗೆ ಏನಾಗಿದೆ?”

“ಸೂಯಿಸಾಯ್ಡ್ ಕೇಸ್ ಅಂತೆ” ಮುಂದುವರೆಸಿದಳು ಸಾವಿತ್ರಿ. ಗುಟ್ಟು ಹೇಳುವಂತೆ ದನಿ ತಗ್ಗಿಸಿ, “ಗಂಡನ್ನಾ ಕೊಂದು, ಶಿಕ್ಶೆಯಾಗಿ, ಈಗ ಜಯ್ಲಲ್ಲಿರೊಳು. ಕಯ್ ಕುಯ್ದಕೊಂಡು ಇಲ್ಲಿ ಬಂದಿದ್ದಾಳೆ. ಮತ್ತೆ ಸೂಯಿಸಾಯ್ಡ್ ಮಾಡ್ಕೊಳ್ಳೊ ಪ್ರಯತ್ನ ಮಾಡಿದ್ರೆ ಏನ್ ಗತಿ?”

“ಓಹ್! ಹೌದಾ? ಗಂಡನ್ನೇ ಕೊಲ್ಲೊ ಅಂತಾದ್ದು ಅವ್ನೇನ್ ಮಾಡಿದ್ದಾ?”

“ಇವಳನ್ನಾ ರೇಪ್ ಮಾಡಿ, ಆ ವಿಶಯ ಎಲ್ರೂಗೂ ಹೇಳ್ತೀನಿ ಅಂತ ಬ್ಲಾಕಮೇಲ್ ಮಾಡಿ ಮದುವೆ ಆಗಿದ್ನಂತೆ. ಮದುವೆ ಆಗಿ ಮಾರನೇ ದಿನಾನೇ ಇವ್ಳಗೆ ತಲೆ ಕೆಟ್ಟು, ಅವ್ನನ್ನಾ ಚಾಕು ನಲ್ಲಿ ಚುಚ್ಚಿ ಸಾಯಿಸಿದ್ಳಂತೆ”

“ಹೌದೇನ್ರಿ. ಗಟ್ಟಿ ಹೆಣ್ಣು ಬಿಡಿ”, ತೆರೆದ ಬಾಯಿ ತೆರೆದೇ ಇತ್ತು.

“ಅಶ್ಟೇ ಅಲ್ಲಾ. ಅವನ್ ಕಣ್ಣು, ಕಿವಿ ಎಲ್ಲಾ ಚಾಕು ನಿಂದ ಕೊಯ್ದಿದ್ಳಂತೆ”

“ಅಂದ್ರೆ ಹುಚ್ಚಿನಾ? ನಿಮಗ್ ಹೇಗ್ ಗೊತ್ತಾಯ್ತು?”

“ನಿನ್ನೆ ಬೆಳಗ್ಗೆ ಆ ಲೇಡಿ ಪೊಲೀಸ್ ಬಂದಿದ್ಳಲ್ಲಾ, ಅವ್ಳೇ ಹೇಳಿದ್ದು”

ಇವರ ಮಾತಿನ ನಡುವೆ ಮತ್ತೆ ಅರೆಗಣ್ಣಲ್ಲಿ ಗಡಿಯಾರ ನೋಡಿಕೊಂಡಳು ಆ ಪೇಶಂಟು. ಹನ್ನೊಂದು ಇಪ್ಪತ್ತು. ಅವಳ ಎದೆಬಡಿತ ಹೆಚ್ಚಾಗುತ್ತಿತ್ತು. ಬಿಡುಗಡೆಯ ಕನಸು ಒಂದುಕಡೆಯಾದರೆ, ತಪ್ಪಿಸಿಕೊಳ್ಳಲು ಹೋಗಿ ಸಿಕ್ಕಿಹಾಕಿಕೊಂಡರೆ ಹೇಗೆ ಎಂಬ ಬಯ ಇನ್ನೊಂದು ಕಡೆ. ಅಶ್ಟರಲ್ಲಿ ಮಹಿಳಾ ಪೇದೆಯೊಬ್ಬಳು ವಾರ‍್ಡಿನ ಒಳಗೆ ಬಂದಳು. ಅವಳು ಬಂದದ್ದು ಪೇಶಂಟಿಗೆ ಗೊತ್ತಾಗಿ, ತಕ್ಶಣ ಕಣ್ಣು ಮುಚ್ಚಿ ಮಲಗಿರುವ ನಾಟಕವಾಡಿದಳು. ಪೇದೆ ಇವಳ ಹತ್ತಿರ ಬಂದು ಎಲ್ಲ ಸರಿಯಾಗಿದೆ ಎಂದು ಕಾತ್ರಿ ಮಾಡಿಕೊಂಡು ವಾರ‍್ಡಿನ ಬಾಗಿಲ ಹತ್ತಿರ ಕುರ‍್ಚಿಯಲ್ಲಿ ಕುಂತಳು. ಪೇದೆಯ ಬರುವಿಕೆ ಊಹಿಸದಿದ್ದ ಪೇಶಂಟಿಗೆ ದಿಗಿಲಾಯಿತು. ಈಗ ತಪ್ಪಿಸಿಕೊಳ್ಳುವುದು ಅಶ್ಟು ಸುಲಬದ ಮಾತಾಗಿರಲಿಲ್ಲ. ಏನು ಮಾಡುವುದು? ಇನ್ನೊಂದು ಸಮಯಕ್ಕಾಗಿ ಕಾಯ್ದು ನೋಡುವುದೇ, ಇಲ್ಲಾ ಇವತ್ತೇ ತಪ್ಪಿಸಿಕೊಂಡು ಹೋಗುವುದೇ ಎಂಬ ಇಬ್ಬಗೆಯ ವಿಚಾರದಲ್ಲಿ ಮುಳುಗಿದಳು. ತನ್ನದಲ್ಲದ ತಪ್ಪಿಗೆ ಬಲಿಯಾಗಿ ಕಯ್ಯಲಿರುವ ಜೀವನ ಕಳೆದುಕೊಳ್ಳಬೇಕೆ? ಅವನ ಜೊತೆ ಬಾಳುವುದೂ ಒಂದೇ ಸಾಯುವುದೂ ಒಂದೇಯಾಗಿತ್ತು. ಯಾಕಾದರೂ ಅವನ ತಂತ್ರಕ್ಕೆ ಮಣಿದು ಮದುವೆಯಾದೆನೋ ಎನಿಸಿತು. ಅವನು ಅವಳನ್ನು ಬದುಕಿಸಿಯೇ ಕೊಂದಿದ್ದ. ಅವನನ್ನು ಕೊಂದಿದ್ದರಲ್ಲಿ ಯಾವ ತಪ್ಪೂ ಕಾಣಲಿಲ್ಲ ಅವಳಿಗೆ. ಈಗ ಸಮಾಜದ ಕಟ್ಟುಪಾಡಿಗೆ ಬಿದ್ದು ಬದುಕನ್ನು ಬಲಿಕೊಡಲು ಅವಳು ಸಿದ್ದವಿರಲಿಲ್ಲ. ಈ ಅವಕಾಶ ಬಿಟ್ಟರೆ ಮತ್ತೆ ಸಿಗುವುದಿಲ್ಲ ಎನಿಸಿತು. ಅದಕ್ಕಿಂತ ಹೆಚ್ಚಾಗಿ ಬಿಡುಗಡೆಯ ಕನಸು ಅವಳ ಕಣ್ಣ ಮುಂದೆ ಕುಣಿಯುತ್ತಿತ್ತು. ಕಾಯಲು ಅವಳಿಗೆ ತಾಳ್ಮೆಯಿರಲಿಲ್ಲ. ಹಿಂದೆ ಸರಿಯದಿರಲು ತೀರ‍್ಮಾನಿಸಿದಳು.

ಗಂಟೆ ಇನ್ನೇನು ಹನ್ನೆರಡಾಗುವ ಹೊತ್ತಿಗೆ ಎತ್ತರದಿಂದ ದುಮುಕುವ ಜೋಗದಂತೆ ಮಳೆ ಬಿರುಸಿನಲ್ಲಿ ಹುಯ್ಯಲು ಮೊದಲುಮಾಡಿತು. ಅಂದುಕೊಂಡ ಸಮಯ ಬಂದಾಯಿತೆಂದು ಪೇಶಂಟು ಎದ್ದು ಕೂತಳು. ಬುಜದ ತುಂಬಾ ಕೂದಲು ಹರಡಿ ತಲೆ ಕೆಳಗೆ ಮಾಡಿದ್ದಳು. ಚೂರು ಪಾರು ಇದ್ದ ಬೆಳಕಿನಲ್ಲಿ ಅವಳ ಮುಕ ಸರಿಯಾಗಿ ಕಾಣುತ್ತಿರಲಿಲ್ಲ. ಅವಳು ಕೂತಿದ್ದ ಆಕಾರ ನೋಡಿ ಸಾವಿತ್ರಿಯ ಎದೆ ಬಡಿತ ನಿಂತೇ ಹೋದಂತಾಗಿತ್ತು. ಪೇದೆ ತನ್ನೆಲ್ಲ ದರ‍್ಯ ಒಟ್ಟುಮಾಡಿ ಅವಳೆಡೆಗೆ ನಡೆದಳು. ಇನ್ನೇನು ಮಂಚದ ಹತ್ತಿರ ಬಂದಾಗ, ಆ ಪೇಶಂಟು, ಆಪರೇಶನ್ ಮಾಡುವಾಗ ದೇಹ ಕುಯ್ಯಲು ಬಳಸುವ ಸ್ಕಾಲಪೆಲ್ ಹಿಡಿದ ಬಲಗಯ್ಯನ್ನು ಎತ್ತಿದಳು. ಅದನ್ನು ನೋಡಿದ ಪೇದೆ ತಕ್ಶಣ ತುಸು ಹಿಂದೆ ಸರಿದಳು. ಪೇಶಂಟು ತಡಮಾಡದೆ, ಕಯ್ಯಲ್ಲಿದ್ದ ಸ್ಕಾಲಪೆಲ್ ಜೋರಾಗಿ ಬೀಸುತ್ತ, ಪೇದೆ ತನ್ನ ಹತ್ತಿರ ಬರದಂತೆ ತಡೆದು, ಎದ್ದು ಬಾಗಿಲ ಕಡೆ ನಡೆದಳು. ಅವಳ ಒಂದು ಕಣ್ಣು ಪೇದೆಯ ಮೇಲೆಯೇ ಇತ್ತು. ಅವಳು ಇನ್ನೇನು ಬಾಗಿಲು ದಾಟಬೇಕೆನ್ನುವಾಗ ಪೇದೆ ಹಿಂದಿನಿಂದ ಹಿಡಿಯಲು ಮಿಂಚಿನ ವೇಗದಲ್ಲಿ ನಡೆದಳು. ಇದನ್ನು ಅರಿತ ಆ ಪೇಶಂಟು ತಕ್ಶಣ ಹಿಂದೆ ತಿರುಗಿ ಸ್ಕಾಲಪೆಲ್ ಬೀಸಿದಳು. ಪೇದೆಯ ಕಯ್ಗೆ ಜೋರಾಗಿ ಏಟು ಬಿದ್ದು ಅವಳು ಹಿಂದೆ ಸರಿದಳು. ರಕ್ತ ದಳದಳನೆ ಹರಿಯಲು ಶುರುಮಾಡಿತು. ಇನ್ನು ಪೇದೆ ಅವಳನ್ನು ಹಿಡಿಯುವ ಮನಸ್ಸಿನಿಂದ ಹಿಂದೆ ಸರಿದಳು. ತನ್ನ ಮೊಬಾಯಿಲನ್ನು ಹೊರತೆಗೆದು ಕರೆ ಮಾಡಲು ಮುಂದಾದಳು. ಅವಳನ್ನು ನೋಡಿ ಸಾವಿತ್ರಿಗೂ ಎಚ್ಚರವಾದಂತಾಗಿ ತನ್ನ ಮೊಬಾಯಿಲು ತೆಗೆದು ಅದೇ ಗಾಬರಿಯಲ್ಲಿ ಸುದಾ ಮೇಡಂಗೆ ಕರೆ ಮಾಡಿ ವಿಶಯ ತಿಳಿಸಿದಳು.

ಮೊಬಾಯಿಲಿನಲ್ಲಿ ಮಾತಾಡುತ್ತಲೇ, ರಕ್ತ ಸೋರುತ್ತಿದ್ದ ಜಾಗವನ್ನು ಬಲವಾಗಿ ಒತ್ತಿ ಹಿಡಿದು, ಆ ಪೇಶಂಟನ್ನು ಹಿಂಬಾಲಿಸಿದಳು ಪೇದೆ. ತನ್ನ ಮೇಲಿನವರಿಗೆ ವಿಶಯ ತಿಳಿಸಿ ಕರೆ ಮುಗಿಸಿದಳು. ಪೇಶಂಟು ಇನ್ನೂ ಸ್ಕಾಲಪೆಲ್ ಬೀಸುತ್ತಲೇ, ಎದುರಿಗೆ ಬಂದವರನ್ನು ದೂರ ಸರಿಸುತ್ತ, ಆಸ್ಪತ್ರೆಯ ಗೇಟಿನತ್ತ ಹೆಜ್ಜೆ ಹಾಕುತ್ತಿದ್ದಳು. ಸರ‍್ಕಾರಿ ಆಸ್ಪತ್ರೆಯ ಬಯಲು ದೊಡ್ಡದಾಗಿತ್ತು. ಕಟ್ಟಡದಿಂದ ಹೊರಬಂದ ಕೂಡಲೇ ಕತ್ತಲಿದ್ದ ಜಾಗ ನೋಡಿ ಕಣ್ಮರೆಯಾಗಿ ಹೋದಳು ಆ ಪೇಶಂಟು. ಪೇದೆ ಅವಳ ಹಿಂದೆ ಹಿಂದೆ ಓಡಿದರೂ ಅವಳು ಹೋದ ಕಡೆ ಯಾವುದೆಂದು ನಿಚ್ಚಳವಾಗಿ ತಿಳಿಯಲಿಲ್ಲ. ಗೇಟಿನ ಹೊರಬಂದು ದಾರಿಯ ಎರಡೂ ಬದಿಯಲ್ಲಿ ಹುಡುಕಿ ನೋಡಿದಳು. ಎಲ್ಲೂ ಕಾಣಿಸಲಿಲ್ಲ. ಜೋರು ಮಳೆ ಬೇರೆ. ಅವಳ ಕಯ್ಯಿಂದ ರಕ್ತ ಸೋರುವುದು ಇನ್ನೂ ನಿಂತಿರಲಿಲ್ಲ. ಪೇಶಂಟು ಆಸ್ಪತ್ರೆಯ ಹೊರಗೆ ಹೋದಳೋ, ಇನ್ನೂ ಒಳಗೇ ಇದ್ದಾಳೋ ಗೊತ್ತಾಗದೆ, ಹಾಗೇ ನಡೆದು ಮತ್ತೆ ಆಸ್ಪತ್ರೆಯ ಒಳಗೆ ಬಂದಳು.

ತುಸುವೇ ಸಮಯದಲ್ಲಿ ಗೇಟು ದಾಟಿ ಕಾರೊಂದು ಬಂದು, ಕಾರು ನಿಲುಗಡೆ ಜಾಗದತ್ತ ಹೊರಳಿತು. ಅದರೊಳಗಿದ್ದವರು ಡಾಕ್ಟರ್ ಸುದಾ ಮೇಡಂ. ಕಾರು ನಿಲ್ಲಿಸಿ, ಬಾಗಿಲು ತೆಗೆದು ಕೊಡೆ ಏರಿಸಿದರು. ಮಳೆ ಗಾಳಿಗೆ ಕೊಡೆಯೇ ಹಾರಿ ಹೋಗುವಂತಿತ್ತು. ಕಶ್ಟ ಪಟ್ಟು ಅದನ್ನು ಹಿಡಿಯುತ್ತ ಕಾರಿನಿಂದ ಕೆಳಗಿಳಿದರು. ಸುತ್ತಲೂ ಕಗ್ಗತ್ತಲು. ಬಾಗಿಲು ಹಾಕಿ ಮುನ್ನಡೆದರು. ನಾಲ್ಕು ಹೆಜ್ಜೆ ನಡೆಯುವಶ್ಟರಲ್ಲಿ, ದಪ್ ಎಂದು ಕಾರಿನ ಬಾಗಿಲು ಮುಚ್ಚಿಕೊಳ್ಳುವ ಶಬ್ದ ಬಂದಿತು. ಹಿಂತಿರುಗಿ ನೋಡಿದರು. ಯಾರೂ ಕಾಣಲಿಲ್ಲ. ಅವರ ಕಯ್-ಕಾಲು ನಡುಗುತ್ತಿದ್ದವು. ನಡುಗುತ್ತಲೇ ಕಯ್ಯಲ್ಲಿದ್ದ ರಿಮೋಟಿನಿಂದ ಕಾರನ್ನು ಲಾಕ್ ಮಾಡಿ ಬೆಳಕಿರುವ ಆಸ್ಪತ್ರೆಯ ಮುಂಬಾಗಿಲಿನತ್ತ ಓಡಿದರು.

                                   (ಮುಂದುವರೆಯುವುದು : ಎರಡನೆ  ಕಂತು ನಾಳೆ ಮೂಡಿ ಬರುತ್ತದೆ) 

(ಚಿತ್ರ ಸೆಲೆ:  galleryhip.com )Categories: ನಲ್ಬರಹ

ಟ್ಯಾಗ್ ಗಳು:, , , , , , , , , , ,

1 reply

Trackbacks

  1. ಸರ‍್ಕಾರಿ ಆಸ್ಪತ್ರೆ… | ಹೊನಲು

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s