ವ್ಯಾಪಾರದಲ್ಲಿ ನಿಜ ಮತ್ತು ಸುಳ್ಳುಗಳೆರಡು ಕ್ಶಣಿಕ

 ಶ್ರೀನಿವಾಸಮೂರ‍್ತಿ ಬಿ.ಜಿ.

truliebuisness

ನಿಜ ಮತ್ತು ಸುಳ್ಳುಗಳೆರಡು ಕ್ಶಣಿಕವಾಗಿರುವಂತದ್ದು. ಸುಳ್ಳು ಮಾತ್ರ ಎಂದೆಂದಿಗೂ ಇರುತ್ತದೆ ಅತವಾ ನಿಜ ಮಾತ್ರ ಎಂದೆಂದಿಗೂ ಇರುತ್ತದೆ ಎಂದೇನೂ ಅಲ್ಲ. “ಈ ನಿಲುವು ಎಲ್ಲರಿಗೂ ಗೊತ್ತಿರುವಂತದ್ದೆ” ಎಂದು ನೀವು ಅಂದುಕೊಳ್ಳುತ್ತಿರಬಹುದು ಅಲ್ಲವೆ?

ಮನುಶ್ಯನ ಬದುಕಿನುದ್ದಕ್ಕೂ ನಿಜ ಮತ್ತು ಸುಳ್ಳುಗಳೆರಡು ಕ್ಶಣಿಕ. ಇವು ಒಂದು ಕಡೆ ಇರಬಲ್ಲ ತಾರ‍್ಕಿಕ ನೆಲೆಯಲ್ಲ. ಯಾವಾಗಲೂ ಗಾಲಿಯಂತೆ ತಿರುಗುವಂತವು, ಗಾಳಿಯಂತೆ ಸುಳಿಯುವಂತವು. ಈ ಲೇಕನಕ್ಕೆ ‘ವ್ಯಾಪಾರದಲ್ಲಿ ನಿಜ ಮತ್ತು ಸುಳ್ಳುಗಳೆರಡು ಕ್ಶಣಿಕ; ಹಣ ಗಳಿಸಲು ಇವು ಇರಲೇಬೇಕು ಮಿತಿಯೊಳಗೆ’ ತಲೆಬರಹ ಅಂತ ಯಾಕೆ ಇಟ್ಟಿದ್ದು ಅನ್ನುವ ಕೇಳ್ವಿ ನಿಮ್ಮದಾಗಿರಬಹುದಲ್ಲವೆ? ಅದಕ್ಕೂ ಒಂದು ಹಿನ್ನೆಲೆ ಇದೆ ಅವರು ವ್ಯಾಪಾರದಲ್ಲಿ ಸುಳ್ಳಿನ ಮೂಲಕವೇ ಗಳಿಸಿದರು, ಇವರು ವ್ಯಾಪಾರದಲ್ಲಿ ನಿಜದ ಮೂಲಕವೇ ಗಳಿಸಿದರು ಎನ್ನುವ ಮಾತುಗಳನ್ನು ನಾವೆಲ್ಲರು ಕೇಳಿರುತ್ತೇವೆಯಲ್ಲವೆ? ಈ ನಿಟ್ಟಿನಲ್ಲಿಯೇ ವ್ಯಾಪಾರದಲ್ಲಿ ನಿಜ ಮತ್ತು ಸುಳ್ಳಿನ ಸ್ತಿತಿ ಏನಿರಬಹುದು ಎನ್ನುವುದನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ನಾನು ಅನುಬವಾತ್ಮಕ ತಿಳುವಳಿಕೆಯ ಹೊತ್ತಿಗಾಗಿ ಹಾತೊರೆಯುತ್ತಿದ್ದೆ. ಈ ಹೊತ್ತು 5/6/2016ರ ಬಾನುವಾರದಂದು ಒದಗಿತು. ಅದು ಎಂತದ್ದು ಅಂದುಕೊಳ್ಳುತ್ತಿದ್ದೀರ? ಅದನ್ನು ನಿಮಗೆ ತಿಳಿಸದೆ ‘ನಿಜ ಮತ್ತು ಸುಳ್ಳುಗಳೆರಡು ಕ್ಶಣಿಕ’ ಎನ್ನುವುದನ್ನು ನಾನು ನಿಮಗೆ ತಿಳಿಸಲಿಕ್ಕಾಗುವುದೇ ಇಲ್ಲ!

ಇದೇ ಜೂನ್ 4-5 ಎರಡು ದಿನಗಳಂದು ತೋಟಗಾರಿಕಾ ಇಲಾಕೆಯ ವತಿಯಿಂದ ಬೆಂಗಳೂರಿನ ಸಹಕಾರನಗರದ ಬಿ.ಬಿ.ಎಮ್.ಪಿ ಆಟದ ಮಯ್ದಾನದಲ್ಲಿ ಸಿರಿದಾನ್ಯಗಳ ಮೇಳವನ್ನು ಏರ‍್ಪಡಿಸಲಾಗಿತ್ತು. ಈ ಸುದ್ದಿಯನ್ನು ನನ್ನ ತಾಯಿ ನನಗೆ ಹೇಳಿದ್ದರು. ಮೊದಲಿನಿಂದಲೂ ನನಗೆ ಸಿರಿದಾನ್ಯಗಳ ಬಗೇಗೆ ಒಲವು. ನಾನು ‘5/6/2016ರಂದು ರಜೆ ಇರೋದ್ರಿಂದ ಹೋಗ್ತೀನಿ’ ಎಂದು ನನ್ನ ತಾಯಿಗೆ ಹೇಳಿದ್ದೆ. 28 ಬೇಳೆಗಳನ್ನು ಹುರಿದು ಪುಡಿ ಮಾಡಿ ಹುರಿಹಿಟ್ಟನ್ನು ಅಣಿಗೊಳಿಸುವುದನ್ನು ನನ್ನ ತಾಯಿ ಹವ್ಯಾಸವನ್ನಾಗಿರಿಸಿಕೊಂಡಿದ್ದರಿಂದ ಆ ಹುರಿಹಿಟ್ಟನ್ನು ಕೂಡ ತೆಗೆದುಕೊಂಡು ಹೋಗಿ ಅಲ್ಲಿರುವ ಎಲ್ಲಾ ಅಂಗಡಿಗಳಲ್ಲಿ 28 ಬೇಳೆಗಳನ್ನು ಹಾಕಿ ಮಾಡುವ ಹುರಿಹಿಟ್ಟು ಇದೆಯೇ? ಇದ್ದರೆ ಅದರ ಬೆಲೆ ಎಶ್ಟಿರಬಹುದು? ಎನ್ನುವುದನ್ನು ತಿಳಿದುಕೊಂಡು ನನ್ನ ತಾಯಿ ಅಣಿಗೊಳಿಸುವ ಈ ಹುರಿಹಿಟ್ಟನ್ನು ಮಾರಬೇಕೆಂದುಕೊಂಡೆ.

5/6/2016ರ ಬೆಳಗ್ಗೆ ನನ್ನ ತಾಯಿಯವರಿಂದ 1 ಕೆ.ಜಿಯ ಒಂದು ಪ್ಯಾಕೆಟ್ ಮತ್ತು 1/2 ಕೆ.ಜಿಯ ಒಂದು ಪ್ಯಾಕೆಟ್ ಹುರಿಹಿಟ್ಟನ್ನು ತೆಗೆದುಕೊಂಡು ಸಹಕಾರನಗರದಲ್ಲಿ ಏರ‍್ಪಾಟಾಗಿದ್ದ ಸಿರಿದಾನ್ಯಗಳ ಮೇಳಕ್ಕೆ ನನ್ನ ಹೆಂಡತಿಯೊಂದಿಗೆ ಹೋದೆ. ಅಲ್ಲಿದ್ದ ಅಂಗಡಿಗಳಲ್ಲಿ ರಾಗಿಯನ್ನೇ ಮುಂದಿರಿಸಿಕೊಂಡಂತಹ ಹಲವಾರು ಬಗೆಯ ಹುರಿಹಿಟ್ಟು ಇದ್ದವು. 4, 5, 9 ಬೇಳೆಗಳನ್ನು ಒಳಗೊಂಡ ಹುರಿಹಿಟ್ಟನ್ನು ಮಾರುತ್ತಿದ್ದರೆ ಹೊರತು 28 ಬೇಳೆಗಳನ್ನು ಒಳಗೊಂಡ ಹುರಿಹಿಟ್ಟನ್ನು ಮಾರುತ್ತಿರಲಿಲ್ಲ. ಇನ್ನು ಬೆಲೆಯ ವಿಚಾರದಲ್ಲೂ ಕೂಡ ನನ್ನ ತಾಯಿ ಅಣಿಗೊಳಿಸುವ ಹುರಿಹಿಟ್ಟಿಗಿಂತಲೂ ಹೆಚ್ಚೇ ಇದ್ದವು.

ಎಲ್ಲಾ ಅಂಗಡಿಗಳನ್ನು ಸುತ್ತಿದ ಮೇಲೆ ಎಲ್ಲಿ ಈ ಹುರಿಹಿಟ್ಟನ್ನು ಮಾರಬೇಕೆಂದು ಯೋಚಿಸುತ್ತಿರುವಾಗಲೇ, ಅದ್ರುಶ್ಟಕ್ಕೆ ಯಾರೂ ಇಲ್ಲದ ಟೇಬಲ್ ಮತ್ತು ಕುರ‍್ಚಿ ಇದ್ದದ್ದು ನನ್ನ ಹೆಂಡತಿಯಿಂದ ನನಗೆ ತಿಳಿಯಿತು. ಹುರಿಹಿಟ್ಟನ್ನು ಟೇಬಲ್ ಮೇಲೆ ಇಟ್ಟು ಮಾರಲು ಕುಳಿತೆವು. ಯಾರೊಬ್ಬರೂ ನಾವಿದ್ದ ಕಡೆಗೆ ಬರಲೇ ಇಲ್ಲ. ಮಾವಿನ ಹಣ್ಣನ್ನು ಮಾರಲೆಂದು ಒಬ್ಬರು ನಮ್ಮಿಂದ ಸ್ವಲ್ಪ ದೂರದಲ್ಲಿದ್ದ ಜಾಗಕ್ಕೆ ಟೇಬಲ್ ಮತ್ತು ಕುರ‍್ಚಿಯನ್ನು ಹಾಕಿಕೊಂಡರು. ಅವರಿಗೆ ನಾನು ಕುರುಡನೆಂದು ತಿಳಿಯಿತು. ಅವರಲ್ಲಿ ನನ್ನ ಬಗ್ಗೆ ಅನುಕಂಪ ಮೂಡಿಯೋ ಅತವಾ ಇವನು ಕೂಡ ಗಳಿಸಲಿ ಎನ್ನುವ ಒಳ್ಳೆಯ ಬಗೆಗೋ ಒಟ್ಟಿನಲ್ಲಿ ‘ನನ್ನ ಪಕ್ಕ ಈ ಟೇಬಲ್ ಕುರ‍್ಚಿಯನ್ನ ಹಾಕ್ತೀನಿ ಎದ್ದೇಳ್ತೀರ?” ಎಂದು ಕೇಳಿದರು. ನಾವಿಬ್ಬರು ಊ ಎಂದು ಸಮ್ಮತಿಸಿದೆವು. ಅವರು ಹೇಳಿದಂತೆಯೇ ಟೇಬಲ್-ಕುರ‍್ಚಿಯನ್ನು ತಮ್ಮ ಪಕ್ಕಕ್ಕೆ ಹಾಕಿ ಮಾರಲು ಉತ್ಸಾಹವನ್ನು ತುಂಬಿದರು. ಇವರು ಹೀಗೆ ಏರ‍್ಪಾಟು ಮಾಡಿದ ಕೂಡಲೆ ನಾವು ಮಾರುತ್ತಿದ್ದ ಹುರಿಹಿಟ್ಟನ್ನು ನೋಡಿ ಮಾಹಿತಿ ಪಡೆದುಕೊಂಡು ಮಂದಿಗಳು ಹೋಗುತ್ತಿದ್ದರು. ಕೆಲವರು ಮಾಹಿತಿಯನ್ನು ಪಡೆದುಕೊಂಡ ಮೇಲೆ ‘ಹೆಂಗ್ ತಯಾರು ಮಾಡಿರ‍್ತಿರೋ ಏನೊ!’ ಎನ್ನುತ್ತಲೇ ಗೊಣಗುತ್ತಾ ಹೋಗುತ್ತಿದ್ದರು. ಕೆಲವರು ‘ಮನೆಯಲ್ಲಿ ಇದೆ’ ಎನ್ನುತ್ತಿದ್ದರು. ಒಬ್ಬಾತ ಬಂದು ‘ನೀವೇ ಬೆಳ್ದು ಮಾಡಿ ಮಾರೋದ?’ ಕೇಳಿದರು. ನಾನು ಇಲ್ಲ ಎಂದೆ. ಹೀಗೆಯೇ ಕೆಲವರು ಹೇಳಿ ಹೋಗುತ್ತಿದ್ದರು. ನಾನು ಮತ್ತೊಬ್ಬರು ಬಂದು ಹೀಗೆಯೇ ಹೇಳಿದರೆ ಕೆಲವು ಬೆಳೆಗಳನ್ನು ಬೆಳೆಯುತ್ತಿರುವುದಾಗಿ ಸುಳ್ಳನ್ನು ಹೇಳಬೇಕೆಂದುಕೊಂಡು ಮತ್ತೊಬ್ಬರಿಗೆ ಕಾಯುತ್ತಿದ್ದೆ.

ಮತ್ತೊಬ್ಬ ವ್ಯಕ್ತಿ ಬಂದು ‘ಎಶ್ಟು?’ ಎಂದರು. ನಾನು ‘1/2 ಕೆ.ಜಿಗೆ 100, 1 ಕೆ.ಜಿಗೆ 200 ಸರ‍್’ ಎಂದೆ. ಅವರು ‘ನಿಮ್ ಜಮೀನಲ್ಲೇ ಬೆಳ್ದು ಮಾಡೋದ?’ ಎಂದರು. ‘ಹಾರಕ, ಸಜ್ಜೆ, ನವಣೆ ಮಾತ್ರ ನನ್ನ ತಂದೆ ಬೆಳೆಯುತ್ತಾರೆ. ಉಳಿದೆಲ್ಲವನ್ನು ಮಾರ‍್ಕೆಟ್ನಿಂದ ತಂದು ನನ್ನ ತಾಯಿ ಮಾಡ್ತಾರೆ. ನಾನು ಮಾರ‍್ತೀನಿ’ ಎಂದು ತುಸು ಸುಳ್ಳನ್ನು ಹೇಳಿದೆ. ‘ಒಳ್ಳೆದು ಬರ‍್ತೀನಿ’ ಎಂದು ಹೋದರು. ಹೀಗೆಯೇ ಒಂದಶ್ಟು ಮಂದಿ ಬಂದು ಹೋದರು. ನಾನು ನಿಜ ಮತ್ತು ಸುಳ್ಳನ್ನು ಬೆರೆಸಿ ಹೇಳುತ್ತಲೇ ಇದ್ದೆ. ನಾನು ಏನೇ ಹೇಳುತ್ತಿದ್ದರೂ ಬರುತ್ತಿದ್ದ ಮಂದಿಗಳು ಇನ್ನೊಂದು ಬಗೆಯಲ್ಲಿ ಮಾತನಾಡುತ್ತಲೇ ಹೋಗುತ್ತಿದ್ದರು.

ಹೇಗಿದ್ದರೂ 2 ಪ್ಯಾಕೆಟ್ ಇದೆ. ಒಂದು ನಿಜಕ್ಕೆ ಇನ್ನೊಂದು ಸುಳ್ಳಿಗೆ ಮೀಸಲಾಗಿರಲಿ ಎಂದು ತೀರ‍್ಮಾನಿಸಿ ಮೊದಲು ನಿಜವನ್ನೇ ಹೇಳುತ್ತಾ ವ್ಯಾಪಾರ ಮಾಡಬೇಕೆಂದುಕೊಂಡೆ. ಎಶ್ಟೋ ಮಂದಿಗಳು ಬಂದು ಹೋದ ಮೇಲೆ ಒಬ್ಬಾಕೆ ಬಂದು 1 ಕೆ.ಜಿ ಹುರಿಹಿಟ್ಟನ್ನು ಕೊಂಡು ಹೋದರು. ಈಗ ತುಸು ಸುಳ್ಳಿನ ದಾರಿಯಲ್ಲಿ ವ್ಯಾಪಾರ ಮಾಡುವ ಹೊತ್ತು ಮೂಡಿತು. ಯಾರೊಬ್ಬರು ಉಳಿದ 1/2 ಕೆ.ಜಿ ಹುರಿಹಿಟ್ಟನ್ನು ಕೊಳ್ಳಲು ಮನಸ್ಸು ಮಾಡುತ್ತಿರಲಿಲ್ಲ. ಒಬ್ಬಾತ ನೋಡಿ ‘ಯೇ ಕೊನೆದು ಇದು. ಕೊಳ್ಳೋದಾದ್ರೂ ಹೇಗ್ರಿ?’ ಎಂದರು. ‘ನಿನ್ನೇ ಬಂದಿದ್ವಿ. ಎಲ್ಲಾ ಕಾಲಿಯಾಗಿ ಇದಶ್ಟೇ ಉಳಿದುಕೊಂಡಿರೋದು’ ಎಂದು ಸುಳ್ಳು ಹೇಳಿ, ‘ಜೂನ್ 1 2016ರಲ್ಲಿ ಮಾಡಿದ್ದು ಸರ‍್’ ಎಂದು ನಿಜವನ್ನು ಹೇಳಿದೆ. ಅದಕ್ಕೆ ಅವರು ‘ಏನೇ ಇರ‍್ಲಿ ಸರ್ ಕೊನೆದು ಕೊನೆಗೆ ಅಶ್ಟೆ’ ಎಂದು ಹೊರಟು ಹೋದರು.

ನಾನು ಮಾಡುತ್ತಿರುವ ವ್ಯಾಪಾರದಿಂದ ಆ ರೀತಿಯ ಅನುಬವವನ್ನು ಪಡೆದುಕೊಂಡೆ. ಆದರೆ ನನ್ನ ಪಕ್ಕ ಮಾವಿನ ಹಣ್ಣನ್ನು ಮಾರುತ್ತಿರುವವರ ಮತ್ತು ಮಾವನ್ನು ನೋಡಲಿಕ್ಕೋ/ಕೊಳ್ಳಲಿಕ್ಕೋ ಬರುತ್ತಿರುವವರ ಪ್ರತಿಕ್ರಿಯೆಯನ್ನು ಕೇಳಿಸಿಕೊಂಡು ನನಗಾದ ಅನುಬವದ ಜೊತೆ ತುಲನೆ ಮಾಡಬೇಕಲ್ಲವೆ? ಅನುಬವ ಕೇವಲ ಒಬ್ಬ ವ್ಯಕ್ತಿಗೆ ಸೇರಿದ ಬೇಲಿ ಏನೂ ಅಲ್ಲವಲ್ಲ? ಹೀಗಾಗಿ ಅವರ ಕಡೆಗೆ ಗಮನವಿಟ್ಟೆ.

ಒಬ್ಬ ವ್ಯಕ್ತಿ ಬಂದು ‘ಏನ್ರೀ ಪವ್ಡರ್ ಹಾಕಿ ಹಣ್ಣು ಮಾಡಿಲ್ವ?’ ಕೇಳಿದರು. ಮಾವನ್ನು ಮಾರುತ್ತಿದ್ದವರು ‘ಇಲ್ಲ ಸರ‍್’ ಎಂದರು. ‘ನನ್ಗೆ ಸುಳ್ ಹೇಳ್ಬೇಡ್ರಿ. ಇಲ್ಲ ಅಂತಿದ್ರೆ ತಾಯಾಣೆ ಇಡ್ರಿ ನೋಡೋಣ’ ಕೊಳ್ಳುವವರು ಹೇಳಿದರು. ತಾಯಾಣೆ ಹಾಕದೆ ‘ಇಲ್ಲ ಸರ್ ಇಲ್ಲ ಸರ್, ಇದು ಕೇಸರ್ ಮಾವು ಹಿಂಗೆ ಇರೋದು’ ಎಂದು 4-5 ಸಲ ಮಾರುವವರು ಹೇಳುತ್ತಿದ್ದರು. ‘ನೋಡ್ರಿ ಬೇಕಾದ್ರೆ ಅಲ್ಲಿದ್ದಾರಲ್ಲಾ ಕುರುಡ ಅವರು ಹೇಳ್ಲಿ ನಾನು ಒಪ್ತೀನಿ’ ಎಂದು ‘ಹೇಳ್ರಿ ಸರ್ ಈ ಮಾವನ್ನು ಪವ್ಡರ್ ಹಾಕಿಯೇ ಹಣ್ಣು ಮಾಡಿದ್ದ?’ ಎಂದು ಕೊಳ್ಳುವವರು ನನ್ನನ್ನು ಕೇಳಿದರು. ನಾನು ‘ಸಾವಯವ ಹಣ್ಣಂತೆ ಮಾರ‍್ತಿರೋದು; ಪವ್ಡರ್ ಬಗ್ಗೆ ನನ್ಗೆ ಗೊತ್ತಿಲ್ಲ’ ಎಂದೆ. ‘ಅವ್ರು ಕೂಡ ಅನುಮಾನದಲ್ಲೇ ಹೇಳ್ತಿದ್ದಾರೆ ನೋಡ್ರಿ. ನೀವ್ ಒಂದ್ ಸಲ ತಾಯಾಣೆ ಇಡ್ರಿ’ ಎಂದು ಕೊಳ್ಳುವವರು ಹೇಳಿದರು. ಅದಕ್ಕೆ ಮಾರುವವರು ‘ಹುಲ್ ಬಳಸಿ ಹಣ್ಣು ಮಾಡಿರೋದು ಸರ್. ಪವ್ಡರ್ ಬಳ್ಸಿಲ್ಲ’ ಎಂದರು. ‘ಸರಿ 1 ಕೆ.ಜಿ ಹಾಕ್ರಿ’ ಎನ್ನುತ್ತಲೇ ಕೊಳ್ಳುವವರು ಕೊಂಡು ಹೋದರು. ಇಲ್ಲಿ ಸುಳ್ಳು ಮಾರುವವನ ಕೈ ಹಿಡಿಯಿತು ಎನ್ನಬಹುದು.

ಮತ್ತೊಬ್ಬರು ಬಂದು ‘1 ಕೆ.ಜಿ ಹಾಕ್ರಿ’ ಎಂದರು. ‘50 ಸರ‍್’ ಎಂದು ಮಾರುವವರು ಹೇಳಿದರು. ‘ಮೊದ್ಲು ಹಾಕ್ರಿ’ ಎಂದು ಕೊಳ್ಳುವವರು ತಾಕೀತು ಮಾಡಿದರು. ‘ಸರ್ ತೂಕ ಮಾಡುವ ಮಿಶಿನ್ದು ಚಾರ‍್ಜ್ ಇಲ್ಲ. 5 ಹಣ್ಣು ಬರುತ್ತೆ 1 ಕೆ.ಜಿಗೆ’ ಎಂದು ಮಾರುವವರು ಮಾವಿನ ಹಣ್ಣುಗಳನ್ನು ಕೊಳ್ಳುವವರಿಗೆ ಕೊಟ್ಟರು. ‘ರೀ ಕಡ್ಮೆ ಇದ್ರೆ ಏನ್ರಿ ಮಾಡೋದು? ಕೊಟ್ ದುಡ್ಗೆ ಸರಿಯಾಗಿ ಇಲ್ದಿದ್ರೆ?’ ಕೊಳ್ಳುವವರು ಎಂದರು. ‘ತಾಯಾಣೆಗೂ ಜಾಸ್ತಿನೇ ಬರುತ್ತೆ. ಬೇಕಿದ್ರೆ ಅಲ್ಲಿ ತೂಕಮಾಡಿಸಿ ನೋಡಿ. ಕಡಿಮೆ ಇದ್ರೆ ಇದ್ರು ಜೊತೆಗೆ ಇನ್ನೂ ಕೊಡ್ತೀನಿ ಸರ‍್’ ಮಾರುವವರು ಎಂದರು. ದಡದಡನೆ ಕೊಳ್ಳುವವರು ಬೇರೆ ಅಂಗಡಿಗೆ ಹೋಗಿ ತೂಕಮಾಡಿಸಿ, ನಗುಮೊಗದಲ್ಲಿ ಬಂದು ‘1 ಕೆ.ಜಿ ಮೇಲೆ 725 ಗ್ರಾಮ್ ಇದೆ. ತಗೊಳ್ಳಿ’ ಎಂದು ದುಡ್ಡನ್ನು ಮಾರುವವರಿಗೆ ಕೊಟ್ಟರು. ಕೊಳ್ಳುವವರು 50ರೂಗಿಂತಲೂ ಹೆಚ್ಚು ದುಡ್ಡನ್ನು ಕೊಟ್ಟಿದ್ದರಿಂದ ‘ಸರ್ 50 ಅಶ್ಟೇ ಸಾಕು’ ಮಾರುವವರು ಎಂದರು. ‘ಪರ‍್ವಾಗಿಲ್ಲ ತಗೊಳ್ಳಿ’ ಎಂದು ಮಾರುವವರಿಗೆ ದುಡ್ಡನ್ನು ಕೊಟ್ಟು ಹೋದರು. ನಿಜವು ಇಲ್ಲಿ ಕೆಲಸ ಮಾಡಿತು ಎನ್ನಬಹುದು.

ವ್ಯಾಪಾರದಲ್ಲಿ ಯಾರೊಬ್ಬರಿಗೂ ದಕ್ಕೆ ಮಾಡದಂತಹ ಮಿತಿಯ ಎಲ್ಲೆಯೊಳಗೆ ಸುಳ್ಳು ಮತ್ತು ನಿಜದ ಚಲಾವಣೆ ಮಾಡಿದರೆ ಮಾತ್ರ ಹೊಟ್ಟೆಗೆ, ಬಟ್ಟೆಗೆ ತೊಡಕಾಗದು, ಯಶಸ್ವಿ ವ್ಯಾಪಾರಿಗಳು ಅನುಸರಿಸುತ್ತಿರುವ ವ್ಯಾಪಾರ ನೀತಿ ಕೂಡ ಈ ಬಗೆಯದ್ದೆ ಆಗಿರುತ್ತದೆ ಮತ್ತು ವ್ಯಕ್ತಿ/ಪರಿಸ್ತಿತಿಗೆ ತಕ್ಕಂತೆ ಸುಳ್ಳು/ನಿಜವನ್ನು ಅನಿವಾರ‍್ಯವಾಗಿ ಬಳಸಲೇಬೇಕಾಗುತ್ತದೆ ಎನ್ನುವುದನ್ನು ಈ ಪ್ರಯೋಗದಿಂದ ಅರಿತುಕೊಂಡು ಸಂಜೆಯಾಗುತ್ತಿದ್ದಂತೆಯೇ ಮನೆಗೆ ಹೆಂಡತಿಯೊಂದಿಗೆ ಮರಳಿದೆ.

( ಚಿತ್ರಸೆಲೆ: uncyclopedia.wikia.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ತುಂಬಾ ಅದ್ಭುತವಾದ ಲೇಖನ. ನಿಜವಾದ ವ್ಯಾಪಾರ ಅನುಭವ.

ಅನಿಸಿಕೆ ಬರೆಯಿರಿ:

%d bloggers like this: