ಟಾಟಾ ನೆಕ್ಸಾನ್ – ಬಂದಿದೆ ಮತ್ತೊಂದು SUV

– ಜಯತೀರ‍್ತ ನಾಡಗವ್ಡ.

ಬಾರತದ ಮಾರುಕಟ್ಟೆಯಲ್ಲಿ ಕಿರು ಆಟೋಟದ ಬಳಕೆಯ ಬಂಡಿಗಳ(SUV) ಸುಗ್ಗಿ ಮುಗಿಯುತ್ತಲೇ ಇಲ್ಲವೆನಿಸುತ್ತದೆ. ಡಸ್ಟರ್, ಎಕೋಸ್ಪೋರ‍್ಟ್ಸ್, ಕ್ರೇಟಾ, ಬ್ರೆಜಾ, ಕಂಪಾಸ್, ಡಬ್ಲ್ಯೂಆರ‍್‌ವಿ ಹೀಗೆ ಹೀಗೆ ಸಾಲು ಕಿರು ಆಟೋಟದ ಬಳಕೆ ಬಂಡಿಗಳು ಮಾರುಕಟ್ಟೆಗೆ ಬಂದು ಮಂದಿ ಮೆಚ್ಚುಗೆಗಳಿಸುತ್ತಿವೆ. ಇದಕ್ಕೆ ತಾವೇನು ಹಿಂದೆ ಬಿದ್ದಿಲ್ಲ ಎಂಬಂತೆ ಇದೇ ವರುಶ ಟಾಟಾ ಹೆಕ್ಸಾ ಎಂಬ ಆಟೋಟದ ಬಳಕೆಯ ಬಂಡಿಯನ್ನು ಹೊರತಂದಿತ್ತು. ಅದರ ಹಿಂದೆಯೇ ಈಗ ನೆಕ್ಸಾನ್(Nexon) ಎಂಬ ಹೊಸ ಬಂಡಿಯನ್ನು ಮಾರುಕಟ್ಟೆಗೆ ತಂದಿದೆ. ನೆಕ್ಸಾನ್ ಬಂಡಿಯ ಬಗ್ಗೆ ಎಲ್ಲಾ ಮಾಹಿತಿ ಮುಂದಿನ ಸಾಲುಗಳಲ್ಲಿ.

ಬಿಣಿಗೆ ಮತ್ತು ಸಾಗಣಿ(Engine and Transmission):

ಈಗಾಗಲೇ ಟಾಟಾ ಬಂಡಿಗಳಲ್ಲಿ ಅಳವಡಿಸಲಾಗಿರುವ 3 ಉರುಳೆಗಳ 1.2 ಲೀ.ರೆವೋಟ್ರಾನ್(Revotron) ಪೆಟ್ರೋಲ್ ಬಿಣಿಗೆ ನೆಕ್ಸಾನ್‌ನ ಪೆಟ್ರೋಲ್ ಬಂಡಿಗಳನ್ನು ಬಲಪಡಿಸಲಿದೆ. ರೆವೋಟ್ರಾನ್ ಬಿಣಿಗೆ 110 ಕುದುರೆಬಲದ ಕಸುವು ನೀಡಿ, 170 ನ್ಯೂಟನ್ ಮೀಟರ್ ತಿರುಗುಬಲ ಉಂಟು ಮಾಡಲಿದೆ. ಹೊಚ್ಚ ಹೊಸದಾಗಿ ಹೊರತಂದಿರುವ 1.5ಲೀ. ರೆವೋಟಾರ‍್ಕ್ ಡೀಸೆಲ್ ಬಿಣಿಗೆ 110 ಕುದುರೆಬಲದ ಕಸುವು ಮತ್ತು 260 ನ್ಯೂಟನ್ ಮೀಟರ್. ಎರಡಕ್ಕೂ 6-ವೇಗದ ಓಡಿಸುಗನ ಹಿಡಿತದ ಸಾಗಣಿ (6-Speed Manual Transmission) ಅಳವಡಿಸಲಾಗಿದೆ.

ಮೈಮಾಟ:

4ಮೀಟರ್‌ಗಳಶ್ಟು ಉದ್ದದ ನೆಕ್ಸಾನ್, 1811 ಮಿಲಿಮೀಟರ್‌ಗಳಶ್ಟು ಅಗಲ ಮತ್ತು 1607 ಮಿಲಿಮೀಟರ್‌ಗಳಶ್ಟು ಎತ್ತರವಾಗಿದೆ. 209 ಮಿಲಿಮೀಟರ್‌ನ ನೆಲತೆರವು(Ground Clearance), 16 ಇಂಚಿನ ಗಾಲಿಗಳು ನೆಕ್ಸಾನ್ಗೆ ದಿಟ್ಟವಾದ ಎಸ್‌ಯುವಿ ನೋಟ ತಂದುಕೊಟ್ಟಿವೆ. ಜೇನುಗೂಡಿನಾಕಾರದ ಮುನ್ಕಂಬಿ ತೆರೆ(Front Grill), ಇದನ್ನು ಸುತ್ತುವರೆದ ಕ್ರೋಮ್‌ನ ಹೊರಗೆರೆ ನೋಡುಗರನ್ನು ಹಿಡಿದಿಡುತ್ತವೆ. ಬೆಳ್ಳಿಯ ಬಣ್ಣದ ಬಂಡಿಯ ಮೇಲ್ಬಾಗ, ನೆಕ್ಸಾನ್ ಬಂಡಿಗೆ ಮೆರುಗು ಒದಗಿಸಿದೆ. ಹಿಂಬದಿಯಲ್ಲಿ ಮೊನಚಾದ ತಿರುವುಗಳು ನೆಕ್ಸಾನ್ ಬಂಡಿಗೆ ಸರಿಯಾಗಿ ಹೊಂದುತ್ತವೆ. ದುಂಡನೆಯ ಗಾಲಿ ಕಮಾನುಗಳಿಂದ(Wheel Archs) ಕೂಡಿದ ನೆಕ್ಸಾನ್ ಇತರೆ ಎಸ್‌ಯುವಿಗಳಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ.

ಬಂಡಿಯ ಒಳಹೊಕ್ಕರೆ, ಕಾಣಸಿಗುವುದು ಅಪ್ಪಟ ಆಟೋಟದ ಬಂಡಿಯ ನೋಟ. ಓಡಿಸುಗರು ತಮ್ಮ ಎತ್ತರಕ್ಕೆ ತಕ್ಕಂತೆ ಜೋಡಿಸಬಲ್ಲ ಮಿಂತಿಗುರಿ(PowerSteering), ದೂರದಳಕ(Odometer) ಮತ್ತು ಓಟದಳಕಗಳು(Speedometer) ಜೆಸ್ಟ್, ಟಿಯಾಗೋ ಬಂಡಿಯಿಂದಲೇ ಪಡೆಯಲಾಗಿದೆ. ಹೊಚ್ಚ ಹೊಸದಾದ 6.5 ಇಂಚಿನ ಹಾರ‍್ಮನ್ ತಿಳಿನಲಿ ಏರ‍್ಪಾಟು(Infotainment System) ಒಳ್ಳೆಯ ಗುಣಮಟ್ಟದ್ದಾಗಿದೆ. ಅಂಡ್ರಾಯ್ಡ್ ಆಟೋ ಮೂಲಕ ಇದನ್ನು ಸವಾರರು ತಮ್ಮ ಚೂಟಿಯುಲಿಗೆ(Smart Phone) ಜೋಡಿಸಿಕೊಳ್ಳಬಹುದಾಗಿದೆ. ಮುಂಬರುವ ದಿನಗಳಲ್ಲಿ ಆಪಲ್ ಕಾರ್‌ಪ್ಲೇ ಜೊತೆಗೂ ಸೇರಿಸಿಕೊಳ್ಳಬಹುದಾದ ಏರ‍್ಪಾಟು ಸಿಗಬಹುದೆಂಬ ಸುದ್ದಿಯಿದೆ. 3 ಬಣ್ಣಗಳಿಂದ ಮಾಡಲ್ಪಟ್ಟ ನೆಕ್ಸಾನ್ ತೋರುಮಣೆ(Dash board) ಅಚ್ಚುಕಟ್ಟಾಗಿದ್ದರೂ, ದೊಡ್ಡ ಹಿರಿಮೆಯ ಬಂಡಿಗಳಶ್ಟು ಚೊಕ್ಕವಾಗಿಲ್ಲ. ಓಡಿಸುಗನ ಪಕ್ಕದಲ್ಲಿ ನೀರು, ಕಾಪಿ ಮುಂತಾದ ದೊಡ್ಡ ಲೋಟಗಳ ಸೇರುವೆ(Holder) ನೀಡಲಾಗಿದೆ. ಈ ಬಂಡಿಯಲ್ಲಿ ದೊಡ್ಡದಾದ ತಂಪಿನ ಸರಕುಗೂಡನ್ನು(Cooled Glovebox) ಒದಗಿಸಿದ್ದು ಮೆಚ್ಚುವಂತದ್ದೇ. ಈ ಗೂಡಿನ ಮೇಲ್ಬಾಗದಲ್ಲಿ ನಿಮ್ಮ ಚೂಟಿ ಎಣ್ಣುಕಗಳನ್ನು(Laptop) ಸೇರಿಸಲು ಜಾಗ ಮಾಡಿಕೊಟ್ಟಿದ್ದಾರೆ. ಈ ಸರಕುಗೂಡಿನ ಮುಚ್ಚಳ ತೆರೆದರೆ ಲೋಟವೊಂದನ್ನಿಡಲು ಸೇರುವೆ ಕೂಡ ಇದೆ. ಮುಂಬದಿಯ ಎರಡು ಬಾಗಿಲಿನಲ್ಲಿ ದೊಡ್ಡ ನೀರಿನ ಬಾಟಲಿಗಳನ್ನಿಡಲು  ಜಾಗವಿದೆ.

ಮಳೆಗಾಲದಲ್ಲಿ ನೆರವಾಗುವ ಕೊಡೆ ಸೇರಿಸಿಡಲು ಸೇರುವೆ, ಒದ್ದೆಯಾದ ಕೊಡೆಯಿಂದ ನೀರು ಬಸಿದು ಹೋಗಲು ಚಿಕ್ಕದಾದ ಕವಲು ನೀಡಿ ಈಡುಗಾರಿಕೆಯಲ್ಲಿ(Design) ಜಾಣ್ಮೆ ತೋರಿದೆ ಟಾಟಾ ಕೂಟ. ಓಡಿಸುಗನ ಪಕ್ಕದ ತಿರುಗು ಗುಂಡಿ ಮೂಲಕ ಬಂಡಿಯನ್ನು ಇಕೋ, ಸ್ಪೋರ‍್ಟ್ ಮತ್ತು ಸಿಟಿ ಎಂಬ 3 ಬಗೆಗಗಳ್ಲಲಿ ಒಂದನ್ನು ಆಯ್ಕೆ ಮಾಡಿಕೊಂಡು, ದಾರಿಗೆ ತಕ್ಕಂತೆ ಓಡಿಸಿಕೊಂಡು ಹೋಗಬಹುದು. ಆದರೆ ಬಂಡಿಯಲ್ಲಿ ನೀಡಲಾದ ಕೆಲವು ಒತ್ತುಗುಂಡಿಗಳು ಓಡಿಸುಗನ ಕೈಗೆಟಕುವ ಮಟ್ಟದಲ್ಲಿಲ್ಲ. ಮುಂಬದಿಯಲ್ಲಿ ಕೂರುವವರಿಗೆ ಸಾಕಶ್ಟು ಕಾಲು ಚಾಚು, ತಲೆಯೂರಲು ಜಾಗ ಮಾಡಕೊಡಲಾಗಿದೆ. ಇದರಿಂದ ದೂರದ ಪಯಣ ಹಿತವಾಗಿರಲಿದೆ. ಹೊರಗಡೆಯಿಂದ ಬಂಡಿಯ ಹಿಂಬದಿ ಕೂಪೇ ಬಂಡಿಯಂತೆ ಇದ್ದು, ಹಿಂಬದಿಯ ಸವಾರರಿಗೆ ಜಾಗ ಕಡಿಮೆಯೆಂದಿನಿಸಿದ್ದರೆ ಅದು ತಪ್ಪು. ಹಿಂಬದಿಯಲ್ಲೂ ಸಾಕಶ್ಟು ಜಾಗವನ್ನು ಒದಗಿಸಲಾಗಿದೆ. ಹಿಂಬದಿಯ ಕುಳಿರಗಾಳಿ ಕಿಂಡಿಗಳು(AC Vents) ಸಾಕಶ್ಟು ತಂಪಾದ ಗಾಳಿ ನೀಡುವಂತೆ ಮಾಡಲಾಗಿದೆ. ಹಿಂದಿನ ಎರಡು ಬಾಗಿಲುಗಳಲ್ಲೂ ಅರ‍್ದ ಲೀಟರ್‌ ನೀರಿನ ಬಾಟಲಿ ಸೇರಿಸಿಡಲು ಜಾಗವಿದೆ. 350 ಲೀಟರ್ ದೊಡ್ಡನೆಯ ಸರಕುಚಾಚು(Luggage Space), ಇದೇ ಸಾಲಿಗೆ ಸೇರುವ ಇತರೆ ಬಂಡಿಗಳಿಗಿಂತ ನೆಕ್ಸಾನ್ ಅನ್ನು ಮುಂಚೂಣಿಯಲ್ಲಿ ನಿಲ್ಲಿಸುತ್ತದೆ. ಇದರಲ್ಲಿ ಎರಡು ದೊಡ್ಡ ಟ್ರಾಲಿ ಬ್ಯಾಗ್‌ಗಳನ್ನು ಸಲೀಸಾಗಿ ಇಟ್ಟು, ಇನ್ನೊಂದೆರಡು ಕಿರಿದಾದ ಚೀಲಗಳನ್ನಿಡಬಹುದು. ಹಿಂಬದಿಯ ಸವಾರರಿಲ್ಲದೇ ಇಬ್ಬರೆ ಸಾಗುವಾಗ ಹಿಂಬದಿಯ ಕೂರುಮಣೆಯನ್ನು ಮಡಚಿದರೆ ಈ ಸರಕುಚಾಚು 690 ಲೀಟರ್‌ಗಳಶ್ಟು ದೊಡ್ಡದಾಗಿ ತೆರೆದುಕೊಳ್ಳುತ್ತದೆ. 4 ಉಲಿಕಗಳ ಹಾಡುಗಾರಿಕೆ ಪೆಟ್ಟಿಗೆ(4-Speaker Music System), ಇಂದಿನ ಹೆಚ್ಚಿನ ಬಂಡಿಗಳಲ್ಲಿ ಕಾಣಸಿಗುವ USB ಕಿಂಡಿ, Bluetooth ಕಿಂಡಿ ನೆಕ್ಸಾನ್‌ನಲ್ಲೂ ಅಳವಡಿಸಲಾಗಿದೆ.

ಸಿಲುಕಿನ ತಡೆತದ ಏರ‍್ಪಾಟು(Anti-Lock Braking System), ಮುಂಬದಿಯ ಗಾಳಿಚೀಲಗಳು(Front Airbags), ಕದಲ್ಗಾಪು(Immobilizer) ಮುಂತಾದ ಬಂಡಿಯ ಕಾಪಿನ(Vehicle Safety) ವಿಶೇಶತೆಗಳನ್ನು ನೆಕ್ಸಾನ್ ಹೊಂದಿರಲಿದೆ. ನಿಲುಗಡೆಗೆ ಹಿಂಬದಿಯ ತಿಟ್ಟಕ(Reverse Parking Camera), ಹಿಂದುಗಡೆಯ ಒರೆಸುಕ ಮತ್ತು ಮಂಜಿಳಕ(Rear Wiper and Defogger) ಮತ್ತು ಮುಂಬದಿಯ ಸವಾರರಿಗೆ ಎತ್ತರಕ್ಕೆ ತಕ್ಕಂತೆ ಜೋಡಿಸಿ ಬಿಗಿಯಬಲ್ಲ ಕೂರುಪಟ್ಟಿಗಳು(Seat Belt) ಪಯಣಿಗರನ್ನು ಕಾಪಾಡಲು ನೆರವಾಗಲಿವೆ.

ಸುಯ್ ಅಂಕೆ ಏರ‍್ಪಾಟು(Cruise Control), ತಂತಾನೇ ಕೆಲಸಮಾಡಬಲ್ಲ ಒರೆಸುಕ(Automatic Wipers) ಮತ್ತು ಮುಂದೀಪಗಳು ಇಲ್ಲದೇ ಇರುವುದು ನೆಕ್ಸಾನ್ ಬಂಡಿಯ ಕೊರತೆ. XE, XM ,XT ಮತ್ತು XZ+  ಎಂಬ ನಾಲ್ಕು ಬಗೆಯಲ್ಲಿ ನೆಕ್ಸಾನ್ ಬಂಡಿ ಸಿಗಲಿದ್ದು, ಬಿಳಿ, ಬೂದು, ಕೆಂಪು, ನೀಲಿ ಮತ್ತು ಬೆಳ್ಳಿ ಬಣ್ಣ ಹೀಗೆ 5 ಬಗೆಯ ಬಣ್ಣಗಳಲ್ಲಿ ದೊರೆಯುತ್ತದೆ. ಇಶ್ಟಲ್ಲದೇ ವಿಶೇಶವಾದ ಬೀಗದ ಕೈಯೊಂದನ್ನು ನೆಕ್ಸಾನ್ ಕೊಳ್ಳುಗರು ಪಡೆದುಕೊಳ್ಳಬಹುದು. ಚೂಟಿ ಕೈಗಡಿಯಾರದಂತೆ(Smart Watch) ಈ ಬೀಗದ ಕೈಯನ್ನು ಕೈಗೆ ಕಟ್ಟಿಕೊಂಡು, ಗುಂಡಿ ಒತ್ತುವ ಮೂಲಕ ಬಂಡಿಗೆ ಬೀಗ ಹಾಕಿ-ತೆಗೆಯುವುದನ್ನು ಮಾಡಬಹುದು. ಇದರ ಮೂಲಕವೇ ಬಂಡಿಯನ್ನು ಶುರು ಮಾಡಬಹುದು. ಜಿಮ್ ಮತ್ತು ಈಜಲು ಹೋಗುವವರಿಗೆ ಇದು ನೆರವಿಗೆ ಬರಲಿದೆ. ಕೈಗಡಿಯಾರದ ತರಹ ಈ ಚೂಟಿ ಬೀಗದ ಕೈಯನ್ನು ಕೈಗೆ ಕಟ್ಟಿಕೊಂಡರಾಯಿತು.

ಪೈಪೋಟಿ ಮತ್ತು ಬೆಲೆ:

ಮಾರುತಿಯ ವಿಟಾರಾ ಬ್ರೆಜಾ ಮತ್ತು ಪೋರ‍್ಡ್ ಎಕೊ ಸ್ಪೋರ‍್ಟ್ ಇವೆರಡಕ್ಕೂ ನೆಕ್ಸಾನ್ ಬಂಡಿ ಪಣವೊಡ್ಡಿದೆ. ಆಯಗಳ ಹೋಲಿಕೆಯಲ್ಲಿ ನೆಕ್ಸಾನ್ ಬಂಡಿ, ಉಳಿದೆರಡು ಬಂಡಿಗಿಂತ ಒಂದು ಕೈ ಮೇಲೆ ಎನ್ನಬಹುದು.ಈ 3 ಬಂಡಿಗಳ ಉದ್ದ ಹೆಚ್ಚು ಕಡಿಮೆ ಒಂದೇಯಾಗಿದೆ, ಆದರೆ ನೆಕ್ಸಾನ್,  ಬ್ರೆಜಾ ಮತ್ತು ಎಕೊ ಸ್ಪೋರ‍್ಟ್ ಬಂಡಿಗಳಿಗಿಂತ ಅಗಲವಾಗಿದೆ. ಉಳಿದೆರಡು ಬಂಡಿಗಳಿಗಿಂತ ಎತ್ತರದಲ್ಲಿ ನೆಕ್ಸಾನ್ ತುಸು ಕುಳ್ಳಗಿದೆ. ಬಲುಮುಕ್ಯವಾದ ಆಯ ನೆಲತೆರವು, ಇದರಲ್ಲಿ ನೆಕ್ಸಾನ್ ನನ್ನು ಮೀರಿಸಲು ಸಾದ್ಯವೇ ಇಲ್ಲ. ಇದರಿಂದ ತಗ್ಗು, ದಿಣ್ಣೆಯ ದಾರಿಗಳಲ್ಲೂ ನೆಕ್ಸಾನ್ ಬಂಡಿಯನ್ನು ಸುಳುವಾಗಿ ಓಡಿಸಿಕೊಂಡು ಹೋಗಬಹುದು. ವಿವರವಾದ ಹೋಲಿಕೆ ಪಟ್ಟಿಯನ್ನು ಕೆಳಗೆ ನೋಡಬಹುದು.

3 ಉರುಳೆಗಳ ನೆಕ್ಸಾನ್ ಪೆಟ್ರೋಲ್ ಬಿಣಿಗೆ, 4 ಉರುಳೆಗಳ ಎಕೊ ಸ್ಪೋರ‍್ಟ್‌ನ ಪೆಟ್ರೋಲ್ ಬಿಣಿಗೆಗಿಂತ ಅಳತೆಯಲ್ಲಿ ಕಿರಿದಾಗಿದೆ. ಆದರೆ ನೆಕ್ಸಾನ್ ಬಿಣಿಗೆಯೂ ಎಕೊ ಸ್ಪೋರ‍್ಟ್ ಬಿಣಿಗೆಯಶ್ಟೇ ಕುದುರೆಬಲದ ಕಸುವು ಹೊಂದಿದೆ. ತಿರುಗುಬಲದ ವಿಶಯಗಳಲ್ಲಿ ಕಿರಿದಾದ ನೆಕ್ಸಾನ್ ಬಿಣಿಗೆ ಎಕೊ ಸ್ಪೋರ‍್ಟ್ ಅನ್ನು ಮೀರಿಸಿದೆ. ಕಿರಿದಾದ ಬಿಣಿಗೆಯಿಂದ ಹೆಚ್ಚಿನ ತಿರುಗುಬಲ ಪಡೆಯಲು ಟಾಟಾ ಕೂಟ ಪಟ್ಟ ಶ್ರಮ ಎದ್ದು ಕಾಣುತ್ತದೆ. ಪೆಟ್ರೋಲ್ ಬಿಣಿಗೆಯ ಬ್ರೆಜಾ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. 4 ಉರುಳೆಗಳ ಡೀಸೆಲ್ ಬಿಣಿಗೆಯ ನೆಕ್ಸಾನ್ ಬಂಡಿಯೂ ಕೂಡ ಬ್ರೆಜಾ ಮತ್ತು ಎಕೊ ಸ್ಪೋರ‍್ಟ್ ಗಳಿಗಿಂತ ಹೆಚ್ಚಿನ ಕಸುವು ಮತ್ತು ತಿರುಗುಬಲದ ಮೂಲಕ ಮುಂಚೂಣಿಯಲ್ಲಿದೆ. ನೆಕ್ಸಾನ್ ಬಂಡಿಗೆ 6-ವೇಗಗಳ ಓಡಿಸುಗನ ಹಿಡಿತದ ಸಾಗಣಿ ಇದ್ದರೆ, ಬ್ರೆಜಾ, ಎಕೊ ಸ್ಪೋರ‍್ಟ್ ಗಳಲ್ಲಿ 5-ವೇಗದ ಓಡಿಸುಗನ ಹಿಡಿತದ ಸಾಗಣಿ ಜೋಡಿಸಲಾಗಿದೆ. ಎಕೊ ಸ್ಪೋರ‍್ಟ್ ನ ಪೆಟ್ರೋಲ್ ಬಂಡಿಯಲ್ಲಿ ಮಾತ್ರ  6-ವೇಗದ ತನ್ನಿಡಿತದ ಸಾಗಣಿ ಇದೆ. ಬಿಣಿಗೆ, ಸಾಗಣಿಗಳ ಹೋಲಿಕೆ ಕೆಳಗಿನ ಪಟ್ಟಿಯಲ್ಲಿ ನೋಡಿ.

ಅಗ್ಗದ ಬೆಲೆಯ ಮೂಲಕ ನೆಕ್ಸಾನ್ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ಅದಕ್ಕೆ ಸಾಕ್ಶಿ ಎಂಬಂತೆ ಹೊಸ ನೆಕ್ಸಾನ್ ಬಂಡಿ ಕೊಳ್ಳಬೇಕೆನ್ನುವವರು ಸುಮಾರು 2 ತಿಂಗಳು ಕಾಯಬೇಕು. ಬರೀ ರೂ.11,000ಕ್ಕೆ ಆನ್ಲೈನ್ ಮೂಲಕ ಮುಂಗಡ ಕಾದಿರಿಸಬಹುದು. ಆರಂಬಿಕ ಬೆಲೆ ಸುಮಾರು 5.85 ಲಕ್ಶ ರೂ.ಗಳಿಂದ 9.45 ಲಕ್ಶ ರೂ.ಗಳಲ್ಲಿ ವಿವಿದ ಮಾದರಿಗಳು ಮಾರಾಟವಾಗುತ್ತಿವೆ. ಎಲ್ಲ ಮಾದರಿಗಳ ಬೆಲೆಯನ್ನು ಕೆಳಕಂಡ ಪಟ್ಟಿಯಲ್ಲಿ ನೀಡಲಾಗಿದೆ. ಹೊಸ ಈಡುಗಾರಿಕೆಯ ಮೂಲಕ  ಹೊಸ ಬಂಡಿಗಳನ್ನು ಹೊರತಂದು ಟಾಟಾ ಕೂಟ ಬದಲಾವಣೆಯತ್ತ ದಾಪುಗಾಲಿಟ್ಟಿದೆ ಎನ್ನಬಹುದು.

(ಮಾಹಿತಿ ಮತ್ತು ಚಿತ್ರ ಸೆಲೆ: nexon.tatamotors.com, autocarindia.comoverdrive.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: