ದಕ್ಶಿಣ ಕಾಶಿ ಶಿವಗಂಗೆ (ಕಂತು – 3)

– ಶ್ಯಾಮಲಶ್ರೀ.ಕೆ.ಎಸ್.

ಕಂತು – 1, ಕಂತು-2 , ಕಂತು-4

ಕಡಿದಾದ ಶಿವಗಂಗೆ ಬೆಟ್ಟವನ್ನು ಏರುತ್ತಾ ಹೋದಂತೆ ಇನ್ನೂ ಹಲವು ವಿಸ್ಮಯಕಾರಿ ವಿಶಯಗಳು ನಮ್ಮ ಮನ ಮುಟ್ಟುತ್ತವೆ. ಶಿವಗಂಗೆಯಲ್ಲಿ ಪಾಪ ಪುಣ್ಯಗಳನ್ನು ಗುರುತಿಸುವ ಒಂದು ನೀರಿನ ಬುಗ್ಗೆ ಇದ್ದು, ಅದು ಒಳಕಲ್ಲಿನ ಆಕ್ರುತಿಯಲ್ಲಿದೆ. ಆದ್ದರಿಂದ ಇದು ಒಳಕಲ್ಲು ತೀರ‍್ತವೆಂದೇ ಪ್ರಸಿದ್ದಿ ಪಡೆದಿದೆ. ಶಿವಗಂಗೆ ಬೆಟ್ಟಕ್ಕೆ ಹತ್ತಲಾಗದಿದ್ದವರು ಸಹ ಬೆಟ್ಟದ ಮದ್ಯ ಬಾಗದಲ್ಲಿರುವ ಈ ಒಳಕಲ್ಲು ತೀರ‍್ತಕ್ಕೆ ಬೇಟಿ ನೀಡಿ ಒಳಕಲ್ಲಿನ ಒಳಗೆ ಕೈಹಾಕಿ ಪಾಪ ಪುಣ್ಯಗಳ ಅದ್ರುಶ್ಟ ಪರೀಕ್ಶಿಸುವರು ಅತವಾ ಬೇಡಿದ ಕಾರ‍್ಯ ಈಡೇರುವುದೋ ಇಲ್ಲವೋ ಎಂದು ತಿಳಿದುಕೊಳ್ಳುವರು. ನೀರು ಸಿಕ್ಕಿದರೆ ಬೇಡಿದ ಕಾರ‍್ಯ ಈಡೇರುವುದೆಂದು, ಸಿಗದಿದ್ದರೆ ಬೇಡಿದ ಕಾರ‍್ಯ ಈಡೇರುವುದಿಲ್ಲವೆಂದು ತಿಳಿಯುವ ಪ್ರತೀತಿ ಇಂದಿಗೂ ಸಾಗಿ ಬಂದಿದೆ.

ಈ ಒಳಕಲ್ಲು ತೀರ‍್ತ ಜಗದ್ಗುರು ರೇವಣ್ಣಸಿದ್ದೇಶ್ವರರೇ ಕರುಣಿಸಿದರೆಂಬ ಪ್ರತೀತಿಯಿದೆ. ಜಗದ್ಗುರು ರೇವಣ್ಣ ಸಿದ್ದೇಶ್ವರರು ತಪಸ್ಸುಗೈದಿದ್ದು ಇದೇ ಶಿವಗಂಗೆಯಲ್ಲಿ, ಹಾಗೆಯೇ ಅಗಸ್ತ್ಯರಿಗೆ ದೀಕ್ಶೆ ನೀಡಲು ಜಲ ಪ್ರೋಕ್ಶಣೆಯ ಅಗತ್ಯವಿದ್ದಾಗ ತಮ್ಮ ಕೈಯಲ್ಲಿದ್ದ ದಂಡದಿಂದ ಕಲ್ಲನ್ನು ಗುದ್ದಿ ಗಂಗೆಯನ್ನು ಹೊರತಂದಿದ್ದಾರೆ ಎನ್ನುವ ಪೌರಾಣಿಕ ಕತೆಯಿದೆ. ಹಾಗೆಯೇ ಜಗದ್ಗುರು ರುದ್ರಮುನೀಶ್ವರರ ಜನ್ಮಾವತಾರವಾಗಿದ್ದು ಸಹ ಇದೇ ಶಿವಗಂಗೆಯಲ್ಲಿ ಎನ್ನುವ ಪ್ರತೀತಿಯಿದೆ. ಈ ಎಲ್ಲ ಅಂಶಗಳಿಗೆ ಪೂರಕವೆಂಬಂತೆ ಜಗದ್ಗುರು ಶ್ರೀ ರೇವಣ್ಣಸಿದ್ದೇಶ್ವರ ಪರಂಪರೆಯ ಹಲವು ಕುರುಹುಗಳು ಇಲ್ಲಿವೆ. ಒಳಕಲ್ಲು ತೀರ‍್ತಕ್ಕೆ ಹೋಗಬೇಕೆಂದರೆ ಅರ‍್ದಬೆಟ್ಟವನ್ನು ಹತ್ತಿದರೆ ಗುಹೆ ಸಿಗುತ್ತದೆ. ಒಳಗೆ ಪ್ರವೇಶಿಸಿ ಒಳಕಲ್ಲು ತೀರ‍್ತಕ್ಕೆ ತೆವಳುತ್ತ ಬಗ್ಗಿ ಸಾಗಬೇಕು. ವರ‍್ಶದ 365ದಿನಗಳು ಈ ಒಳಕಲ್ಲಿನಲ್ಲಿ ನೀರು ಬತ್ತುವುದಿಲ್ಲ. ಇದರ ಗುಹೆಯಲ್ಲಿ ಮಲಯ ವೀರಬದ್ರೇಶ್ವರ ಸ್ವಾಮಿಯ ವಿಗ್ರಹವೂ ಇದ್ದು ಪೂಜಾದಿಗಳು ನಡೆಯುತ್ತವೆ.

ಅಗಸ್ತ್ಯ ರುಶಿಗಳು ಇಲ್ಲಿ ತಪಸ್ಸು ಮಾಡಿದ ಸ್ತಳ ಎನ್ನಲಾದ ಅಗಸ್ತ್ಯ ತೀರ‍್ತ ಮತ್ತು ಕಮಲತೀರ‍್ತ, ಎತ್ತರದ ಗಂಟೆ ಕಂಬ, ಹರಕೆ ಗಣಪ, ಪಾತಾಳಗಂಗೆ ಹೀಗೆ ಹತ್ತಾರು ಸಂಗತಿಗಳು ನೋಡಲು ತಿಳಿಯಲು ಈ ಗಿರಿದಾಮದ ಮಡಿಲಿನಲ್ಲಿವೆ. ಒಳಕಲ್ಲು ತೀರ‍್ತ ಬೆಟ್ಟದ ಅರ‍್ದಬಾಗದಲ್ಲಿ ಸಿಕ್ಕರೆ, ಇನ್ನೂ ಮುಂದುವರಿಯುತ್ತಾ ಏರಿದರೆ ಬೆಟ್ಟದ ನೆತ್ತಿಯ ಬಾಗದಲ್ಲಿ ಕಡಿದಾದ ಮೆಟ್ಟಿಲುಗಳನ್ನು ಒಳಗೊಂಡಿರುವ ಬ್ರುಹತ್ ಗಾತ್ರದ ನಂದಿವಿಗ್ರಹ ಪ್ರತ್ಯಕ್ಶವಾಗುತ್ತದೆ. ಕೆಲವರು ಮಾತ್ರ, ಸಾಹಸಪ್ರಿಯರು ಈ ನಂದಿಯನ್ನು ನೋಡಬಯಸುತ್ತಾರೆ. ಈ ಜಾಗ ತುಂಬಾ ಕಡಿದಾಗಿದ್ದು ಎತ್ತರದ ತುದಿಯಲ್ಲಿದೆ. ಈ ನಂದಿಯನ್ನು ಒಂದು ಸುತ್ತು ಸುತ್ತಿ ಬರಬೇಕೆನಿಸಿದರೆ ಜಾಗರೂಕತೆಯಿಂದ ಹತ್ತಿ ಇಳಿದುಬರಬೇಕಾಗುತ್ತದೆ. ಇನ್ನು ಕೆಲವರು ನಂದಿಯ ಎತ್ತರದ ಈ ಸ್ತಳಕ್ಕೆ ಹೋಗಲು ಬಯದಿಂದ ಹಿಂಜರಿಯುತ್ತಾರೆ.

(ಮುಂದುವರೆಯುವುದು)

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks