ಮತ್ತೆ ಮತ್ತೆ ನೋಡಬೇಕೆನಿಸುವ ಶಿವಮೊಗ್ಗದ ‘ಶಿವಪ್ಪನಾಯಕನ ಕೋಟೆ’!

ಕಿರಣ್ ಮಲೆನಾಡು.

ಕೆಳದಿ ನಾಯಕರು ಮಲೆನಾಡು ಮತ್ತು ಕರಾವಳಿಯಲ್ಲಿ ಆಳ್ವಿಕೆ ನಡೆಸಿದ ಒಂದು ಅರಸುಮನೆತನ. ಕೆಳದಿ ನಾಯಕರ ಇನ್ನೊಂದು ಮೇಲ್ಪಟ್ಟಣವೇ ಬಿದನೂರು ನಗರ (ಈಗಿನ ಹೆಸರು ನಗರ). ನಗರದಲ್ಲಿ ಕೆಳದಿ ನಾಯಕರು ಚೆಲುವಾದ ಕೋಟೆಯನ್ನು ಕಟ್ಟಿಸಿದರು.

tour-package-500x500

ಕೋಟೆ ಎಲ್ಲಿದೆ?
ನಗರವು ಬೆಂಗಳೂರಿನಿಂದ 384 ಕಿ.ಮೀ. ದೂರದಲ್ಲಿದೆ. ನಗರ ಪೇಟೆಯ ಮೂಲಕ ಹಾದುಹೋಗುವ ಶಿವಮೊಗ್ಗ-ಕೊಲ್ಲೂರು ಹೆದ್ದಾರಿಯ ಬದಿಯಲ್ಲಿಯೇ ಕೋಟೆಯಿದೆ. ಶಿವಮೊಗ್ಗದಿಂದ 84 ಕಿ.ಮೀ. ದೂರವಿದೆ. ಕೋಟೆಯ ಎದುರಿಗೆ ಕಣ್ಸೆಳೆಯುವ ಒಂದು ಕೆರೆಯಿದೆ.

Image 2

ಕೋಟೆಯ ಹಿನ್ನಡವಳಿ

Image 3ಕೆಳದಿ ನಾಯಕರು ಮೊದಲಲ್ಲಿ ಕೆಳದಿ, ನಂತರ ಇಕ್ಕೇರಿ ಹಾಗೂ ಬಿದನೂರಿನಿಂದ ಆಡಳಿತ ನಡೆಸುತ್ತಿದ್ದರು. 1499 ಏಡಿನಿಂದ 1763 ಏಡಿನವರೆಗೆ ಮಲೆನಾಡು ಮತ್ತು ಕರಾವಳಿಯನ್ನು ಈ ಪಟ್ಟಣಗಳಿಂದಲೇ ಆಳುತ್ತಿದ್ದವರು. ಕೆಳದಿ ನಾಯಕರಲ್ಲಿ ಹೆಸರುವಾಸಿಯಾದ ಶಿವಪ್ಪನಾಯಕನು (ಕ್ರಿ.ಶ. 1645–1660) ಬಿದನೂರಿನಲ್ಲಿ ಕಟ್ಟಿಸಿದ ಕಲ್ಲಿನ ಕೋಟೆ ಕೆಳದಿ ನಾಯಕರ ಪಳೆಯುಳಿಕೆಯಾಗಿ ಉಳಿದುಕೊಂಡಿದೆ. ಈ ನಗರದಿಂದಲೇ ನಮ್ಮ ಕನ್ನಡದರಸ ಶಿವಪ್ಪನಾಯಕನು ಕೇರಳದ ಕಾಸರಗೋಡನ್ನು ಕೂಡ ಆಳಿದ್ದನು! ಬಿದನೂರನ್ನು ಹೊನ್ನಯ ಕಂಬಳಿ ಅರಸರು ಆಳುತ್ತಿದ್ದರು, ಕೆಳದಿಯ ವೆಂಕಟಪ್ಪನಾಯಕ (ಕ್ರಿ.ಶ. 1586-1629) ಬಿದನೂರನ್ನು ಹೊನ್ನಯ ಕಂಬಳಿ ಅರಸರಿಂದ ಗೆದ್ದುಕೊಂಡನೆಂದು, ಲಿಂಗಣ್ಣನೆಂಬ ಕಟ್ಟೋರೆಗಾರನ ‘ಕೆಳದಿಯ ನ್ರುಪವಿಜಯಂ’ ಹೊತ್ತಗೆಯಿಂದ ತಿಳಿದುಬರುತ್ತದೆ. ಹಲವು ಪಾಳೇಗಾರರು ಹಾಗೂ ವಿಜಯಪುರದ ಆದಿಲ್ ಶಾಹನ ಉಪಟಳದಿಂದ ಪಾರಾಗಲು ಕೆಳದಿಯ ವೀರಬದ್ರನಾಯಕನು (ಕ್ರಿ.ಶ. 1629-1645 ) ಇಕ್ಕೇರಿಯಿಂದ ತನ್ನ ಮೇಲ್ಪಟ್ಟಣವನ್ನು ಬಿದನೂರಿಗೆ ವರ‍್ಗಾಯಿಸಿದನು. ಬಿದನೂರು ನಂತರದ ಹೊತ್ತಿನಲ್ಲಿ ವ್ಯಾಪಾರದ ಪಟ್ಟಣವಾಯಿತು ಹಾಗೂ ತದನಂತರದಲ್ಲಿ ಶಿವಪ್ಪನಾಯಕನು ಬಿದನೂರಿನಲ್ಲಿ ಕೋಟೆ-ಕೊತ್ತಲ, ಅರಮನೆಗಳನ್ನು ಕಟ್ಟಿದನು.

ಆರುಬದಿಯುಳ್ಳ (Hexagonal) ನಗರದ ಈ ಕಲ್ಲಿನ ಕೋಟೆಯನ್ನು ಈಗಲೂ ನೋಡಬಹುದು, ಈಗ ಒಳಗಿನ ಅರಮನೆ ಹಾಳಾಗಿದೆ. ಹಗೆಗಾರರಿಂದ ಕಾಪಾಡಿಕೊಳ್ಳಲು ಕೋಟೆಯ ಸುತ್ತಲೂ ಕಂದಕವನ್ನು ತೋಡಿದ್ದರು. ಬಡಗಣ ಬಾಗದಲ್ಲಿ ಎರಡು ಬತೇರಿಗಳ ನಡುವೆ ಕೋಟೆಗೆ ದೊಡ್ಡ ಬಾಗಿಲಿದೆ. ಒಳಗೆ ಅಕ್ಕ-ತಂಗಿಯರಕೊಳ ಎಂದು ಹೆಸರಿರುವ ಕೊಳಗಳನ್ನು ಕಾಣಬಹುದು. ಕೋಟೆಯ ಗೋಡೆಗೆ ಹೊಂದಿಕೊಂಡಂತೆ ನಾಲ್ಕು ದಿಕ್ಕಿನಿಂದಲೂ 6 ದುಂಡಾಕಾರದ ಬತ್ತೇರಿಗಳಿವೆ. ಕೊಡಿಯಾಲ ಬಾಗಿಲು, ಕವಿಲೆ ದುರ‍್ಗದ ಬಾಗಿಲು ಸೇರಿದಂತೆ ಹತ್ತು ಬಾಗಿಲುಗಳು ಇಲ್ಲಿದ್ದವು.

Image 4

ಕೋಟೆಯ ಮೇಲ್ಬಾಗಿಲಿನ ಬಳಿ ಹಾಗೂ ಒಳಬಾಗಗಳಲ್ಲಿ ಅಲ್ಲಲ್ಲಿ ಕಾವಲುಗಾರರ ಕೋಣೆಗಳು ಇದ್ದ ಕುರುಹುಗಳು ಸಿಗುತ್ತವೆ. ಪಡುವಣ ದಿಕ್ಕಿನಲ್ಲಿ ಒಂದು ಕೊಳ ಸಿಗುತ್ತದೆ, ತೆಂಕು-ಮೂಡಣ ದಿಕ್ಕಿನಲ್ಲಿ ಅರಮನೆ ಇದ್ದ ಪಳೆಯುಳಿಕೆಗಳು ಕಂಡುಬರುತ್ತದೆ. ನಾಲ್ನೇರಬದಿ (Rectangle) ರೀತಿಯ ಅರಮನೆಗೆ ಅನೇಕ ಕೋಣೆಗಳು ಇದ್ದ ಕುರುಹುಗಳನ್ನು ನೋಡಬಹುದು. ಕೋಟೆಯ ಪಡು-ತೆಂಕು ದಿಕ್ಕಿನಲ್ಲಿರುವ ಗುಡ್ಡದ ಮೇಲೆ ಎಚ್ಚರದಿಬ್ಬವನ್ನು (Inspection Bungalow) ಕಟ್ಟಲಾಗಿದೆ, ಅಲ್ಲಿಂದಲೇ ದೂರದಲ್ಲಿರುವ ಹಗೆಗಾರರ ಮೇಲೆ ನಿಗಾ ಇಡಲಾಗುತ್ತಿತ್ತು.

image5

1700 ಏಡಿನ ಸುಮಾರಿನಲ್ಲಿ ಬಿದನೂರು ಶ್ರೀಮಂತವಾದ ಪಟ್ಟಣವಾಗಿ ಬೆಳೆದಿತ್ತು, ಆದರೆ, 1763ರಲ್ಲಿ ಬಿದನೂರು ಶ್ರೀರಂಗಪಟ್ಟಣದ ಹೈದರನ (ಕ್ರಿ.ಶ. 1721 – 1782 ) ಕೈವಶವಾಗಿ ಅಲ್ಲಿನ ಸಂಪತ್ತೆಲ್ಲಾ ಆತನಿಗೆ ದೊರೆಯಿತು. ಆನಂತರ ಅದನ್ನು ಹೈದರ್ ನಗರ ಎಂಬ ಹೆಸರು ಪಡೆಯಿತು. ಹೈದರ್ ಅಲ್ಲಿ ಮದ್ದು-ಗುಂಡುಗಳನ್ನು ಮಾಡುವ ಹಾಗೂ ಟಂಕಸಾಲೆಯ ಕೇಂದ್ರವಾಗಿ ಮಾಡಿಕೊಂಡನು. ಟಿಪ್ಪುವಿನ ಕಾಲದಲ್ಲಿ ಬ್ರಿಟಿಶರು ಇದನ್ನು ವಶಪಡಿಸಿಕೊಂಡರು. ಮುಮ್ಮಡಿ ಕ್ರಿಶ್ಣರಾಜ ಒಡೆಯರ್ (ಕ್ರಿ.ಶ. 1794 – 1868 ) ಅವರ ಕಾಲದಲ್ಲಿ ಹೈದರ್ ನಗರ ಎಂಬುದು ‘ನಗರ’ವಾಗಿ ಮಾರ‍್ಪಟ್ಟಿತ್ತು. 1830ರ ವೇಳೆಯಲ್ಲಿ ನಗರದಲ್ಲಿ ನಡೆದ ದಂಗೆಯಿಂದಾಗಿ ಮುಮ್ಮಡಿ ಕ್ರಿಶ್ಣರಾಜ ಒಡೆಯರ್ ಆಳ್ವಿಕೆಯನ್ನು ಕಳೆದುಕೊಳ್ಳಲು ಕಾರಣವಾಯಿತು. 1893 ರಲ್ಲಿ ತಾಲ್ಲೂಕು ಕೇಂದ್ರ ಕಲ್ಲೂರುಕಟ್ಟೆಗೆ ವರ‍್ಗಾವಣೆಗೊಂಡು ಆ ತಾಲ್ಲೂಕನ್ನು ಹೊಸನಗರ ತಾಲ್ಲೂಕೆಂದು ಕರೆಯಲಾಯಿತು. ಇದು ಬಿದನೂರು ನಗರದ ಹಿನ್ನೆಲೆ.

(ಮಾಹಿತಿ ಸೆಲೆ: vartanam.blogspot.inprajavani.netwikipedia)
(ಚಿತ್ರ ಸೆಲೆ: indiamart, rackcdn.com, wikimedia.orgಕಿರಣ್ ಮಲೆನಾಡು)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಅನಂತಕೃಷ್ಣ says:

    ಕೊಟ್ಟಕಾಲಗಳ ವಿಚಾರ ತಪ್ಪಾಗಿದೆ. ಕೆಳದಿ ನಾಯಕರ ಕಾಲ ೧೪೨೨-೧೭೬೩

ಅನಂತಕೃಷ್ಣ ಗೆ ಅನಿಸಿಕೆ ನೀಡಿ Cancel reply

%d bloggers like this: