ಮತ್ತೆ ಬರಲಿದೆ ಪಾಸ್ಟ್ ಆಂಡ್ ಪ್ಯೂರಿಯಸ್

ಹರ‍್ಶಿತ್ ಮಂಜುನಾತ್.

Fast-and-Furious-8

ದಿ ಪಾಸ್ಟ್ ಆಂಡ್ ದಿ ಪ್ಯೂರಿಯಸ್! ಜಗತ್ತಿನಾದ್ಯಂತ ನೋಡುಗರು ಮೆಚ್ಚಿ ಬೆಳೆಸಿದ ಹೆಸರಾಂತ ಓಡುತಿಟ್ಟ(Cinema). ಅಮೇರಿಕನ್ನರ ಮಾಡುಗೆಯಲ್ಲಿ ತಯಾರಾದ ಈ ಓಡುತಿಟ್ಟ ಯುವಕರ ನೆಚ್ಚಿನವುಗಳಲ್ಲೊಂದು ಎಂದರೆ ತಪ್ಪಿಲ್ಲ. ಯೂನಿವರ‍್ಸಲ್ ಪಿಕ್ಚರ‍್ಸ್ ನವರ ಹಂಚಿಕೆಯೊಂದಿಗೆ 2001ರಲ್ಲಿ ಜಗತ್ತಿನಾದ್ಯಂತ ಕಲೆಮನೆ(Theater)ಗಳಿಗೆ ಕಾಲಿರಿಸಿದ ಈ ಓಡುತಿಟ್ಟ, ಒಂದು, ಎರಡು, ಮೂರರಂತೆ ಬೆಳೆದು ಇಂದು ಒಟ್ಟು ಏಳು ಬಾಗಗಳಾಗಿ ತೆರೆಗೆ ಅಪ್ಪಳಿಸಿದೆ. ಸಾಹಸವನ್ನೇ ಬಂಡವಾಳವಾಗಿಸಿಕೊಂಡಿರುವ ಈ ಓಡುತಿಟ್ಟದಲ್ಲಿ, ಕಾನೂನು ಬಾಹಿರ ಕಾರುಗಳ ಪಯ್ಪೋಟಿಗಳಿಗೆಂದೇ ಪಾಸ್ಟ್ ಆಂಡ್ ಪ್ಯೂರಿಯಸ್ ಹೆಸರುವಾಸಿ. ಅಲ್ಲದೇ ಓಡುತಿಟ್ಟದಲ್ಲಿ ಬಳಸಿಕೊಂಡಿರುವ ಬಗೆಬಗೆಯ ದುಬಾರಿ ಕಾರುಗಳನ್ನು ನೋಡುವುದು ಕೂಡ ಕಣ್ಣಿಗೊಂದು ಹಬ್ಬವೇ ಸರಿ.

ಪಾಸ್ಟ್ ಆಂಡ್ ಪ್ಯೂರಿಯಸ್ 1-7:
ಈವರೆಗೆ ಪಾಸ್ಟ್ ಆಂಡ್ ಪ್ಯೂರಿಯಸ್ ನ ಒಟ್ಟು 7 ಬಾಗಗಳು ನಮ್ಮ ಮುಂದೆ ಬಂದಿದೆ. ಏಳೂ ಬಾಗಗಳು ಒಂದಕ್ಕಿಂತ ಒಂದು ಒಳ್ಳೆಯ ಓಡುತಿಟ್ಟಗಳಾಗಿ ಮೂಡಿಬಂದಿದೆ. ಹೀಗೆ 2001ರಲ್ಲಿ ಮೊದಲ್ಗೊಂಡ ಇದರ ಓಟ ಇಂದಿಗೂ ಸಾಗುತ್ತಲೇ ಇದೆ. ನ್ಯೂಯಾರ‍್ಕ್ ನ ಬೀದಿಗಳಲ್ಲಿ ಜಪಾನ್ ನಾಡಿನ ದುಬಾರಿ ಕಾರುಗಳನ್ನು ಬಳಸಿಕೊಂಡು ತಡರಾತ್ರಿಯ ಕಾರು ಪಯ್ಪೋಟಿಗಳು ನಡೆಯುತ್ತಿದ್ದವು. ಇವುಗಳ ಸುತ್ತ ’ರೇಸರ್ ಎಕ್ಸ್’ ಎಂಬ ತಲೆಬರಹದಲ್ಲಿ ಬರಹಗಳು ಮೂಡಿಬಂದವು. ಇಂತಹ ಬರಹಗಳ ಕೆಲವು ಸಂಗತಿಗಳನ್ನು ಬಳಸಿಕೊಂಡು ಪಾಸ್ಟ್ ಆಂಡ್ ಪ್ಯೂರಿಯಸ್ ನ ಕತೆ ಹೆಣೆಯಲಾಗಿದೆ. ನಡೆಸಾಳು(Director) ರೋಬ್ ಕೋಹ್ನ್ ಅವರ ನಡೆಸುವಿಕೆ(Direction) ಮತ್ತು ಹೆಸರಾಂತ ನಟ ಪವ್ಲ್ ವಾಕರ್ ಮತ್ತು ವಿನ್ ಡೀಸೆಲ್ ಅವರ ನಟಿಸುವಿಕೆಯಲ್ಲಿ ತಯಾರಾದ ಈ ಚಿತ್ರ, ದುಬಾರಿ ಕಾರುಗಳು ಮತ್ತು ಕಾರುಗಳ ಬಗೆ ಬಗೆಯ ಸಾಹಸದ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಹೊಸ ಅಲೆ ಎಬ್ಬಿಸಿತು. ಎಶ್ಟರ ಮಟ್ಟಿಗೆಂದರೆ ಜಗತ್ತಿನಾದ್ಯಂತ ದುಬಾರಿ ಕಾರುಗಳ ಬೇಡಿಕೆ ಹೆಚ್ಚಿತಲ್ಲದೇ, ಇಲ್ಲಿಂದ ಅಮೇರಿಕಾದ ಬೀದಿ ಬೀದಿಗಳಲ್ಲಿ ಕಾರುಗಳ ಪಯ್ಪೋಟಿಗಳು ನಡೆಯಲಾರಂಬಿಸಿದವು. ಆದರೆ ಅದಾಗಲೇ ಅಮೇರಿಕಾ ಸರ‍್ಕಾರ ಇವುಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಕಯ್ಗೊಂಡಿತು.

ಹೀಗೆ ಪಾಸ್ಟ್ ಆಂಡ್ ಪ್ಯೂರಿಯಸ್ ನ ಮೊದಲ ಬಾಗದ ಗೆಲುವಿನಿಂದ ಮುಂದುವರಿದ ತಂಡ ಇದರ ಎರಡನೇ ಬಾಗ ಹೊರ ತರಲು ಅಣಿಯಿಟ್ಟಿತು. ಆದರೆ ತಂಡದಲ್ಲಿ ಮೂಡಿದ ಕೆಲವು ಒಡಕುಗಳು ಕೆಲವರನ್ನು ದೂರವಿರುವಂತೆ ಮಾಡಿತು. ಅಲ್ಲದೇ ಮತ್ತೆ ಕೆಲವರು ತಾವಾಗಿಯೇ ತಂಡದಿಂದ ಹಿಂದೆ ಸರಿದರು. ಜಾನ್ ಸಿಂಗಲ್ಟನ್ ಅವರ ನಡೆಸುವಿಕೆಯಲ್ಲಿ ತೆರೆಗೆ ಬಂದ ಪಾಸ್ಟ್ ಆಂಡ್ ಪ್ಯೂರಿಯಸ್ ನ ಎರಡನೇ ಬಾಗ ಮತ್ತೆ ನೋಡುಗರನ್ನು ತನ್ನತ್ತ ಸೆಳೆಯಿತು. ಮೊದಲ ಬಾಗದಂತೆ ಎರಡನೇ ಬಾಗವೂ ಸದ್ದು ಮಾಡುತ್ತಾ ಮತ್ತೆ ಗೆಲುವಿನ ಮೆಟ್ಟಿಲೇರಿತು. ಹೀಗೆ ಇಲ್ಲಿಂದ ಪಾಸ್ಟ್ ಆಂಡ್ ಪ್ಯೂರಿಯಸ್ ನ ನಿರಂತರ ಪ್ರಯತ್ನಗಳು ನಡೆಯುತ್ತಾ ಹೋದವು. ಪ್ರತಿ ಬಾಗದಲ್ಲೂ ಬೇರೆ ಬೇರೆ ನಟರು, ನಡೆಸಾಳುಗಳು, ಮಾಡುಗರೂ(Producer) ಸೇರಿದಂತೆ ಪ್ರತಿಬಾಗಕ್ಕೂ ಬೇರೆಯದೇ ಆದ ಅಡಿಬರಹಗಳೂ ಬಂದುಹೋಗಿವೆ. ಒಟ್ಟಿನಲ್ಲಿ ಈ ನಿರಂತರ ಪ್ರಯತ್ನವು ಈ ವರೆಗೆ ಪಾಸ್ಟ್ ಆಂಡ್ ಪ್ಯೂರಿಯಸ್ ನ ಒಟ್ಟು ಏಳು ಬಾಗಗಳಿಗೆ ಸಾಕ್ಶಿಯಾಗಿ ನಿಂತಿರುವುದಂತು ದಿಟ.

ಇದೇ ವರುಶದ ಎಪ್ರಿಲ್ ನಲ್ಲಿ ಪಾಸ್ಟ್ ಆಂಡ್ ಪ್ಯೂರಿಯಸ್ ನ ಏಳನೇ ಬಾಗವು ತೆರೆಕಂಡಿತ್ತು. ಕ್ರಿಸ್ ಮಾರ‍್ಗನ್ ಅವರ ಬರೆಯುವಿಕೆಯಲ್ಲಿ ಮತ್ತು ಜೇಮ್ಸ್ ವಾನ್ ರವರ ನಡೆಸುವಿಕೆಯಲ್ಲಿ ಮೂಡಿಬಂದಿದ್ದ ಈ ಚಿತ್ರ, ತೆರೆ ಕಾಣುವ ಮೊದಲೇ ನೋಡುಗರಲ್ಲಿ ಬಾರೀ ಕುತೂಹಲ ಎಬ್ಬಿಸಿತ್ತು. ಕಾರಣ ಪಾಸ್ಟ್ ಆಂಡ್ ಪ್ಯೂರಿಯಸ್ ನ ಮೂರನೇ ಬಾಗವನ್ನು ಬಿಟ್ಟು ಉಳಿದೆಲ್ಲಾ ಬಾಗಗಳಲ್ಲಿ ಸತತವಾಗಿ ನಟಿಸಿಕೊಂಡು ಬಂದಿದ್ದ ಮುಕ್ಯ ನಟ ಪವ್ಲ್ ವಾಕರ್ ಅವರ ಅಕಾಲಿಕ ಸಾವು. ನವೆಂಬರ್ 30, 2013ರಲ್ಲಿ ನಡೆದ ಕಾರು ಅವಗಡದಲ್ಲಿ ಪವ್ಲ್ ವಾಕರ್ ಅಸುನೀಗುವ ಹೊತ್ತಿಗಾಗಲೇ ಓಡುತಿಟ್ಟ ಅರ‍್ದ ಮಾತ್ರ ಮುಗಿದಿತ್ತು. ಇಲ್ಲಿಂದ ಮುಂದೆ ಪವ್ಲ್ ವಾಕರ್ ಅವರ ತಮ್ಮಂದಿರಾದ ಕೆಲೆಬ್ ಮತ್ತು ಕೋಡಿ ಓಡುತಿಟ್ಟವನ್ನು ಮುಗಿಸಿಕೊಟ್ಟಿದ್ದರು. 190 ಮಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಾದ ಈ ಓಡುತಿಟ್ಟ, ಹಣಪೆಟ್ಟಿಗೆಯಲ್ಲಿ ಬರೋಬ್ಬರಿ 1.506 ಬಿಲಿಯನ್ ಡಾಲರನ್ನು ದೋಚಿ ಗೆದ್ದಿದೆ. ಆದರೆ ಈ ಚಿತ್ರ ನೋಡಿದ್ದ ನೋಡುಗರು ಮಾತ್ರ ಇದು ಪಾಸ್ಟ್ ಆಂಡ್ ಪ್ಯೂರಿಯಸ್ ನ ಕೊನೆಯ ಬಾಗವಾಗಿರಬಹುದು ಎಂದುಕೊಂಡಿದ್ದರು. ಏಕೆಂದರೆ ಪವ್ಲ್ ವಾಕರ್ ಇಲ್ಲದ ಪಾಸ್ಟ್ ಆಂಡ್ ಪ್ಯೂರಿಯಸ್ ಬಹುತೇಕ ಕೊನೆಯಾದಂತೆಯೇ ಎಂಬ ಯೋಚನೆ ಬಹುತೇಕ ನೋಡುಗರದ್ದು. ಆದರೆ ಇಂತಹ ಹಲವು ಗೊಂದಲಗಳಿಗೆ ಈಗ ತೆರೆಬಿದ್ದಿದೆ.

ಮತ್ತೆ ಬರಲಿದೆ ಪಾಸ್ಟ್ ಆಂಡ್ ಪ್ಯೂರಿಯಸ್:
ಪಾಸ್ಟ್ ಆಂಡ್ ಪ್ಯೂರಿಯಸ್ ನ ಎಂಟನೇ ಬಾಗವು 2017ರಲ್ಲಿ ತೆರೆಗೆ ಬರುವ ಸುದ್ದಿಯಿದೆ. ಅಶ್ಟಕ್ಕೂ ಪವ್ಲ್ ವಾಕರ್ ಇಲ್ಲದ ಪಾಸ್ಟ್ ಆಂಡ್ ಪ್ಯೂರಿಯಸ್ ಹೇಗಿರಬಹುದು? ಈಗಿರುವ ಕತೆಯನ್ನು ಪವ್ಲ್ ವಾಕರ್ ಅವರ ಸಾವಿನೊಂದಿಗೆ ಮುಂದುವರಿಸಬಹುದೆ? ಇಲ್ಲವೇ ಹೊಸತೊಂದು ಕತೆ ಇಲ್ಲಿಂದ ಮೊದಲ್ಗೊಳ್ಳಬಹುದೇ? ಪವ್ಲ್ ವಾಕರ್ ಅವರ ಜಾಗವನ್ನು ಮತ್ತೆ ಅವರ ತಮ್ಮಂದಿರಾದ ಕೆಲೆಬ್ ಮತ್ತು ಕೋಡಿಯವರನ್ನು ಬಳಸಿಕೊಂಡು ಮುಂದುವರೆಯುವರೇ? ಎಂಬೆಲ್ಲಾ ಕೇಳ್ವಿಗಳು ಹುಟ್ಟಿಕೊಳ್ಳತೊಡಗಿದೆ. ಆದರೆ ಇವೆಲ್ಲಾ ಕೇಳ್ವಿಗಳಿಗೆ ಹೇಳ್ವಿಗಳು ಓಡುತಿಟ್ಟ ಬಿಡುಗಡೆಗೊಂಡ ಮೇಲೆ ಸಿಗಬೇಕಿದೆ ಅಶ್ಟೆ. ಆದರೂ ಕೆಲ ದಿನಗಳ ಹಿಂದೆ ವಿನ್ ಡೀಸೆಲ್ ಅವರು ನೀಡಿದ್ದ ಹೇಳಿಕೆಯೊಂದರಲ್ಲಿ ಒಂದು ಕುರುಹನ್ನು ಬಿಚ್ಚಿಟ್ಟಿದ್ದಾರೆ. ಅಂತೆಯೇ ’14 ಎಪ್ರಿಲ್ 2017 ರಲ್ಲಿ ಚಿತ್ರವು ತೆರೆಗೆ ಬರಲಿದ್ದು, ಪ್ಯೂರಿಯಸ್-7ರ ಕತೆಯನ್ನು ಉಳಿಸಿಕೊಳ್ಳಲಾಗುತ್ತದೆ. ಪ್ಯೂರಿಯಸ್ 7 ಪವ್ಲ್ ಗಾಗಿ ಮತ್ತು ಪ್ಯೂರಿಯಸ್ 8 ಪವ್ಲ್ ನಿಂದ’ ಎಂದಿದ್ದಾರೆ.

ಹಿಂದಿನ ಬಾಗಗಳಂತೆಯೇ ಈ ಬಾರಿಯೂ ಏಳನೇ ಬಾಗದ ಮುಂದಿನ ಕತೆಯು ಪಾಸ್ಟ್ ಆಂಡ್ ಪ್ಯೂರಿಯಸ್ ನ ಎಂಟನೇ ಬಾಗದಲ್ಲಿ ಮುಂದುವರೆಯುವ ಸಾದ್ಯತೆಯಿದೆ. ಹಾಗೆಯೇ ಓಡಿತಿಟ್ಟದ ನಡೆಸಾಳಾಗಿ ಜೇಮ್ಸ್ ವಾನ್ ರವರ ಮುಂದುವರಿಯಲಿದ್ದಾರೆ. ಆದರೆ ಓಡುತಿಟ್ಟದಲ್ಲಿ ನಟಿಸುವವರ ಬಗ್ಗೆ ಮುಂದಶ್ಟೇ ತಿಳಿಯಬೇಕಿದೆ. ಅಲ್ಲದೇ ಯೂನಿವರ‍್ಸಲ್ ಸಂಸ್ತೆಯ ಅದ್ಯಕ್ಶೆ ಡೊನ್ನ ಲ್ಯಾಂಗ್ಲೆಯವರು ಹೇಳಿರುವಂತೆ, ಪಾಸ್ಟ್ ಆಂಡ್ ಪ್ಯೂರಿಯಸ್ ನ ಒಟ್ಟು 10 ಬಾಗಗಳನ್ನು ಮಾಡುವ ಯೋಜನೆಯೂ ಇದೆ. ಹಾಗಾಗಿ ಪಾಸ್ಟ್ ಆಂಡ್ ಪ್ಯೂರಿಯಸ್ ನ ಎಂಟನೇ ಬಾಗವು ಬರುವಲ್ಲಿ ಎರಡನೇ ಮಾತಿಲ್ಲ. ಇದಲ್ಲದೇ ಮೇ 27, 2017 ರಂದು ವಿನ್ ಡೀಸೆಲ್ ರವರು ಪಾಸ್ಟ್ ಆಂಡ್ ಪ್ಯೂರಿಯಸ್ 8ನ ಮುಂಗುರುತನ್ನು(Logo) ಬಿಡುಗಡೆ ಮಾಡಿರುವುದು, ಪ್ಯೂರಿಯಸ್ 8 ಮಾಡುಗೆಯ ಬಗೆಗಿನ ಗೊಂದಲಕ್ಕೂ ತೆರೆ ಎಳೆದಂತಾಗಿದೆ.

(ಮಾಹಿತಿ ಸೆಲೆ: wikipedia)

(ಚಿತ್ರ ಸೆಲೆ: gossipat.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: