ಮಲೇರಿಯಾ

ಯಶವನ್ತ ಬಾಣಸವಾಡಿ.

ಈ ಬರಹದಲ್ಲಿ ಮಲೇರಿಯಾ ಬೇನೆಯ ಕಾರಣಗಳು, ಹರಡುವ ಬಗೆ, ಬೇನೆ ತಡೆ ಮುಂತಾದವುಗಳ ಕುರಿತು ತಿಳಿದುಕೊಳ್ಳೋಣ.
ಪ್ಲಾಸ್ಮೋಡಿಯಮ್ (plasmodium) ಎಂಬ ಹೊರಕುಳಿಯು (parasite) ಮಲೇರಿಯಾ ಕುತ್ತನ್ನು ಉಂಟು ಮಾಡುತ್ತದೆ.

ಹರಡುವ ಬಗೆ:

titta 1

ಅನಾಪಿಲಿಸ್ (Anopheles) ಸೊಳ್ಳೆಯ ಕಚ್ಚುವಿಕೆಯಿಂದ ಮಲೇರಿಯಾ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಸೋಂಕನ್ನು ಹೊಂದಿರುವ ಸೊಳ್ಳೆಯು ಮನುಶ್ಯನನ್ನು ಕಚ್ಚಿದಾಗ, ಎಳೆ-ಹೊರಕುಳಿಗಳು (immature parasite), ಮನುಶ್ಯನ ಈಲಿಯನ್ನು (liver) ಸೇರಿ ಬಲಿಯುತ್ತವೆ (mature). ಬಲಿತ-ಹೊರಕುಳಿಗಳು (mature parasite), ನೆತ್ತರಿನ ಕೆನೆ ಕಣಗಳನ್ನು (red blood cells) ಸೇರಿ, ಕೆನೆ ಕಣಗಳನ್ನು ಹೊಡೆದು ಹಾಳು ಮಾಡುತ್ತವೆ. ಬೇನೆಯ ಹಬ್ಬುವಿಕೆ ಹಾಗು ಕಡುಹನ್ನು (intensity) ಕೆಳಗಿನ ಇರುಹುಗಳು (factors) ತೀರ‍್ಮಾನಿಸುತ್ತವೆ.

1)    ಹೊರಕುಳಿ (parasite): ಮನುಶ್ಯರನ್ನು ನಾಲ್ಕು ಬಗೆಯ ಪ್ಲಾಸ್ಮೋಡಿಯಮ್‍ಗಳು ಕಾಡುತ್ತವೆ.

i) ಪ್ಲಾಸ್ಮೋಡಿಯಮ್ ಪಾಲ್ಸಿಪಾರಮ್ (plasmodium falciparum)

ii) ಪ್ಲಾಸ್ಮೋಡಿಯಮ್ ವಯ್ವ್ಯಾಕ್ಸ್ (plasmodium vivax)

iii) ಪ್ಲಾಸ್ಮೋಡಿಯಮ್ ಮಲೇರಿಯೇ (plasmodium malariae)

iv) ಪ್ಲಾಸ್ಮೋಡಿಯಮ್ ಓವೆಲ್ (plasmodium ovale)

titta 2ಪ್ಲಾಸ್ಮೋಡಿಯಮ್ ಪಾಲ್ಸಿಪಾರಮ್ ಹಾಗು ಪ್ಲಾಸ್ಮೋಡಿಯಮ್ ವಯ್ವ್ಯಾಕ್ಸ್ ಬಗೆಗಳು ಹೆಚ್ಚಾಗಿ ಕಂಡುಬಂದರೂ, ಪ್ಲಾಸ್ಮೋಡಿಯಮ್ ಪಾಲ್ಸಿಪಾರಮ್ ತುಂಬಾ ಹಾನಿಕಾರಕ. ತೆಂಕಣ-ಮೂಡಣ ಏಶ್ಯಾದ (south-east) ಕಾಡುಗಳಲ್ಲಿ  ಕೋತಿಗಳನ್ನು ಕಾಡುವ ಪ್ಲಾಸ್ಮೋಡಿಯಮ್ ನವ್ಲೆಸಿ (plasmodium knowlesi) ಇತ್ತೀಚಿನ ದಿನಗಳಲ್ಲಿ ಮನುಶ್ಯರಲ್ಲೂ ಮಲೇರಿಯಾ ಬೇನೆಯನ್ನು ಉಂಟು ಮಾಡುತ್ತವೆ ಎಂದು ಗುರುತಿಸಲಾಗಿದೆ.

2)    ನಡುಸೆರಪುಗ (vector): ಅನಾಪಿಲಿಸ್ ಸೊಳ್ಳೆ

titta 3ಅನಾಪಿಲಿಸ್ ಸೊಳ್ಳೆಗಳು ಇರುಳಿನಲ್ಲಿ ಕಚ್ಚುತ್ತವೆ. ಇಪ್ಪತ್ತು ಬಗೆಯ ಅನಾಪಿಲಿಸ್ ಸೊಳ್ಳೆಗಳಿದ್ದು, ಹೆಚ್ಚಾಗಿ ನಿಂತ ನೀರಿನ ತಾಣಗಳಲ್ಲಿ ತಮ್ಮ ನೆಲೆಗಳನ್ನು ಕಂಡುಕೊಳ್ಳುತ್ತವೆ. ಈ ಸೊಳ್ಳೆಗಳು ತಮ್ಮ ಬಾಳ್ಮೆಸುತ್ತನ್ನು (life cycle) ಮುಗಿಸಲು ನೆರವಾಗುವ ತಾಣ ಹಾಗು ಮನುಶ್ಯರನ್ನು ಕಚ್ಚಲು ಹೆಚ್ಚಿನ ತೆರಹುಗಳು (chance) ಇರುವ ಕಡೆ ಹರಡುವ ಸಾದ್ಯತೆ ಹೆಚ್ಚಿರುತ್ತದೆ. ಎತ್ತುಗೆಗೆ: ಆಪ್ರಿಕಾ ನಾಡುಗಳ ಅನಾಪಿಲಿಸ್ ಸೊಳ್ಳೆಗಳು ತಮ್ಮ ಬಾಳ್ಮೆಸುತ್ತನ್ನು ಮುಗಿಸಲು ನೆರವಾಗುವ ಸುತ್ತಣದಲ್ಲಿ ಇರತ್ತವೆ. ಅಲ್ಲಿನ ಅನಾಪಿಲಿಸ್ ಸೊಳ್ಳೆಗಳು ಬಲವಾಗಿ ಮುಶ್ಯರನ್ನು ಕಚ್ಚುವ ಅಳವನ್ನು ಹೊಂದಿರುತ್ತವೆ. ಈ ಎರಡು ಗುಣಗಳಿಂದಾಗಿ, ಜಗತ್ತಿನೆಲ್ಲೆಡೆ ಮಲೇರಿಯಾದಿಂದ ಆಗುವ ಸಾವು-ನೋವುಗಳಲ್ಲಿ 90% ರಶ್ಟು ಬಾಗ ಆಪ್ರಿಕಾ ನಾಡಿನ ಪಾಲಾಗಿದೆ.

titta 4

3) ಸೆರಪುಗ (host): ಮನುಶ್ಯ

i) ಮಲೇರಿಯಾ ಸೋಂಕು ಇರುವ ಕಡೆಗಳಲ್ಲಿ ಹುಟ್ಟಿ ಬದುಕುವವರು ಹಲವು ವರುಶಗಳು ಈ ಬೇನೆಗೆ ತೆರೆದುಕೊಳ್ಳುವುದರಿಂದ, ಅಲ್ಲಿನ ಮಂದಿಯಲ್ಲಿ ಈ ಬೇನೆಯು ತಗುಲದಂತೆ ತಕ್ಕ-ಮಟ್ಟಿಗೆ ಕಾಪನ್ನು (immune) ಬೆಳೆಸಿಕೊಂಡಿರುತ್ತಾರೆ.

ii) ಮಕ್ಕಳಲ್ಲಿ ಕಾಪೇರ‍್ಪಾಟು (immune system) ಅಶ್ಟಾಗಿ ಬೆಳೆದಿರದ ಕಾರಣ, ದೊಡ್ಡವರಿಗೆ ಹೋಲಿಸಿದರ ಎಳೆಯ ವಯಸ್ಸಿನ ಮಕ್ಕಳು ಮಲೇರಿಯಾದಿಂದ ಸಾಯುವುದು ಹೆಚ್ಚು.

iii) ಗಟ್ಟಿಯಾದ ಕಾಪೇರ‍್ಪಾಟನ್ನು ಹೊಂದಿರದ ಮಂದಿಯಲ್ಲೂ ಹೆಚ್ಚಿನ ಸಾವುಗಳಾಗುತ್ತವೆ

4) ಸುತ್ತಣ (environment):

ಸೊಳ್ಳೆಗಳು ಹುಟ್ಟಿ-ಬೆಳೆಯಲು ಹೇಳಿ ಮಾಡಿಸಿದ ಹೊತ್ತುಗಳಲ್ಲಿ ಅದರಲ್ಲೂ ಮಳೆಗಾಲ ಮುಗಿದ ಕೂಡಲೇ ಬೇನೆಯು ಬಿರುಸಿನಿಂದ ಹರಡುತ್ತದೆ.

ಕಾಡುವ ಬಗೆ (signs & symptoms):

ಮಲೇರಿಯಾ, ಮೊನಚಿನ (acute) ಜ್ವರವನ್ನು ಉಂಟುಮಾಡುವ ಬೇನೆಗಳಲ್ಲೊಂದು. ಕಾಪಿಲ್ಲದ  (non-immune) ಮಂದಿಯಲ್ಲಿ, ಸೋಂಕು ತಗುಲಿದ ಸೊಳ್ಳೆಯು ಕಚ್ಚಿದ 10-15 ದಿನಗಳಲ್ಲಿ ಬೇನೆಯ ಕುರುಹುಗಳು ಕಾಣಿಸಿಕೊಳ್ಳುತ್ತವೆ. ಮೊದಲಿಗೆ ಜ್ವರ, ತಲೆನೋವು, ಚಳಿ ಹಾಗು ವಾಂತಿ ಕಾಣಿಸಿಕೊಳ್ಳುತ್ತವೆ; ಮೊದಮೊದಲು ಇವುಗಳ ಬಿರುಸು ಕಡಿಮೆಯಿರುವುದರಿಂದ, ಗುರುತಿಸಲು ಸ್ವಲ್ಪ ತೊಡಕಾಗುತ್ತದೆ. ಪ್ಲಾಸ್ಮೋಡಿಯಮ್ ಪಾಲ್ಸಿಪಾರಮ್ ಸೋಂಕು ತಗುಲಿದವರಲ್ಲಿ, ಬೇನೆಯ ಬಿರುಸು ಹೆಚ್ಚಿದ್ದು, ಬೇನೆ ತಗುಲಿದ 24 ಗಂಟೆಗಳೊಳಗೆ ಮಾಂಜುಗೆಯನ್ನು ಮಾಡದಿದ್ದರೆ, ಕುತ್ತಿಗರು (patient) ಸಾಯಬಹುದು.

titta 5

ಮಕ್ಕಳಲ್ಲಿ ಹೆಚ್ಚಾಗಿ ಉಂಟಾಗುವ ಬಿರುಸಿನ ಬಗೆಯ ಮಲೇರಿಯಾದಲ್ಲಿ ಕಾಣಿಸಿಕೊಳ್ಳುವ ಕುರುಹುಗಳೆಂದರೆ, ಕೆನೆಕಣಕೊರತೆ (anemia), ತರುಮಾರ‍್ಪಿನ ಹುಳಿಕೆಯಿಂದಾಗಿ (metabolic acidosis) ಆಗುವ ಉಸಿರಾಟದ ತೊಂದರೆ ಮತ್ತು ನಿಮ್ಮೆದುಳಿನ ಮಲೇರಿಯ (cerebral malaria). ಎಲ್ಲೆಯ ಹರವುಗಳಲ್ಲಿ (endemic area), ಹದುಳದ ಕಾಪೇರ‍್ಪಾಟನ್ನು ಹೊಂದಿರುವ ಮಂದಿಯು ಕೊರೆ-ಕಾಪನ್ನು (partial immunity) ಬೆಳೆಸಿಕೊಳ್ಳುತ್ತಾರೆ; ಇಂತಹ ಮಂದಿಯಲ್ಲಿ ಬೇನೆ ತಗುಲಿದರೂ ಕುರುಹುಗಳು ಕಾಣಿಸಿಕೊಳ್ಳುವುದಿಲ್ಲ.

ಪ್ಲಾಸ್ಮೋಡಿಯಮ್ ವಯ್ವ್ಯಾಕ್ಸ್  ಮತ್ತು ಪ್ಲಾಸ್ಮೋಡಿಯಮ್ ಓವೆಲ್ ಹೊರಕುಳಿಗಳು, ಹಿಪ್ನೋಜಾಯ್ಟ್ಸ್ (hypnozoites) ಎಂಬ ಚುರುಕಲ್ಲದ ಗೊತ್ತುಪಾಡಿಗೆ (dormant state) ಮಾರ್ಪಡುವ ಅಳವನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿ, ಈ ಎರಡು ಹೊರಕುಳಿಗ ಸೋಂಕು ತಗುಲಿದವರಲ್ಲಿ, ಬೇನೆಯ ಕುರುಹುಗಳು ವಾರಗಳಿಂದ ಹಿಡಿದು ತಿಂಗಳುಗಳಾದ ಮೇಲೆ ಕಾಣಿಸುಕೊಳ್ಳುತ್ತದೆ. ಹಾಗಾಗಿ, ಕುತ್ತಿಗರು ಮಲೇರಿಯಾ ಎಲ್ಲೆಯ ಹರವಿನಿಂದ (endemic area) ಹೊರಬಂದಿದ್ದರೂ, ಬೇನೆಯು ಕಾಡುತ್ತದೆ.

ಕುತ್ತುದೊರೆತ (diagnosis):

ಕುತ್ತಿಗನ ಇತ್ತೀಚಿನ ಓಡಾಟ, ಬೇನೆಯ ಕುರುಹುಗಳು, ಮತ್ತು ಮಯ್ ಒರೆತ (physical examination): ಇವುಗಳನ್ನು ಗಮನಿಸಿದರೆ, ಕುತ್ತಿಗನು ಮಲೇರಿಯಾದಿಂದ ಬಳಲುತ್ತಿರಬಹುದ್ದೆಂದು ತಕ್ಕ ಮಟ್ಟಿಗೆ ತಿಳಿದುಕೊಳ್ಳಬಹುದು.
ಬೇನೆಯನ್ನು ನಿಕ್ಕಿ ಮಾಡಿಕೊಳ್ಳಲು ಹೆಚ್ಚಿನ ಒರೆತಗಳನ್ನು ಮಾಡಬೇಕಾಗುತ್ತದೆ.

1) ಸೀರುತೋರ‍್ಪು ಒರೆತ (microscopic examination): (ತಿಟ್ಟ 2) ಕುತ್ತಿಗರ ನೆತ್ತರನ್ನು ಒರೆಗಾಜಿನ (microscopic slide) ಮೇಲೆ ಸವರುವುದು. ಸವರಿದ ನೆತ್ತರನ್ನು ಜೀಮ್ಸಾ ಬಣ್ಣಕದಿಂದ (Geimsa stain) ಬಣ್ಣ-ಕಟ್ಟುವುದು (staining). ಬಣ್ಣಕಟ್ಟಿದ ನೆತ್ತರಿನ-ಸವರನ್ನು (blood smear) ಸೀರುತೋರ‍್ಪಿನ ನೆರವಿನಿಂದ ಕೆನೆಕಣಗಗಳಲ್ಲಿ (red blood cells) ಅಡಗಿರಬಹುದಾದ ಮಲೇರಿಯಾ ಹೊರಕುಳಿಗಳನ್ನು ಗುರುತಿಸುವುದು.

2) ಒಗ್ಗದಿಕದ ಒರೆತ (antigen test): ಸೀರುತೋರ‍್ಪಿನ ಒರೆತದ ಅನುಕೂಲ ಇಲ್ಲದ ಕಡೆಗಳಲ್ಲಿ ಈ ಒರೆತವನ್ನು ಬಳಸಿಕೊಳ್ಳಬಹುದಾಗಿದೆ. ಈ ಒರೆತವು ಮಲೇರಿಯಾ ಹೊರಕುಳಿಗಳಲ್ಲಿ ಇರುವ ಒಗ್ಗದಿಕವನ್ನು(ಗಳನ್ನು) ಗುರುತಿಸುವ ಜಾಣ್ಮೆಯನ್ನು ಹೊಂದಿದೆ. ಈ ಬಗೆಯ ಒರೆತಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವುದು ‘ಬಿರುಸಿನ ಕುತ್ತೊರೆತ’ (Rapid Diagnostic Test= RDT).

ಕುತ್ತಿಗನ ನೆತ್ತರನ್ನು ಒರೆತಕ್ಕೆ ಬೇಕಾದ ಅಡಕಗಳೊಡನೆ ಬೆರೆಸಿ, ಒರೆ-ಎಲೆ (test card) ಮೇಲೆ ಸುರಿಯುವುದು. ಹದಿನಯ್ದು ನಿಮಿಶಗಳ ಬಳಿಕ, ಒರೆ-ಎಲೆಯನ್ನು ಗಮನಿಸುವುದು. ಕುತ್ತಿಗನು ಮಲೇರಿಯಾ ಬೇನೆಯಿಂದ ಬಳಲುತ್ತಿದ್ದರೆ, ಒರೆ-ಎಲೆ ಮೇಲೆ ಗೊತ್ತುಮಾಡಿದ ಪಟ್ಟಿಗಳು ಕಾಣಿಸಿಕೊಳ್ಳುತ್ತವೆ. ಮಲೇರಿಯಾವನ್ನು ಗುರುತಿಸುವ ಸರಿಮೆ (accuracy) ಸೀರುತೋರ‍್ಪು ಒರೆತಕ್ಕೆ ಹೋಲಿಸಿದರೆ ಒಗ್ಗದಿಕದ ಒರೆತಕ್ಕೆ ಸ್ವಲ್ಪ ಕಡಿಮೆ ಇದೆ.

3) ಪಿ.ಸಿ.ಆರ್ (PCR):  ಮಲೇರಿಯಾ ಹೊರಕುಳಿಗಳ ಡಿಎನ್ಎ ಯನ್ನು ಗುರುತಿಸಿ, ಬೇನೆಯ ಇರುವಿಕೆಯನ್ನು ಈ ಒರೆತ ಗಟ್ಟಿಮಾಡುತ್ತದೆ.

4) ನೆತ್ತರು-ಹೆಪ್ನೀರು ಒರೆತ (Serology): ಮಲೇರಿಯಾ ಹೊರಕುಳಿಗಳ ಎದುರಾಗಿ ಮಾಡಲ್ಪಟ್ಟ ಎದುರುಕಗಳು ನೆತ್ತರಿನ ಹೆಪ್ನೀರಿನಲ್ಲಿ (serum) ಇದ್ದರೆ, ಅವುಗಳನ್ನು ಎಲಯ್ಸ (ELISA= enzyme linked immunosorbent assay) ನೆರವಿನಿಂದ ಗುರುತಿಸಬಹುದಾಗಿದೆ.

ಮಾಂಜುಗೆ (treatment):

ಮಲೇರಿಯಾಗೆ ಮದ್ದನ್ನು ಕೊಡುವ ಮುನ್ನ ಕೆಳಗಿನ ವಿಶಯಗಳ ಬಗ್ಗೆ ಗಮನ ಹರಿಸಬೇಕು:

1) ಯಾವ ಬಗೆಯ ಹೊರಕುಳಿಯು ಸೋಂಕನ್ನು ಉಂಟುಮಾಡುತ್ತಿದೆ ಎಂದು ತಿಳಿದುಕೊಳ್ಳುವುದು.

2) ಸೋಂಕು ತಗುಲಿದ ಹರವು (area) ಹಾಗು ಆ ಹರವಿನಲ್ಲಿ ಇರುವ ಮಲೇರಿಯಾ ಹೊರಕುಳಿಗಳು ಬೆಳೆಸಿಕೊಂಡಿರಬಹುದಾದ ಮದ್ದೊಗ್ಗಿಕೆಯನ್ನು (drug-resistance) ಗುರುತಿಸುವುದು. ಮಲೇರಿಯಾ ಮಾಂಜುಗೆಯ ದೊಡ್ಡ ತೊಡಕೆಂದರೆ, ಈ ಬೇನೆಯನ್ನು ಹೋಗಲಾಡಿಸಲು ಬಳಸುವ ಮದ್ದುಗಳಿಗೆ ಮಲೇರಿಯಾ ಹೊರಕುಳಿಗಳು ಮದ್ದೋಗ್ಗಿಕೆ ಬೆಳೆಸಿಕೊಳ್ಳುವುದು. ಈ ಕಾರಣದಿಂದಾಗಿ ಯಾವುದೇ ಮಲೇರಿಯಾ ಮದ್ದನ್ನು ಕುತ್ತಿಗರಿಗೆ ಕೊಡುವ ಮೊದಲು, ಕೊಡುತ್ತಿರುವ ಮದ್ದು ಕುತ್ತಿಗರಿಗೆ ಬೇನೆಯನ್ನು ಉಂಟುಮಾಡುತ್ತಿರುವ ಮಲೇರಿಯಾ ಹೊರಕುಳಿ ಬಗೆಯು ಮದ್ದೊಗ್ಗಿಕೆಯನ್ನು ಬೆಳೆಸಿಕೊಂಡಿದೆಯೇ ಎಂದು ನಿಕ್ಕಿ ಮಡಿಕೊಳ್ಳಬೇಕು.

3) ಕುತ್ತಿಗನ ಪಾಡು (health status of the patient)

4) ಮಲೇರಿಯಾ ಜೊತೆಗೆ ಕುತ್ತಿಗನಲ್ಲಿ ಇರಬಹುದಾದ ಬೇರೆ ಬಗೆಯ ಬೇನೆ

5) ಮಲೇರಿಯಾದಿಂದ ಬಳಲುತ್ತಿರುವವರು ಬಸುರಿಯೇ ಎಂದು ಗೊತ್ತುಮಾಡಿಕೊಳ್ಳುವುದು.
ಮಲೇರಿಯಾ ಬೇನೆಯ ಮಾಂಜುಗೆಯಲ್ಲಿ ಬಳಸಲು ಹಲವು ಬಗೆಯ ಮದ್ದುಗಳಿವೆ. ಬೇನೆಯನ್ನು ಉಂಟುಮಾಡುವ ಹೊರಕುಳಿಗಳನ್ನು ಕೊಲ್ಲಲು ಈ ಮದ್ದುಗಳನ್ನು ಬಳಸಬಹುದಾಗಿದೆ: ಕ್ಲೋರೋಕ್ವಿನ್ (chloroquine), ಅಟೋವಕ್ವೋನ್-ಪ್ರೋಗುವನಿಲ್ (atovaquone-proguanil), ಅರ‍್ಟೆಮೆತೆರ್-ಲುಮೆಪ್ಯಾನ್ಟ್ರಿನ್ (artemether-lumefantrine), ಮೆಪ್ಲೊಕ್ವಿನ್ (mefloquine),  ಕ್ವಿನಿನ್ (quinine), ಕ್ವಿನಿಡಿನ್ (quinidine),  ಡಾಕ್ಸಿಸಯ್ಕ್ಲಿನ-ಕ್ವಿನಿನ್ (doxycycline-quinine), ಕ್ಲಿನ್ಡಾಮಯ್ಸಿನ್- ಕ್ವಿನಿನ್ (clindamycin-quinine), ಮತ್ತು ಆರ‍್ಟೆಸುನೇಟ್ (artesunate).

ಈಲಿಗಳಲ್ಲಿ ನೆಲೆಸುವ ಚುರುಕಲ್ಲದ ಗೊತ್ತುಪಾಡಿನಲ್ಲಿ (dormant state) ಇರುವ ಮಲೇರಿಯಾದ ಹಿಪ್ನೋಜಾಯ್ಟ್ ಗಳನ್ನು (hypnozoites) ಸಾಯಿಸಲು ಹಾಗು ಬೇನೆಯು ಮರುಕಳಿಸದಂತೆ ತಡೆಯಲು, ಪ್ರಯ್ಮಕ್ವಿನ್ (primaquine) ಎನ್ನುವ ಮದ್ದನ್ನು ಬಳಸಬಹುದಾಗಿದೆ. ಬಸುರಿ ಹೆಂಗಸರು ಹಾಗು G6PD (glucose-6-phosphate dehydrogenase) ಮುನ್ನಿನ ಕೊರತೆಯಿರುವವರು ಈ ಮದ್ದನ್ನು ಬಳಸಬಾರದು.

ಬೇನೆ ತಡೆಯುವ ಬಗೆ:

ಮಲೇರಿಯಾವನ್ನು ಉಂಟುಮಾಡುವ ಹೊರಕುಳಿಗಳನ್ನು ತಡೆಯುವ ಮುನ್ಮದ್ದು (vaccine) ಸದ್ಯದ ಮಟ್ಟಿಗೆ ಇಲ್ಲ. ಈ ಬೇನೆಯನ್ನು ತಡೆಯಲು, ಕೆಳಗಿನ ಹೊಳಹುಗಳನ್ನು ಬಳಸಿಕೊಳ್ಳಬಹುದಾಗಿದೆ.

1) ಮಲೇರಿಯಾ ಸೋಂಕು ಇರುವ ತಾಣಗಳಿಗೆ ಹೋಗುವವರು ಮುನ್ನೆಚ್ಚರಿಕೆಯಾಗಿ ಮಲೇರಿಯಾಗೆ ಮದ್ದನ್ನು ತೆಗೆದುಕೊಳ್ಳುವುದು.

2) ಮನೆಯ ನೀರಿನ ತೊಟ್ಟಿ, ಬಚ್ಚಲು, ಮಳೆ ನೀರು ನಿಲ್ಲುವ ತಾಣಗಳನ್ನೂ ಒಳಗೊಂಡಂತೆ ಎಲ್ಲಾ ಬಗೆಯ ನಿಂತ ನೀರಿನ ತಾಣಗಳನ್ನು ಬರಿದುಗೊಳಿಸುವುದು ಇಲ್ಲವೇ ಸೊಳ್ಳೆಗಳು ನೆಲೆಸದಂತೆ ನೋಡಿಕೊಳ್ಳುವುದು.

3) ಮನೆಯ ಒಳಗಿನ ಗೋಡೆಗಳ ಮೇಲೆ ಪೂಚಿಯಳಿಕಗಳನ್ನು (insecticides) ಚಿಮುಕಿಸುವುದು.

4) ಸೊಳ್ಳೆಗಳು ಕಚ್ಚುವುದನ್ನು ತಡೆಯಲು, ಆದಶ್ಟು ಮಯ್ ಮುಚ್ಚುವಂತೆ ಬಟ್ಟೆಯನ್ನು ತೊಡುವುದು.

5) ಪೂಚಿಸರಿಸುಕಗಳನ್ನು (insect repellent) ಮಯ್ ಹಾಗು ಬಟ್ಟೆಯ ಮೇಲೆ ಸವರಿಕೊಳ್ಳುವುದು.

6) ಪೂಚಿಯಳಿಕಗಳಿಂದ ಮದ್ದು ಮಾಡಿದ ಸೊಳ್ಳೆ ಪರದೆಗಳನ್ನು ಬಳಸುವುದು. ಮಲೇರಿಯಾ ಬೇನೆಗೆ ತುಂಬಾ ಸುಳುವಾಗಿ ತುತ್ತಾಗುವ ಬಸುರಿಯರು ಮತ್ತು ಮಕ್ಕಳು ಆದಶ್ಟು ಸೊಳ್ಳೆ ಪರದೆಯ ಒಳಗೆ ಮಲಗುವುದು ಒಳ್ಳೆಯದು. ಕೋಣೆಗಳಲ್ಲಿ  ಮಲಗುವವರು ಸೊಳ್ಳೆ-ಸುರುಳಿಗಳನ್ನು (mosquito coils) ಹಾಗು ಪೂಚಿಯಳಿಕದ ಆವಿಕಗಳನ್ನೂ (insecticide vaporizer) ಬಳಸಬಹುದಾಗಿದೆ.

ಕರ್ನಾಟಕದಲ್ಲಿ  ಮಲೇರಿಯಾ:

ಕರ್ನಾಟಕದಲ್ಲಿ 1976 ರ ಹೊತ್ತಿನಲ್ಲಿ ಮಲೇರಿಯಾ ಬೇನೆಯು ಹೆಚ್ಚಿತ್ತು. ಆ ಹೊತ್ತಿನಲ್ಲಿ ಸರಿ ಸುಮಾರು 630,000 ಮಂದಿ ಬೇನೆಗೆ ತುತ್ತಾಗಿದ್ದರು. ಮುಂದಿನ ದಿನಗಳಲ್ಲಿ, ಮಲೇರಿಯಾವನ್ನು ತಡೆಯಲು ಮಾಡಿದ ಕಟ್ಟುನಿಟ್ಟಾದ ಉಪಾಯಗಳಿಂದಾಗಿ ಬೇನೆಯ ತಗುಲುವಿಕೆ ಕಡಿಮೆಯಾಗತೊಡಗಿತು. ಮಲೇರಿಯಾವನ್ನು ಇಲ್ಲವಾಗಿಸಲು ಹೆಚ್ಚು ಪೂಚಿಯಳಿಕಗಳನ್ನು ಬಳಸಲಾಗುತಿತ್ತು; 1997ರ ಹೊತ್ತಿಗೆ ಸೊಳ್ಳೆಗಳಲ್ಲಿ ಮದ್ದೊಗ್ಗಿಕೆ (drug resistance) ಉಂಟಾಗಿ, ಬಳಕೆಯಲ್ಲಿದ್ದ  ಪೂಚಿಯಳಿಕಗಳಿಗೆ ಸೊಳ್ಳೆಗಳು ಸಾಯುತ್ತಿರಲ್ಲಿ. ಇದರಿಂದಾಗಿ 1997 ರಲ್ಲಿ ಮಲೇರಿಯಾ ಮತ್ತೆ ತಲೆ ಎತ್ತಿದ ಕಾರಣ 1997 ರಲ್ಲಿ  180,000 ಮಂದಿ ಮತ್ತು 1998 ರಲ್ಲಿ 110,000 ಮಂದಿ ಬೇನೆಗೆ ತುತ್ತಾಗಿದ್ದರು. 1998 ರ ಬಳಿಕ ಬೇನೆಯ ತಗುಲುವಿಕೆ ಇಳಿಯತೊಡಗಿದೆ.

(ಮಾಹಿತಿ ಮತ್ತು ತಿಟ್ಟ ಸೆಲೆಗಳು: cdc.gov, mayoclinic.org, eprints.uni-ac.in, nlm.nih.gov, who.int/mediacentre, southsudanmedicaljournal.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: