ಕೆಲಸದೊತ್ತಡದಿಂದ ಒಳಿತನ್ನು ಗಳಿಸುವುದು ಹೇಗೆ?
– ರತೀಶ ರತ್ನಾಕರ.
ಪೈಪೋಟಿಯ ಜಗತ್ತು, ಹಿಂದೇಟು ಹಾಕಲು ಬಿಡದ ಮನಸ್ಸು. ಹೇಗಾದರು ಸರಿ ಕೈಗೆತ್ತಿಕೊಂಡ ಕೆಲಸವನ್ನು ಮುಗಿಸಲೇಬೇಕೆಂಬ ತೀರ‍್ಮಾನ. ಅದಕ್ಕಾಗಿ, ಎಡಬಿಡದೆ ಕೆಲಸ ಮಾಡುವುದು. ಈ ಕೆಲಸದ ನಡುವೆ ಮೆದುಳು ಹಾಗು ಮನಸ್ಸಿನ ಮೇಲೆ ಇನ್ನಿಲ್ಲದ ಒತ್ತಡ! ‘ಈ ತಿಂಗಳ ಮಾರಾಟದ ಗುರಿ ಇನ್ನೂ ಮುಟ್ಟಿಲ್ಲ.’, ‘ಈ ಹಮ್ಮುಗೆ(project)ಯು ಮುಗಿಯಲು ಎರಡೇ ವಾರಗಳು ಇರುವುದು ಇನ್ನೂ ಬೆಟ್ಟದಶ್ಟು ಕೆಲಸ ಬಾಕಿ ಇದೆ.’ ಇಂತಹ ಒತ್ತಡದ ಮಾತುಗಳು ಮತ್ತು ಅನುಬವಗಳು ಇಂದಿನ ಕೆಲಸದಲ್ಲಿ ತುಂಬಾ ಸಾಮಾನ್ಯ. ‘ಒತ್ತಡ’ವು ಹಲವು ಬಗೆಯಲ್ಲಿ ಕೇಡನ್ನು ಉಂಟುಮಾಡುತ್ತದೆ. ಮೊದಲು ನೆಮ್ಮದಿಯನ್ನು ಕೆಡಿಸುತ್ತದೆ, ಯೋಚಿಸುವ ಅಳವ(capacity)ನ್ನು ಕಡಿಮೆಗೊಳಿಸುತ್ತದೆ. ಸಿಟ್ಟು, ಕೊರಗಿನಂತಹ ತಲ್ಲಣಗಳಿಗೆ ಎಡೆಮಾಡಿಕೊಡುತ್ತದೆ. ಆರೋಗ್ಯವನ್ನು ಹದಗೆಡಿಸುತ್ತದೆ. ಇವೆಲ್ಲವೂ ಒಟ್ಟಾಗಿ ಒಬ್ಬ ಕೆಲಸಗಾರನ ಮಾಡುಗತನ(productivity)ವನ್ನು ಕಡಿಮೆಗೊಳಿಸುತ್ತವೆ.
ಇಂದಿನ ಕೆಲಸದ ಬಗೆಯಲ್ಲಿ ಒತ್ತಡದಿಂದ ತಪ್ಪಿಸಿಕೊಳ್ಳುವುದು ಕೊಂಚ ಕಶ್ಟವೇ. ಹೆಚ್ಚಿನ ಒತ್ತಡಕ್ಕೆ ಒಳಗಾದರೆ ಕೇಡು ಕಟ್ಟಿಟ್ಟಬುತ್ತಿ ಎಂಬುದು ಕೂಡ ದಿಟ. ಇದೇ ಒತ್ತಡವನ್ನು ಬೇರೊಂದು ಬಗೆಯಲ್ಲಿ ನೋಡಿ ಅದನ್ನು ಸಂಬಾಳಿಸಿಕೊಂಡು, ಎಂದಿನ ಕೆಲಸಕ್ಕೆ ನೆರವಾಗುವಂತೆ ಬಳಸಿಕೊಳ್ಳುವುದಾದರೆ ಹೇಗಿರುತ್ತದೆ? ಕೆಲಸದೊತ್ತಡವು ಮಾಡುಗತನವನ್ನು ಹೆಚ್ಚಿಸುವಂತದಾರೆ ಹೇಗಿರುತ್ತದೆ? ಒಟ್ಟಾರೆಯಾಗಿ ಒತ್ತಡದಿಂದ ಒಳಿತು ಸಿಗುವಂತಿದ್ದರೆ ಹೇಗಿರುತ್ತದೆ? ಇದೆಲ್ಲವೂ ಸಾದ್ಯ ಎನ್ನುತ್ತಿವೆ ಒಳಗಿನರಿಮೆಯ(psychology) ಹಲವಾರು ಅರಕೆಗಳು!
ಹಾಗಾದರೆ ಒತ್ತಡವನ್ನು ಸಂಬಾಳಿಸುವುದು ಹೇಗೆ? ಅದರಿಂದ ಒಳಿತನ್ನು ಪಡೆಯುವುದು ಹೇಗೆ?
1. ಒತ್ತಡಕ್ಕೆ ಕಾರಣವನ್ನು ಕಂಡುಕೊಳ್ಳಬೇಕಿದೆ:
ಯಾವ ಕೆಲಸಕ್ಕೆ ಮತ್ತು ಕೆಲಸದ ಯಾವ ಹೊತ್ತಿನಲ್ಲಿ ಒತ್ತಡವು ಆವರಿಸಿಕೊಳ್ಳುತ್ತದೆ ಎಂಬುದನ್ನು ಮೊದಲು ಕಂಡುಕೊಳ್ಳಬೇಕಿದೆ. ಆತಂಕ, ಹೆದರಿಕೆ, ಬಿಗಿತ, ಎದೆಬಡಿತ ಹೆಚ್ಚಾಗುವುದು, ನೆಮ್ಮದಿ ಕೆಡುವುದು ಹೀಗೆ ಒಬ್ಬಬ್ಬರಲ್ಲಿ ಒಂದೊಂದು ಬಗೆಯ ಒತ್ತಡದ ಅನುಬವಗಳು ಮೂಡುತ್ತವೆ. ಕೆಲಸದ ನಡುವೆ ಈ ಬಗೆಯ ಒತ್ತಡಕ್ಕೆ ಒಳಗಾದರೆ ಆ ಕೆಲಸಕ್ಕೆ ಅಶ್ಟೊಂದು ‘ಹೆಚ್ಚುಗಾರಿಕೆ‘ ಇದೆ ಎಂದು. ಯಾವುದೋ ಸಣ್ಣಪುಟ್ಟ ಕೆಲಸವಾಗಿದ್ದರೆ ತಲೆಕೆಡಿಸಿಕೊಳ್ಳಲು ಹೋಗುತ್ತಿರಲಿಲ್ಲ. ಕೈಗೆತ್ತಿಕೊಂಡ ಕೆಲಸವು ತುಂಬಾ ಮುಕ್ಯವಾದ್ದರಿಂದ ಅದಕ್ಕೆ ಹೆಚ್ಚು ಒತ್ತುಕೊಡಲು ಹೋಗಿ ಒತ್ತಡವು ಮನೆಮಾಡಿಕೊಂಡಿರುತ್ತದೆ. ಹಾಗಾಗಿ, ಕೆಲಸದ ಒತ್ತಡವು ಆ ಕೆಲಸಕ್ಕಿರುವ ಹೆಚ್ಚುಗಾರಿಕೆಗೆ ನೇರ ನಂಟನ್ನು ಹೊಂದಿರುತ್ತದೆ ಎಂದು ಮನವರಿಕೆಯಾದರೆ, ಮೆದುಳು ಆತಂಕಕ್ಕೆ ಒಳಗಾಗದೆ ಕೆಲಸ ಮುಗಿಸುವತ್ತ ಬೆಂಬಲವನ್ನು ನೀಡುತ್ತದೆ. ಹಾಗಾಗಿ ಒತ್ತಡದ ಕಾರಣವನ್ನು ಕಂಡುಕೊಳ್ಳುವುದು ತುಂಬಾ ಅರಿದಾದದ್ದು.
2. ಅನಿಸಿಕೆ ಬದಲಾಗಲಿ:
ಒಂದು ಕಾಡಿನಲ್ಲಿ ದಾರಿಹೋಕನೊಬ್ಬ ನಡೆದುಕೊಂಡು ಹೋಗುತ್ತಿದ್ದ. ಒಂದು ಪೊದೆಯ ಮರೆಯಿಂದ ಹುಲಿಯೊಂದು ಚಂಗನೆ ನಗೆದು ಅವನೆದುರು ನಿಂತಿತು. ಆಗ ದಾರಿಹೋಕನ ಮೆದುಳು ಎಶ್ಟೊಂದು ಒತ್ತಡಕ್ಕೆ ಒಳಗಾಗಿರಬೇಕು ಎಂದು ಊಹಿಸಿ. ಅಂತಹ ಹೊತ್ತಿನಲ್ಲಿ ಮೆದುಳು ‘ಓಡು ಇಲ್ಲವೇ ಕಾದಾಡು‘ (flight or fight) ಹಂತಕ್ಕೆ ಹೋಗುತ್ತದೆ. ಆಗ ಮೆದುಳಿನ ಯೋಚಿಸುವ ಅಳವು ತುಂಬಾ ಕಡಿಮೆಯಿರುತ್ತದೆ. ಎಂದಿನ ಕೆಲಸದಲ್ಲಿಯೂ ಕೂಡ ಹಾಗೆ, ಹೆಚ್ಚಿನ ಒತ್ತಡದಿಂದ ಮೆದುಳು ‘ಓಡು ಇಲ್ಲವೇ ಕಾದಾಡು’ ಹಂತಕ್ಕೆ ಹೋಗಿ ತನ್ನ ಕಸುವನ್ನು ಕಡಿಮೆಮಾಡಿಕೊಂಡು ಬಿಡುತ್ತದೆ.
ಮೊದಲು ಹೇಳಿದಹಾಗೆ ಒತ್ತಡವನ್ನು ಮೆದುಳನ್ನು ಕೆಲಸದ ಬೆಂಬಲಕ್ಕೆ ಬಳಸಿಕೊಂಡರೆ ‘ಯೋಚನೆಯ ಹರವು ಮತ್ತು ಕಟ್ಟುವಿಕೆಯ ಕಸುವು ಹೆಚ್ಚುತ್ತದೆ. ಆಗ ಕೆಲಸವು ಸುಳುವಾಗಿ ನಡೆಯುತ್ತದೆ. ಒತ್ತಡವನ್ನು ಹೆದರಿಕೆಯಿಂದ ನೋಡದೆ ಸವಾಲಾಗಿ ತೆಗೆದುಕೊಂಡರೆ ಮೆದುಳಿನ ಯೋಚನೆಯ ಪರಿ ಬೇರೆಯಾಗಿರುತ್ತದೆ. ಹಾಗಾಗಿ ಒತ್ತಡದ ಹೊತ್ತಿನಲ್ಲಿ ಕೊಂಚ ಬಿಡುವನ್ನು ಪಡೆದು ಮೆದುಳನ್ನು ಓಡು ಇಲ್ಲವೇ ಕಾದಾಡು ಹಂತಕ್ಕೆ ಹೋಗದಂತೆ ನೋಡಿಕೊಳ್ಳಬೇಕು.
3. ಒತ್ತಡದ ಮಾರೆಸಕ(reaction) ತಿಳಿದಿರಲಿ:
ಒತ್ತಡಕ್ಕೆ ಒಳಗಾದಾಗ ಅದನ್ನು ಹತ್ತಿಕ್ಕಲು ಮೆದುಳು ಹಲವು ಬಗೆಯ ಮಾರೆಸಕಗಳನ್ನು ಮಾಡಿಸುತ್ತದೆ. ಮಂದಿಯಿಂದ ಮಂದಿಗೆ ಈ ಮಾರೆಸಕಗಳು ಬೇರೆ ಬೇರೆಯಾಗಿರುತ್ತವೆ. ಕೆಲವರು ಹಾಡನ್ನು ಕೇಳುವುದು, ತಂಗಾಳಿಯಲ್ಲಿ ತಿರುಗಾಟಕ್ಕೆ ಹೋಗುವುದು, ಹರಟೆ ಹೊಡೆಯುವುದು ಹೀಗೆ ಇಂತಹ ಮಾರೆಸಕಗಳ ಮೊರೆ ಹೋದರೆ, ಇನ್ನು ಕೆಲವರು ಹೆಚ್ಚು ಹೆಚ್ಚು ಸಿಗರೇಟು ಸೇದುವುದು, ಒಬ್ಬರೇ ಕಾಲಕಳೆಯುವುದು, ಹಗಲಿರುಳು ಕೆಲಸ ಮಾಡುವುದು ಇಂತಹ ಕೆಲವು ಮಾರೆಸಕಗಳನ್ನು ನಡೆಸುತ್ತಾರೆ. ಒತ್ತಡದಲ್ಲಿರುವಾಗ ಮೆದುಳು ಯಾವ ಮಾರೆಸಕದ ಕಡೆಗೆ ಹೋಗುತ್ತಿದೆ ಎಂಬುದನ್ನು ಕಂಡುಕೊಳ್ಳಬೇಕಿದೆ. ಮಾರೆಸಕಗಳು ಒಳ್ಳೆಯದಾಗಿದ್ದರೆ ಒತ್ತಡದಲ್ಲಿರುವಾಗ ಮೆದುಳಿಗೆ ಕೊಂಚ ಬಿಡುವನ್ನು ಕೊಟ್ಟಂತೆ. ಬಳಿಕ ಇದು ಕೆಲಸದ ಮೇಲೆ ನಿಗಾ ಇಡಲು ನೆರವಾಗುತ್ತವೆ. ಒಂದು ವೇಳೆ ಮಾರೆಸಕಗಳು ಕೆಡುಕಿನದ್ದಾಗಿದ್ದರೆ, ಒಂದು ಬಿಡುವನ್ನು ಕೊಡಬೇಕು. ಅದರಿಂದ ಹೊರಬರುವ ಪ್ರಯತ್ನಗಳನ್ನು ಮಾಡಬೇಕು.
ಮಾರೆಸಕದ ಕುರಿತು ಒಂದು ಅರಕೆಯಲ್ಲಿ ಅರಿಗರು ಹೀಗೆ ಹೇಳುತ್ತಾರೆ; ‘ಅದೊಂದು ಕಂಪನಿಯ ಮಾರಾಟಗಾರರ ತಂಡಕ್ಕೆ ಕೆಲವು ತಿಂಗಳುಗಳ ಮಾರಾಟದ ಗುರಿಯನ್ನು ಮುಟ್ಟಲಾಗಲಿಲ್ಲ. ತಮ್ಮ ಮಾರಾಟದ ಗುರಿಯನ್ನು ಮುಟ್ಟಲೇ ಬೇಕೆಂಬ ಒತ್ತಡಕ್ಕೆ ಒಳಗಾಗಿ ಅವರು ತಮ್ಮ ಕೈಕೆಳಗಿರುವ ತಂಡಗಳ ಕೆಲಸದ ಮೇಲೆ ಹೆಚ್ಚಿನ ನಿಗಾವಹಿಸಲು ಶುರುಮಾಡಿದರು. ಮಾರಾಟಗಾರರ ಹೆಚ್ಚಿನ ಹೊತ್ತು ಕೈಕೆಳಗಿನ ತಂಡಗಳ ಆಗುಹೋಗುಗಳನ್ನು ನೋಡುವುದರಲ್ಲಿ ಕಳೆಯಿತೇ ಹೊರತು, ಹೊರಗಿನ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನದ ಮಾರಾಟವನ್ನು ಹೇಗೆ ಹೆಚ್ಚಿಸಬಹುದು ಎಂಬ ಯೋಚನೆಯಲ್ಲಲ್ಲ. ಇದರಿಂದ ಮಾರಾಟ ಮತ್ತಶ್ಟು ಕುಗ್ಗಿತು, ಮಾರಾಟಗಾರರು ಮತ್ತಶ್ಟು ಒತ್ತಡಕ್ಕೆ ಒಳಗಾದರು’. ಒತ್ತಡದ ಇಂತಹ ಮಾರೆಸಕಗಳು ಒಬ್ಬರ ಇಲ್ಲವೇ ಒಂದು ತಂಡದ ಮಾಡುಗತನವನ್ನು ಕಡಿಮೆಗೊಳಿಸಿ ಮತ್ತಶ್ಟು ಒತ್ತಡಕ್ಕೆ ನೂಕುತ್ತವೆ.
ಒತ್ತಡದ ಮತ್ತೊಂದು ಕೆಡುಕಿನ ಮಾರೆಸಕವೆಂದರೆ ಹಿಮ್ಮೆಟ್ಟುವುದು. ಕೆಲಸದಿಂದ ಒತ್ತಡಕ್ಕೆ ಒಳಗಾದೊಡನೆ ಆ ಕೆಲಸದಿಂದ ಹಿಂದೆ ಸರಿಯುವುದು, ಇಲ್ಲವೇ ಹಿಂದೆ ಸರಿಯುವ ಪ್ರಯತ್ನ ನಡೆಸುವುದು, ಬೇರೊಂದು ಕೆಲಸಕ್ಕೆ ಜಾರಿಕೊಳ್ಳುವುದು. ಇದರಿಂದ ಕೆಲಸ ಮುಗಿಯುವುದಿಲ್ಲ, ಕೆಲಸದ ಗಡುವು ಹತ್ತಿರ ಬಂದಂತೆ ಅದು ಮತ್ತಶ್ಟು ಒತ್ತಡಕ್ಕೆ ಒಬ್ಬರನ್ನು ತಳ್ಳುತ್ತದೆ.
ಒತ್ತಡದಿಂದ ಹೆಚ್ಚು ಹೆಚ್ಚು ಕೆಲಸ ಮಾಡುವಂತಹ ಮಾರೆಸಕಗಳು ಕೂಡ ಆಗುತ್ತವೆ. ಕೆಲಸ ಮುಗಿದಿಲ್ಲ ಎಂಬ ಒತ್ತಡದಿಂದ ಹಗಲಿರುಳು ಎನ್ನದೆ ಹೆಚ್ಚು ಹೊತ್ತು ದುಡಿಮೆಯನ್ನು ನಡೆಸಿದರೆ ಮೆದುಳಿಗೆ ಹೆಚ್ಚು ಕೆಲಸವನ್ನು ಕೊಟ್ಟಂತೆ. ಇದು ಕೂಡ ಮೆದುಳಿನ ಮಾಡುಗತನವನ್ನು ಕಡಿಮೆಗೊಳಿಸುತ್ತದೆ.
ಹಾಗಾದರೆ ಒತ್ತಡದಿಂದ ಉಂಟಾಗುವ ಕೆಡುಕಿನ ಮಾರೆಸಕಗಳನ್ನು ಕಡಿಮೆಮಾಡಿಕೊಳ್ಳುವುದು ಹೇಗೆ?
ಒಂದು ನಿಟ್ಟುಸಿರನ್ನು ಬಿಡಿ. ಕೊಂಚ ಹೊತ್ತು ಬಿಡುವು ಕೊಡಿ. ಒತ್ತಡಕ್ಕೆ ಒಳಗಾದಾಗ ಇಲ್ಲವೇ ಒಳಗಾಗುತ್ತಿದ್ದೇವೆ ಎಂದು ತಿಳಿದಾಗ, “ಈ ಒತ್ತಡವನ್ನು ನಾನು ಹೇಗೆ ಸಂಬಾಳಿಸುತ್ತಿದ್ದೇನೆ? ಈ ಒತ್ತಡದ ಮಾರೆಸಕವೇನು?” ಎಂಬ ಕೇಳ್ವಿಗಳನ್ನು ಕೇಳಿಕೊಳ್ಳಿ. ಇದಕೆ ತಕ್ಕ ಉತ್ತರ ದೊರೆಯದೇ ಹೋದರೆ ಜೊತೆಕೆಲಸಗಾರರ ಇಲ್ಲವೇ ಗೆಳತಿ/ಗೆಳೆಯರ ನೆರವನ್ನು ಕೇಳಿ. ಒತ್ತಡದ ಬಗ್ಗೆ ತಿಳಿದುಕೊಂಡ ಮೇಲೆ ಅದರ ಮಾರೆಸಕವು ಒಳ್ಳೆಯದಾಗಿದ್ದರೆ ಮುಂದುವರಿಸಿ, ಒತ್ತಡದ ಕೆಲಸದ ನಡುವೆ ಒಂದೆರೆಡು ನಿಮಿಶ ಹಾಡು ಕೇಳುವುದು ಮಾರೆಸಕವಾಗಿದ್ದರೆ ಅದು ಮುಂದುವರಿಯಲಿ. ನಿಮ್ಮ ದಿನದ ವೇಳಾಪಟ್ಟಿಯಲ್ಲಿ ಬೇಕಾದರು ಅದನ್ನು ಸೇರಿಸಿಕೊಳ್ಳಬಹುದು. ಎತ್ತುಗೆಗೆ ‘ಒಂದು ಗಂಟೆ ಕೆಲಸ – ಮೂರು ನಿಮಿಶ ಹಾಡು – ಒಂದು ಗಂಟೆ ಕೆಲಸ…’ ಒಂದು ವೇಳೆ ಮಾರೆಸಕವು ಕೆಡುಕಿನದ್ದಾಗಿದ್ದರೆ, ‘ಇದರಿಂದ ಒತ್ತಡ ಹೆಚ್ಚುವುದೇ ಹೊರತು ಕಡಿಮೆಯಾಗುವುದಿಲ್ಲ’ ಎಂಬುದು ಮನದಟ್ಟಾಗಲಿ. ಆಗ ಅದಕ್ಕೆ ಬಗೆಹರಿಕೆಯನ್ನು ಮೆದುಳು ನೀಡುವುದು, ಯಾವುದಕ್ಕೂ ಗಟ್ಟಿಯಾದ ಮನಸ್ಸಿರಬೇಕು. ಒತ್ತಡದ ಒಳ್ಳೆಯ ಮಾರೆಸಕಗಳು ಕೆಲಸದ ಮಾಡುಗತನವನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ.
4. ಒಳ್ಳೆಯ ಬಳಗವೊಂದಿರಲಿ:
ಒತ್ತಡದಲ್ಲಿ ಇಲ್ಲದೇ ಇರುವ ಹೊತ್ತಿನಲ್ಲಿ ಜೊತೆ ಕೆಲಸಗಾರರು, ಗೆಳೆತಿ/ಗೆಳೆಯರು, ನೆಂಟರು ಹಾಗು ಮನೆಯರೊಡನೆ ಒಳ್ಳೆಯ ನಂಟಿನಲ್ಲಿರಬೇಕು. ನಮ್ಮ ಕೆಲಸ ಹಾಗು ನಡೆಯನ್ನು ಬೆಂಬಲಿಸುವ ಬಳಗವನ್ನು ಕಟ್ಟಿಕೊಂಡಿರಬೇಕು. ಒತ್ತಡದಲ್ಲಿರುವ ಹೊತ್ತಿನಲ್ಲಿ ನಂಬಿಕೆಯ ಆ ಬಳಗದವರ ಎದುರು ತಲ್ಲಣಗಳನ್ನು ಹಂಚಿಕೊಳ್ಳುವುದು ಒಳ್ಳೆಯದು. ಇದರಿಂದ ಮನಸ್ಸು ಹಗುರವಾಗುವುದಲ್ಲದೇ ಕೆಲಸವನ್ನು ಮುಂದುವರಿಸುವ ಬೆಂಬಲವು ಕೂಡ ಬಳಗದಿಂದ ದೊರೆಯುವುದು.
5. ಒತ್ತಡವನ್ನು ಸಂಬಾಳಿಸುವುದು ವಾಡಿಕೆಯಾಗಲಿ:
ಒಮ್ಮೆಲೆ ಯಾವುದೋ ದೊಡ್ಡ ಕೆಲಸದ ಒತ್ತಡಕ್ಕೆ ಸಿಕ್ಕೊಡನೆ ಅದನ್ನು ಸಂಬಾಳಿಸುವ ಪ್ರಯತ್ನ ಮಾಡಿದರೆ ಗೆಲುವು ಸಿಗುವುದಿಲ್ಲ. ಒಂದಾದ ಮೇಲೊಂದು ಕೆಲಸಗಳು ಬರುತ್ತಲೇ ಇರುತ್ತವೆ ಅದರೊಂದಿಗೆ ಸಣ್ಣದೋ, ದೊಡ್ಡದೋ ಒತ್ತಡವೆಂಬುದು ಇದ್ದೇ ಇರುತ್ತದೆ. ಆಗ ಈ ಒತ್ತಡವನ್ನು ಸಂಬಾಳಿಸುವ ಪ್ರಯತ್ನಗಳು ನಡೆಯುತ್ತಿರಲಿ. ಈ ವಾಡಿಕೆ ಮುಂದುವರಿದಂತೆ ಎಂತಹ ದೊಡ್ಡ ದೊಡ್ಡ ಒತ್ತಡಗಳನ್ನು ಸಂಬಾಳಿಸುವ ತಾಕತ್ತು ಬೆಳೆಯುತ್ತದೆ.
ಒತ್ತಡವನ್ನು ಸಂಬಾಳಿಸಲು ಬೇಕಾದ ಕೆಲವು ಅಡಿಕಟ್ಟಲೆಗಳು(Principles):
– ಒತ್ತಡವು ಒಂದು ಕೆಲಸದ ಮೇಲಿರುವ ಹೆಚ್ಚುಗಾರಿಕೆಯನ್ನು ತಿಳಿಸುತ್ತದೆಯೇ ಹೊರತು ಹೆದರಿಕೆಯಲ್ಲ ಎಂಬುದು ನೆನಪಿನಲ್ಲಿರಬೇಕು.
– ಕೆಲಸದ ಮೇಲೆ ಗಮನವಿರಲಿ, ಒತ್ತಡದಿಂದ ಉಂಟಾಗುತ್ತಿರುವ ತಲ್ಲಣಗಳತ್ತ ಹೆಚ್ಚಿನ ಗಮನ ಹೋಗದಿರಲಿ.
– ಒತ್ತಡದ ಮಾರೆಸಕಗಳ ಬಗ್ಗೆ ತಿಳಿದಿರಲಿ. ಕೆಡುಕಿನ ಮಾರೆಸಕಗಳನ್ನು ಹತ್ತಿಕ್ಕುವ ಪ್ರಯತ್ನವಿರಲಿ.
– ಒತ್ತಡವನ್ನು ಹೊರ ಚೆಲ್ಲಲು ಒಳ್ಳೆಯ ಬಳಗವೊಂದಿರಲಿ.
– ಈ ಕೆಲಸದೊತ್ತಡವು ಕೊನೆಯವರೆಗೆ ಇರುವುದಿಲ್ಲ ಎಂಬುದು ಮನವರಿಕೆಯಾಗಲಿ.
– ನಮ್ಮ ಹಿಡಿತದಲ್ಲಿ ಇಲ್ಲದ ಕೆಲಸಗಳ ಮೇಲೆ ಚಿಂತೆ ಬೇಡ.
– ಹೀಯ್ಯಾಳಿಸುವಂತಹ ಹಾಗು ಬೆನ್ನುತಟ್ಟದ ಬಳಗದಿಂದ ದೂರವಿರುವುದು ಒಳ್ಳೆಯದು.
ಒತ್ತಡದಿಂದ ತಪ್ಪಿಸಿಕೊಂಡು ಓಡಲು ಆಗುವುದಿಲ್ಲ. ಅದನ್ನು ಹಾಗೆಯೇ ಬಿಟ್ಟರೆ ಕೆಲಸದ ಮಾಡುಗತನವನ್ನೇ ನುಂಗಿಹಾಕುವಶ್ಟು ದೊಡ್ಡದಾಗಿ ಬೆಳೆಯುತ್ತದೆ. ಆದರೆ ಸಂಬಾಳಿಸಿಕೊಂಡರೆ ಕೆಲಸ ಮುಗಿಸಲು ನೆರವಾಗುತ್ತದೆ ಮತ್ತು ಮಾಡುಗತನವನ್ನು ಹೆಚ್ಚಿಸುತ್ತದೆ.
(ಮಾಹಿತಿ ಸೆಲೆ: hbr.org1, hbr.org2, hbr.org3)
(ಚಿತ್ರ ಸೆಲೆ: forum.nin.com, stress.lovetoknow.com)
1 Response
[…] ಸಂಬಾಳಿಸಿ, ಒತ್ತಡದ ಹುರುಪನ್ನು ಕೆಲಸದ ಮಾಡುಗತನವನ್ನು ಹೆಚ್ಚಿಸಲು ಬಳಸಬಹುದು ಇಲ್ಲವೇ ಆ ಹುರುಪನ್ನು […]