ವಾರದ ಕೊನೆಯಲ್ಲಿ ಒಂದು ಸೈಕಲ್ ಸವಾರಿ
ನಾವು ಸುಮ್ಮನೆ ಕಣ್ಣು ಮುಚ್ಚಿ ನಮ್ಮ ಬಾಲ್ಯವನ್ನು ನೆನಪಿಸಿಕೊಂಡರೆ ಎಶ್ಟೊಂದು ಗಟನೆಗಳು ಹಾಗೆ ನೆನಪಾಗುತ್ತವೆ. ಅದರಲ್ಲೂ ನಾವು ತುಂಬಾ ಇಶ್ಟಪಟ್ಟು ಮಾಡಿದ ಕೆಲಸಗಳು, ಇಶ್ಟಪಡುತ್ತಿದ್ದ ವಸ್ತುಗಳಂತು ಪ್ರತೀ ಬಾರಿ ಬಾಲ್ಯವನ್ನು ನೆನೆಯವಾಗ ತಪ್ಪದೇ ಮೊದಲ ಸಾಲಿನಲ್ಲಿ ಬಂದು ಕೂರುತ್ತವೆ. ಹೀಗೆ ನಮ್ಮನ್ನು ಬಿಟ್ಟು ಬಿಡದೆ ಕಾಡುವ ನೆನಪುಗಳಲ್ಲಿ ಸೈಕಲ್ ಸವಾರಿಯೂ ಒಂದು. ಅಪ್ಪ, ದೊಡ್ಡಪ್ಪ, ಮಾವ ಅತವಾ ಯಾರದ್ದೋ ಹಿರಿಯರ ಸೈಕಲ್ ತುಳಿಯುತ್ತಿದ್ದದ್ದು, ಬಿದ್ದು ಮೈ ಕೈ ತರಚಿಕೊಳ್ಳುತ್ತಿದ್ದದ್ದು, ಯಗ್ಗಾ ಮುಗ್ಗಾ ಓಡಿಸಿ ಬೇರೆಯವರಿಗೆ ಗುದ್ದುತ್ತಿದ್ದದ್ದು ಎಲ್ಲವೂ ಒಂದು ರೀತಿ ಮೋಜಿನ ಹಾಗೆ ನಮಗೆ ಕಾಣಿಸುತ್ತವೆ. ಆಟದ ವಿಶಯದಲ್ಲಿ ಈಗಿನ ಕಾಲದ ಪೇಟೆಯ ಮಕ್ಕಳಿಗೆ ಮೊಬೈಲ್, ಕಂಪ್ಯೂಟರ್ ಗೇಮ್ ಬಿಟ್ಟು ಬೇರೆ ಜಗತ್ತೇ ಇಲ್ಲವೇನೋ ಎಂಬಂತಾಗಿದೆ. ಕೆಲವು ಮಕ್ಕಳು ಸೈಕಲ್ ತುಳಿಯುತ್ತವಾದರು, ಅದೂ ಮನೆಯ ಕಾಂಪೌಡಿನೊಳಗೊ ಅತವಾ ಮನೆಯೊಳಗೊ ಅಶ್ಟೇ. ಹಳ್ಳಿಯ ಮಕ್ಕಳಿಗೆ ಸೈಕಲ್ ತುಳಿಯಲು ವಿಶಾಲವಾದ ಜಾಗವಿದ್ದರೂ ಅವಕ್ಕೆ ಬಣ್ಣ ಬಣ್ಣದ ದಡ ಬಡ ಸದ್ದು ಮಾಡುವ ಮೋಟಾರು ಸೈಕಲ್ ಗಳ ಮೇಲೆಯೇ ಕಣ್ಣು. ಒಟ್ಟಿನಲ್ಲಿ ಇಂದಿನ ಮಕ್ಕಳು ಸೈಕಲ್ ಆಟದಿಂದ ದೂರವಾಗುತ್ತಿರುವುದಂತು ಸತ್ಯ.
ಮೋಟಾರು ಸೈಕಲ್ಲುಗಳ ಆರ‍್ಬಟ ಜಾಸ್ತಿಯಾಗುತ್ತಿದಂತೆ ಸೈಕಲ್ಲುಗಳು ಮೂಲೆ ಗುಂಪಾಗುತ್ತಾ ಬಂದವು. ನಮ್ಮ ಬಾಲ್ಯದಲ್ಲಿ ಕಾಣುತ್ತಿದ್ದ ಸೈಕಲ್ಲುಗಳ ಪ್ರಮಾಣವನ್ನು ಇಂದು ನಾವು ಕಾಣಲು ಸಾದ್ಯವಿಲ್ಲ. ಒಂದು ಕಾಲದಲ್ಲಿ ಸೈಕಲ್ ಮಾರುಕಟ್ಟೆಯನ್ನು ಆವರಿಸಿಕೊಂಡಿದ್ದ ಅಟ್ಲಾಸ್, ಹೀರೋ, ಹರ‍್ಕುಲಸ್ ಸೈಕಲ್ಲುಗಳು ಇಂದಿಗೂ ಇದ್ದರು ರಸ್ತೆಯ ಮೇಲೆ ಅವುಗಳ ಸಂಕ್ಯೆ ತುಂಬಾ ಕಡಿಮೆ. ಸೈಕಲ್ ಹೊಂದಿರುವವರು ತೀರಾ ಬಡವರೆಂದು ಪರಿಗಣಿಸುವ ಪರಿಯಂತು ಬೇಜಾರಿನ ಸಂಗತಿ. ಅದಕ್ಕಾಗಿಯೇ ಎಲ್ಲರೂ ಸೆಕೆಂಡ್ ಹ್ಯಾಂಡೆಡ್ ಆದರೂ ಪರವಾಗಿಲ್ಲ ಎಂದು ಮೋಟಾರು ಸೈಕಲ್ ಕೊಂಡು ಕೊಳ್ಳಲು ಮುಗಿಬೀಳುತ್ತಿದ್ದಾರೆ. ಹೀಗೆ ಸೈಕಲ್ ಇತಿಹಾಸವನ್ನು ಕೆದಕುತ್ತಾ ಹೋದರೆ ಹತ್ತಾರು ಲೇಕನಗಳಾದರೂ ವಿವರಿಸಲು ಸಾದ್ಯವಿಲ್ಲ. ಹಾಗಾಗಿ ಇಂದಿನ ದಿನಗಳಲ್ಲಿನ ಸೈಕಲ್ ಸವಾರಿ (ಸೈಕ್ಲಿಂಗ್) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಬೆಂಗಳೂರು ನಗರದಲ್ಲಿ ನಾವು ಅಲ್ಲೊಂದು ಇಲ್ಲೊಂದು ಅಟ್ಲಾಸ್ ಅತವಾ ಹರ‍್ಕುಲಸ್ ಸೈಕಲ್ ನೋಡಬಹುದು. ಯಾರೋ ವಯಸ್ಸಾದವರೋ, ತರಕಾರಿ ಮಾರುವವರೋ ಅತವಾ ಮಾರುಕಟ್ಟೆಯಲ್ಲಿ ಸಾಮಾನು ಸಾಗಿಸುವವರೋ ಉಪಯೋಗಿಸುತ್ತಿರುತ್ತಾರೆ. ಇದು ಒಂದು ಕಡೆಯಾದರೆ, ವಾರದ ಕೊನೆಯಲ್ಲಿ ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಗಟ್ಟ ರಸ್ತೆ ಹೀಗೆ ಹಲವು ರಸ್ತೆಗಳಲ್ಲಿ ಯುವಕ ಯುವತಿಯರು ಒಂದು ಸಣ್ಣ ಬ್ಯಾಗು, ಹೆಲ್ಮೆಟ್, ಕನ್ನಡಕ ದರಿಸಿಕೊಂಡು ಸೈಕ್ಲಿಂಗ್ ಹೊರಟಿರುವುದನ್ನು ಕಾಣಬಹುದು. ಶನಿವಾರ ಅತವಾ ಬಾನುವಾರ ಬೆಳಗಿನ ಜಾವ ಏಳೆಂಟು ಗಂಟೆ ಸಮಯದಲ್ಲಿ ನೀವೇನಾದರೂ ನಾನು ಮೇಲೆ ತಿಳಿಸಿದ ರಸ್ತೆಗಳಲ್ಲಿ ಪ್ರಯಾಣಮಾಡುತ್ತಿದ್ದರೆ ಗುಂಪು ಗುಂಪಾಗಿ ಸೈಕ್ಲಿಂಗ್ ಹೊರಟವರು ನಿಮಗೆ ಕಾಣುತ್ತಾರೆ.
ಕೆಲವರು ನಗರದ ಜಂಜಾಟವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಸೈಕ್ಲಿಂಗ್ ಮಾಡಿದರೆ, ಕೆಲವರು ತಾವು ಸಣ್ಣಗಾಗಬೇಕೆಂದು, ಇನ್ನೂ ಕೆಲವರು ಯಾವುದೇ ಉದ್ದೇಶವಿಲ್ಲದೆಯೂ ಸಹ ಸೈಕ್ಲಿಂಗ್ ಮಾಡುವುದುಂಟು. ನಗರದ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರೇ ಹೆಚ್ಚಾಗಿ ಸೈಕ್ಲಿಂಗ್ ನಲ್ಲಿ ಪಾಲ್ಗೊಳ್ಳುವುದು ವಿಶೇಶ. ಇಡೀ ವಾರವೆಲ್ಲಾ ಸತತವಾಗಿ ತಲೆಗೆ ಕೆಲಸಕೊಡುವ ಐಟಿ ಮಂದಿ ವಾರಾಂತ್ಯದಲ್ಲಿ ತಲೆಗೆ ವಿಶ್ರಾಂತಿ ಕೊಟ್ಟು ಕಾಲುಗಳಿಗೆ ಕೆಲಸ ಕೊಡುತ್ತಾರೆ. ಹಾಗಾಗಿ ಈ ಜನರ ‘ಮಾಡಬೇಕಾದ ಕೆಲಸಗಳ ಪಟ್ಟಿಯಲ್ಲಿ (To do list)’ ಸೈಕ್ಲಿಂಗ್ ಸಹ ಒಂದು. ಹಾಗಾದರೆ ಸೈಕ್ಲಿಂಗ್ ಬರೇ ಐಟಿ ಕಂಪೆನಿಯ ಜನರಿಗಶ್ಟೇ ಸೀಮಿತವಾಗಿದೆಯೇ? ಎಂದು ನೀವು ಕೇಳುವುದಾದರೇ ನನ್ನ ಉತ್ತರ ‘ಹೌದು’ ಎನ್ನುವುದೇ ಆಗಿದೆ. ಇದಕ್ಕೆ ಮುಕ್ಯ ಕಾರಣ ಹೆಚ್ಚಿನ ಜನಕ್ಕೆ ಸೈಕ್ಲಿಂಗ್ ಬಗ್ಗೆ ಅರಿವಿಲ್ಲದಿರುವುದು. ಹೆಚ್ಚು ತಿಳಿದುಕೊಂಡವರೇ ಸೈಕ್ಲಿಂಗ್ ಎಂದರೆ ಮೂಗು ಮುರಿಯುವುದರಿಂದ ಇಂದು ಕನಿಶ್ಟ ಮಟ್ಟದ ಪ್ರೋತ್ಸಾಹವು ಸಿಗುತ್ತಿಲ್ಲ.
ನಗರದಿಂದ ಸೈಕ್ಲಿಂಗ್ ಹೊರಡುವವರಿಗೆ ಬೆಂಗಳೂರು ಸುತ್ತಲಿನ ಹಲವು ಪ್ರದೇಶಗಳು ಅಚ್ಚು ಮೆಚ್ಚಾಗಿವೆ. ಬನ್ನೇರುಗಟ್ಟ, ತುರಹಳ್ಳಿ ಕಿರುಕಾಡು, ದೊಡ್ಡ ಆಲದಮರ, ಹೆಸರಗಟ್ಟ, ಮಂಚನಬೆಲೆ ಜಲಾಶಯ, ಸಾವನದುರ‍್ಗ ಅಶ್ಟೇ ಅಲ್ಲದೆ ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟವನ್ನು ಸಹ ಇಂದಿನ ಯುವ ಪೀಳಿಗೆ ಸೈಕಲ್ ನಲ್ಲಿ ಹತ್ತಿ ಸಾಹಸ ಮಾಡುತ್ತಿವೆ. ಹಾಗೆ ನೋಡಿದರೆ ನೂರಾರು ಕಿ.ಮೀ ಗಟ್ಟಲೆ ಸೈಕಲ್ ಸವಾರಿ ಹೋಗುವುದು ಇವತ್ತು ನೆನ್ನೆಯ ಅಬ್ಯಾಸವೇನಲ್ಲ. ನಮ್ಮ ಹಿರಿಯರು ಅವರ ಕಾಲದಲ್ಲಿ ಮೈಸೂರು, ತುಮಕೂರು, ಕನಕಪುರ, ದೊಡ್ಡಬಳ್ಳಾಪುರ ಹೀಗೆ ಹಲವಾರು ಸ್ತಳಗಳಿಗೆ ಸೈಕಲ್‌ನಲ್ಲಿ ತಿರುಗಾಡಿರುವುದನ್ನು ಕೇಳಬಹುದು. ಆದರೆ ಬರೇ ಮೋಟಾರು ಸೈಕಲ್ಲುಗಳೇ ಪ್ರಸಿದ್ದಿ ಹೊಂದುತ್ತಿರುವ ಇತ್ತೀಚಿನ ದಿನಗಳಲ್ಲಿ ಹೀಗೆ ನೂರಾರು ಕಿ.ಮೀ ಸೈಕ್ಲಿಂಗ್ ಹೋಗುವುದು ಸುಲಬದ ಮಾತಲ್ಲ. ಚಾರಣದ ಹಾಗೆ ಸೈಕ್ಲಿಂಗ್ ಕೂಡ ಹೆಚ್ಚು ದೈಹಿಕ ಶಕ್ತಿ ಬೇಡುತ್ತದೆ ಹಾಗಾಗಿ ಸೈಕ್ಲಿಂಗ್ ಸಹ ಸಾಹಸದ ಚಟುವಟಿಕೆಯೆಂದೇ ಪರಿಗಣಿಸಬೇಕು.
ಬೆಂಗಳೂರು ಹಾಗೂ ನಗರದ ಸುತ್ತಮುತ್ತ ಸೈಕ್ಲಿಂಗ್ ಗೆ ಸೂಕ್ತವಾದ ಕೆಲವು ಸ್ತಳಗಳು:
1. ಮೈಸೂರು ರಸ್ತೆ, ದೊಡ್ಡ ಆಲದಮರ, ಮಂಚನಬೆಲೆ ಜಲಾಶಯ, ಸಾವನದುರ‍್ಗ
2. ಬನ್ನೇರುಗಟ್ಟ, ರಾಗಿಹಳ್ಳಿ, ತಟ್ಟೆಕೆರೆ
3. ಹೆಸರಗಟ್ಟ, ನಂದಿಬೆಟ್ಟ, ತಿಪ್ಪಗೊಂಡನ ಹಳ್ಳಿ ಜಲಾಶಯ
4. ರಾಮದೇವರ ಬೆಟ್ಟ, ಜನಪದಲೋಕ, ರೇವಣ ಸಿದ್ದೇಶ್ವರ ಬೆಟ್ಟ
5. ಕನಕಪುರ ರಸ್ತೆ, ಪಿರಮಿಡ್ ವ್ಯಾಲಿ
6. ಕಬ್ಬನ್ ಪಾರ‍್ಕ್, ಲಾಲ್ ಬಾಗ್, ಹಲಸೂರು ಕೆರೆ, ತುರಹಳ್ಳಿ ಕಿರುಕಾಡು, ಓಂಕಾರೇಶ್ವರ ಗುಡ್ಡ, ಇತ್ಯಾದಿ
ಪ್ರೋತ್ಸಾಹದ ಅಗತ್ಯವಿದೆ:
ನಾನು ಮೊದಲೇ ಹೇಳಿದಂತೆ ಸೈಕ್ಲಿಂಗನ್ನು ಪ್ರೋತ್ಸಾಹಿಸುವ ಜನರು ನಮ್ಮಲ್ಲಿ ಬಹಳ ಕಡಿಮೆ. ‘ಅಶ್ಟು ದೂರ ಸೈಕಲ್ ನಲ್ಲಿ ಹೋಗ್ತಿಯಲ್ಲ ನಿಂಗೇನು ಹುಚ್ಚ?’ ಎಂದು ಕೆಲವು ಜನರು ಕೇಳಿದರೆ, ಇನ್ನೂ ಕೆಲವರು ‘ಸುಮ್ನೆ ಸೈಕ್ಲಿಂಗ್ ಅಂತ ಸಮಯ ಹಾಳು ಮಾಡ್ಕೋಬೇಡ, ಅದೇ ಸಮಯದಲ್ಲಿ ಏನಾದ್ರು ಓದು ಉದ್ದಾರ ಆಗ್ತೀಯ’ ಎಂದು ಬಿಟ್ಟಿ ಉಪದೇಶಗಳನ್ನು ಕೊಡುತ್ತಾ ಸೈಕ್ಲಿಂಗ್ ಒಂದು ಕೆಲಸಕ್ಕೆ ಬಾರದ ಚಟುವಟಿಕೆ ಎಂಬಂತೆ ಬಿಂಬಿಸುತ್ತಾರೆ.
ಹೈದರಾಬಾದಿನಲ್ಲಿ ಅಲ್ಲಿಯ ಸ್ತಳೀಯ ಸಂಸ್ತೆಯು (ಹೈದರಾಬಾದ್ ಮುನಿಸಿಪಾಲಿಟಿ) ಸೈಕ್ಲಿಂಗ್ ಪ್ರೋತ್ಸಾಹಿಸುವ ಸಲುವಾಗಿ “ಹೈದರಾಬಾದ್ ಬೈಸಿಕಲ್ ಕ್ಲಬ್” ಎಂಬ ಸಂಸ್ತೆಯನ್ನು ತೆರೆದು ಸೈಕಲ್ ಗಳನ್ನು ಬಾಡಿಗೆಗೆ ಕೊಡುತ್ತಿದೆ. ಇಲ್ಲಿ ಬೆಳಿಗ್ಗೆ 5 ಗಂಟಿಯಿಂದಲೇ ಸೈಕಲ್ ಬಾಡಿಗೆ ಕೊಡಲು ಪ್ರಾರಂಬಿಸುತ್ತಾರೆ. ಒಮ್ಮೆ ಈ ಸಂಸ್ತೆಯ ಸದಸ್ಯತ್ವ ಪಡೆದುಕೊಂಡ ವ್ಯಕ್ತಿ 50 ರೂಪಾಯಿಗಳನ್ನು ಪಾವತಿಸಿ ಸೈಕಲ್ ಬಾಡಿಗೆಗೆ ಪಡೆಯಬಹುದು. ಹೀಗೆ ಬಾಡಿಗೆಗೆ ಪಡೆದುಕೊಂದ ಸೈಕಲ್ ಅನ್ನು ಬೆಳಿಗ್ಗೆ 10 ಗಂಟೆಯೊಳಗಾಗಿ ಹಿಂತಿರುಗಿಸಬೇಕು ಇಲ್ಲದಿದ್ದರೆ 50 ರೂಪಾಯಿ ದಂಡ ಕಟ್ಟಿ ಸಂಜೆವರೆಗೂ ಸೈಕಲ್ ಬಳಸಬಹುದು. ಸಾವಿರಾರು ರೂಪಾಯಿ ಬಂಡವಾಳ ಹಾಕಿ ಸ್ವಂತ ಸೈಕಲ್ ಕೊಂಡುಕೊಳ್ಳಲು ಆಗದಿರುವವರಿಗೆ ಇಂತಹ ಯೋಜನೆ ಇಂದ ಪ್ರಯೋಜನವಾಗುತ್ತದೆಯಲ್ಲವೋ? ಇಂತಹ ಒಂದು ಯೋಜನೆ ನಮ್ಮ ಬೆಂಗಳೂರಿನಲ್ಲಿ ಇಲ್ಲದಿರುವುದು ತುಂಬಾ ಬೇಜಾರಿನ ವಿಶಯ. ಇಲ್ಲಿ ಕೆಲವು ಕಾಸಗಿ ಸಂಸ್ತೆಯವರು ಸೈಕಲ್ ಗಳನ್ನು ಬಾಡಿಗೆಗೆ ಕೊಡುತ್ತರಾದರೂ ಅವುಗಳಲ್ಲಿ ಬಹುತೇಕ ಸಂಸ್ತೆಗಳು ಬರೇ ದುಡ್ಡು ಮಾಡುವುದರಲ್ಲೇ ಮುಳುಗಿಹೋಗಿವೆ.
ಮೈಸೂರಿನ ಇನ್ಪೋಸಿಸ್ ಕ್ಯಾಂಪಸ್ಸಿನಲ್ಲಿ ಕ್ಯಾಂಪಸ್ಸಿನ ಒಳಗೆ ಓಡಾಡಲು ಸೈಕಲ್ ಗಳನ್ನು ನೀಡುವುದರ ಮೂಲಕ ಸೈಕ್ಲಿಂಗನ್ನು ಪ್ರೋತ್ಸಾಹಿಸುತ್ತಿದೆ. ಬೆಂಗಳೂರಿನಲ್ಲಿರುವ ಅನೇಕ ಐಟಿ ಕಂಪೆನಿಗಳು ಸೈಕ್ಲಿಂಗ್ ಪ್ರೋತ್ಸಾಹಿಸುತ್ತವಾದರೂ ಅನುಕೂಲಕರವಾದ ಯೋಜನೆಗಳನ್ನು ರೂಪಿಸಿಲ್ಲ ಆದರೂ ಕಂಪೆನಿಯ ಅಕ್ಕ ಪಕ್ಕದಲ್ಲಿ ವಾಸಿಸುವ ಕೆಲವು ಉದ್ಯೋಗಿಗಳು ದಿನವೂ ಸೈಕಲ್ ನಲ್ಲೇ ಆಪೀಸಿಗೆ ಹೋಗುವುದನ್ನು ಕಾಣಬಹುದು. ಮುಂದಾದರೂ ಸರ‍್ಕಾರ ಅತವಾ ಸ್ತಳೀಯ ಸಂಸ್ತೆಗಳು ಸೈಕ್ಲಿಂಗ್ ಗೆ ಸಹಕರಿಸುತ್ತವೆಯೋ ಇಲ್ಲವೊ ಕಾದು ನೋಡೋಣ.
(ನಾನು ಸೈಕ್ಲಿಂಗ್ ಗೆ ಹೋಗಿದ್ದ ಕೆಲವು ಸ್ತಳಗಳು, ಸೈಕ್ಲಿಂಗ್ ನ ಪ್ರಾಮುಕ್ಯತೆ, ವಿವಿದ ಸೈಕಲ್ ಮಾಡೆಲ್ ಗಳ ಬಗ್ಗೆ ನನ್ನ ಮುಂದಿನ ಬರಹಗಳಲ್ಲಿ ವಿವರವಾಗಿ ತಿಳಿಸುತ್ತೇನೆ.)
(ಚಿತ್ರಸೆಲೆ: thealternative.in)
ಇತ್ತೀಚಿನ ಅನಿಸಿಕೆಗಳು