ಸರ‍್ವಜ್ನನ ವಚನಗಳ ಹುರುಳು – 7ನೆಯ ಕಂತು

– ಸಿ.ಪಿ.ನಾಗರಾಜ.

 

61)   ಅಡಿಗಳು ಏಳವು ನುಡಿಗಳು ತೋರವು
ಮಡದಿಯರು ಮನಕೆ ಸೊಗಸರು-ಕೂಳೊಂದು
ಗಳಿಗೆ ತಪ್ಪಿದರೆ ಸರ್ವಜ್ಞ

ಹಸಿವನ್ನು ನೀಗಿಸಿ ಜೀವದ ಉಳಿವಿಗೆ ಕಾರಣವಾಗುವ ಕೂಳಿನ ಮಹಿಮೆಯನ್ನು ಕೊಂಡಾಡಲಾಗಿದೆ.

(ಅಡಿ=ಪಾದ/ಹೆಜ್ಜೆ ; ಏಳು=ನಿಲ್ಲು ; ಅಡಿಗಳು ಏಳವು=ಹೆಜ್ಜೆಗಳನ್ನು ಇಡುವುದಕ್ಕೆ ಆಗುವುದಿಲ್ಲ/ಮೇಲೆದ್ದು ನಡೆಯಲಾಗುವುದಿಲ್ಲ ; ತೋರು=ಕಾಣು/ಮನಸ್ಸಿಗೆ ಗೋಚರವಾಗು ; ನುಡಿಗಳು ತೋರವು=ಬಾಯಿಂದ ಮಾತುಗಳೇ ಹೊರಡವು/ಉಸಿರು ಕುಗ್ಗಿ ಮಾತಿನ ದನಿಗಳು ಹೊರಬರುವುದಿಲ್ಲ ; ಮಡದಿ=ಹೆಂಡತಿ/ಹೆಣ್ಣು ; ಸೊಗಸು=ಅಂದ/ಚಂದ/ಚೆಲುವು ; ಮಡದಿಯರು ಮನಕೆ ಸೊಗಸರು=ಹೆಣ್ಣುಗಳ ಬಗ್ಗೆ ಯಾವುದೇ ಬಗೆಯ ಒಲವುನಲಿವಿನ ಮಿಡಿತಗಳು ಮಯ್-ಮನದಲ್ಲಿ ಉಂಟಾಗುವುದಿಲ್ಲ ; ಕೂಳು+ಒಂದು ; ಕೂಳು=ಅನ್ನ/ತಿನಸು/ಉಣಿಸು ; ಒಂದು ಗಳಿಗೆ=ತುಸು/ಕೆಲ ಸಮಯ ; ತಪ್ಪು=ದೊರೆಯದಿರು/ಸಿಕ್ಕದಿರು)

62)   ಮುದ್ದೆಗಳು ಇಲ್ಲದೆ ನಿದ್ರೆಗಳು ಬಾರವು
ಮುದ್ದು ಮಾತುಗಳು ಸೊಗಸವು-ಒಡಲಿಗೆ
ಮುದ್ದೆ ತಪ್ಪಿದರೆ ಸರ್ವಜ್ಞ

ಹಸಿವನ್ನು ನೀಗಿಸಿ ಜೀವದ ಉಳಿವಿಗೆ ಕಾರಣವಾಗುವ ಕೂಳಿನ ಮಹಿಮೆಯನ್ನು ಕೊಂಡಾಡಲಾಗಿದೆ.

(ಮುದ್ದೆ=ರಾಗಿ ಇಲ್ಲವೇ ಇನ್ನಿತರ ದವಸದಾನ್ಯಗಳ ಹಿಟ್ಟನ್ನು ನೀರಿನಲ್ಲಿ ಹದವಾಗಿ ಬೇಯಿಸಿ ಓನಿಸಿ ಕಟ್ಟಿರುವ ಉಂಡೆ ; ಬಾರವು=ಬರುವುದಿಲ್ಲ ; ಮುದ್ದು=ಒಲವು/ನಲಿವು/ಚೆಲುವು ; ಸೊಗಸು=ಇಂಪು/ಹಿತ/ಹಿಗ್ಗು/ಮುದ ; ಮುದ್ದು ಮಾತುಗಳು ಸೊಗಸವು=ಒಲವುನಲಿವಿನ ಮಾತುಗಳು ಯಾವುದೇ ಬಗೆಯ ಆನಂದವನ್ನು ನೀಡುವುದಿಲ್ಲ ; ಒಡಲು=ಹೊಟ್ಟೆ/ದೇಹ/ಮಯ್ಯಿ ; ತಪ್ಪು=ದೊರೆಯದಿರು/ಸಿಕ್ಕದಿರು)

63)   ಒಳ್ಳೆನಿಲ್ಲದ ಊರು ಕಳ್ಳರ ಸಂಗವು
ಸುಳ್ಳಿನ ಮಾತು ಇವು ಮೂರು-ಕೆಸರೊಳಗೆ
ಮುಳ್ಳು ತುಳಿದಂತೆ ಸರ್ವಜ್ಞ

ಒಳ್ಳೆಯ ನಡೆನುಡಿಯಿಲ್ಲದ ಜನರ ನಡುವೆ ಬಾಳ್ವೆ ಮಾಡುವುದು ತುಂಬಾ ನೋವಿನ ಸಂಗತಿಯೆಂಬುದನ್ನು ಹೇಳಲಾಗಿದೆ.

(ಒಳ್ಳೆನು+ಇಲ್ಲದ ; ಒಳ್ಳೆನು=ಒಳ್ಳೆಯವನು/ಇತರರ ನೋವುನಲಿವುಗಳನ್ನು ಹಂಚಿಕೊಳ್ಳುವವನು ; ಸಂಗ=ಒಡನಾಟ/ವ್ಯವಹಾರ ; ಕಳ್ಳರ ಸಂಗ=ಜನರನ್ನು ಮತ್ತು ಸಮಾಜವನ್ನು ವಂಚಿಸಿ ಆಸ್ತಿಪಾಸ್ತಿಹಣಒಡವೆಗಳನ್ನು ಲಪಟಾಯಿಸುವ ಮೋಸಗಾರರ/ಲಂಚಕೋರರ ಜತೆಯಲ್ಲಿಯೇ ದಿನಬೆಳಗಾದರೆ ವ್ಯವಹರಿಸಬೇಕಾದ ಇಕ್ಕಟ್ಟು/ಬಿಕ್ಕಟ್ಟು ; ಸುಳ್ಳಿನ ಮಾತು=ನಿಜವಲ್ಲದ ಸಂಗತಿಗಳ ಹೇಳಿಕೆ ; ಕೆಸರ+ಒಳಗೆ ; ಕೆಸರು=ಮಣ್ಣು ಮತ್ತು ನೀರು ಕಲೆತುಕೊಂಡು ಮೆದುವಾಗಿರುವ ನೆಲ ; ತುಳಿದ+ಅಂತೆ ; ಅಂತೆ=ಹಾಗೆ ; ಕೆಸರೊಳಗೆ ಮುಳ್ಳು ತುಳಿದಂತೆ=ಕೆಸರೊಳಗೆ ಮುಳ್ಳು ತುಳಿದಾಗ , ಮುಳ್ಳು ಚುಚ್ಚಿಕೊಂಡಿರುವ ಮಣ್ಣುಮೆತ್ತಿದ ಪಾದದ ಜಾಗಕ್ಕೆ ಅತ್ತ ಕಯ್ಯನ್ನು ಹಾಕಿ ಮುಳ್ಳನ್ನು ತೆಗೆಯಲಾಗದೆ , ಇತ್ತ ಪಾದವನ್ನು ಕೆಳಕ್ಕೆ ಊರಿ ಹೆಜ್ಜೆಯಿಡಲಾಗದೆ ನೋವನ್ನು ತಿನ್ನುತ್ತಿರಬೇಕಾಗುತ್ತದೆ)

64)   ಇದ್ದುದನು ಬಚ್ಚಿಟ್ಟು ಹೊದ್ದದನು ಬಯಸುವನು
ಇದ್ದುಣ್ಣದವನ ಬಾಯಲ್ಲಿ-ಮಣ್ಣಿನ
ಮುದ್ದೆ ಕಂಡಯ್ಯ ಸರ್ವಜ್ಞ

ತನ್ನ ಬಳಿ ಇರುವ ಸಂಪತ್ತನ್ನು ಬಳಸಿಕೊಳ್ಳದೆ ಬಚ್ಚಿಟ್ಟು ಬಾಳ್ವೆ ಮಾಡುವವನಿಗೆ ಉಂಟಾಗುವ ಕೆಟ್ಟಗತಿಯನ್ನು ಹೇಳಲಾಗಿದೆ.

(ಇದ್ದುದನು=ಇರುವುದನ್ನು ; ಬಚ್ಚಿಟ್ಟು=ಅಡಗಿಸಿಟ್ಟು/ಯಾರಿಗೂ ಕಾಣದಂತೆ ಮರೆಯಾಗಿಸಿ ; ಹೊದ್ದು=ದೊರಕು/ಸಿಗು ; ಹೊದ್ದದನು=ದೊರೆಯದಿರುವುದನ್ನು/ಸಿಕ್ಕದಿರುವುದನ್ನು ; ಬಯಸುವನು=ಇಚ್ಚಿಸುವನು/ಹಂಬಲಿಸುವನು ; ಇದ್ದು+ಉಣ್ಣದ+ಅವನ ; ಇದ್ದುಣ್ಣದವನು=ತನ್ನ ಬಳಿ ಇರುವ ಸಂಪತ್ತಿನಿಂದ ಒಲವು ನಲಿವು ನೆಮ್ಮದಿಯ ಬಾಳ್ವೆಯನ್ನು ನಡೆಸದವನು ; ಮಣ್ಣಿನ ಮುದ್ದೆ=ಮಣ್ಣಿನ ಹೆಂಟೆ/ಉಂಡೆ ; ಬಾಯಲ್ಲಿ ಮಣ್ಣಿನ ಮುದ್ದೆ= ಸಾವನ್ನಪ್ಪಿದ ವ್ಯಕ್ತಿಯ ಹೆಣವನ್ನು ಗುಂಡಿಯಲ್ಲಿಟ್ಟು ಮಣ್ಣು ಮುಚ್ಚತೊಡಗಿದಾಗ ಹೆಣದ ಬಾಯಲ್ಲಿ ಮಣ್ಣು ತುಂಬಿಕೊಳ್ಳುವುದು/ಜೀವನದಲ್ಲಿ ಉಂಡು ತಿಂದು ನಕ್ಕು ನಲಿದು ಆನಂದವನ್ನು ಪಡೆಯದೆ ಸಾವನ್ನಪ್ಪಿದ ಎಂಬ ತಿರುಳಿನಲ್ಲಿ ಈ ಪದಕಂತೆಯು ಬಳಕೆಯಾಗಿದೆ ; ಕಂಡ+ಅಯ್ಯ=ತಿಳಿದು ನೋಡು)

65)   ಇದ್ದೂರ ಹಗೆ ಹೊಲ್ಲ ಬಿದ್ದ ಮಾಳಿಗೆ ಹೊಲ್ಲ
ತಿದ್ದದ ಎತ್ತ ಕೊಳ ಹೊಲ್ಲ ಮನೆಯೊಳಗೆ
ಗುದ್ದಾಟ ಹೊಲ್ಲ ಸರ್ವಜ್ಞ

ನೆಮ್ಮದಿಯಿಂದ ಬಾಳ್ವೆಮಾಡಲು ಯಾವ ಬಗೆಯ ಎಚ್ಚರದ ನಡೆನುಡಿಗಳನ್ನು ಹೊಂದಿರಬೇಕು ಎಂಬುದನ್ನು ಹೇಳಲಾಗಿದೆ.

(ಇದ್ದ+ಊರ ; ಇದ್ದ=ಇರುವ/ಈಗ ವಾಸ ಮಾಡುತ್ತಿರುವ ; ಊರ=ಊರಿನ ; ಹಗೆ=ಶತ್ರು ; ಹೊಲ್ಲ=ಬೇಡ ; ಇದ್ದೂರ ಹಗೆ ಹೊಲ್ಲ=ನಾವು ಬಾಳುತ್ತಿರುವ ಪರಿಸರದಲ್ಲಿರುವ ವ್ಯಕ್ತಿಗಳ ಜತೆಯಲ್ಲಿ ಹಗೆತನವನ್ನು ಕಟ್ಟಿಕೊಳ್ಳಬಾರದು ; ಮಾಳಿಗೆ=ಮಣ್ಣಿನ/ಹುಲ್ಲಿನ ಹೊದಿಕೆ-ಮನೆಯ ಚಾವಣಿ ; ಬಿದ್ದ ಮಾಳಿಗೆ=ಮುರಿದು ಬಿದ್ದಿರುವ/ಹಾಳಾಗಿರುವ ಮನೆ ; ತಿದ್ದು=ಸರಿಪಡಿಸು/ಪಳಗಿಸು/ಹತೋಟಿಯಲ್ಲಿಡು ; ಕೊಳ್=ಪಡೆ/ಹೊಂದು/ತೆಗೆದುಕೊ ; ತಿದ್ದದ ಎತ್ತ ಕೊಳ ಹೊಲ್ಲ=ಪಳಗಿಸಿ ದುಡಿಸಿಕೊಳ್ಳಲಾಗದ ಎತ್ತನ್ನು ಕೊಂಡುಕೊಳ್ಳಬಾರದು ; ಮನೆಯೊಳಗೆ ಗುದ್ದಾಟ=ಕುಟುಂಬದಲ್ಲಿನ ವ್ಯಕ್ತಿಗಳು ಪರಸ್ಪರ ಒಲವು ನಲಿವು ನಂಬಿಕೆಗಳನ್ನು ಕಳೆದುಕೊಂಡು ಜಗಳವಾಡುವುದು)

66)   ಒಡಲ ದಂಡಿಸಿ ಮುಕ್ತಿ ಪಡೆವೆನೆಂಬವನೆಗ್ಗ
ಬಡಿಗೆಯಿಂ ಹುತ್ತ ಹೊಡೆಯಲೊಳಗಿಹ ಸರ್ಪ
ಮಡಿವುದೇ ಹೇಳ ಸರ್ವಜ್ಞ

ದೇಹವನ್ನು ಬಹುಬಗೆಯ ಯಾತನೆಗೆ ಗುರಿಪಡಿಸುವುದರಿಂದ ಮುಕ್ತಿಯು ದೊರೆಯುತ್ತದೆಯೆಂದುನಂಬುವುದು/ತಿಳಿಯುವುದು/ಅಂದುಕೊಳ್ಳುವುದು ಸರಿಯಲ್ಲವೆಂಬುದನ್ನು ಹೇಳಲಾಗಿದೆ.

(ಒಡಲು=ಹೊಟ್ಟೆ/ದೇಹ/ಮಯ್ಯಿ ; ದಂಡಿಸು=ನೋವಿಗೆ ಗುರಿಮಾಡುವುದು ; ಒಡಲ ದಂಡಿಸಿ=ಅನ್ನನೀರನ್ನು ತೊರೆದು ಉಪವಾಸ ಮಾಡುವುದು/ಒಂಟಿಕಾಲಲ್ಲಿ ನಿಂತು ದೇವರ ಹೆಸರನ್ನು ಜಪಿಸುತ್ತಿರುವುದು/ದೇಗುಲದ ಸುತ್ತ ಹೆಜ್ಜೆಹೆಜ್ಜೆಗೂ ದಿಂಡುರುಳುವುದು/ಒದ್ದೆಬಟ್ಟೆಯಲ್ಲಿ ಉರುಳುಸೇವೆ ಮಾಡುವುದು/ಬಾಯಿಬೀಗ ಹಾಕಿಸಿಕೊಳ್ಳವುದು/ಬೆನ್ನಿನ ಹುರಿಗೆ ಕಬ್ಬಿಣದ ಕೊಕ್ಕೆಯನ್ನು ಚುಚ್ಚಿಸಿಕೊಂಡು ಸಿಡಿಯಾಡುವುದು/ದೇಹಕ್ಕೆ ನೋವುಂಟು ಮಾಡುವ ಇನ್ನೂ ನೂರಾರು ಬಗೆಯ ಆಚರಣೆಗಳಲ್ಲಿ ತೊಡಗುವುದು ; ಮುಕ್ತಿ=ಹುಟ್ಟುಬದುಕುಸಾವುಗಳ ಚಕ್ರದಿಂದ ಜೀವವು ಬಿಡುಗಡೆಯನ್ನು ಹೊಂದುವುದು ಎಂಬ ನಂಬಿಕೆ ; ಪಡೆವೆನ್+ಎಂಬವನ್+ಎಗ್ಗ ; ಪಡೆವೆನ್=ಹೊಂದುತ್ತೇನೆ/ಗಳಿಸುತ್ತೇನೆ ; ಎಂಬವನ್=ಎಂದುಕೊಳ್ಳುವವನು ; ಎಗ್ಗ=ದಡ್ಡ/ತಿಳಿಗೇಡಿ ; ಬಡಿಗೆ+ಇಂ ; ಬಡಿಗೆ=ಕೋಲು/ದೊಣ್ಣೆ ; ಇಂ=ಇಂದ ; ಹೊಡೆಯಲ್+ಒಳಗೆ+ಇಹ ; ಇಹ=ಇರುವ ; ಸರ್ಪ=ಹಾವು ; ಮಡಿ=ಸಾಯು/ಮರಣಹೊಂದು ; ಹೇಳ=ಹೇಳು/ತಿಳಿದು ನೋಡು)

67)   ಗುಡಿಯ ಬೋದಿಗೆ ಕಲ್ಲು ನಡುವೆ ರಂಗ ತಾ ಕಲ್ಲು
ಹೊಡವಡಿಸಿ ಕೊಂಬಡದು ಕಲ್ಲು-ಲಿಂಗವಿ
ದ್ದೆಡೆಯನಾರರಿಗು ಸರ್ವಜ್ಞ

ಕಲ್ಲದೇಗುಲದಲ್ಲಿ ದೇವರು ಇರುವ ಎಡೆಯನ್ನು ತಿಳಿಯಲಾಗದ ಬಗೆಯನ್ನು ಹೇಳಲಾಗಿದೆ.

( ಗುಡಿ=ದೇಗುಲ/ದೇವರ ಮಂದಿರ ; ಬೋದಿಗೆ= ಕಂಬದ ಮೇಲೆ ತೊಲೆಯನ್ನು ಇಡಲು ಬಳಸುವ ವಸ್ತು  ;  ನಡುವೆ=ಗರ‍್ಬಗುಡಿಯ ಮುಂದಿನ ಜಾಗ ; ರಂಗ=ದೇವರ ಮುಂದೆ ನಾಟ್ಯ ಸಂಗೀತ ಮುಂತಾದ ಕಲೆಗಳನ್ನು ಪ್ರದರ‍್ಶನ ಮಾಡುವ ವೇದಿಕೆ/ಜಾಗ ; ತಾ=ಅದು ; ಹೊಡವಡು=ಹೊಡೆ+ಪಡು ; ಹೊಡೆ=ಹೊಟ್ಟೆ/ಒಡಲು ; ಪಡು=ಮಲಗು/ಒರಗು ; ಹೊಡವಡು=ಇಡೀ ಮಯ್ಯನ್ನು ನೆಲದ ಮೇಲೊಡ್ಡಿ ತಲೆಬಾಗಿ ನಮಿಸುವುದು ; ಕೊಂಬಡೆ+ಅದು ; ಕೊಂಬಡೆ=ಕೊಳ್ಳುವುದೆಂದರೆ ; ಕೊಂಬ=ಕೊಳುವ ; ಹೊಡವಡಿಸಿ ಕೊಂಬಡದು ಕಲ್ಲು=ದಿಂಡುರುಳಿ ನಮಸ್ಕರಿಸಿಕೊಳ್ಳುತ್ತಿರುವ ದೇವರ ವಿಗ್ರಹವೂ ಕಲ್ಲು ; ಲಿಂಗ+ಇದ್ದ+ಎಡೆಯನ್+ಆರ‍್+ಅರಿಗು ; ಲಿಂಗ=ದೇವರಾದ ಶಿವ ; ಎಡೆ=ಜಾಗ/ನೆಲೆ ; ಆರ‍್=ಯಾರು ; ಅರಿ=ತಿಳಿ ; ಆರರಿಗು=ಯಾರು ತಾನೆ ತಿಳಿದಿದ್ದಾರೆ)

68)   ಮೆಲ್ಲನೇ ಹರಿವ ನೀರು ಕಲ್ಲಭೇದಿಸುತಿಕ್ಕು
ಸೊಲ್ಲರಿತು ನುಡಿವರೊಳುನುಡಿಯು-ಲೋಕವ
ಗೆಲ್ಲದೆಂತಿಕ್ಕು ಸರ್ವಜ್ಞ

ಕೋಪತಾಪವಿಲ್ಲದೆ/ಆವೇಶವಿಲ್ಲದೆ ಒಳ್ಳೆಯ ಉದ್ದೇಶದಿಂದ ಆಡುವ ಮಾತು ಕೇಳುವವರ ಮನಸ್ಸಿಗೆ ಅರಿವನ್ನು ನೀಡಿ ಒಳಿತಿನ ಕಡೆಗೆ ಒಲಿಯುವಂತೆ ಮಾಡುತ್ತದೆ ಎಂಬುದನ್ನು ಹೇಳಲಾಗಿದೆ.

(ಮೆಲ್ಲನೇ ಹರಿವ ನೀರು=ಯಾವುದೇ ಎಡೆಯಲ್ಲಿ ಯಾವಾಗಲೂ ನೀರು ಜೋರಿಲ್ಲದೆ/ವೇಗವಿಲ್ಲದೆ ಹರಿಯುತ್ತಿರುವುದು ; ಕಲ್ಲಭೇದಿಸುತ+ಇಕ್ಕು ; ಕಲ್ಲ=ಕಲ್ಲನ್ನು/ಬಂಡೆಯನ್ನು ; ಭೇದಿಸು=ಅಲುಗಿಸು/ಸಡಿಲಗೊಳಿಸು/ಪುಸಿಗೊಳಿಸು ; ಕಲ್ಲಭೇದಿಸು=ಹರಿಯುವ ನೀರಿಗೆ ಅಡ್ಡಲಾಗಿರುವ ಬಂಡೆಯ ಸುತ್ತಲಿನ ಮಣ್ಣನ್ನು ಕೊರೆದು ಪುಸಿಗೊಳಿಸಿ ಬಂಡೆಯನ್ನೇ ಅಲುಗುವಂತೆ ಮಾಡುವುದು ; ಇಕ್ಕು=ಇರುವುದು ; ಸೊಲ್ಲ+ಅರಿತು ; ಸೊಲ್ಲು=ಮಾತು/ನುಡಿ ; ಅರಿತು=ತಿಳಿದು ; ಸೊಲ್ಲರಿತು=ಯಾವ ಬಗೆಯ ಮಾತನ್ನು ಆಡಬೇಕು/ಆಡಬಾರದು ಎಂಬ ಎಚ್ಚರಿಕೆ/ಹೊಣೆಗಾರಿಕೆಯಿಂದ ; ನುಡಿವರ+ಒಳುನುಡಿಯು ; ನುಡಿವರ=ಮಾತನಾಡುವವರ ; ಒಳುನುಡಿ=ಒಳ್ಳೆಯ ಮಾತು/ಕೇಳಿದವರ ಮನದಲ್ಲಿ ಅರಿವು ಮತ್ತು ಆನಂದವನ್ನು ಮೂಡಿಸುವಂತಹ ಮಾತುಗಳು ; ಲೋಕ=ಜಗತ್ತು/ಸಮಾಜ/ಸಮುದಾಯ/ಜನಮನ ; ಗೆಲ್ಲದೆ+ಎಂತು+ಇಕ್ಕು ; ಎಂತು=ಯಾವ ರೀತಿ/ಬಗೆ ; ಎಂತಿಕ್ಕು=ಹೇಗೆ ತಾನೇ ಇರುವುದು ; ಲೋಕವ ಗೆಲ್ಲು=ಒಳಿತನ್ನುಂಟು ಮಾಡುವ ಮಾತು ಎಲ್ಲರ ಮನಸ್ಸಿಗೂ ಮುದವನ್ನು ನೀಡಿ ಮೆಚ್ಚುಗೆಯನ್ನು ಪಡೆಯುತ್ತದೆ)

69)   ಸುರಗಿಯಲಿರಿದೇರು ಸರನೆ ಮಾದಿಹುದು ಅ
ಸ್ಥಿರದ ನಾಲಗೆಯಲಿರಿದೇರು-ಅಂದಂದಿ
ಗಿರಿದಿರಿದು ಸುಡದೆ ಸರ್ವಜ್ಞ

ಹರಿತವಾದ ಹತಾರದ ಇರಿತದಿಂದ ಉಂಟಾದ ಗಾಯಕ್ಕಿಂತಲೂ ಆಡಿದ ಕೆಟ್ಟಮಾತು ಹೆಚ್ಚಿನ ನೋವನ್ನುಂಟುಮಾಡುತ್ತದೆ ಎಂಬುದನ್ನು ಹೇಳಲಾಗಿದೆ.

(ಸುರಗಿಯಲಿ+ಇರಿದ+ಏರು ; ಸುರಗಿ=ಸಣ್ಣಕತ್ತಿ/ಚೂರಿ/ಹತಾರ ; ಇರಿ=ತಿವಿ/ಚುಚ್ಚು ; ಏರು=ಗಾಯ/ಹುಣ್ಣು ; ಸುರಗಿಯಲಿರಿದೇರು=ಕತ್ತಿ/ಚೂರಿ/ಇನ್ನಿತರ ಹತಾರಗಳಿಂದ ತಿವಿದು ಮಾಡಿದ ಗಾಯ ; ಸರನೆ=ತುಸು ಸಮಯದಲ್ಲಿ/ಕೆಲವಾರು ದಿನಗಳಲ್ಲಿ ; ಮಾದು+ಇಹುದು ; ಮಾಯ್+ದು ; ಮಾಯ್=ಗುಣವಾಗು/ವಾಸಿಯಾಗು ; ಇಹುದು=ಇರುವುದು ; ಅಸ್ಥಿರ=ಎಲುಬಿಲ್ಲದ/ಮೂಳೆಯಿಲ್ಲದ/ಅಲುಗಾಡುವ ; ನಾಲಗೆಯಲಿ+ಇರಿದ+ಏರು ; ನಾಲಗೆಯಲಿರಿದೇರು=ಕೆಟ್ಟಮಾತುಗಳನ್ನಾಡಿ ಮಾಡಿದ ಅವಹೇಳನ/ಮನಸ್ಸನ್ನು ಗಾಸಿಗೊಳಿಸಿ ನೀಡಿದ ನೋವು ; ಅಂದು+ಅಂದಿಗೆ+ಇರಿದು+ಇರಿದು ; ಅಂದು=ಆ ದಿನ ; ಅಂದಂದಿಗೆ=ಪ್ರತಿ ದಿನವೂ ; ಇರಿದಿರಿದು=ಕಡೆಗಣಿಸಿ ನುಡಿದ ಪ್ರಸಂಗವು ನೆನಪಿಗೆ ಬಂದಾಗಲೆಲ್ಲಾ ಅಂದು ಆಡಿದ್ದ ಮಾತುಗಳು ಮನವನ್ನು ಚುಚ್ಚಿಚುಚ್ಚಿ ಕಾಡುತ್ತ ; ಸುಡು=ಬೆಂಕಿಯಲ್ಲಿ ಬೇಯಿಸು/ಬೇಗೆಯನ್ನುಂಟು ಮಾಡು/ನೋವನ್ನುಂಟುಮಾಡು ; ಸುಡದೆ=ನೋಯಿಸದೇ ಇರುತ್ತದೆಯೇ?)

70)   ಇಟ್ಟಿಯಲಿ ಇರಿದೇರು ನೆಟ್ಟನೊಂದಾಗಿಕ್ಕು
ಕೆಟ್ಟ ನಾಲಿಗೆಯಲಿರಿದೇರು-ದಿನದಿನ
ಕಟ್ಟಟ್ಟಿಯೆ ಸುಡುಗು ಸರ್ವಜ್ಞ

ಹರಿತವಾದ ಹತಾರದ ಇರಿತದಿಂದ ಉಂಟಾದ ಗಾಯಕ್ಕಿಂತಲೂ ಆಡಿದ ಕೆಟ್ಟಮಾತು ಹೆಚ್ಚಿನ ನೋವನ್ನುಂಟುಮಾಡುತ್ತದೆ ಎಂಬುದನ್ನು ಹೇಳಲಾಗಿದೆ.

(ಇಟ್ಟಿ=ಈಟಿ/ಹರಿತವಾದ ಮೊನೆಯುಳ್ಳ ಹತಾರ ; ಇರಿದ+ಏರು ; ಇರಿ=ತಿವಿ/ಚುಚ್ಚು ; ಏರು=ಗಾಯ/ಹುಣ್ಣು ; ನೆಟ್ಟನೆ+ಒಂದು+ಆಗಿ+ಇಕ್ಕು ; ನೆಟ್ಟನೆ=ಸರಿಯಾಗಿ/ಚೆನ್ನಾಗಿ ; ನೆಟ್ಟನೊಂದಾಗಿಕ್ಕು=ಕೆಲವಾರು ದಿನಗಳಲ್ಲಿ ಮೊದಲಿನಂತಾಗುತ್ತದೆ/ಆಗಿದ್ದ ಗಾಯ ಮಾಯುತ್ತದೆ ; ನಾಲಿಗೆಯಲಿ+ಇರಿದ+ಏರು ; ಕೆಟ್ಟನಾಲಿಗೆ=ಯಾವುದೇ ಒಬ್ಬ ವ್ಯಕ್ತಿಯ/ಸಂಗತಿಯ ಬಗ್ಗೆ ಸದಾಕಾಲ ಹೊಲಸುಮಾತುಗಳನ್ನೇ ಆಡುವುದು/ಕೇಡಾಗಲಿ ಎಂದು ಶಪಿಸುವುದು ; ನಾಲಿಗೆಯಲಿ+ಇರಿದ+ಏರು=ಮಾತುಗಳ ಮೂಲಕ ನೀಡಿದ ಪೆಟ್ಟು/ಮಾನಸಿಕ ಯಾತನೆ ; ದಿನದಿನ=ಪ್ರತಿನಿತ್ಯವೂ ; ಕಟ್ಟಟ್ಟಿ=ಹಿಂಬಾಲಿಸಿ/ಬೆನ್ನಟ್ಟಿ/ಪದೇಪದೇ ನೆನಪಾಗುತ್ತ ; ಸುಡುಗು=ನೋಯಿಸುತ್ತಿರುತ್ತದೆ/ಬೇಯಿಸುತ್ತಿರುತ್ತದೆ)

( ಚಿತ್ರಸೆಲೆ: wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: