ದ್ರುಶ್ಟಿಗೆ ತಕ್ಕಂತೆ ಸ್ರುಶ್ಟಿ

ಡಾ|| ಮಂಜುನಾತ ಬಾಳೇಹಳ್ಳಿ.

positivethinking

ನಾವು ಪರಿಸ್ತಿತಿಯನ್ನು, ಪರಿಸರವನ್ನು ನೋಡುವ ರೀತಿ, ನಮ್ಮ ನಮ್ಮ ಮನಸ್ತಿತಿಗೆ ಸಂಬಂದಿಸಿದ್ದು. ಮನಸ್ಸೇ ಎಲ್ಲದರ ಮೂಲ. ಪ್ರತಿ ಬಾರಿಯೂ ಪ್ರತೀ ಕ್ಶಣವೂ ನಾವು ಯಾವುದರ ಬಗ್ಗೆ ಯೋಚಿಸುತ್ತಿದ್ದೇವೆ, ಏನು ಯೋಚಿಸುತ್ತಿದ್ದೇವೆ ಎಂದು ಪ್ರತಿಬಿಂಬಿಸಿ ಕೊಂಡಾಗ, ಅನಾಯಾಸವಾಗಿ ಯೋಚಿಸುವ ಮನೋಲಹರಿಗೆ ಕಡಿವಾಣ ಹಾಕಿದಂತಾಗುತ್ತದೆ. ಆಗ ಮನಸ್ಸು ನಾವು ಹೇಳಿದ ರೀತಿ ಕೇಳುತ್ತದೆ, ಚಿಂತಿಸುತ್ತದೆ. ಮನಸ್ಸನ್ನು ಸ್ರುಶ್ಟಿಸುವ ಮೆದುಳು, ಸ್ಪಾಂಜಿನಂತೆ. ಸ್ಪಾಂಜನ್ನು ಹಿಂಡಿದಾಗ ಹಳೇ ವಿಚಾರಗಳು ಹೊರಹೋಗಿ ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳಬಹುದು. ನಾವು ಕಲಿತ ವಿಶಯಗಳು, ಯೋಚಿಸುವ ರೀತಿ ಇತ್ಯಾದಿ ಕಾಲಕ್ರಮೇಣ ಬದಲಾವಣೆಗೊಳ್ಳುವುದು ಅನಿವಾರ‍್ಯ. ಹಳೆಯ ವಿಚಾರಗಳಿಗೆ ಅಂಟಿಕೊಳ್ಳದೆ ಹೊಸದನ್ನು ಬರಮಾಡಿಕೊಳ್ಳಬೇಕಾಗುತ್ತದೆ. ‘Delearning is as important as learning’.

ಮಾನವನ ಇಂದಿನ ಆಲೋಚನೆಗಳು, ಬಾವನೆಗಳು ಬಾಗಶಹ ಬೂತಕಾಲದ ಪ್ರಬಾವಕ್ಕೆ ಒಳಗಾಗಿರುತ್ತದೆ. ವರ‍್ತಮಾನಕ್ಕೆ ಬರುವಾಗ ಹಳೆಯದನ್ನು ಬಿಟ್ಟು ಹೊರಬರಬೇಕಾಗುತ್ತದೆ. ಮಗುವಾಗಿ, ಮಕ್ಕಳಾಗಿ, ಹದಿಹರೆಯದವರಾಗಿ, ವಯೋವ್ರುದ್ದರಾಗಿ ಅದೆಶ್ಟೋ ವಿಚಾರಗಳನ್ನು ಬದಿಗೊತ್ತಿ ವಿಕಾಸಗೊಳ್ಳುತ್ತೇವಲ್ಲವೇ? ಹಳೆನೀರು ಹರಿದರೆ ಮಾತ್ರ ಹೊಸನೀರು ಬರಲು ಸಾದ್ಯ. ಜೀವನ ನಿಂತ ನೀರಲ್ಲ. ಹಳೆಯ ವಿಚಾರಗಳಿಗೆ ಅಂಟಿಕೊಂಡು, ಅವನ್ನೇ ಸತ್ಯವೆಂದು, ಗಾಡವಾಗಿ ನಂಬಿ ಅದರಲ್ಲೇ ಮುಳುಗಿರುತ್ತೇವೆ. ನಾವು ನೋಡುತ್ತಿರುವ ಕೋನದಿಂದಲ್ಲದೇ ಬೇರೆ ಕೋನದಿಂದ ಪರಿಸ್ತಿತಿಯನ್ನು ನೋಡುವುದಿಲ್ಲ. ಹಾಗಾಗಿ ಮಿದುಳಿನ ವಿಕಸನ ಸಹಾ ಕುಂಟಿತಗೊಳ್ಳುತ್ತದೆ. ಮೆದುಳಿನ ಬೆಳವಣಿಗೆಗೆ ಆಗಾಗ ‘Refresh’ ಗುಂಡಿಯನ್ನು ಒತ್ತುವುದು ಅನಿವಾರ‍್ಯ.

ಇಂದಿನ ಸತ್ಯಗಳು ತಳೆದ ದೋರಣೆಗಳು ನಾಳಿನ ಬದುಕ ಹಾದಿಗಳಾಗಬೇಕಿಲ್ಲ. ಜೀವನದ ಅಂತಹ ಹಲವಾರು ಅಬಿಪ್ರಾಯಗಳನ್ನು ತೊಡೆದು ಹಾಕಲು ಹರಿತವಾದ ನುರಿತ ಮನಸ್ಸಿಗೂ ಅಸಾದ್ಯವಾದೀತು. ಕಲ್ಲು ಬಂಡೆಗಳನ್ನು ಚೂರಾಗಿಸಲು ಅಸಾದ್ಯವೆಂದು ನೀರು ಅವುಗಳನ್ನೇ ಬಳಸಿ, ಸುತ್ತುವರಿದು, ಸಂದಿಗೊಂದಿಗಳಲ್ಲಿ ತೂರಿ ಮುನ್ನಡೆಯುತ್ತದೆ. ಜೀವನ ಪ್ರವಾಹವೇ ಹಾಗೆ, ಹರಿದಶ್ಟೂ ಪಾತ್ರವಿದೆ, ತಳೆದಶ್ಟೂ ಆಳವಿದೆ. ನಾವು ಚಿಕ್ಕವರಿರುವಾಗ, ಮಲೆನಾಡಿನ ಮಳೆಯಲ್ಲಿ ಆಟವಾಡುತ್ತಾ ಶಾಲೆಗೆ ಹೋಗುತ್ತಿದ್ದೆವು. ನೀರಿನ ಸಣ್ಣ-ಸಣ್ಣ ತೊರೆಗಳಿಗೆ ಮಣ್ಣಿನಿಂದ ಕಟ್ಟೆ ಕಟ್ಟುತ್ತಿದ್ದೆವು. ನೀರು ಮುನ್ನುಗ್ಗಲು ಪ್ರಯತ್ನಿಸಿ ವಿಪಲವಾದಾಗ ಅದು ಕಟ್ಟೆಯನ್ನು ಸುತ್ತುವರಿದು ತನ್ನದೇ ಹೊಸಹಾದಿ ನಿರೂಪಿಸಿಕೊಂಡು ಮುಂದೆ ಸಾಗುತ್ತಿತ್ತು.

ಜೀವನವೇ ಹಾಗೆ, ಸಮಸ್ಯೆಗಳು ಸಾವಿರಾರು, ಸಮಸ್ಯೆಯ ಬಾಗವಾಗದೇ, ಅದನ್ನು ಬಗೆಹರಿಸುವ ಪರಿಯ ಬಗ್ಗೆ ಯೋಚಿಸುವುದು ಅಗತ್ಯ. ಆಗ ಸಮಸ್ಯೆಯ ಸುಳಿಯಲ್ಲಿ ನರಳುವುದಿಲ್ಲ. ನಮ್ಮ ನಿಯಂತ್ರಣಕ್ಕೆ ಸಿಗದ ಎಶ್ಟೋ ಸಂಗತಿಗಳು ನಮ್ಮ ಜೀವನದ ಮೇಲೆ ಪ್ರಬಾವ ಬೀರಬಲ್ಲವು. ಆದರೆ ಅದಕ್ಕೆ ಪ್ರತಿಕ್ರಯಿಸುವಿಕೆ ನಮ್ಮ ನಿಯಂತ್ರಣಕ್ಕೆ / ನಿರ‍್ದಾರಕ್ಕೆ ಬಿಟ್ಟಿದ್ದು. ಮಿಕ್ಕಂತೆ, ಬೂತಕಾಲದಲ್ಲಿ ಲೀನವಾದರೆ ಅತವಾ ಬವಿಶ್ಯದ ಚಿಂತೆಯಲ್ಲಿದ್ದರೆ, ವರ‍್ತಮಾನ ಕಳೆದೇ ಹೋಗುತ್ತದೆ. ಜೀವನವೇ ಹಾಗೆ, ಹಿಂದಿನ ಅತವಾ ಮುಂದಾಗ ಬಹುದಾದ, ಆಗದಿರಬಹುದಾದ, ಯೋಚನೆಗಳಲ್ಲಿ ಇಂದು ಕಳೆದುಹೋಗುತ್ತದೆ. ಅದಕ್ಕೇ ಡಿ. ವಿ. ಜಿ ಯವರು ಹೇಳಿದ್ದು:

ಮುಂದೇನೋ, ಮತ್ತೇನೋ, ಇಂದಿಗಾ ಮಾತೇಕೆ?
ಸಂದರ‍್ಬ ಬರಲಿ, ಬಂದಾಗಳಾ ಚಿಂತೆ ।।
ಹೊಂದಿಸುವನಾರೊ,ನಿನ್ನಾಳಲ್ಲ, ಬೇರಿಹನು
ಇಂದಿಗಿಂದಿನ ಬದುಕು – ಮಂಕುತಿಮ್ಮ ।।

ಈವತ್ತಿನ ಎಲ್ಲಾ ಆದ್ಯಾತ್ಮಿಕ ವ್ಯಾಕ್ಯಾನಗಳಲ್ಲೂ “ಲಿವಿಂಗ್ ಇನ್ ಪ್ರೆಸೆನ್ಸ್” ಬಗ್ಗೆ ಹೇಳುತ್ತಾರೆ. ಯಾವುದೇ ಒಂದು ನಿರ‍್ದಿಶ್ಟವಾದ ನಿರ‍್ದಾರಕ್ಕೆ ಹ್ರುದಯ ಹಾಗೂ ಮನಸ್ಸು ಮುಕ್ಯ. ಹ್ರುದಯ ಬಾವನಾತ್ಮಕವಾದರೆ, ಮನಸ್ಸು ತರ‍್ಕಬದ್ದವಾಗಿರುತ್ತದೆ. ಇವೆರಡರ ವೈರುದ್ಯತೆ ಆಂತರಿಕ ದ್ವಂದ್ವಕ್ಕೆ ಕಾರಣವಾಗುತ್ತದೆ. ದ್ವಂದ್ವ ನಮ್ಮನ್ನು ಗುರಿಯೆಡೆಗೆ ನಡೆಸದು. ಮನಸ್ಸನ್ನು ಹರಿತಗೊಳಿಸಿ ಹ್ರುದಯದ ಮಾತನ್ನು ಆಲಿಸಿದಾಗ, ಬಾಗಶಹ ವೈರುದ್ಯತೆ ತೊಲಗಿ, ಸಾಮರಸ್ಯತೆಗೆ ತಿರುಗಿದಾಗ, ಯಾವುದೇ ವಿಚಾರದ ಬಗ್ಗೆ ಸ್ಪಶ್ಟ ತೀರ‍್ಮಾನ ಕೈಗೊಳ್ಳಲು, ಆ ತೀರ‍್ಮಾನಕ್ಕೆ ತಕ್ಕಂತೆ ಕಾರ‍್ಯೋನ್ಮುಕವಾಗಲು ಸಾದ್ಯ. ತೀರ‍್ಮಾನ ತೆಗೆದು ಕೊಳ್ಳದಿರುವಿಕೆಗೆ ಈ ದ್ವಂದ್ವವೂ ಹಾಗೂ ಮುಂದೂಡುವ ಪ್ರವ್ರುತ್ತಿ ಕಾರಣ.

ಜೀವನ ಸಾಕಶ್ಟು ಪಾಟ ಕಲಿಸುತ್ತದೆ, ನಿಜ. ಆದರೆ ತುಂಬಾ ಜನರು ಜೀವನವನ್ನು ಇತರರ ಕಣ್ಣಿನಿಂದ ನೋಡುತ್ತಾರೆ ವಿನಹ ತಮ್ಮ ಅನುಬವದಿಂದ ನೋಡುವುದಿಲ್ಲ. ನಮಗೆ ಗೋಚರವಾಗುವ ಪ್ರಪಂಚವನ್ನು ನಮ್ಮ ಸಾಮ್ಯತೆಗೆ, ನಮ್ಮದೇ ಅಬಿಪ್ರಾಯಗಳಿಗೆ ಹೊಂದಿಸಿಕೊಳ್ಳುತ್ತೇವೆ. ನೆಪೋಲಿಯನ್ ಹೇಳಿದಂತೆ, ಯಾರು ಹೆಚ್ಚು ಪುಸ್ತಕಗಳನ್ನು ಓದುತ್ತಾರೋ, ಅವರು ಹಲವು ಜೀವನಗಳನ್ನು ಅನುಬವಿಸುತ್ತಾರೆಂದು, ಪ್ರ್ಯಾನ್ಸಿಸ್ ಬೇಕನ್ ಬಹಳ ಹಿಂದೆಯೇ ಹೇಳಿದಂತೆ ಓದುವುದರಿಂದ ಮನುಶ್ಯ ಪೂರ‍್ಣತೆಯನ್ನು ಪಡೆಯುತ್ತಾನೆ. ಅಂದರೆ ಜೀವನವ ನೋಡುವ ಅಂತಚಕ್ಶು ಕ್ರಿಯಾತ್ಮಕವಾಗುತ್ತದೆಂದು ಅರ‍್ತ. ನಮ್ಮದೇ ಜೀವನದ ಸಿಂಹಾವಲೋಕನ, ಪಕ್ಶಿನೋಟ ಜೀವನದಲ್ಲಿ ಆಳ ಗಾತ್ರವನ್ನು ತಂದು ಕೊಡುತ್ತದೆ. ಜೀವನವ ವಿಶ್ಲೇಶಿಸಿಕೊಳ್ಳುವ ಚಿಂತನೆ ಬೇಕಶ್ಟೆ. ತೂರಿ ಬಿಟ್ಟ ಮನಸ್ಸಿಗೆ ಸ್ವಂತವಾಗಿ ವಿಚಾರ ಮಾಡುವ ಶಕ್ತಿ ಕಡಿಮೆ. ಮೌನವಾಗಿ ಕೆಲ ನಿಮಿಶವಾದರೂ, ನಮ್ಮೊಳಗೆ ನಾವಿರುವ ಕ್ರಮ ನಿತ್ಯವೂ ಇದ್ದರೆ, ಈ ವಿಶ್ಲೇಶಣೆ ಸಾದ್ಯವಾದೀತು.

ವ್ಯಕ್ತಿತ್ವ ವಿಕಸನಗೊಂಡಂತೆ ವ್ಯಕ್ತಿ ಗೌಣವಾಗುತ್ತಾನೆ. ವ್ಯಕ್ತಿಯ ಬಾವನೆ ಮಾತ್ರ ಅತ್ಯಮೂಲ್ಯವಾಗುತ್ತದೆ. ಸಂಬಂದಗಳಲ್ಲಿ, ಸಂಬಂದಿಸಿದವರ ವ್ಯಕ್ತಿತ್ವವನ್ನು ವಿಶ್ಲೇಸುತ್ತಿದ್ದರೆ, ವಿಶ್ಲೇಶಣೆ ಮಾತ್ರ ಶಾಶ್ವತವಾಗುತ್ತದೆ. ವ್ಯಕ್ತಿ ಮುಕ್ಯವಾದರೂ ಆ ವ್ಯಕ್ತಿಯ ಬಗೆಗಿನ ಬಾವನೆ ಅತೀ ಮುಕ್ಯವಾಗುತ್ತದೆ. ನಾವು ದೇವರನ್ನು ಪೂಜಿಸುತ್ತೇವೆ, ದೇವರು ಪ್ರತ್ಯಕ್ಶವಾಗಲಾರ, ದೇವರು ಮುಕ್ಯವಲ್ಲ. ದೇವರ ಬಗೆಗಿನ ಬಕ್ತಿ ಬಾವ ಮುಕ್ಯ ದೇವರನ್ನು ಸ್ತುತಿಸುವುದೆಂದರೆ, ದೇವರನ್ನು ಅಬಿನಂದಿಸುವುದಶ್ಟೇ. ಕಾರಣೀ ಬೂತನಾದ ಆತನಿಗೆ ವಂದನೆಗಳ ಹೇಳುವ ಪರಿಯಶ್ಟೇ. ಒಟ್ಟಾರೆ ನಾವು ಜಗತ್ತನ್ನು ನೋಡುವ ಪರಿಯಲ್ಲಿ ನಮ್ಮ ಸುಕ-ದುಕ್ಕಗಳು ಅಡಗಿವೆ. ಆಕಾಶಕ್ಕೆ ಕಲ್ಲು ಹೊಡೆದರೆ ಆ ಕಲ್ಲು ನಮ್ಮ ತಲೆಗೇ ಬೀಳಬಹುದು. ಅದೇ ಆಕಾಶದಲ್ಲಿ ನಮ್ಮನ್ನು ಲೀನಗೊಳಿಸಿಕೊಂಡರೆ, ಆಕಾಶದ ಒಂದು ಅಂಗವಾದ ನಾವು ಆಕಾಶಕ್ಕೆ ತೆರೆದುಕೊಂಡರೆ ಅವಗಾಹನೆ ಉಂಟಾಗುತ್ತದೆ.

ಜೀವನದಲ್ಲಿ ಆಸ್ತಿ, ಅಂತಸ್ತು, ಸಂಬಂದ, ವ್ಯವಹಾರ ಏನೇ ಇರಲಿ ಯಾವಾಗ ಅದು ನಮ್ಮನ್ನು ನೋಯಿಸುವಂತಾದರೆ, ಸಹಿಶ್ಣುತೆಯ ಪರಿದಿಯನ್ನು ಮೀರಿದರೆ ಅದರಿಂದ ಹೊರಬರುವುದೇ ಸುಕಕ್ಕೆ ನಾಂದಿ. When the pain pains you so much, it is better to get out of it. ಮತ್ತೊಮ್ಮೆ ಡಿ. ವಿ. ಜಿ ಯವರ ನೆನೆದುಕೊಂಡರೆ –

ಎರಡು ಕೋಣೆಗಳ ಮಾಡು ಮನದಾಲಯದಿ
ಹೊರ ಕೋಣೆಯಲಿ ಲೋಗಾರಾಟಗಳನಾಡು||
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ
ವರಯೋಗ ಸೂತ್ರವಿದು – ಮಂಕುತಿಮ್ಮ ||

( ಚಿತ್ರ ಸೆಲೆ:  earthmonsterworld.ning.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks