ಹುಟ್ಟು ಹೋರಾಟಗಾರ ನಮ್ಮ ‘ವಿನಯ್ ಕುಮಾರ್’

ರಾಮಚಂದ್ರ ಮಹಾರುದ್ರಪ್ಪ.

334741-vinay-kumar-domes-bowl-700

ನಿಮ್ಮಲ್ಲಿ ಹೆಚ್ಚು ಪ್ರತಿಬೆ ಇಲ್ಲದ್ದಿದ್ದರೂ ಸಾದನೆಗೈಯ್ಯಬಹುದು ಎಂಬುದಕ್ಕೆ ಕರ‍್ನಾಟಕ ರಣಜಿ ತಂಡದ ನಾಯಕ, ನಮ್ಮ ಹೆಮ್ಮೆಯ ವಿನಯ್ ಕುಮಾರ್ ಜೀವಂತ ಎತ್ತುಗೆ. ಅರೇ! ಇದೇನ್ ಸ್ವಾಮಿ, ಮೂರ‍್ನಾಲ್ಕು ವರ‍್ಶ ಅಂತರಾಶ್ಟ್ರಿಯ ಕ್ರಿಕೆಟ್ ಆಡಿರೋ ಒಬ್ಬ ಆಟಗಾರನಿಗೆ ಪ್ರತಿಬೆಯೇ ಇಲ್ಲ ಅಂತೀರಲ್ಲ? ಏನಿದರ ಮರ‍್ಮ? ಹೌದು ಸ್ವಾಮಿ, ವಿನಯ್ ಅವರನ್ನು ಕರ‍್ನಾಟಕದಿಂದ ಬಾರತಕ್ಕೆ ಆಡಿರೋ ಇತರೆ ಆಟಗಾರರಿಗೆ ಹೋಲಿಸಿದರೆ ತಿಳಿಯುತ್ತೆ ವಿನಯ್ ಅವರ ಶಕ್ತಿ ಅವರ ಪ್ರತಿಬೆ ಅಲ್ಲ, ಅವರ ಕಟಿಣ ಪರಿಶ್ರಮ ಹಾಗು ಕ್ರಿಕೆಟ್ ಪರ ಬದ್ದತೆ ಅಂತ. ವೇಗದ ಬೌಲರ್ ಆಗಿರುವ ವಿನಯ್ ಅವರಲ್ಲಿ ಜಾವಗಲ್ ಶ್ರೀನಾತ್ ಅವರ ಬೌಲಿಂಗ್ ನಲ್ಲಿ ಇದ್ದ ತೀಕ್ಶ್ಣತೆಯಾಗಲಿ, ವೆಂಕಟೇಶ್ ಪ್ರಸಾದ್ ಅವರಲ್ಲಿ ಇದ್ದ ಚಾಕಚಕ್ಯತೆಯಾಗಲಿ ಇಲ್ಲ. ಆದರೂ ಸಹ ವಿನಯ್ ತಮ್ಮ ವಿಶಿಶ್ಟ ಸಾದನೆಯಿಂದ ಕರ‍್ನಾಟಕ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಅಜರಾಮರ.

ಮೂಲತಹ ದಾವಣಗೆರೆಯವರಾದ ವಿನಯ್ ತಮ್ಮ ಕ್ರಿಕೆಟ್ ನ ಮೊದಲ ಪಾಟಗಳನ್ನು ಅವರ ಬಾಲ್ಯದ ತರಬೇತುದಾರರಾದ ಪ್ರಕಾಶ್ ಪವಾರ್ ಅವರ ಬಳಿ ಕಲಿತರು. ಆರಂಬದಲ್ಲಿ ಬ್ಯಾಟ್ಸ್ ಮೆನ್ ಆಗಬೇಕೆಂದಿದ್ದ ವಿನಯ್ ಕ್ರಮೇಣ ಬೌಲಿಂಗ್ ಪರ ಹೆಚ್ಚು ಒಲವು ತೋರಿ ಬೌಲರ್ ಆಗಿಯೇ ಬದಲಾದರು. 18-20 ರ ವಯೋಮಿತಿಯ ಕ್ರಿಕೆಟ್ ನಲ್ಲಿ ದಾವಣಗೆರೆ ಜಿಲ್ಲೆಯ ಪರ ಆಡಿ ಗಮನ ಸೆಳೆದಿದ್ದ ವಿನಯ್ ಅವರಿಗೆ ಕರ‍್ನಾಟಕ ತಂಡದ ಬಾಗಿಲು ತೆರೆದುಕೊಳ್ಳಲು ಹೆಚ್ಚು ಕಾಲ ಆಗಲೇ ಇಲ್ಲ. ಅಲ್ಲಿಂದ ಬೆಂಗಳೂರಿಗೆ ಬಂದು ಕ್ಲಬ್ ಕ್ರಿಕೆಟ್ ನಲ್ಲಿ ವಿಜಯ ಬ್ಯಾಂಕ್ ಪರ ಆಡಿ ಪಕ್ವಗೊಂಡಿದ್ದ ವಿನಯ್ 20ನೇ ವಯಸ್ಸಿನಲ್ಲೇ, 2004 ರಲ್ಲಿ ಕೊಲ್ಕತ್ತಾದಲ್ಲಿ ಬಂಗಾಳದ ಎದುರು ಪಾದಾರ‍್ಪಣೆ ಮಾಡಿದರು. ಈ ಪಂದ್ಯದಲ್ಲಿ ಕರ‍್ನಾಟಕ ಸೋತರೂ ವಿನಯ್ 5 ವಿಕೆಟ್ ಪಡೆದು ವಿಶ್ವಾಸ ಮೂಡಿಸಿದರು. ಅಲ್ಲಿಂದ ವಿನಯ್ ಹಿಂತಿರುಗಿ ನೋಡಲೇ ಇಲ್ಲ. ದೇಶಿಯ ಕ್ರಿಕೆಟ್ ನ ರಣಜಿ, ಇರಾನಿ, ದುಲೀಪ್, ವಿಜಯ್ ಹಜಾರೆ ಟ್ರೋಪಿಗಳಲ್ಲಿ ಪ್ರತಿ ವರ‍್ಶ ಹೆಚ್ಚೆಚ್ಚು ವಿಕೆಟ್ ಪಡೆಯುತ್ತಲೇ ಹೋದರು.

2007 ರಲ್ಲಿ ಅತ್ಯುತ್ತಮ ದೇಶೀಯ ಬೌಲರ್ ಪ್ರಶಸ್ತಿಗೂ ವಿನಯ್ ಬಾಜನರಾದರು. ಅಂದು ವಿನಯ್ ಒಂದಲ್ಲ ಒಂದು ದಿನ ಬಾರತದ ಪರ ಅಂತರಾಶ್ಟ್ರಿಯ ಕ್ರಿಕೆಟ್ ಆಡೇ ಆಡ್ತಾರೆ ಅನ್ನೋದು ನೆಲೆಗೊಂಡಿತು. ಆದರೂ ಸಹ ಮುಂದಿನ 3 ವರ‍್ಶ ಅವರಿಗೆ ಅದ್ರುಶ್ಟ ಕೈಗೂಡುವುದೇ ಇಲ್ಲ. ರಣಜಿಯಲ್ಲಿ ಪ್ರತಿ ವರ‍್ಶ ಕನಿಶ್ಟ 40 ವಿಕೆಟ್ ಪಡೆಯುತ್ತಿದ್ದ ವಿನಯ್ ಯಾಕೋ ಆಯ್ಕೆಗಾರರ ಕಣ್ಣಿಗೆ ಬೀಳುವುದೇ ಇಲ್ಲ!

ಇಶ್ಟೆಲ್ಲಾ ವಿರೋದಾಬಾಸಗಳ ನಡುವೆಯೂ ವಿನಯ್ ಎದೆಗುಂದದೆ ತಮ್ಮ ಸ್ತಿರ ಪ್ರದರ‍್ಶನವನ್ನು ಕಾಯ್ದುಕೊಂಡು ಹೋದರು. ವಿಕೆಟ್ ಪಡೆಯುತ್ತಲೇ ಹೋದರು. 2010ರ IPL ನಲ್ಲಿ ಗಮನ ಸೆಳೆದಿದ್ದ ವಿನಯ್ ಅವರಿಗೆ ಅದೇ ವರ‍್ಶದ T20 ವಿಶ್ವಕಪ್ ನಲ್ಲಿ ಬಾರತ ಪರ ಆಡಲಿಕ್ಕೆ ಕರೆ ಬಂದೇ ಬಿಟ್ಟಿತು. ಅಲ್ಲಿಗೆ ನಮ್ಮ ಕನ್ನಡದ ಹುಡುಗ ಅಂತರಾಶ್ಟ್ರಿಯ ಕ್ರಿಕೆಟಿಗನಾದನು. ಅಲ್ಲಿಂದ ಸುಮಾರು ಒಂದೂವರೆ ವರ‍್ಶ ಒಳ್ಳೆಯ ಪ್ರದರ‍್ಶನ ಕಾಯ್ದುಕೊಂಡಿದ್ದ ವಿನಯ್ 2012ರ ಪೆರ‍್ತ್ ಟೆಸ್ಟ್ ನಲ್ಲಿ ಟೆಸ್ಟ್ ಕ್ರಿಕೆಟ್ ಗೂ ಪಾದಾರ‍್ಪಣೆ ಮಾಡಿದರು. ದುರಂತ ಎಂದರೆ ಆ ಪಂದ್ಯದ ನಂತರ ವಿನಯ್ ಇಲ್ಲಿ ತನಕ ಇನ್ನೊಂದು ಟೆಸ್ಟ್ ಆಡಿಲ್ಲ. ಆದರೆ ಒಂದು ದಿನದ ಪಂದ್ಯಗಳಲ್ಲಿ ಒಳ್ಳೆ ಪ್ರದರ‍್ಶನ ನೀಡುತ್ತಾ ಕೆಲವು ವರ‍್ಶ ಆಡುತ್ತಲೇ ಹೋದರು. ಆದರೆ ದುರದ್ರುಶ್ಟವೋ ಏನೋ ಎಂಬಂತೆ 2013ರ ನವೆಂಬರ್ ನಲ್ಲಿ ತವರು ನೆಲ ಬೆಂಗಳೂರಿನಲ್ಲಿ ಆಡಿದ ಪಂದ್ಯವೇ ವಿನಯ್ ಅವರ ಕಟ್ಟ ಕಡೆಯ ಅಂತರಾಶ್ಟ್ರಿಯ ಪಂದ್ಯವಾಯಿತು. ಹೌದು, ಆ ಪಂದ್ಯದಲ್ಲಿ ವಿನಯ್ 9 ಓವರ್ ಗಳಲ್ಲಿ 100 ರ ಮೇಲೆ ರನ್ ನೀಡಿ ಬೇಸರ ಮೂಡಿಸಿದರು. ಇದು ಕಳಪೆ ಪ್ರದರ‍್ಶನವೇ, ಆದರೆ ಇದಕ್ಕಿಂತ ಕಳಪೆ ಆಟ ಆಡುತ್ತಲೇ ಬಹಳಶ್ಟು ಆಟಗಾರರು ಇನ್ನೂ ಅಂತರಾಶ್ಟ್ರಿಯ ಕ್ರಿಕೆಟ್ ಹೇಗೆ ಆಡುತ್ತಿದ್ದಾರೆ ಅನ್ನೋದೇ ಯಕ್ಶ ಪ್ರಶ್ನೆ! ಇತರರಿಗೆ ಸಿಕ್ಕಂತೆ ಇನ್ನೊಂದು ಅವಕಾಶ ವಿನಯ್ ಅವರಿಗೆ ಸಿಗಲಿಲ್ಲ ಅನ್ನೋದೇ ನೋವಿನ ಸಂಗತಿ.

ಸಾಮಾನ್ಯವಾಗಿ ಅಂತರಾಶ್ಟ್ರಿಯ ಮಟ್ಟದಲ್ಲಿ ಆಡಿ ದೇಶಿಯ ಕ್ರಿಕೆಟ್ ಗೆ ಹಿಂದಿರುಗುವ ಆಟಗಾರರು ದೇಶಿಯ ಕ್ರಿಕೆಟ್ ಆಡಲು ಹೆಚ್ಚು ಒಲವು ತೋರುವುದಿಲ್ಲ. ಅವರ ದೋರಣೆಯೇ ಬದಲಾಗಿರುತ್ತದೆ ಅನ್ನೋದಕ್ಕೆ ನೂರಾರು ಆಟಗಾರರ ಎತ್ತುಗೆ ನಮ್ಮ ಕಣ್ಣ ಮುಂದೆ ಇದೆ. ಆದರೆ ವಿನಯ್ ಮಾತ್ರ ಇದಕ್ಕೆ ಅಪವಾದ. ಬಾರತ ತಂಡದಿಂದ ಹಿಂದಿರುಗಿದ ವಿನಯ್ ಒಂದೂವರೆ ದಶಕದಿಂದ ರಣಜಿ ಟ್ರೋಪಿಯನ್ನು ಗೆಲ್ಲಲಾಗದೆ ಸೊರಗಿದ್ದ ಕರ‍್ನಾಟಕ ತಂಡದ ಸಾರತ್ಯ ವಹಿಸಿ ಬಾರತ ದೇಶಿಯ ಕ್ರಿಕೆಟ್ ಇತಿಹಾಸದಲ್ಲೇ ಯಾವ ರಾಜ್ಯ ತಂಡವೂ ಮಾಡದ ಅಪರೂಪದ ಅಬೂತಪೂರ‍್ವ ಸಾದನೆ ಮಾಡಿದರು.

ವಿನಯ್ 2010 ರಿಂದಲೇ ಕರ‍್ನಾಟಕದ ನಾಯಕರಾಗಿದ್ದರೂ, 3 ವರ‍್ಶ ತಂಡ ಒಳ್ಳೆ ಪ್ರದರ‍್ಶನ ನೀಡುತ್ತಿದ್ದರೂ ಕ್ವಾಟರ್ ಪೈನಲ್, ಸೆಮಿಪೈನಲ್ ಒಳಗೇ ತಂಡ ಮುಗ್ಗುರುಸುತ್ತಿತ್ತು. ಆದರೆ 2013-14ರ ಸಾಲಿನ ರಣಜಿಯಲ್ಲಿ ಇದು ಬದಲಾಯಿತು. ಆ ವರ‍್ಶ ಒಂದೂ ಪಂದ್ಯವನ್ನು ಸೋಲದೇ ಮಹಾರಾಶ್ಟ್ರ ವಿರುದ್ದ ಪೈನಲ್ ಗೆದ್ದು 15 ವರ‍್ಶಗಳ ನಂತರ ಕರ‍್ನಾಟಕ ರಣಜಿ ಟ್ರೋಪಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಇದು ಕರ‍್ನಾಟಕದ 7ನೇ ರಣಜಿ ಕಿರೀಟ. ಈ ಗೆಲುವಿನಲ್ಲಿ ಬೌಲರ್ ವಿನಯ್ ರ ಪಾತ್ರಕ್ಕಿಂತ ನಾಯಕ ವಿನಯ್ ಅವರ ಪಾತ್ರ ಹಿರಿದು. ಇದೇ ರಣಜಿಯ ಸರಣಿಯಲ್ಲಿ ಇಂದು ಬಾರತ ತಂಡಕ್ಕೆ ಆಡುವ ಹೊಸ್ತಿಲಲ್ಲಿ ನಿಂತಿರುವ ಕರುಣ್ ನಾಯರ್, ಶ್ರೇಯಸ್ ಗೋಪಾಲ್ ಅಂತಹ ಆಟಗಾರರು ವಿನಯ್ ನಾಯಕತ್ವದಲ್ಲಿ ಕರ‍್ನಾಟಕ ಪರ ಪಾದಾರ‍್ಪಣೆ ಮಾಡಿದರು. ಅಶ್ಟೇ ಅಲ್ಲ ಕೆ.ಎಲ್. ರಾಹುಲ್ ಮೇಲೆ ಹೆಚ್ಚು ಬರವಸೆ ಇಟ್ಟು ಹೆಚ್ಚು ಅವಕಾಶ ಕೊಟ್ಟಿದ್ದಕ್ಕೆ ಇಂದು ರಾಹುಲ್ ಟೆಸ್ಟ್ ಆಟಗಾರರಾಗಿದ್ದರೆ. ಇವರುಗಳೇ ಹೇಳುವಂತೆ ವಿನಯ್ ಒಬ್ಬ ಆಶಾವಾದಿ ನಾಯಕ, ಹುಡುಗರನ್ನು ಹುರಿದುಂಬಿಸಿ ಮಾರ‍್ಗದರ‍್ಶನ ನೀಡುತ್ತಾರೆ. ಮೊದಲ ಸರಣಿಯಲ್ಲೇ ಸತತ 3 ಶತಕ ಸಿಡಿಸಿದ ಕರುಣ್, ಹಾಗು ಶ್ರೇಯಸ್ ಅವರ ಸ್ತಿರ ಬೌಲಿಂಗ್ ಪ್ರದರ‍್ಶನವೇ ಇದಕ್ಕೆ ಸಾಕ್ಶಿ. ಈ ವರ‍್ಶದ ಸೆಮಿಪೈನಲ್ ಪಂದ್ಯ ವಿನಯ್ ತಂಡಕ್ಕೆ ಎಶ್ಟು ಮುಕ್ಯ ಹಾಗೂ ಅವರ ಪ್ರಬಾವ ಏನು ಎಂಬುದಕ್ಕೆ ಸಾಕ್ಶಿಯಾಯಿತು.

ಮೊಹಾಲಿಯಲ್ಲಿ ಪಂಜಾಬ್ 223/3 ತಲುಪಿ ನಮ್ಮಿಂದ ಪಂದ್ಯ ಕಸಿದುಕೊಳ್ಳುವ ಹೊಸ್ತಿಲಲ್ಲಿತ್ತು. ಅಂತರಾಶ್ಟ್ರಿಯ ಕ್ಯಾತಿಯ ಯುವರಾಜ್ ಸಿಂಗ್ ನಮ್ಮ ಬೌಲರ್ ಗಳನ್ನು ಕಾಡುತ್ತಿದ್ದರು. ಆ ಪಂದ್ಯದ ಆರಂಬದಲ್ಲೇ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ವಿನಯ್ ಸುಮಾರು ಎರಡು ತಾಸು ಮೈದಾನದಿಂದ ಹೊರಗುಳಿದ್ದಿದ್ದರು. ಆನಂತರ ಮೈದಾನಕ್ಕೆ ಮತ್ತೆ ಕಾಲಿಟ್ಟ ವಿನಯ್ ಪಂಜಾಬ್ ನ ಅಂತ್ಯ ಹಾಡಿದರು. 223/3 ಇಂದ 280 ಕ್ಕೆ ಪಂಜಾಬ್ ಆಲ್ ಔಟ್ ಆಯಿತು. ವಿನಯ್ 5 ವಿಕೆಟ್ ಪಡೆದರು. ಇದನ್ನೇ ಅಲ್ಲವೇ ಒಳ್ಳೆ ನಾಯಕನ ಗುಣ ಅನ್ನೋದು? ತಾನು ಮಾಡಿ ಇತರರಿಗೆ ದಾರಿ ತೋರಿಸುತ್ತಾನೆ. ಅದೇ ವರ‍್ಶ ಒಂದು ದಿನದ ಆವ್ರುತ್ತಿಯ ವಿಜಯ್ ಹಜಾರೆ ಟ್ರೋಪಿಯನ್ನೂ ಗೆದ್ದರು. ನಂತರ ‘ಬಾರತ ಇತರೆ’ ತಂಡದ ಮೇಲೆ ಇರಾನಿ ಟ್ರೋಪಿ ಗೆದ್ದು ಇತಿಹಾಸ ಸ್ರುಶ್ಟಿಸಿತು ಕರ‍್ನಾಟಕ ತಂಡ. ಏನಿದು ಇತಿಹಾಸ ಅಂತೀರಾ? ಸುಮಾರು 80 ವರ‍್ಶದ ಇತಿಹಾಸ ಇರುವ ಬಾರತದ ದೇಶಿಯ ಕ್ರಿಕೆಟ್ ನಲ್ಲಿ ಒಂದೇ ತಂಡ ಎಲ್ಲಾ ಟ್ರೋಪಿಗಳನ್ನು ಗೆದ್ದಿರಲಿಲ್ಲ. ಆದರೆ ವಿನಯ್ ಅವರ ಕರ‍್ನಾಟಕ ತಂಡ ಈ ಸಾದನೆ ಮಾಡಿ ಸುವರ‍್ಣಾಕ್ಶರಗಳಲ್ಲಿ ಇತಿಹಾಸ ಬರೆಯಿತು. ಈ ಗೆಲುವಿನ ನಾಗಾಲೋಟ ಅಲ್ಲಿಗೆ ನಿಲ್ಲದೇ ಮುಂದಿನ ವರ‍್ಶವೂ ಮುಂದುವರಿಯಿತು. 2014-15ರ ಸರಣಿಗಳಲ್ಲೂ ವಿನಯ್ ಅವರ ಕರ‍್ನಾಟಕ ತಂಡ ಎಲ್ಲಾ ಟ್ರೋಪಿಗಳನ್ನು ಗೆದ್ದು ಮತ್ತೊಮ್ಮೆ ಇತಿಹಾಸದ ಪುಟ ಸೇರಿತು.

FB_20150313_12_47_41_Saved_Picture

ಕಾಕತಾಳೀಯವೋ ಏನೋ ಎಂಬಂತೆ ಅದೇ ಸಾಲಿನ ರಣಜಿ ಸೆಮಿಪೈನಲ್ ನಲ್ಲೂ ಪಂದ್ಯದಲ್ಲಿ ಹಿಂದುಳಿದ್ದಿದ್ದ ಕರ‍್ನಾಟಕ ತಂಡ ವಿನಯ್ ಅವರ ಬೌಲಿಂಗ್ ಬಲದ ಮೇಲೆ ಗೆದ್ದು ಪೈನಲ್ ಗೆ ಲಗ್ಗೆ ಇಟ್ಟಿತು. ಮುಂಬೈ ವಿರುದ್ದ ಬೆಂಗಳೂರಿನ ಒಳ್ಳೆ ಬ್ಯಾಟಿಂಗ್ ಪಿಚ್ ನಲ್ಲಿ 202ರ ಅಲ್ಪ ಮೊತ್ತಕ್ಕೆ ಆಲ್ ಔಟ್ ಆದ ಕರ‍್ನಾಟಕ ಸೋಲಿನ ಬೀತಿ ಎದುರಿಸುತ್ತಿತ್ತು. ಮುಂಬೈನ ಗಟಾನುಗಟಿ ಬ್ಯಾಟ್ಸಮೆನ್ ಗಳನ್ನು ಅಂತಹ ಪಿಚ್ ನಲ್ಲಿ ಔಟ್ ಮಾಡಲು ಪವಾಡದ ಅವಶ್ಯಕತೆ ಇತ್ತು. ಎದೆಗುಂದದ ವಿನಯ್ ಆ ಪವಾಡವನ್ನು ಮಾಡಿಯೇ ಬಿಟ್ಟರು. 6 ವಿಕೆಟ್ ಪಡೆದ ವಿನಯ್ ಮುಂಬೈ ತಂಡವನ್ನು 43 ರನ್ ಗಳಿಗೆ ಕಟ್ಟಿ ಹಾಕಿದರು. ಅಂತಹ ಸಂದಿಗ್ದ ಪರಿಸ್ತಿತಿಯಲ್ಲಿ, ‘ಅಯ್ಯೋ ಈ ಪಿಚ್ ನಲ್ಲಿ ಬೌಲರ್ ಗಳಿಗೆ ಏನೂ ಸತ್ವ ಇಲ್ಲ’ ಅಂತ ವಿನಯ್ ಕೂತಿದ್ದರೆ ಕಂಡಿತ ಆ ಪಂದ್ಯ ನಮ್ಮ ಕೈ ತಪ್ಪುತ್ತಿತ್ತು. ಮುಂದೆ ಪೈನಲ್ ನಲ್ಲಿ ತಮಿಳುನಾಡು ವಿರುದ್ದ ಗೆದ್ದು 8ನೇ ರಣಜಿ ಟ್ರೋಪಿಯನ್ನು ಕರ‍್ನಾಟಕ ತನ್ನ ಮಡಲಿಗೆ ಹಾಕಿಕೊಂಡಿತು. ಇದೇ  ಪಂದ್ಯದಲ್ಲಿ ವಿನಯ್ ಗಳಿಸಿದ ಶತಕ ಅವರ ಬ್ಯಾಟಿಂಗ್ ಕೌಶಲ್ಯಕ್ಕೆ ಹಿಡಿದ ಕನ್ನಡಿ.

ಕೊನೆಯದಾಗಿ ಹೇಳಬೇಕೆಂದರೆ ಕ್ರಿಕೆಟ್ ನ ಅರ‍್ತ ಮಾಡಿಕೊಂಡಿರುವವರಿಗಶ್ಟೇ ವಿನಯ್ ಅವರ ಬೆಲೆ ಗೊತ್ತು. ಕರ‍್ನಾಟಕದ ಅತ್ಯ್ತುತ್ತಮ ಕ್ರಿಕೆಟಿಗರು ಯಾರು ಎಂದಾಕ್ಶಣ ನಮ್ಮ ಮನಸ್ಸಿಗೆ ತೋಚುವ ಹೆಸರುಗಳು ಜಿ.ಆರ್. ವಿಶ್ವನಾತ್, ಬಿ.ಎಸ್. ಚಂದ್ರಶೇಕರ್, ಪ್ರಸನ್ನ, ಕುಂಬ್ಳೆ, ದ್ರಾವಿಡ್, ಶ್ರೀನಾತ್ ಯಾಕೆಂದರೆ ಇವರೆಲ್ಲ ವಿಶ್ವ ಕ್ರಿಕೆಟ್ ನಲ್ಲಿ ಕರ‍್ನಾಟದ ಕೀರ‍್ತಿ ಪತಾಕೆ ಹಾರಿಸಿದವರು. ಆದರೆ ಇದೇ ಸಾಲಿನಲ್ಲಿ ನಾನು ವಿನಯ್ ಅವರ ಹೆಸರನ್ನು ಸೇರಿಸಲು ಇಚ್ಚಿಸುತ್ತೇನೆ. ಅದಕ್ಕೆ ಕಾರಣ ಕರ‍್ನಾಟಕ ಕ್ರಿಕೆಟ್ ಗೆ ವಿನಯ್ ಮಾಡಿದಶ್ಟು ಸೇವೆ ತಂದು ಕೊಟ್ಟ ಗೌರವ, ಪ್ರಶಸ್ತಿ ಅಂತರಾಶ್ಟ್ರಿಯ ಕ್ರಿಕೆಟ್ ನಲ್ಲಿ 956 ವಿಕೆಟ್ ಪಡೆದ ಕುಂಬ್ಳೆ ಅವರಾಗಲಿ 24,208 ಗಳಿಸಿದ ದ್ರಾವಿಡ್ ಅವರಾಗಲಿ ತಂದು ಕೊಟ್ಟಿಲ್ಲ. ಅಂತರಾಶ್ಟ್ರಿಯ ಕ್ರಿಕೆಟ್ ನಲ್ಲಿ ಹೆಚ್ಚು ಯಶಸ್ಸು ಪಡೆಯದ್ದಿದ್ದರೂ ವಿನಯ್ ಕರ‍್ನಾಟಕದ ಮಟ್ಟಿಗೆ ಉಳಿದೆಲ್ಲ ಆಟಗಾರರಿಗಿಂತ ಶ್ರೇಶ್ಟ. ಕನ್ನಡಿಗರ ಹೆಮ್ಮೆ ಆಗಿರುವ ವಿನಯ್ ಬರವಸೆ ಕಳೆದುಕೊಳ್ಳದೇ ಚಲದಂಕಮಲ್ಲನಂತೆ ಆಡುತ್ತಿದ್ದಾರೆ. ಕನ್ನಡಿಗ ವಿನಯ್ ಅವರಿಗೆ ಅಂತಾರಾಶ್ಟ್ರಿಯ ಕ್ರಿಕೆಟ್ ಆಡಲು ಇನ್ನೊಂದು ಅವಕಾಶ ಸಿಗಲಿ, ಅಲ್ಲೂ ಸಹ ಇಂತಹದೇ ಅದ್ವಿತೀಯ ಸಾದನೆ ಮಾಡಲಿ ಎಂದು ಹಾರೈಸೋಣ.

(ಚಿತ್ರ ಸೆಲೆ: zeenews, oneindia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: