ಹರಿಯುವ ಕಾಮನಬಿಲ್ಲು

ಕೆ.ವಿ.ಶಶಿದರ.

RBR

‘ರಿವರ್ ಆಪ್ ಪೈವ್ ಕಲರ‍್ಸ್’ (ಪಂಚರಂಗೀ ನದಿ) ಅತವಾ ‘ಲಿಕ್ವಿಡ್ ರೈನ್‍ಬೋ’ (ದ್ರವರೂಪದ ಕಾಮನಬಿಲ್ಲು) ಎಂದು ವಿವಿದ ನಾಮದೇಯದಲ್ಲಿ ಕರೆಸಿಕೊಳ್ಳುವ ಕಾನೋ ಕ್ರಿಸ್ಟೇಲ್ಸ್ (Cano Cristles) ನದಿಯು ವಿಶ್ವದಾದ್ಯಂತ ವಿಕ್ಯಾತ. ಇದರಲ್ಲಿನ ವೈವಿದ್ಯಮಯ ಬಣ್ಣದಿಂದಾಗಿ ಇದು ಅತ್ಯಂತ ಆಕರ‍್ಶಕವಾದ ಅದ್ವಿತೀಯವಾದ ಸುಂದರವಾದ ನದಿ ಎಂತಲೂ ಹಣೆ ಪಟ್ಟಿಯನ್ನು ಅಂಟಿಸಿಕೊಂಡಿದೆ. ತಿಳಿ ಪಾರದರ‍್ಶಕ ನೀರು ನಾನಾ ಬಣ್ಣಗಳ ಮೇಲೆ ಅಲೆಅಲೆಯಾಗಿ ಹರಿಯುವಾಗ ತರಂಗ ತರಂಗಳಂತೆ ಕುಣಿದಾಡುವ ಬಣ್ಣಗಳನ್ನು ನೋಡುವುದೇ ಒಂದು ಸಂಬ್ರಮ. ಕಣ್ಣಿಗೆ ಹಬ್ಬ. ಕಾಮನಬಿಲ್ಲನ್ನೂ ಸಹ ನಾಚಿಸುವಂತಹ ನಿಚ್ಚಳವಾದ ನೋಟ ಅದು. ಅದೇ ಕ್ಯಾನೋ ಕ್ರಿಸ್ಟಲ್‌ನ ವಿಶೇಶ.

ಕಾನೋ ಕ್ರಿಸ್ಟೇಲ್ಸ್ ನದಿಯು ದಕ್ಶಿಣ ಅಮೇರಿಕಾ ಕಂಡದಲ್ಲಿ ಕೊಲಂಬಿಯಾ ದೇಶದ ಮೆಟಾ(Meta) ಪ್ರಾಂತ್ಯದಲ್ಲಿನ ಪರ‍್ವತ ಶ್ರೇಣಿ ಸೆರ್ರಾನಿಯಾ ಡೇ ಲಾ ಮಕರೆನಾದಲ್ಲಿ (Serrania De La Macarena) ತನ್ನ ಹುಟ್ಟನ್ನು ಕಂಡುಕೊಂಡಿದೆ. ಈ ನದಿಯು ಜುಲೈ ಕೊನೆಯಿಂದ ನವೆಂಬರ್ ಕೊನೆಯವರೆವಿಗೂ ರಂಗುರಂಗಿನ ಬಣ್ಣದಲ್ಲಿ ಬಿನ್ನವಾಗಿ ಕಂಗೊಳಿಸುತ್ತದೆ. ಉಳಿದಂತೆ, ಅಂದರೆ ಡಿಸೆಂಬರ್‍ನಿಂದ ಜುಲೈ ಅಂತ್ಯದವರೆವಿಗೂ ಸಾಮಾನ್ಯ ತಿಳಿನೀರಿನ ನದಿಯಂತಿರುತ್ತದೆ. ಹಳದಿ, ಹಸಿರು, ನೀಲಿ, ಕಪ್ಪು ಹಾಗೂ ಕೆಂಪು ಇದರಲ್ಲಿ ಕಂಡುಬರುವ ಪ್ರಮುಕ ಬಣ್ಣಗಳು. ಕೆಂಪು ಬಣ್ಣ ಬಹಳ ಪ್ರಕರವಾಗಿದ್ದು ತುಂಬಾ ಆಕರ‍್ಶಣೀಯವಾಗಿರುತ್ತದೆ. ಇದಕ್ಕೆ ನದಿಯ ತಳದಲ್ಲಿ ಬೆಳೆಯುವ ‘ಮಕರೆನಿಯಾ ಕ್ಲವಿಗೆರ’ (Macarenia clavigera) ಎಂಬ ಸಸ್ಯ ಕಾರಣ.

ಮೊದ ಮೊದಲು ಈ ನದಿಯಲ್ಲಿನ ಬಣ್ಣಗಳನ್ನು ಕಂಡಾಗ ಪಾಚಿ ಮತ್ತು ಆಲ್ಗೆ ಇದಕ್ಕೆ ಮೂಲ ಕಾರಣ ಎಂದು ಬಾವಿಸಲಾಗಿತ್ತು. ನದಿಯ ತಳದಲ್ಲಿ ಬೆಳೆಯುವ ವಿವಿದ ಜಾತಿಯ ಸಸ್ಯಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಪರೀಕ್ಶೆಗೊಳಪಡಿಸಿದ ನಂತರ ತಿಳಿದು ಬಂದದ್ದು ಎಲ್ಲಾ ಬಣ್ಣಗಳಿಗೂ ಪಾಚಿ ಮತ್ತು ಆಲ್ಗೆ ಮಾತ್ರ ಕಾರಣವಲ್ಲ ಎಂಬ ಸತ್ಯ. ಈ ನದಿಯ ಕೆಂಪು ಬಣ್ಣಕ್ಕೆ ಕಾರಣವಾದ ಮಕರೆನಿಯಾ ಕ್ಲವಿಗೆರ ವರ‍್ಶದ ಎಲ್ಲಾ ಸಮಯದಲ್ಲೂ ಬೆಳೆಯುವುದಿಲ್ಲ. ಇದು ಬೆಳೆಯಲು ಹಿತಕರ ವಾತಾವರಣ ಅಗತ್ಯ. ಪ್ರಮುಕವಾಗಿ ನೀರಿನ ಹರಿವು ಹಾಗೂ ನಿರ‍್ದಿಶ್ಟ ಪ್ರಮಾಣದ ಸೂರ‍್ಯನ ಬೆಳಕು ಬೇಕೇ ಬೇಕು. ಇಂತಹ ವಾತಾವರಣ ಆಗಸ್ಟನಿಂದ ಡಿಸೆಂಬರ್‍ವರೆಗೆ ಮಾತ್ರ ಲಬ್ಯವಿರುವುದರಿಂದ ಆ ಸಮಯದಲ್ಲಿ ಈ ಸಸ್ಯವು ಬೆಳೆದು ‘ಬ್ರಿಲಿಯಂಟ್ ರೆಡ್’ ಬಣ್ಣದಲ್ಲಿ ಕಂಗೊಳಿಸುತ್ತದೆ. ಈ ಗಾಡ ಕೆಂಪು ಬಣ್ಣದ ಸಸ್ಯದ ಬೇರುಗಳು ನದಿಯ ತಳದಲ್ಲಿದ್ದರೂ ಮೇಲಿನ ಬಾಗ ಕಲ್ಲು ಬಂಡೆಗಳಿಗೆ ಕಚ್ಚಿಕೊಂಡಿರುತ್ತದೆ. ಈ ಸಸ್ಯ ಬಂಡೆಗಳ ಮೇಲೆ ಅತ್ಯಂತ ತೆಳುವಾಗಿ ಹರಡಿಕೊಂಡಿರುವುದರಿಂದ ಅವುಗಳ ಮೇಲೆ ಕಸೂತಿ ಕೆಲಸ ಮಾಡಿದಂತೆ ಕಾಣಲು ಕಾರಣವಾಗಿದೆ.

RBR15

ಮಕರೆನಿಯಾ ಕ್ಲವಿಗೆರದಿಂದಾದ ‘ಬ್ರಿಲಿಯಂಟ್ ರೆಡ್’ ಬಣ್ಣ, ಪಾಚಿಯಿಂದಾದ ಹಸಿರು ಬಣ್ಣ, ತಿಳಿ ನೀರಿನಲ್ಲಿ ಪ್ರತಿಬಿಂಬಿಸುವ ಆಕಾಶದ ನೀಲಿ ಬಣ್ಣ, ನದಿಯ ತಳದಲ್ಲಿನ ಮರಳಿನಿಂದ ಉಂಟಾದ ಹಳದಿ ಬಣ್ಣ, ಕಪ್ಪು ಕಲ್ಲುಗಳಿಂದಾದ ಕಪ್ಪು ಬಣ್ಣ ಎಲ್ಲಾ ಒಟ್ಟಿಗೆ ಮೇಳೈಸಿದ ಕಾರಣ ಈ ನದಿಯು ವಿವಿದ ಬಣ್ಣಗಳಲ್ಲಿ ಕಂಗೊಳಿಸುತ್ತದೆ. ಈ ನದಿಗೆ ಕೆಂಪು ಬಣ್ಣವನ್ನು ನೀಡುವ ಸಸ್ಯ ಮಕರೆನಿಯಾ ಕ್ಲವಿಗೆರ ವಾತಾವರಣದಲ್ಲಿನ ಏರುಪೇರಿನಿಂದಾಗಿ ರಕ್ತ ಕೆಂಪಿಂದ ಕಂದು ಬಣ್ಣಕ್ಕೆ ಮಾರ‍್ಪಡುತ್ತದೆ. ಇದರೊಂದಿಗೆ ಹಲವು ಬಾರಿ ಇದು ಪ್ರಕಾಶಯುಕ್ತ ಗುಲಾಬಿ ಬಣ್ಣದಿಂದ ತಿಳಿ ಗುಲಾಬಿ ಬಣ್ಣದವರೆವಿಗೂ ವಿವಿದ ಚಾಯೆಯಲ್ಲಿ ಕಂಗೊಳಿಸುತ್ತದೆ. ಈ ಸಸ್ಯವನ್ನು ಹೊಳೆಯುವ ಹಸಿರು, ನೀಲಿ, ಹಳದಿ ಹಾಗೂ ಕಿತ್ತಲೆ ಬಣ್ಣಗಳಲ್ಲೂ ಸಹ ಕಾಣಬಹುದು. ಇಂತಹ ವೈವಿದ್ಯಮಯ ಬಣ್ಣಗಳ ಮೇಲೆ ಶುದ್ದ ಪಾರದರ‍್ಶಕ ತಿಳಿ ನೀರು ಹರಿಯುತ್ತಿದ್ದಲ್ಲಿ ನೀರಿಗೆ ರಂಗು ಹಾಕಿದಂತೆ ಕಾಣುವುದಲ್ಲದೆ, ನದಿಗೆ ವಿವಿದ ಬಣ್ಣಗಳ ರಂಗನ್ನು ನೀಡಿ ತರಂಗ ತರಂಗಗಳಲ್ಲಿ ಹರಿಯುವ ಕಾಮನಬಿಲ್ಲನ್ನಾಗಿಸುವುದು ಈ ನದಿಯ ಮುಕ್ಯ ವಿಶೇಶತೆ.

ಕಾನೋ ಕ್ರಿಸ್ಟೇಲ್ಸ್ ನದಿಯ ವಿಶೇಶತೆಗಳೇನು?
1. ಕಾನೋ ಕ್ರಿಸ್ಟೇಲ್ಸ್ ನದಿಯಲ್ಲಿ ಕಂಡುಬರುವ ಬಣ್ಣಗಳು ಕಪ್ಪು ಕಲ್ಲುಗಳಿಂದ, ಹಳದಿ ಮರಳಿನಿಂದ, ಕೆಂಪು ಮಕರೆನಿಯಾ ಕ್ಲವಿಗೆರ ಸಸ್ಯದಿಂದ, ಹಸಿರು ಪಾಚಿ ಮತ್ತು ಆಲ್ಗೆಯಿಂದ ಬಂದಿದ್ದು, ನದಿಯಲ್ಲಿ ಹರಿಯುವ ನೀರು ಸ್ಪಟಿಕದಶ್ಟು ತಳಿಯಾದ ಕಾರಣ ಬಣ್ಣಗಳು ಬೆರಕೆಯಾಗದೆ ತನ್ನ ತನವನ್ನು ಉಳಿಸಿಕೊಂಡು ತೊಳೆದಂತೆ ಸ್ವಚ್ಚವಾಗಿ ಕಾಣುತ್ತದೆ.
2. ಕಾನೋ ಕ್ರಿಸ್ಟೇಲ್ಸ್ ನದಿಯು ಸೌಮ್ಯವಾಗಿ ಹರಿಯುವ ನದಿಯಲ್ಲ. ವೇಗವಾಗಿ ಹರಿಯುವ ಈ ನದಿಯ ಉದ್ದಕ್ಕೂ ಸಣ್ಣ ಸಣ್ಣ ಜಲಪಾತಗಳೂ, ಜಲಪಾತದ ನೀರು ಬೀಳುವಲ್ಲಿ ಕೊರಕಲುಗಳೂ, ನೀರಿನ ರಬಸದ ಹೊಡತದಿಂದಾದ ನೂರಾರು ಹೊಂಡಗಳು ನದಿಯ ಹರಿವಿನ ಉದ್ದಕ್ಕೂ ಕಾಣಸಿಗುತ್ತವೆ. ರಬಸದಿಂದ ನೀರು ಹರಿದು ಬಂದು ಹೊಂಡದಲ್ಲಿ ಬಿದ್ದಾಗ ಉಂಟಾಗುವ ಸುರುಳಿಯಿಂದ ಹೊಂಡದ ಸುತ್ತಲೂ ಕೊರಕಲಾಗಿರುವುದು ಕಂಡು ಬರುತ್ತದೆ.
3. ಸರಿ ಸುಮಾರು 100 ಕಿಮೀ ಉದ್ದದ 65 ಅಡಿ ಅಗಲದ ಈ ನದಿಯು ಕೊಲಂಬಿಯಾ ದೇಶದ ‘ಸೆರ್ರಾನಿಯಾ ಡೆ ಲಾ ಮೆಕಾರೆನ ರಾಶ್ಟ್ರೀಯ ಉದ್ಯಾನವನ’ದಲ್ಲಿದೆ.
4. ಪರ‍್ವತ ಶ್ರೇಣಿಗಳಿಂದ ಹರಿದು ಬರುವ ಈ ನದಿಯು ಮುಂದೆ ಹುಲ್ಲುಗಾವಲಿನಲ್ಲಿ ಕೊನೆಗೊಳ್ಳುತ್ತದೆ. ಕ್ಯಾನೋ ಕ್ರಿಸ್ಟೇಲ್ಸ್ ನದಿಯಲ್ಲಿ ಮೀನುಗಳು ಇಲ್ಲದಿರುವುದು ವಿಶೇಶ.
5. ಕಾನೋ ಕ್ರಿಸ್ಟೇಲ್ಸ್ ಎಂದರೆ ಸ್ಪಾನಿಶ್ ಬಾಶೆಯಲ್ಲಿ ‘ಗಾಜಿನಶ್ಟೇ ಅತವಾ ಸ್ಪಟಿಕದಶ್ಟೇ’ ಪಾರದರ‍್ಶಕ ಎಂಬರ‍್ತ.
6. ಈ ನದಿಯನ್ನು ‘ದ ರಿವರ್ ಆಪ್ ಪೈವ್ ಕಲರ‍್ಸ್’ ‘ಲಿಕ್ವಿಡ್ ರೈನ್ ಬೋ’ ‘ದ ರಿವರ್ ದಟ್ ರನ್ಸ್ ಅವೇ ಟು ಪ್ಯಾರಡೈಸ್’ ‘ದ ಮೋಸ್ಟ್ ಬ್ಯೂಟಿಪುಲ್ ರಿವರ್ ಇನ್ ದ ವರ‍್ಲ್ಡ್’ ಎಂದೂ ಸಹ ಕರೆಯಲಾಗುತ್ತದೆ.
7. ಕಾನೋ ಕ್ರಿಸ್ಟೇಲ್ಸ್ ದೂರದ ಪರ‍್ವತ ಶ್ರೇಣಿಯ ತಪ್ಪಲಲ್ಲಿ ಹರಿಯುವ ಕಾರಣ ಇಲ್ಲಿಗೆ ತಲುಪುವುದು ಸಾಹಸವೇ ಸೈ. ಮೊದಲು ವಿಮಾನ, ನಂತರ ಬೋಟು, ನಂತರ ಕಾಲ್ನಡಿಗೆಯನ್ನೋ, ಹೇಸರಗತ್ತೆಯನ್ನೋ ಅವಲಂಬಿಸಬೇಕಾದ್ದು ಅನಿವಾರ‍್ಯ.
8. 1989 ರಿಂದ 2008 ರವರೆಗೆ ಈ ಪ್ರದೇಶದಲ್ಲಿ ಗೆರಿಲ್ಲಾ ಯುದ್ದವಿದ್ದ ಹಿನ್ನೆಲೆಯಲ್ಲಿ ಪ್ರವಾಸಿಗರ ವೀಕ್ಶಣೆಗೆ ನಿರ‍್ಬಂದ ಹೇರಲಾಗಿತ್ತು.
9. ಕಾನೋ ಕ್ರಿಸ್ಟೇಲ್ಸ್ ನದಿಯ ತಳದಲ್ಲಿರುವ ಕ್ವಾಟ್ರ್ಜೈಟ್ ಶಿಲೆಗಳು ಅಂದಾಜು 1.2 ಬಿಲಿಯನ್ ವರುಶಗಳಿಂದ ರೂಪುಗೊಂಡಿರುವಂತಹವುಗಳು.
10. ಈ ನದಿಯ ಪ್ರಸ್ತಬೂಮಿಯಲ್ಲಿ 420 ಜಾತಿಯ ಪಕ್ಶಿಗಳು, 10 ಜಾತಿಯ ಉಬಯಚರಗಳು, 43 ಜಾತಿಯ ಸರೀಸ್ರುಪಗಳು ಹಾಗೂ 8 ಜಾತಿಯ ಸಸ್ತನಿಗಳು ವಾಸಿಸುತ್ತಿವೆ.

ಪ್ರವಾಸಿಗರು ಇಲ್ಲಿಗೆ ತಲಪುವುದು ಹೇಗೆ?
ಬೊಗೊಟ ಅತವಾ ವಿಲ್ಲಾವೆಸೆನ್ಸಿಯೊದಿಂದ ವಿಮಾನದ ಮೂಲಕ ‘ಲಾ ಮೆಕರೆನಾ’ದ ಪುಟ್ಟ ವಿಮಾನ ನಿಲ್ದಾಣಕ್ಕೆ ಮೊದಲು ಹಂತದಲ್ಲಿ ಪ್ರಯಾಣಿಸಬೇಕು. ಲಾ ಮೆಕರೆನಾ ನಿಲ್ದಾಣವು ಎಶ್ಟು ಪುಟ್ಟದ್ದೆಂದರೆ ಅಲ್ಲಿ ಲಗ್ಗೇಜ್‍ಗಳ ಸಣ್ಣ ಸಣ್ಣ ಟ್ರಕ್‍ಗಳನ್ನು ಎಳೆಯಲು ಹೇಸರಗತ್ತೆಗಳನ್ನು ಬಳಸಲಾಗುತ್ತಿದೆ. ಇಲ್ಲಿಂದ ಮುಂದಕ್ಕೆ ಯಾಂತ್ರಿಕ ಬೋಟ್‍ಗಳನ್ನು ಬಳಸಿಕೊಂಡು ಗುಯಾಬೆರೊ ನದಿಯಲ್ಲಿ ಪ್ರಯಾಣಿಸಬೇಕು. ಬೋಟಿನ ಪ್ರಯಾಣವಂತೂ ಬಹು ರೋಚಕ ಅನುಬವವನ್ನು ನೀಡುತ್ತದೆ. ನದಿಯ ಇಕ್ಕೆಲಗಳಲ್ಲಿ ಕಂಡುಬರುವ ಪುಟ್ಟ ಪುಟ್ಟ ಗಿಣಿಗಳು, ಚೀರಾಡುವ ಮಂಗಗಳು ದಾರಿಯುದ್ದಕ್ಕೂ ಇದ್ದು ಪ್ರವಾಸಿಗರ ಪ್ರಯಾಣದ ಆಯಾಸವನ್ನು ಕಡಿಮೆಗೊಳಿಸುತ್ತವೆ. ನದಿಯಲ್ಲಿ ಪ್ರಯಾಣಿಸಿದ ನಂತರ ಕಾನೋ ಕ್ರಿಸ್ಟೇಲ್ಸ್ ನದಿಯನ್ನು ತಲುಪಲು ಪ್ರವಾಸಿಗರಿಗಾಗಿ ಗುರುತಿಸಿರುವ ಮೂರು ತಾಣಗಳಿಗೆ ಕಾಲ್ನಡಿಗೆಯ ಮೂಲಕ ತೆರಳಬೇಕು ಅತವಾ ಹೇಸರಗತ್ತೆಗಳನ್ನು ಅವಲಂಬಿಸಿಬೇಕು.
ಗೆರಿಲ್ಲಾ ಕದನದ ನಂತರ ಲಾ ಮೆಕರೆನಾದ ಸುತ್ತ ಮುತ್ತಲಿನ 30 ಕಿಮಿ ಪ್ರದೇಶವನ್ನು ‘ಸೇಪ್ ಜೋನ್’ ಎಂದು ಕೊಲಂಬಿಯ ಸರಕಾರವು ಗೋಶಿಸದ್ದು ಅಶ್ಟು ಪ್ರದೇಶದಲ್ಲಿ ಪಹರೆಯನ್ನು ಹಾಕಲಾಗಿದೆ. ಕಾನೋ ಕ್ರಿಸ್ಟೇಲ್ಸ್ ನದಿ ಸಾವಿರಾರು ವರುಶಗಳಿಂದ ಒಂದೇ ಸಮನೆ ರಬಸವಾಗಿ ಹರಿದು ಸಣ್ಣ ಸಣ್ಣ ಜಲಪಾತಗಳಂತೆ ಅಲ್ಲಲ್ಲಿ ಸುರಿಯುವುದರಿಂದ ಜಲಪಾತದ ಬುಡದಲ್ಲಿ ಕಲ್ಲುಗಳು ಸವೆದು ಹುಟ್ಟಿಕೊಂಡಿರುವ ಹೊಂಡಗಳೇ ಪ್ರವಾಸಿಗರ ಪ್ರಾಕ್ರುತಿಕ ಸ್ವಿಮ್ಮಿಂಗ್ ಪೂಲ್.

ಪ್ರವಾಸಿಗರಿಗಿರುವ ನಿಶೇದಗಳು:
ದಿನವೊಂದಕ್ಕೆ ಕೇವಲ 200 ಜನ ಪ್ರವಾಸಿಗರಿಗೆ ಮಾತ್ರ ಈ ನದಿಯ ವೀಕ್ಶಣೆಗೆ ಅವಕಾಶವಿದೆ. ನದಿಯ ಉದ್ದಗಲಕ್ಕೂ ಎಲ್ಲೆಂದರಲ್ಲಿ ಈಜುವುದನ್ನು ನಿಶೇದಿಸಲಾಗಿದೆ. ಈಜುವ ಸಲುವಾಗಿಯೇ ಕೆಲವೊಂದು ನಿರ‍್ದಿಶ್ಟ ಸ್ತಳಗಳನ್ನು ಗುರುತಿಸಿ ಅಲ್ಲಿ ಮಾತ್ರ ಈಜಲು ಪ್ರವಾಸಿಗರಿಗೆ ಅನುಮತಿಯನ್ನು ನೀಡುವ ಮೂಲಕ ಅವಕಾಶವನ್ನು ಕಲ್ಪಿಸಲಾಗಿದೆ. ಗುರುತಿಸಲಾದ ಸ್ತಳಗಳಲ್ಲಿ ಯಾವುದೇ ಪ್ರಾಣಾಪಾಯದ ಬಯವಿಲ್ಲದೆ ತೊಂದರೆಯಿಲ್ಲದೆ ಈಜಬಹುದು. ಈಜುವಾಗ ಸೂರ‍್ಯನ ಶಾಕಕ್ಕೆ ನೇರವಾಗಿ ಮೈ ಒಡ್ಡುವುದರಿಂದ ಚರ‍್ಮ ಟ್ಯಾನಿಂಗ್ ಆಗುವುದು ಸಹಜ. ಇದನ್ನು ತಪ್ಪಿಸಲು ಬಳಸುವ ಕ್ರೀಂಗಳನ್ನು ಇಲ್ಲಿ ಈಜುವಾಗ ಉಪಯೋಗಿಸುವಂತಿಲ್ಲ. ಯಾವುದೇ ರೀತಿಯ ಕೀಟ ನಿವಾರಕಗಳನ್ನು ಬಳಸುವುದನ್ನು ಸಹ ನಿಶೇದಿಸಲಾಗಿದೆ. ಈಜಲು ಗರಿಶ್ಟ ಏಳು ಜನರ ಗುಂಪಿಗೆ ಮಾತ್ರ ಅವಕಾಶ. ಎಲ್ಲರೂ ಒಟ್ಟಿಗೆ ದುಮುಕುವಂತಿಲ್ಲ.

ಯಾಕಿಶ್ಟು ನಿಶೇದಗಳು?
ಯಾವುದೇ ನಿಶೇದಗಳು ಇಲ್ಲದ ಸಮಯದಲ್ಲಾದ ಪ್ರಮಾದಗಳು ಹಾಗೂ ಪ್ರವಾಸಿಗರ ಸ್ವೇಚ್ಚಾಚಾರ ಇಶ್ಟೆಲ್ಲಾ ನಿಶೇದಗಳು ಜಾರಿಗೊಳಿಸಲು ಮೂಲ ಕಾರಣ. ಪ್ರವಾಸಿಗರು ನದಿಯ ದಡದಲ್ಲಿ ಎಲ್ಲೆಂದರಲ್ಲಿ ನಡೆಸುತ್ತಿದ್ದ ಗುಂಡಿನ ಪಾರ‍್ಟಿ ನಂತರ ಎಸೆಯುತ್ತಿದ್ದ ಕಾಲಿ ಬಾಟಲಿಗಳು. ತಂದಿರುವ ತಿನಿಸು ತಿಂದ ನಂತರ ಎಸೆಯುತ್ತಿದ್ದ ತ್ಯಾಜ್ಯ ಹಾಗೂ ಕಸಕಡ್ಡಿಗಳು ಮೊದಲು ಸಾಮಾನ್ಯ ದ್ರುಶ್ಯವಾಗಿತ್ತು. ಇಂತಹ ತ್ಯಾಜ್ಯದಿಂದ ನೀರು ಕಲುಶಿತಗೊಂಡು, ಈ ನದಿಯ ಪ್ರಮುಕ ಆಕರ‍್ಶಣೆಯಾದ, ಕೆಂಪು ಬಣ್ಣಕ್ಕೆ ಮೂಲವಾದ, ಸಸ್ಯ ಮಕರೆನಿಯಾ ಕ್ಲವಿಗೆರದ ಉಳಿವಿಗೇ ಸಂಚಕಾರ ಬಂದಾಗ ಕೆಲವೊಂದು ಕಟ್ಟು ನಿಟ್ಟಿನ ಕ್ರಮ ಜರುಗಿಸುವುದು ಅನಿವಾರ‍್ಯವಾಗಿ ನಿಶೇದಗಳನ್ನು ಹೇರಲಾಯಿತು.

ವಿಚಿತ್ರ ಸತ್ಯ:
ನದಿಯು ಪ್ರವಾಸಿಗರಿಗೆ ಹೊಸದಾಗಿ ಕಂಡರೂ, ಮೂಲ ನಿವಾಸಿಗಳಿಗೆ ತಲೆತಲಾಂತರಗಳಿಂದ ಬದಲಾಗದೇ ಹರಿಯುತ್ತಿರುವ ಅದೇ ನದಿ. ಒಂದು ನೂರು ಮೈಲು ಉದ್ದ ಹರಿಯುವ ಈ ನದಿಯಲ್ಲಿ ಹೊಂಡ ಮತ್ತು ಜಲಪಾತಗಳನ್ನು ಸ್ತಳೀಯರ ಹೆಸರಿನಿಂದ ಗುರುತಿಸಲಾಗಿದೆ. ಮಗುವಿಗೆ ಜನ್ಮ ನೀಡುವಾಗಿನ ನೋವು ಹರಿಯುವ ನೀರಿನಲ್ಲಿ ಕಡಿಮೆ ಎಂದು ಅರಿತ ಒಬ್ಬಾತ ತನ್ನ ಹೆಂಡತಿಯ ಪ್ರಸವವನ್ನು ಮಾಡಿಸದ ಸ್ತಳಕ್ಕೆ ಹುಟ್ಟಿದ ಮಗಳ ಹೆಸರನ್ನೇ ನಾಮಕರಣ ಮಾಡಿದ್ದು, ಆ ಹೊಂಡವನ್ನು ‘ಪಿಸ್ಸಿನ ಕರೊಲ್’ ಎನ್ನಲಾಗಿದೆ. ಇಂತದೇ ವಿಚಿತ್ರವಾದ ಹೆಸರುಗಳನ್ನು ನದಿಯ ಉದ್ದಕ್ಕೂ ಕೇಳಬಹುದು.Categories: ಅರಿಮೆ

ಟ್ಯಾಗ್ ಗಳು:, , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s