ಕರ‍್ನಾಟಕದ ಗರಿ ಮೈಸೂರು ರೇಶಿಮೆಯ ಸಿರಿ
ರೇಶಿಮೆ ಸೀರೆಗೆ ಮನಸೋಲದ ಹೆಂಗೆಳೆಯರೇ ಇಲ್ಲ ಬಿಡಿ. ಅದರಲ್ಲಿಯೂ ನಮ್ಮ ಮಯ್ಸೂರಿನ ರೇಶಿಮೆ ಸೀರೆಯೆಂದರಂತೂ ನೀರೆಯರಿಗೆ ಅಚ್ಚುಮೆಚ್ಚು. ಅಶ್ಟಕ್ಕೂ ಮೈಸೂರು ರೇಶಿಮೆ ಸೀರೆಯನ್ನು ಮೆಚ್ಚದಿರಲು ಕಾರಣಗಳೇ ಸಿಗಲಾರವು. ಅಶ್ಟರ ಮಟ್ಟಿಗಿದೆ ಇದರ ಹೆಚ್ಚುಗಾರಿಕೆ. ಅಲ್ಲದೇ ಮೈಸೂರು ರೇಶಿಮೆ ಇಂದಿಗೂ ಕರ‍್ನಾಟಕದ ಹೆಮ್ಮೆಯ ಗರಿಹೊತ್ತು ನಡೆಯುತ್ತಿರುವ ಪಾರಂಪರಿಕ ಉಡುಗೆ. ಈ ನಿಟ್ಟಿನಲ್ಲಿ ಇದು ಸಾಂಪ್ರದಾಯಕವಾಗಿಯೂ ಹೆಚ್ಚುಗಾರಿಕೆಯನ್ನು ಪಡೆದುಕೊಂಡಿದೆ.
ಮೈಸೂರು ರೇಶಿಮೆಯ ಹುಟ್ಟು ಮತ್ತು ಹರಿವು :
ನಾಲ್ವಡಿ ಕ್ರಿಶ್ಣರಾಜ ಒಡೆಯರ್ ಅವರು 1912ರಲ್ಲಿ ರೇಶಿಮೆ ನೇಯ್ಗೆ ಕಾರ‍್ಕಾನೆಯನ್ನು ಕಟ್ಟಿಸಿದರು. ಆಗ ಮಹಾರಾಜರು ‘ಸ್ವಿಟ್ಸರ‍್ಲೆಂಡ್’ನಿಂದ 32 ಮಗ್ಗದ ಬಿಣಿಗೆಗಳನ್ನು ಆಮದು ಮಾಡಿಕೊಂಡು ಆ ಕಾರ‍್ಕಾನೆಯಲ್ಲಿ ಸೀರೆ ತಯಾರಿಸುವ ಕೆಲಸವನ್ನು ಶುರುವಿಟ್ಟರು. ಮೊದಮೊದಲಿಗೆ ಇದು ರಾಜ ಮನೆತನದವರಿಗೆ ಬೇಕಾಗುವ ಮೇಲ್ಮಟ್ಟದ ರೇಶಿಮೆ ಉಡುಪುಗಳ ತಯಾರಿಕೆಗಶ್ಟೇ ಬಳಕೆಯಾಗುತ್ತಿತ್ತು. ಮುಂದೆ 1938ರ ಹೊತ್ತಿಗೆ ವ್ಯವಹಾರದ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ತಯಾರಿಕೆ ಶುರುವಿಟ್ಟುಕೊಳ್ಳಲಾಯಿತು. ಬಳಿಕ ಸ್ವಾತಂತ್ರ್ಯದ ಬಳಿಕ ಮಯ್ಸೂರು ರೇಶಿಮೆ ಕಾರ‍್ಕನೆಯನ್ನು ಮಯ್ಸೂರು ಸರ‍್ಕಾರದ ಆಡಳಿತದಡಿಯಲ್ಲಿ ರೇಶಿಮೆ ಇಲಾಕೆಗೆ ವಹಿಸಿಕೊಡಲಾಯಿತು.
1980 ರ ಹೊತ್ತಿಗೆ ಕರ‍್ನಾಟಕ ಸರಕಾರವು ಈ ಕಾರ‍್ಕಾನೆಯನ್ನು ‘ಕೆ.ಎಸ್.ಐ.ಸಿ-ಕರ‍್ನಾಟಕ ರೇಶಿಮೆ ಉದ್ಯಮಗಳ ನಿಗಮ ನಿಯಮಿತ’ಕ್ಕೆ ವಹಿಸಿಕೊಟ್ಟಿತು. ಇಲ್ಲಿಂದ ಮುಂದೆ ರೇಶಿಮೆ ಸೀರೆಯ ನಿಟ್ಟಿನಲ್ಲಿ ಹೊಸತನಕ್ಕೊಂದು ಮುನ್ನುಡಿ ಬರೆಯಲಾಯಿತು. ಹಿಂದಿಗಿಂತಲೂ ಬೇರೆಯದೇ ಆದ ತಯಾರಿಕೆಯ ಬಗೆ, ಗುಣಮಟ್ಟ ಎಲ್ಲರನ್ನು ಸೆಳೆದುಕೊಂಡಿತು. ಆ ಮೂಲಕ ನಾಡು ಮತ್ತು ಹೊರನಾಡುಗಳಾಚೆಗೂ ಹೇರಳವಾಗಿ ಮೇಲ್ಮಟ್ಟದ ರೇಶಿಮೆ ಉಡುಪುಗಳನ್ನು ಕಳುಹಿಸಲಾಯಿತು. ಹೀಗೆ ಸಾಗರದಾಚೆಗೂ ಮಯ್ಸೂರು ರೇಶಿಮೆಯ ಕಂಪು ಸೂಸುವಂತೆ ಮಾಡುತ್ತಿರುವ ಈ ‘ರೇಶಿಮೆ ನೇಯ್ಗೆ ಕಾರ‍್ಕಾನೆ’ಗೆ ನೂರು ವರುಶಗಳು ಅದಾಗಲೇ ಸಂದಿವೆ.
2012ರಲ್ಲಿಯೇ ನೂರು ವರುಶಗಳನ್ನು ಪೂರಯ್ಸಿದ್ದ ಕಾರ‍್ಕಾನೆ, ಹಲವು ಕಾರಣಾಂತರಗಳಿಂದ ಅದರ ನಲಿವನ್ನಾಚರಿಸಿಕೊಂಡಿರಲಿಲ್ಲ. ಆದರೆ ಈ ವರುಶ, ಅಂದರೆ 2015ರ ಆಗಸ್ಟ್ ತಿಂಗಳಿನಲ್ಲಿ ಅಂತಹ ನಲಿವಿನಾಚರಣೆಗೆ ಅಡಿಯಿಡಲಾಗಿತ್ತು. ಈ ಸಲುವಾಗಿ ಕರ‍್ನಾಟಕ ರೇಶ್ಮೆ ಉದ್ಯಮಗಳ ನಿಗಮ ಹತ್ತು ಹಲವಾರು ಕಾರ‍್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಇಂದಿನ ಕೆ.ಎಸ್.ಐ.ಸಿ ಬಗ್ಗೆ:
ಮಯ್ಸೂರು ಮಾನಂದವಾಡಿ ದಾರಿಯಲ್ಲಿ ಈಗಿನ ಕೆ.ಎಸ್.ಐ.ಸಿ ಯ ರೇಶಿಮೆ ಸೀರೆ ತಯಾರಿಕೆಯ ಕಾರ‍್ಕಾನೆ ಇದೆ. ಸುಮಾರು 500 ಮಂದಿ ಕೆಲಸಗಾರರು ರೇಶಿಮೆ ಸೀರೆ ತಯಾರಿಕೆಯನ್ನು ತಮ್ಮ ಬದುಕಿಗೊಂದು ದಾರಿಯನ್ನಾಗಿಸಿಕೊಂಡಿದ್ದಾರೆ. ರೇಶಿಮೆ ಸೀರೆಯ ತಯಾರಿಕೆಯಲ್ಲಿ ರೇಶಿಮೆ ನೂಲಿನ ಪಾತ್ರ ಹಿರಿದು. ಹೀಗೆ ಇದಕ್ಕೆ ಬೇಕಾದ ಒಳ್ಳೆಯ ಗುಣಮಟ್ಟದ ರೇಶಿಮೆ ಗೂಡುಗಳನ್ನು ಕೊಂಡುಕೊಳ್ಳಲು ತಿರುಮಕೂಡಲದಲ್ಲಿ ವಿಶೇಶವಾದ ಗಟಕವನ್ನು ತೆರೆಯಲಾಗಿದೆ. ಇದಲ್ಲದೇ ರೇಶಿಮೆ ಗೂಡಿನಿಂದ ನೂಲು ತೆಗೆಯುವ ಚಳಕವೂ ಕೂಡ ಇದೇ ಗಟಕದಲ್ಲಿ ನಡೆಯುತ್ತದೆ. ಶುದ್ದ ರೇಶಿಮೆ ಮತ್ತು ಚಿನ್ನದ ಜರಿಯ ಬಳಕೆ (ನೂರಕ್ಕೆ 65ರಶ್ಟು ಬೆಳ್ಳಿ ಮತ್ತು ನೂರಕ್ಕೆ 35ರಶ್ಟು ಶುದ್ದ ಚಿನ್ನವನ್ನು ಬಳಸಿ ತಯಾರಿಸಿರುವ ಬಂಗಾರದ ಎಳೆಗಳು) ಸೀರೆಯ ತಯಾರಿಕೆಯ ಕ್ರಮಗಳಲ್ಲೊಂದು.
ಈ ಗಟಕದ ಲಾಬವೂ ಕೇವಲ ರೇಶಿಮೆ ತಯಾರಿಕೆಗೆ ಸೀಮಿತವಾಗದೇ, ಇದನ್ನು ನಂಬಿ ಬಹಳಶ್ಟು ರಯ್ತರೂ ಬದುಕುತ್ತಿದ್ದಾರೆ. ರಾಮನಗರ, ಶಿಡ್ಲಗಟ್ಟ ಸೇರಿದಂತೆ ಹಲವಾರು ಕಡೆಗಳಿಂದ ನೂರಾರು ರಯ್ತರು ರೇಶಿಮೆ ಗೂಡುಗಳನ್ನು ಹೊತ್ತು ಮಾರಾಟ ಮಾಡಲು ಈ ಗಟಕಕ್ಕೆ ಬರುತ್ತಾರೆ. ಅಲ್ಲದೇ ಇಲ್ಲಿನ ರೇಶಿಮೆಯ ಬೆಲೆ ರಯ್ತರಿಗೂ ಪೂರಕವಾಗುವಂತಿರುತ್ತದೆ. ಇತ್ತೀಚೆಗೆ ಒಂದು ಕೆ.ಜಿ. ರೇಶಿಮೆ ಗೂಡಿನ ಬೆಲೆ 390-400 ರೂಪಾಯಿಗಳ ಸುತ್ತಮುತ್ತವಿದೆ. ಈ ಬೆಲೆಯನ್ನು ಕೆ.ಎಸ್.ಐ.ಸಿ. ನಿರ‍್ದರಿಸುತ್ತದೆ. ಅಲ್ಲದೇ ಈ ವಿಶೇಶ ಗಟಕದಲ್ಲಿ ಪ್ರತೀ ದಿನ 700 ರಿಂದ 800 ಕೆ.ಜಿ. ಯವರೆಗೂ ರೇಶಿಮೆ ಗೂಡುಗಳನ್ನು ಕೊಂಡುಕೊಳ್ಳಲಾಗುತ್ತದೆ. ಇದು ರೇಶಿಮೆಯನ್ನೇ ಬದುಕಿನ ಆಸರೆಯಾಗಿಸಿಕೊಂಡು ನಂಬಿ ಬದುಕುತ್ತಿರುವ ನಾಲ್ಕು ಸಾವಿರ ಕುಟುಂಬಗಳ ಬದುಕಿಗೆ ಇಂಬು ನೀಡುತ್ತಾ ಬರುತ್ತಿದೆ.
ಮಯ್ಸೂರು ರೇಶಿಮೆ ಸೀರೆಗಳು ಅದಿಕ್ರುತ ತೆರೆದಂಗಡಿಗಳಲ್ಲಿ ಮಾತ್ರ ಸಿಗುತ್ತವೆ. ನೀರೆಯರ ನೆಚ್ಚಿನ ಮಯ್ಸೂರು ರೇಶಿಮೆ ಸೀರೆಯನ್ನು ಈಗ ಮಿಂದಾಣದ ಮೂಲಕವೂ ಕೊಂಡುಕೊಳ್ಳಬಹುದು. ತೆರೆದಂಗಡಿಯಲ್ಲಿ ಅಂದಚೆಂದದ ಮಯ್ಸೂರು ರೇಶಿಮೆ ಸೀರೆಯನ್ನು ಕೊಂಡುಕೊಳ್ಳುವ ಮುನ್ನ, ರೇಶಿಮೆ ಸೀರೆ ಅಸಲಿಯೇ ಅತವಾ ನಕಲಿಯೇ ಎಂಬುದನ್ನು, ಕೊಳ್ಳುಗರೇ ಈಗ ಜರಿ ಬಿಡಿನೋಡು(Analyse)ವ ಬಿಣಿಗೆಯ ಮೂಲಕ ಪರೀಕ್ಶೆ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಕೆ.ಎಸ್.ಐ.ಸಿ ಯ ಮಿಂದಾಣಕ್ಕೆ ಬೇಟಿ ನೀಡಿ : www.ksicsilk.com
(ಮಾಹಿತಿ ಸೆಲೆ: prajavani.net)
(ಚಿತ್ರ ಸೆಲೆ: wikipedia, makemytrip.com)
ಇತ್ತೀಚಿನ ಅನಿಸಿಕೆಗಳು