ಚುಟುಕು ಕತೆಗಳು

– ಪ್ರಿಯದರ‍್ಶಿನಿ ಶೆಟ್ಟರ್.

 

1. ಬಲೆ

” ‘ಅಕಶೇರುಕ ಸಮಾಜದ ಆರ‍್ಕಿಟೆಕ್ಟ್’ ಹೆಣೆದ ಬಲೆ ಕಣ್ಣಿಗೆ ಬಿದ್ದಿತು. ನೋಡುನೋಡುತ್ತಲೇ ಆ ಬಲೆಯೊಳಗೆ ಇರುವೆಯೊಂದು ಬಿದ್ದಿತು; ಬಿದ್ದು ಒದ್ದಾಡಿತು… ಅದು ಬಲೆಯಲ್ಲಿ ಸಿಕ್ಕಿಕೊಂಡಿದ್ದೇ ತಡ ಎಲ್ಲಿಂದಲೋ ಬಂದ ಜೇಡ, ಸರಸರನೇ ಹೋಗಿ ಇರುವೆಯನ್ನು ತನ್ನ ಅಂಟಿನ ಎಳೆಗಳಿಂದ ಮತ್ತೆ ಸುತ್ತುವರೆಯತೊಡಗಿತು. ಹಾಗೆಯೇ….”
ನಾನು ಜೇಡದ ಕುರಿತು ಹೇಳುವಾಗ ಮದ್ಯೆಯೇ ತಡೆದಳು, ಇದನ್ನಲ್ಲ ಕೇಳಿಸಿಕೊಳ್ಳುತ್ತಿದ್ದ ಗೆಳತಿ ನಂತರ ಹೀಗೆಂದಳು-“ಇದನ್ನಲ್ಲ ನೋಡುತ್ತ ಕಾಲಿ ನಿಲ್ಲುವ ಬದಲು ಕಡ್ಡಿಯಿಂದ ಇರುವೆಯ ಸುತ್ತ-ಮುತ್ತ ಕೈಯಾಡಿಸಿದ್ದರೂ ಸಾಕಿತ್ತು, ಅದು ಬದುಕುತ್ತಿತ್ತು.”!

2. ಮಾಮರ

ಚಳಿಗಾಲ ಕಳೆದು ವಸಂತ ಕಾಲದ ಆಗಮನ. ಎಲೆಗಳುದುರಿ ನಿಂತಿದ್ದ ಮಾಮರಗಳು ಮತ್ತೆ ಚಿಗುರಿದವು. ಎಳೆ ಹಸಿರಿನ ಚಿಗುರಿನ ಮದ್ಯದಿಂದ ಹೂಗಳು ಇಣುಕಿದವು. ನೀಳವಾಗಿ ಎತ್ತರಕ್ಕೆ ಬೆಳೆದಿದ್ದ ಕೊಂಬೆಗಳಿಗೆ ತಮ್ಮ ಚೆಲುವಿನ ಬಗ್ಗೆ ಹೆಮ್ಮೆ. ದೊಡ್ಡ ಸುತ್ತಳತೆ ಹೊಂದಿದ ಕಾಂಡಕ್ಕೆ ತನ್ನ ಸಾಮರ‍್ತ್ಯದ ಬಗ್ಗೆ ಹೆಮ್ಮೆ. ಅವು ಎಂದಿನಂತೆ ಜಗಳವಾಡುತ್ತಿದ್ದವು. ದೊಡ್ಡ ಬಿರುಗಾಳಿ ಬೀಸಿದಾಗ, ಕೊಂಬೆ ಅಹಂಕಾರದಿಂದ ಕಾಂಡದ ಎದುರು ತಲೆ ಬಾಗಲಿಲ್ಲ. ಕಾಂಡ ಬೇರಿಗೆ ಆದಾರವಾಗಲಿಲ್ಲ. ಊರಿನ ಜನರಿಗೆ ಪಲ ಕೊಡಬೇಕಾಗಿದ್ದ ಮಾಮರ ಬಿರುಗಾಳಿಗೆ ಸಿಕ್ಕು ಅದೇ ಜನರ ಮನೆಯ ಒಲೆಗೆ ಉರುವಲಾಗಿತ್ತು.

3. ಬಟ್ಟೆ

ಅಡುಗೆಮನೆಯ ಕಟ್ಟೆಯ ಮೇಲಿಟ್ಟ ಹಾಲು ಕುಡಿವಾಗ ಒಂದಿಶ್ಟು ಹಾಲು ನನ್ನ ಕೈಮೇಲೆ, ಕಟ್ಟೆ ಮೇಲೆ ಹಾಗೂ ನೆಲದ ಮೇಲೆ ಚೆಲ್ಲಿತು. ಕೈಯನ್ನು ಉಡುಪಿನಿಂದ, ಕಟ್ಟೆಯನ್ನು ವಸ್ತ್ರದಿಂದ ಹಾಗೂ ನೆಲವನ್ನು ಚಿಂದಿ ಬಟ್ಟೆಯಿಂದ ಒರೆಸುವಾಗ ಹೊಳೆಯಿತು: ‘ಈ ಮೂರೂ ಬಟ್ಟೆಗಳನ್ನು ಒಂದೇ ವಸ್ತುವಿನಿಂದ ಮಾಡಲಾಗಿದೆ’….

4. ಮರೆವು

ಮರುದಿನ ಹಬ್ಬ. ನಗರದಿಂದ ಮಗ-ಸೊಸೆ ಮೊಮ್ಮಕ್ಕಳು ಹಬ್ಬಕ್ಕೆ ಊರಿಗೆ ಬರುವರೆಂದು ಆಕೆ ಅಡುಗೆ ಮಾಡಲು ಅಣಿಯಾದಳು. ಬೆಳಿಗ್ಗೆಯಿಂದ ಬಗೆಬಗೆಯ ಅಡುಗೆಯಲ್ಲಿ ಮುಳುಗಿದ್ದ ಆಕೆಗೆ ಹೊತ್ತು ಸರಿದದ್ದೇ ಅರಿವಾಗಲಿಲ್ಲ.
ಮದ್ಯಾಹ್ನದ ಹೊತ್ತು ಮಕ್ಕಳು ಅಜ್ಜಿಯನ್ನು ಕರೆಯುತ್ತ ಒಳಬಂದವು. ಈಕೆಗೆ ಅತೀವ ಸಂತೋಶ. ಸೊಸೆ ಬಂದಾಕ್ಶಣ ಊಟಕ್ಕೆಂದು ತಾನು ಮಾಡಿದ ಬಕ್ಶ್ಯಗಳನ್ನೆಲ್ಲ ನೆಲದ ಮೇಲಿಟ್ಟು, ಚಾಪೆ ಹಾಸಿ, ಸೊಸೆಗೆ ತಾಟು ಇಡಲು ಹೇಳಿದಳು. ಸೊಸೆ ತಾಟು ಇಟ್ಟು ಗಂಡ,ಮಕ್ಕಳಿಗೆ ಬಡಿಸಿ ಊಟ ಆರಂಬಿಸಿದಾಗ ಅತ್ತೆಯನ್ನು ಮಾತ್ರ ಮರೆತಿದ್ದಳು!

5. ಕಲೆ

ಅವನೊಬ್ಬ ಬಡಗಿ. ಉರುವಲಾಗಬೇಕಾದ ಮರದ ತುಂಡುಗಳನ್ನು ಕೆತ್ತಿ ಸುಂದರ ಕಲಾಕ್ರುತಿಗಳನ್ನು ತಯಾರಿಸುತ್ತಾನೆ… ಆಕೆ ಆ ಬಡಗಿಯ ಮಡದಿ. ತಾನು ಒಲೆಗೆ ಹಾಕಲೆಂದು ತಂದ ಕಟ್ಟಿಗೆ, ಮರದ ತುಂಡುಗಳನ್ನು ಗಂಡ ಹಾಳು ಮಾಡುತ್ತಿರುವನೆಂದು ಶಪಿಸುತ್ತಿರುವಳು…

6.  ನಿದ್ದೆ

ರಾತ್ರಿ ಹೊತ್ತು ನಿದ್ದೆ?-ಬರುತ್ತಿಲ್ಲ. ಇಡೀ ದಿನದ ಚಿಂತೆಯನ್ನು ದೂರ ಸರಿಸಿ, ನಿಶ್ಚಿಂತೆಯಿಂದ ಮಲಗಿದರೆ ಅರ‍್ತಹೀನ ಯೋಚನೆಗಳು. ಈ ಯೋಚನೆಗಳನ್ನು ತಡೆಗಟ್ಟುವುದು ಹೇಗೆಂದು ಯೋಚಿಸಿದರೆ- ಅದೂ ಸಹ ಅರ‍್ತಹೀನ !
ಈ ಸಲ ನಿದ್ದೆಗೆ ಜಾರಿಯೇ ಬಿಡಬೇಕೆಂದು 100 ರಿಂದ 1 ರವರೆಗೆ ಎಣಿಕೆ ಆರಂಬಿಸಿದೆ. ಸಮ ಸಂಕ್ಯೆಗಳೊಡನೆ ಗಡಿಯಾರದ ಸೆಕೆಂಡಿನ ಮುಳ್ಳಿನ ಶಬ್ದ; ಬೆಸ ಸಂಕ್ಯೆಗಳೊಡನೆ ನಳದ ನೀರಿನ ಸೋರುವ ಹನಿಗಳ ಶಬ್ದ. ನಿದ್ದೆ ಬರದಿರುವುದಕ್ಕೆ ಕಾರಣ ತಿಳಿಯುತ್ತಲೇ ನಿದ್ರಾದೇವಿ ಆವರಿಸಿದ್ದಳು!

7. ಬಾವನೆಗಳು

ಹಲವರು ಪುಸ್ತಕ ಓದುತ್ತಲೇ ನಗುತ್ತಾರೆ, ನಲಿಯುತ್ತಾರೆ, ಅಳುತ್ತಾರೆ, ಚಿಂತನ-ಮಂತನದಲ್ಲಿ ಮುಳುಗುತ್ತಾರೆ, ಅಸಂತೋಶಗೊಳ್ಳುತ್ತಾರೆ….
ದಿನನಿತ್ಯದ ಬದುಕಿನಲ್ಲಿಯೂ ಸಹ ಅಂತಹ [ಪುಸ್ತಕದಲ್ಲಿರುವಂತಹ] ಗಟನೆಗಳು ನಡೆಯುತ್ತಿರುತ್ತವೆ. ಆದರೆ ಯಾವ ಬಾವನೆಗಳೂ ಹೊರಹೊಮ್ಮುವುದಿಲ್ಲ; ಕಾರಣ- ಕತೆಯ ಪುಸ್ತಕ ಮುಚ್ಚಿ, ಮನದ ಪುಸ್ತಕ ತೆರೆದಿರುತ್ತದೆ….

8. ಕ್ಯಾಮರಾ ಕಣ್ಣು

ಕಂಪ್ಯೂಟರ್‍ನಲ್ಲಿ ಪೇಸ್‍ಬುಕ್‍ಗೆ ಲಾಗಿನ್ ಆಗಿ ಮೆಸೇಜ್ ಓದುತ್ತಿದ್ದಾಗ ತಟ್ಟನೆ ಕೆಲವು ಚಾಯಾಚಿತ್ರಗಳು ಗಮನ ಸೆಳೆದವು. ಸುಂದರವಾದ ದೇವಾಲಯ, ಸುತ್ತಲಿನ ಹಸಿರು, ಬೆಟ್ಟ-ಗುಡ್ಡಗಳ ಮೋಹಕ ದ್ರುಶ್ಯ, ದೇವಾಲಯದ ಮುಂದಿರುವ ಆಕರ‍್ಶಕ ದೀಪಸ್ತಂಬ, ಅದೇ ಊರಿನಲ್ಲಿರುವ ನದಿ ದಂಡೆಯಲ್ಲಿ ನಿಂತು ಕ್ಲಿಕ್ಕಿಸಿದ ಸೂರ‍್ಯಾಸ್ತದ ಚಾಯಾಚಿತ್ರಗಳು…
ಈ ಅದ್ಬುತ ಪೋಟೋಗಳನ್ನು ಯಾವ ಸ್ತಳದಲ್ಲಿ ತೆಗೆಯಲಾಗಿದೆ ಎಂದು ನೋಡಿದೆ. ಅವುಗಳನ್ನು ಅಪ್‍ಲೋಡ್ ಮಾಡಿದ ಗೆಳತಿ ಆ ಜಾಗದ ಹೆಸರು, ದೇವಾಲಯ ಅಲ್ಲಿನ ವಿಗ್ರಹಗಳು, ಅವುಗಳ ವಿವರ ಎಲ್ಲವನ್ನೂ ನೀಡಿದ್ದಳು.
ಅವೆಲ್ಲವನ್ನೂ ಓದಿದಾಗ “ಈ ಹೆಸರುಗಳನ್ನು ನಾನು ಕೇಳಿದ್ದೇನೆ… ಈ ದ್ರುಶ್ಯಗಳನ್ನು ನಾನೂ ನೋಡಿದಂತಿದೆ…ಆದರೆ ನೋಡಿಲ್ಲ…ಇಂತಹ ಪೋಟೋಗಳನ್ನು ಕ್ಲಿಕ್ಕಿಸಿದಂತಿದೆ…ಕ್ಲಿಕ್ಕಿಸಿದ್ದೇನೆ…”
ಹೌದು! ಪೋಟೋಗಳನ್ನು ಕ್ಲಿಕ್ಕಿಸುವ ಬರದಲ್ಲಿ ಆ ಕ್ಶಣಗಳನ್ನು ಸವಿಯುವುದನ್ನು ಮರೆತಿದ್ದೇನೆ, ಸೂರ‍್ಯಾಸ್ತದ ಸೌಂದರ‍್ಯವನ್ನು ನನ್ನ ಕ್ಯಾಮರಾ ಮಾತ್ರ ಅನುಬವಿಸಿದೆ.
ಕಾರಣ, ಈ ಸ್ತಳಗಳನ್ನು ನನ್ನ ಕಣ್ಣಿಗಿಂತಲೂ ತೀಕ್ಶವಾಗಿ, ಸೂಕ್ಶ್ಮವಾಗಿ ನನ್ನ ಕ್ಯಾಮರಾ ಕಣ್ಣು ಅನುಬವಿಸಿದೆ…

9. ಸಂಜೆ

ಕಣ್ಣ ಮುಂದೆ ಕಾಗದವಿದೆ. ಕೈಯಲ್ಲಿ ಸೀಸ- ಬಣ್ಣ- ಕುಂಜುಗಳಿವೆ. ಚಿತ್ರ ಬಿಡಿಸಬೇಕೇಂಬ ಹುಮ್ಮಸ್ಸಿದೆ. ಆದರೆ ಮನದಲ್ಲಿ ಏನನ್ನು ಬಿಡಿಸಬೇಕೇಂಬುದು ಮಾತ್ರ ಹೊಳೆಯುತ್ತಿಲ್ಲ.
ಬಣ್ಣ, ಕುಂಜುಗಳನ್ನು ಮೇಜಿನ ಮೇಲಿಟ್ಟು ಹೊರಬಂದು ತಲೆ ಎತ್ತಿ ದಿಗಂತದಾಚೆಗೆ ದಿಟ್ಟಿ ಹಾಯಿಸಿ ನನ್ನ ಚಿತ್ರಕ್ಕೆ ವಿಶಯವನ್ನು ಅಲ್ಲಿ ಹುಡುಕಲಾರಂಬಿಸಿವೆ ಕಣ್ಣುಗಳು. ಸಂಜೆಯ ನೀಲಾಕಾಶ ಕೇವಲ ಮೂರ‍್ನಾಲ್ಕು ಬಣ್ಣಗಳಿಂದ ಕೂಡಿ, ಬಗೆಬಗೆಯ ಚಿತ್ತಾರಗಳಿಂದ ಕಂಗೊಳಿಸುತ್ತಿದೆ; ಹತ್ತಾರು ಬಣ್ಣಗಳಿದ್ದರೂ ನನ್ನ ಹಾಳೆ ಕಾಲಿಯಾಗಿಯೇ ಇದೆ….

10. ಹವ್ಯಾಸ

ಚಿತ್ರಕಾರನೊಬ್ಬ ಹವ್ಯಾಸಕ್ಕೆಂದು ಚಿತ್ರ ಬಿಡಿಸುತ್ತಿದ್ದ. ಅವನ ವರ‍್ಣಚಿತ್ರಗಳನ್ನು ನೋಡಿದವರು ಮೆಚ್ಚದೇ ಇರಲಾರರು. ಕ್ರಮೇಣವಾಗಿ ಬಹುಮಾನ, ಪುರಸ್ಕಾರಗಳು ಬರತೊಡಗಿದವು. ಪ್ರವ್ರುತ್ತಿಯೇ ವ್ರುತ್ತಿಯಾಯಿತು. ಪ್ರಶಸ್ತಿ, ಸನ್ಮಾನಗಳಿಗಾಗಿಯೇ ಚಿತ್ರ ಬಿಡಿಸಲಾರಂಬಿಸಿದ. ಪಲವಾಗಿ ಅವೂ ಹಿಂಬಾಲಿಸಿದವು.
ಈಗ ನಿವ್ರುತ್ತಿಯಾಗಿರುವನು, ಈಗವನು ಚಿತ್ರ ಬಿಡಿಸುವುದು ಸಮಯ ಕಳೆಯಲಿಕ್ಕಾಗಿ, ಮನೆಯವರನ್ನು ಸಂತಸಪಡಿಸುವುದಕ್ಕಾಗಿ ಮತ್ತು ಕಲೆಯನ್ನು ಗೌರವಿಸುವುದಕ್ಕಾಗಿ…

11. ಮುಂಗುರುಳು

ಮಲ್ಲಿಗೆ ಹೂ ಹರಿಯುವಾಗ ಬಲಬುಜದ ಮೇಲೆ ಏನೋ ತಾಕಿದಂತಹ ಅನುಬವ. ಚಿಕ್ಕ ಜೇಡವೇ? ದೊಡ್ಡ ಇರುವೆಯೇ? ಯಾರದಾದರೂ ಕೈ? ಅತವಾ ಹೂಬಳ್ಳಿಯೇ?
ಸರಕ್ಕನೇ ತಿರುಗಿ ನೋಡಿದಾಗ ಕಂಡದ್ದು: ‘ಸಿಕ್ಕಿಸಿದ ಕ್ಲಿಪ್ಪಿನಿಂದ ಜಾರಿದ ಮುಂಗುರುಳ ಎಳೆಗಳು!’

( ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: