ಕಲಬುರಗಿ ನಗರ – ಒಂದು ಕಿರುಪರಿಚಯ

– ನಾಗರಾಜ್ ಬದ್ರಾ.

GulbargaPlaces
ಕರ‍್ನಾಟಕ ರಾಜ್ಯದ ಉತ್ತರ ಬಾಗದಲ್ಲಿರುವ ದೊಡ್ಡ ನಗರ ಕಲಬುರಗಿ. ಸಾವಿರಾರು ವರುಶಗಳ ಇತಿಹಾಸ, ದೊಡ್ಡ ದೊಡ್ಡ ಉದ್ದಿಮೆಗಳು ಹಾಗು ಕಾಲೇಜುಗಳು ಈ ನಗರದ ವಿಶೇಶತೆಗಳಲ್ಲಿ ಕೆಲವಾಗಿವೆ. ಸಮುದ್ರ ಮಟ್ಟಕ್ಕಿಂತ 465 ಮೀಟರ್ ಮೇಲ್ಬಾಗದಲ್ಲಿರುವ ಈ ನಗರವು, ನಮ್ಮ ರಾಜದಾನಿ ಬೆಂಗಳೂರಿನಿಂದ 613 ಕಿಲೋಮೀಟರ್ ದೂರದಲ್ಲಿದೆ. ಕಲಬುರಗಿ ನಗರವು ಕಲ್ಯಾಣ ಕರ‍್ನಾಟಕ ಬಾಗದ ವಿಬಾಗೀಯ ಕೇಂದ್ರವಾಗಿ ಬೆಳೆದಿದೆ. ರಾಜ್ಯ ಸರಕಾರವು ಕಲುಬರಗಿ ನಗರವನ್ನು ಬಿ ದರ‍್ಜೆಯ ನಗರವೆಂದು ಗೋಶಿಸಿದೆ. ಶಾಂತಿ, ಸಹಬಾಳ್ವೆ ಮತ್ತು ಕೋಮು ಸೌಹಾರ‍್ದತೆಗೆ ಪ್ರಸಿದ್ದವಾಗಿರುವ ನಗದಲ್ಲಿ ಎಲ್ಲಾ ದರ‍್ಮದ ಜನರು ಒಟ್ಟಾಗಿ ಬಾಳುತ್ತಿದ್ದಾರೆ.

ಕೈಗಾರಿಕೆಗಳ ಹುಟ್ಟು ಕಲಬುರಗಿಯಲ್ಲಿ ಬಹಳ ಹಿಂದೆಯೇ ಆಗಿದೆ ಎಂದು ಹೇಳಬಹುದು. ನ್ಯಾಶನಲ್ ಟೆಕ್ಸ್ ಟೈಲ್ ಕಾರ‍್ಪೊರೇಶನ್ ಕಂಪನಿಯವರು ‘ಮೆಹಬೂಬ ಶಾಹಿ ಕುಲಬುರಗಿ (ಎಂ. ಎಸ್. ಕೆ) ಮಿಲ್’ ಎಂಬ ಹೆಸರಿನ ಬಟ್ಟೆಯ ಮಿಲ್ಲನ್ನು 1884 ರಲ್ಲಿ ಸ್ತಾಪಿಸಿದರು. 18 ನೇ ಶತಮಾನದಿಂದ 19 ನೇ ಶತಮಾನದವರೆಗೂ ಈ ಬಾಗದ ಸಾವಿರಾರು ನಿರುದ್ಯೋಗ ಯುವಕರಿಗೆ ಉದೋಗ್ಯವನ್ನು ಈ ಕಂಪನಿಯು ನೀಡಿತ್ತು. ಆದರೆ ಹಲವಾರು ವರ‍್ಶಗಳ ಹಿಂದೆ ಸರಕಾರವು ಕೆಲವು ಕಾರಣಗಳನ್ನು ನೀಡಿ ಕಂಪನಿಯನ್ನು ಮುಚ್ಚಿದೆ. ಕಲಬುರಗಿ ಬೇಳೆಯ ನಗರಿ. ಬೇಳೆಯ ಮಿಲ್ ಗಳ ಉದ್ದಿಮೆಯು ಇಲ್ಲಿ ದೊಡ್ಡದಾಗಿ ಬೆಳೆದುಕೊಂಡಿದೆ. ಉದೋಗ್ಯವನ್ನು ಹುಡುಕಿಕೊಂಡು ವಲಸೆ ಬರುತ್ತಿರುವ ನಿರುದ್ಯೋಗಿಗಳಿಗೆ ಕೆಲಸ ನೀಡುತ್ತಿದೆ. ನಗರದ ಬೆಳವಣಿಗೆಯಲ್ಲಿ ಪ್ರಮುಕ ಪಾತ್ರ ವಹಿಸಿದೆ.

ಪ್ರತಿ ವರ‍್ಶವು ನೂರಾರು ಇಂಜಿನಿಯರ್, ಡಾಕ್ಟರ್, ಪದವೀದರರು, ಸ್ನಾತಕೋತ್ತರ ಪದವೀದರರು ಈ ನಗರದಲ್ಲಿ ಕಲಿಕೆಯನ್ನು ಮುಗಿಸಿಕೊಂಡು ಹೊರಬರುತ್ತಿದ್ದಾರೆ. ಹಲವಾರು ವರ‍್ಶಗಳಿಂದ ಹೊರನಾಡಿನ ವಿದ್ಯಾರ‍್ತಿಗಳು ಕೂಡ ಕಲಿಕೆಗಾಗಿ ಕಲಬುರಗಿ ನಗರಕ್ಕೆ ಬರುತ್ತಿದ್ದಾರೆ. ರಾಜ್ಯದ ಮಾಜಿ ಮುಕ್ಯಮಂತ್ರಿಗಳಾದ ದರ‍್ಮಸಿಂಗ್, ವೀರೇಂದ್ರ ಪಾಟೀಲ್ ಹಾಗೂ ಮಾಜಿ ಕೇಂದ್ರ ಸಚಿವ ಮಲ್ಲಿಕಾರ‍್ಜುನ ಕರ‍್ಗೆಯವರು ಕಲಬುರಗಿ ನಗರದಲ್ಲಿಯೇ ತಮ್ಮ ಕಲಿಕೆಯನ್ನು ಮುಗಿಸಿದ್ದು. ಅಕಂಡ ಆಂದ್ರಪ್ರದೇಶದ ಮಾಜಿ ಮುಕ್ಯಮಂತ್ರಿಗಳಾದ ವೈ.ಎಸ್. ರಾಜಶೇಕರ ರೆಡ್ಡಿಯವರು ಕೂಡ ತಮ್ಮ ವೈದ್ಯಕೀಯ ಕಲಿಕೆಯನ್ನು ಇಲ್ಲಿ ಮುಗಿಸಿದ್ದರು.

ಕರ‍್ನಾಟಕದ ರಾಜ್ಯದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಕಲಬುರಗಿ ನಗರವು ಒಂದಾಗಿದೆ. ಕಲಬುರಗಿ ನಗರದ ಚಿತ್ರಣವು ದಿನದಿನಕ್ಕೆ ಬದಲಾಗುತ್ತಿದೆ. ಹಿಂದುಳಿದ ನಗರದಿಂದ ಅತೀ ವೇಗವಾಗಿ ಏಳಿಗೆ ಹೊಂದುತ್ತಿರುವ ನಗರವಾಗಿ ಬದಲಾಗಿದೆ.

ಮಂದಿಯೆಣಿಕೆ ಹಾಗು ಕಲಿಕೆ (2011 ರ ಜನಗಣತಿಯ ಪ್ರಕಾರ):

Kalburagi

 

ಕಲಬುರಗಿ ನಗರದ ಇತಿಹಾಸ:

ಕಲ್ಲಿನಿಂದ ಕೂಡಿರುವ ನೆಲವನ್ನು ಹೊಂದಿರುವುದರಿಂದ ಈ ನಗರಕ್ಕೆ ಕಲಬುರಗಿ ಎಂದು ಹೆಸರು ಬಂತು. 10 ರಿಂದ 11 ನೇ ಶತಮಾನದ ಹೊತ್ತಿನಲ್ಲಿ ರಾಜ ಗುಲಚಂದ್ ಅವರು ಕಲಬುರಗಿ ನಗರವನ್ನು ಹಾಗೂ ಕೋಟೆಯನ್ನು ಕಟ್ಟಿದರು. ಬಳಿಕ 13 ನೇ ಶತಮಾನದಲ್ಲಿ ಬಹಮನಿ ಸುಲ್ತಾನರು ಕಲುಬರಗಿಯನ್ನು ತಮ್ಮ ರಾಜದಾನಿಯನ್ನಾಗಿ ಮಾಡಿಕೊಂಡು, ಅದರ ಹೆಸರನ್ನು ಗುಲಬರ‍್ಗಾ ಎಂದು ಮರುಹೆಸರಿಸಿದರು. ಯಾಕೆಂದರೆ ಅವರ ಕಾಲದಲ್ಲಿ ಗುಲಬರ‍್ಗಾದಲ್ಲಿ ಒಂದು ಸುಂದರವಾದ ಗುಲಾಬಿ ಹೂವುಗಳ ತೋಟವನ್ನು ಕಟ್ಟಲಾಗಿತ್ತು, ಅದರಿಂದಲೇ ಕಲಬುರಗಿಗೆ ಗುಲಬರ‍್ಗಾ ಎಂಬ ಹೆಸರೂ ಬಂತು.

ಕಲಬುರುಗಿಯು ಪ್ರಮುಕ ನಗರವಾಗಿ ಬೆಳೆಯುವುದಕ್ಕಿಂತ ಮುಂಚೆ, ಈ ಪ್ರದೇಶವು ಸುಮಾರು 6 ನೇ ಶತಮಾನದಲ್ಲಿ ರಾಶ್ಟ್ರಕೂಟರ ಆಳ್ವಿಕೆಯಲ್ಲಿ ಇತ್ತು. ಬಳಿಕ ಚಾಲುಕ್ಯರು 200 ಕ್ಕಿಂತಲು ಹೆಚ್ಚು ವರುಶಗಳಶ್ಟು ಈ ಬಾಗದ ಆಳ್ವಿಕೆ ನಡೆಸಿದರು. ಸುಮಾರು 12 ನೇ ಶತಮಾನದಲ್ಲಿ ದೇವಗಿರಿಯ ಯಾದವರು ಮತ್ತು ಹೊಯ್ಸಳರ ಆಳ್ವಿಕೆಯಲ್ಲಿಯೂ ಈ ನಗರ ಬೆಳವಣಿಗೆ ಕಂಡಿತು. 13 ನೇ ಶತಮಾನದಲ್ಲಿ ಜಿಲ್ಲೆಯು ದೆಹಲಿಯ ಮೊಗಲರ ಹಿಡಿತದಲ್ಲಿತ್ತು. ಬಳಿಕ ಮೊಗಲರ ನೆರವಿನಿಂದ ಬೆಳೆದ ಬಹಮನಿ ಸುಲ್ತಾನರ ಹಿಡಿತದಲ್ಲಿ ಉಳಿದುಕೊಂಡಿತು. ವಿಜಯನಗರದ ಅರಸರು ಬಹಮನಿ ಸುಲ್ತಾನರನ್ನು ಸೋಲಿಸಿದ ಹೊತ್ತಿನಲ್ಲಿ ಅವರ ಆಳ್ವಿಕೆಯಲ್ಲಿಯೂ ಕೆಲವು ಕಾಲ ಈ ನಗರವಿತ್ತು. ಮುಂದೆ 1724 ರಿಂದ 1948 ವರೆಗೆ ಹೈದರಬಾದ್ ನಿಜಾಮರ ಆಳ್ವಿಕೆಯಲ್ಲಿ ಇತ್ತು. ಇಂಡಿಯಾ ಒಕ್ಕೂಟವಾದಾಗ, ಸೆಪ್ಟೆಂಬರ್ 17, 1948 ರಂದು ನಿಜಾಮರ ಆಳ್ವಿಕೆಯಿಂದ ಬಿಡುಗಡೆ ಹೊಂದಿತು. ಆದ್ದರಿಂದಲೇ ಸೆಪ್ಟೆಂಬರ್ 17 ರಂದು ಕಲ್ಯಾಣ ಕರ‍್ನಾಟಕ ಬಾಗದ ಆರು ಜಿಲ್ಲೆಗಳಲ್ಲಿ ಹೈದ್ರಾಬಾದ್ ಕರ‍್ನಾಟಕ ವಿಮೋಚನಾ ದಿನಾಚರಣೆಯನ್ನು ಆಚರಿಸುತ್ತಾರೆ. ಬಳಿಕೆ ನವೆಂಬರ್ 1, 1956 ರಲ್ಲಿ, ಕರ‍್ನಾಟಕದ ಏಕೀಕರಣವಾದಾಗ ಕಲಬುರಗಿ ನಗರವು ಕರ‍್ನಾಟಕಕ್ಕೆ ಸೇರಿಕೊಂಡಿತು.
(ಮಾಹಿತಿ ಸೆಲೆ: wikipedia)
(ಚಿತ್ರಸೆಲೆ: wikipedia)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Gs ಶೇಖರ says:

    ನಮ್ಮ ಕಲ್ಬುರ್ಗಿ

ಅನಿಸಿಕೆ ಬರೆಯಿರಿ: