ರಾಯಚೂರು ನಗರ – ಒಂದು ಕಿರುಪರಿಚಯ

– ನಾಗರಾಜ್ ಬದ್ರಾ.

raichuru-1

ರಾಯಚೂರು ನಗರವು ಕರ‍್ನಾಟಕ ರಾಜ್ಯದ ಉತ್ತರ ಬಾಗದಲ್ಲಿರುವ ಹಾಗೂ ನಾಡಿನ ಗಡಿಬಾಗದ ಪ್ರಮುಕ ನಗರಗಳಲ್ಲಿ ಒಂದು. 1 ನವೆಂಬರ್ 1956 ರಂದು ಕರ‍್ನಾಟಕದ ಏಕೀಕರಣದ ಸಮಯದಲ್ಲಿ ರಾಯಚೂರು ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಯಿತು. ಶಾಂತಿ, ಸಹಬಾಳ್ವೆ ಮತ್ತು ಕೋಮು ಸೌಹಾರ‍್ದತೆಗೆ ಪ್ರಸಿದ್ದವಾಗಿರುವ ಈ ನಗರದಲ್ಲಿ ಎಲ್ಲಾ ದರ‍್ಮದ ಜನರು ಒಟ್ಟಾಗಿ ಬಾಳುತ್ತಿದ್ದಾರೆ. ರಾಯಚೂರು ನಗರವು ಕ್ರುಶ್ಣ ಮತ್ತು ತುಂಗಬದ್ರಾ ನದಿಗಳ ನಡುವೆ ನೆಲೆಸಿದೆ. ಇದಕ್ಕೆ ಪ್ರೀತಿಯಿಂದ ಬಂಗಾರದ ನಗರ, ಸೂರ‍್ಯ ನಗರಿ, ಬಿಸಿಲಿನ ನಗರಿ, ವಿದ್ಯುಚ್ಚಕ್ತಿ ನಗರ, ರಾಜರ ನಗರ ಎಂಬ ಬಗೆಬಗೆಯ ಹೆಸರುಗಳಿಂದ ಕರೆಯುತ್ತಾರೆ.

ಕಲಿಕೆಯ ಕ್ಶೇತ್ರದಲ್ಲಿಯೂ ರಾಯಚೂರು ನಗರ ಅಬಿವ್ರುದ್ದಿ ಹೊಂದುತ್ತಿದೆ. 2 ವೈದ್ಯಕೀಯ ಕಾಲೇಜುಗಳು, 3 ಇಂಜಿನಿಯರಿಂಗ್ ಕಾಲೇಜುಗಳು, ಕ್ರುಶಿ ವಿಶ್ವವಿದ್ಯಾಲಯ ಹಾಗೂ ಹಲವಾರು ಕಲಿಕೆ ಮನೆಗಳು ಬಗೆಬಗೆಯ ಕಲಿಕೆಯನ್ನು ನೀಡುತ್ತಿವೆ.

ಬತ್ತದ ಮಿಲ್‍ಗಳು, ಹತ್ತಿಯ ಮಿಲ್‍ಗಳು, ರಸಗೊಬ್ಬರಗಳ ಹಾಗೂ ರಾಸಾಯನಿಕ ವಸ್ತುಗಳ ತಯಾರಿಕೆಯ ಕೈಗಾರಿಕೆಗಳು ರಾಯಚೂರು ನಗರದಲ್ಲಿ ನೆಲೆಸಿರುವ ಪ್ರಮುಕ ಕೈಗಾರಿಕೆಗಳಾಗಿವೆ. ರಾಯಚೂರು ಉಶ್ಣವಿದ್ಯುತ್ ಸ್ತಾವರವನ್ನು ನಗರದಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ಶಕ್ತಿನಗರದಲ್ಲಿ ನಿರ‍್ಮಾಣ ಮಾಡಲಾಗಿದೆ. ಈ ಸ್ತಾವರವು 8 ಗಟಕಗಳನ್ನು ಹೊಂದಿದ್ದು, ಪ್ರತಿ ಗಟಕವು ಸುಮಾರು 210 ಮೇಗಾ ವಾಟ್ ವಿದ್ಯುತನ್ನು ಉತ್ಪಾದಿಸುತ್ತದೆ.

ಮಂದಿಯೆಣಿಕೆ ಹಾಗೂ ಕಲಿಕೆ (2011 ರ ಜನಗಣತಿಯ ಪ್ರಕಾರ):

rayachooru

‘ರಾಯಚೂರು’ ಹೆಸರಿನ ಹಿನ್ನಲೆ:

ಕನ್ನಡದಲ್ಲಿ ರಾಯಚೂರು ಎಂದರೆ ರಾಜರ ಜಾಗ ಎಂದು ಅರ‍್ತ ನೀಡುತ್ತದೆ. ಇಲ್ಲಿ ರಾಯ ಎಂದರೆ “ರಾಜ” ಹಾಗೂ ಚೂರು ಎಂದರೆ “ಜಾಗ ಅತವಾ ಊರು” ಎಂದರ‍್ತ.

ರಾಯಚೂರು ನಗರದ ಇತಿಹಾಸ:

ಈ ನಗರವು ಹಲವಾರು ವರ‍್ಶಗಳ ಇತಿಹಾಸವನ್ನು ಹೊಂದಿದ್ದು, ಸಾಮ್ರಾಟ್ ಅಶೋಕ ಚಕ್ರವರ‍್ತಿಯ ಸಾಮ್ರಾಜ್ಯದ ಗತ ವೈಬವದ ದಿನಗಳ ಕಡೆಗೆ ಕರೆದೊಯ್ಯುತ್ತದೆ. ಕ್ರಿಸ್ತ ಪೂರ‍್ವದ ಮುಂಚೆಯೇ ಈ ನಗರವು ಅಸ್ತಿತ್ವದಲ್ಲಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ರಾಯಚೂರು ನಗರವು ಬಹಮನಿ, ವಿಜಯನಗರ, ಚಾಲುಕ್ಯ, ಮೊಗಲ್ ಹೀಗೆ ವಿವಿದ ಸಾಮ್ರಾಜ್ಯಗಳ ಬಾಗವಾಗಿತ್ತು. ಶಾಸನಗಳ ದ್ರುಶ್ಟಿಯಿಂದಲೂ ಈ ನಗರವು ತುಂಬಾ ಶ್ರೀಮಂತವಾಗಿದ್ದು, ಮೌರ‍್ಯರ ಕಾಲದಿಂದ ಹಿಡಿದು ಕೊನೆಯ ಮುಸ್ಲಿಂ ರಾಜರವರೆಗಿನ ನೂರಾರು ಶಾಸನಗಳು ಇಲ್ಲಿ ಸಿಕ್ಕಿವೆ. ಈ ಶಾಸನಗಳು ಕನ್ನಡ, ತೆಲುಗು, ಅರಾಬಿಕ್, ಪರ‍್ಶಿಯನ್, ಪ್ರಾಕ್ರುತ ನುಡಿಗಳಲ್ಲಿದ್ದು, ಇಲ್ಲಿ ಹಲವಾರು ಶತಮಾನಗಳ ಕಾಲ ಆಳ್ವಿಕೆ ಮಾಡಿದ ರಾಜಮನೆತನಗಳಿಗೆ ಸೇರಿವೆ.

ರಾಯಚೂರು ನಗರದ ಹುಟ್ಟು ಕ್ರಿ.ಪೂ 3ನೇ ಶತಮಾನದಲ್ಲಿಯೇ ಆಗಿದೆ ಎಂದು ಅದರ ಇತಿಹಾಸವು ಸಾರಿ ಹೇಳುತ್ತದೆ. ಇಲ್ಲಿ ಸಿಕ್ಕಿದ ಸಾಮ್ರಾಟ್ ಅಶೋಕ ಚಕ್ರವರ‍್ತಿಯ ಕಾಲದ 3 ಕಲ್ಲಿನ ಶಾಸನಗಳು, ಈ ನಗರವು ಕ್ರಿ.ಪೂ 273 ರಿಂದ 236 ರವರೆಗೆ ಅವನ ಆಳ್ವಿಕೆಯಲ್ಲಿತ್ತು ಎಂದು ಸಾಬೀತು ಪಡಿಸುತ್ತವೆ. ಕ್ರಿಸ್ತ ಪೂರ‍್ವದ ಮುಂಚೆ ಈ ನಗರವು ಶಾತವಾಹನರ ಸಾಮ್ರಾಜ್ಯದ ಬಾಗವಾಗಿತ್ತು ಎಂದು ಊಹಿಸುತ್ತಾರೆ. ಆದರೆ ನಿಕರವಾದ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಕ್ರಿ.ಶ. 3 ಮತ್ತು 4 ನೇ ಶತಮಾನದಲ್ಲಿ ಜಿಲ್ಲೆಯು ಕೆಲವು ವರ‍್ಶಗಳ ಕಾಲ ವಾಕಾಟಕರ ಹಿಡಿತದಲ್ಲಿತ್ತು ಎಂದು ತೋರುತ್ತದೆ. ಅನಂತರ ಇದು ಕದಂಬರ ಆಳ್ವಿಕೆಗೆ ಒಳಗೊಂಡಿತ್ತು ಎಂದು ಕಂಡುಬರುತ್ತದೆ. ರಾಯಚೂರನ್ನು ಆಳಿದ ಮುಂದಿನ ಪ್ರಮುಕ ರಾಜವಂಶವೆಂದರೆ ಬಾದಾಮಿಯ ಚಾಲುಕ್ಯರು. ಐಹೊಳೆಯಲ್ಲಿ ಸಿಕ್ಕಿದ ಶಾಸನದ ಪ್ರಕಾರ ಎರಡನೇ ಪುಲಕೇಶಿಯು ಪಲ್ಲವರನ್ನು ಸೋಲಿಸಿದ ಮೇಲೆ ಈ ಜಿಲ್ಲೆಯನ್ನು ತನ್ನ ಮಗ ಆದಿತ್ಯ ವರ‍್ಮನ ಆಡಳಿತದಲ್ಲಿ ಒಂದು ಪ್ರಾಂತವಾಗಿ ಮಾಡಿಕೊಂಡಿದ್ದನು. ಅನಂತರ ಇಡೀ ರಾಯಚೂರು ಜಿಲ್ಲೆಯು ರಾಶ್ಟ್ರಕೂಟರ ಆಡಳಿತಕ್ಕೆ ಒಳಗೊಂಡಿತ್ತು.

about-raichur2

ಇಲ್ಲಿ ಸಿಕ್ಕಿರುವ ಶಾಸನಗಳ ಪ್ರಕಾರ ರಾಶ್ಟ್ರಕೂಟರು 8 ನೇ ಶತಮಾನದಲ್ಲಿ ಅದಿಕಾರಕ್ಕೆ ಏರಿದರು ಎಂದು ತಿಳಿದು ಬರುತ್ತದೆ. ಕ್ರಿ.ಶ. 10 ರಿಂದ 12 ನೇ ಶತಮಾನದವರೆಗೆ ತುಂಬಾ ಸಮಯ ಕಲ್ಯಾಣಿ ಚಾಲುಕ್ಯರ ಪ್ರಬಾವ ಜಿಲ್ಲೆಯಲ್ಲಿತ್ತು ಎಂದು ಇಲ್ಲಿ ಸಿಕ್ಕಿರುವ ಹಲವಾರು ಶಾಸನಗಳಿಂದ ಕಂಡುಬರುತ್ತದೆ. ಹಾಗೆಯೇ 12 ನೇ ಶತಮಾನದಲ್ಲಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಹೊಯ್ಸಳರ ದೊರೆ ವಿಶ್ಣುವರ‍್ದನನ ಆಳ್ವಿಕೆಯಿತ್ತು. ದಕ್ಶಿಣದ ದೊರೆ ಚೋಳ ಮತ್ತು ಕಲ್ಯಾಣಿ ಚಾಲುಕ್ಯನ ನಡುವೆ ಹಲವಾರು ಯುದ್ದಗಳಾದ ನಂತರ ಈ ಪ್ರದೇಶವು ಅಲ್ಪಕಾಲದವರೆಗೆ ಚೋಳರ ಕೈ ಸೇರಿತ್ತು.

ಚಾಲುಕ್ಯರ ಪತನದ ನಂತರ ಜಿಲ್ಲೆಯು ಕಲ್ಯಾಣಿ ಕಳಚುರಿಯರ ಅನಂತರ ಸೇವುಣ ಯಾದವರ ವಶಕ್ಕೆ ಸೇರಿತ್ತು. ರಾಯಚೂರು ಕೋಟೆಯ ಗೋಡೆ ಮೇಲಿನ ಶಾಸನದ ಪ್ರಕಾರ ಕೋಟೆಯನ್ನು ಕ್ರಿ.ಶ 1294 ರಲ್ಲಿ ವಾರಂಗಲ್ಲಿನ ಕಾಕತೀಯ ರಾಣಿ ರುದ್ರಮ್ಮಾ ದೇವಿಯ ಸೇನಾದಿಪತಿ ಗೋರಿ ಗಂಗಯ್ಯ ರೆಡ್ಡಿಯು ಕಟ್ಟಿದನು ಎಂದು ತಿಳಿದುಬಂದಿದೆ. ಅನಂತರ 1312 ರಲ್ಲಿ ದೆಹಲಿ ಸುಲ್ತಾನರ ಕಮಾಂಡರ್ ಮಲೀಕ್ ಕಪೂರ್ ರಾಯಚೂರನ್ನು ಕೊಳ್ಳೆಹೊಡೆದನು. 1323ರಲ್ಲಿ ದೆಹಲಿ ಸುಲ್ತಾನರು ಕಾಕತೀಯರ ಮೇಲೆ ಆಕ್ರಮಣ ಮಾಡಿ ಈ ಪ್ರದೇಶವನ್ನು ವಶಪಡಿಸಿಕೊಂಡರು. ಬಳಿಕ ವಿಜಯನಗರ ಸಾಮ್ರಾಜ್ಯವು ಈ ಪ್ರದೇಶದ ಮೇಲೆ ಹಿಡಿತ ಸಾದಿಸಿತು.

1363 ರಲ್ಲಿ ಇದನ್ನು ಬಹುಮನಿ ಸುಲ್ತಾನರು ವಶಪಡಿಸಿಕೊಂಡರು. ಬಹುಮನಿ ಸಾಮ್ರಾಜ್ಯವು ಹೋಳಾದ ನಂತರ 1489 ರಲ್ಲಿ ರಾಯಚೂರು ಬಿಜಾಪುರ ಸುಲ್ತಾನರ ಕೈ ಸೇರಿತ್ತು. 1520 ರಲ್ಲಿ ವಿಜಯನಗರ ಸಾಮ್ರಾಜ್ಯವು ರಾಯಚೂರು ಕದನವನ್ನು ಗೆದ್ದು ಇದನ್ನು ಮತ್ತೆ ವಶಪಡಿಸಿಕೊಂಡಿತ್ತು. ಆದರೆ 1565 ರಲ್ಲಿ ತಾಳಿಕೋಟೆ ಕದನದಲ್ಲಿ ಡೆಕ್ಕನ್ ಸುಲ್ತಾನರು ವಿಜಯನಗರ ಸಾಮ್ರಾಜ್ಯವನ್ನು ಸೋಲಿಸಿ ಮತ್ತೆ ರಾಯಚೂರನ್ನು ವಶಪಡಿಸಿಕೊಂಡು ಬಿಜಾಪುರದ (ಇಂದಿನ ವಿಜಯಪುರ) ಸುಲ್ತಾನರಿಗೆ ಹಸ್ತಾಂತರಿಸಿದರು. ಅನಂತರ 1686 ರಲ್ಲಿ ಮೊಗಲ್ ಸಾಮ್ರಾಜ್ಯದ ದೊರೆ ಔರಂಗಜೇಬನು ಇದನ್ನು ವಶಪಡಿಸಿಕೊಂಡನು.

ಅಂತಿಮವಾಗಿ 1724 ರಿಂದ 1948 ವರೆಗೆ ಇದು ಹೈದರಬಾದ್ ನಿಜಾಮನ ಸಾಮ್ರಾಜ್ಯದ ಬಾಗವಾಗಿತ್ತು. ಅದರ ನಡುವೆ ನಿಜಾಮನು 1853 ರಿಂದ 1860 ವರೆಗೆ ಬ್ರಿಟಿಶರ ಆಳ್ವಿಕೆಯನ್ನು ಒಪ್ಪಿಕೊಂಡಿದ್ದರಿಂದ, ರಾಯಚೂರು ಮದ್ರಾಸ್ ಪ್ರೆಸಿಡೆನ್ಸಿ ಬಾಗವಾಗಿತ್ತು. 17 ಸೆಪ್ಟೆಂಬರ್ 1948 ರಲ್ಲಿ ನಡೆದ ‘ಆಪರೇಶನ್ ಪೋಲೊ’ ನಂತರ ಹೈದರಬಾದ್ ಪ್ರ್ಯಾಂತ್ಯವನ್ನು ಸಮಗ್ರ ಬಾರತದ ಒಕ್ಕೂಟಕ್ಕೆ ಸೇರಿಸಲಾಯಿತು. 1948 ರಿಂದ 1956 ವರೆಗೆ ಇದು ಹೈದರಬಾದ್ ರಾಜ್ಯದ ಬಾಗವಾಗಿತ್ತು. ನುಡಿಗಳ ಆದಾರದ ಮೇಲೆ ರಾಜ್ಯಗಳ ವಿಬಜನೆಯ ಸಮಯದಲ್ಲಿ ರಾಯಚೂರನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ಅನಂತರ ಮೈಸೂರು ರಾಜ್ಯವನ್ನು ಕರ‍್ನಾಟಕವೆಂದು ಮರು ಹೆಸರಿಸಲಾಯಿತು.

(ಮಾಹಿತಿ ಸೆಲೆ: wiki/Raichur_districtwiki/Raichurkarnataka.com, census2011.co.inraichur.nic.in)

(ಚಿತ್ರ ಸೆಲೆ: raichuronline.in, mygola.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: