ಸರ‍್ವಜ್ನನ ವಚನಗಳ ಹುರುಳು – 4ನೆಯ ಕಂತು

– ಸಿ.ಪಿ.ನಾಗರಾಜ.

 

31) ಧನಕನಕ ಉಳ್ಳನಕ ದಿನಕರನಂತಿಕ್ಕು
ಧನಕನಕ ಹೋದ ಬೆಳಗಾಗಿ-ಹಾಳೂರ
ಶುನಕನಂತಕ್ಕು ಸರ್ವಜ್ಞ

ಸಂಪತ್ತು ಇದ್ದಾಗ/ಇಲ್ಲವಾದಾಗ ವ್ಯಕ್ತಿಯ ಸಾಮಾಜಿಕ ಅಂತಸ್ತಿನಲ್ಲಿ ಉಂಟಾಗುವ ಏರಿಳಿತಗಳನ್ನು ಎರಡು ಉಪಮೆಗಳ ಮೂಲಕ ಹೇಳಲಾಗಿದೆ.

(ಧನ=ಹಣ ; ಕನಕ=ಚಿನ್ನ/ಬಂಗಾರ ; ಉಳ್ಳ+ಅನಕ ; ಉಳ್ಳ=ಇರುವ ; ಅನಕ=ತನಕ/ವರೆಗೆ ; ದಿನಕರನ+ಅಂತೆ+ಇಕ್ಕು ; ದಿನಕರ=ಸೂರ‍್ಯ ; ಅಂತೆ=ಹಾಗೆ ; ಇಕ್ಕು=ಇರುವುದು/ಕಂಡುಬರುವುದು ; ದಿನಕರನಂತೆ=ಬೆಳಕಿನ ಕಿರಣಗಳಿಂದ ಕಣ್ಮನಗಳನ್ನು ಸೆಳೆಯುವ ಸೂರ‍್ಯನಂತೆ ಸಂಪತ್ತುಳ್ಳವನು ಸಮಾಜದಲ್ಲಿ ದೊಡ್ಡ ಅಂತಸ್ತನ್ನು ಹೊಂದಿ ಜನಮನ್ನಣೆಯಿಂದ ಕಂಗೊಳಿಸುತ್ತಾನೆ ; ಧನಕನಕ ಹೋದ=ಇರುವ ಸಂಪತ್ತೆಲ್ಲವೂ ಕಳೆದುಹೋದ ನಂತರ ; ಬೆಳಗು+ಆಗಿ=ಬೆಳಕು ಹರಿದು ಮರುದಿನ ಬರುತ್ತಿದ್ದಂತೆಯೇ ; ಹಾಳು+ಊರ=ಪಾಳುಬಿದ್ದ ಊರಿನ ; ಶುನಕನ+ಅಂತೆ+ಅಕ್ಕು ; ಶುನಕ=ನಾಯಿ ; ಹಾಳೂರ ಶುನಕನಂತೆ=ಪಾಳುಬಿದ್ದ ಊರಿನಲ್ಲಿ ಚೆಲ್ಲಾಡಿರುವ ವಸ್ತುಗಳ ನಡುವೆ ಉಣಿಸನ್ನು ಅರಸುತ್ತಾ ಅಲೆಯುವ ನಾಯಿಯಂತೆ ಸಂಪತ್ತಿಲ್ಲದವನು ಸಾಮಾಜಿಕವಾಗಿ ಎಲ್ಲರ ಕಡೆಗಣನೆಗೆ ಗುರಿಯಾಗಿ ಗತಿಕೇಡಿಯಾಗಿ ಅಲೆಯುತ್ತಿರುತ್ತಾನೆ)

32) ಸಿರಿಯಣ್ಣನುಳ್ಳನಕ ಹಿರಿಯಣ್ಣನಾಗಿಕ್ಕು
ಸಿರಿಯಣ್ಣ ಹೋದ ಬೆಳಗಾಗಿ-ಆಯಣ್ಣ
ನರಿಯಣ್ಣನಕ್ಕು-ಸರ್ವಜ್ಞ

ಸಂಪತ್ತು ಇದ್ದಾಗ/ಇಲ್ಲವಾದಾಗ ವ್ಯಕ್ತಿಯ ಸಾಮಾಜಿಕ ಅಂತಸ್ತಿನಲ್ಲಿ ಉಂಟಾಗುವ ಏರಿಳಿತಗಳನ್ನು ಎರಡು ರೂಪಕಗಳ ಮೂಲಕ ಹೇಳಲಾಗಿದೆ.

(ಸಿರಿ+ಅಣ್ಣನು+ಉಳ್ಳ+ಅನಕ ; ಸಿರಿ=ಹಣ ಆಸ್ತಿ ಗದ್ದುಗೆ ; ಸಿರಿಯಣ್ಣ=ಎಲ್ಲಾ ಬಗೆಯ ಸಂಪತ್ತು ; ಉಳ್ಳ=ಇರುವ ; ಅನಕ=ವರೆಗೆ ; ಹಿರಿ+ಅಣ್ಣನು+ಆಗಿ+ಇಕ್ಕು ; ಹಿರಿ=ದೊಡ್ಡ ; ಹಿರಿಯಣ್ಣ=ಸಮಾಜದಲ್ಲಿ ದೊಡ್ಡ ಅಂತಸ್ತನ್ನು ಉಳ್ಳವನು / ಎಲ್ಲರಿಂದಲೂ ಒಲವು-ಮೆಚ್ಚುಗೆ-ಮನ್ನಣೆಯನ್ನು ಪಡೆದವನು ; ಇಕ್ಕು=ಇರುವುದು/ಕಂಡುಬರುವುದು ; ಸಿರಿಯಣ್ಣ ಹೋದ=ಇರುವ ಸಂಪತ್ತೆಲ್ಲವೂ ಕಳೆದುಹೋದ ನಂತರ ; ಬೆಳಗು+ಆಗಿ=ಬೆಳಕು ಹರಿದು ಮರುದಿನ ಬರುತ್ತಿದ್ದಂತೆಯೇ ; ಆಯಣ್ಣ=ಆ+ಅಣ್ಣ=ಆ ವ್ಯಕ್ತಿಯು ; ನರಿ+ಅಣ್ಣನು+ಅಕ್ಕು ; ನರಿ=ಕಪಟತನ ಮತ್ತು ಕುತಂತ್ರದ ನಡೆನುಡಿಗಳನ್ನು ಸೂಚಿಸಲು ನರಿಯನ್ನು ಒಂದು ರೂಪಕವಾಗಿ ಜನರು ಆಡುನುಡಿಯಲ್ಲಿ ಬಳಸುತ್ತಾರೆ ; ನರಿಯಣ್ಣ=ಗತಿಗೇಡಿ/ಇತರರನ್ನು ನೆಚ್ಚಿಕೊಂಡು ಹೊಟ್ಟೆಹೊರೆದುಕೊಳ್ಳುವವನು)

33) ಕೋಟಿ ವಿದ್ಯವನೋದಿ ಪಾಟಿ ಮಾಡಿದರೇನು
ಕೂಟಸ್ಥವಿಲ್ಲದವನೋದು-ಗಿಳಿ ಕಲಿತ
ಪಾಠದಂತಿಕ್ಕು ಸರ್ವಜ್ಞ

ಅಕ್ಕರದ ಮೂಲಕ ವಿದ್ಯೆಯನ್ನು ಪಡೆದ ವ್ಯಕ್ತಿಯು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡದಿದ್ದರೆ , ಅಂತಹವನ ಓದಿನಿಂದ ಯಾವುದೇ ಪ್ರಯೋಜನವಿಲ್ಲವೆಂಬುದನ್ನು ಹೇಳಲಾಗಿದೆ.

(ವಿದ್ಯವನು+ಓದಿ ; ಕೋಟಿ ವಿದ್ಯವನೋದಿ=ಹೆಚ್ಚಿನ ಪ್ರಮಾಣದಲ್ಲಿ ಬಹುತರದ ವಿದ್ಯೆಯನ್ನು ಕಲಿತು ; ಪಾಟಿ=ಸೊಗಸು/ಸುಂದರ ; ಪಾಟಿ ಮಾಡಿದರೆ=ದೊಡ್ಡ ವಿದ್ಯಾವಂತನೆಂಬ ಹೆಸರನ್ನು ಗಳಿಸಿದರೆ ; ಮಾಡಿದರೆ+ಏನು ; ಕೂಟಸ್ಥ+ಇಲ್ಲದವನ+ಓದು ; ಕೂಟಸ್ಥ=ಜನಸಮುದಾಯ/ಸಮಾಜದೊಡನೆ ಕೂಡಿಕೊಂಡಿರುವುದು ; ಕೂಟಸ್ಥವಿಲ್ಲದವನೋದು=ಜನಸಮುದಾಯದ ಜತೆಯಲ್ಲಿ ಒಂದಾಗಿ , ಸಮಾಜಕ್ಕೆ ಒಳಿತನ್ನು ಮಾಡದ ವಿದ್ಯೆ ; ಗಿಳಿ ಕಲಿತ ಪಾಠ=ಇದು ಒಂದು ನುಡಿಗಟ್ಟಾಗಿ ಬಳಕೆಯಾಗಿದೆ . ಕಲಿತಿರುವುದನ್ನು ಮತ್ತೆ ಮತ್ತೆ ಅದೇ ರೀತಿ ಉಚ್ಚರಿಸುವುದು/ಓದಿನಿಂದ ಯಾವುದೇ ಬಗೆಯ ಅರಿವನ್ನಾಗಲಿ/ಒಳ್ಳೆಯ ನಡೆನುಡಿಗಳನ್ನಾಗಲಿ ಕಲಿಯದಿರುವುದು ; ಪಾಠದ+ಅಂತೆ+ಇಕ್ಕು ; ಇಕ್ಕು=ಇರುವುದು/ಕಂಡುಬರುವುದು)

34) ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲಿಗನು ಬಂದು ಎಳೆವಾಗ-ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ

ಸಾಲದ ವ್ಯವಹಾರದಿಂದ ಉಂಟಾಗುವ ಬವಣೆಗಳನ್ನು ಹೇಳಲಾಗಿದೆ.

(ಸಾಲ=ಇತರರಿಂದ ಹಣ/ಒಡವೆ/ವಸ್ತುಗಳನ್ನು ಗೊತ್ತುಪಡಿಸಿದ ಸಮಯಕ್ಕೆ ಹಿಂತಿರುಗಿಸುವ ಕರಾರಿನೊಡನೆ ಪಡೆಯುವುದು ; ಕೊಂಬ+ಆಗ ; ಕೊಂಬ=ಪಡೆಯುವ/ಈಸಿಕೊಳ್ಳುವ ; ಕೊಂಬಾಗ=ಪಡೆಯುವಾಗ/ತೆಗೆದುಕೊಳ್ಳುವಾಗ ; ಹಾಲು+ಓಗರ+ಉಂಡ+ಅಂತೆ ; ಓಗರ=ಅನ್ನ ; ಹಾಲೋಗರ=ಹಾಲು ಅನ್ನ ; ಉಂಡ=ಊಟ ಮಾಡಿದ ; ಅಂತೆ=ಹಾಗೆ ; ಸಾಲಿಗ=ಸಾಲ ಕೊಟ್ಟವನು ; ಎಳೆವಾಗ=ಸಾಲವನ್ನು ಸಮಯಕ್ಕೆ ಸರಿಯಾಗಿ ಕಟ್ಟದಿದ್ದಾಗ , ಸಾಲವನ್ನು ವಸೂಲಿ ಮಾಡಲು ಬಂದ ಸಾಲಿಗನು ಆಡುವ ಅಪಮಾನದ ನುಡಿಗಳು ಹಾಗೂ ಕೊಡುವ ಕಿರುಕುಳ ; ಕಿಬ್ಬದಿಯ=ಕಿರಿದಾದ+ಬದಿ ; ಬದಿ=ಪಕ್ಕ/ಮಗ್ಗಲು/ಪಕ್ಕೆ ; ಕಿಬ್ಬದಿ=ಸೊಂಟ ; ಕೀಲು=ಮೂಳೆ)

35) ಹದಬೆದೆಯಲಾರಂಬ ಕದನದಲಿ ಕೂರಂಬ
ನದಿಯ ಹಾಯುವಲಿ ಹರುಗೋಲ-ಮರೆದಾತ
ವಿಧಿಯ ಬೈದೇನು ಸರ್ವಜ್ಞ

ತಾನು ಮಾಡಬೇಕಾದ ಕೆಲಸವನ್ನು ಸರಿಯಾದ ಸಮಯದಲ್ಲಿ/ರೀತಿಯಲ್ಲಿ ಮಾಡದೆ, ಮತ್ತೊಂದನ್ನು ನಿಂದಿಸುವುದರಿಂದ ಯಾವ ಪ್ರಯೋಜನವೂ ಇಲ್ಲವೆಂಬುದನ್ನು ಹೇಳಲಾಗಿದೆ.

(ಹದಬೆದೆಯಲಿ+ಆರಂಬ ; ಹದ=ಸರಿಯಾದ ಸಮಯ ; ಬೆದೆ=ಕಾಮದ ನಂಟನ್ನು ಪಡೆಯಲು ಜೀವಿಗಳ ಮಯ್-ಮನಗಳಲ್ಲಿ ಉಂಟಾಗುವ ತುಡಿತ / ಬೂಮಿಯಲ್ಲಿ ದವಸದಾನ್ಯಗಳ ಬೀಜವನ್ನು ಬಿತ್ತಲು/ಸಸಿಗಳನ್ನು ನಾಟಿಮಾಡಬೇಕಾದ ಕಾಲ ; ಹದಬೆದೆಯಲಿ=ಮುಂಗಾರು ಮಳೆಯಾಗುತ್ತಿದ್ದಂತೆಯೇ ಉಳುಮೆ ಮಾಡಿದ ಬೂಮಿಯಲ್ಲಿ ಬೆಳೆಗಳನ್ನು ಒಡ್ಡಲು ಅಂದರೆ ಬೀಜವನ್ನು ಬಿತ್ತುವ , ಸಸಿಗಳನ್ನು ನಾಟಿ ಮಾಡುವ , ಬೆಳೆದ ಪಯಿರುಗಳನ್ನು ಹರಗುವ , ಕಳೆಯನ್ನು ತೆಗೆಯುವ , ಕುಯಿಲನ್ನು ಮಾಡುವ , ಒಕ್ಕಣೆಯ ಕೆಲಸಗಳನ್ನು ಮಾಡಬೇಕಾದ ಕಾಲ ; ಕದನದಲಿ=ರಣರಂಗದಲ್ಲಿ ; ಕದನ=ಕಲಹ/ಕಾಳಗ/ಸಮರ ; ಕೂರ್+ಅಂಬ ; ಕೂರ್=ಹರಿತವಾದ/ಮೊನೆಯುಳ್ಳ/ಚೂಪಾದ ; ಅಂಬು=ಬಾಣ ; ಕೂರಂಬ=ಹರಿತವಾದ ಬಾಣವನ್ನು ; ಹಾಯು=ದಾಟು ; ಹಾಯುವಲಿ=ದಾಟುವಾಗ ; ಹರುಗೋಲು=ದೋಣಿಯನ್ನು ಮುನ್ನಡೆಸುವಾಗ ನೀರನ್ನು ಮೀಟಲು ಬಳಸುವ ಕೋಲು ; ಮರೆದ+ಆತ=ಮರೆತವನು ; ವಿಧಿ=ವ್ಯಕ್ತಿಯ ಜೀವನದ ಏಳುಬೀಳುಗಳನ್ನು ದೇವರು/ಅಗೋಚರ ಶಕ್ತಿಯು ನಿರ‍್ಣಯಿಸಿರುತ್ತದೆ ಎಂಬ ನಂಬಿಕೆ ; ಬೈದು+ಏನು ; ಬೈದು=ನಿಂದಿಸಿ)

36) ವಿದ್ಯೆ ಕಲಿಸದ ತಂದೆ ಬುದ್ಧಿ ಹೇಳದ ಗುರುವು
ಬಿದ್ದಿರಲು ಬಂದು ನೋಡದ-ತಾಯಿಯು
ಶುದ್ಧವೈರಿಗಳು ಸರ್ವಜ್ಞ

ಹುಟ್ಟಿಗೆ ಕಾರಣವಾಗುವ ತಾಯಿತಂದೆಗಳು ಮತ್ತು ಅರಿವನ್ನು ಮೂಡಿಸುವ ಗುರುಗಳು ತಮ್ಮ ಹೊಣೆಗಾರಿಕೆಯನ್ನು ಮರೆತಾಗ ವ್ಯಕ್ತಿಯ ಪಾಲಿಗೆ ಏನಾಗುತ್ತಾರೆ ಎಂಬುದನ್ನು ಹೇಳಲಾಗಿದೆ.

(ಬಿದ್ದು+ಇರಲು ; ಬಿದ್ದಿರಲು=ರೋಗರುಜಿನಗಳಿಗೆ ಗುರಿಯಾಗಿ ನರಳುತ್ತಿರಲು ; ಶುದ್ಧ=ನಿಜವಾಗಿಯೂ ; ವೈರಿ=ಹಗೆ/ಶತ್ರು)

37) ಉತ್ತಮ ವಿದ್ಯವನೋದಿ ಮತ್ತೆ ಅನುಭವಗಂಡು
ಚಿತ್ತದ ಕಳವಳವ ನಿಲಿಸದ-ಮನುಜನು
ಕತ್ತೆ ಕಂಡಯ್ಯ ಸರ್ವಜ್ಞ

ಒಂದಲ್ಲ ಒಂದು ಬಗೆಯ ಆತಂಕದಿಂದ ಯಾವಾಗಲೂ ನರಳುತ್ತಿರುವ ವಿದ್ಯಾವಂತನ ವ್ಯಕ್ತಿತ್ವದ ಮಿತಿಯನ್ನು ಹೇಳಲಾಗಿದೆ.

(ವಿದ್ಯವನು+ಓದಿ ; ಉತ್ತಮ ವಿದ್ಯೆ=ಮಾನವನ ನಡೆನುಡಿಯಲ್ಲಿ ಮತ್ತು ಸಮಾಜದ ಆಗುಹೋಗುಗಳಲ್ಲಿ ಯಾವುದು ಸರಿ/ತಪ್ಪು ; ಯಾವುದು ಒಳ್ಳೆಯದು/ಕೆಟ್ಟುದ್ದು ; ಯಾವುದನ್ನು ಮಾಡಬೇಕು/ಮಾಡಬಾರದು ಎಂಬ ವಿವೇಕವನ್ನು ನೀಡುವ ತಿಳುವಳಿಕೆ ; ಮತ್ತೆ=ಇದರೊಡನೆ ; ಅನುಭವ+ಕಂಡು ; ಅನುಭವ=ನಿತ್ಯಜೀವನದಲ್ಲಿ ಆಗುಹೋಗುಗಳಿಂದ ಪಡೆಯುವ ನೋವುನಲಿವು ; ಕಂಡು=ನೋಡಿ/ತಿಳಿದು ; ಚಿತ್ತ=ಮನಸ್ಸು ; ಕಳವಳ=ಸಂಕಟ/ವೇದನೆ/ಬೇಗುದಿ ; ಚಿತ್ತದ ಕಳವಳ=ನಾನಾ ಬಗೆಯ ಆತಂಕ/ಒತ್ತಡ/ಹೆದರಿಕೆಯಿಂದ ಮನಸ್ಸು ಸದಾಕಾಲ ಪರಿತಪಿಸುತ್ತಿರುವುದು ; ಮನುಜ=ವ್ಯಕ್ತಿ ; ಕತ್ತೆ=ಜೀವನವನ್ನು ಸರಿಯಾಗಿ ರೂಪಿಸಿಕೊಳ್ಳಲಾಗದೆ ನೆಮ್ಮದಿಗೇಡಿತನದಿಂದ ತೊಳಲಾಡುವ ಬಗೆಯನ್ನು ಸೂಚಿಸುವುದಕ್ಕೆ ಕತ್ತೆ ಎಂಬ ಪ್ರಾಣಿಯನ್ನು ಒಂದು ರೂಪಕವಾಗಿ ಬಳಸಲಾಗಿದೆ ; ಕಂಡ+ಅಯ್ಯ=ತಿಳಿದುನೋಡು)

38) ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು
ಭಂಗಬಟ್ಟುಂಬ ಬಿಸಿ-ಅನ್ನಕಿಂತಲು
ತಂಗುಳವೆ ಲೇಸು ಸರ್ವಜ್ಞ

ಇತರರ ಮುಂದೆ ಕಯ್ಯೊಡ್ಡಿ ಬೇಡಿ ಬೇಕಾದುದನ್ನು ಪಡೆದು ನಲಿಯುವುದಕ್ಕಿಂತ , ತನ್ನತನವನ್ನು ಉಳಿಸಿಕೊಂಡು ಇದ್ದುದರಲ್ಲಿ ನೆಮ್ಮದಿಯಿಂದ ಬಾಳುವುದೇ ಒಳ್ಳೆಯದೆಂಬುದನ್ನು ಹೇಳಲಾಗಿದೆ.

(ಹಂಗಿನ+ಅರಮನೆಗಿಂತ ; ಹಂಗು=ಅನ್ನ-ಬಟ್ಟೆ-ವಸತಿ-ಕೆಲಸ ಮತ್ತು ಇನ್ನಿತರ ಅಗತ್ಯಗಳಿಗಾಗಿ ಮತ್ತೊಬ್ಬರನ್ನು ಆಶ್ರಯಿಸಿ ತನ್ನತನವನ್ನು ಕಳೆದುಕೊಂಡು ಬಾಳುವುದು ; ಅರಮನೆ=ಬಯಸಿದ್ದೆಲ್ಲವೂ ದೊರಕುವಂತಹ ಸಿರಿಸಂಪದಗಳ ನೆಲೆ ; ಹಂಗಿನರಮನೆ=ಇದು ಒಂದು ನುಡಿಗಟ್ಟು-ತಿನ್ನಲು/ಉಣ್ಣಲು/ತೊಡಲು ಯಾವೊಂದು ಕೊರತೆಗಳಿಲ್ಲದಿದ್ದರೂ ವ್ಯಕ್ತಿತ್ವವನ್ನು ಕಳೆದುಕೊಂಡು ಅನ್ಯರಿಗೆ ಅಡಿಯಾಳಾಗಿ ಬಾಳುವುದು ; ವಿಂಗಡ=ಒಂಟಿಯಾಗಿರುವ/ಬೇರೆಯಾಗಿರುವ/ತನ್ನದೇ ಆದ ; ಗುಡಿ=ಗುಡಾರ/ಕುಟೀರ/ವಸತಿ/ಗುಡಿಸಲು ; ವಿಂಗಡದ ಗುಡಿ=ಇದು ಒಂದು ನುಡಿಗಟ್ಟು-ಯಾವೊಂದು ಬಗೆಯ ಸಂಪತ್ತಿಲ್ಲದಿದ್ದರೂ ಇತರರ ಮುಂದೆ ಕಯ್ಯೊಡ್ಡದೆ ತಲೆತಗ್ಗಿಸದೆ ತನ್ನತನವನ್ನು ಉಳಿಸಿಕೊಂಡು ಬಾಳುವುದು ; ಲೇಸು=ಒಳ್ಳೆಯದು/ಉತ್ತಮ ; ಭಂಗ+ಪಟ್ಟು+ಉಂಬ ; ಭಂಗ=ಅಪಮಾನ/ಸೋಲು ; ಭಂಗಪಟ್ಟು=ಇತರರಿಂದ ಕಡೆಗಡಣೆನೆಗೆ ಗುರಿಯಾಗಿ ; ಉಂಬ=ಉಣ್ಣುವ ; ತಂಗುಳವೆ=ತಣ್ಣಗಾಗಿರುವ ಅನ್ನವೇ ; ತಣ್ಣನೆಯ ಕೂಳು=ತಂಗೂಳು/ತಂಗುಳು/ತಂಗಳು ; ಕೂಳು=ಅನ್ನ/ಆಹಾರ/ತಿನಸು ; ನುಡಿಗಟ್ಟು ಎಂದರೆ ಎರಡು ಇಲ್ಲವೇ ಮೂರುಪದಗಳು ಜತೆಗೂಡಿ ಸಾಂಕೇತಿಕವಾದ ತಿರುಳನಲ್ಲಿ ಬಳಕೆಯಾಗುವ ಪದಕಂತೆ)

39) ಆಳಾಗ ಬಲ್ಲವನು ಆಳುವನು ಅರಸಾಗಿ
ಆಳಾಗಿ ಬಾಳಲರಿಯದವನು-ಕಡೆಯಲ್ಲಿ
ಹಾಳಾಗಿ ಹೋಹ ಸರ್ವಜ್ಞ

ಯಾವುದೇ ಕೆಲಸವನ್ನು ಒಲವು ನಲಿವಿನಿಂದ ಮಾಡಬಲ್ಲವನು ಮಾತ್ರ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳುತ್ತಾನೆ ಎಂಬುದನ್ನು ಹೇಳಲಾಗಿದೆ.

(ಆಳು+ಆಗ ; ಬಲ್ಲ+ಅವನು ; ಬಲ್ಲ=ತಿಳಿದ ; ಆಳಾಗ ಬಲ್ಲವನು=ಮಯ್‍ಮನಗಳನ್ನು ಇಡಿಯಾಗಿ ತೊಡಗಿಸಿಕೊಂಡು ಕೆಲಸವನ್ನು ಮಾಡುವವನು ; ಅರಸು+ಆಗಿ ; ಅರಸು=ರಾಜ/ದೊರೆ ; ಆಳುವನು ಅರಸಾಗಿ=ಸಮಾಜದಲ್ಲಿ ಹೆಚ್ಚಿನ ಮನ್ನಣೆಯನ್ನು ಪಡೆದು ಎಲ್ಲರ ನಡೆನುಡಿಗಳನ್ನು ನಿಯಂತ್ರಿಸುವನು ; ಬಾಳಲು+ಅರಿಯದವನು ; ಅರಿಯದವನು=ತಿಳಿಯದವನು ; ಆಳಾಗಿ ಬಾಳಲು ಅರಿಯದವನು=ದುಡಿಮೆಯ ಮೂಲಕ ಜೀವನವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಬೇಕೆಂಬ ಬಯಕೆಯಾಗಲಿ/ಗುರಿಯಾಗಲಿ ಇಲ್ಲದವನು ; ಕಡೆಯಲ್ಲಿ=ಬದುಕಿನಲ್ಲಿ ; ಹಾಳು+ಆಗಿ ; ಹಾಳಾಗಿ=ನಾಶವಾಗಿ ; ಹೋಹ=ಹೋಗುವನು)

40) ನೆಲವನು ಮುಗಿಲನು ಹೊಲಿವರುಂಟೆಂದರೆ
ಹೊಲಿವರು ಹೊಲಿವರೆನಬೇಕು-ಅವರೊಡನೆ
ಚಲಬೇಡವೆಂದ ಸರ್ವಜ್ಞ

ತಿಳಿಗೇಡಿಗಳ ಜತೆಯಲ್ಲಿ ಮಾತಿಗೆ ಮಾತು ಬೆಳಸಬಾರದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

(ನೆಲವನು=ಬೂಮಿಯನ್ನು ; ಮುಗಿಲು=ಆಕಾಶ/ಬಾನು ; ಹೊಲಿವರು+ಉಂಟು+ಎಂದರೆ ; ಹೊಲಿ=ಹೆಣೆ/ಹೊಲಿಗೆ ಹಾಕು/ಜತೆಗೂಡಿಸು ; ಹೊಲಿವರು=ಯಾವುದಾದರೊಂದು ಬಗೆಯ ದಾರದಿಂದ ಹೊಲಿಯುವವರು ;ಉಂಟು=ಇದ್ದಾರೆ ; ಹೊಲಿವರು+ಎನಬೇಕು=ಹೊಲಿಯುತ್ತಾರೆ ಎಂದು ಒಪ್ಪಿಕೊಳ್ಳಬೇಕು ; ಎನಬೇಕು=ಎನ್ನಬೇಕು/ಒಪ್ಪಿಗೆಯನ್ನು ಸೂಚಿಸಬೇಕು ; ಅವರ+ಒಡನೆ ; ಅವರ=ವಿವೇಚನೆಯಿಲ್ಲದೆ ಮಾತನಾಡುವ ಅಂತಹ ವ್ಯಕ್ತಿಗಳೊಡನೆ ; ಚಲಬೇಡ+ಎಂದ ; ಚಲ=ಸರಿ/ತಪ್ಪುಗಳ ವಾದವಿವಾದ)

( ಚಿತ್ರಸೆಲೆ: wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: