ಚೀನಾದಲ್ಲಿ ಕಮ್ಯುನಿಸ್ಟರು ಗೆಲ್ಲದೇ ಇದ್ದಿದ್ದರೆ ಏನಾಗುತ್ತಿತ್ತು?
ಕ್ಯೂಮಿನ್ ಟ್ಯಾಂಗ್ (Kuomintang) – ಈಗ ತೈವಾನ್ ನ್ನು ಆಳುತ್ತಿರುವ ರಾಜಕೀಯ ಪಂಗಡ. ‘ಚೈನೀಸ್ ನ್ಯಾಶನಲ್ ಪಾರ‍್ಟಿ’ ಎಂದೂ ಅದನ್ನು ಕರೆಯುವುದುಂಟು. ಈ ಹಿಂದೆ, 1927 ರಿಂದ 1950ರ ವರೆಗೆ ಚೀನಾದಲ್ಲಿ ಕ್ಯೂಮಿನ್ ಟ್ಯಾಂಗ್ ಮತ್ತು ಮಾವೋ ಜೆಡಾಂಗ್ ರ (Mao Zedong) ಕಮ್ಯುನಿಸ್ಟ್ ಪಾರ‍್ಟಿ ಬೆಂಬಲಿಗರ ನಡುವೆ ತೀವ್ರವಾದ ಕಾಳಗ ಏರ‍್ಪಟ್ಟಿರುತ್ತದೆ. ‘ರಾಶ್ಟ್ರೀಯತೆ’ ಮತ್ತು ‘ಕಮ್ಯುನಿಸಂ’ ಸಿದ್ದಾಂತದ ನಡುವೆ ನಡೆದ ದೊಡ್ಡ ಮಟ್ಟದ ತಿಕ್ಕಾಟವದು. ಶಿಯಾಂಗ್ ಕಾಯ್-ಶೆಕ್ (Chiang Kai-shek) ಅಂದು ಕ್ಯೂಮಿನ್ ಟ್ಯಾಂಗ್ ಪಂಗಡದ ಮುಂದಾಳಾಗಿರುತ್ತಾರೆ. “ಒಂದು ವೇಳೆ, ಆ ಕಾಳಗದಲ್ಲಿ ಮಾವೋ ಜೆಡಾಂಗ್ ರ ಪಂಗಡ ಸೋತಿದ್ದರೆ ಏನಾಗುತ್ತಿತ್ತು?” – ಅಮೇರಿಕನ್ನರು ಚೀನಾ ಹಿನ್ನಡವಳಿಯ (history) ಮೇಲೆ ಕಣ್ಣಾಯಿಸಿತ್ತಾ ಇಂತಾ ಒಂದು ಕೇಳ್ವಿಯನ್ನು ಆಗಾಗ ಕೇಳಿಕೊಳ್ಳುತ್ತಾರೆ.
ಜಗತ್ತಿನ ಎರಡನೇ ಮಹಾಕಾಳಗವು ಮುಗಿಯುವ ಹೊತ್ತಿನಲ್ಲಿ 3.7 ಮಿಲಿಯನ್ ಸೈನಿಕರಿದ್ದ ಶಿಯಾಂಗ್ ರ ಪ್ರಬಲ ಮಿಲಿಟರಿ ಪಡೆ, ಜಪಾನ್ ಮತ್ತು ಕಮ್ಯುನಿಸ್ಟರ ದಂಗೆಯನ್ನು ಎದುರಿಸುತ್ತಾ ತನ್ನ ಬಲವನ್ನು ಹೆಚ್ಚಿನ ಮಟ್ಟದಲ್ಲಿ ಕಳೆದು ಕೊಂಡಿರುತ್ತದೆ. ಆದರೂ, ಸೈನಿಕರ ಎಣಿಕೆ ಮತ್ತು ಕಯ್ದುಗಳ (weapons) ಲೆಕ್ಕದಲ್ಲಿ ಕಮ್ಯುನಿಸ್ಟರ ಎದಿರು ಮೇಲುಗೈಯನ್ನು ಹೊಂದಿರುತ್ತದೆ. ರಶ್ಯಾವು ಜಪಾನೀಸರಿಂದ ವಶ ಪಡಿಸಿಕೊಂಡಿದ್ದ ಚೀನಾದ ಬಡಮೂಡು (north-east) ದಿಕ್ಕಿಗಿರುವ ಮಂಚೂರಿಯಾದಿಂದ ತಮ್ಮ ಪಡೆಗಳನ್ನು ಹಿಂತೆಗೆದುಕೊಂಡ ಕೂಡಲೇ ಜಿಯಾಂಗ್ ರ ಪಡೆ ಮಂಚೂರಿಯಾವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೂ ಮಂಚೂರಿಯಾದಲ್ಲಿದ್ದ ಕಮ್ಯುನಿಸ್ಟರಿಗೆ ರಶ್ಯಾದ ಬೆಂಬಲವಿರುತ್ತದೆ. ಆದರೆ ಜಿಯಾಂಗ್ ರ ನಡೆಯಿಂದ ಕಮ್ಯುನಿಸ್ಟರು ನೆಮ್ಮದಿ ಕಳೆದುಕೊಳ್ಳುತ್ತಾರೆ.
1946 ರಲ್ಲಿ ಜಿಯಾಂಗ್ ಮತ್ತು ಮಾವೋ ಬೆಂಬಲಿಗರ ನಡುವೆ ನಡೆಯುತ್ತಿದ್ದ ಒಳಜಗಳವು ಕೈಮೀರಿ ಹೋಗಬಹುದೆಂದು ತಿಳಿದ ಅಮೇರಿಕಾ, ಜಗಳವನ್ನು ಕೆಲ ದಿನಗಳ ಮಟ್ಟಿಗೆ (ceasefire) ನಿಲ್ಲಿಸುವಂತೆ ಜಿಯಾಂಗ್ ರ ಮನವೊಲಿಸುತ್ತದೆ. ಅಮೇರಿಕಾದ ಈ ನಡೆ ಮಾವೋ ಪಡೆಗಳಿಗೆ ರಶ್ಯಾದ ನೆರವು ಪಡೆಯಲು ಸಹಾಯ ಮಾಡಿಕೊಡುತ್ತದೆ. ಇದರಿಂದ, ಜಿಯಾಂಗ್ ಮತ್ತು ಮಾವೋ ನಡುವೆ ಒಳಜಗಳ ನಿಲ್ಲಿಸಲು ಅಮೇರಿಕಾದ ಮದ್ಯಸ್ತಿಕೆಯಿಂದ ಏರ‍್ಪಟ್ಟ ಒಪ್ಪಂದ, ಕೆಲವೇ ವಾರಗಳ ಬಳಿಕ ಮುರಿದು ಹೋಗುತ್ತದೆ. ಮಾವೋ ಪಡೆಯವರು ರಶ್ಯಾದ ನೆರವಿನಿಂದ ಜಿಯಾಂಗ್ ಪಡೆಯನ್ನು ಸೋಲಿಸಿ ಮಂಚೂರಿಯಾವನ್ನು ಮರಳಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಅಲ್ಲಿಂದ ಚೀನಾದಲ್ಲಿ ಮಾವೋ ಪ್ರಬಾವ ಹೆಚ್ಚಾಗುತ್ತಾ ಹೋಗುತ್ತದೆ. ಅಂದು ಅಮೇರಿಕಾ ಮತ್ತು ರಶ್ಯಾದ ನಡುವೆ ಒಳಗೊಳಗೇ ನಡೆಯುತ್ತಿದ್ದ ತಿಕ್ಕಾಟದಲ್ಲಿ(cold war), ತಮ್ಮ ತಪ್ಪುನಡೆಯಿಂದ ರಶ್ಯನ್ನರು ಮೇಲುಗೈ ಹೊಂದುವಂತೆ ಮಾಡಿಕೊಟ್ಟ ಬಗ್ಗೆ ಅಮೇರಿಕನ್ನರು ಹಲವಾರು ವರ‍್ಶಗಳ ಕಾಲ ಬೇಸರಿಸಿಕೊಂಡಿದ್ದರು!
ಮಾವೋ ಪ್ರಬಾವ ಹೆಚ್ಚಾಗುತ್ತಿದ್ದಂತೆ, ಜಿಯಾಂಗ್ ಅವರ ಬೆಂಬಲಿಗರು ಮತ್ತು ಅವರ ಪಡೆ ತೈವಾನ್ ನಲ್ಲಿ ನೆಲೆ ಕಂಡುಕೊಳ್ಳುತ್ತಾರೆ. ಜಿಯಾಂಗ್ ಅವರ ಆಳ್ವಿಕೆಯಲ್ಲಿ ತೈವಾನ್ ಏಳಿಗೆಯನ್ನು ಹೊಂದಲು ಶುರುವಾದರೆ, ಮಾವೋ ಅವರ ಆಳ್ವಿಕೆಯಿಂದ ಚೀನಾ ಹಣಕಾಸಿನ ಮುಗ್ಗಟ್ಟಿಗೆ ಒಳಗಾಗುತ್ತದೆ. 1960 ರ ದಶಕದಲ್ಲಿ ಮಾವೋ ಜೆಡಾಂಗ್ ಹುಟ್ಟುಹಾಕಿದ ‘ಸಾಂಸ್ಕ್ರುತಿಕ ಕ್ರಾಂತಿ’ (cultural revolution) ಅದಕ್ಕೆ ಮುಕ್ಯ ಕಾರಣವಾಗಿರುತ್ತದೆ. ಚೀನಾದಲ್ಲಿ ಹೂಡಿಕೆಯೊಲವು (capitalism) ಸುಳಿಯದಂತೆ ಮಾಡುವುದು ಮತ್ತು ಸಮಾಜವಾದವನ್ನು ಚೀನಾದಲ್ಲಿ ನೆಲೆಗೊಳಿಸುವುದು ಆ ಕ್ರಾಂತಿಯ ಗುರಿಯಾಗಿರುತ್ತದೆ. ಹಣಕಾಸಿನ ಸನ್ನಿವೇಶ ಸರಿದಾರಿಗೆ ಬರಲು ಚೀನಾವು 1976 ರ ವರೆಗೆ ಕಾಯಬೇಕಾಯಿತು. ತೈವಾನಿನಂತೆ ಚೀನಾವು 1950 ರಿಂದಲೇ ಬೆಳವಣಿಗೆ ಹೊಂದತೊಡಗಿದ್ದರೆ, ಚೀನಾದ ‘ಒಟ್ಟು ಮಾಡುಗೆಯ ಬೆಲೆ’ (GDP) ಇಂದು ಇರುವುದಕ್ಕಿಂತ ಬಹುಪಾಲು ಹೆಚ್ಚಿನದಾಗಿರುತ್ತಿತ್ತು. ಒಂದು ವೇಳೆ, ಜಿಯಾಂಗ್ ರ ಹಿಡಿತದಲ್ಲೇ ಚೀನಾವೂ ಇದ್ದಿದ್ದರೆ, ”ಸಾಂಸ್ಕ್ರುತಿಕ ಕ್ರಾಂತಿ” ಯ ಹೆಸರಲ್ಲಿ ಕೂಡಣದ ಬೇರೆ ಬೇರೆ ಗುಂಪಿನ ಮಂದಿಯ ನಡುವೆ ತಿಕ್ಕಾಟ ನಡೆಯುತ್ತಿರಲಿಲ್ಲ ಮತ್ತು ಬಹಳ ಮಂದಿ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಜಿಯಾಂಗ್ ಕೂಡ ಸರ‍್ವಾದಿಕಾರಿ ಆಗಿದ್ದರೂ, ಕಾಸಗಿ ಹೂಡಿಕೆಯತ್ತ ಒಲವು ಹೊಂದಿದ್ದರವರಾಗಿದ್ದರು. ಚೀನಾವು ಹಣಕಾಸಿನ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಬೇಗನೇ ಗುರುತಿಸಿಕೊಳ್ಳುತ್ತಿತ್ತು. ಚೀನಾದ ಹಿತಾಸಕ್ತಿಯನ್ನು ಕಾಯ್ದುಕೊಳ್ಳುತ್ತಲೇ, ಏಳಿಗೆಯ ದಾರಿಯಲ್ಲಿ ಚೀನಾವನ್ನು ಕೊಂಡೊಯ್ಯುವವರಾಗಿದ್ದರು ಜಿಯಾಂಗ್. ‘ವರ‍್ಲ್ಡ್ ಟ್ರೇಡ್ ಆರ‍್ಗನೈಸೇಶನ್‘ ಅನ್ನು ಚೀನಾ 2001 ರಲ್ಲಿ ಸೇರಿತು. ಅದಕ್ಕೂ ಮುನ್ನವೇ ತೈವಾನ್ ‘ವರ‍್ಲ್ಡ್ ಟ್ರೇಡ್ ಆರ‍್ಗನೈಸೇಶನ್’ ಸೇರಿತ್ತು!
ಮಾವೋ ಮತ್ತು ಜಿಯಾಂಗ್ ರ ನಡುವಿನ ಒಳಜಗಳದಲ್ಲಿ ಜಿಯಾಂಗ್ ಅವರೇ ಗೆದ್ದು ಚೀನಾದ ಆಡಳಿತ ಚುಕ್ಕಾಣಿ ಹಿಡಿದಿದ್ದರೆ, ಅವರು ಬಡಗಣ ಕೊರಿಯಾವು ತೆಂಕಣ ಕೊರಿಯಾ ಮೇಲೆ ದಾಳಿ ಮಾಡಲು ಬಿಡುತ್ತಿರಲಿಲ್ಲ. ಸೋವಿಯತ್ ರಶ್ಯಾ ಮಂಗೋಲಿಯಾವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಬಿಡುತ್ತಿರಲಿಲ್ಲ. ಮಂಗೋಲಿಯಾ ವಿಚಾರವಾಗಿ ಚೀನಾ-ರಶ್ಯಾ ನಡುವಿನ ಕಾಳಗಗಳಲ್ಲಿ ರಶ್ಯಾಗೆ ಸರಿಯಾದ ಉತ್ತರ ಕೊಡಬಲ್ಲ ನಾಡಾಗಿ ಚೀನಾ ಇರುತ್ತಿತ್ತು. ರಶ್ಯಾದ ಎದಿರು ಗಟ್ಟಿಯಾಗಿ ನಿಲ್ಲುವ ನಾಡೊಂದು ಏಶ್ಯಾದಲ್ಲಿ ಇರಬೇಕೆಂಬ ಅಮೇರಿಕಾದ ಆಸೆಯೂ ಕೂಡ ಈಡೇರುತಿತ್ತು! ಜಿಯಾಂಗ್ ರ ಆಳ್ವಿಕೆಯಲ್ಲಿ ಕೂಡಣದಲ್ಲಿನ ಮದ್ಯಮ ವರ‍್ಗದ ಮಂದಿ, ಕಮ್ಯುನಿಸ್ಟರ ಆಳ್ವಿಕೆಯಲ್ಲಿ ನಲುಗಿದಂತೆ ನಲುಗದೇ, ಬೇಗನೇ ಏಳಿಗೆ ಹೊಂದುತ್ತಿದ್ದರು. ಜಿಯಾಂಗ್ ಅವರ ಕಟ್ಟಾಣ್ಮೆಯ (autocratic) ಆಡಳಿತ ಹೊಂದಿದ್ದರೂ ಚೀನಾವು ಅಮೇರಿಕಾಗೆ ಗೆಳೆಯ ನಾಡಾಗಿ ಇರುತ್ತಿತ್ತು. ಇದರಿಂದ ಜಪಾನ್ ಮತ್ತು ರಶ್ಯಾ ನಾಡುಗಳ ಬಲ ಕೊಂಚ ತಗ್ಗುತ್ತಾ, ತಮ್ಮ ಸುತ್ತ ಮುತ್ತಲಿನ ನಾಡುಗಳ ವಿಶಯದಲ್ಲಿ ಅವುಗಳು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಸನ್ನಿವೇಶವಿರುತ್ತಿತ್ತು.
ಏಶ್ಯಾದಲ್ಲಿ ಸದ್ಯಕ್ಕೆ ಇರುವ ಬಿಗುವಿನ ವಾತಾವರಣ ಚೀನಾದ ಕಮ್ಯುನಿಸ್ಟರ ಪಂಗಡದ ನಡೆಗಳಿಂದಾಗಿದೆ. ಮಂದಿಯಾಳ್ವಿಕೆಯಲ್ಲಿ ಅಶ್ಟಾಗಿ ನಂಬಿಕೆ ಹೊಂದಿರದ, ಸರ‍್ವಾದಿಕಾರವನ್ನು ಬೆಂಬಲಿಸುವ ಚೀನಾದ ಕಮ್ಯುನಿಸ್ಟ್ ಪಂಗಡದ ಬಗ್ಗೆ ಹಲವಾರು ಅನುಮಾನಗಳಿವೆ. ಚೀನಾದ ನೆರೆಹೊರೆಯ ನಾಡುಗಳು – ಚೀನಾದ ಗುಟ್ಟಿನ ನಡೆಗಳ ಬಗ್ಗೆ, ಮಿಲಿಟರಿ ಬಲವನ್ನು ಬಳಸಿ ಮಂದಿಯ ಬೇಕು-ಬೇಡಗಳನ್ನು ಹತ್ತಿಕ್ಕುವ ಬಗ್ಗೆ ಹೆಚ್ಚು ಕಳವಳ ಹೊಂದಿವೆ. ತನ್ನ ಹರವನ್ನು ಹೆಚ್ಚಿಸುವತ್ತಲೇ (expansionist attitude) ಹೆಚ್ಚು ಗಮನ ಹರಿಸುವ ಚೀನಾದ ನಡೆಗಳು ಕೂಡ ಕಳವಳಕ್ಕೆ ಎಡೆ ಮಾಡಿಕೊಟ್ಟಿವೆ. ಈ ನಿಟ್ಟಿನಲ್ಲಿ ಅಮೆರಿಕಾವು ತನ್ನ ಹಿತಾಸಕ್ತಿಯ ಬಗ್ಗೆ ಯೋಚಿಸುತ್ತಾ, ಚೀನಾದ ಒಳಜಗಳದಲ್ಲಿ ಹಿಂದೆ ತಾನು ತೆಗೆದುಕೊಂಡ ತಪ್ಪು ತೀರ‍್ಮಾನವನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತದೆ!
ಇತ್ತೀಚಿನ ಅನಿಸಿಕೆಗಳು