ಮಳೆಗಾಲ: ಅಂಟುರೋಗಗಳಿಂದ ದೂರವಿರಿ

 ನಾಗರಾಜ್ ಬದ್ರಾ.

ಮಳೆಗಾಲ

ಮಳೆಗಾಲ ಬಂದ ಕೂಡಲೇ ಅಂಟು ರೋಗಗಳ ಹರಡುವಿಕೆ ಹೆಚ್ಚಾಗುತ್ತದೆ. ಈ ಮಳೆಗಾಲದಲ್ಲಿ ಕುಡಿಯುವ ನೀರಿನ ಮೂಲಗಳಲ್ಲಿ, ನೀರು ಕೂಡಿಟ್ಟಿರುವ ವಸ್ತುಗಳಲ್ಲಿ ಹಾಗೂ ನಿಂತ ನೀರಿನಲ್ಲಿ ಸೊಳ್ಳೆಗಳ ಎಣಿಕೆಯು ಹೆಚ್ಚಾಗಿ ಮಲೇರಿಯಾ, ಡೆಂಗೀ, ಚಿಕುನ್ ಗುನ್ಯಾ, ಮೆದುಳುಜ್ವರ, ಆನೆಕಾಲು ರೋಗ ಮುಂತಾದ ಅಂಟು ರೋಗಗಳು ಹರಡಬಹುದಾದಂತಹ ಸಾದ್ಯತೆ ಹೆಚ್ಚಾಗಿರುತ್ತದೆ. ಹಾಗೆಯೇ ಮಳೆಗಾಲದಲ್ಲಿ ಕುಡಿಯುವ ನೀರಿನ ಮೂಲಗಳು  ಕೊಳಕಾಗುವ ಸಾದ್ಯತೆಯಿದೆ. ಈ ಕೊಳಕು ನೀರನ್ನು ಕುಡಿಯುವುದರಿಂದ ಕಾಲರಾ, ವಾಂತಿಬೇದಿ, ಟೈಪಾಯಡ್, ಕಾಮಾಲೆ ಮುಂತಾದ ಅಂಟು ರೋಗಗಳು ಬರಬಹುದು.

ಒಬ್ಬರಿಂದ ಒಬ್ಬರಿಗೆ ಹರಡುವ ಈ ಅಂಟು ರೋಗಗಳು ಬ್ಯಾಕ್ಟೀರಿಯಾ, ವೈರಸ್, ಶಿಲೀಂದ್ರ ಮುಂತಾದ ಬರಿಗಣ್ಣಿಗೆ ಕಾಣದಂತಹ ಕ್ರಿಮಿಗಳು ಬಗೆ ಬಗೆಯ ಮಾದ್ಯಮಗಳ ಮೂಲಕ ನಮ್ಮ ಮೈ ಒಳಗೆ ಸೇರಿ ಅಂಟು ರೋಗಗಳಾದ ಕಾಲರಾ, ವಾಂತಿಬೇದಿ, ಟೈಪಾಯಡ್, ಕಾಮಾಲೆ ಮುಂತಾದವುಗಳನ್ನು ತರುತ್ತವೆ. ಇನ್ನು ಕೆಲವು ಅಂಟು ರೋಗಗಳಾದ ಮಲೇರಿಯಾ, ಡೆಂಗೀ, ಚಿಕುನ್ ಗುನ್ಯಾ, ಮೆದುಳುಜ್ವರ, ಆನೆಕಾಲು ರೋಗ ಮುಂತಾದವುಗಳು ಬೇರೆ ಬೇರೆ ಸೊಳ್ಳೆಗಳು  ಕಚ್ಚುವುದರಿಂದ ಬರುತ್ತವೆ.

ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಟು ರೋಗಗಳು ಹಾಗೂ ಅವುಗಳ ಹರಡುವ ಬಗೆಗಳು:

1.ಕೊಳಕು ನೀರನ್ನು ಕುಡಿಯುವುದರಿಂದ ಹರಡುವ ರೋಗಗಳು

ಕಾಲರಾ (Cholera)

ಈ ರೋಗವು ವಿಬ್ರಿಯೊ ಕಾಲರಾ (Vibrio cholera) ಎಂಬ ರೋಗಾಣುವಿನಿಂದ ಬರುತ್ತದೆ.

ರೋಗವಿರುವ ಕಾಲ: ಈ ರೋಗವು 1 ರಿಂದ 2 ದಿನಗಳವರೆಗೆ ಇರಬಹುದು.

ಇದರ ಮುಕ್ಯ ಲಕ್ಶಣಗಳು: ಅತಿಯಾದ ವಾಂತಿಬೇದಿಯಾಗುವುದು, ಮೈಯಲ್ಲಿ ನೀರು ಕಡಿಮೆಯಾಗುವುದು, ಕೊನೆಯಲ್ಲಿ ಉಚ್ಚೆ ನಿಂತು ಸಾವು ಕೂಡ ಆಗಬಹುದು.

ವಾಂತಿಬೇದಿ  (Gastroenteritis)

ಈ ರೋಗವು ಬ್ಯಾಕ್ಟೀರಿಯಾ, ವೈರಸ್ ಮತ್ತು ಇನ್ನಿತರೆ ರೋಗಾಣುಗಳಿಂದ ಬರುತ್ತದೆ.

ರೋಗವಿರುವ ಕಾಲ: ಈ ರೋಗವು 1 ರಿಂದ 4 ದಿನಗಳವರೆಗೆ ಇರಬಹುದು.

ಇದರ ಮುಕ್ಯ ಲಕ್ಶಣಗಳು: ಜ್ವರ ಬರುವುದು, ವಾಕರಿಕೆಯಾಗುವುದು, ಹೊಟ್ಟೆ ನೋವು ಕಾಣಿಸಿಕೊಳ್ಳುವುದು, ವಾಂತಿಬೇದಿಯಾಗುವುದು ಮುಂತಾದವು.

ಕಾಮಾಲೆ (Hepatitis) 

ಈ ರೋಗವು ಹೆಪಟೈಟಿಸ್ ಎಂಬ ರೋಗಾಣುವಿನಿಂದ ಬರುತ್ತದೆ.

ರೋಗವಿರುವ ಕಾಲ : ಈ ರೋಗವು 15 ರಿಂದ 45 ದಿನಗಳವರೆಗೆ ಇರಬಹುದು.

ಇದರ ಮುಕ್ಯ ಲಕ್ಶಣಗಳು: ಚಳಿ ಜ್ವರ ಬರುವುದು, ತಲೆನೋವು ಕಾಣಿಸಿಕೊಳ್ಳುವುದು, ಸುಸ್ತಾಗುವುದು, ಮೈಕೈ ನೋವಾಗುವುದು, ಹಸಿವಿಲ್ಲದಿರುವಿಕೆ, ವಾಕರಿಕೆ ವಾಂತಿಯಾಗುವುದು, ಹಳದಿ ಬಣ್ಣದ ಉಚ್ಚೆ ಬರುವುದು, ಕಣ್ಣುಗಳು ಹಳದಿ ಬಣ್ಣವಾಗುವುದು ಮುಂತಾದವು.

ಟೈಪಾಯಿಡ್ (Typhoid) ಜ್ವರ

ಈ ರೋಗವು ಸಾಲ್ಮೊನೆಲ್ಲಾ ಟೈಪಿ(Salmonella typhi bacteria) ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ.

ರೋಗವಿರುವ ಕಾಲ: ಈ ರೋಗವು 10 ರಿಂದ 14 ದಿನಗಳವರೆಗೆ ಇರಬಹುದು.

ಇದರ ಮುಕ್ಯ ಲಕ್ಶಣಗಳು: ಜ್ವರ ಬರುವುದು, ಸುಸ್ತಾಗುವುದು, ಮೈಕೈ ನೋವಾಗುವುದು, ವಾಕರಿಕೆ ವಾಂತಿಯಾಗುವುದು, ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಮುಂತಾದವು.

ಅತಿಸಾರ ಬೇದಿ (Diarrhea)

ಈ ರೋಗವು ಬ್ಯಾಕ್ಟೀರಿಯಾ, ವೈರಸ್ ಮತ್ತು ಇನ್ನಿತರೆ ರೋಗಾಣುಗಳಿಂದ ಬರುತ್ತದೆ. ಸಾಮಾನ್ಯವಾಗಿ ಅತಿಸಾರ ಬೇದಿಯು ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ

ರೋಗವಿರುವ ಕಾಲ: ಈ ರೋಗವು 14 ದಿನಗಳಿಗಿಂತ ಹೆಚ್ಚು ಇರುವುದಿಲ್ಲ.

ಇದರ ಮುಕ್ಯ ಲಕ್ಶಣಗಳು: ನೀರಿನಂತೆ ಅತಿಯಾದ ಬೇದಿಯಾಗುವುದು, ಒಮ್ಮಿಂದೊಮ್ಮೆಗೇ ಪ್ರಾರಂಬವಾಗಿ ಕೆಲವು ದಿನಗಳವರೆಗೆ ಮುಂದುವರೆಯುವುದು.

ಮೇಲೆ ತಿಳಿಸಿದ ಕಾಲರಾ, ವಾಂತಿಬೇದಿ, ಟೈಪಾಯಡ್, ಕಾಮಾಲೆ ಮತ್ತು ಅತಿಸಾರ ಬೇದಿ ಈ ಐದು ಅಂಟು ರೋಗಗಳು ಸೋಂಕಿತ ವ್ಯಕ್ತಿಯ ಕಕ್ಕಸು ಹಾಗೂ ಕಕ್ಕಸು ಮಿಶ್ರಿತ ನೀರಿನ ಮೇಲೆ ಕುಳಿತ ನೊಣಗಳು ಬೇರೊಬ್ಬರ ಊಟ ಮತ್ತು ತಿಂಡಿ ತಿನಿಸುಗಳ ಮೇಲೆ ಕುಳಿತುಕೊಳ್ಳುವುದರಿಂದ ಅವರಿಗೆ ಹರಡುತ್ತದೆ.

2. ಸೊಳ್ಳೆಗಳು ಕಚ್ಚುವುದರಿಂದ ಹರಡುವ ರೋಗಗಳು

ಮಲೇರಿಯಾ(Malaria)

ಈ ರೋಗವು  ಅನಾಪಿಲಿಸ್ (Anopheles)  ಎಂಬ ಹೆಣ್ಣು ಸೊಳ್ಳೆಯು ಕಚ್ಚುವುದರಿಂದ ಬರುತ್ತದೆ.

ಹರಡುವ ಬಗೆ: ಸೋಂಕಿತ ಅನಾಪಿಲಿಸ್ ಹೆಣ್ಣು ಸೊಳ್ಳೆ ಮನುಶ್ಯನಿಗೆ ಕಚ್ಚುವುದರಿಂದ ಹರಡುತ್ತದೆ.

ರೋಗವಿರುವ ಕಾಲ: ಈ ರೋಗವು 25 ರಿಂದ 30 ದಿನಗಳವರೆಗೂ ಇರಬಹುದು.

ಇದರ ಮುಕ್ಯ ಲಕ್ಶಣಗಳು: ಚಳಿ ಜ್ವರ ಬರುವುದು, ವಾಂತಿಯಾಗುವುದು ಹಾಗೂ ಅತಿಯಾದ ತಲೆನೋವು ಕಾಣಿಸಿಕೊಳ್ಳುವುದು ಮುಂತಾದವು.

ಡೆಂಗೀ (Dengue)

ಈ ರೋಗವು ಈಡಿಸ್ ಈಜಿಪ್ಟಿ (Aedes Aegypti) ಎಂಬ ಸೊಳ್ಳೆಯು ಕಚ್ಚುವುದರಿಂದ ಬರುತ್ತದೆ.

ಹರಡುವ ಬಗೆ: ಸೋಂಕಿತ ಈಡಿಸ್ ಈಜಿಪ್ಟಿ (Aedes Aegypti) ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಯು ಮನುಶ್ಯನಿಗೆ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ.

ರೋಗವಿರುವ ಕಾಲ:  ಈ ರೋಗವು 5 ರಿಂದ 7 ದಿನಗಳವರೆಗೂ ಇರಬಹುದು.

ಇದರ ಮುಕ್ಯ ಲಕ್ಶಣಗಳು: ಹೆಚ್ಚು ಜ್ವರ ಬರುವುದು, ತಲೆನೋವು ಕಾಣಿಸಿಕೊಳ್ಳುವುದು, ಕಣ್ಣುಗಳ ಹಿಂಬಾಗದಲ್ಲಿ ನೋವು ಕಾಣಿಸಿಕೊಳ್ಳುವುದು, ಚರ‍್ಮದ ಮೇಲೆ ಅಲ್ಲಲ್ಲಿ ರಕ್ತದಕಲೆಗಳು ಕಾಣಿಸಿಕೊಳ್ಳುವುದು, ಮೂಗಿನಿಂದ ಹಾಗೂ ಒಸಡುಗಳಲ್ಲಿ ರಕ್ತ ಸುರಿಯುವುದು, ಡಾಂಬರಿನಂತಹ ಕಪ್ಪು ಬಣ್ಣದ ಕಕ್ಕಸು  ಆಗುವುದು, ನಾಡಿಬಡಿತ ಹಾಗೂ ರಕ್ತದೊತ್ತಡ ಕುಸಿತಗೊಳ್ಳುವುದು, ಪ್ರಜ್ನೆ ತಪ್ಪುವುದು ಮುಂತಾದವು.

ಚಿಕುನ್ ಗುನ್ಯಾ (Chikungunya)

ಈ ರೋಗವು ಕೂಡ ಈಡಿಸ್ ಈಜಿಪ್ಟಿ (Aedes Aegypti) ಎಂಬ ಸೊಳ್ಳೆಯು ಕಚ್ಚುವುದರಿಂದ ಬರುತ್ತದೆ. ಆದರೆ ಇದು ಹರಡುವ ವಾಯ್ರಸ್ ಬೇರೆಯದು.

ಹರಡುವ ಬಗೆ: ಸೋಂಕಿತ ಈಡಿಸ್ ಈಜಿಪ್ಟಿ (Aedes Aegypti) ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

ರೋಗವಿರುವ ಕಾಲ:  ಈ ರೋಗವು 5 ರಿಂದ 7 ದಿನಗಳವರೆಗೆ ಇರಬಹುದು.

ಇದರ ಮುಕ್ಯ ಲಕ್ಶಣಗಳು: ಅತಿಯಾದ ಚಳಿ ಜ್ವರ ಬರುವುದು, ಬೆರಳು ಮುಂಗೈ ಹಾಗೂ ಕಾಲುಗಳಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುವುದು, ದೇಹದಲ್ಲಿ ಸ್ನಾಯು ಸೆಳೆತವಾಗುವುದು ಮುಂತಾದವು.

ಮೆದುಳು ಜ್ವರ (Japanese Encephalitis) 

ಈ ರೋಗವು ಜಪಾನಿಸ್ ಎನ್ಸೆಪಾಲಿಟಿಸ್ ಎಂಬ ಸೊಳ್ಳೆಯು ಕಚ್ಚುವುದರಿಂದ ಬರುತ್ತದೆ.

ಹರಡುವ ಬಗೆ: ಜಪಾನಿಸ್ ಎನ್ಸೆಪಾಲಿಟಿಸ್ ಸೊಳ್ಳೆಯು ಸೋಂಕಿತ ಹಂದಿ ಮತ್ತು ಹಕ್ಕಿಗಳನ್ನು ಕಚ್ಚಿ ರಕ್ತ ಹೀರುವುದರಿಂದ, ಜೆ.ಇ ಸೋಂಕಿನ ವೈರಾಣು ಸೊಳ್ಳೆಯ ಮೈಯನ್ನು ಪ್ರವೇಶಿಸುತ್ತದೆ. ಬಳಿಕ ಈ ಸೋಂಕಿತ ಸೊಳ್ಳೆಯು ಮನುಶ್ಯರಿಗೆ ಕಚ್ಚಿದಾಗ ಅದರಲ್ಲಿನ ಸೋಂಕು ಮನುಶ್ಯನಿಗೆ ತಾಗಿ ರೋಗ ಬರುತ್ತದೆ.

ರೋಗವಿರುವ ಕಾಲ : ಈ ರೋಗವು 5 ರಿಂದ 15 ದಿನಗಳವರೆಗೆ ಇರಬಹುದು.

ಇದರ ಮುಕ್ಯ ಲಕ್ಶಣಗಳು : ಅತಿಯಾದ  ಜ್ವರ ಬರುವುದು, ತಲೆನೋವು ಕಾಣಿಸಿಕೊಳ್ಳುವುದು, ವಾಂತಿಯಾಗುವುದು, ಮೈಕೈ ನೋವುವಾಗುವುದು, ಕುತ್ತಿಗೆ ಸೆಳೆತಕ್ಕೆ ಒಳಗಾಗುವುದು, ಎಚ್ಚರ ತಪ್ಪುವುದು, ಕಿವುಡುತನ, ಬುದ್ದಿಮಾಂದ್ಯತೆ ಆಗಬಹುದು, ಕ್ರಮೇಣವಾಗಿ ಮೆದುಳು ಊತಗೊಂಡು ಸಾವು ಕೂಡ ಸಂಬವಿಸಬಹುದು.

ಆನೆಕಾಲು ರೋಗ (Filarial)

ಈ ರೋಗವು ಕ್ಯೊಲೆಕ್ಸ (Culex) ಎಂಬ ಹೆಣ್ಣು ಸೊಳ್ಳೆಯು ಕಚ್ಚುವುದರಿಂದ ಬರುತ್ತದೆ.

ಹರಡುವ ಬಗೆ: ಸೋಂಕಿತ ಕ್ಯುಲೆಕ್ಸ್ ಎಂಬ ಹೆಣ್ಣು ಸೊಳ್ಳೆಯು ರಾತ್ರಿವೇಳೆಯಲ್ಲಿ ಮನುಶ್ಯರಿಗೆ ಕಚ್ಚಿದಾಗ ಮೆಕ್ರೋ ಪೈಲೇರಿಯಾ ಜಂತುಗಳು ಮನುಶ್ಯರ ರಕ್ತದಲ್ಲಿ ಸೇರುತ್ತದೆ. ಮುಂದಿನ ದಿನಗಳಲ್ಲಿ ಇವುಗಳು ಇಮ್ಮಡಿಗೊಳ್ಳುತ್ತಾ ಇರುತ್ತವೆ. ಇವುಗಳು ಸಾಮಾನ್ಯವಾಗಿ ಮನುಶ್ಯರ ರಕ್ತದಲ್ಲಿ  ರಾತ್ರಿಯ ಸಮಯದಲ್ಲಿ ಸಂಚರಿಸುತ್ತವೆ.

ರೋಗವಿರುವ ಕಾಲ: ಈ ರೋಗವು ಹಲವಾರು ವರ‍್ಶಗಳು ಇರಬಹುದು.

ಇದರ ಮುಕ್ಯ ಲಕ್ಶಣಗಳು: ಕೈ ಕಾಲುಗಳು ಊತವಾಗುವುದು, ಚಳಿ ಜ್ವರ ಬರುವುದು ಮುಂತಾದವು.

ಮಳೆಗಾಲದಲ್ಲಿ ಹರಡುವ ಅಂಟು ರೋಗಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳು

1) ಊಟ ಮಾಡುವ ಮೊದಲು ಕೈಗಳು ಚೆನ್ನಾಗಿ ಸಾಬೂನಿನಿಂದ ತೊಳೆದುಕೊಳ್ಳಬೇಕು.

2) ಯಾವಾಗಲೂ ನೀರನ್ನು ಕಾಯಿಸಿ, ಆರಿಸಿ ಕುಡಿಯಬೇಕು.

3) ಮನೆಯಲ್ಲಿನ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಚೊಕ್ಕವಾಗಿಡಬೇಕು.

4) ಕುಡಿಯುವ ನೀರಿನ ಮೂಲಗಳ ಸುತ್ತಮುತ್ತ ದನ-ಕರುಗಳು, ಪಾತ್ರೆ ಮತ್ತು ಬಟ್ಟೆಗಳನ್ನು ತೊಳೆಯಬಾರದು.   ಹಾಗೆಯೇ ಇವುಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

5) ಬಚ್ಚಲು ನೀರನ್ನು ರಸ್ತೆಗೆ ಬಿಡಬಾರದು. ಅದಕ್ಕಾಗಿ ಮನೆಗೊಂದು ಇಂಗು ಬಚ್ಚಲನ್ನು ಕಟ್ಟಿಸಿಕೊಳ್ಳಬೇಕು.

6) ಉಚ್ಚೆ ಹಾಗೂ ಕಕ್ಕಸು ಮಾಡಿದ ನಂತರ ಕೈಗಳು ಚೆನ್ನಾಗಿ ಸಾಬೂನಿನಿಂದ ತೊಳೆದುಕೊಳ್ಳಬೇಕು.

7) ಬಯಲಿನಲ್ಲಿ ಕಕ್ಕಸು ಮಾಡುವುದನ್ನು ಬಿಟ್ಟು ಮನೆಗೊಂದು ಶೌಚಾಲಯನ್ನು ಕಟ್ಟಿಸಿಕೊಳ್ಳಬೇಕು.

8) ಕುಡಿಯುವ ನೀರಿನ ಮೂಲಗಳಿಗೆ ಹಾಗೂ ನೀರು ಕೂಡಿಟ್ಟಿರುವ ಜಾಗಗಳಲ್ಲಿ ನಿಯಮಿತವಾಗಿ ಕ್ಲೋರಿನೇಶನ್ (ಕ್ಲೋರಿನೇಶನ್ ಅಂದರೆ ನೀರಿನಲ್ಲಿ ಕ್ಲೋರಿನ್ ಎಂಬ ರಾಸಾಯನಿಕ ಪದಾರ‍್ತವನ್ನು ಬೇರೆಸುವುದು) ಮಾಡಿಸುವುದು.

9) ಮನೆಯಲ್ಲಿನ ಕುಡಿಯುವ ನೀರಿನ ಪೈಪುಗಳಲ್ಲಿ ಸೋರಿಕೆ ಕಂಡುಬಂದಲ್ಲಿ ಅದನ್ನು ಆದಶ್ಟು ಬೇಗನೆ ದುರಸ್ತಿ ಮಾಡಿಸುವುದು ಇಲ್ಲವೇ ಬದಲಾಯಿಸುವುದು.

10) ಯಾವುದೇ ಸಂಶಾಯಸ್ಪದ ಜ್ವರ ಕಂಡುಬಂದಲ್ಲಿ ಕೂಡಲೇ  ರಕ್ತ ಪರೀಕ್ಶೆ ಮಾಡಿಸಿಕೊಳ್ಳುವುದು.

11) ಹಗಲು ಹಾಗೂ ರಾತ್ರಿ ಮಲಗುವಾಗ ತಪ್ಪದೇ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು.

12) ಸೊಳ್ಳೆಗಳು ಮನೆ ಒಳಗೆ ಬಾರದಂತೆ ಕಿಟಕಿ, ಬಾಗಿಲಿಗೆ ಜಾಲರಿಗಳನ್ನು ಅಳವಡಿಸಿಕೊಳ್ಳುವುದು.

13) ಸೊಳ್ಳೆಯ ಉತ್ಪತ್ತಿಯನ್ನು ತಡೆಯಲು ಮನೆಯ ಒಳಗಿನ  ಹಾಗೂ ಹೊರಗಿನ ನೀರು ಕೂಡಿಡುವ ತೊಟ್ಟಿಗಳು, ಡ್ರಂಗಳು, ಬ್ಯಾರೆಲ್‌ಗಳು, ಮಣ್ಣಿನ ಮಡಿಕೆಗಳು ಮುಂತಾದವುಗಳನ್ನು ವಾರಕ್ಕೊಮ್ಮೆ ಕಾಲಿ ಮಾಡಿ, ಸ್ವಚ್ಚಗೊಳಿಸಿ ಹಾಗೂ ಒಣಗಿಸಿ  ಮತ್ತೆ ನೀರು ತುಂಬಿ ಸರಿಯಾಗಿ ಮುಚ್ಚಳದಿಂದ ಮುಚ್ಚಿಡಬೇಕು.

14) ಮನೆಯ ಸುತ್ತಮುತ್ತ ಬಯಲಿನಲ್ಲಿ  ಒಡೆದ ಡಬ್ಬಿ, ತೆಂಗಿನ ಚಿಪ್ಪು, ಗಾಲಿ ಮುಂತಾದ ಚಿಕ್ಕ ಚಿಕ್ಕ ಮಳೆನೀರು ಕೂಡಿಕೊಳ್ಳುವ ಅವಕಾಶ ಇರುವಂತಹ ಯಾವುದೇ ವಸ್ತುಗಳನ್ನು ಎಸೆಯದಿರಿ.

15) ಕುಡಿಯುವ ನೀರಿನ ಮೂಲಗಳಾದ ಬಾವಿ, ಕೆರೆ, ಹೊಂಡ, ಕುಂಟೆ ಹಾಗೂ ನೀರು ಕೂಡಿಟ್ಟಿರುವ ವಸ್ತುಗಳಲ್ಲಿ ಸೊಳ್ಳೆಯ ಮರಿಗಳನ್ನು ತಿನ್ನುವ  ಗ್ಯಾಂಬುಸಿಯ ಮತ್ತು ಗಪ್ಪಿಯೆಂಬ ಮೀನುಗಳನ್ನು ಬಿಟ್ಟು ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬಹುದು.

16) ಹರಿಯದೆ ಒಂದೇ ಕಡೆ ನಿಂತ ನೀರು ಸೊಳ್ಳೆಗಳ ತವರು, ಆದ್ದರಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.

ಸ್ವಚ್ಚತೆಯನ್ನು ಕಾಪಾಡಿ, ಈ ಮಳೆಗಾಲದಲ್ಲಿ ಅಂಟು ರೋಗಗಳನ್ನು ದೂರವಿಡಿ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ.

 

(ಮಾಹಿತಿ ಸೆಲೆ:  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಕೆಯ, ರಾಯಚೂರು ಇವರ ಅಂಟು ರೋಗಗಳ ಮಾಹಿತಿ ಕೈಪಿಡಿ)

(ತಿಟ್ಟ ಸೆಲೆ: skymetweather.com )

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: