ಬಾನಲ್ಲಿ ಉಸಿರಿ ಹುಟ್ಟುಗೆಯ ಸಿಹಿವಲಯ ಪತ್ತೆ

– ಸುಜಯೀಂದ್ರ ವೆಂ.ರಾ.

1

ಉಸಿರಿ ಬಾನರಿಮೆ(Astro biology) ಅರಿಗರು ನಕ್ಶತ್ರ ಪುಂಜದಲ್ಲಿರುವ(galaxy) ಜಯ್ವಿಕ ಕಣಗಳ ತಯಾರಿಕೆಗೆ ಬೇಕಾದ “ಸಿಹಿ ವಲಯ”ವನ್ನು ಪತ್ತೆ ಹಚ್ಚಿದ್ದಾರೆ. ನ್ಯೂಯಾರ‍್ಕ್ ನಗರದ ರಿನ್ಸೆಲೀರ್ ಪಾಲಿಟೆಕ್ನಿಕ್ ವಿದ್ಯಾಲಯದ(Rensselaer Polytechnic Institute) ಕೆಲವು ಉಸಿರಿ-ಬಾನರಿಮೆ(ಆಸ್ಟ್ರೋಬಯಾಲೋಜಿ) ಅರಿಗರಿಂದ ನಕ್ಶತ್ರ ಪುಂಜಗಳಲ್ಲಿ(ಗ್ಯಾಲ್ಯಾಕ್ಸಿ) ಜೈವಿಕ ಕಣಗಳ ಉತ್ಪಾದನೆಗೆ ಬೇಕಾದ ಸಿಹಿ ವಲಯವನ್ನು(sweet spot) ಕಂಡು ಹಿಡಿಯಲಾಗಿದೆ. ಅವರು ಮೊದಲು ಇದಕ್ಕೆ ಮೆತನಾಲ್‌ನ ಇರುವಿಕೆಯನ್ನು ಕಾಣಲು ಪ್ರಯೋಗ ನಡೆಸಿದ್ದಾರೆ. ಕಾರಣ ಇದು ಉಸಿರಿಗಳ ಉಗಮಕ್ಕೆ ಪ್ರಮುಕವಾದ ವಸ್ತು. ಈ ವಸ್ತುವಿನಿಂದ ಉಸಿರಿಗಳ ಹುಟ್ಟಿಗೆ ಕಾರಣವಾಗುವ ಎಲ್ಲ ಜೈವಿಕ ವಸ್ತುವು ಹುಟ್ಟುತ್ತವೆ, ನಂತರ ಇವುಗಳ ಸಂಯೋಜನೆಯಿಂದ ಒಂದು ವಿದವಾದ ಉಸಿರಿ ಹುಟ್ಟುವುದಕ್ಕೆ ಕಾರಣವಾಗುತ್ತದೆ. ಹೊರಬಾನಿ(ಅಂತರಿಕ್ಶ)ನಲ್ಲಿ ಇವುಗಳ ಇರುವಿಕೆಯಿಂದ ಉಸಿರಿಗಳು ಹೇಗೆ ಉಗಮವಾಯಿತು ಅನ್ನುವುದಕ್ಕೆ ಉತ್ತರ ಸಿಕ್ಕಂತಾಗುತ್ತದೆ.

ಎಲ್ಲಿ ಇದರ ಪ್ರಕಟಣೆಯಾಗಿದೆ?
ಮೆತನಾಲ್ ಇರುವ ಸಾದ್ಯತೆಗಳನ್ನು ನವೆಂಬರ್ 2೦ ಆಸ್ಟ್ರೋಜರ‍್ನಲ್ ನಲ್ಲಿ ಪ್ರಕಟಣೆಯಾಗಿದೆ. ಈ ಪ್ರಕಟಣೆಯ ತಲೆಬರಹ ” ಅಬ್ಸರ್ ವೇಶನಲ್ ಕನ್ಸ್ಟೇಂಟ್ಸ್ ಅನ್ ಮೆತನಾಲ್ ಪ್ರೊಡಕ್ಶನ್ ಇನ್ ಇನ್ಟರ್ ಸ್ಟೆಲ್ಲಾರ್ ಅಂಡ್ ಪ್ರೀಪ್ಲಾನೆಟರಿ ಸಯ್ನ್ಸಸ್” ಆಗಿದೆ. ಹೊರಬಾನಿನಲ್ಲಿ ಮೆತನಾಲ್ ಸಂಶೋದನೆಯ ಕೆಲಸಕ್ಕೆ ರಿನ್ಸೆಲೀರ್ ಸಂಶೋದಕರ, ನಾಸಾ ಎಮ್ಸ್ ಸಂಶೋದನಾ ಕೇಂದ್ರ, ಸೆಟಿ ವಿದ್ಯಾಲಯ ಮತ್ತು ಓಹಿಯೋ ಸ್ಟೇಟ್ ವಿಶ್ವವಿದ್ಯಾಲಯಗಳು ಕೈ ಜೋಡಿಸಿವೆ.

ಸಂಶೋದಕರ ಮಾತು:
“ಇವರ ಸಂಶೋದನೆಯ ಪ್ರಕಾರ ಅಂತರ್ ನಕ್ಶತ್ರ ಬಾಹ್ಯಾಕಾಶದಲ್ಲಿ ಮೆತನಾಲ್ ತಯಾರಾಗುವ ಪ್ರಕ್ರಿಯೆ ಅತಿ ಕ್ಲಿಶ್ಟಕರ ಜೈವಿಕ ಕಣಗಳ ಉತ್ಪತ್ತಿಗೆ ಒಂದು ಪ್ರಮುಕ ದಾರಿಯಾಗಿದೆ.” ಹೀಗೆ ಹೇಳಿದ್ದು ಸಂಶೋದನೆಯ ಮುಂದಾಳು, ನಾಸಾ ನೆರವಿನ ಕೇಂದ್ರದ ನಿರ‍್ದೇಶಕ, ರಿನ್ಸೆಲೀರ್‌ನ ಡೋಗ್ಲಾಸ್ ವಿಟ್ಟೆಟ್. ಹಾಗೆ ಈ ಮೆತನಾಲ್ ಆಗುವ ಬಗೆಯನ್ನು ತಿಳಿದರೆ ವಿಜ್ಞಾನಿಗಳಿಗೆ ಕ್ಲಿಶ್ಟಕರ ಜೈವಿಕ ಕಣಗಳ ಉತ್ಪತ್ತಿಯಾಗುವ ಬಗೆಯನ್ನು, ಅದರಿಂದ ಉಸಿರಿಗಳಾಗುವ ಬಗೆಯನ್ನು ಹೇಳಲು ಯಾವ ತಕರಾರು ಇಲ್ಲವಂತೆ. ಅಂದರೆ ಮೆತನಾಲ್ ಒಂದನ್ನು ಹಿಂಬಾಲಿಸಿದರೆ, ಉಸಿರಿಗಳ ಉಗಮಕ್ಕೆ ಬೇಕಾಗುವ ರಸಾಯನ ಪ್ರಕ್ರಿಯೆಯನ್ನು ಹೇಳಬಹುದಂತೆ.

ಇದು ಹೇಗೆ ತಿಳಿದುಬಂತು?
ಹೊರಬಾನಿನಲ್ಲಿ ಮೆತನಾಲ್ ಸಂಶೋದಿಸಲು ವಿಜ್ಞಾನಿಗಳು ಶಕ್ತಿಯುತ ದೂರದರ‍್ಶಕವನ್ನು ಹೆಚ್ಚಾಗಿ ಬಳಸಿದ್ದಾರೆ. ಇದರಿಂದ ಹೊರಬಾನಿನಲ್ಲಿ ಹೆಚ್ಚು ಹೆಚ್ಚು ಸಂಗ್ರಹಗೊಂಡಿರುವ ಇಂಗಾಲದ ಮಾನಾಕ್ಸೈಡ್ ಮೋಡಗಳು ಕಂಡುಬಂದಿವೆ. ಇಂಗಾಲದ ಮಾನಾಕ್ಶೈಡ್ ಯಾಕೆ ಅಂತ ಕೇಳಬಹುದು? ಇದರಿಂದಲೇ ನಕ್ಶತ್ರಗಳು ಆಗಲು ಸಾದ್ಯ ಅನ್ನುವುದು ಸಾಬೀತಾಗಿದೆ. ಇಲ್ಲಿ ಅತಿ ಕ್ಲಿಶ್ಟಕರ ಜೈವಿಕ ಕಣಗಳ ತಯಾರಿಕೆಗೆ ಬೇಕಾಗಿರುವುದು, ಜಲಜನಕ ಹಾಗೂ ಇಂಗಾಲಗಳ ಸಮ್ಮಿಲನ. ಈ ಪ್ರಕ್ರಿಯೆಗೆ ಒಂದು ಸುಲಬ ದಾರಿ ಎಂದರೆ, ಅಂತರ್ ನಕ್ಶತ್ರ ಬಾಹ್ಯಾಕಾಶದಲ್ಲಿರುವ ದೂಳಿನ ಕಣಗಳ ಮೇಲಾಗುವ ರಾಸಾಯನಿಕ ಪ್ರಕ್ರಿಯೆ-ವಿಟ್ಟೆಟ್ ಹೇಳಿದ್ದಾರೆ.

ಒಂದು ಸರಿಯಾದ ವಾತಾವರಣದಲ್ಲಿ ಇಂಗಾಲದ ಮಾನಾಕ್ಶೈಡ್ ದೂಳಿನ ಕಣಗಳ ಮೇಲೆ ಜಲಜನಕದ ಜೊತೆ ಅತಿ ಕಡಿಮೆ ಉಶ್ಣತೆಯಲ್ಲಿ ಸೇರಲು ಸಾದ್ಯ. ಹಾಗಾಗಿ ಮೆತನಾಲ್ ಆಗಲು ಸಾದ್ಯ. ಮೆತನಾಲ್ ಆಗುವ ಪ್ರಕ್ರಿಯೆ ಅತಿ ಕ್ಲಿಶ್ಟಕರ ಜೈವಿಕ ಕಣಗಳ ತಯಾರಿಕೆಗೆ ಬೇಕಾಗಿರುವ ಒಂದು ಪ್ರಮುಕ ಮೈಲಿಗಲ್ಲು. ಮೆತನಾಲ್ ಇರುವಿಕೆ ವಿಜ್ಞಾನಿಗಳಿಗೆ ಕಾತ್ರಿಯಾಗಿದೆ ಆದರೆ, ಬಹಳ ಕಡಿಮೆ ಮಾಹಿತಿ ಇದೆ.

ವಿಟ್ಟೆಟ್ ಮತ್ತು ಸಂಗಡಿಗರು ಹೇಳುವುದೇನು?
ಹೊಸದಾಗಿ ಹುಟ್ಟಿದಂತ ನಕ್ಶತ್ರಗಳ ಪುಂಜದಲ್ಲಿ ಹೆಚ್ಚು ಹೆಚ್ಚು ಮೆತನಾಲ್ ಇರುವ ಬಗ್ಗೆ ಮಾಹಿತಿ ದೊರಕಿದೆ. ಆದರೆ ಬೇರೆಡೆ ಇರುವ ಎಲ್ಲ ಹೊಸ ನಕ್ಶತ್ರಗಳ ಬಳಿ ಇದು ಕಾಣಲಾಗಿಲ್ಲ. ಇದಕ್ಕೆ ನಕ್ಶತ್ರಗಳ ಸಾಮರ‍್ತ್ಯತೆ ಕಾರಣವಾಗಿರಬಹುದು. ಅಂದರೆ ಮೆತನಾಲ್ ತಯಾರಿಸುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುವ ವಾತಾವರಣ (ಉಶ್ಣಾಂಶ) ಕೊಡುವುದು ಇದಕ್ಕೆ ಮುಕ್ಯವಾಗಿರುತ್ತದೆ. ಕೆಲವೇ ಕೆಲವು ಹೊಸ ನಕ್ಶತಗಳಲ್ಲಿ, ಮೆತನಾಲ್ ಏಕೀಕರಣವು ಅಂತರ್ ನಕ್ಶತ್ರಗಳ ಮಾದ್ಯಮದಲ್ಲಿ ಒಂದು ಅಂದಾಜಿನ ಪ್ರಕಾರ, ಪ್ರತಿಶತ 30%ರಶ್ಟು ಮಂಜುಗಡ್ಡೆಗಳಲ್ಲಿ ಕಾಣಸಿಗುತ್ತವೆ. 1% ರಿಂದ 2% ಮೆತನಾಲ್ ಕೂಡ ಅತಿ ತಣ್ಣಗಿನ ಮೋಡಗಳಲ್ಲಿ ಕಂಡುಬಂದಿವೆ.

ಕೆಲವು ನಕ್ಶತ್ರಗಳ ಸುತ್ತಲಿರುವ ಬವ್ತಿಕ ವಾತಾವರಣದಲ್ಲೊಂದು “ಸಿಹಿ ವಲಯ” ಇದೆ, ಇದರಿಂದಲೇ ಮೆತನಾಲ್ ಆಗಿದೆ. ಸಿಹಿ ವಲಯ ಅಂದರೆ ಅನುಕೂಲಕರ ವಾತಾವರಣ. ರಾಸಾಯನಿಕ ಪ್ರಕ್ರಿಯೆ ಇಲ್ಲಿ ಅರ‍್ತ ಮಾಡಿಕೊಳ್ಳಲು ಎಶ್ಟು ಕಶ್ಟಸಾದ್ಯವಾಗಿದೆ ಎಂದರೆ, ಅದು ಎಶ್ಟು ಬೇಗ ಕಣಗಳು ದೂಳನ್ನು ಸೇರುತ್ತವೆಂಬುದರ ಮೇಲೆ ಅವಲಂಬಿಸಿದೆ. ಕಣಗಳ ಸೇರುವಿಕೆ ಎಶ್ಟು ಬೇಗ ಅಗುತ್ತೆ ಅನ್ನುವುದು, ಜೈವಿಕ ತಯಾರಿಕೆಯ ಯಶಸ್ಸು ಅತವಾ ವಿಪಲವನ್ನು ನಿರ‍್ದರಿಸುತ್ತದೆ.
ಹಾಗಾದರೆ ಇಂಗಾಲದ ಮಾನಾಕ್ಸಾಡ್ ಹೆಚ್ಚು ಹೆಚ್ಚು ವೇಗದಲ್ಲಿ ದೂಳಿನ ಮೇಲೆ ಒಂದುಗೂಡಿತು ಎಂದರೆ, ಮೆತನಾಲ್ ಆಗುತ್ತಾ? ಇಲ್ಲ ಅದರ ಬದಲು ಮಂಜು ಗಡ್ಡೆಯ ರೂಪದಲ್ಲಿ ದೂಳಿನಲ್ಲಿ ಹುದುಗುತ್ತದೆ. ಇಂಗಾಲದ ಮಾನಾಕ್ಸೈಡ್ ಒಂದು ವೇಳೆ ನಿದಾನವಾಗಿ ಸೇರಿದರೆ ಆಗಲು ಸಾದ್ಯವಿದೆಯೇ? ಇಲ್ಲ. ಕಾರಣ ಅದು ಮತ್ತಶ್ಟು ರಾಸಾಯನಿಕ ಪ್ರಕ್ರಿಯೆಯನ್ನು ನಿದಾನಗೊಳಿಸುತ್ತದೆ.

ಹಾಗಿದ್ದರೆ ಯಾವ ರೀತಿ ಮೆತನಾಲ್ ಆಗಲು ಸಾದ್ಯ?
ಇದರ ಸಾರಾಂಶವಿಶ್ಟೇ ಒಂದು ಅನುಕೂಲಕರ ವಾತಾವರಣದಲ್ಲಿ(ಉಶ್ಣತೆ), ನಕ್ಶತ್ರಗಳ ಸುತ್ತುವರಿದಿರುವ ದೂಳಿನ ಕಣ ಹೆಚ್ಚು ಹೆಚ್ಚು ಉಸಿರಿಗಳಾಗುವ ಪ್ರಕ್ರಿಯೆಗೆ ಪ್ರಮಾಣಿಸುತ್ತದೆ, ಅನಾನುಕೂಲ ವಾತಾವರಣ ಇದನ್ನು ನಿಲ್ಲಿಸುತ್ತದೆ.
ವಿಜ್ಞಾನಿಗಳು ಇದಕ್ಕೆ ಹೆಬ್ಬಾನಬಂಡೆಗಳನ್ನು ನಮ್ಮ ಸವ್ರಮಂಡಲದಲ್ಲಿರುವ ಮೆತನಾಲ್ ಸಂಗ್ರಹಕ್ಕೆ ಹೋಲಿಸಿ ನೋಡಿದ್ದಾರೆ. ಇವುಗಳಲ್ಲೂ ಮೆತನಾಲ್ ಕಂಡು ಬಂದಿದೆ. ಹೆಬ್ಬಾನಬಂಡೆ(ದೂಮಕೇತು)ಗಳು ಒಂದು ತರಹದ ಸಮಯದ ಗುಳಿಗೆಗಳಂತೆ ಅವು ನಮ್ಮ ಸವ್ರಮಂಡಲದ ಸ್ರುಶ್ಟಿಯಾದ ಸಮಯವನ್ನು ದಾಕಲಿಸಿಕೊಂಡಿರುತ್ತದೆ. ಅಂದರೆ ನಮ್ಮ ಸವ್ರ ಮಂಡಲದ ಸ್ರುಶ್ಟಿಯ ಚರಿತ್ರೆಯನ್ನು ದಾಕಲಿಸಿರುತ್ತದೆ ಎಂದು ವಿಟ್ಟೇಟ್ ಹೇಳಿದ್ದಾರೆ.

ನಮ್ಮ ಸವ್ರಮಂಡಲದ ಸ್ರುಶ್ಟಿಯ ಚರಿತ್ರೆ ಏನು ಹೇಳುತ್ತೆ?
ವಿಜ್ಞಾನಿಗಳ ಪ್ರಕಾರ ಬೇರೆ ಅಂತರ್ ನಕ್ಶತ್ರಗಳ ಬಾಹ್ಯಾಕಾಶಕ್ಕೆ ಹೋಲಿಸಿದರೆ ನಮ್ಮ ಸವ್ರಮಂಡಲದ ಸ್ರುಶ್ಟಿಯ ಮೊದಲು ಅತಿ ಕಡಿಮೆ ಪ್ರಮಾಣದಲ್ಲಿ ಮೆತನಾಲ್ ಏಕೀಕರಣ ಇತ್ತಂತೆ. ವಿಟ್ಟೇಟ್ ಹೇಳುವ ಪ್ರಕಾರ ನಮ್ಮ ಸವ್ರಮಂಡಲ ಸ್ರುಶ್ಟಿಯನ್ನು ನೋಡಿದರೆ ಅದು ಅದ್ರುಶ್ಟವನ್ನಿಸುವುದಿಲ್ಲವಂತೆ, ಕಾರಣ ಸವ್ರಮಂಡಲದಲ್ಲಿ ಹೆಚ್ಚು ಮೆತನಾಲ್ ಇರಲಿಲ್ಲವಂತೆ. ಆದರೆ ಈಗ ನಾವಿರುವುದಕ್ಕೆ ಮೆತನಾಲ್ ಸಾಕಶ್ಟು ಇದೆಯಂತೆ.

ಸಂಶೋದನೆಯ ಪಲಿತಾಂಶ ಏನು?
ಬಾಹ್ಯಾಕಾಶದಲ್ಲಿ ಇನ್ನಶ್ಟು ಅದ್ರುಶ್ಟಕರ ವಾತಾವರಣ ಇದೆಯಂತೆ. ನಾವು ಹೆಚ್ಚು ಹೆಚ್ಚು ಬಾಹ್ಯಾಕಾಶದಲ್ಲಿ ಒಳಹೊಕ್ಕಿದರೆ, ಸವ್ರಮಂಡಲದ ಸ್ಪೋಟಕ್ಕೂ ಮೆತನಾಲ್‌ಗೂ ಏನು ಸಂಬಂದವೆಂದು ತಿಳಿಯುತ್ತದೆ.

ನ್ಯೂಯಾರ‍್ಕ್ ಉಸಿರಿ-ಬಾನರಿಮೆ(ಆಸ್ಟ್ರೋಬಯಾಲೋಜಿ) ಸಂಶೋದನ ಕೇಂದ್ರ:
ಈ ಕೇಂದ್ರದ ಬಗ್ಗೆ ಹೇಳುವುದಾದರೆ, ಇದು ಬೂಮಿಯ ಮೇಲೆ ಉಸಿರಿಗಳ ಉಗಮದ ಬಗ್ಗೆ ಅದ್ಯಯನ ನಡೆಸುತ್ತಿರುವ, ಹಾಗೂ ಉಸಿರಿಗಳು ಉಗಮವಾಗಲು ಅನುಕೂಲಕರ ಗ್ರಹಗಳ ಹುಡುಕಾಟದ ಸಂಶೋದನೆಗೆ ಹಾಗೂ ಅನುಕೂಲಕರ ಸವ್ರಮಂಡಲದ ಹುಡುಕುವಲ್ಲಿ ನಿರತವಾಗಿರುವ ಏಕ ಮಾತ್ರ ಸಂಶೋದನಾ ಕೇಂದ್ರವಾಗಿದೆ. ಈ ಕೇಂದ್ರವು ನಾಸಾದ 7 ದಶಲಕ್ಶ ಡಾಲರ್ ಹಣ ಸಹಾಯದಿಂದ ನಡೆಯುತ್ತಿದೆ. ಹಾಗೆಯೇ ನಾಸಾದ ಆಸ್ಟ್ರೋಬಯಲಾಜಿ ವಿದ್ಯಾಲಯಕ್ಕೆ [NASA’s Astrobiology Institute(NAI)] ಸದಸ್ಯತ್ವವನ್ನು ಪಡೆದಿದೆ, ಜೊತೆಗೆ ರಿನ್ಸೆಲೀರ್ ಮತ್ತು ಆಲ್ಬನಿ ವಿಶ್ವವಿದ್ಯಾಲಯ, ಸಿರಕಸ್ ವಿಶ್ವವಿದ್ಯಾಲಯ, ಅರಿಜೋನಾ ವಿಶ್ವವಿದ್ಯಾಲಯ, ಮತ್ತು ನಾರ‍್ತ್ ಡಕೋಟ ವಿಶ್ವವಿದ್ಯಾಲಯದೊಂದಿಗೆ ಸಹಯೋಗ ಪಡೆದು ಸಂಶೋದನೆ ನಡೆಸುತ್ತಿದೆ. ಇಲ್ಲಿನ ಸಂಶೋದಕರು ಮತ್ತು ವಿದ್ಯಾರ‍್ತಿಗಳು ಸ್ರುಶ್ಟಿಯ ಹೊಸದರಲ್ಲಿನ ಬೂಮಿಯ ರಾಸಾಯನಿಕ,ಬವ್ತಿಕ ಮತ್ತು ಬವ್ಗೋಳಿಕ ವಾತಾವರಣಗಳನ್ನು ಅರಿಯುವಲ್ಲಿ ನಿರತರಾಗಿದ್ದಾರೆ. ಇದರಿಂದ ಉಸಿರಿಗಳ ಉಗಮಕ್ಕೆ ಕಾರಣ ತಿಳಿಯಲು ಇನ್ನಶ್ಟು ಸಹಾಯವಾಗುತ್ತಂತೆ. ಅವರು ಇನ್ನಶ್ಟು ಆಳವಾಗಿ ಸವ್ರಮಂಡಲದಲ್ಲಿನ ಗನ ಗ್ರಹಗಳಲ್ಲಿ ಅಂದರೆ ಮಂಗಳ ಹಾಗೂ ಇತರ ಗ್ರಹಗಳಲ್ಲಿ ಉಸಿರಿಗಳ ಉಗಮಕ್ಕೆ ಬೇಕಾಗುವ ರಾಸಾಯನಿಕ ಪ್ರಕ್ರಿಯೆ ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ.

ಕೊನೆಯ ನುಡಿ:
ಒಟ್ಟಿನಲ್ಲಿ ಈ ವಿಜ್ಞಾನಿಗಳು ಹೊಸದೊಂದು ಅನ್ವೇಶಣೆ ನಡೆಸಿದ್ದಾರೆ ಇದರಿಂದ ಬಾಹ್ಯಾಕಾಶದಲ್ಲಿ ಹೇಗೆ ಉಸಿರಿಗಳಾದವು ಎನ್ನುವುದು ಕಚಿತ ಪಡಿಸುವಲ್ಲಿ ಯಶಸ್ಸು ಕಂಡಿದೆ. ಇದಕ್ಕೆ ಅತಿ ಶಕ್ತಿಶಾಲಿ ದೂರದರ‍್ಶಕಗಳು, ಬಾಲಚುಕ್ಕಿ(ದೂಮಕೇತು)ಗಳು ಸಹಾಯವಾಗಿದೆ. ಮುಂದೆ ಬೇರೆ ಗ್ರಹಗಳಲ್ಲಿ ಉಸಿರಿಗಳಿರಬಹುದಾ ಎಂಬ ಪ್ರಶ್ನೆಗೂ ಉತ್ತರ ಸಿಗಲು ಸಾದ್ಯ ಅತವಾ ಉಸಿರಿಗಳು ವಾಸಿಸಲು ಸಾದ್ಯವೇ ಅತವಾ ಉಸಿರಿಗಳು ಅಲ್ಲಿ ಉಗಮವಾಗುತ್ತವೆಯೆ ಇಲ್ಲವೆ ಅತವಾ ಬಾಹ್ಯಾಕಾಶದಲ್ಲಿ ಅಂತ ಸಿಹಿ ವಲಯಗಳಿವೆಯೇ ಎಂಬುದು ಈ ಪ್ರಯೋಗಗಳಿಂದ ತಿಳಿಯಬಹುದಾಗಿದೆ. ಇದರಿಂದ ನಾವು ನಮ್ಮ ಸವ್ರಮಂಡಲದ ಗನ ಗ್ರಹಗಳಲ್ಲೂ ಉಸಿರಿಗಳ ಹುಟ್ಟುಹಾಕಲು ನಾವು ವಾಸಿಸಲು ಯೋಗ್ಯವಾದಂತ ವಾತಾವರಣ ಸ್ರುಶ್ಟಿಸಲು ಸಾದ್ಯವಾಗಬಹುದು. ಇದರಿಂದ ಮನುಕುಲಕ್ಕೆ ಮುಂದೆ ಎದುರಾಗುವ ಹೊರಬಾನಿನ ಆತಂಕಗಳಿಂದ ಹೊರಬರುವ ಪ್ರಯತ್ನದಲ್ಲೂ ಯಶಸ್ಸು ಕಾಣಲು ಸಾದ್ಯವಾದೀತು. ಕೊನೆಯಲ್ಲಿ ಹೇಳುವುದೇನೆಂದರೆ ಇಂತಹ ಸಂಶೋದನೆಯೊಂದು ಉಸಿರಿಗಳ ಉಳಿಸುವಲ್ಲಿ ಸಹಾಯವಾಗಲಿ, ಇನ್ನಶ್ಟು ಬೆಳವಣಿಗೆ ಕಾಣುತ್ತಿರುವ ದೇಶಗಳಲ್ಲಿ ಇದರ ಹೆಚ್ಚಿನ ಸಂಶೋದನೆಯಾಗಲಿ, ಅದರಿಂದ ಪಲಿತಾಂಶ ಈಗಲ್ಲದಿದ್ದರೂ ಇನ್ನು ನೂರು ವರ‍್ಶಗಳಲ್ಲೇ ಸಿಕ್ಕೀತು.

(ಮಾಹಿತಿ ಮತ್ತು ತಿಟ್ಟ ಸೆಲೆ: rpi.edu)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: