ಬಿಸಿ ನೀರ ನದಿ : ನೆಲದಾಳದ ಹೊಸ ಗುಟ್ಟು!
ನಮ್ಮ ನೆಲದ ತನ್ನುಂಟುಗೆ(Nature)ಯೆ ಹಾಗೆ ನೋಡಿ. ಅದರೊಡಲೊಳಗೆ ಅದೆಶ್ಟು ಗುಟ್ಟುಗಳು ಅಡಗಿಹವೋ ಆ ದೇವನೇ ಬಲ್ಲ. ಹುದುಗಿದ ಗುಟ್ಟುಗಳ ಕೆದರಿ ಕೆಣಕಿದಶ್ಟೂ ಹೊಸ ಹೊಸ ಸಂಗತಿಗಳು ಹುಟ್ಟಿಕೊಳ್ಳುತ್ತವೆ. ಅಂತಹ ಸಂಗತಿಗಳು ದೂರದಲ್ಲೆಲ್ಲೋ ಕುಳಿತು ನೋಡುವ ನಮ್ಮಂತವರಿಗೆ ಬರೀ ಕುತೂಹಲದ ಗಂಟಾದರೆ, ಈ ಗಂಟನ್ನು ಕಳಚಿ ಗುಟ್ಟನ್ನು ಮಂದಿಯ ಮುಂದಿಡುವ ತುಡಿತ ಅರಕೆಗಾರರದ್ದು. ಈ ಬಗೆಯಲ್ಲಿ ಕುತೂಹಲವೊಂದನ್ನು ಹುಟ್ಟು ಹಾಕಿರುವ ಮತ್ತು ಆ ಕುತೂಹಲಕ್ಕೆ ಹೇಳ್ವಿಗಳನ್ನು ಹುಡುಕಿ ಹೊರಟವನ ರೋಚಕ ಕತೆಯೇ ಈ ಬರಹದ ಹಿಂದಿನ ಗುಟ್ಟು.
ಈ ಜಗತ್ತಿನಲ್ಲಿ ಅರಿಮೆಗೆ ಸವಾಲಗಿ ನಿಂತಿರುವ ಸಂಗತಿಗಳು ಒಂದಲ್ಲ ಎರಡಲ್ಲ. ನಾವು ನೆನೆಯುವುದಕ್ಕೂ ನಾಲ್ಕು ಹೆಜ್ಜೆ ಮುಂದೆಯೇ ನಿಂತಿರುವ ಅರಿಮೆಗೆ, ಗೊತ್ತಿರದಶ್ಟು ಕುತೂಹಲತೆಯನ್ನು ತನ್ನುಂಟುಗೆ ತನ್ನೊಳಗೆ ಬಚ್ಚಿಟ್ಟುಕೊಂಡು ಮಂದಿಯನ್ನು ನಿಬ್ಬೆರಗಾಗಿಸಿರುವುದನ್ನು ನಾವು ಕೇಳಿದ್ದೇವೆ ನೋಡಿದ್ದೇವೆ. ಹಾಗೆಯೇ ಅಮೇಜಾನ್ ದಟ್ಟ ಕಾಡುಗಳ ನಡುವೆ ಮಯಂಚುಯಾಸುವಿನಲ್ಲಿ ( Mayantuyacu) ಹರಿಯುತ್ತಿರುವ ನದಿ!. ಇದು ಬರೀ ನದಿಯಲ್ಲ, ಬಿಸಿನೀರಿನ ನದಿ. ಸುಮಾರು 6.25 ಕಿಮೀ ದೂರ ಸುಮಾರು 86°c ಕಾವಳತೆ(Temperature)ಯಲ್ಲಿ ಹರಿಯುವ ಈ ನದಿ ಈಗ ಮಂದಿಯನ್ನು ಬೆರಗುಗಣ್ಣಿನಿಂದ ತನ್ನತ್ತ ನೋಡುವಂತೆ ಮಾಡಿದೆ. ನಮಗೆ ತಿಳಿದಿರುವಂತೆ ನೀರಿನ ಹೆಚ್ಚೆಂದರೆ 100°c ನಲ್ಲಿ ಕುದಿಯ ಬಲ್ಲದು. ಅಲ್ಲದೇ ಅಶ್ಟರ ಮಟ್ಟಿಗೆ ನೀರು ಕುದಿಯಬೇಕಾದರೆ ದೊಡ್ಡ ಮಟ್ಟದ ಕಾವಿನ ನೆರವು ಬೇಕಾಗುತ್ತದೆ. ಆದರೆ ಇಲ್ಲಿನ ನೀರು ಅದಾಗಲೇ 86°c ನಲ್ಲಿ ಕುದಿಯುತ್ತಿದೆ. ಅಶ್ಟರ ಮಟ್ಟಿನ ಕಾವು ನದಿಗೆ ಎಲ್ಲಿಂದ ಸಿಗುತ್ತಿದೆ ? ಅಶ್ಟಕ್ಕೂ ಈ ಗುಟ್ಟಿಗೆ ಕಾರಣವೇನಿರಬಹುದು ಎಂಬುದರ ಬಗ್ಗೆ ಈ ವರೆಗೂ ಯಾರಿಂದಲೂ ಸರಿಯಾದ ಹೇಳ್ವಿ ಸಿಕ್ಕಿಲ್ಲ. ಆದರೂ ಇದರ ಸುತ್ತ ಎಡೆಬಿಡದೆ ಅರಕೆಗಳು ನಡೆಯುತ್ತಲೇ ಇವೆ. ಅಂತವರಲ್ಲಿ ನೆಲದರಿಗ(Geo scientist) ಆಂಡ್ರಸ್ ರೂಜೊ (Andres Ruzo) ಕೂಡ ಒಬ್ಬರು. ಇವರು ಬಿಸಿನೀರ ನದಿಯ ಬಗ್ಗೆ ನಡೆಸುತ್ತಿರುವ ಅರಕೆಗಳ ಬಗ್ಗೆ ಕೆಲ ತಿಂಗಳುಗಳ ಹಿಂದೆ ಕೆಲವು ಅನಿಸಿಕೆಗಳನ್ನು ಮಂದಿಯ ಮುಂದೆ ಬಿಚ್ಚಿಟ್ಟಿದ್ದರು.
ಆಂಡ್ರಸ್ ರೂಜೊ ಮತ್ತು ಅವರ ಅರಕೆ:
ಪೆರುವಿನಲ್ಲಿ ತನ್ನ ಎಳವೆಯನ್ನು ಕಳೆದಿದ್ದ ರೂಜೊ, ತಾನು ನೆಲದರಿಗನಾಗಿ ರೂಪುಗೊಳ್ಳಲು ಇಂಬು ನೀಡಿದ ಕತೆ ನಿಜಕ್ಕೂ ರೋಚಕ. ರೂಜೊ ಹನ್ನೆರಡನೇ ವಯಸ್ಸಿನಲ್ಲಿದ್ದಾಗ ಆತನ ಅಜ್ಜ ಆತನಿಗೊಂದು ಕತೆ ಹೇಳಿದ್ದರು. ಸುಮಾರು ಹದಿನಾರನೇ ನೂರೇಡಿನಲ್ಲಿ ಸ್ಪೇನ್ನ ಮುಂದಾಳು(Conquistadors – ಇದು ಸ್ಪಾನಿಶ್ ನುಡಿಯ ಪದ) ಇನ್ಕಾದ ಕೊನೆಯ ಅರಸನನ್ನು ಕೊಲೆಗಯ್ಯತ್ತಾನೆ. ಮುಂದೆ ಅಮೇಜಾನ್ ಕಾಡಿನ ನಡುವಲ್ಲಿ ಇನ್ಕಾದ ಅರಸ ಬಚ್ಚಿಟ್ಟಿದ್ದ ಚಿನ್ನವನ್ನು ಅರಸಿ ಕಾಡಿನಾಳಕ್ಕೆ ಹೊಕ್ಕುತ್ತಾರೆ. ಹೀಗೆ ಆ ಕಾಡಿನಿಂದ ಬದುಕಿ ಹೊರಬಂದ ಹಲವರು ಹಲವು ಬಗೆಯ ಕತೆಗಳನ್ನು ಹೇಳ ತೊಡಗುತ್ತಾರೆ. ಇದು ಅಮೆಜಾನ್ ಕಾಡಿನಾಳದ ಕುತೂಹಲತೆಯನ್ನು ಬಿಚ್ಚಿಡುತ್ತದೆ. ಕನಸಿನಲ್ಲೂ ಕಾಡುವ ಆ ಕಾಡಿನ ದಟ್ಟತೆ, ನಂಜಿನ ನೀರು, ಮನುಶ್ಯರನ್ನೇ ನುಂಗುವ ಹಾವುಗಳು, ಕೊತ ಕೊತ ಕುದಿಯುತ್ತಾ ಹರಿಯುವ ಬಿಸಿನೀರಿನ ನದಿ, ಉಪವಾಸ, ಕಾಯಿಲೆ ಹೀಗೆ ನರಕವನ್ನು ತೋರಿಸಿದ ಅಮೇಜಾನ್ ಕಾಡಿನ ಬದುಕು ಬಹುಬೇಗ ಮಂದಿಯನ್ನು ಮುಟ್ಟುತ್ತದೆ.
ಆದರೆ ಇವೆಲ್ಲದರ ನಡುವೆ ರೂಜೊವನ್ನು ಸೆಳೆದದ್ದು ಮಾತ್ರ ಅಮೆಜಾನ್ ನ ಬಿಸಿನೀರಿನ ನದಿ. ನಿಜಕ್ಕೂ ಈ ಸಂಗತಿ ರೂಜೊವಿನ ಮನದಲ್ಲಿ ಅಳಿಸದಂತೆ ಅಚ್ಚಾಯಿತು. ಅದೆಶ್ಟರ ಮಟ್ಟಿಗೆಂದರೆ ತನ್ನ ಕಲಿಕೆಯ ಒಂದು ಬಾಗವನ್ನಾಗಿ ಬಿಸಿನೀರಿನ ನದಿಯನ್ನು ಆರಿಸಿಕೊಳ್ಳುವಶ್ಟರ ಮಟ್ಟಿಗೆ. ರೂಜೊ ತನ್ನ ಅಜ್ಜ ಹೇಳಿದ ಕತೆಯನ್ನು ಕೇಳಿದ ಕೆಲವು ವರುಶಗಳ ಬಳಿಕ, ಸವ್ತರ್ನ್ ಮೆತೊಡಿಸ್ಟ್ ಯೂನಿವರ್ಸಿಟಿಯಲ್ಲಿ ನೆಲದಿರುವರಿಮೆ(Geophysics) ಎಂಬ ವಿಚಾರದ ಮೇಲೆ ಪಿ ಹೆಚ್ ಡಿ ಕಲಿಕೆ ನಡೆಸುತ್ತಾನೆ. ಈ ಹೊತ್ತಿನಲ್ಲಿ ಬಿಸಿನೀರ ನದಿಯನ್ನು ಅರಿಯುವ ಬಹಳಶ್ಟು ಹಮ್ಮುಗೆ(Project)ಗಳಿಗೆ ಶುರುವಿಡುತ್ತಾನೆ. ಈ ಹಮ್ಮುಗೆ ಕೇವಲ ಆತನ ಕಾತರತೆಯಾಗಿರುವುದಿಲ್ಲ ಬದಲಾಗಿ ಆತನ ಗುರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಮೊದಲು ಪೆರು ಮತ್ತು ಅಮೇಜಾನ್ ಸುತ್ತಮುತ್ತಲಿನ ನೆಲದಕಾವಿನ(Geothermal) ದಾರಿತಿಟ್ಟ(Map) ಒಂದನ್ನು ತಯಾರಿಸುವತ್ತ ತನ್ನ ಕೆಲಸ ಶುರುವಿಡುತ್ತಾನೆ. ಒಂದು ವೇಳೆ ಬಿಸಿನೀರಿನ ನದಿ ಇರುವುದೇ ಆದರೆ ಅದರ ನೆಲೆ(Merit) ಗುರುತಿಸುವುದು ಆತನ ಹುಳುಹಾಗಿರುತ್ತದೆ. ಆದರೆ ಆತನ ಈ ಹುಳುಹು ಆತನ ಹಿರಿಯ ಒಡಗೆಯ್ಯುಗ(Senior Colleagues)ರು ನಗೆಗೀಡುಮಾಡುತ್ತಾರಲ್ಲದೆ ಆತನ ಮಾತನ್ನು ತಳ್ಳಿಹಾಕುತ್ತಾರೆ. ಆದರೂ ಗುರಿಬಿಡದ ರೂಜೊ ತನ್ನದೊಂದು ತಂಡ ಕಟ್ಟಿಕೊಂಡು, ಅಮೇಜಾನ್ ಮಳೆಕಾಡಿನ ನಡುವೆ ಹರಿಯುವ ಬಿಸಿನೀರ ನದಿಯೆಡಗಿನ ಅರಕೆಗಳನ್ನು ಎಡೆಬಿಡದೆ ಶುರುವಿಡುತ್ತಾನೆ.
ಮೊದಲೇ ಹೇಳಿದಂತೆ ಸುಮಾರು 6ಕೀಮೀ ನಶ್ಟು ದೂರ ಹರಿಯುತ್ತಿರುವ ಈ ನದಿ, 25ಮೀ ಅಗಲ, 6ಮೀ ಆಳ ಮತ್ತು ಸುಮಾರು 86°c ಕಾವಳತೆಯಲ್ಲಿ ಹರಿಯುತ್ತಿದೆ. ಸಾಮಾನ್ಯವಾಗಿ ನದಿಯ ಒಂದು ಚಿಕ್ಕ ಬಾಗ ಬಿಸಿಯಾಗಬೇಕಾದರೂ ದೊಡ್ಡ ಮಟ್ಟದ ಕಾವು ಬೇಕೇ ಬೇಕು. ಅಲ್ಲದೇ ನದಿಗೆ ಹತ್ತಿರದಲ್ಲಿ ಯಾವುದಾದರೂ ಉರಿಬೆಟ್ಟ(Volcanoes)ಗಳಿದ್ದರೆ ಈ ರೀತಿಯಾಗುವ ಆಗುಹಗಳಿವೆ. ಆದರೆ ಈ ನದಿಯ 700ಕಿಮೀ ಸುತ್ತಮುತ್ತ ಯಾವುದೇ ಉರಿಬೆಟ್ಟಗಳಿಲ್ಲದೇ ಇರುವುದರಿಂದ ಇಂತಹ ಆಗುಹಗಳೆಲ್ಲ ತುಸು ದೂರದ ಮಾತಾಗಿ ಉಳಿಯುತ್ತದೆ. ಹಾಗಾದರೆ ನಿಜಕ್ಕೂ ಇವೆಲ್ಲಕ್ಕೆ ಕಾರಣಗಳೇನಿರಬಹುದು?
ಇಲ್ಲಿನ ಬುಡಕಟ್ಟು ಮಂದಿ ಇದನ್ನು ದೇವರ ಕಟ್ಟಳೆಗಳಾಗಿ ನಂಬುತ್ತಾರೆ. ಇವರ ನಂಬಿಕೆಯಂತೆ “ರವಿಯ ಕಾವು ನೇರವಾಗಿ ಈ ನದಿಯ ಮೇಲೆ ಬೀಳುತ್ತದೆ. ಇದರಿಂದ ನೀರು ಸದಾ ಬಿಸಿಯಾಗಿರುತ್ತದೆ” ಎಂದು. ಆದರೆ ಅರಿಮೆಯು ಬೇರೆಯದೇ ಹೇಳ್ವಿಯನ್ನು ಕೊಡುತ್ತದೆ. ಅರಕೆಗಾರ ರೂಜೊ ಇದರ ಬಗ್ಗೆ ತನ್ನ ಅನಿಸಿಕೆಯೊಂದನ್ನು ಮಂದಿಯ ಮುಂದೆ ಬಿಚ್ಚಿಟ್ಟಿದ್ದರು. “ನೆಲದ ಯಾವುದೋ ಬಾಗದಲ್ಲಿ ಬೀಳುವ ಮಳೆಯ ನೀರು ಹರಿದು ನೇರವಾಗಿ ನೆಲದ ಒಡಲು ಸೇರುತ್ತದೆ. ನಮಗೆಲ್ಲ ತಿಳಿದಿರುವಂತೆ ನೆಲದೊಳಗೆ ದೊಡ್ಡ ಮಟ್ಟದ ಕಾವಳತೆಯಿದೆ. ಹೀಗೆ ನೆಲದೊಳಗೆ ಹರಿದ ನೀರು ನೆಲದೊಳಗಿನ ಕಾವಿಂದ ಬಿಸಿಯಾಗಿ ಹೊರಬರುತ್ತದೆ. ಹೀಗೆ ನೆಲದೊಳಗಣದಿಂದ ಬಂದ ಬಿಸಿನೀರು ನದಿಯಾಗಿ ಮುಂದೆ ಹರಿಯುತ್ತಿದೆ” ಎಂದು ರೂಜೊ ಹೇಳುತ್ತಿರುವುದು. ಆದರೂ ಇದರ ಸುತ್ತಲಿನ ಅರಕೆಗಳು ಮಾತ್ರ ನಿಂತಿಲ್ಲ. ಅದೇನೇ ಇದ್ದರೂ ಕೆಲ ವರುಶಗಳಿಂದ ಈ ಬಿಸಿನೀರ ನದಿ ಜಗತ್ತಿನ ಮೂಲೆಮೂಲೆಗಳಿಂದ ಬರುವ ನೋಡುಗರಿಗೆ ನೆಚ್ಚಿನ ತಾಣವಾಗಿ ಬದಲಾಗಿದೆ. ಅರಕೆಗಾರರಿಗೆ ಇದೊಂದು ಅರಕೆಯ ಸಂಗತಿಯಾಗಿದೆ.
( ಮಾಹಿತಿ ಮತ್ತು ತಿಟ್ಟ ಸೆಲೆ: sciencealert.com, treehugger.com )
ಇತ್ತೀಚಿನ ಅನಿಸಿಕೆಗಳು