ಬೂಮಿ, ನೀರು ಮತ್ತು ನಾವು!

– ಸುನಿಲ್ ಮಲ್ಲೇನಹಳ್ಳಿ.

nalli-neeru
ಆಪೀಸ್‌ಗೆ ಪ್ರಯಾಸವಿಲ್ಲದೆ ಓಡಾಡಬಹುದು ಅನ್ನೋ ಪ್ರಬಲವಾದ ಕಾರಣ ಹಾಗೂ ಟ್ರಾಪಿಕ್‌ನ ಜಂಜಾಟದಿಂದ ಮುಕ್ತನಾಗುವ ಬವ್ಯ ಬರವಸೆಯಿಂದ ನಾನು ನಾಲ್ಕೈದು ತಿಂಗಳ ಕೆಳಗೆ ವಿಜಯನಗರದಿಂದ ಗುಂಜೂರಿಗೆ ಮನೆಯನ್ನು ಬದಲಾಯಿಸಿಕೊಂಡು ಬಂದಿರುವೆ. ಗುಂಜೂರಿನ ಅಪಾರ‍್ಟ್‌ಮೆಂಟಿಗೆ ಬಂದ ಹೊಸತರಲ್ಲಿ ಇಲ್ಲಿಯ ಮೇಲ್ವಿಚಾರಕ ಇಂಜಿನಿಯರ‍್‌‌ನ್ನು‌ ಕುರಿತು “ಈ ಅಪಾರ‍್ಟ್‌ಮೆಂಟಿನಲ್ಲಿಯ ಮನೆಗಳ ನೀರಿನ ಅವಶ್ಯಕತೆಯನ್ನು ಹೇಗೆ ಪೂರೈಸುತ್ತಿರುವಿರಿ?” ಎಂದು ಕೇಳಿದ ಪ್ರಶ್ನೆಗೆ ಅವಕೊಟ್ಟ ಉತ್ತರವಿನ್ನೂ ಕಿವಿಯಲ್ಲಿ ಹಾಗೇ ಪ್ರತಿದ್ವನಿಸುತ್ತಿದೆ.  ಆತ್ಮವಿಶ್ವಾಸ ತುಂಬಿಕೊಂಡ ಮನದಿಂದ ಅವ ಹೀಗೆ ಹೇಳಿದ್ದನು. “ಸಾರ್, ನಮ್ಮ ಅಪಾರ‍್ಟ್‌ಮೆಂಟಿನ ಅಂಗಳದಲ್ಲೇ 4 ಬೋರ‍್‌ವೆಲ್‌ಗಳಿವೆ, ಅವುಗಳಿಂದ ಇಲ್ಲಿನ ಪ್ರತಿಯೊಂದು ಮನೆಯ ನೀರಿನ ಅವಶ್ಯಕತೆಯನ್ನು ಪೂರೈಸುತ್ತೇವೆ. ನೀವು ಈ ವಿಚಾರವಾಗಿ ಯಾವ ಚಿಂತೆಯನ್ನು ಮಾಡಬೇಡಿ. ಏನಿಲ್ಲವೆಂದರೂ ಇನ್ನ 3-4 ವರ‍್ಶ ನೀರಿನ ಯಾವುದೇ ಸಮಸ್ಯೆ ಇಲ್ಲಿರೋಲ್ಲ”. ಹೀಗೆ ಏನೇನೋ ಹೇಳಿದವ.

3-4 ವರ‍್ಶಗಳ ಮಾತು ಹಾಗಿರಲಿ, ಇನ್ನೂ 3-4 ತಿಂಗಳು ಕೂಡ ಕಳೆದಿಲ್ಲ! ಆಗಲೇ ನಮ್ಮ ಅಪಾರ‍್ಟ್‌ಮೆಂಟಿನ ಅಂಗಳದಲ್ಲಿರುವ ನಾಲ್ಕೂ ಬೋರ‍್‌ವೆಲ್‌ಗಳಲ್ಲಿ ನೀರಿಲ್ಲದಾಗಿ, ಹೊರಗಡೆ ಟ್ಯಾಂಕರ‍್‌ಗಳಿಂದ ನೀರು ತರಿಸುವ ಪರಿಸ್ತಿತಿ ಎದುರಾಗಿದೆ. ಈ ಪರಿಸ್ತಿತಿ ಹೀಗೆ ಮುಂದುವರೆದರೆ, ಮುಂಬರುವ ಬೇಸಿಗೆಯಲ್ಲಿ ನಮ್ಮ ಅಪಾರ‍್ಟ್‌ಮೆಂಟಿನ ವಾಸಿಗರು ನೀರಿನ ಕೊರತೆಯನ್ನು ಅನುಬವಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಮಾತುಗಳು ಬೆಂಗಳೂರಿನಲ್ಲಿ ನೆಲೆಸಿರುವ ಬಹುತೇಕ ಇತರ ಅಪಾರ‍್ಟ್‌ಮೆಂಟ್‌ಗಳ ವಾಸಿಗರಿಗೂ ಕೂಡ ನಿಸ್ಸಂಶಯವಾಗಿ ಅನ್ವಯಿಸಲೂಬಹುದು.

ವಿಜಯನಗರ ಏರಿಯದಲ್ಲಿ ಕಳೆದ 10 ವರ‍್ಶಗಳಿಂದ ಇದ್ದ ನನಗೆ ನೀರಿನ ಅಬಾವದ ಬಯವೆಂದೂ ಕಾಡಿರಲಿಲ್ಲ! ನೀರಿಲ್ಲದ ಸನ್ನಿವೇಶ ಹೇಗಿರುತ್ತೇ? ಎನ್ನುವುದನ್ನು ನಾನು ಯೋಚಿಸಿಯೇ ಇರಲಿಲ್ಲ. ಅಶ್ಟು ನಿರಾಳವಾಗಿದ್ದೆ ಅಲ್ಲಿ. ಹಾಗೇ ಇರೋದಕ್ಕೆ ಕಾರಣ ಅಮ್ಮ ಕಾವೇರಿ. ಅಶ್ಟು ಮಹಾಮಹಿಮಳು ಆ ತಾಯಿ! ಅವಳು ಹರಿವಲ್ಲಿ ನೀರಿನ ಕೊರತೆಯೆಲ್ಲಿ? ಈಗೀಗ ನಾನು ದೇವರಲ್ಲಿ ಬೇಡುತ್ತಿರುವೆ, ಗುಂಜೂರು ಹಾಗೂ ಸುತ್ತಲ ಏರಿಯಗಳಿಗೆ ಆದಶ್ಟುಬೇಗ ಹರಿದು ಬರಲೆಂದು ಆ ಜೀವದಾಯಿ. ಈ ನೀರಿನ ಟ್ಯಾಂಕರ‍್‌ಗಳ ಬಗ್ಗೆ ಹೇಳುವುದಾದರೆ – ಮಾರತಹಳ್ಳಿ, ವೈಟ್‌ಪೀಲ್ಡ್, ವರ‍್ತೂರು, ಗುಂಜೂರು. ಹೀಗೆ ಬೆಂಗಳೂರಿನ ಇನ್ನೂ ಮುಂತಾದ ಏರಿಯಗಳಲ್ಲಿ ಇವುಗಳದ್ದೇ ಕಾರುಬಾರು, ಚಲನವಲನ. ನೀರಿನ ಅವಶ್ಯಕತೆ ಇರುವ ಮನೆ, ಅಪಾರ‍್ಟ್‌ಮೆಂಟ್‌ ಅತವಾ ಹೋಟೆಲ್‌‌ಗಳು, ಅವು ರಸ್ತೆ ಪಕ್ಕದಲ್ಲಿ ಇರಲಿ ಅತವಾ ಯಾವುದೋ ಸಂದಿಯಲ್ಲಿ ಇರಲಿ, ಅಲ್ಲಿಗೆ ಯಾವ ಸಮಯದಲ್ಲಾದರೂ ಬರುತ್ತವೆ ಈ ಟ್ಯಾಂಕರ‍್‌ಗಳು. ಅಪಾರ‍್ಟ್‌ಮೆಂಟ್‌ನ ದೈತ್ಯ-ತೊಟ್ಟಿಗಳ ಒಡಲಿಗೆ ನೀರುಣಿಸಿ, ತುಂಬಿಸುವ ನಿತ್ಯ ಜೀವಾದಾರ ಚಿಲುಮೆ ಈ ಟ್ಯಾಂಕರ‍್‌ ಎಂದರೂ ತಪ್ಪಿಲ್ಲ!

ಆದರೆ, ನಾವಿಲ್ಲಿ ಗಮನಿಸಲೇಬೇಕಾದ ಕೆಲವು ಅಂಶಗಳಿವೆ. ನಮಗೆ ಟ್ಯಾಂಕರ‍್‌ಗಳ ಮೂಲಕ ನೀರನ್ನು ಒದಗಿಸುವವರು ನೀರನ್ನೇನು ಉತ್ಪತ್ತಿ ಮಾಡುತ್ತಾರೆಯೇ? ಅವರೂ ಸಹ ಇನ್ಯಾವುದೋ neerutankerಬೋರ‍್‌ವೆಲ್‌ವೊಂದರಿಂದ ನೀರನ್ನು ತುಂಬಿಸಿಕೊಂಡು ಬರಬೇಕಲ್ಲವೇ? ಅಂದಹಾಗೆ ಆ ಬೋರ‍್‌ವೆಲ್‌ನಲ್ಲಿ ನೀರು ಇನ್ನೆಶ್ಟು ದಿನ ಬಂದೀತು? ಬರುವಶ್ಟು ದಿನ ಬರಲಿ ನಾವ್ಯಾಕೆ ತಲೆಕೆಡಿಸಿ ಕೊಳ್ಳೊಣ ಅಂತೀರಾ? ಬತ್ತಿಹೋದ ತರುವಾಯ ಬೇರೊಂದು ಬೋರ‍್‌ವೆಲ್‌ನಿಂದ ನೀರನ್ನು ತರುತ್ತಾರೆ ಎಂದು ಸುಲಬವಾಗಿ ಹೇಳಬಹುದು. ಆದರೆ ಮೂಲಬೂತ ಅವಶ್ಯಗಳಲ್ಲಿ ಒಂದಾದ ನೀರಿನ ಬಗ್ಗೆ ಅಶ್ಟು ಹಗುರವಾಗಿ ಮಾತಾನಾಡುವಂತಿಲ್ಲ. ಒಂದು ಸ್ವಲ್ಪವಾದರೂ ಕಾಳಜೀಪೂರ‍್ವಕವಾಗಿ ಯೋಚಿಸಬೇಕಾಗಿದೆ ನಾವು. ಅಲ್ಲದೆ ಬೂಮಾತೆಯ ಅಂತರಾಳದಲ್ಲಿ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಸಂಗತಿಯನ್ನು ಯಾರೂ ಕಡೆಗಣಿಸುವಂತಿಲ್ಲ. ಕೊನೆಪಕ್ಶ ನಾವು ವಾಸವಿರುವ ಸ್ತಳ ಹಾಗೂ ಅದರ ಸುತ್ತಲೂ ನೀರು ಸಿಗದಂತಹ ಪರಿಸ್ತಿತಿ ನಿರ‍್ಮಾಣವಾದಗಲಾದರೂ ನಮಗೆ ನೀರಿನ ನೈಜ ಬೆಲೆ ಗೊತ್ತಾಗಬಹುದು.

ಮೊನ್ನೆ ಸಿಕ್ಕ ಸಾಲು ರಜೆಯಲ್ಲಿ ನನ್ನೂರಿಗೆ ಹೋದಾಗ ಕೆಲ ಸಂಬಂದಿಕರ ಊರುಗಳಿಗೂ ಸಹ ಹೋಗಿದ್ದೆ. ಬೇಟಿ ಸಮಯದಲ್ಲಿ ಹೀಗೆ ಸಂಬಂದಿಕರೊಬ್ಬರ ಜೊತೆ ಮಾತಾಡುತ್ತಿರುವಾಗ, ಅವರು ಹೇಳಿದ ಕೆಲ ಮಾತುಗಳು ನನ್ನಲ್ಲಿ ಹಲವಾರು ಚಿಂತನೆಗಳಿಗೆ ಎಡೆಮಾಡಿಕೊಟ್ಟವು ಹಾಗೂ ಈವೊಂದು ಲೇಕನ ಬರೆಯಲು ಪ್ರೇರೇಪಿಸಿದವು ಕೂಡ. ಅವರು ಹೇಳಿದ ಮಾತುಗಳು ಹೀಗಿದ್ದವು. ನಮ್ಮ ರಾಜ್ಯದಲ್ಲಿಯ ಪ್ರತಿಹಳ್ಳಿಗೊಂದರಂತೆ ಜೆಸಿಬಿ ಹಾಗೂ ನಾಲ್ಕಾರು ಟ್ರಾಕ್ಟರುಗಳು ಇರೋದು ನಿಜ ಅಲ್ಲವೇ? ಜೆಸಿಬಿ ಎಂದ ಮೇಲೆ ಅಗೆಯುವುದು, ಬಗೆಯುವುದೇ ಅದರ ಬಹುನೆಚ್ಚಿನ ಕೆಲಸ. ಇಂತಹವೊಂದು ಜೆಸಿಬಿ, ಒಂದು ವರ‍್ಶದಲ್ಲಿ ಸರಿ ಸುಮಾರು ಒಂದು ಎಕರೆ ಉಳುಮೆ ಹೊಲವನ್ನು ಅಗೆದು, ಬಗೆದು ಬರಡುಬೂಮಿಯನ್ನಾಗಿ ಮಾಡುವುದೆಂದಾದರೆ, ಹಾಗೇ, ನಮ್ಮ ರಾಜ್ಯದಲ್ಲಿಯ 22000 ಸಾವಿರ ಹಳ್ಳಿಗಳಲ್ಲಿರುವ ಒಂದೊಂದು ಜೆಸಿಬಿ, ಒಂದೊಂದು ಎಕರೆ ಬೂಮಿಯನ್ನು ಬರಡುಮಾಡುತ್ತಾ ಹೋದ ಪಕ್ಶದಲ್ಲಿ , ಒಂದು ವರ‍್ಶದಲ್ಲಿ ಪಲವತ್ತಾದ 22000 ಸಾವಿರ ಎಕರೆ ಬೂಮಿಯು ಬರಡುಬೂಮಿಯಾಗಿ ಮಾರ‍್ಪಡುತ್ತೆ.

ಎರಡನೇಯದಾಗಿ, ಈಚಿನ ದಿನಗಳಲ್ಲಿ ಕ್ರುಶಿ ಬೂಮಿಯನ್ನು ಕೈಗಾರಿಕಾ ಪ್ರದೇಶ, ಲೇಔಟ್‌, ಸೈಟುಗಳಾಗಿ ಮಾರ‍್ಪಡಿಸುತ್ತಿರುವುದನ್ನು ಅಲ್ಲಲ್ಲಿ ಕಾಣಬಹುದು. ಇದು ಹೀಗೆ ಮುಂದವರೆಯುತ್ತಾ ಹೋದರೆ, ಮುಂದೊಮ್ಮೆ ಉಳುಮೆ ಮಾಡುವ ಬೂಮಿಗಾಗಿ ಪರದಾಡುವ ಪರಿಸ್ತಿತಿ ಎದುರಾಗಬಹುದು. ಅಲ್ಲದೆ ಇತ್ತೀಚಿನ ವರುಶಗಳಲ್ಲಿ ಮಳೆ ಸಕಾಲಕ್ಕೆ ಬಾರದಿರುವುದು ಸರ‍್ವೇಸಾಮಾನ್ಯ ವಿಶಯವಾಗಿಬಿಟ್ಟಿದೆ. ಇದರಿಂದಾಗಿ ತರಕಾರಿ, ಸೊಪ್ಪು ಇನ್ನಿತರ ಆಹಾರ ಪದಾರ‍್ತಗಳ ಏರಿಕೆಗೆ ಅನುವು ಮಾಡಿಕೊಡುತ್ತಿದೆ. ಇವುಗಳ ಜೊತೆಗೆ ವಾಣಿಜ್ಯ ಬೆಳೆಗಳಾದ ರಬ್ಬರ್, ಕಾಪಿ ಇನ್ನೂ ಮುಂತಾದವುಗಳನ್ನು ಹೆಚ್ಚೆಚ್ಚು ಬೆಳೆಸುವ ಆಸಕ್ತಿಯಿಂದ ಕೆಲವೆಡೆ ಅರಣ್ಯ ಪ್ರದೇಶಗಳನ್ನು ಕಾಲಿ-ಕಾಲಿ ಮಾಡುತ್ತಿರುವುದನ್ನು ಮಲೆನಾಡಿನ ಕಡೆಗಳಲ್ಲಿ ನೋಡಬಹುದು.

ಅವರ ಈ ಮೇಲಿನ ಮಾತುಗಳು ಮೇಲ್ನೋಟಕ್ಕೆ ಉದಾಹರಣೆಯ ಮಾತುಗಳಂತೆ ತೋರಬಹುದು. ಆದರೆ ವಾಸ್ತವತೆಗೆ ಬಹಳ ದೂರವಿರದ ಮಾತುಗಳವು. ಏಕೆಂದರೆ, ಇದಕ್ಕೆ ನಿದರ‍್ಶನವಾಗಿಯೇ ಎಂಬಂತೆ ನಮ್ಮೂರು ಹಾಗೂ ಇತರ ಹಳ್ಳಿಗಳಿಗೆ ಹೋಗುವ ಹಾದಿಯಲ್ಲಿ ಹತ್ತಾರು ಹೊಲಗಳು ಈಗಾಗಲೇ ಜೆಸಿಬಿಯ ಹಸಿವಿಗೆ ತುತ್ತಾಗಿರುವುದನ್ನು ಪ್ರತ್ಯಕ್ಶವಾಗಿ ನಾನು ನೋಡಿರುವೆನು. ಮೊದಮೊದಲೆಲ್ಲ ಕೆರೆ-ಕಟ್ಟೆಗಳಿಂದ ಪಲವತ್ತಾದ ಮಣ್ಣನ್ನು ಲಾರಿ, ಟ್ರಾಕ್ಟರ‍್‌ಗಳಲ್ಲಿ ತೆಗೆದುಕೊಂಡು ಹೋಗಿ ತೋಟ-ಹೊಲಗಳಲ್ಲಿ ಹರಡುತ್ತಿದ್ದರು. ಆದರೆ ಈಚಿನ ದಿನಗಳಲ್ಲಿ ಕೆರೆ-ಕಟ್ಟೆಗಳ ಪಲವತ್ತಾದ ಮಣ್ಣು ಬರಿದಾಗಿ, ಎಲ್ಲೂ ಗುಣಮಟ್ಟದ ಮಣ್ಣು ಸಿಗದಂತಹ ಈ ಸಂದರ‍್ಬದಲ್ಲಿ ಸ್ತಿತಿವಂತರು ಬಡವರ ಹೊಲವನ್ನು ಕರೀದಿಸಿ, ಅಲ್ಲಿಯ ಪಲವತ್ತಾದ ಮಣ್ಣನ್ನು ತಮ್ಮ ಹೊಲಗಳಿಗೆ ಸಾಗಿಸಿಕೊಳ್ಳುತ್ತಾರೆ. ಕೆರೆ ತುಂಬಿ ಮತ್ತೊಂದು ಕೆರೆಗೆ ಹರಿದರೆ ತಾನೇ ಪಲವತ್ತಾದ ಮಣ್ಣು ಕೆರೆಯೊಳಗೆ ಸೇರಿಕೊಳ್ಳೊದು? ಕೆರೆ-ಕಟ್ಟೆಗಳು ತುಂಬುವುದೇ ಒಂದು ಅಚ್ಚರಿ ವಿಶಯವಾಗಿದೆ ಈಗೀಗ. ಇನ್ನ ಕೆಲವೆಡೆ ಕೆರೆಯನ್ನೇ ಒತ್ತುವರಿ ಮಾಡಿ, ಅದನ್ನು ಸಾಗುವಳಿಯ ಬೂಮಿಯಾಗಿಯೋ ಅತವ ಇಟ್ಟಿಗೆ ತಯಾರಿಸುವ ಜಾಗವಾಗಿಯೋ ಪರಿವರ‍್ತಿಸಲಾಗುತ್ತಿದೆ. ಇವೆಲ್ಲದರ ಜೊತೆಗೇ ಗಣಿಗಾರಿಕೆಯಿಂದ ಕೂಡ ಅದೆಶ್ಟೋ ಬೆಟ್ಟ-ಗುಡ್ಡ, ಸಮತಟ್ಟಾದ ಬೂಬಾಗ ಬಂಜರಾಗಿ ಹೋಗಿವೆ. ಕುದರೆಮುಕಕ್ಕೋ, ಸಂಡೂರಿಗೋ ಇಲ್ಲವೇ ಕೋಲಾರದಲ್ಲಿನ ಚಿನ್ನದ ಗಣಿಗೋ ಬೇಟಿಕೊಟ್ಟರೆ ಗಣೆಗಾರಿಕೆಯಿಂದ ಬೂಮಿ ಯಾವಮಟ್ಟಕ್ಕೆ ಬಂಜರಾಗಿದೆ ಎಂಬುದನ್ನು ಕುದ್ದು ನೋಡಬಹುದು.

ಪ್ರಸ್ತುತ ದಿನಗಳಲ್ಲಿ ಹಳ್ಳಿಗಳ ಕಡೆ ನೀರಿನ ವ್ಯವಸ್ತೆ ಹೇಗಾಗುತ್ತಿದೆ ಎಂಬುದ ವಿಚಾರವಾಗಿ ಸ್ವಲ್ಪ ಹೇಳಲು ಇಚ್ಚಿಸುತ್ತೇನೆ. ಹಳ್ಳಿಗಳ ನೀರಿನ ವ್ಯವಸ್ತೆಯ ವಿಚಾರವಾಗಿ ಬಂದರೆ: ನನಗೆ ತಿಳಿದಿರುವ ಹಾಗೇ ನಮ್ಮೂರಲ್ಲಿ 1999ನೇ ಇಸ್ವಿಯವರೆಗೂ ಬಾವಿ-ಕಲ್ಯಾಣಿಗಳ ನೀರನ್ನು ಮನೆ ಬಳಕೆಗೆ ಹಾಗೂ ಕುಡಿಯುವುದಕ್ಕೆ ಉಪಯೋಗಿಸುತ್ತಿದ್ದೆವು. ಬೇಸಿಗೆಯಲ್ಲೂ ಕೂಡ ಈ ಬಾವಿ ಹಾಗೂ ಕಲ್ಯಾಣಿಯಲ್ಲಿ ನೀರು ಇರುತ್ತಿತ್ತು. ಕಾಲಾಂತರದಲ್ಲಿ ಸಾರ‍್ವಜನಿಕ ಬೋರ‍್‌ವೇಲ್‌ಗಳನ್ನು ಸರ‍್ಕಾರದವತಿಯಿಂದ ಹಾಕಿಸಲಾಯಿತು. ನಮ್ಮೂರ ಜನರೆಲ್ಲ ತಮ್ಮ-ತಮ್ಮ ಮನೆ ಬಳಕೆಗೆ ಹಾಗೂ ಕುಡಿಯುವ ನೀರಿಗಾಗಿ ಈ ಬೋರ‍್‌ವೆಲ್‌ಗಳನ್ನು ಆಶ್ರಯಿಸುತ್ತಾ ಹೋದರು. ಈ ನಡುವೆ ನಮ್ಮೂರಿನ ಬಾವಿ-ಕಲ್ಯಾಣಿಗಳು ಶಾಶ್ವತವಾಗಿ ಬರಿದಾಗಿದ್ದನ್ನು ಯಾರೂ ಗಮನಿಸಲೇ ಇಲ್ಲ ಹಾಗೂ ಕಿಂಚಿತ್ತಾದರೂ ಬೇಸರ, ಆತಂಕ, ಮತ್ಯಾವುದನ್ನೂ ವ್ಯಕ್ತಪಡಿಸಲಿಲ್ಲ. ಇದಕ್ಕೆ ನಾನೂ ಕೂಡ ಹೊರತಲ್ಲ! ಆದರೆ ನಮ್ಮೂರಿನ ಬಹುಪಾಲು ಮಂದಿ ಈಜಾಡುವುದ ಕಲಿತಿದ್ದೆ ಆ ಕಲ್ಯಾಣಿಯಲ್ಲಿ! ತೆರದಬಾವಿಯ ನೀರನ್ನೇ ಕುಡಿದು ನಾವೆಲ್ಲ ಬೆಳದದ್ದು. ಕೆಲವೊಮ್ಮೆ ಕೆಲಸದ ನಿಮಿತ್ತ ಹೊಲಗಳಲ್ಲಿಗೆ ಹೋದ ಸನ್ನಿವೇಶದಲ್ಲಿ, ಅಲ್ಲಿನ ಇಳಿಜಾರುಗಳಲ್ಲಿ ಇರುತ್ತಿದ್ದ ಜೋಪಿನ ನೀರನ್ನು ಸಹ ಕುಡಿದಿದ್ದೇವೆ. ಅಲ್ಲದೆ ಆ ಸಮಯದಲ್ಲಿ ಮಂಡಿನೋವನ್ನು ಯಾರೂ ಅನುಬವಿಸಿದ್ದೇ ಇಲ್ಲ.

ಆದರೆ ಯಾವುದೇ ಮುಂದಾಲೋಚನೆ ಇಲ್ಲದೇ ಬೋರ‍್‌ವೆಲ್‌ನ ನೀರನ್ನು ಬಳಸುತ್ತಾ ಹೋದಂತೆ ಕಾಲಕ್ರಮೇಣ ನಮ್ಮೂರಿನ ಬಹಳಶ್ಟು ಜನರಿಗೆ ಮಂಡಿನೋವು ಕಾಣಿಸಿಕೊಳ್ಳಲು ಶುರುವಾಯಿತು. ಇದಕ್ಕೆ ಕಾರಣ ಆಳದ ನೀರಿನಲ್ಲಿ ಮಿತಿಮೀರಿ ಇರುವ ಪ್ಲೋರೈಡ್ ಅಂಶ ಮತ್ತು ಇನ್ನಿತರ ರಾಸಾಯನಿಕ ಪದಾರ‍್ತಗಳು. ಮಂಡಿನೋವು ಇರುವ ಕಾರಣದಿಂದ ನಡೆದಾಡಲು, ಕುಳಿತುಕೊಳ್ಳಲು ಅವರು ಪಡುವ ಕಶ್ಟವನ್ನು ಕಂಡಾಗ ಅಯ್ಯೋ ಪಾಪ! ಎಂದು ಅನಿಸುತ್ತದೆ. ನಮ್ಮೂರಿನ ಪರಿಸ್ತಿತಿಯೇ ರಾಜ್ಯದ ಇತರ ಬೇರೆಬೇರೆ ಹಳ್ಳಿಗಳಲ್ಲೂ ಕೂಡ ನಿರ‍್ಮಾಣವಾಗಿರುವುದರಲ್ಲಿ ಎಳ್ಳಶ್ಟೂ ಸಂದೇಹವಿಲ್ಲ. ಈಗೀಗ ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ಶ್ರೀ ದರ‍್ಮಸ್ತಳ ಗ್ರಾಮಾಬಿವ್ರುದ್ದಿ ಯೋಜನೆಯ ‘ಶುದ್ದ ಗಂಗಾ’ ವತಿಯಿಂದ ಒಳ್ಳೆಯ ಗುಣಮಟ್ಟದ ಹಾಗೂ ಹಂತ-ಹಂತವಾಗಿ ಶುದ್ದಿಸಿದ ಕುಡಿಯುವ ನೀರನ್ನು ದಿನನಿತ್ಯವೂ ಜನರಿಗೆ, ಅದೂ ಅತೀ ಕಡಿಮೆ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಇದೊಂದು ಲೋಕ ಕಲ್ಯಾಣ ಕೆಲಸ ಎಂದು ಹೇಳುವುದರಲ್ಲಿ ಯಾವ ಉತ್ಪ್ರೇಕ್ಶೆಯೂ ಇಲ್ಲ.

ಇಲ್ಲಿಯವರೆಗೂ ಸಮಸ್ಯೆಗಳ ಸರಮಾಲೆಯನ್ನು ವಿಚಾರ ಮಾಡಿದೆವು. ಆದರೆ ಈ ಸಮಸ್ಯೆಗಳಿಗೆಲ್ಲ ಪರಿಹಾರ ಏನು? ನಾವು ಬದಲಾಯಿಸಿಕೊಂಡಿರುವ ಈ ಎಲ್ಲ ಸಂದಿಗ್ದ ಸನ್ನಿವೇಶಗಳನ್ನು ಪುನಹ ಯತಾಸ್ತಿತಿಗೆ ತರಬಹುದೆ? ಯತಾಸ್ತಿತಿ ಅಂದರೆ ನಮ್ಮ-ನಮ್ಮ ಏರಿಯಗಳ, ಇಲ್ಲವೇ ನಮ್ಮ-ನಮ್ಮ ಹಳ್ಳಿಗಳ ಕೆರೆ-ಕಟ್ಟೆ, ಬಾವಿ-ಕಲ್ಯಾಣಿಗಳು ಮರುಚೇತನ ಪಡೆದುಕೊಂಡು ಜನ, ಜಾನುವಾರುಗಳಿಗೆ ನೀರು ಒದಗಿಸುವಂತಾಗುವುದು. ಹಣದ ಆಮಿಶಕ್ಕೆ ಒಳಗಾಗಿ, ಪಲವತ್ತಾದ ಮಣ್ಣನ್ನು ಅಗೆದು, ಬಗೆದು ಕೊಂಡೊಯುವುದಕ್ಕಾಗಿ ಹೊಲಗಳನ್ನು ಮಾರದಿರುವುದು ಇತ್ಯಾದಿ.

ಈ ಬದಲಾವಣೆ ಆಗಬೇಕೆಂದರೆ, ಅದರಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎನ್ನೊದಂತು ನಿಜ ಹಾಗೂ ಇದ್ಯಾವುದೂ ಒಂದು ದಿನದಲ್ಲಿ ಆಗುವ ಕೆಲಸವಲ್ಲ. ಇಂದಿನ ದಿನಗಳಲ್ಲಿ ದುಡಿಯುವುದನ್ನೇ ಬದುಕಾಗಿಸಿಕೊಂಡಿರುವ ನಾವು, ಬದುಕಿನ ನಿಜವಾದ ಅರ‍್ತವನ್ನೇ ಕಳೆದುಕೊಂಡಿರುವಂತಿದೆ. ನಮಗೆ ಜೀವಕೊಟ್ಟಿರವ ಈ ಬೂತಾಯಿಯ ರುಣ ತೀರಿಸುವ ನಿಟ್ಟಿನಲ್ಲಿ ಯಾವುದಾದರೊಂದು ಕೆಲಸ ಮಾಡಿದ್ದೇವೆಯೇ? ನಮ್ಮಂತೆಯೇ ಪ್ರಾಣಿ-ಪಕ್ಶಿಗಳಿಗೂ ಸಹ ನೀರು ಅತ್ಯವಶ್ಯವಾದುದು ಎನ್ನುವ ವಿಚಾರವನ್ನು ಎಶ್ಟು ಅವಲೋಕಿಸಿದ್ದೇವೆ? ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ. ಸರ‍್ಕಾರವು ಸಹ ಎಚ್ಚೆತ್ತುಕೊಂಡು ಈ ಬೋರ‍್‌ವೆಲ್ ಸಂಸ್ಕ್ರುತಿಗೆ ಮೊದಲು ಮಂಗಳ ಹಾಡಬೇಕು ಮತ್ತು ಕೆರೆಗಳಿಂದಲೋ, ಜಲಾಶಯಗಳಿಂದಲೋ ಬಹುಮಟ್ಟಿನ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕು. ಆ ಮೂಲಕ ಬೂಗರ‍್ಬದಲ್ಲಿ ನೀರಿನ ಮಟ್ಟ ಗಣನೀಯವಾಗಿ ಸುದಾರಣೆಗೊಳ್ಳಲು ಅನುವಾಗುವುದು. ನಮ್ಮ ನಾಡಿನ ಸಂಪನ್ಮೂಲಗಳು ಸುಸ್ತಿತಿಯಲ್ಲಿ ಇರಲು ಸರಕಾರಕ್ಕೆ ಎಶ್ಟು ಜವಾಬ್ದಾರಿ ಇದೆಯೋ, ನಾವೆಲ್ಲರೂ ಕೂಡ ಅಶ್ಟೇ ಜವಾಬ್ದಾರಿಯುತರಾಗಿರಬೇಕು.

( ಚಿತ್ರಸೆಲೆ: deccanchronicle.com  ) 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: