ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ

 ಶ್ರೀನಿವಾಸಮೂರ‍್ತಿ ಬಿ.ಜಿ.

sadnature

ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು
ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ

ಗೊಬ್ಬರವ ನೀ ಕೇಳುವೆ, ಕೊಬ್ಬರಿಯ ನಾ ಕೇಳುವೆ
ಉಪಕಾರವನ್ನು ನೀ ಕೇಳುವೆ, ಅದಿಕಾರವನ್ನು ನಾ ಕೇಳುವೆ
ಸೊಗಸನು ನೀ ಹಡಿವೆ, ಗರಗಸವ ನಾ ಹಿಡಿವೆ
ಸುಕದುಕ್ಕದಲಿ ನೀ ಮತ್ತೆ ಚಿಗುರುವೆ, ಸೊಕ್ಕುಸಿಕ್ಕುಗಳಲ್ಲಿ ನಿನ್ನನ್ನು ಚಿವುಟುತ್ತಾ ನಾ ಬದುಕುವೆ
ನೀನು ಅಳಿಯದೆ ಬೆಳಗುವ ತಾರೆ, ನಾನು ಅಳಿಯುವ ತಳುಕಿನ ತಾರೆ

ನಿನ್ನಯ ಹಾಲಿನ ಬಯಲಿಗೆ ನನ್ನ ಕಯ್-ಬಾಯಿಯ ಮೈಲಿಗೆ
ಹಲತನಗಳ ಬಲೆಯಲ್ಲಿ ಒಗ್ಗಟ್ಟಿನದ್ದು ನಿನ್ನಯ ಉಸಿರು, ಹಸಿರು
ಮೇಲು-ಕೀಳುಗಳ ಕೆಂಡದ ಬಲೆಯಲ್ಲಿ ಬಿಕ್ಕಟ್ಟಿನದ್ದು ನನ್ನಯ ಕೆಸರು, ಪಿಸುರು
ಬಾಳ ಪಯಣಕ್ಕೆ ನಿನ್ನಯ ನಡಿಗೆ, ಗೋಳಪಯಣಕ್ಕೆ ನನ್ನಯ ನಡಿಗೆ
ನನ್ನದೇನೂ ಸರಿಯಿಲ್ಲ, ನಿನ್ನತ್ತ ನನಗೆ ಸರಿದುಬರಲು ಆಗುತ್ತಿಲ್ಲ
ಇದಕ್ಕೆ ದಯವಿಟ್ಟು ತಾಯೇ
ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು
ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ

ಕೊಳೆತಾಗಲೂ ಹೋರಾಟದಲ್ಲೇ ಪುಟಿದೇಳುವೆ ನೀನು, ಹೋರಾಟದಲ್ಲೇ ಕೊಳೆತು ಪುಟಿದುಬೀಳುವೆ ನಾನು
ಸಿಪ್ಪೆ ತೊಪ್ಪೆಯ ತಿಂದರೂ ಅರಗಿಸಿಕೊಳ್ಳುವ ಗಟ್ಟಿಗಿತ್ತಿ ನೀನು, ಸೊಪ್ಪು ಗೆಡ್ಡೆಯ ತಿಂದರೂ ಬೆಳೆಯದ ಗಬ್ಬು ಗೊಡ್ಡು ನಾನು
ನನ್ನ ತಪ್ಪೆಲ್ಲವು ನನ್ನ ಸರಿಯ ಗುರುತು, ನಿನ್ನ ಸರಿಗಳೆಲ್ಲವು ನಿನ್ನ ಸಿರಿಯ ಗುರುತು
ನನ್ನಯ ಮೋಸದ ಬೇರುಗಳನ್ನು ನಿನ್ನ ಕಡೆಗೆ ಚಾಚಿದರೂ, ನೀನು ನಿನ್ನತನವ ಕಳೆದುಕೊಳ್ಳಲಾರದ ತಾಯೇ
ನನ್ನ ಮಯ್ಯನ್ನು ಇನ್ನಿಲ್ಲವಾಗಿಸು, ನನ್ನ ಆತ್ಮವನ್ನು ಸುಟ್ಟು ಹಾಕು
ಆಗದಿದ್ದರೆ ದಯವಿಟ್ಟು ತಾಯೇ
ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು
ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ

( ಚಿತ್ರಸೆಲೆ: imgkid.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: