ಆಣೆ ಪ್ರಮಾಣ

– ಸಿ.ಪಿ.ನಾಗರಾಜ.

promise
ವ್ಯಕ್ತಿಗಳ ನಡುವೆ ನಾನಾ ಕಾರಣಗಳಿಂದಾಗಿ ಪರಸ್ಪರ ಅನುಮಾನ ಅಪನಂಬಿಕೆಗಳುಂಟಾದಾಗ ಇಲ್ಲವೇ ನಡೆನುಡಿಗಳಲ್ಲಿ ತಪ್ಪುಗಳು ಕಂಡುಬಂದಾಗ ಜಗಳ ಶುರುವಾಗಿ ಮಾತಿನ ಚಕಮಕಿ ನಡೆಯತೊಡಗುತ್ತದೆ. ಒಬ್ಬರು ಮತ್ತೊಬ್ಬರ ಮೇಲೆ ಆರೋಪವನ್ನು ಹೊರಿಸುತ್ತಾರೆ. ಆರೋಪಕ್ಕೆ ಗುರಿಯಾದ ವ್ಯಕ್ತಿಯು ಅದನ್ನು ತಳ್ಳಿಹಾಕುತ್ತಾರೆ ಇಲ್ಲವೇ ಒಳ್ಳೆಯ ಮಾತುಗಳಿಂದಲೇ ನಿರಾಕರಿಸುತ್ತಾರೆ. ಕೆಲವು ಬಗೆಯ ಜಗಳದಲ್ಲಿ ಈ ಬಗೆಯ ಮಾತಿನ ತಿಕ್ಕಾಟವು ಸ್ಪಲ್ಪದರಲ್ಲಿಯೇ ಕೊನೆಗೊಳ್ಳದೆ, ಆರೋಪ ಹಾಗೂ ನಿರಾಕರಣೆಯ ಮಾತುಗಳು ಮತ್ತೆ ಮತ್ತೆ ಮುಂದುವರಿಯುತ್ತವೆ.

ಇಂತಹ ಸನ್ನಿವೇಶಗಳಲ್ಲಿ ಕೋಪತಾಪಗಳಿಗೆ ಒಳಗಾಗಿ ಹೊಡೆದಾಟಕ್ಕೆ ತೊಡಗಿ ಮಯ್-ಮನಗಳಿಗೆ ಹಾನಿಯನ್ನು ಉಂಟುಮಾಡಿಕೊಳ್ಳುವುದರ ಬದಲು, ಆಣೆಯಿಡುವ ಮತ್ತು ಪ್ರಮಾಣ ಮಾಡುವ ಕ್ರಿಯೆಗಳ ಮೂಲಕ ವ್ಯಾಜ್ಯಕ್ಕೆ ಒಂದು ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಜಗತ್ತಿನ ಉದ್ದಗಲದಲ್ಲಿರುವ ಎಲ್ಲಾ ಬಗೆಯ ಸಂಸ್ಕ್ರುತಿಗಳಿಗೆ ಸೇರಿದ ನುಡಿಸಮುದಾಯಗಳಲ್ಲಿಯೂ ಇಂತಹ ಆಚರಣೆಗಳು ಹಿಂದಿನ ಕಾಲದಿಂದಲೂ ಬಳಕೆಯಲ್ಲಿವೆ. ಕನ್ನಡ ನುಡಿಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಸಾಮಾಜಿಕ ವ್ಯವಹಾರದಲ್ಲಿ ಬಳಕೆಯಲ್ಲಿರುವ ಆಣೆ ಪ್ರಮಾಣಗಳನ್ನು ಕುರಿತು ಕನ್ನಡ ನುಡಿ ಹಾಗೂ ಕನ್ನಡ ಸಮಾಜದ ನೆಲೆಗಳಲ್ಲಿ ಪರಿಶೀಲನೆ ಮಾಡುವುದು ಈ ಬರಹದ ಉದ್ದೇಶವಾಗಿದೆ.

ಕನ್ನಡ ಸಮಾಜದ ರಚನೆ :

ಕರ‍್ನಾಟಕ ರಾಜ್ಯದಲ್ಲಿ ಹಿಂದು, ಜೈನ, ಬೌದ್ದ, ಸಿಕ್, ಇಸ್ಲಾಂ, ಕ್ರೈಸ್ತ ಮತ್ತು ಇನ್ನಿತರ ಮತಗಳಿಗೆ ಸೇರಿದ ಹಾಗೂ ಅನೇಕ ಬುಡಕಟ್ಟುಗಳ ಜನರು ನೆಲೆಸಿದ್ದಾರೆ. ರಾಜ್ಯದ ಸುಮಾರು ಆರು ಕೋಟಿ ಜನಸಂಕೆಯಲ್ಲಿ ಶೇ65ರಶ್ಟು ಮಂದಿ ಕನ್ನಡವನ್ನು ತಾಯ್ನುಡಿಯಾಗಿ ಹೊಂದಿದ್ದಾರೆ. ಕನ್ನಡ ನುಡಿಗರಲ್ಲಿ ಹೆಚ್ಚಿನ ಮಂದಿ ಹಿಂದುಗಳಾಗಿದ್ದಾರೆ. ಹಿಂದುಮತವೆಂಬುದು ಹತ್ತಾರು ಬಗೆಯ ಜಾತಿ, ನೂರಾರು ಬಗೆಯ ಉಪಜಾತಿಗಳಿಂದ ಹೆಣೆದುಕೊಂಡಿದೆ. ಈ ಜಾತಿ ಉಪಜಾತಿಗಳೆಲ್ಲವೂ ಮೇಲುಕೀಳಿನ ಮೆಟ್ಟಿಲುಗಳಿಂದ ಕೂಡಿವೆ. ಜಾತಿ ತಾರತಮ್ಯದ ಜತೆಗೆ ವರ‍್ಗ ತಾರತಮ್ಯವು ಕನ್ನಡ ಸಮುದಾಯದಲ್ಲಿದೆ. ವರ‍್ಗವೆಂದರೆ ಆಸ್ತಿಪಾಸ್ತಿಹಣಕಾಸನ್ನು ಬೇರೆಬೇರೆ ಪ್ರಮಾಣದಲ್ಲಿ ಹೊಂದಿರುವುದು. ಬಡವರು, ನಡುವಣ ಕೆಳವರ‍್ಗದವರು, ನಡುವಣ ವರ‍್ಗದವರು ಮತ್ತು ಸಿರಿವಂತರೆಂಬ ವರ‍್ಗ ತಾರತಮ್ಯಗಳಿವೆ. ಜಾತಿ/ವರ‍್ಗ ತಾರತಮ್ಯದ ಜತೆಜತೆಗೆ ಲಿಂಗ ತಾರತಮ್ಯವೂ ದೊಡ್ಡದಾಗಿ ಎದ್ದು ಕಾಣುತ್ತದೆ. ಲಿಂಗವೆಂದರೆ ಮಾನವ ಸಮುದಾಯದಲ್ಲಿ ಹೆಣ್ಣು ಮತ್ತು ಗಂಡುಗಳನ್ನು ಗುರುತಿಸುವುದು. ಸಮಾಜದ ಎಲ್ಲಾ ರಂಗಗಳ ಗದ್ದುಗೆಗಳಲ್ಲಿ ಗಂಡಸರ ಪಾಲು ಹೆಚ್ಚಿನದಾಗಿದೆ. ಹೆಣ್ಣು ಎಲ್ಲಾ ರೀತಿಯಿಂದಲೂ ಸಾಮಾಜಿಕವಾಗಿ ಎರಡನೆಯ ದರ‍್ಜೆಯ ವ್ಯಕ್ತಿಯಾಗಿದ್ದಾಳೆ. ಈ ರೀತಿ ಕನ್ನಡ ನುಡಿ ಸಮುದಾಯದವರು ಜಾತಿ, ವರ‍್ಗ, ಲಿಂಗ ತಾರತಮ್ಯವುಳ್ಳ ಸಮಾಜದಲ್ಲಿ ಬಾಳುತ್ತಿದ್ದಾರೆ.

ಯಾವುದೇ ಬಗೆಯ ಸನ್ನಿವೇಶದಲ್ಲಿ ಮಾತನಾಡಲು ತೊಡಗುವ ವ್ಯಕ್ತಿಗಳ “ಲಿಂಗ-ವಯಸ್ಸು-ಜಾತಿ-ಮತ-ಹುಟ್ಟಿ ಬೆಳೆಯುವ ಪ್ರದೇಶ-ವಿದ್ಯೆ-ಗದ್ದುಗೆ-ಸಂಪತ್ತಿನ ಸಂಗತಿಗಳು” ದೊಡ್ಡ ಪಾತ್ರವನ್ನು ವಹಿಸುತ್ತವೆ. ಏಕೆಂದರೆ ಇವುಗಳನ್ನು ಅವಲಂಬಿಸಿ ವ್ಯಕ್ತಿಯ ಸಾಮಾಜಿಕ ಅಂತಸ್ತು/ಸ್ತಾನಮಾನಗಳು ನಿರ‍್ಣಯಗೊಳ್ಳುತ್ತವೆ. ಮಾತಿನ ಸನ್ನಿವೇಶಗಳಲ್ಲಿ ವ್ಯಕ್ತಿಗಳ ಸಾಮಾಜಿಕ ನಂಟು ಮತ್ತು ಹತೋಟಿಯ ನಂಟು ಆಡುವ ಮಾತುಗಳನ್ನು ನಿಯಂತ್ರಿಸುತ್ತವೆ ಮತ್ತು ನಿರ‍್ದೇಶಿಸುತ್ತವೆ.

ಸಾಮಾಜಿಕ ನಂಟು ಎಂದರೆ ಕುಟುಂಬ/ದುಡಿಮೆ/ಸಾರ‍್ವಜನಿಕ ನೆಲೆಗಳಲ್ಲಿ ವ್ಯಕ್ತಿಗಳ ನಡುವೆ ಇರುವ ನಂಟು. ಎತ್ತುಗೆ: ಅಣ್ಣ-ತಮ್ಮ; ಅಕ್ಕ-ತಂಗಿ; ಗಂಡ-ಹೆಂಡತಿ; ಅಪ್ಪ-ಮಗಳು; ತಾಯಿ-ಮಗ; ಅತ್ತೆ-ಸೊಸೆ; ಅಜ್ಜ-ಮೊಮ್ಮಗ; ಒಡೆಯ-ಆಳು; ಆಪೀಸರ‍್-ಗುಮಾಸ್ತ; ಕಂಡಕ್ಟರ‍್-ಪ್ರಯಾಣಿಕ; ಗೆಳೆಯ-ಗೆಳತಿ; ಗೆಳೆಯ-ಗೆಳೆಯ ಇತ್ಯಾದಿ. ಹತೋಟಿಯ ನಂಟು ಎಂದರೆ ಮಾತಿನ ಸನ್ನಿವೇಶದಲ್ಲಿ ತೊಡಗಿದ ಇಬ್ಬರು ವ್ಯಕ್ತಿಗಳಲ್ಲಿ ವಯಸ್ಸು/ಲಿಂಗ/ಜಾತಿ/ಮತ/ವರ‍್ಗ/ವಿದ್ಯೆ/ಗದ್ದುಗೆ/ಪ್ರದೇಶಗಳ ಕಾರಣದಿಂದಾಗಿ ಒಬ್ಬರು ಇನ್ನೊಬ್ಬರಿಗಿಂತ ತುಸು ಇಲ್ಲವೇ ಹೆಚ್ಚಿನ ಹತೋಟಿಯನ್ನು ಹೊಂದಿರುತ್ತಾರೆ. ಅಂದರೆ ತಾವು ಹೇಳಿದ್ದನ್ನು ಒಪ್ಪುಕೊಂಡು ನಡೆಯುವಂತೆ ಇಲ್ಲವೇ ತಮ್ಮ ಮಾತಿಗೆ ಎದುರಾಡದೆ ಸುಮ್ಮನಿರುವಂತೆ ಮಾಡಬಲ್ಲ ಕಸುವನ್ನು ಹೊಂದಿರುತ್ತಾರೆ.

ಕುಟುಂಬದ ನೆಲೆಯಲ್ಲಿ ಸಾಮಾನ್ಯವಾಗಿ ವಯಸ್ಸಿನಲ್ಲಿ ಹಿರಿಯರಾದ ತಂದೆತಾಯಿಗಳು ಕಿರಿಯರಾದ ಮಕ್ಕಳ ಮೇಲೆ; ದುಡಿಮೆಯ ನೆಲೆಯಲ್ಲಿ ದೊಡ್ಡ ಗದ್ದುಗೆಯಲ್ಲಿರುವವರು ಕೆಳದರ‍್ಜೆಯ ಕೆಲಸಗಾರರ ಮೇಲೆ ಹೆಚ್ಚಿನ ಹತೋಟಿಯನ್ನು ಹೊಂದಿರುತ್ತಾರೆ. ಯಾವುದೇ ಒಂದು ಜನಸಮುದಾಯದ ನುಡಿ ರಚನೆ ಮತ್ತು ಬಳಕೆಯ ಸಂಗತಿಗಳನ್ನು ಪರಿಶೀಲಿಸುವಾಗ, ಅದರ ಸಾಮಾಜಿಕ ಮತ್ತು ಸಾಂಸ್ಕ್ರುತಿಕ ಸಂಗತಿಗಳ ವಿವರಗಳನ್ನು ಚೆನ್ನಾಗಿ ತಿಳಿದಿರಬೇಕು. ಏಕೆಂದರೆ ನುಡಿಯೆಂಬುದು ಸಮುದಾಯದ ಒಡಲಾಳದಿಂದ ಮೂಡಿಬಂದಿರುತ್ತದೆ.

“ಆಣೆಯಿಡುವುದು/ಪ್ರಮಾಣ ಮಾಡುವುದು ಎಂದರೇನು?” ಎಂಬುದನ್ನು ತಿಳಿಯುವ ಮುನ್ನ ಆಣೆ ಮತ್ತು ಪ್ರಮಾಣಗಳು ಬಳಕೆಗೊಳ್ಳುವ ಕೆಲವು ಪ್ರಸಂಗಗಳನ್ನು ಈಗ ನೋಡೋಣ.

ಪ್ರಸಂಗ-1

ಜಾಗ: ಮನೆ
ಕಾಲ: ಸಂಜೆ 5 ಗಂಟೆ

ಮನೆಯೊಳಗೆ ಮೇಜಿನ ಮೇಲೆ ಇಟ್ಟಿದ್ದ ಇನ್ನೂರು ರೂಪಾಯಿ ಕಾಣೆಯಾಗಿರುವುದರ ಬಗ್ಗೆ ಹದಿನೆಂಟರ ವಯಸ್ಸಿನ ಗಂಡಾಳನ್ನು ಮನೆಯ ಒಡೆಯ(ವಯಸ್ಸು 50) ಮತ್ತು ಒಡತಿ(ವಯಸ್ಸು 40) ಜತೆಗೂಡಿ ತರಾಟೆಗೆ ತೆಗೆದುಕೊಂಡಿರುವ ಮಾತಿನ ಸನ್ನಿವೇಶವೊಂದು ಹೀಗಿದೆ .

ಒಡೆಯ : ಲೋ…ನಿಜ ಬೊಗ್ಳು…..ತಗೊಂಡಿದ್ರೆ ಕೊಟ್ಬುಡು.

ಆಳು : ನನ್ ತಾಯಾಣೆಗೂ ತಕೊಂಡಿಲ್ಲ ಕಣ್ರಪ್ಪ . ದೇವರಾಣೆಗೂ ನಾ ಕಾಣೆ…..ಅದೆಲ್ಲಿತ್ತು ಅನ್ನೋದೆ ನಂಗೊತ್ತಿಲ್ಲ.

ಒಡತಿ : ನಿಂಗೆ ಗೊತ್ತಿಲ್ದೆ ಏನ್ಲ? ನೀನೊಬ್ನೆ ಅಲ್ವೆ ಮನೇಲಿದ್ದೋನು? ಇನ್ಯಾರು ಬಂದಿದ್ರು ಒಳಕ್ಕೆ?

ಆಳು : ಇದೇನ್ರವ್ವ ಹಿಂಗಂತೀರಿ! ಯಾವತ್ತಾದ್ರೂ ನಾನು ಹಂಗೆ ಮಾಡಿದ್ನ? ನನ್ ಕಣ್ಣಾಣೆಗೂ ಇಲ್ಲ ಕಣ್ರವ್ವ. ಬೂಮ್ತಾಯಿ ಆಣೆಗೂ ನಾ ದುಡ್ಡು ಕಾಣೆ ಕಣ್ರವ್ವ.

ಒಡೆಯ : ಲೋ…ನೀ ಆಣೆಗೀಣೆ ಇಕ್ಬೇಡ. ನಿಜ ಹೇಳೂ ಎಲ್ಲಿಟ್ಟಿದ್ದೀಯೆ?
( ಅವನಿಗೆ ಹೊಡೆಯಲೆಂದು ಮುನ್ನುಗ್ಗುತ್ತಾನೆ)

ಒಡತಿ : ( ಅಡ್ಡ ಬಂದು ತಡೆಯುತ್ತಾ)  ಹೊಡಿಗಿಡಿ ಬ್ಯಾಡಿ. ಎಲ್ಲಾದ್ರೂ ಅಸವಲ್ಲದ ಜಾಗಕ್ಕೆ ಏಟು ಬಿದ್ದು, ಇನ್ನೇನಾದ್ರೂ ಆದದು. ಸುಮ್ನೆ ಒಳ್ಳೆ ಮಾತ್ನಲ್ಲೇ ಕೇಳಿ.

ಆಳು : ಸತ್ಯವಾಗ್ಲು ನಾ ಎತ್ಕೊಂಡಿಲ್ಲ ಕಣ್ರಪ್ಪ. ಯಾವ ದೇವರ ಮುಂದೆ ಬೇಕಾದ್ರು ಪ್ರಮಾಣ ಮಾಡ್ತೀನಿ. ಆ ಪಟಲದವ್ವನಾಣೆಗೂ ನಾ ಕಳ್ಳ ಅಲ್ಲ ಕಣ್ರಪ್ಪ.

ಒಡತಿ : ಹಂಗಾದ್ರೆ ಪಟಲದವ್ವನ ಗುಡಿ ಮುಂದೆ ನಿಂತ್ಕೊಂಡು ಪ್ರಮಾಣ ಮಾಡ್ತೀಯ?

ಆಳು : ಆಗ್ಲಿ ಕಣ್ರವ್ವ. ಬೇಕಾದ್ರೆ ಈಗ್ಲೆ ನಡೀರಿ .

ಒಡೆಯ : ಪಟಲದವ್ವನ ಗುಡೀನು ಬ್ಯಾಡ…ಏನು ಬ್ಯಾಡ. ಇಲ್ಲೇ ನಮ್ಮ ಕೊಟ್ಗೇಲಿ ಬಸವಣ್ಣ ದೇವರ ಬಾಲ ಹಿಡ್ಕೊಂಡು ಪ್ರಮಾಣ ಮಾಡ್ನಡಿ.

ಆಳು : ಹಂಗೆ ಆಗ್ಲಿ ಕಣ್ರಪ್ಪ. ನಡೀರಿ.

(ಅವರೊಡನೆ ಕೊಟ್ಟಿಗೆಗೆ ಬಂದು, ಅಲ್ಲಿದ್ದ ಒಂದು ಹಸುವಿನ ಬಾಲವನ್ನು ಕೈಯಲ್ಲಿ ಹಿಡಿದುಕೊಂಡು)

ಈ ಬಸವಣ್ಣ ದೇವರಾಣೆಗೂ ನಾನು ಅಲ್ಲಿದ್ದ ದುಡ್ಡು ತಕೊಂಡಿಲ್ಲ. ನಾನು ಆ ದುಡ್ಡ ಕಾಣೂಕೆ ಕಾಣೆ. ನಾನೇನಾದ್ರೂ ದುಡ್ಡ ಎತ್ಕೊಂಡು ಸುಳ್ ಹೇಳ್ತಿದ್ರೆ … ನನ್ ಕಣ್ ಹಿಂಗೋಗ್ಲಿ … ನನ್ ನಾಲ್ಗೆ ಸೇದೋಗ್ಲಿ … ನಂಗೆ ಬರಬಾರದ್ದು ಬರ‍್ಲಿ.

(ಎಂದು ಹೇಳಿ , ಮತ್ತೊಮ್ಮೆ ಹಸುವಿನ ಮೈಯನ್ನು ಮುಟ್ಟಿ ಸಣ್ ಮಾಡಿಕೊಳ್ಳುತ್ತಾನೆ.)

ಒಡತಿ : ( ಗಂಡನನ್ನು ಕುರಿತು ) ಆ ದೇವರೇ ನೋಡ್ಕೊತನೆ ಬುಡಿ. ಇನ್ನೇನ್ ತಾನೇ ನಾವು ಮಾಡೂಕಾದದು ? ನಡೀರಿ.

(ಅವರಿಬ್ಬರೂ ಮನೆಯೊಳಕ್ಕೆ ಹೋಗುತ್ತಾರೆ . ಮೂಕವೇದನೆಯಿಂದ ನರಳುತ್ತಾ ಆಳು ಅಲ್ಲೇ ನಿಂತಿರುತ್ತಾನೆ)

ಪ್ರಸಂಗ-2

ಜಾಗ: ಮನೆ
ಕಾಲ: ರಾತ್ರಿ 8 ಗಂಟೆ

1) ಮಗಳು(ವಯಸ್ಸು 30)
2) ತಾಯಿ(ವಯಸ್ಸು 55)
3) ಅಣ್ಣ(ವಯಸ್ಸು 35)
4) ಅಣ್ಣನ ಹೆಂಡತಿ(ವಯಸ್ಸು 28)

ಹಿನ್ನೆಲೆ :

ಮದುವೆಯಾದ ಕೆಲವು ವರುಶಗಳಲ್ಲಿ ಗಂಡನ ಆಕಸ್ಮಿಕ ಸಾವಿನಿಂದ ನೊಂದು ಮತ್ತು ಅತ್ತೆಯ ಮನೆಯ ಕಿರುಕುಳವನ್ನು ತಡೆಯಲಾರದೆ ತನ್ನ ಚಿಕ್ಕ ಮಗುವಿನೊಡನೆ ತವರುಮನೆಯಲ್ಲಿ ನೆಲೆಸಿದ್ದ ಮನೆಯ ಮಗಳು ಅತ್ತಿಗೆಯ ಆಕ್ರೋಶಕ್ಕೆ ಗುರಿಯಾಗಿದ್ದಳು. ಮನೆಯಲ್ಲಾಗುತ್ತಿದ್ದ ಎಲ್ಲಾ ಬಗೆಯ ಕಶ್ಟನಶ್ಟಗಳಿಗೂ ಈಕೆಯನ್ನೇ ಗುರಿಮಾಡಿ ಅಣ್ಣನ ಹೆಂಡತಿಯು ಯಾವಾಗಲೂ ನಿಂದಿಸುತ್ತಿದ್ದಳು. ಒಮ್ಮೆ ಅಣ್ಣನ ಹೆಂಡತಿಯ ಚಿನ್ನದ ಸರವೊಂದು ಕಾಣೆಯಾದಾಗ ನಡೆದ ಮಾತಿನ ಪ್ರಸಂಗವಿದು.

ಅಣ್ಣನ ಹೆಂಡತಿ : ( ಜೋರಾಗಿ ಕಿರುಚುತ್ತಾ )  ಗಂಡನ್ನ ತಿನ್ಕೊಂಡು ಯಾವತ್ತು ನಮ್ ಮನೇಗೆ ಬಂದ್ಳೋ…ಅವತ್ತೇ ನಮಗೆ ಎಲ್ಲಿಲ್ಲದ ಗ್ರಾಚಾರ ವಕ್ರಿಸ್ಕೋತು.

( ನಾದಿನಿಯನ್ನು ಉದ್ದೇಶಿಸಿ )

ಸಂಜೆ ಮಯ್ ತೊಳ್ಕೊವಾಗ ನೀರ್ ಮನೇಲಿ ಬಿಚ್ಚಿಟ್ಟಿದ್ದ ನನ್ ಚಿನ್ನದ ಸರ ಎತ್ಕೊಂಡಿದ್ದೀಯಲ್ಲ…ಒಳ್ಳೆ ಮಾತ್ನಲ್ಲಿ ಕೇಳ್ತಾ ಇವ್ನಿ…ಸರ ಕೊಟ್ಬುಡು.

( ಅತ್ತಿಗೆಯ ಆರೋಪದ ಮಾತುಗಳನ್ನು ಕೇಳಿ ಅರೆಗಳಿಗೆ ನಾದಿನಿಯು ಗಾಸಿಗೊಳ್ಳುತ್ತಾಳೆ. ತಾಯಿಯು ಮಗಳ ಕಡೆ ನೋಡುತ್ತಾ ಕಂಬನಿ ತುಂಬಿಕೊಳ್ಳುತ್ತಾಳೆ)

ಮಗಳು : (ತನ್ನ ಬಳಿ ನಿಂತಿದ್ದ ಮಗುವನ್ನು ಮುಂದಕ್ಕೆ ಎಳೆದುಕೊಂಡು , ಅದರ ತಲೆಯ ಮೇಲೆ ತನ್ನ ಕೈಗಳನ್ನಿಟ್ಟು) ಈ ನನ್ ಮಗೀನಾಣೆಗೂ ನಿನ್ನ ಚಿನ್ನದ ಸರ ನಾ ಕಾಣೆ…ಹಂಗೇನಾದ್ರೂ ನಾನು ಎತ್ಕೊಂಡಿದ್ರೆ ಇರೋದೊಂದು ಮಗೀನ ಆ ದೇವರು ಕಿತ್ಕೊಳ್ಳಿ.

ಅಣ್ಣನ ಹೆಂಡತಿ : ನಿನ್ನಂತವಳ್ಗೆ ಆಣೆಪ್ರಮಾಣ ಬ್ಯಾರೆ ಕೇಡು. ಮರ‍್ವಾದೆಯಾಗಿ ನನ್ ಸರ ಕೊಟ್ಬುಡು. ಇಲ್ದೇ ಇದ್ರೆ ನಿಮ್ಮ ಅಣ್ಣ ಬಂದ್ಮೇಲೆ ಸರಿಯಾದ ಮೋಕ್ಶ ಮಾಡಿಸ್ತೀನಿ. ಆಮ್ಯಾಲೆ ತಿನ್ನೂ ಅನ್ನಕ್ಕೂ ಗತಿಯಿಲ್ದಂಗಾಯ್ತದೆ.

ಮಗಳು : ತಿನ್ನೂ ಅನ್ನದಾಣೆಗೂ ನಾ ಎತ್ಕೊಂಡಿಲ್ಲ. ಯಾಕಿಂತ ಅನ್ಯಾಯ ಆಡೀಯೆ ನನ್ಮೇಲೆ? ನಿಂಗೆ ಅಶ್ಟು ಅನುಮಾನ ನನ್ಮೇಲಿದ್ದರೆ ಈಗ್ಲೆ ನಡಿ ಚವುಡಮ್ಮನ ಗುಡಿತಕೆ…ಗುಡಿ ಹೊಸಲಲ್ಲಿ ನನ್ ಮಗೀನ ಮಲಗಿಸ್ಬುಟ್ಟು ಪ್ರಮಾಣ ಮಾಡ್ತೀನಿ.

ಅಣ್ಣನ ಹೆಂಡತಿ : ಎಲ್ಲಾ ಕಿತ್ ನಿಂತಿರೂ ಮುಂಡೆ ನೀನು! ಏನು ಮಾಡೂಕೆ ತಾನೆ ಹೇಸಿಯೇ? ನಿನ್ನ ಆಣೆಪ್ರಮಾಣ ಕಟ್ಕೊಂಡು ನಂಗೇನ್ ಆಗ್ಬೇಕು…ಮೊದ್ಲು ನನ್ ಸರ ಕೊಟ್ಬುಟ್ಟು ಮಾತಾಡು.

ತಾಯಿ : ಮನೇಗೆ ಅವನು ಬಂದ್ಮೇಲೆ ಏನಾರ ಮಾಡೂರಿ. ಈಗ ಇಬ್ರೂ ಸುಮ್ನಿರಿ.

(ಸೊಸೆಯನ್ನು ಕುರಿತು)

ನೀರ್ ಮನೇಲಿ ಬಿಚ್ಚಿಟ್ಟಿದ್ದ ಸರ ಎಲ್ಲೋದದು? ಸರಿಯಾಗಿ ಹುಡಕವ್ವ. ನೀನೇ ಮರ‍್ತುಬುಟ್ಟು ಇನ್ನೆಲ್ಲಾದ್ರೂ ಇಟ್ಟಿದ್ದೀಯ ಅಂತ ನೆಪ್ ಮಾಡ್ಕೊ.

( ಅತ್ತೆಯ ಮಾತುಗಳಿಂದ ಕೆರಳಿದ ಸೊಸೆಯು ದೊಡ್ಡದನಿಯಲ್ಲಿ ಕಿರಿಚಾಡುತ್ತಾ , ಮನೆಯಲ್ಲೆಲ್ಲಾ ಹುಡುಕತೊಡಗುತ್ತಾಳೆ . ಮಗಳು ತನ್ನ ಮಗುವನ್ನು ತಬ್ಬಿಕೊಂಡು ಅಳತೊಡಗುತ್ತಾಳೆ. ಇದಾದ ತುಸು ಹೊತ್ತಿನಲ್ಲಿ ಮನೆಗೆ ಮಗನು ಬರುತ್ತಿದ್ದಂತೆಯೇ ತಾಯಿಯು ಅವನಿಗೆ ಎಲ್ಲವನ್ನೂ ತಿಳಿಸುತ್ತಾಳೆ . ನೀರುಮನೆಯ ಕಿಟಕಿಯಲ್ಲಿ ತನ್ನ ಹೆಂಡತಿಯು ಬಿಚ್ಚಿಟ್ಟಿದ್ದ ಚಿನ್ನದ ಸರವನ್ನು ತಾನು ಜೋಪಾನವಾಗಿ ಎತ್ತಿಟ್ಟಿರುವುದಾಗಿ ಹೇಳಿ , ತನ್ನ ಹೆಂಡತಿಯ ಬೇಜವಾಬ್ದಾರಿತನಕ್ಕೆ ಬುದ್ದಿ ಕಲಿಸಬೇಕೆಂಬ ಉದ್ದೇಶದಿಂದ ಹಾಗೆ ಮಾಡಿದ್ದಾಗಿ ತಿಳಿಸಿದಾಗ, ನಾದಿನಿಯ ಮೇಲೆ ಆರೋಪ ಹೊರಿಸಿದ್ದ ಅತ್ತಿಗೆಯು ಸುಮ್ಮನೆ ತನ್ನಲ್ಲಿಯೇ ಏನೇನೊ ಗೊಣಗುಟ್ಟುತ್ತ ಸುಮ್ಮನಾಗುತ್ತಾಳೆ)

( ಚಿತ್ರಸೆಲೆ: whotalking.com ) 

ನಿಮಗೆ ಹಿಡಿಸಬಹುದಾದ ಬರಹಗಳು

3 Responses

ಅನಿಸಿಕೆ ಬರೆಯಿರಿ:

Enable Notifications OK No thanks