ಚುಂಚನಗಿರಿ ಸ್ವಾಮಿಗಳಾಣೆಗೂ…(ಆಣೆಪ್ರಮಾಣ – 2ನೆಯ ಕಂತು)

 ಸಿ.ಪಿ.ನಾಗರಾಜ.

 

ಕಂತು-1

ಪ್ರಸಂಗ-3

ಜಾಗ : ಹಳ್ಳಿಯೊಂದರ ಅಂಗಡಿ
ವೇಳೆ : ಸಂಜೆ ಅಯ್ದು ಗಂಟೆ

1) ಅಂಗಡಿಯ ಮಾಲೀಕ-ವಯಸ್ಸು 30
2) ಹೆಂಗಸು -ವಯಸ್ಸು 55
3) ಇಬ್ಬರು ಗಿರಾಕಿಗಳು -ವಯಸ್ಸು 18
ವಯಸ್ಸು 20

ಹಿನ್ನೆಲೆ:

ಅಂಗಡಿಯ ಮಾಲೀಕನು ಬೇರೆ ಗಿರಾಕಿಗಳೊಡನೆ ವ್ಯವಹರಿಸುತ್ತಿದ್ದಾಗ, ಒಬ್ಬ ಹೆಂಗಸು ಅವನ ಕಣ್ಣು ತಪ್ಪಿಸಿ ವಸ್ತುವೊಂದನ್ನು ಕದ್ದು ತನ್ನ ಮಡಲಿನಲ್ಲಿ ಬಚ್ಚಿಟ್ಟುಕೊಂಡಳು. ಇದನ್ನು ಗಮನಿಸಿದ ಮಾಲೀಕನು ಆಕೆಯನ್ನು ಕೇಳಿದಾಗ ನಡೆದ ಪ್ರಸಂಗವಿದು.

ಮಾಲೀಕ: ಅದೇನಮ್ಮ ಎತ್ಕೊಂಡಿದ್ದು ನೀನು?

ಹೆಂಗಸು: ನಾನೇನ್ ಎತ್ಕೊಂಡೆ ? ನೋಡಿಲ್ಲಿ….
(ತನ್ನ ಬರಿಗೈಗಳನ್ನು ತೋರಿಸುತ್ತಾಳೆ. ಅಲ್ಲೇ ನಿಂತಿದ್ದ ಇನ್ನಿಬ್ಬರು ಇವರ ಮಾತುಗಳನ್ನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದಾರೆ)

ಮಾಲೀಕ: ನಿಜ ಹೇಳು. ಇದು ಲಕ್ಸ್ಮಿ ಇರೂ ಜಾಗ. ಇಲ್ಲೇನಾದ್ರೂ ಸುಳ್ ಹೇಳುದ್ರೆ…ನಿನ್ಮನೆ ಎಕ್ಕುಟ್ಟೋಯ್ತದೆ

ಹೆಂಗಸು: ಯಾಕಯ್ಯ…ನನ್ಮನೆ ಎಕ್ಕುಟ್ಟೋದದು?…ಏನು ಹಿಂಗೆ ತೂರ‍್ಸಿ ಮಾತಾಡ್ತೀಯಲ್ಲ?

ಮಾಲೀಕ: (ಅಲ್ಲೇ ನಿಂತಿದ್ದ ಇಬ್ಬರು ಗಿರಾಕಿಗಳತ್ತ ತಿರುಗಿ) ನಾನು ನಿಮಗೆ ಸಾಮಾನು ತೆಗೆಯೋಕೆ ಅತ್ತಗೆ ತಿರಿಕೊಂಡಿದ್ದಾಗ, ಈ ವೊಮ್ಮ ನಮ್ ಅಂಗಡಿಯಿಂದ ಏನನ್ನೋ ಎತ್ಕೊಂಡಳಲ್ಲವೇ?

(ಅವರಿಬ್ಬರೂ “ನಾವೇನನ್ನೂ ಕಾಣೆವು” ಎಂಬಂತೆ ತಲೆಯಲ್ಲಾಡಿಸುತ್ತಾರೆ)

ಹೆಂಗಸು: ನೋಡ್ದೇನಯ್ಯಾ, ಹಂಗೇನಾದ್ರು ನಾನು ಎತ್ಕೊಂಡಿದ್ರೆ ಅವರು ಹೇಳ್ತಿರಲಿಲ್ವೇ?…ನನ್ನಾಣೆಗೂ…ನನ್ ಮಕ್ಕಳಾಣೆಗೂ ನಾನು ಏನು ಎತ್ಕೊಂಡಿಲ್ಲ. ಅಂತಾದ್ದೇನು ನಂಗೆ ಬಂದಿರೂದು?

ಮಾಲೀಕ: ಹಂಗಾದ್ರೆ ಕರ‍್ಪೂರ ಹತ್ಸಿ ಇಡ್ತೀನಿ. ಕರ‍್ಪೂರದ ಉರಿ ಮ್ಯಾಲೆ ಕೈಯಿಟ್ಟು ನನ್ ಅಂಗಡೀಲಿ ಏನನ್ನೂ ಎತ್ಕೊಂಡಿಲ್ಲ ಅಂತ ಪ್ರಮಾಣ ಮಾಡ್ತೀಯ?

ಹೆಂಗಸು: ನಾನ್ಯಾಕಯ್ಯ ಮಾಡನೇ?…ನಾನು ತಕ್ಕೊಂಡಿದ್ರೆ ನನ್ ಮನೆ ಹಾಳಾಗೋಯ್ತದೆ ಕಣ ಹೋಗು. ನೋಡ್ದ…ನಿನ್ ಅಂಗಡಿಗೆ ಬಂದ್ದದ್ದಕ್ಕೆ ಎಂತಾ ಮಾತು ಕೇಳ್ಬೇಕಾಗಿ ಬಂತು. ಇನ್ನೊಂದು ದಪ ಇತ್ತಗೆ ಮೊಕ ಹಾಕ್ಕೊಂಡು ಬಂದ್ರೆ ಕೇಳು!

(ಎನ್ನುತ್ತಾ ಅಲ್ಲಿಂದ ತರಾತುರಿಯಾಗಿ ಹೊರಡುತ್ತಾಳೆ. ಅವಳ ವರ‍್ತನೆಯಿಂದ ಮಾಲೀಕನಿಗೆ ಆಕೆ ಏನನ್ನೋ ಕದ್ದಿರುವುದು ದಿಟವೆಂದು ಗೊತ್ತಾದರೂ ಹೆಚ್ಚು ರಾದ್ದಾಂತ ಮಾಡಿದರೆ, ವ್ಯಾಪಾರಕ್ಕೆ ತೊಂದರೆಯಾಗಬಹುದೆಂದು ಅವಳನ್ನು ತಡೆದು ನಿಲ್ಲಿಸದೆ..)

ಮಾಲೀಕ: ಏನೋ ವಯಸ್ಸಾದವಳು ಅಂತ ಸುಮ್ಮನಾಗಿವ್ನಿ…ಇಲ್ದೇ ಇದ್ರೆ ಅವಳ ಮಡಿಲನ್ನು ಕಿತ್ತೆಳೆದು ಕಳಿಸ್ತಾಯಿದ್ದೆ.
(ಎಂದು ತನ್ನಲ್ಲಿಯೇ ಗೊಣಗಿಕೊಳ್ಳುತ್ತಾ, ಇನ್ನುಳಿದ ಗಿರಾಕಿಗಳಿಗೆ ಸಾಮಾನುಗಳನ್ನು ಕೊಡಲು ಮುಂದಾಗುತ್ತಾನೆ)

ಪ್ರಸಂಗ-4

ಜಾಗ : ಮನೆ
ಕಾಲ : ಬೆಳಗ್ಗೆ 8 ಗಂಟೆ

1) ಗಂಡ -ವಯಸ್ಸು 30
2) ಹೆಂಡತಿ -ವಯಸ್ಸು 22
3) ತಾಯಿ -ವಯಸ್ಸು 50

ಹಿನ್ನೆಲೆ:

ಊರಿನಲ್ಲಿ ನಡೆದ ಹಬ್ಬದ ದಿನ ಮಾರಿಗುಡಿಯ ಮುಂದೆ ನಡೆಯುತ್ತಿದ್ದ ರಂಗದ ಕುಣಿತವನ್ನು ನೋಡಿ ಹೆಂಡತಿಯು ಆನಂದಿಸುತ್ತಿದ್ದಾಗ, ಪಕ್ಕದಲ್ಲಿ ಒಂದಿಬ್ಬರು ಯುವಕರು ನಿಂತಿದ್ದುದನ್ನು ದೂರದಿಂದ ಗಮನಿಸಿದ್ದ ಅವಳ ಗಂಡನು ಮಾರನೆಯ ದಿನ ಬೆಳಗ್ಗೆ ತನ್ನ ಹೆಂಡತಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ನಡೆದ ಮಾತಿನ ಪ್ರಸಂಗವಿದು.

ಗಂಡ: ನೆನ್ನೆ ಗುಡಿತಕೆ ಹೋಗಿದ್ದಲ್ಲ…ದೇವರು ಮಾಡೋದು ಬುಟ್ಬುಟ್ಟು ಯಾರ ಜೊತೇಲಿ ಚಕ್ಕಂದ ಆಡ್ಕೊಂಡು ನಿಂತಿದ್ದೆ?

ಹೆಂಡತಿ: ( ತುಂಬಾ ಅಚ್ಚರಿ ಮತ್ತು ಸಂಕಟದಿಂದ ತಬ್ಬಿಬ್ಬಾಗಿ ) ಇದೇನು ಇಂತಾ ಮಾತಾಡ್ತ ಇದ್ದೀರಲ್ಲ! ನಿಮ್ಗೇನು ಬಂದಿರೂದು? ನಾನು ಅಂತಾವ್ಳೆ.

ಗಂಡ: ಅಂತಾವಳು ಅಲ್ದೇದ್ರೆ…ಅಲ್ಲಿ ಹಲ್ ಬುಟ್ಕೊಂಡು ಕಿಸೀತಾ ನಿಂತಿದ್ದಲ್ಲ ಯಾಕೆ ?…ನಾನೇ ಕಣ್ಣಾರ ಕಂಡೆ.

ತಾಯಿ: ( ತನ್ನ ಮಗ ಆಡಿದ ಮಾತುಗಳನ್ನು ಕೇಳಿ , ಅವನ ಬಗ್ಗೆ ಬೇಸರಪಡುತ್ತಾ…) ಯಾಕ್ಲ ಹಿಂಗಾಡಿಯೇ? ನಿಂಗೇನ್ ಬಂದಿರೂದು ಮೊಲ್ಲಾಗ್ರು!…ವರ‍್ಸಕ್ಕೊಂದು ಹಬ್ಬದಲ್ಲಿ ಯಾಕೆ ಹಿಂಗೆ ಅವಳ ಮ್ಯಾಲೆ ಗೂಬೆ ಕುಂಡಿಸ್ತ ಇದ್ದೀಯೆ? ಆಚೆಗೆ ಹೋಗಿ ಏನಾದ್ರು ಗೇಮೆ ನೋಡು ನಡಿ. ಅಪ್ಪಂತವರು ನಿನ್ ಮಾತ ಕೇಳಿಸ್ಕೊಂಡ್ರೆ ಗತಿಯೇನು ಅನ್ನೂ ಗ್ಯಾನ ಇದ್ದದೆ ನಿಂಗೆ?

ಹೆಂಡತಿ: ಆಪಾಟಿ ಚೆಂದಾಗಿ ದೇವರ ಮೆರಿಸ್ತಾ ಇರೂದ ಕಣ್ತುಂಬ ಕಂಡು ನಾನು ಆನಂದವಾಗಿದ್ರೆ… ಹಿಂಗೆಲ್ಲ ಕೆಟ್ಟ ಮಾತ
ಆಡ್ತಾಯಿದ್ದೀರಿ? (ಅಪಮಾನದ ನೋವಿನಿಂದ ಉಕ್ಕಿ ಬಂದ ಕಂಬನಿಯನ್ನು ಸೆರಗಿನಿಂದ ಒರೆಸಿಕೊಳ್ಳುತ್ತ, ಆಕೋಶದ ದನಿಯಲ್ಲಿ)
ಮಾರಮ್ಮನಾಣೆಗೂ ಅಲ್ಲಿ ಯಾರನ್ನೂ ನಾನು ಕಣ್ಣೆತ್ತಿ ನೋಡ್ಲಿಲ್ಲ. ಹಂಗೇನಾದ್ರು ನಾನು ನೋಡಿದ್ರೆ….ನನ್ ಕಣ್
ಇಂಗೋಗ್ಲಿ. ನಿಮ್ಗೆ ಅಶ್ಟೊಂದು ಅನುಮಾನ ಇದ್ರೆ…ಈಗ್ಲೆ ನಡೀರಿ…ಮಾರಮ್ಮನ ಗುಡಿ ಮುಂದೆ ಪ್ರಮಾಣ ಮಾಡ್ತೀನಿ.
(ಹೆಂಡತಿಯು ಹಾಕಿದ ಪ್ರಮಾಣದ ಸವಾಲು ಮತ್ತು ತಾಯಿಯ ಅಬ್ಬರದ ಮುಂದೆ ತಣ್ಣಗಾದ ಆತ ಮನೆಯಿಂದ ಹೊರ
ನಡೆಯುತ್ತಾನೆ)

ಪ್ರಸಂಗ-5

ಜಾಗ : ಬಡವರ ಗುಡಿಸಲುಗಳಿರುವ ಬಡಾವಣೆ
ಕಾಲ : ರಾತ್ರಿ 10 ಗಂಟೆ

1) 20 ಮಂದಿ ಗಂಡಸರು ಮತ್ತು ಹೆಂಗಸರು.
2) ಚುನಾವಣೆಗೆ ನಿಂತಿರುವ ರಾಮಣ್ಣ-ವಯಸ್ಸು 45
3) ರಾಮಣ್ಣನ ಸಂಗಡಿಗ-ವಯಸ್ಸು 25
4) ನಿರೂಪಕ-ವಯಸ್ಸು 30

ಹಿನ್ನೆಲೆ:

ಮಾರನೆಯ ದಿನ ಬೆಳಗ್ಗೆ ನಡೆಯಲಿರುವ ಮಂಡಲ ಪಂಚಾಯ್ತಿ ಸದಸ್ಯರ ಚುನಾವಣೆಯಲ್ಲಿ ತನಗೆ ಮತ ನೀಡಬೇಕೆಂದು ಯಾಚಿಸುವುದಕ್ಕಾಗಿ ರಾಮಣ್ಣನು ತನ್ನ ಸಂಗಡಿಗನೊಂದಿಗೆ ಬಂದಿದ್ದಾನೆ. ಮತ ಯಾಚನೆಯ ನಂತರ, ಅವರೆಲ್ಲರನ್ನೂ ಒಂದೆಡೆ ಕುಳ್ಳಿರಿಸಿ, ಅವರಿಗೆ ಹಣವನ್ನು ಹಂಚಲೆಂದು ನೋಟಿನ ಕಟ್ಟನ್ನು ಹೊರತೆಗೆಯುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ರಾಮಣ್ಣನ ಸಂಗಡಿಗನು ಒಂದು ದೊಡ್ಡ ಗಾತ್ರದ ಕರ‍್ಪೂರದ ಗೆಡ್ಡೆಯನ್ನು ನೆಲದ ಮೇಲಿಟ್ಟು ಬೆಂಕಿಕಡ್ಡಿಯನ್ನು ಗೀರಿ ಹಚ್ಚುತ್ತಾನೆ)

ಸಂಗಡಿಗ: ( ಮತದಾರರನ್ನು ಕುರಿತು ) ಒಬ್ಬೊಬ್ಬರಾಗಿ ಮುಂದಕ್ಕೆ ಬಂದು ರಾಮಣ್ಣನವರ ಕೈಯಿಂದ ದುಡ್ಡು ಈಸ್ಕೊಳಿ.

ಮತದಾರ: ( ಉರಿಯುತ್ತಿರುವ ಕರ‍್ಪೂರದ ಜ್ಯೋತಿಯ ಮೇಲೆ ತನ್ನ ಅಂಗಯ್ ಅನ್ನು ಇಟ್ಟು , ರಾಮಣ್ಣನವರನ್ನು ನೋಡುತ್ತಾ)
ಈ ಜ್ಯೋತಿ ಆಣೆಗೂ… ನಾಳೆ ನಿಮಗೆ ಓಟು ಹಾಕ್ತೀನಿ ಕಣ್ರಪ್ಪ.

ಸಂಗಡಿಗ: ಯಾವ ಹೆಸರಿಗೆ…ಯಾವ ಗುರುತಿಗೆ ಅಂತ ಬಾಯ್ಬುಟ್ಟು ಹೇಳು.

ಮತದಾರ: ಇದೇನ್ರಪ್ಪ ಹಿಂಗೆ ಕೇಳ್ತೀರಿ?…ನಂಗೆ ಗೊತ್ತಿಲ್ವೆ. ನಮ್ಮ ರಾಮಣ್ಣೋರ ಕುದುರೆ ಗುರುತಿಗೆ ಓಟು ಹಾಕ್ತೀನಿ.

ರಾಮಣ್ಣ: ಹಂಗೆ ಹೇಳು. ತಕೊ ದುಡ್ಡ. ( ಇನ್ನೂರು ರೂಪಾಯಿಗಳನ್ನು ಕೊಡುತ್ತಾನೆ)
ಬನ್ನಿ ಎಲ್ಲರೂ ಇವನಂಗೆ ಹೇಳಿ, ದುಡ್ಡು ತಕೊಳಿ. ( ಉಳಿದವರೆಲ್ಲರೂ ಇದೇ ರೀತಿ ಉರಿಯುತ್ತಿರುವ ಜ್ಯೋತಿಯ ಮೇಲೆ ಅಂಗಯ್ ಇಟ್ಟು ಪ್ರಮಾಣ ಮಾಡಿ ಹಣ ಪಡೆಯುತ್ತಾರೆ. ರಾಮಣ್ಣ ಮತ್ತು ಅವನ ಸಂಗಡಿಗೆ ಅಲ್ಲಿಂದ ತೆರಳಿದ ನಂತರ, ಅಲ್ಲೇ ಇದ್ದ ನಿರೂಪಕನು ಹಲವರ ಜತೆ ಮಾತನಾಡತೊಡಗುತ್ತಾನೆ)

ನಿರೂಪಕ: ಈಗ ನೀವೆಲ್ಲಾ ಅವರಿಂದ ದುಡ್ಡನ್ನ ಈಸ್ಕೊಂಡ್ರಲ್ಲ…ನಾಳೆ ಎಲ್ಲರೂ ರಾಮಣ್ಣನವರಿಗೆ ಗ್ಯಾರಂಟಿಯಾಗಿ ಓಟು ಹಾಕ್ತೀರಾ?

ಮತದಾರ 2: ಹೂ…ಹಾಕ್ದೆ ಏನ್ ಮಾಡರು?…ಹಾಕೇ ಹಾಕ್ತರೆ.

ಮತದಾರ 1: ಎಲ್ಲರೂ ಹಾಕೇ ಹಾಕ್ತರೆ ಅಂತ ಹೇಳೂಕಾಗೂದಿಲ್ಲ. ಕೆಲವರು ಬ್ಯಾರೆಯವರ‍್ಗೂ ಹಾಕ್ತರೆ.

ನಿರೂಪಕ: ಹಾಗಾದ್ರೆ ನೀವೆಲ್ಲಾ ಉರೀತಾಯಿರು ಕರ‍್ಪೂರದ ಮೇಲೆ ಕಯ್ ಇಟ್ಟು ಪ್ರಮಾಣ ಮಾಡುದ್ರಲ್ಲ! ರಾಮಣ್ಣನವರಿಗೆ ಓಟು
ಹಾಕ್ದೇ ಇದ್ರೆ ಏನಾದ್ರು ಕೇಡಾಯ್ತದೆ ಅನ್ನೂ ಹೆದರಿಕೆ ಇಲ್ಲವೇ ನಿಮಗೆ?

ಮತದಾರ 3: ಹೆದರಿಕೆ ಯಾಕಪ್ಪ? ಪ್ರಮಾಣ ಮಾಡ್ಬುಟ್ರೆ ಏನಾಗೋಯ್ತು?…ಏನು ಅವರಪ್ಪನ ಮನೆ ದುಡ್ಡು ತಂದ್ಕೊಟ್ಟಿದ್ದನೆ?
ಯಾರದೋ ತಲೆಹೊಡ್ದು ಸಂಪಾದ್ನೆ ಮಾಡೀರು ದುಡ್ಡ ಹಿಂಗೆ ನಮ್ಮಂತೋರ‍್ಗೆ ಕೊಟ್ಟವ್ನೆ.

ಮತದಾರ 4: ಇನ್ನೂ ಮೂರ‍್ನಾಕು ಜನ ಓಟಿಗೆ ನಿಂತಿರೂರು ದುಡ್ಡು, ಸೀರೆ, ಪಂಚೆ ಕೊಟ್ಟು ಇವರಂಗೆ ಪ್ರಮಾಣ
ಮಾಡಿಸ್ಕೊಂಡು ಹೋಗವ್ರೆ.

ನಿರೂಪಕ: ಹಂಗಾದ್ರೆ ಯಾರ‍್ಗೆ ಹಾಕ್ತೀರಿ ಓಟನ್ನ?

ಮತದಾರ 1: ಪ್ರಮಾಣ ಮಾಡುವಾಗ ಬಾಯಲ್ಲಿ ನಾವು ಏನೇ ಅಂದ್ರೂ , ಕಯ್ಯಲ್ಲಿ ಏನೇ ಮಾಡುದ್ರು , ಒಳಗಡೆ ಮನಸಲ್ಲಿ
“ದೇವರೇ…ಇದೆಲ್ಲಾ ಸುಮ್ ಸುಮ್ನೆ ಮಾಡ್ತೀರೂದು ಕಣಪ್ಪ” ಅಂತ ಹೇಳ್ಕೊಂಡಿರ‍್ತೀವಿ. ನಾಳಾಕೆ ಓಟು ಮಾಡೂಕೆ
ಅಂತ ಹೋದಾಗ , ಯಾರ‍್ಗೆ ಹಾಕ್ಬೇಕು ಅಂತ ಅನ್ನಿಸ್ತದೋ ಅವರ‍್ಗೆ ಒತ್ತುಬುಟ್ಟು ಬತ್ತೀವಿ.

ಪ್ರಸಂಗ-6

ಜಾಗ : ಬೀದಿಬದಿಯ ಕಿತ್ತಳೆಹಣ್ಣಿನ ಅಂಗಡಿ
ಸಮಯ: ಬೆಳಗ್ಗೆ 8 ಗಂಟೆ

1) ಮಾರಾಟಗಾರ-ವಯಸ್ಸು 50
2) ಗಿರಾಕಿ 1-ವಯಸ್ಸು 65
3) ಗಿರಾಕಿ 2-ವಯಸ್ಸು 70

ಗಿರಾಕಿ 1: (ಕಿತ್ತಳೆಹಣ್ಣುಗಳನ್ನು ನೋಡುತ್ತ) ಹೆಂಗಪ್ಪ ಕೆ.ಜಿ?

ಮಾರಾಟಗಾರ: ನಲವತ್ತು ಸಾರ್.

ಗಿರಾಕಿ 1: ಏನಯ್ಯಾ…ಮೂವತ್ತಕ್ಕೆಲ್ಲಾ ಸಿಗ್ತಾಯಿದೆ. ನೀನೇನು ಬಾಯಿಗೆ ಬಂದಂಗೆ ಹೇಳ್ತಾಯಿದ್ದೀಯೆ?

ಗಿರಾಕಿ 2: ಗುರ‍್ತುಕಂಡ ಅಂಗಡಿ ಅಂತ ಇವರನ್ನ ಕರ‍್ಕೊಂಡು ಬಂದ್ರೆ…ಇಶ್ಟೊಂದು ರೇಟ್ ಹೇಳ್ತೀಯೆ.

ಮಾರಾಟಗಾರ: (ಅಂಗಡಿಯಲ್ಲಿದ್ದ ಗಲ್ಲಾಪೆಟ್ಟಿಗೆಯ ಮೇಲೆ ತನ್ನ ಕಯ್ಯನ್ನಿಟ್ಟು) ಈ ಲಕ್ಸ್ಮಿ ಆಣೆಗೂ ಹೇಳಾ ಇದ್ದೀನಿ ಸಾರ್…ನಂಗೇನೆ ಮಾರ‍್ಕೆಟ್ಟಿನಲ್ಲಿ ಮೂವತ್ತಯ್ದು ಬಿದ್ದಿದೆ. ನನ್ನಾಣೆಗೂ ನಾನು ಸುಳ್ಳು ಹೇಳ್ತ ಇಲ್ಲ.

ಗಿರಾಕಿ 1: ಇದಕ್ಕೆಲ್ಲಾ ಏಕಯ್ಯಾ ಹಿಂಗೆ ಆಣೆಪ್ರಮಾಣ ಮಾಡ್ತಾ ಇದ್ದೀಯೆ?

ಮಾರಾಟಗಾರ: ಇಲ್ದೇದ್ರೆ ನನ್ ಮಾತಲ್ಲಿ ನಿಮ್ಗೆ ನಂಬಿಕೇನೆ ಬರೂದಿಲ್ವಲ್ಲ ಸ್ವಾಮಿ.

ಗಿರಾಕಿ 2: ಹೋಗ್ಲಿ…ಮೂವತ್ತೆಂಟ್ ಮಾಡ್ಕೊಂಡು ನಂಗೊಂದು ಎರಡು ಕೆ.ಜಿ.,…ಅವರ‍್ಗೊಂದು ಎರಡು ಕೆ.ಜಿ.ಕೊಡು.

ಮೇಲ್ಕಂಡ ಪ್ರಸಂಗಗಳನ್ನು ಗಮನಿಸಿದಾಗ ಆಣೆಪ್ರಮಾಣಗಳ ಬಗೆಗೆ ಕೆಲವೊಂದು ಸಂಗತಿಗಳನ್ನು ನಾವು ಒರೆಹಚ್ಚಿ ನೋಡಬಹುದು.

ಆಣೆ ಇಡುವುದು ಎಂದರೇನು?

ಯಾವುದೇ ವ್ಯಕ್ತಿ ತಾನು ಹೇಳುತ್ತಿರುವ ಸಂಗತಿಯು ನಿಜವಾದುದೆಂದು ಸಾಬೀತು ಮಾಡುವುದಕ್ಕಾಗಿ ದೇವರ ಹೆಸರನ್ನು/ವಸ್ತುಗಳನ್ನು/ತನ್ನ ಮಯ್ಯಿನ ಅಂಗಾಂಗಗಳನ್ನು ಸಾಕ್ಶಿಯಾಗಿ ಹೆಸರಿಸುತ್ತಾ, ಮಾತನ್ನಾಡುವ ಬಗೆಯನ್ನು ಆಣೆಯಿಡುವುದು ಎನ್ನುತ್ತಾರೆ. ‘ಆಣೆ’ ಎಂಬ ಹೆಸರುಪದವು ‘ಇಡು’ ಎಂಬ ಕೆಲಸಪದದ ಜತೆಗೂಡಿ ‘ಆಣೆಯಿಡುವುದು, ಆಣೆಯಿಕ್ಕುವುದು’ ಎಂಬ ರೂಪಗಳಲ್ಲಿ ಬಳಕೆಯಾಗುತ್ತಿದೆ. ಆಣೆಯಿಡುವ ಮಾತಿನ ಸನ್ನಿವೇಶಗಳಲ್ಲಿ ವ್ಯಕ್ತಿಯು ತಾನು ಹೇಳುತ್ತಿರುವ ಸಂಗತಿಯು “ನಿಜವಾದುದು” ಎಂಬುದಕ್ಕೆ ಸಾಕ್ಶಿಯನ್ನು ಹೆಸರಿಸುವಂತೆಯೇ, ಒಂದು ವೇಳೆ ತಾನು ವಂಚಿಸಲೆಂಬ ಉದ್ದೇಶದಿಂದ ನಿಜವನ್ನು ಮರೆಮಾಚಿ ಸುಳ್ಳನ್ನು ಹೇಳುತ್ತಿದ್ದರೆ, ತನಗೆ ಹೆಚ್ಚಿನ ಹಾನಿಯುಂಟಾಗಲೆಂಬ ಶಾಪದ ನುಡಿಗಳನ್ನು ಒಂದು ಬಗೆಯ ಶರತ್ತಿನ ಹಿನ್ನೆಲೆಯಲ್ಲಿ ಕೆಲವೊಮ್ಮೆ ನುಡಿಯುತ್ತಾನೆ.

ಪ್ರಮಾಣ ಮಾಡುವುದು ಎಂದರೇನು?

ಯಾವುದೇ ವ್ಯಕ್ತಿಯು ತನ್ನ ಮೇಲೆ ಬಂದಿರುವ ಗುರುತರವಾದ ಆರೋಪವನ್ನು ನಿರಾಕರಿಸುವ/ತಾನು ಹೇಳುತ್ತಿರುವ ಸಂಗತಿಯು ನಿಜವಾದುದೆಂದು ಒತ್ತಿಹೇಳುವ/ತಾನು ಕೈಗೊಳ್ಳುತ್ತಿರುವ ಕೆಲಸವನ್ನು ಗೊತ್ತುಪಡಿಸಿದ ಸಮಯದೊಳಗೆ ಈಡೇರಿಸುವುದಾಗಿ ಪಣತೊಡುವ ಇಲ್ಲವೇ ವಾಗ್ದಾನವನ್ನು ನೀಡುವಂತಹ ಸನ್ನಿವೇಶಗಳಲ್ಲಿ ದೇವರ ಚಿತ್ರಪಟಗಳನ್ನು, ವಿಗ್ರಹಗಳನ್ನು, ವ್ಯಕ್ತಿಗಳನ್ನು, ಪ್ರಾಣಿಗಳನ್ನು ಇಲ್ಲವೇ ತನ್ನ ಮಯ್ಯಿನ ಅಂಗಾಂಗಗಳನ್ನು ಕಯ್ಯಿಂದ ಮುಟ್ಟಿ ಇಲ್ಲವೇ ಹಿಡಿದುಕೊಂಡು ಮಾತನ್ನಾಡುವ ಆಚರಣೆಯನ್ನು ಪ್ರಮಾಣ ಮಾಡುವುದು ಎನ್ನುತ್ತಾರೆ. ಆಣೆಯು ಕೇವಲ ಮಾತಿನ ರೂಪದಲ್ಲಿ ಪ್ರಕಟಗೊಂಡರೆ, ಪ್ರಮಾಣವು ಮಾತಿನ ಜತೆಯಲ್ಲೇ ಯಾವುದಾದರೂ ಒಂದು ಬಗೆಯ ಆಚರಣೆಯನ್ನು ಒಳಗೊಂಡಿರುತ್ತದೆ.

ಆಣೆಯ ಬಗೆಗಳು:

ಆಣೆಯನ್ನು ಇಡುವಾಗ ಸಾಕ್ಶಿಯಾಗಿ ಹೆಸರಿಸಲು ಆಯ್ಕೆಮಾಡಿಕೊಳ್ಳುವ ಸಂಗತಿಗೆ ತಕ್ಕಂತೆ , ಆಣೆಗಳಲ್ಲಿ ನಾಲ್ಕು ಬಗೆಗಳನ್ನು ಗುರುತಿಸಬಹುದು.

1) ದೇವರ ಹೆಸರಿನ ಆಣೆಗಳು:

ದೇವರ ಬಗೆಗಿನ ನಂಬಿಕೆ ಮತ್ತು ಹೆದರಿಕೆಯು ಜನರಲ್ಲಿ ಹೆಚ್ಚಾದಂತೆಲ್ಲಾ ದೇವರನ್ನು ಪೂಜಿಸಿ, ತಮ್ಮ ಜೀವನದ ಆಗುಹೋಗುಗಳನ್ನು ದೇವರ ಪಾಲಿಗೆ ಒಪ್ಪಿಸುವ ನಡೆನುಡಿಯು ಜನಸಮುದಾಯದಲ್ಲಿದೆ. ತಪ್ಪು ಇಲ್ಲವೇ ಕೇಡನ್ನು ಮಾಡಿದವರು ಯಾರೆಂಬುದನ್ನು ಗುರುತಿಸಲು ಆಗದಿದ್ದಾಗ , ಇದರ ಹೊಣೆಗಾರಿಕೆಯನ್ನು ದೇವರಿಗೆ ವಹಿಸಿ, ವ್ಯಾಜ್ಯದ ಸನ್ನಿವೇಶದಲ್ಲಿ ಆರೋಪಕ್ಕೆ ಗುರಿಯಾದ ವ್ಯಕ್ತಿಯು ತಪ್ಪನ್ನು ಮಾಡಿದ್ದರೆ ದಂಡಿಸುವ/ಮಾಡದಿದ್ದರೆ ಕಾಪಾಡುವ ತೀರ‍್ಮಾನವನ್ನು ಕಯ್ಗೊಳ್ಳುವ ಜವಾಬ್ದಾರಿಯನ್ನು ದೇವರ ಪಾಲಿಗೆ ನೀಡಲಾಗಿದೆ. ದೇವರ ಹೆಸರಿನಲ್ಲಿ ಸುಳ್ಳನ್ನು ನುಡಿದರೆ, ಅದಕ್ಕೆ ಹೆಚ್ಚಿನ ದಂಡನೆಯು ಇಂದಲ್ಲ ನಾಳೆಯಾದರೂ ಆಗಿಯೇ ತೀರುತ್ತದೆಯೆಂಬ ಬಲವಾದ ನಂಬಿಕೆಯು ಜನಮನದಲ್ಲಿದೆ. ಆಣೆಯಿಡುವ ವ್ಯಕ್ತಿಗಳು ತಾವು ಪೂಜಿಸುವ ತಂತಮ್ಮ ಮೆಚ್ಚಿನ ಕುಲದೇವರನ್ನು ಮತ್ತು ನಂಬುವ ಇನ್ನಿತರ ದೇವರನ್ನು ಸಾಕ್ಶಿಯಾಗಿ ಹೆಸರಿಸುತ್ತಾರೆ.

ತಿರುಪತಿ ತಿಮ್ಮಪ್ಪನಾಣೆಗೂ….
ದರ‍್ಮಸ್ತಳದ ಮಂಜುನಾತನ ಆಣೆಯಾಗು…..
ಮಾರಮ್ಮನಾಣೆಗೂ…..
ಅಯ್ಯಪ್ಪಸಾಮಿ ಆಣೆಯಾಗು….
ಲಕ್ಸ್ಮಿಯಾಣೆಗೂ…
ಪಟಲದಮ್ಮನಾಣೆಗೂ…

2) ವ್ಯಕ್ತಿಗಳ ಹೆಸರಿನ ಆಣೆಗಳು:

ಯಾವುದೇ ವ್ಯಕ್ತಿಯು ತಾನು ಬಹಳವಾಗಿ ಒಲಿದಿರುವ, ಮೆಚ್ಚಿರುವ, ಪೂಜಿಸುವ ಮತ್ತು ಅವಲಂಬಿಸಿರುವ ವ್ಯಕ್ತಿಗಳ ಹೆಸರಿನಲ್ಲಿ ಆಣೆಯನ್ನು ಇಡುವಾಗ, ಸುಳ್ಳನ್ನು ಆಡಿದರೆ ಅದರಿಂದ ಅವರಿಗೆ ಮುಂದೆ ಸಾವುನೋವುಗಳುಂಟಾಗಿ, ಅವರನ್ನು ಕಳೆದುಕೊಳ್ಳುತ್ತಾನೆ ಎಂಬ ನಂಬಿಕೆಯು ಜನಮನದಲ್ಲಿ ಆಳವಾಗಿ ಬೇರೂರಿದೆ. ಆದುದರಿಂದಲೇ ಬಹುತೇಕ ಮಂದಿ ತಾವು ಆಡುತ್ತಿರುವ ಮಾತು “ನಿಜವಾದುದು” ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ ತಮ್ಮ ಮೆಚ್ಚಿನ ವ್ಯಕ್ತಿಗಳ ಹೆಸರಿನಲ್ಲಿ ಆಣೆಯಿಡುತ್ತಾರೆ. ತಮ್ಮ ಹುಟ್ಟಿಗೆ ಕಾರಣಕರ‍್ತರಾದ ತಂದೆತಾಯಿಯ ಮೇಲೆ ಆಣೆಯಿಡುತ್ತಾರೆ. ತಂದೆಗಿಂತ ತಾಯಿಯ ಮೇಲೆ ಇಡುವ ಆಣೆಯಿಡುವುದು ಹೆಚ್ಚಾಗಿ ಕಂಡುಬರುತ್ತದೆ. ಏಕೆಂದರೆ ತಂದೆಗಿಂತ ತಾಯಿಯು ಹೆಚ್ಚು ಹತ್ತಿರದವಳು ಎಂಬ ಒಳಮಿಡಿತವು ಜನಸಮುದಾಯದಲ್ಲಿದೆ. ತಮ್ಮ ವಂಶದ ಕುಡಿಗಳಾದ ಮಕ್ಕಳ ಮೇಲೆ ಆಣೆಯಿಡುತ್ತಾರೆ. ಅತಿ ಹೆಚ್ಚಿನ ಸನ್ನಿವೇಶಗಳಲ್ಲಿ “ನನ್ನಾಣೆಗೂ … ” ಎಂದು ತಮ್ಮ ಮೇಲೆ ತಾವೇ ಆಣೆ ಇಟ್ಟುಕೊಳ್ಳುತ್ತಾರೆ : ವಿದ್ಯೆಯನ್ನು ಹೇಳಿಕೊಟ್ಟ ಗುರುಗಳ, ತಮ್ಮ ತಮ್ಮ ಜಾತಿಜಗದ್ಗುರುಗಳ ಹೆಸರುಗಳೂ ಆಣೆಯಲ್ಲಿ ಬಳಕೆಯಾಗುತ್ತವೆ. ಕೆಲವು ಸನ್ನಿವೇಶಗಳಲ್ಲಿ ಆರೋಪವನ್ನು ಹೊರಿಸಿದ ವ್ಯಕ್ತಿಯನ್ನೇ ಕುರಿತು “ನಿಮ್ಮಾಣೆಗೂ ನಾನು ಹಂಗೆ ಮಾಡಿಲ್ಲ/ಹೇಳಿಲ್ಲ” ಎಂದು ಆಣೆ ಇಡುವುದು ಕಂಡುಬರುತ್ತದೆ.

ನಮ್ ತಂದೆತಾಯಿ ಆಣೆಗೂ…..
ನನ್ ತಾಯಾಣೆಗೂ…..
ನಮ್ಮಪ್ಪನಾಣೆಗೂ…..
ನಿಮ್ಮಾಣೆಗೂ…..
ನಂಗೆ ಇರೂ ಒಬ್ಬ ಮಗನ ಆಣೆಗೂ…..
ನನ್ ಗಂಡನಾಣೆಗೂ…..
ನಮ್ ಗುರುಗಳಾಣೆಗೂ…..

ಚುಂಚನಗಿರಿ ಸ್ವಾಮಿಗಳಾಣೆಗೂ…..

3) ವಸ್ತುಗಳನ್ನು ಹೆಸರಿಸುವ ಆಣೆಗಳು:

ಜೀವದ ಉಳಿವಿಗೆ ಅಗತ್ಯವಾದ ಅನ್ನ, ನೀರು, ಉಪ್ಪು ಮುಂತಾದ ವಸ್ತುಗಳಿಂದ ತೊಡಗಿ, ಸಂಸ್ಕ್ರುತಿಯ ನೆಲೆಯಲ್ಲಿ ಪವಿತ್ರವೆಂದು ಪರಿಗಣಿಸಿರುವ ಅರಿಸಿನ, ಕುಂಕುಮ, ಮಾಂಗಲ್ಯ, ಹೊತ್ತಿಗೆ, ತೆಂಗಿನಮರ, ಹೊಳೆನದಿಗಳು, ಸೂರ‍್ಯ , ದೀಪ, ಬೆಂಕಿ ಮುಂತಾದ ಅನೇಕ ವಸ್ತುಗಳನ್ನು ಹೆಸರಿಸಿ ಆಣೆ ಇಡುತ್ತಾರೆ. ಜನ ಸಮುದಾಯದ ಸಾಮಾಜಿಕ ಜೀವನದಲ್ಲಿ ತುಂಬಾ ಅಗತ್ಯವಾದುವೆಂದು ಹಾಗೂ ಮತದರ‍್ಮಗಳ ನೆಲೆಯಲ್ಲಿ ಪವಿತ್ರವೆಂದು ನಂಬಿರುವ ವಸ್ತುಗಳನ್ನು ಹೆಸರಿಸಿ ಆಣೆಯಿಡುವಾಗ ಸುಳ್ಳನ್ನಾಡಿದರೆ , ಜೀವನದಲ್ಲಿ ಅಂತಹ ವಸ್ತುಗಳನ್ನು ಪಡೆಯಲಾಗದೆ , ಹೆಚ್ಚಿನ ನೋವು ಸಂಕಟ ಅಪಮಾನಗಳಿಗೆ ಗುರಿಯಾಗಿ ನರಳಬೇಕಾಗುವುದೆಂಬ ನಂಬಿಕೆಯು ಜನಮನದಲ್ಲಿ ನೆಲೆಸಿದೆ.

ನಾನ್ ತಿನ್ನೂ ಅನ್ನದ ಮೇಲಾಣೆ…..
ನನ್ ಮಾಂಗಲ್ಯದಾಣೆಗೂ…..
ಬೂಮ್ತಾಯಿ ಆಣೆಗೂ…..
ಅರಿಸಿನ ಕುಂಕುಮದಾಣೆಗೂ…..
ಹರಿಯುತ್ತಿರುವ ಗಂಗಮ್ಮನಾಣೆಗೂ…..
ಉರಿಯುತ್ತಿರುವ ಜ್ಯೋತಿಯಾಣೆಗೂ…..
ಅಗ್ನಿಸಾಕ್ಶಿಯಾಗೂ…..

4) ಮಯ್ಯ ಅಂಗಗಳನ್ನು ಹೆಸರಿಸುವ ಆಣೆಗಳು:

ಮಯ್ಯ ಅಂಗಗಳನ್ನು ಕುರಿತು ಆಣೆಯನ್ನಿಡುವಾಗ ಕಣ್ಣುಗಳನ್ನು ಮಾತ್ರ ನೇರವಾಗಿ ಹೆಸರಿಸುತ್ತಾರೆ. ಈ ಬಗೆಯ ಆಣೆಗಳ ಶುರುವಿನಲ್ಲಿ ತಮ್ಮ ನಿಲುವನ್ನು ಎತ್ತಿಹಿಡಿಯುತ್ತಾ, ಅದು ಸುಳ್ಳಾಗಿದ್ದರೆ, ಅಂತಹ ವಂಚನೆಯ ಕೆಲಸದಲ್ಲಿ ತೊಡಗಿದ ತಮ್ಮ ಮಯ್ಯ ಅಂಗಗಳು ನಾಶವಾಗಲೆಂಬ ಶಾಪದ ಶರತ್ತನ್ನು ತಮಗೆ ತಾವೇ ಹಾಕಿಕೊಳ್ಳುತ್ತಾರೆ.

ನನ್ ಕಣ್ಣಾಣೆಗೂ ಕಂಡಿಲ್ಲ…ಹಂಗೇನಾದ್ರೂ ಕಂಡಿದ್ರೆ…ನನ್ ಕಣ್ ಹಿಂಗೋಗ್ಲಿ .
ನಾನು ಹಂಗೆ ಹೇಳಿಲ್ಲ…ಹಂಗೇನಾದ್ರೂ ಹೇಳಿದ್ರೆ…ನನ್ ಬಾಯಲ್ಲಿ ಹುಳ ಬೀಳಲಿ.
ನಾನು ಯಾರ‍್ಗೂ ಏನನ್ನೂ ಕದ್ದು ಕೊಟ್ಟಿಲ್ಲ…ಹಂಗೇನಾದ್ರೂ ಕೊಟ್ಟಿದ್ರೆ…ನನ್ ಕೈ ಸೇದೋಗ್ಲಿ.

( ಚಿತ್ರಸೆಲೆ: whotalking.com ) 

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. 22/02/2016

    […] (ಆಣೆಪ್ರಮಾಣ – ಮೂರನೆಯ ಕಂತು) (ಕಂತು 1, ಕಂತು 2) […]

  2. 21/03/2016

    […] 1, ಕಂತು 2 ಕಂತು […]

ಅನಿಸಿಕೆ ಬರೆಯಿರಿ:

Enable Notifications