ಪತ್ತೇದಾರಿ ಕತೆ: ಮಾಯವಾದ ಹೆಣ(ಕೊನೆ ಕಂತು)
– ಬಸವರಾಜ್ ಕಂಟಿ.
ತಮಗೆ ಸಿಕ್ಕ ಮಾಹಿತಿಯನ್ನಿಟ್ಟುಕೊಂಡು ಪುಲಕೇಶಿ ಮತ್ತು ರವಿಕುಮಾರ್ ಅವರಿಗೆ ಹೆಚ್ಚಿಗೆ ಮುಂದುವರಿಯಲು ಆಗಲಿಲ್ಲ. ಕೊಲೆಯ ಉದ್ದೇಶವನ್ನು ಹುಡುಕುವಲ್ಲಿ ಸೋತರು. ಒಂದೆರಡು ದಿನಗಳು ಕಳೆದ ಮೇಲೆ, ತನ್ನ ಬಳಿಗೆ ಬಂದಿದ್ದ ರಾಗವೇಂದ್ರರ ಅಕ್ಕನ ಮಗಳು ರಶ್ಮಿಯನ್ನು ಕಂಡು ಬರಲು ಅವರ ಮನೆಗೆ ಹೋದನು ಪುಲಕೇಶಿ. ಎರಡು ಕೋಣೆಗಳ ಪುಟ್ಟ, ಬಾಡಿಗೆ ಮನೆ. ಮನೆಯನ್ನು ನೋಡಿದರೆ ಅಶ್ಟೇನು ಅನುಕೂಲಸ್ತರು ಎಂದು ಅನಿಸಲಿಲ್ಲ. ಮಾತಿಗೆ ಸಿಕ್ಕ ಪುಲಕೇಶಿಯವರಿಗೆ ತಮ್ಮ ಮನೆಯ ಹಿನ್ನಲೆಯನ್ನೆಲ್ಲ ಹೇಳಿದಳು ರಶ್ಮಿ. ತಮ್ಮ ತಾಯಿ ತೀರಿಹೋದದ್ದು, ರಾಗವೇಂದ್ರ ಅವರು ಅವರನ್ನೆಲ್ಲ ಸಲಹಿದ್ದು, ಹೀಗೆ ಬಿಡುವಿಲ್ಲದ ಕತೆ ಕೇಳುತ್ತಾ ಪುಲಕೇಶಿಗೆ ತುಸು ಕಿರಿಕಿರಿಯಾಯಿತು.
“ಅವ್ರಿಗೆ ಬರ್ತಾಯಿದ್ದ ಸಂಬಳದಲ್ಲೇ ಅವರ ಮಕ್ಕಳನ್ನಾ, ಜೊತೆಗೆ ನಮ್ಮನ್ನೂ ಹೇಗೋ ಸಾಕಿದ್ರು. ಯಾವುದಕ್ಕೂ ಕಮ್ಮಿ ಮಾಡ್ಲಿಲ್ಲಾ. ನಾನು ಡಾಕ್ಟರ್ ಮಾಡ್ತೀನಿ ಅಂದಾಗ, ಅಶ್ಟೊಂದು ದುಡ್ಡು ಇಲ್ದೆ ಇದ್ರೂ ಸಾಲ ಮಾಡಿ ಎಂ.ಬಿ.ಬಿ.ಎಸ್ ಸೇರ್ಸಿದ್ರು. ಚೆನ್ನಾಗಿ ಓದ್ಲಿ ಅಂತಾ ಏನೆಲ್ಲಾ ಮಾಡಿದ್ರು… ನಮಗೆ ಕಂಪ್ಯೂಟರ್ ಕೊಡ್ಸಿದ್ರು. ನನ್ ತಮ್ಮ ರಾಜುಗೆ ಹೋದ್ ತಿಂಗಳು ಬಾಯಿಕ್ ಕೊಡ್ಸಿದ್ರು. ನಮಗೋಸ್ಕರ ಏನೆಲ್ಲಾ ಮಾಡಿದ್ರು”, ಎಂದು ಕಣ್ಣೀರಿಟ್ಟಳು.
“ನಿಮ್ಮ ಮಾವರಿಗೆ ಇನ್ಯಾರಾದ್ರು ಹತ್ತಿರದ ಗೆಳೆಯರು ಅತವಾ ಸಂಬಂದಿಕರು ಇದ್ರಾ?”
“ಹತ್ತಿರದ ಸಂಬಂದಿಕರು ಯಾರೂ ಇಲ್ಲಾ ಸರ್. ಇನ್ನು ಅವರ ಕ್ಲೋಸ್ ಪ್ರೆಂಡ್ಸ್ ಅಂದ್ರೆ ಅದೇ ಅಶೋಕ್ ಸರ್, ಶಂಕರ್ ಸರ್, ಅವರೆಲ್ಲಾ ಇದಾರಲ್ಲಾ, ಅವರಶ್ಟೇ. ನಮ್ ಮಾವ ಇನ್ಯಾರ ಜೊತೆನೂ ಹೋಗ್ತಿರಲಿಲ್ಲಾ… ತುಂಬಾ ಒಳ್ಳೆಯವರು, ಸೀದಾ ಸಾದಾ ಇದ್ದವ್ರು. ಇನ್ನೆರಡು ತಿಂಗಳಲ್ಲಿ ದೊಡ್ ಮನೆ ನೋಡೋಣ ಅಂತಾ ಹೇಳಿದ್ರು”, ಎಂದು ಮತ್ತೆ ಕಣ್ಣೀರಿಟ್ಟಳು.
ತಟ್ಟನೆ ಏನೋ ಹೊಳೆದಂತಾಗಿ, “ನೀವು ಎಂ.ಬಿ.ಬಿ.ಎಸ್ ಯಾವಾಗ್ ಸೇರಿದ್ದು?” ಕೇಳಿದ ಪುಲಕೇಶಿ.
ತುಸು ಸುದಾರಿಸಿಕೊಂಡು, “ಆಂ… ಒಂದೂವರೆ ವರ್ಶಾ ಆಯ್ತು”, ಎಂದಳು.
“ನೀವು ಅಡ್ಮಿಶನ್ ಮಾಡ್ಸಿರೋ ಕಾಲೇಜಿನ ರಿಸಿಪ್ಟ್ ತೋರಿಸ್ತೀರಾ?”
ಅವಳು ಒಳಗೆ ಹೋಗಿ ಒಂದು ಕಡತದಲ್ಲಿದ್ದ ರಸೀದಿ ತೆಗೆದುಕೊಂಡು ಬಂದು ಕೊಟ್ಟಳು. ಅಯ್ದು ಲಕ್ಶದ ರಸೀದಿ ಇತ್ತು. ದಿನಾಂಕದ ಜೊತೆಗೆ ಕೆಲವು ವಿವರಗಳನ್ನು ಬರೆದುಕೊಂಡ ಪುಲಕೇಶಿ. ಅವನು ಹೊರಡಬೇಕು ಎನ್ನುವಶ್ಟರಲ್ಲಿ “ರಾಜು” ಇಗ್ಗಾಲಿಯಲ್ಲಿ ಬಂದನು. ಅವನನ್ನು ನೋಡಿ ಪುಲಕೇಶಿ, “ನೀವೇನಾ ರಾಜು ಅಂದ್ರೆ?”
“ಹೌದು” ಎಂದನು. ರಶ್ಮಿ ಪುಲಕೇಶಿಯವರ ಪರಿಚಯ ಹೇಳಿದಳು.
“ಏನ್ ಮಾಡ್ಕೊಂಡಿದೀರಿ?”
“ಇಲ್ಲೇ ಒಂದ್ ಸುಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡ್ತಾಯಿದೀನಿ ಸರ್”
“ನಿಮ್ಮ ಬಾಯ್ಕಿನ ಆರ್. ಸಿ. ತೋರಿಸ್ತೀರಾ?”, ಎಂದು ಕೇಳಿ ಅದನ್ನು ನೋಡಿ ತಿರುಗಿ ಕೊಟ್ಟನು.
“ಸರಿ ಬರ್ತೀನಿ”, ಎನ್ನುತ್ತಾ ಪುಲಕೇಶಿ ಹೊರಳಿದಾಗ, ಅವನನ್ನು ತಡೆದು ಹೇಳಿದಳು ರಶ್ಮಿ, “ಸರ್… ಮರ್ತಿದ್ದೆ. ಇವತ್ತು ಬೆಳಗ್ಗೆ ಶಂಕರ್ ಸರ್ ಬಂದಿದ್ರು. ಮಾವನ ಡೆತ್ ಸರ್ಟಿಪಿಕೇಟ್ ಜೆರಾಕ್ಸ್ ಮಾಡ್ಸಿಕೊಂಡು ಹೋದರು” ಎಂದಳು.
ಪುಲಕೇಶಿಗೆ ಒಂದು ಕ್ಶಣ ಬೆರಗಾಯಿತು. ಅವರಿಗ್ಯಾಕೆ ಡೆತ್ ಸರ್ಟಿಪಿಕೇಟ್ ಬೇಕಾಯಿತು ಎಂದುಕೊಳ್ಳುತ್ತಾ, ತನ್ನ ಬೆರಗನ್ನು ತೋರ್ಪಡಿಸದೆ ಅಲ್ಲಿಂದ ಹೊರಟನು.
*******************************************************
ತನಗೆ ಬೇಕಾದ ಮಾಹಿತಿಯನ್ನು ಹೆಕ್ಕಿ ತೆಗೆಯಲು ಪುಲಕೇಶಿಗೆ ಮೂರು ದಿನ ಬೇಕಾಯಿತು. ತಡಮಾಡದೆ, ರವಿಕುಮಾರ್ ಅವರಿಗೆ ಕರೆ ಮಾಡಿ, ತನಗೆ ಸಿಕ್ಕ ಮಾಹಿತಿ ಹೇಳಿದ. ರಾಗವೇಂದ್ರ ಅವರು ತಮ್ಮ ಮನೆಯ ಹತ್ತಿರದ ಬ್ಯಾಂಕಿನಲ್ಲಿ ಲಾಕರ್ ಕಾತೆಯೊಂದನ್ನು ತೆರೆದು, ಅದಕ್ಕೆ ಶಂಕರ್ ಅವರನ್ನಾ ವಾರಸುದಾರರನ್ನಾಗಿಸಿದ್ದರು. ಆ ಲಾಕರ್ ನಲ್ಲಿ ಇರೋ ವಸ್ತುವನ್ನು ತೆಗೆದುಕೊಳ್ಳಲೆಂದೇ ಶಂಕರ್ ಅವರು ರಾಗವೇಂದ್ರ ಸತ್ತಿರುವ ಪ್ರಮಾಣ ಪತ್ರದ ಪ್ರತಿ ತೆಗೆದುಕೊಂಡು ಹೋದದ್ದು. ಇದು ಗೊತ್ತಾಗಿ ರವಿಕುಮಾರ್ ಅವರಿಗೆ ಬೆರಗಾಯಿತು. ಕೇಸಿಗೆ ಒಳ್ಳೆಯ ತಿರುವು ಸಿಕ್ಕಿತೆಂದು ಸಂಬ್ರಮಿಸಿದರು.
ಆ ಬ್ಯಾಂಕು ಮುಚ್ಚುವ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಹೋಗಿ ಇಬ್ಬರೂ ಅಲ್ಲಿಯ ಕೆಲಸಗಾರರನ್ನು ವಿಚಾರಿಸಲು ಮುಂದಾದರು. ಲಾಕರ್ ಕಾತೆ ತೆರೆದ ದಿನಾಂಕ, ಕೊನೆಯ ಬಾರಿ ಅದನ್ನು ಬಳಸಿದ ದಿನ, ಹೀಗೆ ವಿವರಗಳನ್ನು ಪಡೆದ ನಂತರ, ತನ್ನ ಮೊಬಾಯಿಲಿನಲ್ಲಿ ಸೆರೆಹಿಡಿದಿದ್ದ ಎಲ್ಲ ಗೆಳೆಯರ ತಿಟ್ಟಗಳನ್ನು ಬ್ಯಾಂಕಿನವರಿಗೆ ತೋರಿಸುತ್ತಾ ಅವರ ಗುರುತು ನೆನಪು ಮಾಡಿಕೊಳ್ಳಲು ಒತ್ತಾಯಿಸಿದ ಪುಲಕೇಶಿ. ಶಂಕರ್ ಅವರ ಗುರುತನ್ನು ಬ್ಯಾಂಕಿನ ಮೇಲುಗ ಮತ್ತು ಲಾಕರ್ ಉಸ್ತುವಾರಿ ನೋಡಿಕೊಳ್ಳುವವರೊಬ್ಬರು ಗುರುತು ಹಿಡಿದರು. ಎರಡು ದಿನಗಳ ಹಿಂದೆ ಶಂಕರ್ ಅವರು ರಾಗವೇಂದ್ರ ಅವರ ಲಾಕರ್ ಹಕ್ಕನ್ನು ಪಡೆದು, ಅದರಲ್ಲಿದ್ದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದರು. ಇನ್ನೂ ಒಬ್ಬ ಗೆಳೆಯನ ಗುರುತು ಹಿಡಿದ ಲಾಕರ್ ಉಸ್ತುವಾರಿ ನೋಡಿಕೊಳ್ಳುವವರು, ನಾಲ್ಕೈದು ದಿನಗಳ ಹಿಂದೆಯೇ ಬಂದು ಅದೇ ಲಾಕರ್ ಬಗ್ಗೆ ವಿಚಾರಿಸಿಕೊಂಡು, ಅದರ ವಾರಸುದಾರರ ವಿವರ ಪಡೆದುಕೊಂಡು ಹೋದರೆಂದು ತಿಳಿಸಿದರು. ಅದನ್ನು ಕೇಳಿ ರವಿಕುಮಾರ್ ಅವರಿಗೆ ಬೆರಗಾದರೂ ಪುಲಕೇಶಿಗೆ ಆಗಲಿಲ್ಲ, ಬದಲಿಗೆ ಅವನ ಕಣ್ಣುಗಳಲ್ಲಿ ಹೊಳಪು ಮೂಡಿತು. ಇಬ್ಬರೂ ತಕ್ಶಣ ಅಲ್ಲಿಂದ ನೇರ ಕಮೀಶನರ್ ಶಂಕರ್ ಅವರ ಮನೆಗೆ ಹೊರಟರು. ದಾರಿಯಲ್ಲಿ ತಾನು ಕಂಡುಕೊಂಡ ಸತ್ಯಗಳನ್ನು ರವಿಕುಮಾರ್ ಅವರಿಗೆ ಪುಲಕೇಶಿ ವಿವರಿಸಿದ.
ಶಂಕರ್ ಅವರ ಮನೆ ತಲುಪಿದಾಗ ಆಗಲೇ ಸಂಜೆಯಾಗಿತ್ತು. ಇವರಿಬ್ಬರ ಬೆರಗಿಗೆ ಅಲ್ಲಿ ಗೆಳೆಯರೆಲ್ಲ ಸೇರಿ, ಗಂಬೀರವಾಗಿ ಏನೋ ಚರ್ಚಿಸುತ್ತಿರುವಂತೆ ಕಂಡಿತು. ಮನೆಯಲ್ಲಿ ಗೆಳೆಯರನ್ನು ಬಿಟ್ಟು ಬೇರಾರೂ ಇರಲಿಲ್ಲ. ಪುಲಕೇಶಿ ಮತ್ತು ರವಿಕುಮಾರ್ ಅವರನ್ನು ಕಂಡು ಅಲ್ಲಿ ಎಲ್ಲ ಮಾಮೂಲಿಯಾಗಿದೆ ಎನ್ನುವಂತೆ ತೋರಿಸಿಕೊಳ್ಳುವ ಪ್ರಯತ್ನವನ್ನು ಗೆಳೆಯರು ಮಾಡಿದರು.
“ಏನ್ ಸರ್, ಪ್ರೆಂಡ್ಸ್ ಎಲ್ಲಾ ಒಟ್ಟಿಗೆ ಸೇರಿಬಿಟ್ಟಿದ್ದೀರಿ?” ಕೇಳಿದರು ರವಿಕುಮಾರ್.
“ಏನಿಲ್ಲಾ… ಹಾಗೇ ಸುಮ್ನೆ” ಎಂದರು ಶಂಕರ್.
ತಾವು ಬಂದ ಕಾರಣ ಹೇಳುತ್ತಾ, “ರಾಗವೇಂದ್ರ ಅವರು ಲಾಕರ್ ನಲ್ಲಿ ಇಟ್ಟಿದ್ದ ಗುಟ್ಟು ನಿಮಗೆ ಸಿಕ್ಕಿದೆ ಅಂತಾ ಗೊತ್ತಾಗಿದೆ. ಅದನ್ನ ದಯವಿಟ್ಟು ನಮಗೆ ಒಪ್ಪಿಸಿ ಸರ್” ಎಂದು ಕೇಳಿದರು ರವಿಕುಮಾರ್.
“ಲಾಕರ್ ನಲ್ಲಿ ಅಂತದ್ದೇನೂ ಇರಲಿಲ್ಲ. ಅಲ್ಲಿ ಇದ್ದದ್ದು ನಮ್ಮ ಕೆಲವು ಹಳೆಯ ಪೋಟೊಗಳು ಅಶ್ಟೇ”, ಎಂದು ಮಾತನ್ನು ಮುರಿದು ಹಾಕುವ ರೀತಿಯಲ್ಲಿ ಹೇಳಿದರು ಶಂಕರ್.
“ಸರ್ ನೀವು ಸತ್ಯ ಮುಚ್ಚಿಡ್ತಾಯಿದೀರಾ, ದಯವಿಟ್ಟು ಕೋ ಆಪರೇಟ್ ಮಾಡಿ”
“ಹಾಗೇನೂ ಇಲ್ಲಾ. ನೀವು ಇನ್ನೇನಾದ್ರು ಕೇಳೋದಿದ್ರೆ ಕೇಳ್ಬಹುದು” ಬಿರುಸಿನಿಂದ ಮಾತಾಡಿದರು ಶಂಕರ್.
ಪುಲಕೇಶಿ ನಡುವೆ ಬಾಯಿಹಾಕಿದನು, “ಸಂದೀಪ್ ಅವರು ನಿಮ್ಮ ಹಾದಿ ತಪ್ಪಿಸ್ತಾಯಿದಾರೆ ಸರ್. ನೀವು ಅವರ ಮಾತಿಗೆ ಕಿವಿ ಕೊಡ್ಬೇಡಿ”
“ಎಯ್! ನಾನೇನು ಹಾದಿ ತಪ್ಪಿಸ್ತಾಯಿರೋದು?” ಸಿಟ್ಟಿನಲ್ಲಿ ಎದ್ದು ನಿಂತರು ಸಂದೀಪ್.
“ರಾಗವೇಂದ್ರ ನಿಮ್ಮ ಸಾಲ ತೀರಿಸಿದ್ರಾ?” ಎಂದು ಸಂದೀಪ್ ಅವರಿಗೆ ಕೇಳಿದ.
ಅವರು ಗೊಂದಲಗೊಂಡು, “ಯಾವ್ ಸಾಲ?” ಎಂದರು.
“ಹಾಗಾದ್ರೆ ರಾಗವೇಂದ್ರ ನಿಮ್ ಹತ್ರ ದುಡ್ಡು ತಗೊಂಡಿರಲಿಲ್ವಾ?”
ಸಂದೀಪ್ ಅವರಿಗೆ ಗಾಬರಿಯಾಗಿ ಸುಮ್ಮನಾದರು. ಪುಲಕೇಶಿ, ಶಂಕರ್ ಅವರಿಗೆ ಕೇಳಿಕೊಂಡ, “ಸರ್ ನನಗೆ ಮಾತಾಡೋಕೆ ಸ್ವಲ್ಪ ಅವಕಾಶ ಕೊಡಿ”
“ನೀನು ಒಂದ್ ನಿಮಿಶ ಸುಮ್ನೆ ಕೂತ್ಕೊ” ಎಂದು ಸಂದೀಪ್ ಅವರಿಗೆ ಸನ್ನೆ ಮಾಡಿ, “ಹೇಳಿ” ಎಂದರು ಶಂಕರ್.
ಸಮಾದಾನದ ದನಿಯಲ್ಲಿ ಪುಲಕೇಶಿ ಮಾತಿಗೆ ಶುರುವಿಟ್ಟುಕೊಂಡ. “ರಾಗವೇಂದ್ರ ಅವರು ಕೊಲೆಯಾದ ದಿನ, ಅವರ ಮತ್ತೆ ಅಶೋಕ್ ನಡುವೆ ಜಗಳವಾಗಿತ್ತು. ಮಿಲಿಟರಿಯಲ್ಲಿ ನಡೆದ ಯಾವುದೋ ವಿಶಯದ ಬಗ್ಗೆ ಆಡಿದ ಮಾತಿಗೆ ಅಶೋಕ್ ಅವರಿಗೆ ಸಿಟ್ಟು ಬಂದಿತ್ತು. ಆದರೆ ರಾಗವೇಂದ್ರ ಅವರಿಗೆ ಆ ವಿಶಯ ಹೇಳಿಕೊಟ್ಟವರು ಯಾರು ಎಂದು ಯೋಚಿಸಿದರೆ ಸಿಗುವುದು ಒಂದೇ ಉತ್ತರ”, ಎನ್ನುತ್ತಾ ಸಂದೀಪ್ ಕಡೆಗೆ ಹೊರಳಿದನು.
“ನಾನ್ಯಾಕೊ ಹೇಳಲಿ?” ಎಂದು ಸಿಟ್ಟಿನಲ್ಲಿ ಮತ್ತೆ ಎದ್ದು ನಿಂತರು ಸಂದೀಪ್.
ಅವರ ಸಿಟ್ಟನ್ನು ಹೀಯಾಳಿಸುತ್ತಾ “ನೀವು ಸುಮ್ಮನೆ ಕೂತಿದ್ದರೆ ನಿಮಗೇ ಒಳ್ಳೇದು”, ಎಂದನು. ಕಯ್ ಕಯ್ ಹಿಸುತುತ್ತಾ ಸಂದೀಪ್ ಬಲವಂತವಾಗಿ ಕುಂತರು. ಮುನ್ನೆಚ್ಚರಿಕೆಯಾಗಿ, ತಮ್ಮ ಸರ್ವೀಸ್ ರಿವಾಲ್ವರ್ ಹೊರ ತೆಗೆದು, ಸಂದೀಪ್ ಅವರತ್ತ ಗುರಿ ಇಟ್ಟು ಕುಂತರು ರವಿಕುಮಾರ್.
ತನ್ನ ಮಾತನ್ನು ಮುಂದುವರೆಸುತ್ತಾ, “ಸಂದೀಪ್ ಹೀಗೆ ಹೇಳಿ ಕೊಟ್ಟಿದ್ದಾದರೂ ಯಾಕೆ? ಯಾಕೆಂದರೆ ರಾಗವೇಂದ್ರ ಅವರ ಮೇಲೆ ಅಶೋಕ್ ಅವರಿಗೆ ಸಿಟ್ಟು ಬರುವಂತೆ ನೋಡಿಕೊಳ್ಳಬೇಕಿತ್ತು”, ತಕ್ಶಣ ಶ್ರೀನಿವಾಸ್ ಅವರ ಕಡೆಗೆ ಹೊರಳಿ, “ನಿಮಗೂ ರಾಗವೇಂದ್ರ ಅವರ ಮೇಲೆ ಸಿಟ್ಟಿತ್ತಾ? ನಿಜ ಹೇಳಿ, ನೀವು ಯಾವ ತಪ್ಪೂ ಮಾಡಿಲ್ಲಾ ಅಂತಾ ನನಗೊತ್ತು” ಎಂದನು.
“ಹೌದು… ನಿನ್ನ ಹತ್ರ ಇರೋ ಬ್ಲಾಕ್ ಮನಿ ಬಗ್ಗೆ ಇನ್ಕಮ್ ಟಾಕ್ಸ್ ನವರಿಗೆ ಹೇಳ್ತೀನಿ ಅಂತಾ ಹೇಳಿದ್ದ”
“ಹ್ಹ ಹ್ಹ…” ನಕ್ಕನು ಪುಲಕೇಶಿ. “ನಿಮ್ ಹತ್ರ ಎಶ್ಟು ಬ್ಲಾಕ್ ಮನಿ ಇದೆ ಅಂತಾ ಅವರಿಗೆ ಹೇಗೆ ಗೊತ್ತಾಯಿತು?”
“ಅಂದ್ರೆ…”, ಎಂದು ಸಂದೀಪ್ ಕಡೆಗೆ ನೋಡಿದರು ಶ್ರೀನಿವಾಸ್. ಸಂದೀಪ್ ಸುಮ್ಮನಿದ್ದರು.
“ಸಂದೀಪ್ ಯಾಕೆ ಹೀಗೆ ಮಾಡಿದರು? ನಿಮಗೆ ರಾಗವೇಂದ್ರ ಅವರ ಮೇಲೆ ಸಿಟ್ಟು ಬರಲಿ ಎಂದು… ನಿಮ್ಮ ಗುಟ್ಟುಗಳನ್ನು ಅವರಿಗೆ ಹೇಳಿಕೊಟ್ಟು, ದುಡ್ಡಿರುವ ನಿಮ್ಮ ಮೇಲೆ ಅವರಿಗಿದ್ದ ಅಸೂಯೆಗೆ ತುಪ್ಪ ಸುರಿದರು. ಅಸೂಯೆಗೆ ಒಳಗಾಗಿ ಒಂದು ರೀತಿ ನಿಮ್ಮ ಮೇಲೆ ಮೇಲುಗಯ್ ಸಾದಿಸಲು ರಾಗವೇಂದ್ರ ಆ ಗುಟ್ಟುಗಳನ್ನು ನಿಮ್ಮ ಎದುರಿಗಾಡಿದರು. ಆಗ ನಿಮಗೆ ರಾಗವೇಂದ್ರರ ಮೇಲೆ ಸಹಜವಾಗಿ ಸಿಟ್ಟು ಮೂಡಿತು. ಕೊಲೆ ಮಾಡಲು ಅಂದಿನ ದಿನಕ್ಕಿಂತ ಒಳ್ಳೆಯ ಚಾನ್ಸು ಸಂದೀಪ್ ಅವರಿಗೆ ಮತ್ತೆ ಸಿಗುತ್ತಿರಲಿಲ್ಲ. ತಾವು ಕೊಲೆ ಮಾಡುವಾಗ ಅಕಸ್ಮಾತ್ ಸಿಕ್ಕಿಬಿದ್ದರೂ, ಅದನ್ನು ಮುಚ್ಚಿಹಾಕಲು ರಾಗವೇಂದ್ರ ಅವರ ಮೇಲೆ ನಿಮಗಿದ್ದ ಸಿಟ್ಟು ಉಪಯೋಗಿಸಿಕೊಳ್ಳಬಹುದೆಂಬುದು ಅವರ ಪ್ಲಾನ್ ಆಗಿತ್ತು. ಅವರು ಈಗ ಮಾಡುತ್ತಿರುವುದೂ ಅದನ್ನೇ” ಎಂದು ಪುಲಕೇಶಿ, ಶಂಕರ್ ಅವರೆಡೆಗೆ ಹೊರಳಿದನು.
“ಸಂದೀಪ್ ಯಾಕೆ ಈ ಕೊಲೆ ಮಾಡಬೇಕು?” ಶಂಕರ್ ಅವರಿಗೆ ಪುಲಕೇಶಿಯ ವಿವರಗಳು ಇಶ್ಟವಾಗತೊಡಗಿದ್ದವು.
“ಅಶ್ಟೇನು ಅನುಕೂಲಸ್ತರಲ್ಲದ ರಾಗವೇಂದ್ರ, ತಮ್ಮ ಅಕ್ಕನ ಮಗಳಿಗೆ ಎಮ್.ಬಿ.ಬಿ.ಎಸ್ ಸೀಟು ಹೇಗೆ ಕೊಡಿಸಿದರು? ಕಂಪ್ಯೂಟರ್, ಬಾಯಿಕ್ ಇದೆಲ್ಲ ಕೊಂಡುಕೊಳ್ಳೋದಕ್ಕೆ ಅವರ ಹತ್ತಿರ ದುಡ್ಡು ಎಲ್ಲಿಂದ ಬಂತು? ಸಾಲ? ಅಶ್ಟು ಸಾಲ ಸುಮ್ಮನೆ ಯಾರೂ ಕೊಡೋದಿಲ್ಲಾ. ಅದಕ್ಕೇ, ನನ್ನ ಡಿಕೆಕ್ಟೀವ್ ಪ್ರೆಂಡ್ಸ್ ಸಹಾಯದಿಂದ ನಿಮ್ಮೆಲ್ಲರ ಬ್ಯಾಂಕುಗಳ ಎರಡು ವರ್ಶಗಳ ವಿವರ ತೆಗೆಸಿದೆ. ರಾಗವೇಂದ್ರ ದುಡ್ಡು ಕರ್ಚು ಮಾಡಿದ ತಾರೀಕಿಗೆ ಸಂದೀಪ್ ಅವರು ಅಶ್ಟೇ ಮೊತ್ತದ ದುಡ್ಡನ್ನು ತಮ್ಮ ಕಾತೆಯಿಂದ ತೆಗೆದ ತಾರೀಕುಗಳು ಹೊಂದುಕೊಂಡವು. ಆಗ, ರಾಗವೇಂದ್ರ ಅವರು ಯಾವುದೋ ವಿಶಯ ಇಟ್ಟುಕೊಂಡು ಸಂದೀಪ್ ಅವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ಅಂದಾಜಿಸಿದೆ. ಆ ಗುಟ್ಟು ಬ್ಯಾಂಕಿನ ಲಾಕರ್ ನಲ್ಲಿ ಇದೆಯೆಂದು ಸಂದೀಪ್ ಅವರಿಗೆ ಹೇಗೋ ಗೊತ್ತಾಗಿದೆ. ಆ ಬ್ಯಾಂಕಿಗೆ ಹೋಗಿ ವಿಚಾರಿಸಿದ್ದಾರೆ ಕೂಡ. ಅಲ್ವಾ ಮೇಜರ್ ಸಂದೀಪ್?” ಎಂದನು.
ಸಂದೀಪ್ ಅವರು ಕುಳಿತಲ್ಲೇ ತಮ್ಮ ತಲೆಯನ್ನು ಬಾಗಿಸಿ, ಕಯ್ ಗಳ ನಡುವೆ ಒತ್ತಿ ಹಿಡಿದಿದ್ದರು. “ಸತ್ಯ ಏನು ಅಂತಾ ಹೇಳಿ ಸಂದೀಪ್. ನೀವ್ ಹೇಳ್ದೆ ಇದ್ರೆ ಶಂಕರ್ ಸರ್ ಅಂತೂ ಕಂಡಿತವಾಗಿ ಹೇಳ್ತಾರೆ. ಅವರ ಮೇಲೆ ನನಗೆ ನಂಬಿಕೆಯಿದೆ” ಎಂದು ರವಿಕುಮಾರ್, ಸಂದೀಪ್ ಮತ್ತು ಶಂಕರ್ ಇಬ್ಬರ ಮೇಲೂ ಮಾನಸಿಕ ಒತ್ತಡ ಹಾಕಿದರು.
ಒಂದೆರಡು ಕ್ಶಣಗಳ ನಂತರ ಸಂದೀಪ್ ಮಾತಾಡಿದರು, “ಅವನ ಕತ್ತು ಹಿಸುಕಿ ಕೇಳಿದಾಗ, ಬ್ಯಾಂಕಿನ ಲಾಕರ್ ನಲ್ಲಿ ಇಟ್ಟಿದ್ದೀನಿ ಅಂತಾ ಹೇಳಿದ. ಆ ವಿಶಯ ಗೊತ್ತಾದ ತಕ್ಶಣ ಪೂರ್ತಿ ಹಿಸುಕಿ ಕೊಂದೆ. ಅವನ ಬಾಡಿ ನನ್ನ ಕಾರಿನ ಡಿಕ್ಕಿಯಲ್ಲಿಟ್ಟು, ಮುಂಬಾಗಿಲು ತೆರೆದೇ ಇಟ್ಟು, ರೂಮಿಗೆ ಬಂದು ಮಲಗಿಕೊಂಡೆ. ಮಾರನೇ ದಿನ ರಾತ್ರಿ ಬಾಡಿ ಬೆಳ್ಳಂದೂರು ಕೆರೆ ಹತ್ರ ಎಸದು ಬಂದೆ”
“ಆ ಗುಟ್ಟು ಏನು ಅಂತಾ ಹೇಳಿ ಸರ್”, ಎಂದು ಶಂಕರ್ ಅವರತ್ತ ತಿರುಗಿದರು ರವಿಕುಮಾರ್.
ನಿಟ್ಟುಸಿರು ಬಿಡುತ್ತಾ, “ಸಂದೀಪ್ ಹೊಡೆದ ಏಟಿಗೆ, ಅವನ ಹೆಂಡತಿ ಸತ್ತಿದ್ದನ್ನಾ ರಾಗವೇಂದ್ರ ಹೇಗೋ ತನ್ನ ಮೊಬಾಯಿಲಿನಲ್ಲಿ ರೆಕಾರ್ಡ್ ಮಾಡಿದ್ದ. ಆ ಮೊಬಾಯಿಲೇ ಲಾಕರ್ ನಲ್ಲಿ ಇದ್ದದ್ದು. ಲಾಕರ್ ಅಕೌಂಟು ತೆರೆಯುವಾಗ ರಾಗು ನನಗೆ ಹೇಳಿದ್ದ… ನನಗೇನಾದ್ರು ಆದ್ರೆ ಆ ಲಾಕರ್ ನೀನೇ ತೆರೆದು ನೋಡು ಅಂತಾ. ಅದನ್ನಾ ನೋಡಿ, ಮುಂದೆ ಏನ್ ಮಾಡ್ಬೇಕು ಅಂತಾ ಎಲ್ಲರನ್ನು ನಾನೇ ಇಲ್ಲಿ ಕರೆದಿದ್ದೆ” ಎಂದರು.
“ನನ್ ಹೆಂಡ್ತಿ ಹಾರ್ಟ್ ಅಟಾಕ್ ಆಗಿ ಸತ್ಳು ಅಂತಾ ಎಲ್ರನ್ನ ನಂಬಿಸಿದ್ದೆ… ಆದ್ರೆ ಇವ್ನು ಅದ್ಯಾವ ಹೊತ್ನಲ್ಲಿ ನನ್ ಮನೆಗ್ ಬಂದು ರೆಕಾರ್ಡ್ ಮಾಡಿದ್ನೋ ಗೊತ್ತಿಲ್ಲ”, ಎಂದರು ಸಂದೀಪ್. ಅವರನ್ನು ಬಂದಿಸಲು ರವಿಕುಮಾರ್ ಮುಂದಾದರು.
ಶಂಕರ್ ಅವರು ಪುಲಕೇಶಿಯ ಕಯ್ ಕುಲುಕುತ್ತಾ, “ಪರವಾಗಿಲ್ಲ ಪುಲಕೇಶಿ, ಸಾಯಿಕಾಲಜಿ ಚೆನ್ನಾಗಿ ಸ್ಟಡಿ ಮಾಡಿದ್ದೀರಾ”, ಎಂದರು. ಪುಲಕೇಶಿ ವಿನಯದಿಂದ ತಲೆ ಬಾಗಿದನು.
(ಮುಗಿಯಿತು)
( ಚಿತ್ರ ಸೆಲೆ: nytimes.com )
ಇತ್ತೀಚಿನ ಅನಿಸಿಕೆಗಳು