ಬೆಕ್ಕುಗಳಿಂದ ಪಡೆವ ಕಾಪಿ!

ಪ್ರೇಮ ಯಶವಂತ.

ನಿಮಗೆ ತಿಳಿದುರುವಂತೆ, ಒಂದು ಕಾಪಿಯ ಬೆಲೆ ಅಬ್ಬಬ್ಬಾ ಎಂದರೆ ಅಯ್ದರಿಂದ ಹದಿನಯ್ದು ರುಪಾಯಿಗಳಿರಬಹುದು. ಇನ್ನು ದೊಡ್ಡ ಬಿಡದಿ (hotel) ಇಲ್ಲವೇ ಕಾಪಿ ಮನೆಗಳಲ್ಲಿ (café) ಹೆಚ್ಚೆಂದರೆ ಕಾಪಿಯ ಬೆಲೆ ಅಯ್ವತ್ತರಿಂದ ನೂರು ರೂಪಾಯಿಗಳಿರಬಹುದು. ಆದರೆ ಇಲ್ಲೊಂದು ಬಗೆಯ ಕಾಪಿಯಿದೆ. ಅದು ನಮ್ಮ ಬಾಯಿಯ ಜೊತೆಗೆ ಕಿಸಿಯನ್ನೂ ಸುಡುವಶ್ಟು ಬೆಲೆಬಾಳುವಂತದ್ದು. ಆ ಕಾಪಿಯನ್ನು ಕೊಪಿ-ಲುವಾಕ್ (Kopi Luwak) ಇಲ್ಲವೇ ಸಿವೆಟ್ ಕಾಪಿ (Civet coffee) ಎಂದು  ಕರೆಯಲಾಗುತ್ತದೆ. ಕನ್ನಡದಲ್ಲಿ ಇದನ್ನು ಪುನುಗು ಕಾಪಿ  ಇಲ್ಲವೇ ಪುನುಗು ಬೆಕ್ಕಿನ ಕಾಪಿ ಎಂದು  ಹೇಳಬಹುದು.

ಪುನುಗು ಬೆಕ್ಕಿನ ಕಾಪಿ?

punugu kaapi titta 1

ಕಾಪಿಗೂ ಬೆಕ್ಕಿಗೂ ಎಲ್ಲಿಯ ನಂಟು? ಪುನುಗು ಬೆಕ್ಕಿನ ಕಾಪಿಯ ಹೆಸರನ್ನು ಕೇಳುತ್ತಿದ್ದಂತೆ, ಎಂತವರಿಗಾದರೂ ಈ ಕೇಳ್ವಿಗಳು ಮೂಡದೇ ಇರದು. ಅದು ಯಾಕೆ, ಹೇಗೆ ಎಂದು ತಿಳಿದುಕೊಳ್ಳಲು, ಈ ಕಾಪಿಯ ಹಿನ್ನಡವಳಿಯ (history) ಕಡೆ ಕಣ್ಣಾಯಿಸೋಣ. 18 ನೇ ನೂರೇಡಿನಲ್ಲಿ (century) ಡಚ್ಚರು ಕಾಪಿಯನ್ನು ತಮ್ಮ ಪಾಳ್ಯಗಳಾದ (colony) ಜಾವ ಹಾಗು ಸುಮಾತ್ರಗಳ ಡಚ್ ಈಸ್ಟ್ ಇಂಡಿಸ್ ನಡುಗಡ್ಡೆಗಳಲ್ಲಿ (island) ಹಣ-ಬೆಳೆಯಾಗಿ (cash-crop) ಆರಂಬಿಸಿದರು.

ಆ ನೆಲೆಗಳಲ್ಲಿ ಕಾಪಿಯನ್ನು ಬೆಳೆಸಲಾರಂಬಿಸಿದ ಮೇಲೆ, ಅಲ್ಲಿನ ಮಂದಿಗೂ ಕಾಪಿಯ ರುಚಿ ಹತ್ತಿತು. 1830 ರ ಹೊತ್ತಿಗೆ, ಅಲ್ಲಿನ ನೆಲೆಸಿಗ (native) ರಯ್ತರು ಹಾಗು ಕಾಪಿ ತೋಟದ ಗೆಯ್ಯಾಳುಗಳು (workers) ತಮ್ಮ ಬಳಕೆಗಾಗಿ, ಕಾಪಿ ತೋಟಗಳಿಂದ ಕಾಪಿಯ ಹಣ್ಣುಗಳನ್ನು ಒಯ್ಯದಂತೆ ತೋಟದ ಒಡೆಯರು ತಡೆಯಲಾರಂಬಿಸಿದರು. ಕಾಪಿ ತೋಟಗಳ ಸುತ್ತುಮುತ್ತ ಬದುಕುತ್ತಿದ್ದ ಪುನುಗು ಬೆಕ್ಕುಗಳು, ಕಾಪಿ ಹಣ್ಣುಗಳನ್ನು ತಿನ್ನುವುದನ್ನು ಹಾಗು ತಿಂದ ಬೀಜಗಳನ್ನು ಅರಗಿಸಿಕೊಳ್ಳಲಾಗದೇ ತಮ್ಮ ಪಿಕ್ಕೆಗಳಲ್ಲಿ (feces) ಹೊರ ಹಾಕುವುದನ್ನು ಗಮನಿಸಿದ ನೆಲಸಿಗರು, ಆ ಬೀಜಗಳನ್ನು ಆಯ್ದುಕೊಳ್ಳುತಿದ್ದರು; ಬೀಜಗಳನ್ನು ಪಿಕ್ಕೆಗಳಿಂದ ಬೆರ‍್ಪಡಿಸಿ, ಚೊಕ್ಕಗೊಳಿಸಿ, ಹುರಿದು, ಪುಡಿ ಮಾಡಿ ತಮ್ಮದೇ ಬಗೆಯಲ್ಲಿ ಕಾಪಿಯನ್ನು ಮಾಡಿಕೊಂಡು ಕುಡಿಯಲು ಶುರುಮಾಡಿದರು.

ಪುನುಗು ಕಾಪಿಯ ರುಚಿ ಹಾಗು ಕಂಪಿನ ಸೊಗಸು, ಕಾಪಿ ತೋಟದ ಒಡೆಯರ ಕಿವಿಗೂ ಮುಟ್ಟಿತು. ಅವರಿಗೂ ಈ ಕಾಪಿಯ ರುಚಿ ಹತ್ತಿತು. ಈ ಕಾಪಿಯ ಹಮ್ಮುಗೆಯಲ್ಲಿ (processing) ಪುನುಗು ಬೆಕ್ಕುಗಳು ತೊಡಗಿಕೊಂಡಿರುವುದರಿಂದ, ಕಾಪಿಗೆ ‘ಪುನುಗು ಕಾಪಿ’ ಇಲ್ಲವೇ ‘ಪುನುಗು ಬೆಕ್ಕಿನ ಕಾಪಿ’ ಎಂಬ ಹೆಸರು ಬಂತು!

ಪುನುಗು ಕಾಪಿಯ ಕಂಪಿನ ಗುಟ್ಟೇನು?

punugu kaapi titta 2

ಪುನುಗು ಕಾಪಿಯಯಲ್ಲಿ ಇರುವ ಕಂಪಿಗೆ, ಪುನುಗು ಬೆಕ್ಕಿನ ಅರಗೇರ‍್ಪಾಟಿನಲ್ಲಿ (digestive system) ನಡೆಯುವ ಹಮ್ಮುಗೆಯೇ (process) ಕಾರಣ.  ಪುನುಗು ಬೆಕ್ಕುಗಳು ಕಾಪಿಯ ಹಣ್ಣುಗಳನ್ನು ತಿಂದಾಗ, ಬೆಕ್ಕುಗಳು ತಮ್ಮ ಕೂಳುಗೊಳವೆಯಲ್ಲಿ (alimentary canal/ digestive tract) ಹಣ್ಣಿನ ತಿರುಳನ್ನಶ್ಟೆ ಅರಗಿಸಿಕೊಳ್ಳಬಲ್ಲವು. ಆದರೆ, ಅರಗಿಸಿಕೊಳ್ಳಲಾಗದ ಗಟ್ಟಿಯಾಗಿರುವ ಬೀಜಗಳು ಕೂಳುಗೊಳವೆಯಲ್ಲಿ ಹುಳಿಯುವಿಕೆಯ ಹಮ್ಮುಗೆಗೆ (fermentation process) ಒಳಗಾಗುತ್ತವೆ.

ಈ ಹಮ್ಮುಗೆಯಲ್ಲಿ ಬೆಕ್ಕಿನ ಕೂಳುಗೊಳವೆಯಲ್ಲಿ ಇರುವ ಮುನ್ನುಮುದಿಪು ದೊಳೆಗಳು (protease enzyme) ಬೀಜಗಳ ಆಳಕ್ಕೆ ಇಳಿದು,  ಬೀಜಗಳ ಮುನ್ನುಗಳನ್ನು (protein) ತುಂಡರಿಸಿ, ಮುನ್ನಿನ ಬಿಡಿಗಳಾದ ಅಮಯ್ನೋ ಆಸಿಡ್ಗಳ (amino acid) ಮೊತ್ತವನ್ನು ಹೆಚ್ಚಿಸುತ್ತವೆ. ಒಟ್ಟಾರೆ ಹೇಳುವುದಾದರೆ ಈ ಬೆಕ್ಕುಗಳು ತಿನ್ನುವುದಕ್ಕೆ ಎಂತ ಬೀಜಗಳನ್ನು ಆರಿಸಿಕೊಳ್ಳುತ್ತವೆ, ಬೆಕ್ಕುಗಳು ಎಶ್ಟು ಹದುಳವಾಗಿವೆ (healthy) ಎಂಬುದರ ಮೇಲೆ ಕಾಪಿಯ ರುಚಿ ಹಾಗು ಕಂಪು ಬದಲಾಗುತ್ತದೆ.

ಪುನುಗು ಕಾಪಿಯ ಬೆಲೆ ಎಶ್ಟಿರಬಹುದು?
ಒಂದು ಕೆ. ಜಿ. ಪುನುಗು ಕಾಪಿಯ ಬೆಲೆ 550 ಯೂರೊ; ಅಮೆರಿಕಾದ ಸಲುವಳಿಯಲ್ಲಿ (currency) ಅದು 700 ಡಾಲರ್ (ಅಂದರೆ ಸುಮಾರು 44,600 ರುಪಾಯಿಗಳು!). ಪುನುಗು ಬೆಕ್ಕಿನ ಕಾಪಿಯ ನೆಲೆಯಾದ ಇಂಡೋನೇಶಿಯಾದ ಮಾರುಕಟ್ಟೆಗಳಲ್ಲಿ ಕೆ.ಜಿ. ಗೆ 100 ಡಾಲರ‍್ ನಿಂದ ಮೊದಲುಗೊಳ್ಳುತ್ತದೆ. 2010 ರಲ್ಲಿ ಇದರ ಬೆಲೆ 1 ಪವಂಡ್‍ಗೆ (pound) 100-600 ಡಾಲರ್ ನಂತೆ ಮಾರಾಟವಾಗಿತ್ತು. ಇದರ ಕೊಳ್ಳುಗರು ಹೆಚ್ಚು ಮಂದಿ ಜಪಾನ್, ತಯ್ವಾನ್, ಮತ್ತು ಬಡಗಣ ಕೊರಿಯಾದವರಾಗಿದ್ದಾರೆ.

ಪುನುಗು ಕಾಪಿಯನ್ನು ಕಂಡುಕೊಂಡ ಹೊತ್ತಿನಿಂದಲೂ, ಉಳಿದ ಕಾಪಿಗಳಿಗೆ  ಹೋಲಿಸಿದರೆ, ಪುನುಗು ಕಾಪಿಯ ಬೆಲೆ ಹೆಚ್ಚು. ಇದಕ್ಕೆ ಕಾರಣ,

1) ಈ ಕಾಪಿಯ ರುಚಿ ಹಾಗು ಕಂಪಿನ ಬೇರ‍್ಮೆ (uniqueness)

2) ಪುನುಗು ಬೆಕ್ಕುಗಳ ಪಿಕ್ಕೆಗಳಲ್ಲಿ ಕಡಿಮೆ ಮೊತ್ತದಲ್ಲಿ (amount) ದೊರಕುವ (ದೊರಕುತ್ತಿದ್ದ) ಕಾಪಿ ಬೀಜಗಳು.

ಮೊದಲಿಗೆ ಆಯ್ದ ಬೀಜಗಳನ್ನು ಬಳಸುತ್ತಿದ್ದ ಕಾಪಿ ಬೆಳೆಗಾರರು, ದಿನ ಕಳೆದಂತೆ, ಪುನುಗು ಬೆಕ್ಕಿನ ಕಾಪಿಯ ಇಳುವರಿ ಹೆಚ್ಚಿಸಲೆಂದು, ಈ ಬೆಕ್ಕುಗಳನ್ನು ಸಾಲು ಗೂಡುಗಳಲ್ಲಿ (battery cage) ಇರಿಸಿ, ಅವುಗಳಿಗೆ ಬಲವಂತದಿಂದ ಬೀಜಗಳನ್ನು ತಿನ್ನಿಸುತ್ತಿದ್ದರು. ಈ ಬಗೆಯ ಬೇಸಾಯದಲ್ಲಿ, ಬೆಕ್ಕುಗಳಿಗೆ ಬೀಜಗಳನ್ನು ಆಯ್ದುಕೊಳ್ಳುವ ಆಯ್ಕೆ ಇಲ್ಲ. ಇದರಿಂದ ಬೆಕ್ಕುಗಳು ತಿನ್ನುವ ಬೀಜಗಳ ಗುಣಮಟ್ಟ ಇಳಿದು, ಕಾಪಿಯ ಕಂಪು ಹಾಗು ರುಚಿ ಹದಗೆಡತೊಡಗಿತು.

ಪುನುಗು ಬೆಕ್ಕುಗಳಿಗೆ ಕಾಪಿ ಹಣ್ಣುಗಳನ್ನು ತಿನ್ನಿಸುವ ಬೇಸಾಯದ ಬಗೆಯನ್ನು ನೆಲಸಿಗ ರಯ್ತರನ್ನೂ ಒಳಗೊಂಡಂತೆ ಹಲವು ಪ್ರಾಣಿ ದಯಾ ಸಂಗಗಳು ತಡೆಯಲು ಹೋರಾಡುತ್ತಿವೆ. ಎಲ್ಲಾ ಬಗೆಯ ಅಡೆತಡೆಗಳ ನಡುವೆಯೂ, ಈ ಕಾಪಿ ತನ್ನ ರುಚಿಯನ್ನು ಇಡೀ ಜಗತ್ತಿಗೆ ಹರಡಿದೆ.

ಪುನುಗು ಕಾಪಿಯಂತೆ, ಹಲವು ಬಗೆಯ ಕಾಪಿಗಳಿವೆ. ಎತ್ತುಗೆಗೆ:  “ಬ್ಲಾಕ್ ಅಯ್ವರಿ ಕಾಪಿ” ಹಾಗು ‘ವಿಯೆಟ್ನಾಮ್ ವೀಸಲ್ ಕಾಪಿ”. ಪುನುಗು ಕಾಪಿಯಲ್ಲಿ ಪುನುಗು ಬೆಕ್ಕಿನ ಬಳಕೆಯಾದಂತೆ ಬ್ಲಾಕ್ ಅಯ್ವರಿ ಕಾಪಿಗೆ ಆನೆಗಳನ್ನು ಹಾಗು ವಿಯೆಟ್ನಾಂ ವೀಸಲ್ ಕಾಪಿಯಲ್ಲಿ ವೀಸಲ್ ಎಂಬ ಬೆಕ್ಕಿನ ಬಳಕೆಯಾಗುತ್ತದೆ. ಆದರೆ, ಈ ಕಾಪಿಗಳು ಪುನುಗು ಕಾಪಿಯಶ್ಟು ಮಂದಿ ಮೆಚ್ಚುಗೆ ಪಡೆದಿಲ್ಲ.

(ತಿಳುವಳಿಕೆ ಮತ್ತು ತಿಟ್ಟ ಸೆಲೆಗಳು: en.wikipedia.org, most-expensive.coffee, theguardian.com )Categories: ಅರಿಮೆ

ಟ್ಯಾಗ್ ಗಳು:, , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s