ಮಾಳ್ಕೆಯ ಕಲಿಯಳವಿನ ಸುತ್ತ

ಅಮರ್.ಬಿ.ಕಾರಂತ್.

AI

ಮೋರೆಯೋದುಗೆಯನ್ನೊಮ್ಮೆ(Facebook) ಬೆರಳಾಡಿಸುತ್ತ ಮೇಲಿನಿಂದ ಕೆಳಗೆ ಕಣ್‍ಹಾಯಿಸಿದರೆ ಸಾಕು, ತಲೆಯೆಲ್ಲಾ ಚಿಟ್ಟುಹಿಡಿದಂತಾಗುವುದು. ಅದ್ಯಾರದ್ದೋ ಹುಟ್ಟುಹಬ್ಬದ ನಲಿವು, ಇನ್ಯಾರದ್ದೋ ಮದುವೆಯ ಬೆಡಗು, ಅಲ್ಲಿ ಅರದ (Religion) ಹೆಸರಲ್ಲಿ ಹೊಡೆದಾಟ, ಇಲ್ಲಿ ಹಣದ ಕೆಸರಲ್ಲಿ ಹುಯ್ದಾಟ, ನೆಮ್ಮುಗಳ, ನುಡಿಗಳ, ನೋಟಗಳ ದಬ್ಬಾಳಿಕೆಯ ನೋವು, ಅವುಗಳನ್ನು ಎದುರಿಸುವವರ ಕೆಲಸಗಳಿಗೆ ಕುತ್ತು ತಂದೊಡ್ಡುವ ಅಗ್ಗಳಿಗರ ಪೊರೆಯ ಕಾವು. ಅಬ್ಬಬ್ಬಾ! ಇನ್ನೂ ಎಶ್ಟೆಲ್ಲಾ ಪಿರಿಪಿರಿಯನ್ನು ಈ ಕೂಟತಾಣದಿಂದ ಬಗೆಹೀರಿಕೊಳ್ಳಬೇಕೋ ಎಂದು ಮಡಿಲೆಣಿಯನ್ನು (Laptop) ಮುಚ್ಚುವ ಮೊದಲು, ನಿಮ್ಮ ಬಗೆಯಲ್ಲಿ ಹೀಗೊಂದು ಹೊಳಹು ಹೊಳೆದರೆ ಹೇಗೆ? “ಈ ಮೋರೆಯೋದುಗೆಯು ಒಂದುನಾಳು, ನಮಗೆ ನಲಿವೆನಿಸುವಂತದ್ದನ್ನೇ ತೋರಿಸುವಂತಾದರೆ? ಬೇಸರವೆನಿಸಿದಾಗ ಹರಟಲು ಮಿಂಗೆಳೆಯ/ಗೆಳತಿಯರನ್ನು ಒದಗಿಸುವಂತಾದರೆ? ಬರುಬರುತ್ತಾ ಮೋರೆಯೋದುಗೆಯೇ ಯಾವ ನಿಜವಾದ ಗೆಳೆಯ/ಗೆಳತಿಗೂ ಸಾಟಿಯಾಗಬಲ್ಲ ಗೆಳೆತನದ ಕಂಪನ್ನು ಹೊಮ್ಮುವಂತಾದರೆ?”

ಇವು ಪೊಳ್ಳುಬಗೆಯ ಜಳ್ಳುಕೇಳ್ವಿಗಳೆಂದು ಹಳಿಯದಿರಿ. ಏಕೆಂದರೆ, ಇಂತಹ ಕೇಳ್ವಿಗಳು, ಸರಿಸುಮಾರು ಉರುವಲು (Fuel) ನೆರವಿನ ಬಿಣಿಗೆಗಳು (Engine) ಹುಟ್ಟಿಕೊಂಡಾಗಲೇ ಮಂದಿಗಳ ಕೂರಿನಲ್ಲಿ ಮೂಡಿದ್ದವು. ಕೆಲಸಕ್ಕೆ ತೊಡಗಲು ನಮ್ಮ ನೆರವು ಬೇಕಾದರೂ, ಒಮ್ಮೆ ತೊಡಗಿತೆಂದರೆ ಬಿಣಿಗೆಯು ತನ್ನಳವಿನಿಂದಲೇ ಕೆಲಸಮಾಡುತ್ತದೆ. ಎತ್ತುಗೆಗೆ, ನೀರೆತ್ತುಗವನ್ನೇ (Water pump) ತೆಗೆದುಕೊಳ್ಳಿ. ಒಮ್ಮೆ ತೊಡಗುಂಡಿ (start button) ಒತ್ತಿದರೆ ಸಾಕು, ಮೇಲ್ತೊಟ್ಟಿಯಲ್ಲಿನ ನೀರಿನ ಮಟ್ಟವನ್ನು ಅಳೆದು, ಬೇಕೆನಿಸಿದಾಗ ಬೇಕೆನಿಸುವಶ್ಟು ನೀರನ್ನು ಕೆಳತೊಟ್ಟಿಯಿಂದ ಎಳೆದು, ತುಂಬಿಸಿ, ಒಂದುಮಟ್ಟಕ್ಕೆ ನೀರು ತಲುಪಿದಂತೆ ತನ್ತಾನೇ ನೀರೆತ್ತುಗ ಕೆಲಸವನ್ನು ನಿಲ್ಲಿಸುತ್ತದೆ. ಅಂದರೆ, ಒಬ್ಬ ಆಳು ನೀರಿನ ಮಟ್ಟವನ್ನು ತನ್ನ ಕಣ್ಣುಗಳಿಂದಲೇ ಅಳೆದು, ಕಯ್ಗಳಿಂದಲೇ ನೀರನ್ನು ಸೇದಿ, ತೊಟ್ಟಿಗೆ ತುಂಬಿಸುವ ಕೆಲಸವನ್ನೇ ಈ ಬಿಣಿಗೆಯೂ ಮಾಡುತ್ತದೆ. ಅಂದರೆ ಇಲ್ಲಿ, ಮೆದುಳು, ನೆತ್ತರು, ಎಲುಬುಗಳನ್ನುಳ್ಳ ಆಳನ್ನು ಪೊನ್ನು, ಸರಿಗೆ, ಸೀರುಚೆಕ್ಕೆಗಳಿಂದ (microchips) ಕೂಡಿದ ಬಿಣಿಗೆಯೊಂದು ಹಿಂದಟ್ಟಿದೆ. ಮಂದಿ ಮಾಡಲಾಗುವ, ಮಾಡಲಾಗದ ಎಶ್ಟೋ ಕೆಲಸಗಳನ್ನು ಈಗಿನ ಬಿಣಿಗೆಗಳು ಸುಳುವಾಗಿ, ಚೊಕ್ಕಟವಾಗಿ ಮಾಡುತ್ತಿವೆ. ಇಂತಹ ಬಿಣಿಗೆಗಳನ್ನು “ಮಾಳ್ಕೆಯ ಕಲಿಯಳವಿನ ಬಿಣಿಗೆಗಳು” (Artificially Intelligent Machines), ಇಲ್ಲಾ, “ಚೂಟಿ ಏರ‍್ಪಾಡುಗಳು” (Smart Systems) ಎಂದು ಕರೆಯಬಹುದು.

ಓದುಗರಿಗೆ ಇಂತಹ ಹಲವಾರು ಚೂಟಿ ಬಿಣಿಗೆಗಳು ಗೊತ್ತಿರಬಹುದು. ಇವುಗಳ ಕುರಿತಾಗಿ ಸಾಕಶ್ಟು ಬರಹಗಳೂ ಮೂಡಿವೆ. ಹಾಗಾಗಿ, ಅವುಗಳ ಒಳಗಿನ ಇಟ್ಟಳ, ಪೊಳಕುಗಳ (structure and shape) ಕುರಿತು ಇಲ್ಲಿ ಆರಯ್ಯುವುದಕ್ಕಿಂತ, ಬೇರೊಂದು ಆಯದಲ್ಲಿ ಈ ಚೂಟಿಗಳನ್ನು ಅಳೆದು ತೂಗಲು ನಾವು ಅಣಿಯಾಗೋಣ.

ಈಗಾಗಲೇ ಚೂಟಿಬಿಣಿಗೆಗಳ ಬಗ್ಗೆ ನಿಮ್ಮಲ್ಲಿರುವ ಅನ್ನಿಸಿಕೆಗಳನ್ನು ಒಂದೊತ್ತು ಬದಿಗಿರಿಸಿ. ಮೊದಲ ಕುರಳಿನಲ್ಲಿ (paragraph) ಎತ್ತಿರುವ ಕೇಳ್ವಿಗಳತ್ತ ಮತ್ತೊಮ್ಮೆ ಕಣ್ಹಾಯಿಸಿ. “ಬೇಸರವೆನಿಸಿದಾಗ ಹರಟುವ ಮಿಂಗೆಳೆಯ/ಗೆಳತಿಯರು” ಎಂದರೆ, ಆ ಮಾಳ್ಕೆಯ ಗೆಳೆಯರು ನಮಗಿಂತ ಹೆಚ್ಚು ಚೂಟಿಯೂ, ಅಳವಿಗರೂ ಆಗಿರಬೇಕು ಅಂತಲ್ಲ. ಒಂದು ಸೂಳು ಹಾಗೇನಾದರೂ ಆದರೆ, ಅವು ನಮ್ಮ ಗೆಳೆಯರಾಗಲಾರವು! ನಮ್ಮ ಕಣ್ಗಳಿಗೆ ಅವು ಬರಿ ಎಣಿಸುವ ಬಿಣಿಗೆಗಳಶ್ಟೇ ಆಗಿ ಕಾಣುತ್ತವೆ! ಹಾಗಾಗಿ, ಆ ಗೆಳೆತನದಲ್ಲಿ ನಾವು ಬಯಸುವುದು ತಿಳಿವಿನಲ್ಲಿ, ಚೂಟಿಯಲ್ಲಿ ನಮನ್ನು ಮೀರಿದ ಪರಿಚೆಯಲ್ಲ (nature). ಅದಕ್ಕೆ ಮಾರ‍್ಪಾಗಿ, “ನಮ್ಮಂತಯೇ” ಅವು ಇರಬೇಕು ಎಂಬ ಹಂಬಲ! ಬಗೆ, ಅನ್ನಿಸಿಕೆ, ಒಣರಿಕೆಗಳುಳ್ಳ (feelings) ನಮ್ಮಂತೆಯೇ ಅವು ಮರುನುಡಿಯಬೇಕು ಎಂಬ ಹೆಬ್ಬಯಕೆ! ನಮ್ಮಂತೆಯೇ ಅವು ಗಲಿಬಿಲಿಗೊಳ್ಳುವ, ಸೊಮ್ಮುಗೊಳ್ಳುವ, ಸುಳ್ಳು ಹೇಳುವ, ಕಾಡುಹರಡುವ, ಕೆಲವೊಮ್ಮೆ ಏನನ್ನೂ ಹೇಳದೆ ಸುಮ್ಮನಾಗುವ ಪರಿಚೆಯೆಲ್ಲವನ್ನೂ ಅವು ಒಳಗೊಂಡಿರಬೇಕೆಂಬ ಎಳಸು (desire).

ತಿಳಿಯಾಗಿ, ಕಿರಿದಾಗಿ ಆ ಎಲ್ಲಾ ಕೇಳ್ವಿಗಳನ್ನು ಒಟ್ಟುಗೂಡಿಸಿ ಕೇಳಬೇಕೆಂದರೆ, ಹೀಗೆ ಕೇಳಬಹುದು. “ಬಿಣಿಗೆಗಳು ಮಂದಿಗರಂತೆಯೇ ನಡೆದುಕೊಳ್ಳಲು ಬರುತ್ತದೆಯೇ?” ಇಲ್ಲ, ಒಂದು ಹೆಜ್ಜೆ ಮುಂದೆ ಹೋಗಿ, “ಬಿಣಿಗೆಗಳೂ ಮಂದಿಗರಾಗಲು ಬರುತ್ತದೆಯೇ?”.

ಈ ಎರಡು ಕೇಳ್ವಿಗಳು ಮೇಲ್ನೋಟಕ್ಕೆ ಒಂದೇ ಅಂತ ಅನ್ನಿಸಿದರೂ, ಅದರ ಒಳಹುರುಳುಗಳು ಬೇರೆಬೇರೆಯೇ ಇವೆ. ಮೊದಲ ಕೇಳ್ವಿ, “ಬಿಣಿಗೆಗಳು ನಮ್ಮನ್ನು ಅಣಕಿಸಬಲ್ಲವೇ?” ಎಂಬುದಕ್ಕೆ ಹೆಚ್ಚು ಹತ್ತಿರ. ಎರಡನೆಯ ಕೇಳ್ವಿ, “ಬಿಣಿಗೆಗಳು ನಮ್ಮಂತೆಯೇ ಆಗಬಲ್ಲವೇ?” ಎಂಬುದಕ್ಕೆ ಹೆಚ್ಚು ಹತ್ತಿರ. ಇವೆರಡು ನೋಟಗಳ ಬೇರ‍್ಮೆ ಬಾನ್ನೆಲದಶ್ಟಿದೆ. ಡಾ||ರಾಜ್‍ಕುಮಾರ್ ಅವರನ್ನು ಅಣಕ (Imitate) ಮಾಡುವುದು ಮೊದಲ ಕೇಳ್ವಿಯನ್ನು ಸರಿಹೊಂದಿದರೆ, ತಾನೇ ರಾಜ್‍ಕುಮಾರ್ ಆಗುವುದು ಎರಡನೇ ಕೇಳ್ವಿಗೆ ಎತ್ತುಗೆ! ಆದರೂ, ಅರಿಮೆಯ ನೋಟದಿಂದ ಎರಡನೆಯ ಕೇಳ್ವಿಗಿಂತ ಮೊದಲ ಕೇಳ್ವಿಗೆ ಹೆಚ್ಚಿನ ಪೆರ‍್ಮೆಯಿದೆ. ಏಕೆಂದರೆ, ಎಲ್ಲಾ ಚೂಟಿಬಿಣಿಗೆಗಳೂ ಮಂದಿ ಕಲಿಯಳವನ್ನು ಅಣಕಮಾಡುತ್ತವೆಯೇ ಹೊರತು, ನಮಗಿರುವಂತೆ “ಬಗೆ” ಎಂಬುದೊಂದು ಅವುಗಳ ಗೇಯ್ಮೆಗಳ ಹಿಂದೆ ಇರುವುದಿಲ್ಲ.

ಕೊನೆಯ ಅಯ್ಬನ್ನು ಆಮೇಲೆಗೆ ಬಿಟ್ಟು, ಈಗ ಬಿಣಿಗೆಗಳ ಅಣಕುತನವನ್ನಶ್ಟೇ ಆರಯ್ಯೋಣ. ಇಲ್ಲಿಯವರೆಗೂ ಮಂದಿಯ ಅಶ್ಟೋ ಇಶ್ಟೋ ಪರಿಚೆಗಳನ್ನು ಬಿಡಿಬಿಡಿಯಾಗಶ್ಟೇ ಅಣಕಿಸುತ್ತಿದ್ದ ಬಿಣಿಗೆಗಳು, ಮುಂದ್ಯಾವತ್ತಾದರೂ ನಮ್ಮ ಎಲ್ಲವನ್ನೂ ಅಣಕಿಸುವಶ್ಟು ಹಿರಿದಾಗಿ ಬೆಳೆದೀತೇ? ಎಶ್ಟರ ಮಟ್ಟಿಗೆ ಎಂದರೆ, ಅವು ನಿಜವಾಗಿಯೂ ಬಿಣಿಗೆಗಳೋ, ಮಂದಿಗಳೋ ಎಂಬ ನಚ್ಚನ್ನು (doubt) ನಮ್ಮಲ್ಲಿ ಮೂಡಿಸುವವರೆಗೆ. ಈ ನಿಟ್ಟಿನಲ್ಲಿ ಹಲವಾರು ಓರುಗಳು ಹರಿದಿವೆ. ಇವುಗಳಲ್ಲೆಲ್ಲಾ ಅರಿದಾದ, ಹೆಸರುಮಾಡಿರುವ ಓರು (thought) “ಟ್ಯೂರಿನ್‍ನ ಒರೆತ” (Turin’s test – ಎಣಿಕೆಯರಿಗ, ಎಣ್ಣುಕದರಿಗ “ಅಲಾನ್ ಟ್ಯೂರಿನ್” ಅವರು 1950ರ ಸುತ್ತಮುತ್ತ ತೇಲಿಬಿಟ್ಟಿದ್ದ ಹೊಳಹು). ಈ ಒರೆತಕ್ಕೆ ಅವರು ಬಳಸಿಕೊಂಡಿದ್ದು “ಅಣಕಾಟ” (Imitation game).

ಈ ಅಣಕಾಟವೆಂದರೇನೆಂದು ಮೊದಲು ನೋಡೋಣ. ಹಬ್ಬಕ್ಕೋ, ಕೊಂಡಾಟಕ್ಕೋ ನೆರೆದಿರುವ ಮಂದಿಗಳು ಚೆಲ್ಲಾಟಕ್ಕಾಗಿ, ಒಬ್ಬನನ್ನು ಒಂದು ಕೋಣೆಯಲ್ಲಿಯೂ, ಒಬ್ಬಳನ್ನು ಮತ್ತೊಂದು ಕೋಣೆಯಲ್ಲಿಯೂ ಕೂಡಿಹಾಕುತ್ತಾರೆ. ಅವರೀರ‍್ವರ ನಡುವೆ ಯಾವ ಬಗೆಯ ಮಾತುಕತೆಗಳಿಗೂ ತೆರಪಿಲ್ಲ. ಹಾಗೆಯೇ, ಅವರು ಹೊರಗಿನವರೊಂದಿಗೆ ಬರೀ “ಓಲೆ” ಜಂಬರವನ್ನಶ್ಟೇ (Letter business) ಇಟ್ಟುಕೊಳ್ಳಬಹುದು. ಅಂದರೆ, ಹೊರಗಿನವರು ಯಾರೇ ಇವರನ್ನು ಅರುಹಲು (contact) ಬಯಸಿದರೂ, ಇವರ ನಡುವೆ ಮಾತಿನ, ನೋಟದ ಕೊಡುಕೊಳ್ಳುವಿಕೆ ನಡೆಯುವುದಿಲ್ಲ. ಅದಕ್ಕೆ ಮಾರ‍್ಪಾಗಿ, ಹೊರಗಿನವರು ಇವರಿಗೊಂದು ಓಲೆಬರೆದು ಕೋಣೆಯೊಳಗೆ ನೂಕುತ್ತಾರೆ. ಮರಳಿ ಆ ಓಲೆಗೆ ಆತನೋ, ಆಕೆಯೋ ಪಡಿನುಡಿ ಬರೆದೋ, ಪಡಿಕೇಳ್ವಿ ಕೇಳೋ ಮಾತುಕತೆಯನ್ನು ಮುಂದುವರೆಸಬಹುದು. ಈ ಓಲೆಗಳ ಕೊಡುಕೊಳ್ಳುವಿಕೆಗೆ ಯಾವ ಎಲ್ಲೆಯೂ ಇಲ್ಲ. ಇವಿಶ್ಟೂ ಆಟದ ಕಟ್ಟಲೆಗಳು. ಆದರೆ, ಆಟದ ಹುರುಳೇನು? ಇಶ್ಟೇ. ಯಾವ ಕೋಣೆಯಲ್ಲಿ ಯಾರು ಇದ್ದಾರೆ ಎಂದು ತಿಳಿಯದ ಒಬ್ಬ/ಒಬ್ಬಳು ಬರೀ ಓಲೆಗಳ ಕೊಡುಕೊಳ್ಳುಗಳಿಂದ ಯಾವ ಕೋಣೆಯಲ್ಲಿ ಗಂಡಿದ್ದಾನೆಂದೂ, ಯಾವ ಕೋಣೆಯಲ್ಲಿ ಹೆಣ್ಣಿದ್ದಾಳೆಂದೂ ತಿಳಿಯಬೇಕು. “ಅರೆ! ಇದೇನಿದು ಈ ಆಟ ಇಶ್ಟು ಸುಳುವಾಗಿದೆ. ನೇರವಾಗಿ ನೀನು ಗಂಡೋ ಹೆಣ್ಣೋ ಎಂದು ಕೇಳಿದರೆ ಸಾಕಲ್ಲವೇ ಓಲೆಯಲ್ಲಿ ನಿಜ ತಿಳಿಯಲು?” ಎಂದು ಓರಿದಿರಾ? ಇಲ್ಲೇ ಆಟದ ಸೊಮ್ಮಿಕೆಯಿರುವುದು. ಕೋಣೆಯಲ್ಲಿನ ಗಂಡು ಇಲ್ಲವೇ ಹೆಣ್ಣು “ನಾನವನಲ್ಲ, ನಾನವಳಲ್ಲ” ಎಂದು ಹುಸಿನುಡಿಯಲು ತೊಡಗಿದರೆ?! ಬೇಕಂತಲೇ ಒಳಗಿರುವ ಹುಡುಗನು ತಾನು ಹುಡುಗಿಯೆಂದೂ, ಹುಡುಗಿಯು ತಾನು ಹುಡುಗನೆಂದೂ ನಂಬಿಸಲು ಹೆಣಗಿದರೆ? ಈಗ ನಿಜವನ್ನು ತಿಳಿಯುವುದು ತುಂಬ ತೊಡಕು. ಅಳೆದು, ತೂಗಿ, ಸರಿಯಾಗಿ ಎಣಿಸಿಯೇ ಹೊರಗಿನ ಆಟಗಾರ, ತಕ್ಕ ಕೇಳ್ವಿಗಳನ್ನು ಓಲೆಗಳಲ್ಲಿ ಆ ಕೋಣೆಗಳಲ್ಲಿರುವವರಿಗೆ ಕೇಳಬೇಕಾಗುತ್ತದೆ.

ಇದು ಅಣಕಾಟ. ಇಲ್ಲೆಲ್ಲಿ ಇದ್ಯಪ್ಪಾ ನಮ್ಮ ಚೂಟಿಬಿಣಿಗ, ಎಂದು ಎಣಿಸಿದ್ರೇ? ಇಲ್ಲೇ ಅಲಾನ್ ಟ್ಯೂರಿಂಗ್ ತನ್ನ ಉನ್ನಿಕೆಯನ್ನು ಹರಿಬಿಟ್ಟಿದ್ದು. ಇವನ ಹೊಸ ಅಣಕಾಟದ ಮಟ್ಟಿಗೆ, ಎರಡು ಕೋಣೆಗಳಲ್ಲಿ ಒಂದರಲ್ಲಿ ಹುಡುಗಿಯಿರುತ್ತಾಳೆ. ಆದರೆ, ಇನ್ನೊಂದರಲ್ಲಿ ಹುಡುಗನಿಗೆ ಮಾರ‍್ಪಾಗಿ, ಚೂಟಿ ಬಿಣಿಗೆ (ಇಲ್ಲ ಎಣ್ಣುಕ – computer) ಇರುತ್ತದೆ. ಈ ಹುರುಳು ಹೊರಗಿನ ಆಟಗಾರನಿಗೆ ಗೊತ್ತಿರುವುದಿಲ್ಲ! ಆ ಆಟಗಾರನ ಮಟ್ಟಿಗೆ ಕೋಣೆಗಳಲ್ಲಿರುವವರು ಒಂದಾ ಗಂಡು, ಇಲ್ಲಾ ಹೆಣ್ಣು. ಈಗ, ಹಾಳೆಯ ಓಲೆಗಳಿಗೆ ಮಾರ‍್ಪಾಗಿ ಒತ್ತುವ ಕೀಲಿಮಣೆಗಳಿವೆ (keyboard), ಒಸಗೆಗಳನ್ನು ಕಾಣಲು ತೋರುಕಗಳಿವೆ (Monitor). ಈ ಏರ‍್ಪಾಡಿನಲ್ಲಿ, ಮೊದಲಿಗೆ ಹೊರಗಿನ ಒಬ್ಬ ಆಟಗಾರ ಬಂದು ತನ್ನ ಕೀಲಿಮಣೆಯಿಂದ ಒಂದು ಒಸಗೆಯನ್ನು ಒತ್ತಿ ಕಳಿಸುತ್ತಾನೆ. ಅದು, ಒಂದು ಕೋಣೆಯಲ್ಲಿನ ಹುಡುಗಿಗೂ, ಇನ್ನೊಂದು ಕೋಣೆಯಲ್ಲಿನ ಬಿಣಿಗೆಗೂ ತಲುಪುತ್ತದೆ. (ಬೇಕಾದರೆ ಬೇರೆಬೇರೆಯಾಗಿಯೇ ಒಸಗೆಗಳನ್ನು ಕಳುಹಿಸಬಹುದು). ಒಸಗೆ ಸಿಕ್ಕಿದ ಬಳಿಕ, ಹುಡುಗಿಯು ಅವಳ ಬಳಿಯಿರುವ ಕೀಲಿಮಣೆಯಿಂದ ಪಡಿನುಡಿಯನ್ನು ಒತ್ತಿ ಕಳಿಸುತ್ತಾಳೆ. ಈ ಪಡಿನುಡಿಯು ಹೊರಗಿನ ಆಟಗಾರನ ತೋರುಕದಲ್ಲಿ ಕಾಣುತ್ತದೆ. ಆದರೆ, ಇನ್ನೊಂದು ಕೋಣೆಯಲ್ಲಿನ ಎಣ್ಣುಕ ಏನು ಮಾಡುತ್ತದೆ? ಅದೂ ಬರೆದು ಕಳಿಸುತ್ತದೆ! ಅಂದರೆ, ಅಲ್ಲಿ ಒತ್ತುವವರು ಯಾರೂ ಇಲ್ಲದಿದ್ದರೂ, ಹೊರಗಿನವ ಬರೆದ ಒಸಗೆಯು ನೇರವಾಗಿ ಈ ಎಣ್ಣುಕಕ್ಕೇ ಬಂದಿರುವುದರಿಂದ, ತನ್ನಲ್ಲಿರುವ ಹಮ್ಮುಗೆಗಳನ್ನು (Programs) ಬಳಸಿಕೊಂಡು ತನ್ನದೇ ಆದ ಪಡಿನುಡಿಯನ್ನು ಅದು ಕಕ್ಕುತ್ತದೆ! ಇದೂ ನೇರವಾಗಿ ಹೊರಗಿನವನ ತೋರುಕದ ಮೇಲೆ ಕಾಣುತ್ತದೆ. ಆದರೆ, ಇದನ್ನು ಮೂಡಿಸಿದ್ದು ಒಂದು ಎಣ್ಣುಕ ಎಂದು ಹೊರಗಿನವನಿಗೆ ಗೊತ್ತಿರುವುದಿಲ್ಲ.

ಕೋಣೆಯಲ್ಲಿನ ಎಣ್ಣುಕದ ಸುಳಿವೇ ಇಲ್ಲದ ಈ ಹೊರಗಿನವನಿಗೆ ಒಳಗಿರುವುದು ಒಂದು ಎಣ್ಣುಕ ಎಂಬ ಅಯ್ಬು (suspicion) ಮೂಡಲು, ಆ ಎಣ್ಣುಕವು ಮಂದಿಗಳು ತೋರದ ಪರಿಚೆಯನ್ನು ತೋರಬೇಕಾಗುತ್ತದೆ. ಎತ್ತುಗೆಗೆ, “ಎರಡು ಹನ್ನೂರ ನಾನೂರಿಪ್ಪತ್ತಯ್ದನ್ನು ಹದಿನಾಲಕ್ಕರಿಂದ ಬಗೆದರೆ ಸಿಗುವ ಬೆಲೆಯೆಶ್ಟು?” ಎಂದು ಕೇಳಿದರೆ, ಹುಡುಗಿಗೆ ಆ ತೊಡಕನ್ನು ಬಿಡಿಸಲು ಕೆಲಹೊತ್ತಾದರೂ ಬೇಕಾಗುತ್ತದೆ. ಆದರೆ, ಎಣ್ಣುಕವೆಲ್ಲಾದರೂ ಒಡನೆಯೇ ಆ ತೊಡಕನ್ನು ಬಿಡಿಸಿ ದೊರೆತವನ್ನು (result) ನೀಡಿತೆಂದಾದರೆ, “ಓ, ಎಲ್ಲೋ ಎಡ್ವಟ್ ಆಗಯ್ತೆ!” ಎಂಬ ಅರೆಮರಿಕೆ ಬಾರದಿರದು! “ಒಬ್ಬ ಸರಾಸರಿ ಆಳಿಗೆ ತಗಲುವ ಹೊತ್ತಿಗಿಂತ ಇಶ್ಟು ಬಿರುಸಿನಲ್ಲಿ ತೊಡಕನ್ನು ಬಿಡಿಸಿದೆಯೆಂದರೆ, ಇದು ನಿಜಕ್ಕೂ ಎಣ್ಣುಕವೇ ಇರಬೇಕು” ಎಂಬ ನಿಲುವಿಗೆ ಹೊರ ಆಟಗಾರ ಬರುತ್ತಾನೆ. ಹಾಗಾಗಿ, ಒಂದು ಎಣ್ಣುಕದ ಹಮ್ಮುಗೆಯು ಮಂದಿಯ ಬಗೆಯಂತೆಯೇ ನಡೆದುಕೊಳ್ಳಬೇಕಾದರೆ, ಅದು ತನ್ನ “ಚೂಟಿ”ತನವನ್ನು ಬದಿಗಿರಿಸಿ, ನಿಜವಾದ ಒಬ್ಬ ಆಳು ಯಾವ ಬಗೆಯಲ್ಲಿ ಹೊರಗಿನ ಆಗುಹಗಳಿಗೆ, ತೊಡಕು-ಕೆಡಕುಗಳಿಗೆ ಮಾರೆಸಗುತ್ತಾನೋ, ಅಂತೆಯೇ ನಡೆದುಕೊಳ್ಳಬೇಕಾಗುತ್ತದೆ. ಈ ಎಣಿಕೆಯ ತೊಡಕಿಗೆ ಬರುವುದಾದರೆ, ಆ ಎಣ್ಣುಕವು ಒಡನೆಯೇ ದೊರೆತವನ್ನು ನೀಡಬಾರದು. ಅದರ ಒಳಹಮ್ಮುಗೆ ಹೇಗಿರಬೇಕೆಂದರೆ, ಕೊಟ್ಟ ತೊಡಕನ್ನು ಬಿಡಿಸಲು ಒಬ್ಬ ಸರಾಸರಿ ಆಳು ಎಶ್ಟು ಹೊತ್ತು ತೆಗೆದುಕೊಳ್ಳಬಹುದು (ಎಲ್ಲಾ ಆಳುಗಳೂ ಒಂದೇ ಬಗೆಯಲ್ಲಿ ಆ ತೊಡಕನ್ನು ಬಿಡಿಸಲಾರರು ಎಂಬುದನ್ನೂ ಗಮನದಲ್ಲಿರಿಸಿಕೊಂಡು) ಎಂದು ತಿಳಿದು, ತಕ್ಕ ಹೊತ್ತನ್ನು ಕಳೆದ ಬಳಿಕವೇ ದೊರೆತವನ್ನು ಹೊರ ಆಟಗಾರನ ತೋರುಕಕ್ಕೆ ಕಳಿಸಬೇಕಾಗುತ್ತದೆ. ನಡುನಡುವೆ, “ನಾನಿನ್ನೂ ತೊಡಕನ್ನು ಬಿಡಿಸುತ್ತಿದ್ದೇನೆ”, “ಅಯ್ಯೋ, ಎಲ್ಲೋ ತಪ್ಪು ಮಾಡಿದೆ”, “ನನಗೆ ಎಣಿಕೆಯಲ್ಲಿ ಅಳವಿಲ್ಲ, ನಾನು ಈ ತೊಡಕನ್ನು ಬಿಡಿಸಲಾರೆ!” ಎಂಬ ಒಸಗೆಯನ್ನು ಹೊರ ಆಟಗಾರನಿಗೆ ಕಳಿಸಬಹುದು. ಆ ಎಣ್ಣುಕವನ್ನು ಕಟ್ಟುವಾಗ ಅದರ ಹಮ್ಮುಗ, ಈ ಎಲ್ಲಾ ಅಡಕರಿವುಗಳನ್ನು (hidden knowledge) ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.

ನಮ್ಮನ್ನು ಎಲ್ಲಾ ಬಗೆಯಲ್ಲಿಯೂ ಅಣಕ ಮಾಡಲು ಹೊರಟ ಬಿಣಿಗೆಗೆ ಮತ್ತಶ್ಟು ಪೋಟಿಗಳು ಎದುರಾಗುತ್ತವೆ. ಮಂದಿಯ ಪರಿಚೆಗಳಾದ ಸಿಟ್ಟು, ಬೇಸರ, ಕಿರಿಕಿರಿ, ಮಯ್ಗಳ್ಳತನ, ಸುಳ್ಳುಹೇಳುವಿಕೆ, ಅರಿವಿಲ್ಲಮೆ, ಕಾಣ್ಕೆಯ್ತದ (art) ಒಲವು-ಅಳವುಗಳು; ಇವೆಲ್ಲವನ್ನೂ ಬಿಣಿಗೆಯು ಅಣಕ ಮಾಡಬೇಕಾಗುತ್ತದೆ! ಎತ್ತುಗೆಗೆ, “ಏನ್ ಮಾಡ್ತಾ ಇದ್ಯಾ?” ಎಂದು ಹೊರ ಆಟಗಾರ ಕೇಳಿದರೆ, ಎಣ್ಣುಕವು “ಸುಮ್ಮನೆ ಕೂತಿದ್ದೀನಿ” ಅಂತ ಒಮ್ಮೆ ಹೇಳುತ್ತದೆ. ಆದರೆ, ಆಟಗಾರ ಬೇಕಂತಲೇ ಮತ್ತೆಮತ್ತೆ ಅದೇ ಕೇಳ್ವಿಯನ್ನು ಕೇಳಿದರೆ ಆ ಎಣ್ಣುಕ ಏನೆಂದು ಮರುನುಡಿಯಬಹುದು? ತಿರುಗಿತಿರುಗಿ “ಸುಮ್ಮನೆ ಕೂತಿದ್ದೀನಿ” ಅಂತ ಹೇಳುತ್ತಾ ಹೊರಟರೆ, ಪಡಿನುಡಿಕೊಡುತ್ತಿರುವುದು ಎಣ್ಣುಕ ಎಂದು ಒಡನೆಯೇ ಹೊರಗಿನವನಿಗೆ ಹೊಳೆಯುತ್ತದೆ! ಏಕೆಂದರೆ, ಯಾವ ಮಂದಿಯೂ ಕೇಳಿದನ್ನೇ ಮತ್ತೆ ಮತ್ತೆ ಕೇಳಿಸಿಕೊಂಡು ಸುಮ್ಮನಿರಲಾರ! “ಒಂದ್ ಸಲ ಹೇಳಿದ್ರೆ ಗೊತ್ತಾಗೊಲ್ವೇ?” ಎಂದೋ, “ಸುಮ್ಮನೆ ನನ್ನ ಕೆಣಕ್ ಬೇಡ” ಎಂದೋ ಹೇಳಿ, ಕೊನೆಗೆ ಯಾವ ಮರುನುಡಿಯನ್ನೂ ಕೊಡದೆ ಸುಮ್ಮನಿರಲೂಬಹುದು ನಾವು ಮಂದಿಗರು! ನಮ್ಮನ್ನು ಅಣಕಿಸುವ ಎಣ್ಣುಕ ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡಿರಬೇಕು (ಎಂದರೆ, ಅದರ ಹಮ್ಮುಗೆಯಲ್ಲಿ ಇವೆಲ್ಲವೂ ಅಡಕವಾಗಿರಬೇಕು). ಅಶ್ಟೇ ಅಲ್ಲದೆ, ಆಗೊಮ್ಮ ಈಗೊಮ್ಮೆ ಕೆ.ಎಸ್.ನ ರವರ ಹಾಡುಗಳ ಸಾಲುಗಳನ್ನೋ, ಮುಂಗಾರಿನ ಬೆಡಗಿನ ನೆನಪುಗಳನ್ನೋ, ತನ್ನ ಎಳವೆಯ (Childhood) ಪುಂಡಾಟಿಕೆಗಳನ್ನೋ ಮಾತುಕತೆಯ ನಡುವೆ ತೂರಿಸಬೇಕಾದೀತು. ತಾನೂ ಮಂದಿಗ ಎಂದು ನಂಬಿಸಲು!

ಇವೆಲ್ಲವನ್ನೂ ಸರಿದೂಗಿಸಿಕೊಂಡು, ಆಟ ಮುಗಿಯುವ ಹೊತ್ತಿನಲ್ಲಿ ಹೊರ ಆಟಗಾರನಿಗೆ ತನ್ನ ಮಂದಿತನದ ಕುರಿತು ಯಾವ ಅಯ್ಬೂ ಬಾರದಂತೆ ನಡೆದುಕೊಳ್ಳುವ ಬಿಣಿಗೆಯು ಈ ಒರೆತವನ್ನು ಗೆದ್ದಂತೆ! ಈ ಹೊಳಹು ಮಯ್ಯಲ್ಲೆಲ್ಲಾ ಪುಳಕವನ್ನೆಬ್ಬಿಸಿದ್ದರೂ, ಇಡಿಯೆಡೆಯ ಅರಿಸುಗರೆಲ್ಲಾ (Global researchers) ಇದು ಕಯ್ಲಾಗದ ಕನಸೆಂದೇ ನಂಬಿದ್ದರು. ಆದರೆ, ಎಣ್ಣುಕರಿಗರ (Computer Scientist), ಎಣಿಕೆಯರಿಗರ (Mathematicians), ಬಿಣಿಗೆಯರಿಗರ (Engineers) ಬಿಡದ ಊಕದಿಂದ (efforts) ಇಂದು ಅಂತಹಾ ಬಿಣಿಗೆಯ ಕನಸು ನನಸಾಗುವ ಹೊಸ್ತಿಲಿನಲ್ಲಿದೆ. ಈ ಏಳಿಗೆಯ ಮೊದಲ ಮೆಟ್ಟಿಲಂತೆ, “ಮಿನ್ನಣಕ”ಗಳು (Cyber-bots) ಹುಟ್ಟಿಕೊಂಡಿವೆ. ಮಿಂಬಲೆಯಲ್ಲಿ ಈಗಾಗಲೇ ಹೆಸರುಮಾಡಿರುವ ಹಲವಾರು ಮಿನ್ನಣಕಗಳು, ನೆಲದ ಹಲವಾರು ಕಲಿವೀಡುಗಳು ಏರ‍್ಪಡಿಸಿರುವ “ಟ್ಯೂರಿನ್ ಒರೆತದ ಪೋಟಿ”ಗಳಲ್ಲಿ ಗೆದ್ದು, “ಮಂದಿಯಣಕವಾಗಬಲ್ಲ ತಕ್ಕ ಮಿನ್ನಣಕ” ಎಂಬ ಅಗ್ಗಳಿಕೆಗಳನ್ನೂ ಪಡೆದುಕೊಂಡಿವೆ. ಹೀಗಿದ್ದರೂ, ಇವೆಲ್ಲವೂ ನೂರಕ್ಕೆ ನೂರು ಮಂದಿಗಳನ್ನು ಅಣಕಮಾಡುವಲ್ಲಿ ಸೋತಿವೆ. ನೂರಕ್ಕೆ ಅಯ್ವತ್ತೋ, ಅರವತ್ತೋ ಅಣಕಿಸುವಲ್ಲಶ್ಟೇ ಗೆದ್ದಿವೆ. ಈ ಪೊಲದಲ್ಲಿ ಸಾಕಶ್ಟು ಕೆಲಸಗಳಾಗಬೇಕಾಗಿವೆ. ಅಲ್ಲದೇ, ಇಂತಹ ಬಿಣಿಗೆಗಳನ್ನು “ಮಾಳ್ಕೆಯ ಕಲಿಯಳವಿನ ಬಿಣಿಗೆಗಳು” ಎಂದು ಕರೆಯುವುದಕ್ಕಿಂತ “ಮಂದಿಯಣಕಗಳು” (Human Imitators) ಎಂದು ಕರೆಯಬಹುದು. ಮಾಳ್ಕೆಯ ಕಲಿಯಳವಿನ (Artificial Intelligence) ಗುರಿಯೂ, ದಾರಿಯೂ ಈ ಮಂದಿಯಣಕಗಳಿಗಿಂತ ಬೇರೆಯೇ ಆಗಿದೆ.

ಕೊನೆಯದಾಗಿ, ಈ ಅಣಕಿನಾಟವನ್ನು ಬಿಟ್ಟು, “ಬಿಣಿಗೆಗಳು ನಮ್ಮಂತೆಯೇ ಆಗಬಲ್ಲವೇ?” ಎಂಬ ಇನ್ನೊಂದು ಹಂತದ ಕೇಳ್ವಿಯನ್ನು ಎದುರುಗೊಳ್ಳೋಣ. ಒಂದು ಸೂಳು, ನೂರಕ್ಕೆ ನೂರು ನಮ್ಮನ್ನು ಅಣಕ ಮಾಡುವ ಬಿಣಿಗೆಗಳು ಬಂದರೂ, ಅವುಗಳಿಗೆ ನಮ್ಮಂತೆ “ಬಗೆ” (mind) ಎಂಬುದೊಂದಿರುತ್ತದೆಯೇ? ಅವು ಮಾಡುವ ಎಲ್ಲಾ ಕೆಲಸಗಳ, ನುಡಿವ ಮಾತುಗಳ “ಅರಿವು” ಅವುಗಳಿಗೆ ಇರುತ್ತದೆಯೇ? “ಇಲ್ಲ” ಎಂಬುದೇ ಹೆಚ್ಚಿನ ಅರಸುಗರ ಪಡಿನುಡಿ. ಇದಕ್ಕೆ ಎತ್ತುಗೆಯಾಗಿ, “ಚೀನಿಯ ಕೋಣೆ” (Chinese room) ಎಂಬ ಓರರಸಿಕೆಯನ್ನು (thought experiment) ನೀಡಲಾಗಿದೆ. ಇದರ ಕನ್ನಡದ ಓರ‍್ಮಾರುಗೆಯನ್ನು (thought translation) ಇಲ್ಲಿ ನೋಡೋಣ.

ಒಬ್ಬ ಕರುನಾಡಿನಲ್ಲಿ ಹತ್ತು ಏಡುಗಳಿಂದ ನೆಲೆಸಿದ್ದರೂ ಕನ್ನಡ ಕಲಿಯಲಿಲ್ಲ. ಇದನ್ನರಿತ ಕೆಲವರು ಅವನನ್ನು ಮಲೆನಾಡಿನ ಕೊರಕಲ ಕೊಂಪೆಯಲ್ಲೆಲ್ಲೋ ಇರುವ ಒಂದು ಒಂಟಿಮೆನೆಗೆ ನೂಕಿ, ಕೂಡಿಹಾಕಿ, ಕನ್ನಡ ಕಲಿಯಲು ಬೇಕಾದ ಓದುಗೆಗಳನ್ನು ಅವನಲ್ಲಿ ಬಿಟ್ಟು, “ಇಲ್ ಕಾಣ್. ಒಂದ್ ತಿಂಗ್ಳ್ ಬಿಟ್ ನಾವ್ ಮರಳಿ ಬತ್‍ಅ. ಹೊರಗಿಂದ್ಲೇ ಒಂದಿಶ್ಟ್ ಕೇಳ್ವಿಗಳನ್ ಕೇಳತ್‍ಅ. ಕನ್ನಡದಂಗೇ. ನೀ ಸಮಾಮಾಡ್ ಕನ್ನಡದಂಗೇ ಮರುನುಡಿ ಕೊಡ್ಲಾ, ನಿನ್ನ ಬೊಜ್ಜ ಮಾಡ್ ಹಾಕ್ತೋ ಹೋಯ್!” ಎಂದು ಎಚ್ಚರಿಸಿ ಹೊರಡುವರು. ಆದರೆ, ಆ ವಲಸಿಗ ಸುಳುವಾಗಿ ಜಗ್ಗುವವನಲ್ಲ! ಒಂದು ಹೂಟ ಹೂಡುತ್ತಾನೆ. ಕನ್ನಡ ಬಲ್ಲ, ಚಳಕಗಳ ಮಲ್ಲ ತನ್ನ ಗೆಳೆಯನಿಗೆ ಒಡನೆಯೇ ಕರೆಮಾಡಿ, ಒಳಬರುವ ಕನ್ನಡ ಪದಗಳಿಗೆ ತಕ್ಕಂತೆ ಕನ್ನಡದಲ್ಲೇ ಮರುನುಡಿಗಳನ್ನು ಅಣಿಗೊಳಿಸಿಕೊಡುವ ಒಂದು ಎಸುಗುಬಗೆಯನ್ನು (algorithm) ಕಟ್ಟಿಕೊಡಲು ಕೋರುತ್ತಾನೆ. ಕುಚ್ಚಿಕೂ ಗೆಳೆಯನಾದ ಅವನು ತಲೆಯಾಡಿಸಿ, ಮರುದಿನವೇ ಅವನಿಗೊಂದು ಎಸುಗುಬಗೆಯನ್ನು ಕಳುಹಿಸುತ್ತಾನೆ. ಅದರಂತೆ, ಯಾವ ಬಗೆಯ ಕನ್ನಡದ ಬರಿಗೆಗಳು ಯಾವ ಎಡೆಗಳಲ್ಲಿ, ಉಲಿಗಳಲ್ಲಿ ಕೇಳಿಬಂದಾಗ, ಯಾವ ಕನ್ನಡ ಬರಿಗೆಗಳನ್ನು ಯಾವ ಎಡೆಗಳಲ್ಲಿ, ಯಾವ ಬಗೆಗಳಲ್ಲಿ ಪೋಣಿಸಿ ಹೇಳಬೇಕು ಎಂಬುದನ್ನು ಕಲಿತ! ಎತ್ತುಗೆಗೆ, “ಕನ್ನಡ ಬರುತ್ತೇನೋ ಈಗ?” ಎಂಬ ಒಳಬರುವ ಪದಗಳ ಮಾದರಿಯನ್ನು ಆ ಎಸುಗುಬಗೆಯ ಕಟ್ಟಲೆಗಳಿಗೆ ಅಳವಡಿಸಿದರೆ, “ಬರುತ್ತದೆ ಕನ್ನಡಿಗರೇ, ಸಿರಿಗನ್ನಡಂ ಗೆಲ್ಗೆ!” ಎಂಬ ಪದಗಳು ಅದೇ ಮಾದರಿಯಲ್ಲಿ ಹೊರಮೂಡಬೇಕು ಎಂದು ಆ ವಲಸಿಗನಿಗೆ ತಿಳಿಯುತ್ತದೆ! ಹೀಗೆ ಆ ಎಸುಗುಬಗೆಯ ಎಲ್ಲಾ ಕವಲುಗಳನ್ನು ಕಲಿತು, ಯಾವ ಬರಿಗೆಗಳು ಹೇಗೆ, ಎಲ್ಲಿ, ಯಾವ ಉಲಿಯಲ್ಲಿ ಬಂದಾಗ ಯಾವ ಬರಿಗೆಗಳನ್ನು ಹೇಗೆ, ಎಲ್ಲಿ, ಯಾವ ಉಲಿಯಲ್ಲಿ ಪೋಣಿಸಿ ಹೇಳಬೇಕು ಎಂಬುದನ್ನು ಕಲಿತ! ಕನ್ನಡ ನುಡಿಗಟ್ಟಿನ ಎಲ್ಲಾ ಪದಗಳ, ಸೊಲ್ಲುಗಳ ಸೇರಿಕೆ (combination), ಓರಣಗಳನ್ನು (permutation) ಒಳಗೊಂಡಿರುವ ಎಸುಗುಬಗೆಯದು! ಅದನ್ನು ಬಳಸಿ ಹೊಸ ಹಾಡನ್ನು ಕಟ್ಟಬಹುದು, ಪೆರ‍್ಕತೆಗಳನ್ನೂ ಬರೆಯಬಹುದು! ಹೀಗೆ, ಒಂದು ತಿಂಗಳ ಬಳಿಕೆ ಕನ್ನಡಿಗರು ಒಡ್ಡಿದ ಒರೆತದಲ್ಲಿ ತೇರ‍್ಗಡೆಯಾದ! ಆದರೆ, ಅವನು ನಿಜವಾಗಿಯೂ ಕನ್ನಡ ಅರಿತಿದ್ದನೇ? ಆ ಪದಗಳ ಹುರುಳಿನ “ಅರಿವು” ಅವನಿಗಿತ್ತೇ? ಇಲ್ಲ! ಅಂತೆಯೇ ಮಂದಿಯಣಕಗಳು, ಎಂಬುವುದು ಹಲವು ಅರಸುಗರ ಅನ್ನಿಸಿಕೆ.

ಇವೆಲ್ಲ ಆರಯ್ಯುಗಳು (discussions) ಏನೇ ಇರಲಿ, ಮಂದಿಯಣಕಗಳ ಅರಕೆಯನ್ನು ಅರಸುಗರ ಬೆನ್ನುತಟ್ಟಿ ಹುರಿದುಂಬಿಸೋಣ. ಈ ಅರಕೆಯಿಂದ ಉಪೇಂದ್ರರ “ಹಾಲಿವುಡ್”, ರಜನಿಯ “ರೋಬೋ” ಮಾದರಿಯ ಮಂದಿಯಣಕಗಳು ಈ ನೂರೇಡಿಯಲ್ಲಿ (Century) ಹೊರಬೀಳದಿದ್ದರೂ, ನಮ್ಮನ್ನು ಇನ್ನೊಂದರಲ್ಲಿ ಮರುಹೊಳೆಸುವ ಊಕದಿಂದಾಗಿ ನಮ್ಮ ಮೆದುಳು, ಬಗೆ, ಒಡಲಿನ ಕುರಿತು ಹೆಚ್ಚಿನದ್ದನ್ನು ತಿಳಿಯಬಹುದು. ಈ ನಿಟ್ಟಿನಲ್ಲಿ ಅರಕೆಯು ಎಡರುತೊಡರುಗಳಿಲ್ಲದೆ ಮುಂದುವರೆಯಲಿ ಎಂದು ಹಾರಯ್ಸೋಣ.

(ಮಾಹಿತಿ ಮತ್ತು ತಿಟ್ಟ ಸೆಲೆ: wikipedia , iqworkforce.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: