ಸರ‍್ವಜ್ನನ ವಚನಗಳ ಹುರುಳು – 3ನೆಯ ಕಂತು

– ಸಿ.ಪಿ.ನಾಗರಾಜ.

 

 

21)   ಸತ್ತು ಹೋದರೆ ನಿನಗದೆತ್ತಣದು ಮೋಕ್ಷವೈ
ಸತ್ತು ಹೋಗದತಿಜೀವವಿರಲು – ಮೋಕ್ಷದ
ಗೊತ್ತು ತಿಳಿಯೆಂದ ಸರ್ವಜ್ಞ

ಜೀವವಿರುವ ತನಕ ಒಲವು ನಲಿವಿನಿಂದ ಕೂಡಿ ಸಮಾಜಕ್ಕೆ ಒಳಿತನ್ನು ಮಾಡುವ ದುಡಿಮೆಯಿಂದ ಬದುಕನ್ನು ನಡೆಸುವುದೇ ನಿಜವಾದ ಮುಕ್ತಿ ಎಂಬುದನ್ನು ಹೇಳಲಾಗಿದೆ.

(ನಿನಗೆ+ಅದು+ಎತ್ತಣದು ; ಎತ್ತಣ=ಯಾವ ಕಡೆ/ಎಡೆ ; ಎತ್ತಣದು=ಯಾವ ರೀತಿಯಲ್ಲಿ ; ಮೋಕ್ಷವೈ=ಮುಕ್ತಿಯು ದೊರೆಯುತ್ತದೆ ; ಮೋಕ್ಷ= ಹುಟ್ಟುಬದುಕುಸಾವುಗಳ ಸರಪಣಿಯಿಂದ ಜೀವವು ಬಿಡುಗಡೆಯನ್ನು/ಮುಕ್ತಿಯನ್ನು ಹೊಂದುತ್ತದೆ ಎಂಬ ನಂಬಿಕೆ ; ಸತ್ತುಹೋಗದೆ+ಅತಿಜೀವವು+ಇರಲು ; ಸತ್ತುಹೋಗದೆ=ನೀನಾಗಿಯೇ ಸಾವನ್ನು ತಂದುಕೊಳ್ಳದೆ ; ಅತಿ=ದೊಡ್ಡದಾದ/ಹಿರಿದಾದ ; ಜೀವವು+ಇರಲು=ಜೀವವು ಇರುವಾಗ ; ಗೊತ್ತು=ನೆಲೆ/ಜಾಗ ; ಮೋಕ್ಷದ ಗೊತ್ತು=ಮುಕ್ತಿಯ ನೆಲೆಯಿರುವುದು ಸಾವಿನಲ್ಲಲ್ಲ ; ಬದುಕಿನ ಕ್ರಿಯಾಶೀಲತೆಯಲ್ಲಿ ; ತಿಳಿ+ಎಂದ)

22)   ಓದಿ ಬೂದಿಯ ಪೂಸಿ ತೇದು ಕಾವಿಯ ಹೊದೆದು
ಹೋದಾತ ಯೋಗಿಯೆನಬೇಡ – ಇಂದ್ರಿಯವ
ಕಾದಾತ ಯೋಗಿ ಸರ್ವಜ್ಞ

ಉಟ್ಟಿರುವ ಉಡುಗೆ ಇಲ್ಲವೇ ತೊಟ್ಟಿರುವ ತೊಡುಗೆಗಳಿಂದ ಯಾವುದೇ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ‍್ಣಯಿಸಬಾರದೆಂಬ ಎಚ್ಚರಿಕೆಯನ್ನು ನೀಡಲಾಗಿದೆ.

(ಓದಿ=ಅಕ್ಕರವನ್ನು ಕಲಿತು ; ಬೂದಿಯ ಪೂಸಿ =ಹಣೆ-ಎದೆ-ಮಯ್ ತುಂಬಾ ವಿಬೂತಿಯನ್ನು ಲೇಪಿಸಿಕೊಂಡು ; ಪೂಸಿ=ಬಳಿದುಕೊಂಡು ; ಕಾವಿಯ ಹೊದೆದು=ಕಾವಿ ಬಟ್ಟೆಯನ್ನು ತೊಟ್ಟು ; ತೇದು=ಗಂದದ ಕೊರಡನ್ನು ತುಸು ನೀರಿನೊಡನೆ ಉಜ್ಜಿದಾಗ ಬರುವ ವಸ್ತುವನ್ನು ತಿಲಕವಾಗಿ ಹಚ್ಚಿಕೊಂಡು ; ಹೋದ+ಆತ=ಹೋದವನನ್ನು/ಸಿಂಗಾರಗೊಂಡವನನ್ನು ; ಆತ=ಅವನು ; ಯೋಗಿ+ಎನಬೇಡ ; ಯೋಗಿ=ಆಸೆಗಳನ್ನು/ಬಯಕೆಗಳನ್ನು ತೊರೆದವನು ; ಇಂದ್ರಿಯ=ನೋಟ-ಶಬ್ದ-ಕಂಪು-ರುಚಿ-ಮುಟ್ಟುವಿಕೆಯಿಂದ ಉಂಟಾಗುವ ಅರಿವನ್ನು ಪಡೆಯಲು ನೆರವಾಗುವ ಅಂಗಗಳು ; ಇಂದ್ರಿಯವ ಕಾದಾತ=ಕಣ್ಣು-ಕಿವಿ-ಮೂಗು-ನಾಲಗೆ-ತೊಗಲಿನಿಂದ ಉಂಟಾಗುವ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡು ಒಳ್ಳೆಯ ನಡೆನುಡಿಗಳಿಂದ ಬಾಳುವವನು ; ಕಾದ+ಆತ ; ಕಾದ=ಕಾಯ್ದುಕೊಂಡ/ಎಚ್ಚರದಿಂದ ಕಾಪಾಡಿಕೊಂಡ)

23)     ಬತ್ತಿಯೆಣ್ಣೆಗಳೆರಡು ಹೊತ್ತಿ ಬೆಳಗುವ ತೆರದಿ
ಸತ್ಯ ನೀತಿಗಳು ಬೆಳಗಿಹವು – ಜೋಡಗಲೆ
ಕತ್ತಲೀ ಜಗವು ಸರ್ವಜ್ಞ

ಮಾನವ ಸಮುದಾಯದ ಜೀವನವು ಚೆನ್ನಾಗಿರಬೇಕಾದರೆ ಜನರ ನಡೆನುಡಿಗಳಲ್ಲಿ ಸತ್ಯ ಮತ್ತು ನೀತಿ ಜತೆಗೂಡಿರಬೇಕಾದ ಅಗತ್ಯವನ್ನು ಬೆಳಗುತ್ತಿರುವ ದೀಪವೊಂದರ ರೂಪಕದ ಮೂಲಕ ಹೇಳಲಾಗಿದೆ.

(ಬತ್ತಿ+ಎಣ್ಣೆಗಳು+ಎರಡು ; ಬೆಳಗಿ+ಇಹವು ; ಬೆಳಗು=ನಲಿವು-ಒಲವು-ಚಟುವಟಿಕೆಗಳಿಂದ ಕೂಡಿದ ಬದುಕಿಗೆ ಸಂಕೇತ ; ಇಹವು=ಇರುವುವು ; ಜೋಡಿ+ಅಗಲೆ ; ಜೋಡಿ=ಜೊತೆ/ಎರಡರ ಕೂಡುವಿಕೆ ; ಅಗಲೆ=ದೂರವಾದರೆ/ಬೇರೆಬೇರೆಯಾದರೆ ; ಕತ್ತಲು ಈ ಜಗವು=ಜಗದ ಜೀವನವು ಕೊಲೆ ಸುಲಿಗೆ ಹಿಂಸೆಯಿಂದ ನರಳುತ್ತದೆ ; ಕತ್ತಲೆ=ಬಡತನ-ಅಪಮಾನ-ನೋವಿನಿಂದ ಕೂಡಿದ ಬದುಕಿಗೆ ಸಂಕೇತ)

24)     ಹೊಲಬನರಿಯದ ಗುರುವು ತಿಳಿಯಲರಿಯದ ಶಿಷ್ಯ
ನೆಲೆಯನಾರಯ್ಯದುಪದೇಶ – ಅಂಧಕನು
ಕಳನ ಹೊಕ್ಕಂತೆ ಸರ್ವಜ್ಞ

ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರದ ಗುರುಶಿಶ್ಯರಿಗೆ ಉಂಟಾಗುವ ಪಾಡನ್ನು ” ಕುರುಡನೊಬ್ಬ ರಣರಂಗವನ್ನು ಹೊಕ್ಕಾಗ ತೊಳಲಾಡುವ ” ರೂಪಕದ ಮೂಲಕ ಹೇಳಲಾಗಿದೆ.

(ಹೊಲಬನು+ಅರಿಯದ ; ಹೊಲಬು=ದಾರಿ/ಹಾದಿ ; ಅರಿಯದ=ಗೊತ್ತಿಲ್ಲದ ; ಹೊಲಬನರಿಯದ=ಜೀವನದಲ್ಲಿ ಯಾವುದು ಒಳಿತು/ಕೆಡಕು ಮತ್ತು ಯಾವುದು ಸರಿ/ತಪ್ಪು ಎಂಬುದು ಗೊತ್ತಿಲ್ಲದ ; ತಿಳಿಯಲು+ಅರಿಯದ ; ನೆಲೆಯನು+ಆರಯ್ಯದ+ಉಪದೇಶ ; ನೆಲೆಯನು=ಒಳ್ಳೆಯ ಸಂಗತಿಗಳನ್ನು/ವಿಚಾರಗಳನ್ನು ; ಆರಯ್=ಹುಡುಕು/ಯೋಚಿಸು/ಒರೆಹಚ್ಚಿನೋಡು ; ಆರಯ್ಯದ=ಹುಡುಕಿ ತಿಳಿಯಲು ಪ್ರಯತ್ನಿಸದಿರುವ ; ಉಪದೇಶ=ವಿದ್ಯೆ/ತಿಳುವಳಿಕೆ ; ಅಂಧಕ=ಕುರುಡ ; ಕಳನ=ರಣರಂಗವನ್ನು ; ಕಳ= ರಣರಂಗ/ಕದನ ನಡೆಯುವ ಜಾಗ ; ಹೊಕ್ಕ+ಅಂತೆ ; ಹೊಕ್ಕ=ಒಳನುಗ್ಗಿದ ; ಅಂತೆ=ಹಾಗೆ)

25)     ಸತ್ಯರು ಹುಸಿದಡೆ ಒತ್ತಿ ಬಂದಡೆ ಶರಧಿ
ಉತ್ತಮರು ತಪ್ಪಿ ನಡೆದಡೆ-ಲೋಕವಿ
ನ್ನೆತ್ತ ಸಾರುವುದು ಸರ್ವಜ್ಞ

ಸಮಾಜದ ಒಳಿತಿಗಾಗಿ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕಾದ ವ್ಯಕ್ತಿಗಳೇ ಕೆಟ್ಟ ನಡೆನುಡಿಗಳಿಂದ ವರ‍್ತಿಸತೊಡಗಿದಾಗ , ಅಂತಹ ಸಮಾಜಕ್ಕೆ ಕೇಡು ಕಟ್ಟಿಟ್ಟ ಬುತ್ತಿ ಎಂಬುದನ್ನು ಹೇಳಲಾಗಿದೆ.

(ಸತ್ಯರು=ನಡೆನುಡಿಗಳಲ್ಲಿ ಒಂದಾಗಿ ಬಾಳುತ್ತಿರುವವರು/ಸತ್ಯವಂತರು ; ಹುಸಿದಡೆ=ಸುಳ್ಳನ್ನು ಹೇಳಿದರೆ ; ಹುಸಿ=ಸುಳ್ಳು ; ಒತ್ತಿ ಬಂದಡೆ=ದಡವನ್ನೇ ಕೊಚ್ಚುವಂತೆ ಅಲೆಗಳು ಉಕ್ಕೆದ್ದು ಅಪ್ಪಳಿಸಿದರೆ ; ಬಂದಡೆ=ಬಂದರೆ ; ಶರಧಿ=ಸಮುದ್ರ/ಕಡಲು/ಸಾಗರ ; ತಪ್ಪಿ ನಡೆದಡೆ=ನೀತಿನಿಯಮಗಳನ್ನು ಕಡೆಗಣಿಸಿ ನಡೆದುಕೊಂಡರೆ ; ಲೋಕವು+ಇನ್ನು+ಎತ್ತ ; ಲೋಕ=ಜಗತ್ತಿನ/ಸಮಾಜದ ಬದುಕು ; ಎತ್ತ=ಯಾವ ಕಡೆಗೆ ; ಸಾರುವುದು=ಹೋಗುವುದು)

26)     ಆಡದೆ ಮಾಡುವವ ರೂಢಿಯೊಳಗುತ್ತಮನು
ಆಡಿ ಮಾಡುವನು ಮಧ್ಯಮನು – ಅಧಮ ತಾ
ನಾಡಿಯೂ ಮಾಡ ಸರ್ವಜ್ಞ

ವ್ಯಕ್ತಿಯೊಬ್ಬನು ಆಡುವ ಮಾತು ಮತ್ತು ಮಾಡುವ ಕೆಲಸದ ರೀತಿಯು , ಅವನ ವ್ಯಕ್ತಿತ್ವವನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಹೇಳಲಾಗಿದೆ.

(ಆಡದೆ= ತಾನು ಮಾಡುವ ಕೆಲಸಗಳನ್ನು ಮೊದಲೇ ಹೆಮ್ಮೆಯಿಂದ ಹೇಳಿಕೊಳ್ಳದೆ ;  ಮಾಡುವವ=ಮಾಡುವವನು ; ರೂಢಿ=ಲೋಕದ ಜನಸಮುದಾಯ/ಸಮಾಜದಲ್ಲಿರುವ ಜನರು ; ರೂಢಿಯೊಳಗೆ+ಉತ್ತಮನು=ಲೋಕ/ಸಮಾಜದ ಜನರ ಗುಂಪಿನಲ್ಲಿ ಒಳ್ಳೆಯವನು ; ಆಡಿ ಮಾಡುವನು=ತಾನು ಮಾಡಲಿರುವ ಕೆಲಸವನ್ನು ತಾನೇ ಜಂಬದಿಂದ ಹೊಗಳಿಕೊಂಡು , ಅನಂತರ ಹೇಳಿದಂತೆ ಮಾಡುವವನು ; ಮಧ್ಯಮನು=ಒಳ್ಳೆಯ/ಕೆಟ್ಟ ಎರಡು ಗುಣಗಳನ್ನು ಹೊಂದಿರುವವನು ; ಅಧಮ=ನೀಚ/ಕೆಟ್ಟವನು ; ತಾನು+ಆಡಿಯೂ=ಮೊದಲು ಹೇಳಿಕೊಂಡಿದ್ದರೂ ; ಮಾಡ=ಯಾವ ಕೆಲಸವನ್ನು ಮಾಡುವುದಿಲ್ಲ)

27)       ಅಕ್ಕರವ ಕಲಿತಾತ ಒಕ್ಕಲನು ತಿನಕಲಿತ
ಲೆಕ್ಕವ ಕಲಿತ ಕರಣಿಕನು – ನರಕದಲಿ
ಹೊಕ್ಕಿರಲು ಕಲಿತ ಸರ್ವಜ್ಞ

ಕಲಿತ ವಿದ್ಯೆಯಿಂದ ಜನರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಬದಲು , ಕೇಡನ್ನು ಬಗೆಯುವವರ ನೀಚತನವನ್ನು ಹೇಳಲಾಗಿದೆ.

(ಅಕ್ಕರವ=ಓದುಬರಹವನ್ನು  ; ಕಲಿತ+ಆತ=ಕಲಿತವನು ; ಒಕ್ಕಲನು=ಸಮಾಜದಲ್ಲಿರುವ ಜನಸಮುದಾಯವನ್ನು  ; ತಿನ+ಕಲಿತ=ನಾನಾ ಬಗೆಗಳಲ್ಲಿ ಜನರನ್ನು ವಂಚಿಸಿ , ಸುಲಿಗೆ ಮಾಡಿ , ನಾಡಿನ ಸಂಪತ್ತನ್ನು ಲೂಟಿ ಮಾಡುವುದರಲ್ಲಿ ನುರಿತವನಾದ ;ತಿನ=ತಿನ್ನಲು ;  ಲೆಕ್ಕವ ಕಲಿತ=ಊರಿನ ಬೂಮಿ ಹಾಗೂ ಇನ್ನಿತರ ವ್ಯವಹಾರದ ಲೆಕ್ಕಪತ್ರಗಳನ್ನು ನೋಡಿಕೊಳ್ಳುವ ಕುಶಲತೆ ಹಾಗೂ ಹೊಣೆಗಾರಿಕೆಯುಳ್ಳ  ; ಕರಣಿಕ=ಶಾನುಬೋಗ/ಕುಲಕರ‍್ಣಿ ; ನರಕ=ಈ ಲೋಕದಲ್ಲಿ ಜನರಿಗೆ ಕೇಡನ್ನು ಬಗೆದು ಸಾವನ್ನಪ್ಪಿದ ವ್ಯಕ್ತಿಯು , ಅನಂತರ ತಾನು ಮಾಡಿದ ಪಾಪದ ಕೆಲಸಗಳಿಗೆ ತಕ್ಕಂತೆ ನಾನಾ ಬಗೆಯ ದಂಡನೆಗಳಿಗೆ ಗುರಿಯಾಗಿ ನರಳುವ ಮತ್ತೊಂದು ಲೋಕದಲ್ಲಿರುವ ಜಾಗ. ಜನರಿಗೆ ಕೇಡನ್ನು ಬಗೆದವರು ಸಂಕಟದ ನೆಲೆಯಾದ ನರಕಕ್ಕೆ , ಒಳಿತನ್ನು ಮಾಡಿದವರು ಆನಂದದ ನೆಲೆಯಾದ ಸ್ವರ‍್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯು ಜನಸಮುದಾಯದ ಮನದಲ್ಲಿದೆ ; ನರಕದಲಿ+ಹೊಕ್ಕಿ+ಇರಲು=ನರಕದಲ್ಲಿ ಹೋಗಿ ನೆಲಸಲು ; ಕಲಿತ=ಸುಳ್ಳು/ಕಪಟ/ಸುಲಿಗೆಗಳಲ್ಲಿ ನಿಪುಣನಾದ)

28)         ಬಲ್ಲಿದ ನುಡಿದರೆ ಬೆಲ್ಲವ ಮೆದ್ದಂತೆ
ಇಲ್ಲದ ಬಡವ ನುಡಿದರೆ-ಬಾಯೊಳಗೆ
ಜಳ್ಳು ಬಿದ್ದಂತೆ ಸರ್ವಜ್ಞ

ಸಮಾಜದಲ್ಲಿ ಸಿರಿವಂತರ ಮಾತಿಗೆ ಮೆಚ್ಚುಗೆಯನ್ನು/ಬಡವರ ಮಾತಿಗೆ ತಿರಸ್ಕಾರವನ್ನು ತೋರಿಸುವ ಬಗೆಯನ್ನು ರೂಪಕಗಳ ಮೂಲಕ ಹೇಳಲಾಗಿದೆ.

(ಬಲ್ಲಿದ=ಹಣ ಆಸ್ತಿ ಗದ್ದುಗೆಯಿಂದ ಸಾಮಾಜಿಕವಾಗಿ ದೊಡ್ಡ ಅಂತಸ್ತನ್ನು ಪಡೆದವನು/ಉಳ್ಳವನು ; ನುಡಿದರೆ=ಮಾತನಾಡಿದರೆ/ಏನನ್ನೂ ಹೇಳಿದರೂ ; ಮೆದ್ದ+ಅಂತೆ=ತಿಂದ ಹಾಗೆ ; ಮೆದ್ದ=ತಿಂದ ; ಮೆಲ್ಲು=ತಿನ್ನು ; ಇಲ್ಲದ=ಯಾವುದೇ ಸಂಪತ್ತನ್ನು ಹೊಂದಿರದ/ಗತಿಗೇಡಿಯಾದ ; ಜಳ್ಳು=ಒಳಗೆ ತಿರುಳಿಲ್ಲದ ಕಾಳು ; ಬಿದ್ದ+ಅಂತೆ=ಬಿದ್ದ ಹಾಗೆ)

29)        ಕೇಳುವವರಿದ್ದಿಹರೆ ಹೇಳುವುದು ಬುದ್ಧಿಯನು
ಕೋಳದಲಿ ಬಿದ್ದು ಬಳಲುವಗೆ-ಬುದ್ಧಿಯನು
ಹೇಳುವನೆಗ್ಗ ಸರ್ವಜ್ಞ

ನಮ್ಮ ಮಾತುಗಳನ್ನು ಮನವಿಟ್ಟು ಆಲಿಸುವವರಿಗೆ ತಿಳುವಳಿಕೆಯನ್ನು ಹೇಳಬೇಕೆ ಹೊರತು , ಎಲ್ಲರಿಗೂ ಹೇಳಲು ಹೋಗುವುದು ಸರಿಯಲ್ಲವೆಂಬ ಎಚ್ಚರಿಕೆಯನ್ನು ನೀಡಲಾಗಿದೆ.

(ಕೇಳುವವರು+ಇದ್ದು+ಇಹರೆ=ನಾವು ಆಡಿದ ಮಾತುಗಳಿಗೆ ಬೆಲೆ ಕೊಟ್ಟು ತಮ್ಮ ತಪ್ಪನ್ನು ತಿದ್ದಿ ಸರಿಪಡಿಸಿಕೊಂಡು ನಡೆಯುವವರು ಇದ್ದರೆ ; ಇಹರೆ=ಇದ್ದರೆ ; ಬುದ್ಧಿ=ತಿಳುವಳಿಕೆ/ಅರಿವು ; ಕೋಳ=ಬೇಡಿ/ಸಂಕೋಲೆ ; ಬಳಲು=ಸಂಕಟಪಡು/ದಣಿ/ಆಯಾಸಗೊಳ್ಳು ; ಕೋಳದಲಿ ಬಿದ್ದು ಬಳಲುವಗೆ=ಕಳ್ಳತನ ಕೊಲೆ ಸುಲಿಗೆ ಮುಂತಾದ ತಪ್ಪುಗಳನ್ನು ಮಾಡಿ ಸೆರೆವಾಸದಲ್ಲಿ ನರಳುತ್ತಿರುವವನಿಗೆ ; ಹೇಳುವನು+ಎಗ್ಗ ; ಎಗ್ಗ=ದಡ್ಡ/ತಿಳಿಗೇಡಿ/ಅರಿವಿಲ್ಲದವನು)

30)      ದಂತಪಂಕ್ತಿಗಳೊಳಗೆ ಎಂತಿಕ್ಕು ನಾಲಗೆಯು
ಸಂತತ ಖಳರ ಒಡನಿರ್ದು – ಬಾಳುವು
ದಂತೆ ಕಂಡಯ್ಯ ಸರ್ವಜ್ಞ

ಕೆಟ್ಟವರ ನಡುವೆ ಇರುವಾಗ ಅಪಾಯಕ್ಕೆ ಸಿಲುಕದೆ ಬಾಳುವ ಜಾಣತನದ ನಡೆನುಡಿಗಳನ್ನು ಹೊಂದಿರಬೇಕು ಎಂಬುದನ್ನು ಹೇಳಲಾಗಿದೆ.

(ದಂತಪಂಕ್ತಿಗಳ+ಒಳಗೆ ; ದಂತ=ಹಲ್ಲು ; ಪಂಕ್ತಿ=ಸಾಲು ; ಎಂತು+ಇಕ್ಕು=ಹೇಗೆ ಇರುವುದು ; ಸಂತತ=ಯಾವಾಗಲೂ/ಸದಾಕಾಲ ; ಖಳ=ನೀಚ/ಕೇಡಿ/ಮೋಸಗಾರ ; ಒಡನೆ+ಇರ‍್ದು=ಜತೆಯಲ್ಲಿದ್ದು ; ಬಾಳುವುದು+ಅಂತೆ ; ಅಂತೆ=ಹಾಗೆ ; ಕಂಡ+ಅಯ್ಯ=ತಿಳಿದುನೋಡಯ್ಯ)

( ಚಿತ್ರಸೆಲೆ: wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. 30 ನೆಯ ವಚನದ ವಿವರಣೆಯು ಬಿಟ್ಟುಹೋಗಿದೆ . ಅದರ ವಿವರಣೆಯು ಈ ಕೆಳಕಂಡಂತೆ ಇದೆ .
    ” ಕೆಟ್ಟವರ ನಡುವೆ ಇರುವಾಗ ಅಪಾಯಕ್ಕೆ ಸಿಲುಕದೆ ಬಾಳುವ ಜಾಣತನದ ನಡೆನುಡಿಗಳನ್ನು ಹೊಂದಿರಬೇಕು ಎಂಬುದನ್ನು ಹೇಳಲಾಗಿದೆ ”
    ಸಿ ಪಿ ನಾಗರಾಜ

    • ತಪ್ಪನ್ನು ಗಮನಕ್ಕೆ ತಂದಿದಕ್ಕೆ ನನ್ನಿ ಸಿ ಪಿ ನಾಗರಾಜ್ ಅವರೇ, 30 ನೆಯ ವಚನದ ವಿವರಣೆಯನ್ನು ಈಗ ಸೇರಿಸಲಾಗಿದೆ.

ಅನಿಸಿಕೆ ಬರೆಯಿರಿ: