ಹಗಲುಗನಸು ಕಾಣುವುದು ನಮಗೇ ಒಳ್ಳೆಯದು

– ರತೀಶ ರತ್ನಾಕರ.

mind-wandering

ಆ ನಾಡಿನ ದೊರೆಯು ಅಕ್ಕಸಾಲಿಗನ ಕೈಯಲ್ಲಿ ಒಂದು ಕಿರೀಟವನ್ನು ಮಾಡಿಸಿದ. ತಾನು ಮಾಡಿಸಿದ ಕಿರೀಟದಲ್ಲಿರುವ ಚಿನ್ನದ ಪಾಲೆಶ್ಟು? ಹಾಗು ಬೆಳ್ಳಿಯ ಪಾಲೆಶ್ಟು? ಎಂದು ಕಂಡುಹಿಡಿಯಲು ಅದೇ ನಾಡಿನ ಅರಿಗನಿಗೆ ಹೇಳಿದ. ಹಗಲಿರುಳು ಎನ್ನದೇ ಆ ಅರಿಗನು ದೊರೆಯು ಹೇಳಿದ ಸಮಸ್ಯೆಯನ್ನು ಬಗೆಹರಿಸಲು ಕೆಲಸ ಮಾಡುತ್ತಿದ್ದ. ಯಾವಾಗಲು ಅವನ ತಲೆಯಲ್ಲಿ ಈ ಸಮಸ್ಯೆಯ ಹುಳವೇ ಕೊರೆಯುತ್ತಿತ್ತು. ಒಂದು ದಿನ ತನ್ನ ಕೆಲಸದ ನಡುವೆ ಬಿಡುವನ್ನು ತೆಗೆದುಕೊಂಡು ಸ್ನಾನ ಮಾಡುವಾಗ ಇದ್ದಕ್ಕಿದ್ದ ಹಾಗೆ ಕಿರೀಟದ ಸಮಸ್ಯೆಗೆ ಬಗೆಹರಿಕೆ ಹೊಳೆಯಿತು. ಕೂಡಲೇ ‘ಯುರೇಕಾ… ಯುರೇಕಾ…’ ಎಂದು ಕೂಗುತ್ತಾ ಸ್ನಾನದ ಕೋಣೆಯಿಂದ ಓಡಿಬಂದ. ಆತ ಮತ್ತ್ಯಾರು ಅಲ್ಲ ಆರ‍್ಕಿಮಿಡೀಸ್!

ಆರ‍್ಕಿಮಿಡೀಸ್‍ಗೆ ಆದ ಅನುಬವ ನಮಗೂ ಆಗಿರಬಹುದು. ಕಚೇರಿಯ ಕೆಲಸದಲ್ಲಿ ಯಾವುದೋ ಒಂದು ಸಮಸ್ಯೆಗೆ ಬಗೆಹರಿಕೆ ಕಂಡುಹಿಡಿಯಲು ಒದ್ದಾಡುತ್ತಿರುವಾಗ, ಇಲ್ಲವೇ ಒಂದು ಕೆಲಸವನ್ನು ಕೆಲ ಹೊತ್ತು ಆಳವಾಗಿ ಮಾಡುತ್ತಿರುವಾಗ, ಇಲ್ಲವೇ ಯಾವುದೋ ಒಂದು ಮನಸ್ಸಿನ ಸಮಸ್ಯೆ ನಿಮ್ಮನ್ನು ತುಂಬಾ ಹೊತ್ತು ಕಾಡುತ್ತಿರುವಾಗ, ಸುಮ್ಮನೆ ಕಣ್ಣುಮುಚ್ಚಿಕೊಂಡು ತಲೆಯನ್ನು ಬೇರಾವುದೋ ಯೋಚನೆಗೆ ಹರಿಯಬಿಟ್ಟಾಗ ಅದರ ನಡುವೆ ಕೂಡಲೇ ನಿಮ್ಮ ಸಮಸ್ಯೆಗೆ ಬಗೆಹರಿಕೆ ಹೊಳೆದಿರುತ್ತದೆ. ಹೀಗೆ ಯಾವುದೋ ಕೆಲಸ ಮಾಡುವುದರ ನಡುವೆ ತಲೆಯನ್ನು ತನ್ನ ಬಯಕೆಯಂತೆ ಹರಿಯಬಿಡುವುದನ್ನು ‘ಬಗೆಯಲೆತ‘(mind wandering) ಇಲ್ಲವೇ ‘ಹಗಲುಗನಸು’ (daydream) ಎಂದು ಕರೆಯುತ್ತಾರೆ. ನಾವು ಕಾಣುವ ಇಂತಹ ಹಗಲುಗನಸುಗಳು/ಬಗೆಯಲೆತ ತುಂಬಾ ಒಳ್ಳೆಯದು, ಇವು ನಮ್ಮ ಮಾಡುಗತನವನ್ನು(productivity) ಹೆಚ್ಚಿಸುತ್ತವೆ ಎಂದು ಅರಕೆಗಳು ತಿಳಿಸಿಕೊಟ್ಟಿವೆ. ಅದು ಹೇಗೆ ಎಂದು ನೋಡೋಣ ಬನ್ನಿ.

ನಾವು ಮಾಡುವ ಕೆಲಸದ ನಡುವೆ ಕೆಲವು ಬಗೆಯಲೆತಗಳು ನಡೆದರೆ ನಾವು ಬಿಡಿಸಲು ಪ್ರಯತ್ನಿಸುತ್ತಿರುವ ಸಮಸ್ಯೆಗಳಿಗೆ ಬಗೆಹರಿಕೆಗಳು ಸಿಗುತ್ತವೆ ಎಂದು ಅರಿಗರು ಹೇಳುತ್ತಾರೆ. ನರದರಿಮೆ(Neuroscience) ಮತ್ತು ಒಳಗಿನರಿಮೆ(psychology) ಯಲ್ಲಿ ನಡೆದ ಹಲವಾರು ಅರಕೆಗಳು ತಿಳಿಸುವುದೇನೆಂದರೆ; ‘ಬಗೆಯಲೆತವು ಹೊಸತನ್ನು ಉಂಟುಮಾಡಬಲ್ಮೆ(creativity), ಹೊಳಹು(plan) ಮತ್ತು ಈಗಿನ ಸಣ್ಣ ಬಯಕೆಗಳನ್ನು ಬದಿಗಿರಿಸಿ, ಮುಂದಿನ ಒಳಿತಿಗಾಗಿ ಬೇಕಾದ ತೀರ‍್ಮಾನವನ್ನು ತೆಗೆದುಕೊಳ್ಳುವ ಕಸುವನ್ನು ಹೆಚ್ಚಿಸಲು ನೆರವಾಗುತ್ತವೆ’ ಎಂದು. ಈ ಕಸುವುಗಳು ನಿಮ್ಮ ಕೆಲಸವನ್ನು ನಾಟುವಂತೆ(effective) ಮಾಡುವುದಲ್ಲದೇ, ಒಬ್ಬ ಕೆಲಸಗಾರನ ಮಾಡುಗತನವನ್ನೂ ಹೆಚ್ಚಿಸುತ್ತವೆ.

ಹೊಸತನ್ನು ಉಂಟುಮಾಡಬಲ್ಮೆ:
ಕೆಲಸ ಇಲ್ಲವೇ ಯೋಚನೆಯನ್ನು ಆಳವಾಗಿ ಮಾಡುತ್ತಿರುವಾಗ ಯಾವುದೋ ಸಮಸ್ಯೆ ಆ ಕೆಲಸವನ್ನು ಮುಂದುವರಿಸಲು ಬಿಡದಿದ್ದರೆ, ಹಾಡನ್ನು ಕೇಳುವುದೋ, ಕಣ್ಣುಮುಚ್ಚಿ ಇಶ್ಟವಾದ ಯೋಚನೆಯನ್ನು ಮಾಡುವುದೋ ಹೀಗೆ ಯಾವುದಾದರು ಬಗೆಯಲೆತದಲ್ಲಿ ತೊಡಗಬಹುದು. ಬಗೆಯಲೆತದಲ್ಲಿ ಮೆದುಳು ಆ ಸಿಕ್ಕಲಿನ ಸಮಸ್ಯೆಯನ್ನು ಹೇಗೆ ಬಗೆಹರಿಸುವುದು ಎಂಬ ಹುಡುಕಾಟವನ್ನು ಹಿನ್ನಲೆಯಲ್ಲಿ ನಡೆಸುತ್ತಲೇ ಇರುತ್ತದೆ. ಬಗೆಯಲೆತದಲ್ಲಿ ಯಾವುದೇ ಆಳವಾದ ಕೆಲಸ/ಯೋಚನೆ ಮಾಡದೇ ಇರುವುದರಿಂದ, ಮೆದುಳಿನ ಹೆಚ್ಚಿನ ಹುರುಪು ಮತ್ತು ಇತರೆ ಅಂಗಗಳು ಹಿನ್ನಲೆಯಲ್ಲಿ ನಡೆಯುತ್ತಿರುವ ಬಗೆಹರಿಕೆಯ ಹುಡುಕಾಟದಲ್ಲಿ ತೊಡಗಿಸಿಕೊಳ್ಳುತ್ತವೆ. ಇದು ನಮ್ಮ ಮೆದುಳನ್ನು ‘ಉಂಟುಮಾಡಬಲ್ಮೆಯ ಮೊಳಕೆಯೊಡೆಯುವಿಕೆ‘(creative incubation)ಯ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ಆಗ ನಮ್ಮ ಕೆಲಸದ/ಯೋಚನೆಯ ಸಮಸ್ಯೆಗಳಿಗೆ ಒಳ್ಳೆಯ ಬಗೆಹರಿಕೆಗಳು ಸಿಗುತ್ತವೆ ಎಂದು ಅರಕೆಗಳು ತಿಳಿಸುತ್ತವೆ.

ಹೊಳಹು:
ಒಂದು ಹೊಸ ವಸ್ತುವನ್ನು ಮಾರುಕಟ್ಟೆಗೆ ತರಬೇಕೆಂದು ನೀವು ತುಂಬಾ ಕೆಲಸ ಮಾಡುತ್ತಿರುತ್ತೀರಿ. ಆ ವಸ್ತುವು ಮಾರುಕಟ್ಟೆಯಲ್ಲಿ ದೊಡ್ಡಮಟ್ಟದಲ್ಲಿ ಮೆಚ್ಚುಗೆಯನ್ನು ಪಡೆದು ಹೆಚ್ಚು ಹಣವನ್ನು ನೀಡಬಲ್ಲದು ಎಂಬುದು ನಿಮ್ಮ ಲೆಕ್ಕವಾಗಿರುತ್ತದೆ. ಎಡಬಿಡದೆ ಆ ವಸ್ತುವನ್ನು ಮಾಡುವುದರಲ್ಲಿ ನೀವು ತೊಡಗಿರುತ್ತೀರಿ. ಆ ಹೊತ್ತಿನಲ್ಲಿ ಬಗೆಯಲೆತ ನಡೆಯದೇ ಹೋದರೆ, “ಮುಂದಿನ ದಿನಗಳಲ್ಲಿ ವಸ್ತುವಿನ ಬೆಳವಣಿಗೆಗೆ ಬೇಕಾದ ಒಳ್ಳೆಯ ಹೊಳಹುಗಳು ಮೂಡುವುದಿಲ್ಲ, ಇಲ್ಲವೇ ಅದೇ ವಸ್ತುವನ್ನು ಬೇರೊಂದು ಬಗೆಯಲ್ಲಿ ಇನ್ನೂ ಚೆನ್ನಾಗಿ ಹೊರತರುವ ಹೊಳಹುಗಳು ಮೂಡುವುದಿಲ್ಲ.” ಎಂದು ಹಲವು ಅರಕೆಗಳು ತಿಳಿಸಿಕೊಟ್ಟಿವೆ. ಒಂದೇ ಸಮನೆ ಕೆಲಸ ಮಾಡುವ ಬದಲು ಅಲ್ಲಲ್ಲಿ ಬಗೆಯಲೆತಕ್ಕೆ ಬಿಡುವನ್ನು ಕೊಟ್ಟರೆ ನಾವು ಮಾಡುವ ಕೆಲಸದ ಗೆಲುವಿಗೆ ಬೇಕಾದ ಹೊಳಹುಗಳು ಮೂಡುತ್ತವೆ.

ಒಳ್ಳೆಯ ತೀರ‍್ಮಾನ:
ಜರ‍್ಮನಿಯಲ್ಲಿ ನಡೆದ ಹಲವು ಅರಕೆಗಳ ಮೂಲಕ ‘ಬಗೆಯಲೆತವು ಇಂದಿನ ಚಿಕ್ಕ ಬಯಕೆಗಳನ್ನು ಬದಿಗಿರಿಸಿ, ಒಳ್ಳೆಯ ನಾಳೆಗಳಿಗೆ ಬೇಕಾದ ದೊಡ್ಡ ತೀರ‍್ಮಾನವನ್ನು ತೆಗೆದುಕೊಳ್ಳುವ ಕಸುವನ್ನು ನೀಡುತ್ತದೆ,’ ಎಂದು ತಿಳಿದುಬಂದಿದೆ. ಮೇಲೆ ಹೇಳಿದ ಎತ್ತುಗೆಯನ್ನೇ ಇಲ್ಲಿ ತೆಗೆದುಕೊಳ್ಳಬಹುದು. ಸಾಕಶ್ಟು ಪ್ರಯತ್ನ ಮತ್ತು ಹಣವನ್ನು ಕರ‍್ಚುಮಾಡಿ ಹೊಸದೊಂದು ವಸ್ತುವನ್ನು ಮಾಡಿರುತ್ತೇವೆ. ಅದು ಮಾರುಕಟ್ಟೆಯಲ್ಲಿ ಒಳ್ಳೆಯ ಲಾಬ ತರುತ್ತದೆ ಎಂದು ತಿಳಿದಿರುತ್ತದೆ. ಆಗ ಒಬ್ಬ ಕೊಳ್ಳುಗನು ಬಂದು, ಅದನ್ನು ಕೊಂಡು ಮಾರುಕಟ್ಟೆಗೆ ಬಿಡುವುದಾಗಿ ಹೇಳುತ್ತಾನೆ. ಆದರೆ ಆ ವಸ್ತುವನ್ನು ನೀವಂದುಕೊಂಡದ್ದಕ್ಕಿಂತ ಕಡಿಮೆ ಬೆಲೆಗೆ ಕೇಳುತ್ತಾನೆ. ಇಶ್ಟು ದಿನ ಸಾಕಶ್ಟು ಹೊತ್ತು ಮತ್ತು ಹಣವನ್ನು ಕರ‍್ಚುಮಾಡಿಯಾಗಿದೆ, ನಾನು ಹಾಕಿದ ಹಣ ಬಂದು ಬಿಡಲಿ ಸಾಕು(‘ಆ ಹೊತ್ತಿನ ಚಿಕ್ಕ ಬಯಕೆ’) ಎಂದು ಕೆಲವೊಮ್ಮೆ ಮಾರುವುದುಂಟು. ಈ ತೀರ‍್ಮಾನವನ್ನು ಕೈಗೊಳ್ಳುವ ಮೊದಲು ಬಗೆಯಲೆತಕ್ಕೆ ನಮ್ಮನ್ನು ತೊಡಗಿಸಿಕೊಂಡರೆ ದೂರಾಲೋಚನೆಗಳು ಮೂಡುತ್ತವೆ, ಈ ಸಂದರ‍್ಬವನ್ನು ತನ್ನ ಮುಂದಿನ ಒಳಿತಿಗಾಗಿ ಬಳಸಿಕೊಳ್ಳುವ ಹೊಸದಾರಿಗಳು ಸಿಗುತ್ತವೆ. ಆಗ ನಾವು ತೆಗೆದುಕೊಳ್ಳುವ ತೀರ‍್ಮಾನಗಳು ನಮ್ಮ ಮುಂದಿನ ಒಳಿತಿಗಾಗಿ ಇರುತ್ತವೆ ಎಂದು ಅರಕೆಗಳು ತಿಳಿಸುತ್ತಿವೆ. ಬಗೆಯಲೆತವು ಯಾವಾಗಲೂ ನಾಳಿನ ದಿನಗಳಲ್ಲಿ ನಮಗೆ ಒಳಿತಾಗುವಂತಹ ಹೊಳಹುಗಳನ್ನು ಮೂಡಿಸುವ ಕಸುವನ್ನು ಹೊಂದಿರುತ್ತವೆ.

ಕೆಲವು ತೊಡಕುಗಳು:
ಬಂಡಿಯನ್ನು ನಡೆಸಿಕೊಂಡು ಎಲ್ಲಿಗೋ ಹೋಗುತ್ತಿರುವಾಗ ಕೆಲವೊಮ್ಮೆ ಬಗೆಯಲೆತ ನಡೆದು, ನಮಗೆ ಸವಿಯೆನಿಸುವ ಆಲೋಚನೆಗಳಿಗೆ ಹೋಗುತ್ತೇವೆ. ಈ ಬಗೆಯಲೆತವು ಹೆಚ್ಚು ಹೊತ್ತು ನಡೆದರೆ ಬಂಡಿಯ ಆಯತಪ್ಪಿ ತೊಂದರೆಗಳು ಎದುರಾಗುವ ಸಾದ್ಯತೆ ಹೆಚ್ಚು. ಹಾಗಾಗಿ ಕೆಲವು ಕೆಲಸಗಳಲ್ಲಿ ಹೆಚ್ಚು ಹೊತ್ತಿನ ಬಗೆಯಲೆತ ಒಳ್ಳೆಯದಲ್ಲ.

ಇತ್ತಿಚಿನ ದಿನಗಳಲ್ಲಿ ಚೂಟಿಯುಲಿಗಳ (smartphones) ಮತ್ತು ಮಿಂದಾಣಗಳ(websites) ಬಳಕೆ ಹೆಚ್ಚುತ್ತಿದೆ. ಕಚೇರಿಯಲ್ಲಿ ಎಡಬಿಡದೆ ಕೆಲಸ ಮಾಡುತ್ತಿರುವಾಗ ಕೊಂಚ ಬಿಡುವು ಬೇಕೆನಿಸಿದರೆ ಚೂಟಿಯುಲಿ ಇಲ್ಲವೇ ಬೇರೆ ಮಿಂದಾಣಗಳ ಒಳಹೊಕ್ಕು, ಮತ್ತಶ್ಟು ಮಾಹಿತಿಗಳನ್ನು ನಮ್ಮ ಮೆದುಳಿಗೆ ಕಳಿಸುತ್ತಿರುತ್ತೇವೆ. ಇದರಿಂದ ‘ಬಗೆಯಲೆತ ನಡೆಯುವುದಿಲ್ಲ’. ಹೆಚ್ಚಿನ ಮಾಹಿತಿಯನ್ನು ಮೆದುಳಿಗೆ ಕಳಿಸುವುದರಿಂದ ನಮ್ಮ ಮೆದುಳು ಆ ವಿವರಗಳನ್ನು ಕಲೆಹಾಕುವಲ್ಲಿ ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಬಗೆಯಲೆತ ನಡೆಯಲು ಅವಕಾಶ ಇರುವುದಿಲ್ಲ. ಸಿಕ್ಕಲಿನ ಕೆಲಸದ ನಡುವೆ ಬಗೆಯಲೆತ ನಡೆಯಬೇಕಾದರೆ ಮೆದುಳಿಗೆ ಕಡಿಮೆ ಕೆಲಸವನ್ನು ಕೊಡಬೇಕು, ಆಗ ಮೆದುಳಿಗೆ ತನ್ನ ಹಿನ್ನಲೆಯಲ್ಲಿ ಆ ಸಿಕ್ಕಲಿಗೆ ಬಗೆಹರಿಕೆಯನ್ನು ಹುಡುಕಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ನೆರವಾಗುವಂತಹ ಬಗೆಯಲೆತವನ್ನು ನಡೆಸಲು ಕೆಲವು ಸಲಹೆಗಳು ಇಲ್ಲಿವೆ.
– ಕಚೇರಿಯ ಕಿಟಕಿಯ ಬಳಿಗೆ ಬನ್ನಿ, ಹೊರಗೆ ಓಡಾಡುವ ಮಂದಿ, ಬಂಡಿ, ಮುಂತಾದವನ್ನು ಸುಮ್ಮನೆ ನೋಡಿ ಅವುಗಳ ಬಗ್ಗೆ ಕೊಂಚ ಹೊತ್ತು ಯೋಚಿಸಿ. ನೆನಪಿರಲಿ, ತುಂಬಾ ಹೊತ್ತಲ್ಲ.
– ಕುಳಿತಲ್ಲಿಯೇ ಕಣ್ಣುಮುಚ್ಚಿ ಕೋಣೆಯಲ್ಲಿ ಬರುತ್ತಿರುವ ಇತರೆ ಸದ್ದುಗಳನ್ನು ಕೊಂಚ ಹೊತ್ತು ಕೇಳಿಸಿಕೊಳ್ಳಿ.
– ನಿಮ್ಮ ಜಾಗದಿಂದ ಎದ್ದು ಹೊರಗಡೆ ಹೋಗಿ ಒಂದೆರೆಡು ನಿಮಿಶ ಹಾಗೆಯೆ ಕಳೆದುಬನ್ನಿ. ಆ ಹೊತ್ತಿನಲ್ಲಿ ನಿಮ್ಮ ಚೂಟಿಯುಲಿ ನಿಮ್ಮೊಡನೆ ಇಟ್ಟುಕೊಳ್ಳಬೇಡಿ.

ನಮ್ಮಲ್ಲಿನ ಮಾಡುಗತನವನ್ನು ಹೆಚ್ಚಿಸಿಕೊಳ್ಳಲು ನಮ್ಮ ಮೆದುಳಿನ ಕೆಲಸವನ್ನು ನಾಟುವಂತೆ ಮಾಡಬೇಕಿದೆ. ಅದಕ್ಕಾಗಿ ಈ ಬಗೆಯಲೆತವು ತುಂಬಾ ನೆರವನ್ನು ನೀಡುತ್ತದೆ. ಆದರೆ ಈಗಿನ ಚೂಟಿಯುಲಿ ಹಾಗು ಮಿಂದಾಣದ ಮಾಹಿತಿಗಳ ಹರಿವು ಮೆದುಳಿಗೆ ಬಗೆಯಲೆತ ನಡೆಸಲು ಅವಕಾಶವನ್ನು ನೀಡುತ್ತಿಲ್ಲ. ಬಗೆಯಲೆತವನ್ನು ಅಡ್ಡಿಪಡಿಸುವ ವಿವರಗಳ ಬಗ್ಗೆ ಅರಿತುಕೊಂಡು ಅವುಗಳನ್ನು ನಿಲ್ಲಿಸಬೇಕು. ಒಳ್ಳೆಯ ಬಗೆಯಲೆತವನ್ನು ನಡೆಸುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಆಗ ನಮ್ಮ ಮೆದುಳು ನಮ್ಮ ಮಾಡುಗತನವನ್ನು ಹೆಚ್ಚಿಸಲು ನೆರವಾಗುತ್ತದೆ.

(ಮಾಹಿತಿ ಸೆಲೆ: psychologytoday.com, hbr.org)
(ಚಿತ್ರ ಸೆಲೆ: opencolleges.edu)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: