ಕಂಗೊಳಿಸಲಿದೆ ಹೊಸ ಹ್ಯುಂಡಾಯ್ ಕ್ರೇಟಾ
ಇತ್ತಿಚೀನ ದಿನಗಳಲ್ಲಿ ಇಂಡಿಯಾದಲ್ಲಿ ಮೇಲಿಂದ ಮೇಲೆ ಹೊಸ ಬಂಡಿಗಳು ಬರುತ್ತಲೇ ಇವೆ. ಕೆಲವು ಸೆಲೆಗಳ ಪ್ರಕಾರ ಈ ವರುಶ ಸುಮಾರು 53 ವಿವಿದ ಬಗೆಯ ಬಂಡಿಗಳು ನಮ್ಮ ಇಂಡಿಯಾದಲ್ಲಿ ಹೊರಬರಲಿದ್ದು, ಇದೇ ಮೊದಲ ಬಾರಿಗೆ ಇಶ್ಟೊಂದು ಕಾರುಗಳು ಒಂದೇ ವರುಶದಲ್ಲಿ ಬರುತ್ತಿರುವುದು ದಾಕಲೆ ಎನ್ನಲಾಗಿದೆ. ಇಲ್ಲಿಯವರೆಗೆ ಒಟ್ಟು 13ಕ್ಕೂ ಹೆಚ್ಚು ಬಗೆ ಬಗೆಯ ಬಂಡಿಗಳು ಮಾರುಕಟ್ಟೆಗೆ ಅಪ್ಪಳಿಸಿವೆಯಂತೆ. ಬರಲಿರುವ ನಾಗರಪಂಚಮಿ, ಗವ್ರಿ-ಗಣೇಶ, ದಸರೆ ಮುಂತಾದ ಹಬ್ಬದ ದಿನಗಳಲ್ಲಿ ಸಾಲು ಸಾಲು ಕಾರುಗಳು ಬಿಡುಗಡೆಗೊಳ್ಳುವುದು ದಿಟಗೊಂಡಿದೆ. ತಾಮುಂದು ನಾಮುಂದು ಎಂದು ಟಾಟಾ, ಮಹೀಂದ್ರಾ, ಸುಜುಕಿ, ರೆನೋ, ಪೋರ‍್ಡ್ ಕೂಟದವರು ಸೇರಿದಂತೆ ಹಲವರು ಹೊಸ ಹೊಸ ಬಂಡಿಗಳನ್ನು ಸಿದ್ದಗೊಳಿಸಿ ಬೀದಿಗಿಳಿಸುವ ತರಾತುರಿಯಲ್ಲಿದ್ದಾರೆ. ಇನ್ನೂ ಕೆಲ ಕೂಟದವರು ತಮ್ಮ ಹಳೆಯ ಬಂಡಿಗಳಿಗೆ ಹೊಸ ಮೊಗ ತೊಡಿಸಿಯೋ ಇಲ್ಲವೇ ಒಳಮಯ್‌ಗಳಲ್ಲಿ ಕಿರು ಬದಲಾವಣೆ ಮಾಡಿ ತಮ್ಮ ಅದ್ರುಶ್ಟವನ್ನು ಒರೆಹಚ್ಚಲಿದ್ದಾರೆ. ಈ ಎಲ್ಲ ಪ್ರಮುಕ ಹೊಸ ಬಂಡಿಗಳ ಮೇಲಿನ ಪೂರ‍್ತಿ ನೋಟವನ್ನು ಹೊನಲು ಮೂಲಕ ನಿಮ್ಮ ಮುಂದಿಡಲಿದ್ದೇವೆ.
ಹ್ಯುಂಡಾಯ್(HYUNDAI) ಇಂಡಿಯಾ ಎರಡನೇಯ ದೊಡ್ಡ ಬಂಡಿ ತಯಾರಕ ಕೂಟ. ಇಂಡಿಯಾದ ಕಾಲು ಬಾಗಕ್ಕಿಂತ ಹೆಚ್ಚಿನ ಮಾರುಕಟ್ಟೆಯನ್ನು ಹ್ಯುಂಡಾಯ್ ಹೊಂದಿದೆ. ಈ ಮುನ್ನಡೆ ಕಾಯ್ದುಕೊಳ್ಳಲು ಹ್ಯುಂಡಾಯ್ ಇಂದಿನಿಂದ ಹೊಸದಾದ ಕ್ರೇಟಾ (CRETA) ಎಂಬ ಬಂಡಿಯನ್ನು ಮಾರುಕಟ್ಟೆಗೆ ತರುತ್ತಿದೆ. 3 ವರುಶಗಳ ಹಿಂದೆ ಡಸ್ಟರ್ (Duster) ಹೆಸರುಳ್ಳ ಬಂಡಿ ಮೂಲಕ ರೆನೋ ಕೂಟ ಇಂಡಿಯಾದ ಕೊಳ್ಳುಗರಲ್ಲಿ ಕಿರು ಹಲಬಳಕೆ ಬಂಡಿಗಳ ಹುಚ್ಚನ್ನು ಎಬ್ಬಿಸಿತ್ತು. ಇದರ ಗೆಲುವಿನಿಂದ ಎದುರಾಳಿ ಪೋರ‍್ಡ್(Ford) ಕೂಟದವರು ಎಕೊಸ್ಪೋರ‍್ಟ್ (Eco sport) ತಯಾರಿಸಿ ತಮ್ಮ ಬಲವನ್ನು ತೋರಿಸಿದ್ದರು. ಇವೆರಡು ಕಾರುಗಳು ತಾನೋಡದ ಕಯ್ಗಾರಿಕೆಯಲ್ಲಿ ಸಾಕಶ್ಟು ಸದ್ದು ಮಾಡಿ ಗೆದ್ದು ಮುನ್ನಲೆಯಲ್ಲಿವೆ. ಹೆಚ್ಚಾಗಿ ಕಿರು ಕಾರುಗಳತ್ತಲೇ ಚಿತ್ತ ನೆಟ್ಟಿದ್ದ ಹ್ಯುಂಡಾಯ್ ಈಗ ಕ್ರೇಟಾ ಹೊರತರುವ ಮೂಲಕ ಇವರಿಗೆ ಸಡ್ಡು ಹೊಡೆಯಲು ಮುಂದಾಗಿದೆ.
ಯಾವುದೇ ಒಂದು ಬಂಡಿಯನ್ನು ತಯಾರಿಸಿ ಮಾರಾಟಕ್ಕೆ ಅಣಿಗೊಳಿಸಲು ಏನಿಲ್ಲವೆಂದರೂ ಸುಮಾರು 2-3 ವರುಶಗಳು ತಗಲುತ್ತವೆ. ಬಂಡಿ ಈಡುಗಾರಿಕೆ (Design), ಬಿಣಿಗೆಯನ್ನು ಅಣಿಗೊಳಿಸುವುದು, ಬಿಡಿಬಾಗ ತಯಾರಕರೊಂದಿಗೆ ಸೇರಿ ಬಂಡಿಯ ಎಲ್ಲ ಬಾಗಗಳನ್ನು ಸಜ್ಜುಗೊಳಿಸಿ ಕೊನೆಯಲ್ಲಿ ಸರಕಾರ ತೀರ‍್ಮಾನಿಸಿದ ಕೆಡುಗಾಳಿ ಮಟ್ಟಗಳಿಗೆ ಹೊಂದುವಂತೆ ವಿವಿದ ಒರೆಹಚ್ಚುವಿಕೆಯನ್ನು ಪೂರ‍್ಣಗೊಳಿಸಿ ಮಾರಾಟಕ್ಕೆ ಹೋಗುವುದು – ಈ ಎಲ್ಲ ಕೆಲಸಗಳು ಇದರಲ್ಲಿ ಸೇರಿವೆ. ಇದಕ್ಕೆಂದೇ ಕೊರಿಯಾದ ತನ್ನ ಪ್ರಮುಕ ಅರಕೆಮನೆಯಲ್ಲಿ ಹ್ಯುಂಡಾಯ್ ಕ್ರೇಟಾದ ಈಡುಗಾರಿಕೆ ಆರಂಬಿಸಿತ್ತು. ಹಯ್ದ್ರಾಬಾದ್‌ನಲ್ಲಿರುವ ಹ್ಯುಂಡಾಯ್ ಇಂಡಿಯಾದ ಬಿಣಿಗೆಯರಿಗರು ಇದರಲ್ಲಿ ಜೊತೆಗೂಡಿದ್ದರು. ಈ ಮುಂಚೆ ಸೆಪ್ಟೆಂಬರ‍್-ಅಕ್ಟೋಬರ್ ತಿಂಗಳಿನಲ್ಲಿ ಕ್ರೇಟಾ ಬೀದಿಗಿಳಿಸುವ ಯೋಚನೆ ಹೊಂದಿದ್ದ ಹ್ಯುಂಡಾಯ್ ತನ್ನ ನೇರ ಎದುರಾಳಿ ಮಾರುತಿ ಸುಜುಕಿ ಕೂಟ ಎಸ್-ಕ್ರಾಸ್ (S-Cross) ಬಂಡಿಯೊಂದನ್ನು ಹೊರತರುತ್ತಿರುವ ಹಿನ್ನಲೆಯಲ್ಲಿ, ಜುಲಾಯ್ ತಿಂಗಳೇ ತಕ್ಕದು ಎಂದು ನಿರ‍್ದಾರ ಮಾಡಿತು. ಅದಕ್ಕೆ ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಂಡು ಜುಲಾಯ್ 21ರ ಮುಹೂರ‍್ತವನ್ನು ನಿಗದಿಪಡಿಸಿ ಸುದ್ದಿ ಮಾದ್ಯಮಗಳಿಗೆ ತಿಳಿಸಿತು. ಬಿಡುಗಡೆಗೆ ಮುನ್ನವೇ ಎಲ್ಲೆಡೆ ಸದ್ದು ಮಾಡುತ್ತಿರುವ ಕ್ರೇಟಾ ಬಂಡಿಯ ಸುದ್ದಿ ಇದರಿಂದ ಇನ್ನೂ ಹೆಚ್ಚತೊಡಗಿದೆ.
ಒಂದು ತಿಂಗಳ ಹಿಂದೆಯೇ ಕ್ರೇಟಾಗೋಸ್ಕರವೇ ಮಿಂದಾಣವೂ ಕೂಡ ಆರಂಬಗೊಂಡಿದೆ. ಮಿಂದಾಣದಲ್ಲಿ ಮೊದಲು ಕ್ರೇಟಾದ ಕಯ್ತಿಟ್ಟವನ್ನು ಹಂಚಿಕೊಂಡು, ಕಳೆದೆರಡು ವಾರಗಳಲ್ಲಿ ಬಂಡಿಯ ವಿವಿದ ತಿಟ್ಟಗಳು ಮೂಡಿ ಬಂದಿವೆ. ಅದು ಅಲ್ಲದೇ ಕ್ರೇಟಾದ ಎಲ್ಲ ವಿಶೇಶತೆಗಳನ್ನು ಹ್ಯುಂಡಾಯ್ ಕೂಟ ಮಿಂದಾಣದ ಮೂಲಕ ಹೊರಹಾಕಿದೆ. ಟ್ವಿಟ್ಟರ್, ಪೇಸ್ಬುಕ್ ಮುಂತಾದ ಸಾಮಾಜಿಕ ತಾಣಗಳಲ್ಲೂ ಕ್ರೇಟಾ ಬಂಡಿಯ ಬಗ್ಗೆ ಬಿಸಿ, ಬಿಸಿ ಮಾತುಕತೆಗಳು ನಡೆಯುತ್ತಿವೆ. ಈಗಾಗಲೇ ಮುಂಗಡ ಕಾಯ್ದಿಸಿರುವಿಕೆ ಆರಂಬಿಸಿರುವ ಹ್ಯುಂಡಾಯ್ ಕ್ರೇಟಾದ ಬರಾಟೆ ಹೇಗಿದೆಯೆಂದರೆ 28,500 ಮಂದಿ ಹ್ಯುಂಡಾಯ್ ಮಳಿಗೆಗೆ ಬೇಟಿ ಇತ್ತು ಕ್ರೇಟಾದ ಬಗ್ಗೆ ವಿಚಾರಣೆ ನಡೆಸಿದರೆ, 10,000 ಮಂದಿ ಆಗಲೇ ರೂ.40/50 ಸಾವಿರ ಮುಂಗಡ ನೀಡಿ ತಮ್ಮ ಕೊಳ್ಳುವಿಕೆಯನ್ನು ಕಚಿತಪಡಿಸಿದ್ದಾರೆ. ಇಂಡಿಯಾದಲ್ಲಿ ಹ್ಯುಂಡಾಯ್ ಹೆಸರುವಾಸಿತನ ಎಶ್ಟಿದೆ ಎನ್ನಲು ಇದು ಕನ್ನಡಿ.
ಕ್ರೇಟಾದ ಬಿಣಿಗೆ, ಸಾಗಣಿ, ಮಯ್ಮಾಟ, ಬೆಲೆ ಮತ್ತು ಇತರೆ ವಿಶೇಶಗಳು:
ಬಿಣಿಗೆ:
ಇತ್ತಿಚೀನ ಎಲ್ಲ ಬಂಡಿ ತಯಾರಕರು ನೀಡುವಂತೆ ಕ್ರೇಟಾ ಕೂಡ ಡೀಸೆಲ್, ಪೆಟ್ರೋಲ್‌ನ ಎರಡೂ ಬಗೆಗಳಲ್ಲಿ ಬರುತ್ತಿದೆ. ಡೀಸೆಲ್‌ನಲ್ಲಿ 1.4, 1.6ಲೀಟರ್ ಅಳತೆಯ 2 ಕಸುವುಗೂಡಿನ (Powertrain) ಆಯ್ಕೆಗಳು ಮತ್ತು ಪೆಟ್ರೋಲ್‌ನಲ್ಲಿ 1.6 ಲೀಟರ‍್‌ನ ಒಂದು ಕಸುವುಗೂಡು ಇರಲಿದೆ. ಮೂರು ಬಿಣಿಗೆ ಆಯ್ಕೆಗಳಿರುವ ಕ್ರೇಟಾ ಬೇಸ್, ಎಸ್, ಎಸ್+, ಎಸ್‌ಎಕ್ಸ್, ಎಸ್‌ಎಕ್ಸ್+, ಎಸ್‌ಎಕ್ಸ್‌ಒ ಎಂದು ಆರು ಮಾದರಿಗಳಲ್ಲೂ ಸಿಗಲಿದೆ (Base, S, S+,SX ,SX+ ,SXO). ಡೀಸೆಲ್ ಬಿಣಿಗೆಯ ಕ್ರೇಟಾ 128 ಪಿಎಸ್ ಕಸುವು ನೀಡಿ 260 ನ್ಯೂಟನ್ ಮೀಟರ್ ತಿರುಗುಬಲ ಉಂಟು ಮಾಡಲಿದೆ. ಪೆಟ್ರೋಲ್ ಕ್ರೇಟಾದ ಬಿಣಿಗೆಯಿಂದ 123 ಪಿಎಸ್ ಕಸುವು ಮತ್ತು 155 ನ್ಯೂಟನ್ ಮೀಟರ್ ತಿರುಗುಬಲ ಹೊರಬರಲಿದೆ.
ಸಾಗಣಿ:
1.6 ಲೀಟರ್ ಅಳತೆಯ ಬಿಣಿಗೆಯ ಡೀಸೆಲ್ ಬಂಡಿಗಳೆಲ್ಲವೂ 6 ವೇಗದ ಓಡಿಸುಗನಿಡಿತದ ಸಾಗಣಿ ಹೊಂದಿರಲಿವೆ. 1.6 ಲೀಟರ್ ನ ಡೀಸೆಲ್ ಎಸ್‌ಎಕ್ಸ್+ ಕ್ರೇಟಾದಲ್ಲಿ ಮಾತ್ರ 6 ವೇಗದ ತನ್ನಿಡಿತದ ಸಾಗಣಿ ಅಳವಡಿಸಲಾಗಿದೆ. 1.4 ಅಳತೆಯ ಡೀಸೆಲ್ ಮತ್ತು ಪೆಟ್ರೋಲ್ ಬಿಣಿಗೆಯ ಕ್ರೇಟಾಗಳೆಲ್ಲವೂ 5 ವೇಗದ ಓಡಿಸುಗನಿಡಿತದ ಸಾಗಣಿ ಪಡೆದಿರುತ್ತವೆ.
ಮಯ್ಮಾಟ:
ಮಯ್ಮಾಟದಲ್ಲಿ ಹ್ಯುಂಡಾಯ್ ಕ್ರೇಟಾ ಅಂದವಾಗಿದೆ. ಕ್ರೇಟಾ ಹಿಂಬಾಗ ಅಗಲವಾಗಿದ್ದು ಬಿಣಿಗವಸು ದೊಡ್ದದಾಗಿರುವುದರಿಂದ ದೊಡ್ಡ ಹಳಬಳಕೆಯ ಬಂಡಿಯಂತೆ ಕಾಣುತ್ತದೆ. ಒರಣವಾಗಿರುವ ಹಿಂದೀಪಗಳು (Tail lamp) ಬಂಡಿಯತ್ತ ಕಣ್ಸೆಳೆಯುವಂತೆ ಮಾಡಲಿವೆ. ಬಂಡಿಯ ಒಳಗಡೆಯು ಸಾಕಶ್ಟು ವಿಶೇಶತೆಗಳು ಕಾಣಸಿಗುತ್ತವೆ. ಕಯ್ ಕಾಲು ಹಾಯಾಗಿ ಚಾಚಿಕೊಂಡು ಕೂಡಲು ಜಾಗವಿದೆ. ತಲೆಯೂರುಕಗಳು ನಿಮಗಿಶ್ಟದಂತೆ ಹೊಂದಿಸಿಕೊಂಡು ಸಾಗಬಹುದು. ಎಸ್‌ಎಕ್ಸ್(ಒ) ಮಾದರಿಗಳಲ್ಲಿ ತೋರುಮಣೆಗೆ 7 ಇಂಚಿನ ಸೋಕು ತೆರೆ ನೀಡಲಾಗಿದೆ. ಹವಾಮಾನ ಹಿಡಿತದಲ್ಲಿಟ್ಟುಕೊಳ್ಳಲು ತಿರುಗು ಗುಂಡಿ (Climate control knob), ಬಂಡಿಯನ್ನು ಶುರು ಮಾಡಬಹುದಾದ ಒತ್ತು ಗುಂಡಿ, ಹಿನ್ನೋಟದ ತಿಟ್ಟಕ (Rear view Mirror), ತಲುಪುದಾರಿ ಏರ‍್ಪಾಟು, ಹಿಂದುಗಡೆ ಕೂಡುವ ಪಯಣಿಗರಿಗೆ ಕುಳಿರುಪೆಟ್ಟಿಗೆಯ ಏರ‍್ಪಾಟು, ಎತ್ತರಕ್ಕೆ ತಕ್ಕಂತೆ ಜೋಡಿಸಿಕೊಳ್ಳಬಹುದಾದ ಮಿಂತಿಗುರಿ ಇದರ ಮೂಲಕವೇ ರೇಡಿಯೊ, ಅಲೆಯುಲಿಗಳನ್ನು ಹಿಡಿತದಲ್ಲಿಡಬಹುದಾದ ವಿಶೇಶತೆಗಳು ಇದರಲ್ಲಿ ಸೇರಿವೆ. ಬಂಡಿಯಲ್ಲಿ ಕಾಪಿಗೂ ಸಾಕಶ್ಟು ಗಮನ ನೀಡಲಾಗಿದೆ. 6 ಗಾಳಿಚೀಲಗಳು, ಸಿಲುಕದ ತಡೆತದ ಏರ‍್ಪಾಟು (Anti-Lock Brake System) ಇವುಗಳು ಕ್ರೇಟಾದಲ್ಲಿ ಅಳವಡಿಸಿದ್ದಾರೆ. ಹ್ಯುಂಡಾಯ್ ಕ್ರೇಟಾ ಅಂದದ ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದೆ. ಇದರಲ್ಲಿ ಬಿಳಿ, ಕೆಂಪು, ಬೆಳ್ಳಿ ಬಣ್ಣಗಳು ಮುಕ್ಯವಾದವು.ಇಂಡಿಯಾದ ಹಲವೆಡೆ 2.5 ಲಕ್ಶ ಕಿಲೋಮೀಟರ್ ಓಡಾಟ ನಡೆಸಿ ಕ್ರೇಟಾ ಒರೆಹಚ್ಚಿದ್ದು ಇನ್ನೊಂದು ವಿಶೇಶ.
ಪಯ್ಪೋಟಿ:
ಈ ಮೊದಲೇ ತಿಳಿಸಿದಂತೆ ಡಸ್ಟರ್ ಬಂಡಿಯೇ ಕ್ರೇಟಾದ ನೆರ ಎದುರಾಳಿ ಎಂದು ಬಿಂಬಿಸಲಾಗಿದೆ. ಕಸುವು ಮತ್ತು ತಿರುಗುಬಲಗಳ ವಿಶಯದಲ್ಲಿ ಕ್ರೇಟಾ ಡಸ್ಟರ‍್‌ಗಿಂತ ಮುಂದಿದೆ. ಉದ್ದ, ಅಗಲ, ಎತ್ತರ ಮುಂತಾದ ಆಯಗಳಲ್ಲಿ ಡಸ್ಟರ‍್‌ಸಾಕಶ್ಟು ದೊಡ್ಡದಿದೆ. 22ಕಿ.ಮೀ ಪ್ರತಿ ಲೀಟರ‍್‌ಗೆ ಸಾಗುವ ಡೀಸೆಲ್ ಕ್ರೇಟಾ 19.64 ಕಿ.ಮೀ ಸಾಗುವ ಡಸ್ಟರ್ ಅನ್ನು ಹಿಂದಿಕ್ಕಿದೆ. ಲೀಟರ್ ಪೆಟ್ರೋಲ್ ವೊಂದಕ್ಕೆ ಕ್ರೇಟಾ 15 ಕಿ.ಮೀ.ಸಾಗಿದರೆ, ಡಸ್ಟರ್ 13 ಕಿ.ಮೀ ಮಾತ್ರ ಓಡಬಲ್ಲುದು.
ಬೆಲೆ:
ಡಸ್ಟರ್ ಬಂಡಿಯನ್ನು ನೆನಪಿನಲ್ಲಿಟ್ಟುಕೊಂಡೇ ಕ್ರೇಟಾದ ಬೆಲೆಯ ತೀರ‍್ಮಾನ ಕಯ್ಗೊಂಡಿದೆ ಹ್ಯುಂಡಾಯ್. ಪೆಟ್ರೋಲ್ ಕ್ರೇಟಾ ಸುಮಾರು 8.6 ಲಕ್ಶ ರೂ.ಗಳಿಂದ 11.3 ಲಕ್ಶಗಳಾಗಿರಲಿದೆ. 1.4 ಲೀಟರ್ ಬಿಣಿಗೆಯ ಡೀಸೆಲ್ ಕ್ರೇಟಾ 9.5 ಲಕ್ಶದಿಂದ 11.5 ಲಕ್ಶ ರೂ.ಗಳಲ್ಲಿ ಕೊಳ್ಳಬಹುದು. 1.6 ಲೀಟರ್ ಡೀಸೆಲ್ ಬಿಣಿಗೆಯ ಕ್ರೇಟಾಗೆ ನೀವು ಸುಮಾರು 11.9 ಲಕ್ಶ ರೂಪಾಯಿಗಳಿಂದ 14 ಲಕ್ಶಗಳವರೆಗೆ ಕೊಡಬೇಕಾಗಬಹುದು. ಮುಂಗಡ ಕಾಯ್ದಿರಿಸಿ ಕೊಳ್ಳುಗರು 40 ರಿಂದ 50 ಸಾವಿರ ರೂಪಾಯಿಗಳನ್ನು ತೆರಬೇಕಾಗುತ್ತದೆ. ಇಲ್ಲಿ ನೀಡದ ಬೆಲೆಗಳು ಅಂದಾಜು ಬೆಲೆಗಳಾಗಿದ್ದು, ಆಯಾ ನಾಡಿನ ರಸ್ತೆ ತೆರಿಗೆಗೆ ತಕ್ಕಂತೆ ಬದಲಾಗಬಹುದು.
ಕೊಳ್ಳಲು ಆಸಕ್ತಿ ಇದ್ದವರು www.hyundaicreta.com ಈ ಮಿಂದಾಣದಲ್ಲಿ ಹೆಚ್ಚಿನ ವಿವರ ಪಡೆದು ಕೊಳ್ಳಬಹುದು. ಮಂದಿಯ ಮೆಚ್ಚುಗೆಯ ಕಾರುಗಳನ್ನು ತಯಾರಿಸುತ್ತ ಹೆಸರುಗಳಿಸಿರುವ ಹ್ಯುಂಡಾಯ್ , ಕ್ರೇಟಾ ಮಾದರಿ ಮೂಲಕ ಮತ್ತೊಂದು ಗೆಲುವಿನ ಕತೆ ಮುಂದುವರಿಸಲಿ.
(ತಿಟ್ಟಸೆಲೆ: hyundaicreta.com)
Reblogged this on nagarajbhadra.