ಮರೆಯಾಗುತ್ತಿರುವ ಈ ನೆಲದ ಸೊಗಡಿನ ಸುಗ್ಗಿ

– ಅಂಕುಶ್ ಬಿ.

 

ಸುಗ್ಗಿ ಎಂದಾಕ್ಶಣ ನೆನಪಾಗುವುದು ಬಾಲ್ಯ. ಆ ದಿನಗಳ ಸಡಗರ ಸಂಬ್ರಮ ವರ‍್ಣಿಸಲು ಪದಗಳೇ ಸಾಲದು. ನಮ್ಮೂರಿನ ಸಂಕ್ರಾಂತಿ ಸಡಗರದ ಹಬ್ಬ ಜೀವಕ್ಕೆಲ್ಲ ಕಾಂತಿ ತರುವ ಹಬ್ಬ. ಮೂರು ಊರಿನ ಜನರು ಸೇರಿ ಮಾಡುತ್ತಿದ್ದ ಹಬ್ಬ. ಹಬ್ಬದ ಹಿಂದಿನ ದಿವಸ ನಾಗರ ಕಟ್ಟೆಯ ಕಾಟಿಮ್ಮರಾಯ ದೇವರಿಗೆ ಸುಣ್ಣ ಬಣ್ಣ ಬಳಿದು ಸಿಂಗರಿಸುತ್ತಿದ್ದರು. ಹಬ್ಬದ ದಿನ ನಮ್ಮಲ್ಲಿ ಜಾತ್ರೆಯ ಸಡಗರ ತುಂಬಿರುತ್ತಿತ್ತು. ಎಲ್ಲರೂ ಬೇಗ ಎದ್ದು, ದನ ಕರುಗಳ ಮೈತೊಳೆದು ಅವುಗಳಿಗೆ ಬಣ್ಣ ಹಚ್ಚಿ ಬಲೂನು ಕಟ್ಟುವುದರಲ್ಲಿಯೇ ಒಂದು ಸಂಬ್ರಮ. ಇದರಲ್ಲಿಯೇ ಅರ‍್ದದಿನ ಕಳೆದು ಹೋಗುತ್ತಿತ್ತು. ಇದಾದ ನಂತರ ನಾವು ಸ್ನಾನ ಮಾಡಿ ಬಿಳಿ ಬಣ್ಣದ ಬಟ್ಟೆ ದರಿಸಿ ಊರಿನ ಪ್ರತಿಯೊಂದು ಮನೆಗೂ ಹೋಗಿ ಎಳ್ಳು ಬೆಲ್ಲ ಕೊಟ್ಟು ಬರುತ್ತಿದ್ದೆವು. ಹೋದ ಮನೆಯಲ್ಲೆಲ್ಲಾ ಕೈ ತುಂಬಾ ಕಡಲೇಕಾಯಿ, ಒಂದು ಗೇಣು ಕಬ್ಬು ಉಚಿತವಾಗಿ ಸಿಕ್ಕು, ಬೇವಿನ ಕಹಿಯನ್ನು ಮರೆಸುತಿತ್ತು.

ಸಂಜೆ 5 ಗಂಟೆಯ ವೇಳೆಗೆ ಊರಿನವರೆಲ್ಲರು ನಾಗರ ಕಟ್ಟೆಯ ಕಾಟಿಮ್ಮರಾಯ ಗುಡಿಯ ಬಳಿ ಸೇರುತ್ತಿದ್ದರು. ತಾವು ಬೆಳೆದ ದವಸ ದಾನ್ಯಗಳನ್ನು ದೇವರಿಗೆ ಸಮರ‍್ಪಿಸಲು ತಮ್ಮ ದನಕರುಗಳೊಂದಿಗೆ ಗುಡಿಯ ಬಳಿ ಸೇರುತ್ತಿದ್ದರು. ದನಕರುಗಳ ಸರದಿ ಅರ‍್ದ ಕಿಲೋಮೀಟರಿಗೂ ಹೆಚ್ಚು ದೂರ ನಿಂತಿರುತಿತ್ತು. ಬಣ್ಣ ಬಣ್ಣದ ದನಕರುಗಳ ಸಿಂಗಾರವನ್ನು ನೋಡುತಿದ್ದರೆ ನಮ್ಮ ಊರೇ ಗೋಕುಲದಂತೆ ಕಾಣುತಿತ್ತು. ಸುಮಾರು 2 ರಿಂದ 3 ತಾಸು ಊರಿನ ಎಲ್ಲರು ದೇವರಿಗೆ ಪೂಜೆ ಸಲ್ಲಿಸಿದ ಮೇಲೆ ಕಿಚ್ಚು ಹಾಯುವ ಸಂಬ್ರಮ. ಹುಲ್ಲನ್ನು ರಸ್ತೆಯಲ್ಲಿ ಹರಡಿ ಅದಕ್ಕೆ ಕಿಚ್ಚನ್ನು ಹಚ್ಚುತ್ತಿದ್ದರು. ಪ್ರತಿಯೊಂದು ಮನೆಯವರೂ ಕಾಟಿಮ್ಮರಾಯ ದೇವರಿಗೆ ಪೂಜೆ ಸಲ್ಲಿಸಿ ತಮ್ಮ ದನಕರುಗಳನ್ನು ಈ ಕಿಚ್ಚಲ್ಲಿ ಹಾಯಿಸುತಿದ್ದರು. ಕಿಚ್ಚಿನ ಬಿಸಿಗೆ ದನ ಕರುಗಳಿಗೆ ಕಟ್ಟಿದ್ದ ಬಲೂನು ಒಡೆದು ಅವು ಕಂಗೆಟ್ಟು ವೇಗವಾಗಿ ಓಡುತ್ತಿದ್ದವು. ಅವುಗಳ ಮೂಗುದಾರ ಹಿಡಿಯುವುದು ಸಾಹಸವೇ ಸರಿ. ಮನೆಯ ಹಿರಿಯರು ನಮ್ಮನ್ನು ಬೆಂಕಿಯ ಬಳಿ ಬಿಡುತ್ತಿರಲಿಲ್ಲ. ಬೆಂಕಿಯ ಬೋರ‍್ಗರೆತ ಕಡಿಮೆಯಾದ ಮೇಲೆ ಮನೆಯವರ ಕಣ್ಣು ತಪ್ಪಿಸಿ ನಾವೂ ಆ ಕಿಚ್ಚನ್ನು ಹಾರುತ್ತಿದ್ದೆವು. ಬೆಂಕಿಯ ಕೆನ್ನಾಲಿಗೆಯನ್ನು ತಪ್ಪಿಸಿ ಹಾರುವುದರಲ್ಲಿ ಒಂದು ಅತೀವವಾದ ಸಂತಸ. ಜಗವನ್ನೇ ಗೆದ್ದ ಸಂಬ್ರಮ. ಹಬ್ಬ ಹೇಗೆ ಕಳೆಯುತಿತ್ತೊ ತಿಳಿಯುತ್ತಿರಲೇ ಇಲ್ಲ.

ನಗರೀಕರಣಕ್ಕೆ ನಮ್ಮ ಊರೂ ಬಲಿಯಾಗಿ, ದನಕರುಗಳು ಬೆರಳೆಣಿಕೆಯಶ್ಟಾಗಿವೆ. ಇಂದಿನ ಹಬ್ಬವು ವ್ಯಾಪಾರೀಕರಣಗೊಂಡು ಸಾಂಸ್ಕ್ರುತಿಕ ಸೊಗಡು ಕಣ್ಮರೆಯಾಗಿರುವುದು ವಿಪರ‍್ಯಾಸವೇ ಸರಿ.

(ಚಿತ್ರಸೆಲೆ: ಪ್ರಜಾವಾಣಿ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: