ಬಲು ಅಪರೂಪದ ‘ಪೋರ‍್ಡ್ ಜಿಟಿ’ ಕಾರು

ಜಯತೀರ‍್ತ ನಾಡಗವ್ಡ.

Ford_GT_1

ನಮ್ಮಲ್ಲಿ ಕೆಲವರಿಗೆ ಬಗೆ ಬಗೆಯ ಆಸಕ್ತಿಗಳು. ಎತ್ತುಗೆಗೆ, ವಿದ್ಯಾರ‍್ತಿ ಬವನದಲ್ಲಿ ದೋಸೆ ತಿನ್ನುವ ಕೆಲವರಿಗೆ ಬೇರೆ ಹೊಟೇಲ್‌ನ ದೋಸೆ ರುಚಿಸದು. ಕೆಲವರು ರೇಮಂಡ್ ಕೂಟದ ಬಟ್ಟೆಯನ್ನೇ ತೊಡುತ್ತಾರೆ ಬೇರೆ ಕೂಟದ್ದಾಗಿದ್ದರೆ ಸಾರಾಸಗಟಾಗಿ ತಳ್ಳಿಹಾಕುವರು. ಇದರಂತೆ ಕೆಲವರಿಗೆ ತಮ್ಮ ನೆಚ್ಚಿನ ಕೂಟದ ಕಾರನ್ನೇ ಕೊಳ್ಳಬೇಕು ಇಲ್ಲವೇ ಕೊಳ್ಳುವುದೇ ಇಲ್ಲ. ಕೆಲವೊಮ್ಮೆ ಈ ಆಸಕ್ತಿಗಳೇ ಅಚ್ಚುಮೆಚ್ಚಾಗಿರುತ್ತವೆ. ಅದನ್ನು ಬಿಟ್ಟರೆ ಬೇರೆ ಬಗೆಯ, ಬೇರೆ ಕೂಟದ ವಸ್ತುಗಳಾಗಲಿ ಅವರಿಗೆ ಇಶ್ಟವಾಗುವುದಿಲ್ಲ.

ಅದೇ ತೆರನಾಗಿ ಅಮೇರಿಕಾದಲ್ಲಿ ಪೋರ‍್ಡ್ ಕಾರು ಎಂದರೆ ಹಲವರಿಗೆ ಎಲ್ಲಿಲ್ಲದ ಒಲವು. ಬಿಲ್ ನೆಲ್ಸನ್ (Bill Nelson) ಎಂಬ 73ರ ಇಳಿವಯಸ್ಸಿನ ಹಿರಿಯರು ಅಮೇರಿಕಾದ ನ್ಯೂಜೆರ‍್ಸಿಯವರು. 9 ವರುಶಗಳ ಹಿಂದೆ ಕೆಲಸದಿಂದ ಬಿಡುಗಡೆ ಹೊಂದಿದ್ದ ನೆಲ್ಸನ್ ತಮ್ಮ ಬಳಿಯಿರುವ 160,000 ಡಾಲರ್ (ಸುಮಾರು 1 ಕೋಟಿ ರೂ.) ಹಣವನ್ನು ಪೋರ‍್ಡ್ ಮಳಿಗೆಗೆ ತೆರಳಿ ಜಿಟಿ ಕಾರನ್ನು ಕೊಳ್ಳಲು ಕರ‍್ಚು ಮಾಡಿದ್ದರು.

ನಾನು ಮೊದಲಿನಿಂದಲೂ ಪೋರ‍್ಡ್ ಕೂಟದ ಕಾರುಗಳನ್ನೇ ಕೊಳ್ಳುವವ, ಅವುಗಳೆಂದರೆ ಅಚ್ಚುಮೆಚ್ಚು.

ಎನ್ನುತ್ತಾರೆ ನೆಲ್ಸನ್. ಜಿಟಿ ಕಾರನ್ನು ನೋಡಿದಾಗಲೇ ಕೊಳ್ಳಲೇಬೇಕೆಂದು ಗಟ್ಟಿ ತೀರ‍್ಮಾನ ಮಾಡಿದ್ದರಂತೆ.

ಅಂದಹಾಗೆ ಪೋರ‍್ಡ್ ಜಿಟಿ ಅಮೇರಿಕಾದ ಅತಿ ದುಬಾರಿ ಬೆಲೆಯ ಆಟೋಟದ ಸೂಪರ್ ಕಾರು. ನ್ಯೂಜೆರ‍್ಸಿಯ (New Jersy) ಬೀದಿಗಳಲ್ಲಿ ಪೋರ‍್ಡ್ ಜಿಟಿ ಬಂಡಿಯಲ್ಲಿ ಜುಮ್ಮನೆ ಸಾಗುವ ನಲಿವೇ ಬೇರೆ ಎನ್ನುತ್ತಾರೆ ನೆಲ್ಸನ್.

ಪೋರ‍್ಡ್ ಜಿಟಿ (Ford GT) ಕಾರುಗಳು ಆಟೋಟದ ಬಳಕೆಯ ವೇಗದಿ ಸಾಗುವ ದುಬಾರಿ ಕಾರು. ಕಳೆದ ವರುಶ ಅಮೇರಿಕಾದ ಊರೊಂದರಲ್ಲಿ  ಇದೇ ಜಿಟಿ ಕಾರು ಸುಮಾರು 4 ಕೋಟಿಗೆ ಮಾರ‍್ಕೂಗಿನಲ್ಲಿ (auction) ಕೊಳ್ಳಲ್ಪಟ್ಟಿತ್ತು. ವೇಗದಿ ಸಾಗಿ ಮಯ್ ಜುಮ್ಮ ಎನ್ನಿಸುವ ಮೆಕ್ಲಾರೆನ್ (McLaren), ಪೆರಾರಿ (Ferrari), ಪೋರ‍್ಶ್ (Porsche) ಮುಂತಾದ ಕಾರುಗಳ ಪಟ್ಟಿಗೆ ಪೋರ‍್ಡ್ ಜಿಟಿ ಸೇರಿದ್ದು ಅಮೆರಿಕಾದವರಿಗೆ ಹೆಮ್ಮೆಯೆ ವಿಶಯ.

1960ರಲ್ಲಿ ಲೇ ಮಾನ್ಸ್ (Le Mans) ಪಯ್ಪೋಟಿಯಲ್ಲಿ ಕಾಲಿಡುವ ಮೂಲಕ ಪೋರ‍್ಡ್ ಜಿಟಿ40 (Ford GT-40) ಸೂಪರ್ ಕಾರುಗಳು ಜಗತ್ತಿಗೆ ಪರಿಚಿತವಾಗಿದ್ದವು. ಪೋರ‍್ಡ್ ಜಿಟಿ40 ಹೆಸರಿನ ಆಟೋಟದ ಸೂಪರ್ ಕಾರುಗಳನ್ನು ತಯಾರಿಸುವ ಹಿಂದೆ ಹಳಮೆಯೇ ಇದೆ.

ಪೋರ‍್ಡ್ ಕೂಟದ ಒಡೆಯ ಎರಡನೇಯ ಹೆನ್ರಿ ಪೋರ‍್ಡ್‌ಗೆ (Henry Ford-II) ಇಟಲಿಯ ಪೆರಾರಿ ಕೂಟದ ಓಡೆಯ ಎಂಜೊ ಪೆರಾರಿ (Enzo Ferrari) ತಮ್ಮ ಕೂಟವನ್ನು ಮಾರುವ ಇಂಗಿತ ತೋರಿದ್ದರು. ಈ ಹಿನ್ನೆಲೆಯಲ್ಲಿ ಪೋರ‍್ಡ್ ಕೂಟದವರು ಪೆರಾರಿ ಬಂಡಿ ಕೂಟಕ್ಕೆ ಬೇಟಿ ನೀಡಿ ವಹಿವಾಟನ್ನು ಕೊನೆಗೊಳಿಸುವ ಹಂತದಲ್ಲಿದ್ದರು. ಕೊನೆಯ ಗಳಿಗೆಯಲ್ಲಿ ಎಂಜೊ ಪೆರಾರಿ ಮನಸ್ಸು ಬದಲಾಯಿಸಿ ಪೆರಾರಿ ಕೂಟವನ್ನು ತಮ್ಮಲ್ಲೇ ಉಳಿಸಿಕೊಂಡರು. ಇದು ಹೆನ್ರಿ ಪೋರ‍್ಡ್‌ನ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

ಪೆರಾರಿಯವರ ವಿರುದ್ದ ಸೇಡು ತೀರಿಸಿಕೊಳ್ಳುವ ಸಲುವಾಗಿ ಹೆನ್ರಿ ಪೋರ‍್ಡ್ ತನ್ನ ಕೂಟದಿಂದಲೇ ಪೆರಾರಿಯನ್ನು ಮೀರಿಸುವ ಕಾರು ಹೊರತರುವ ಪಣತೊಟ್ಟರು. ಕೆಲವೇ ತಿಂಗಳುಗಳಲ್ಲಿ ಹೆನ್ರಿ ಪೋರ‍್ಡ್ ತಾವಂದುಕೊಂಡಂತೆ ಮಾಡಿ ತೋರಿಸಿದ್ದು ಈಗ ಹಳಮೆ. ಜಿಟಿ40 ಹೆಸರಿನ ಆಟೋಟದ ಕಾರುಗಳು ಬಗೆ ಬಗೆಯ ಪಯ್ಪೋಟಿಯಲ್ಲಿ ಕಾಣಿಸಿ ಪೆರಾರಿ, ಮೆಕ್ಲಾರೆನ್ ಮುಂತಾದವರಿಗೆ ಬಿಸಿ ಮುಟ್ಟಿಸಿದ್ದವು.

2ನೇ ಪೀಳಿಗೆ ಪೋರ‍್ಡ್ ಜಿಟಿ ಕಾರುಗಳು ಕೂಟದ ಮೇಲಾಳು ಬಿಲ್ ಪೋರ‍್ಡ್ (Bill Ford) ಅವರ ಮುಂದಾಳತ್ವದಲ್ಲಿ ಹೊರಬಂದವು. ಕೂಟದ ನೂರನೇ ವರುಶದ ಸಂಬ್ರಮಾರಚರಣೆಯ ಹೊತ್ತಿಗೆ 2003ರಲ್ಲಿ ಜಿಟಿಯ ಎರಡನೇ ಪೀಳಿಗೆಯ ಕಾರುಗಳು ಮಂದಿ ಮುಂದಿದ್ದವು.

ಪ್ರೆಡ್ ಗುಡ್‌ನವ್ (Fred Goodnow) ಹೆಸರಿನ ಬಿಣಿಗೆಯರಿಮೆಯ ವಿಬಾಗದ ಮುಕ್ಯಸ್ತರ ಒಳಗೊಂಡ ತಂಡ 15 ತಿಂಗಳಲ್ಲಿ ಬಿಳಿ, ಕೆಂಪು ಮತ್ತು ನೀಲಿ ಬಣ್ಣದ ಮೂರು ಬಗೆ ಹೊಸ ಜಿಟಿ ಸೂಪರ್ ಕಾರುಗಳನ್ನು ಅಣಿಗೊಳಿಸಿತ್ತು. ಮೊದಲು ಪೆಟುನಿಯಾ ಹೆಸರಿನಲ್ಲಿ ಕೆಲವು ಮಾದರಿ ತಯಾರಿಸಿದ್ದೆವು, ಆಗ ಕೆಲವರು ಇದು ಹೊಂಡಾದ ಅಕ್ಯುರಾ (Honda Acura) ಬಂಡಿಯಂತಿದೆ ಎಂಬ ಹಿನ್ನುಣಿಕೆ ನೀಡಿದ್ದರು. ಆದ ಕಾರಣ ಪೋರ‍್ಡ್‌ನ ಕೆಲವು ಹಿರಿಯ ಅದಿಕಾರಿಗಳು ಜಿಟಿ40 ಹಾಗಿರುವ ಮಾದರಿಗಳನ್ನೇ ತಯಾರಿಸುವಂತೆ ಹೇಳಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಗುಡ್‌ನವ್.

ಪೋರ‍್ಡ್ ಜಿಟಿ ಬಂಡಿಯ ಅಂದವನ್ನು ಹಾಳುಗೆಡವಿದರೆ ಇಡಿ ಜಗತ್ತೇ ನಿಮ್ಮೊಂದಿಗೆ ಬೇಸರಿಸಿಕೊಳ್ಳುತ್ತದೆ ಎಂದು ಜಿಟಿಯ ಪ್ರಮುಕ ಈಡುಗಾರ ಕಮಿಲೊ ಪರ‍್ಡೊ (Camilo Perdo) ಅವರ ಅನಿಸಿಕೆ. ಪ್ರತಿಯೊಬ್ಬ ಕಾರೊಲೊವಿಗ ಇಂತಹ ಕಾರನ್ನು ಹೊಂದುವ ತುಡಿತ, ಹೆಸರುವಾಸಿ ತಾನೋಡ ಸುದ್ದಿ ಪತ್ರಿಕೆ ಟಾಪ್ ಗೇಯರ್ (Top Gear) ಜೆರೆಮಿ ಕ್ಲಾರ‍್ಕ್‌ಸನ್ (Jeremy Clarkson) ತಾವು ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕೆನಡಾ ಮೂಲದ ಮಾರಾಳಿಗ ಪಿಟರ್ ಕ್ಲಟ್ಟ್‌ರವರ (Peter Klutt) ಪ್ರಕಾರ  ಹೊಸ ಜಿಟಿ ಬಂಡಿಯ ಎರಡನೇಯ ಪೀಳಿಗೆಯಲ್ಲೂ ಮೊದಲ ಪೀಳಿಗೆಯ ತಿರುಳನ್ನು ಉಳಿಸಿಕೊಂಡಿದ್ದು ಮಂದಿಯ ಮೆಚ್ಚುಗೆ ಪಡೆದಿದೆ. ಸ್ವತಹ ಪೋರ‍್ಡ್ ಜಿಟಿ ಕಾರು ಹೊಂದಿರುವ ಈ ಮಾರಾಳಿಗರು ಡಜನ್ ಕ್ಕಿಂತ ಹೆಚ್ಚು ಜಿಟಿ ಕಾರುಗಳನ್ನು ಮಾರಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಎರಡನೇಯ ಪೀಳಿಗೆಯ ಒಟ್ಟು 4038 ಜಿಟಿ ಕಾರುಗಳನ್ನು ಪೋರ‍್ಡ್ ಕೂಟದವರು ತಯಾರಿಸಿದ್ದರು. ದುಬಾರಿ ಕಾರುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಹವ್ಯಾಸಿಗರಿಗೆ ಜಿಟಿ ಹೇಳಿ ಮಾಡಿಸಿರುವಂತದ್ದು ಎನ್ನುತ್ತಾರೆ ಕ್ಲಟ್ಟ್.

ಈ ವರುಶದಲ್ಲಿ ನಡೆದ ಡೆಟ್ರಾಯಿಟ್ ಆಟೋ ತೋರ‍್ಪಿನಲ್ಲಿ (Detroit Auto show) ಮೂರನೇ ಪೀಳಿಗೆಯ ಜಿಟಿ ಕಾರಿನ ಮಾದರಿಯೊಂದನ್ನು ಪೋರ‍್ಡ್ ಕೂಟದವರು ತೋರಿಸಿದ್ದರು. 2017ರ ಹೊತ್ತಿಗೆ ಇದು ಮಂದಿಯ ಮುಂದೆ ಬರಲಿದೆ.  ಅದೇ ಹೊತ್ತಿನಲ್ಲಿ ಹೆಸರುವಾಸಿ ಲೆ ಮಾನ್ಸ್ ಪಯ್ಪೋಟಿಗೆ 50 ವರುಶ ತುಂಬುತ್ತಿದ್ದು ಅಲ್ಲಿಯೂ ಕಣಕ್ಕಿಳಿದು ತನ್ನ ಮೊದಲ ಗೆಲುವಿನ 50 ವರುಶಗಳ ಆಚರಿಸುವ ಸಿದ್ದತೆಯಲ್ಲಿದೆ ಪೋರ‍್ಡ್ ಜಿಟಿ ತಂಡ. 400000 ಡಾಲರ್ ಬೆಲೆಯ ಮೂರನೇಯ ತಲೆಮಾರಿನ 250 ಕಾರುಗಳು ಸಿರಿವಂತ ಕೊಳ್ಳುಗರಿಗೆ ಲಬ್ಯವಿರಲಿವೆ ಎನ್ನುವ ಸುದ್ದಿಯೂ ಹೊರಬಿದ್ದಿದೆ. ಮೆಕ್ಲಾರೆನ್‌ನ ಪಿ-1, ಲಾ ಪೆರಾರಿ, ಪೋರ‍್ಶ್-918 ಮತ್ತು ಬುಗಾಟಿ ವೆಯ್ರೊನ್ ನಂತ ಸಿರಿಮೆಯ ಕಾರುಗಳಿಗೆ ಮೂರನೇಯ ಪೀಳಿಗೆ ಜಿಟಿ ಪಣವೊಡ್ಡಲಿದೆಯಂತೆ.

ಬರೆಟ್-ಜಾಕ್ಸನ್ (Barrett-Jackson) ಎಂಬ ಮಾರ‍್ಕೂಗು ಸಂಸ್ತೆಯ ಮೇಲಾಳು ಕ್ರೇಗ್ ಜಾಕ್ಸನ್ (Craig Jackson) ಹೊಸ ಪೀಳಿಗೆಯ ಜಿಟಿಯ ಬರುವಿಕೆ ಮಂದಿಯಲ್ಲಿ ಸಾಕಶ್ಟು ಕುತೂಹಲ ಕೆರಳಿಸಿದೆ ಎಂದಿದ್ದಾರೆ. ತಮ್ಮ ಬಳಿಯಲ್ಲೂ ಜಿಟಿ ಕಾರನ್ನು ಹೊಂದಿರುವ ಜಾಕ್ಸನ್ ಹೊಸ ಪೀಳಿಗೆಯ ಜಿಟಿ ಬರುವಿಕೆಯಿಂದ ಹಳೆಯ ಮಾದರಿಗಳು ಮಾರ‍್ಕೂಗಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗುವುದು ಕಚಿತವೆನ್ನುತ್ತಾರೆ.

ಹೊಸ ಜಿಟಿ ಕಾರು ತನ್ನ ಮೊದಲಿನ ಹೆಸರುವಾಸಿತನ ಕಾಯ್ದುಕೊಂಡು ಹೋಗುವುದೇ ಎನ್ನುವುದಕ್ಕೆ 2017 ರವರೆಗೆ ಕಾಯಲೇಬೇಕು.

(ತಿಟ್ಟಸೆಲೆ: ford.com)Categories: ಅರಿಮೆ

ಟ್ಯಾಗ್ ಗಳು:, , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s