ಹಸಿರು ಮನೆ ಮತ್ತು ಪರಿಣಾಮಗಳು
ಸರಾಸರಿಯಾಗಿ ಹವಾಮಾನವು ಏರುಪೇರು ಆಗಿದ್ದರೆ ಅದನ್ನು “ಹವಾಮಾನ ಪರಿವರ‍್ತನೆ” ಅತವಾ ವಾತಾವರಣ ಬದಲಾವಣೆ ಎಂದು ಹೇಳಲಾಗುತ್ತದೆ. ಪ್ರಕ್ರುತಿಯಲ್ಲಿ, ವಾಯುಮಂಡಲದ ಹವಾಮಾನವು ಸಾಮಾನ್ಯವಾಗಿ ಮಾರ‍್ಪಾಡು ಆಗುತ್ತಿರುತ್ತದೆ, ಆದರೆ ಇತ್ತೀಚೆಗೆ ನಿರಂತರವಾದ ಬದಲಾವಣೆ ಕಾಣಿಸುತ್ತಿದೆ. ಹಿಂದಿನ ಮತ್ತು ಈಗಿನ ಹವಾಮಾನದ ರೀತಿಯನ್ನು ಗಮನಿಸಿದರೆ, ಅಜಗಜಾಂತರ ವ್ಯತ್ಯಾಸವಿದೆ ಎಂದು ಅರಿವಾಗುತ್ತದೆ ಮತ್ತು ಅದು ಊಹಿಸಲಾಗದಶ್ಟು ವೇಗದಲ್ಲಿ ಮಾರ‍್ಪಾಟಾಗುತ್ತಿದೆ. ಬೂಮಿಯ ವಾತಾವರಣ ಮಾರ‍್ಪಾಟಿಗೆ ಸಂಬಂದಿಸಿದಂತೆ ವಾಯುಮಂಡಲದ ರೂಪರೇಶೆಗಳನ್ನು ತಿಳಿಯುವುದು ಸೂಕ್ತ.
ಈಗ ವಾಯುಮಂಡಲದ ರಚನೆಯನ್ನು ಪರಾಮರ‍್ಶಿಸೋಣ.ಈ ಬೂಮಂಡಲವನ್ನು ಸುತ್ತವರಿದಿರುವ ವಾಯುಮಂಡಲವು ಐದು ಪದರಗಳಿಂದ ಕೂಡಿದೆ. ತತ್ಸಂಬಂದವಾಗಿ ಚಿತ್ರವನ್ನು ಕೆಳಗೆ ಕೊಟ್ಟಿದೆ.
ಕೆಳಪದರ ಟ್ರೋಪೊಸ್ಪಿಯರ್ – 4/5 ರಶ್ಟು ಗಾಳಿಯಿರುತ್ತದೆ. ಸುಮಾರು 17-20 ಕಿಲೋಮೀಟರ್ ಎತ್ತರವಿರುತ್ತದೆ.
ಎರಡನೇ ಪದರ ಸ್ಟ್ರಾಟೋಸ್ಪಿಯರ್- ಇದರಲ್ಲಿ ಓಜೋನ್ ಇರುತ್ತದೆ ಎತ್ತರ ಸುಮಾರು 50 ಕಿಲೋಮೀಟರ್. ಇದು ನಿಲಾತೀತ ಕಿರಣಗಳನ್ನು ತಡೆಯುತ್ತದೆ ಮತ್ತು -110 ಡಿಗ್ರಿ ಸೆಲ್ಶಿಯಸ್ ನಿಂದ ಹಿಮಗಡ್ಡೆಯಾಗುವಂತ ತಾಪಮಾನವಿರುತ್ತದೆ.
ಮೂರನೇ ಪದರ ಮಿಸೋಸ್ಪಿಯರ್-ಇದರ ತಾಪಮಾನವು -180 ಡಿಗ್ರಿ ಸೆಲ್ಶಿಯಸ್ ಮತ್ತು ಎತ್ತರ 85 ಕಿಲೋಮೀಟರ್.
ನಾಲ್ಕನೇ ಪದರ ಅಯನೋಸ್ಪಿಯರ್ ಅತವಾ ತರ‍್ಮೊಸ್ಪಿಯರ್ ಇದು ಹೊರ ಆಕಾಶದ ಬಾಗ, ಎತ್ತರ 690 ಕಿಲೋಮೀಟರ್.
ಐದನೇ ಪದರ ಎಕ್ಸೋಸ್ಪಿಯರ್ ಇದು 1000 ದಿಂದ 10000 ಕಿಲೋಮೀಟರ್ ಇರುತ್ತದೆ ಜತೆಗೆ ಗ್ರಹ ಮಂಡಲಕ್ಕೆ ಅತವಾ ವ್ಯೋಮಕ್ಕೆ ಸೇರಿಕೊಳ್ಳುತ್ತದೆ.
ಶಕ್ತಿಯ ಮೂಲ ರೂಪಗಳು:
1.ಸೂರ‍್ಯ ಶಕ್ತಿ (ರೆಡಿಯಂಟ್ ಎನರ‍್ಜಿ) 2.ಉಶ್ಣ ಶಕ್ತಿ (ಹೀಟ್ ಎನರ‍್ಜಿ) 3.ರಸಾಯನಿಕ ಶಕ್ತಿ (ಕೆಮಿಕಲ್ ಎನರ‍್ಜಿ) 4.ಯಾಂತ್ರಿಕ ಶಕ್ತಿ (ಮೆಕ್ಯಾನಿಕಲ್ ಎನರ‍್ಜಿ) ಇದರಲ್ಲಿ ಎರಡು ವಿದಗಳು, ಶಕ್ತಿ ತುಂಬಿರುವ ಅತವಾ ಬಂದಿಸುವ ಶಕ್ತಿ (ಪೊಟೇನ್ಶಿಯಲ್ ಎನರ‍್ಜಿ) ಮತ್ತು ಚಲನಾತ್ಮಕ ಶಕ್ತಿ (ಕೈನೆಟಿಕ್ ಎನರ‍್ಜಿ).
ಈ ಎಲ್ಲಾ ಶಕ್ತಿಗಳ ಮೂಲ ಸೌರ ಶಕ್ತಿ. ಸೂರ‍್ಯನಿಂದ ಹೊರಡುವ ಕಿರಣಗಳು ವಿದ್ಯುತ್ ಕಾಂತೀಯ ಅಲೆಗಳು (ಎಲೆಕ್ಟ್ರೋಮ್ಯಾಗ್ನೆಟಿಕ್ ವೇವ್ಸ). ಅಗಾದ ಶಕ್ತಿಯ ಅತಿ ಕಡಿಮೆ ಬಾಗವು ಬೂಮಂಡಲಕ್ಕೆ ತಲಪುತ್ತದೆ. ಅಂದರೆ, ಸೂರ‍್ಯನಿಂದ ಹೊರಬರುವ ಶಕ್ತಿಯ ಒಂದು ಮಿಲಿಯನ್‍ನ ಅರ‍್ದ ಬಾಗ ಮಾತ್ರ. ಬೂಮಿಗೆ ತಲುಪುತ್ತದೆ. ಈ ಶಕ್ತಿಯು 173000X1012 ವ್ಯಾಟ್ ಗಳು. ಇದರಲ್ಲಿ ಶೇಕಡ 30 ಬಾಗ ಕಿರಣಗಳು ಮತ್ತೆ ವಾಯುಮಂಡಲದ ಕಡೆಗೆ ಪ್ರತಿಪಲನಗೊಳ್ಳುತ್ತವೆ. ಶೇಕಡ 47 ಬಾಗ ಕಿರಣಗಳು ವಾಯುಮಂಡಲ ಮತ್ತು ಸಮುದ್ರ ಹೀರಿಕೊಳ್ಳುತ್ತವೆ. ಇನ್ನುಳಿದ ಶೇಕಡ 23 ಬಾಗ ಕಿರಣಗಳು ನೀರನ್ನು ಆವಿಯಾಗಿಸಿ ನೀರಿನ ಚಕ್ರದಲ್ಲಿ ಚಲನೆಗೆ ಕಾರಣವಾಗುತ್ತದೆ. ಶೇಕಡ ಒಂದು ಬಾಗಕ್ಕಿಂತ ಕಡಿಮೆ ಕಿರಣಗಳು ಗಾಳಿ ಚಲನೆಗೆ ಬೇಕಾಗುತ್ತದೆ. ಶೇಕಡ 0.01 ಬಾಗದ ಕಿರಣಗಳು ದ್ಯುತಿಸಂಶ್ಲೇಶಣೆ ಕ್ರಿಯೆಗೆ ತೊಡಗಿಸಿಕೊಳ್ಳುತ್ತವೆ. ಈ 0.01 ಶಕ್ತಿಯು ಎಲ್ಲಾ ಜೀವಂತ ಪ್ರಾಣಿಗಳು ಮತ್ತು ಎಲ್ಲಾ ಸಸ್ಯಗಳ ಬದುಕಿಗೆ ಬೇಕಾಗುತ್ತದೆ.
ಹಸಿರು ಮನೆಯ ವಾತಾವರಣ:
ಟ್ರೋಪೋಸ್ಪಿಯರ್ ಸೂರ‍್ಯನ ಬೆಳಕು, ವಿವಿದ ಅನಿಲಗಳು ಒಂದು ಜಟಿಲವಾದ ಸಂಕೀರ‍್ಣ ಕ್ರಿಯೆಯಲ್ಲಿ ತೊಡಗಿ ಬೂಮಿಯ ಶಾಕವನ್ನು ಹೆಚ್ಚಿಸುತ್ತವೆ. ಈ ಸಂಕಿರ‍್ಣವೇ ಹಸಿರು ಮನೆಯ ಪರಿಣಾಮಕ್ಕೆ ಕಾರಣ. ಸೂರ‍್ಯನ ವಿದ್ಯುತ್ ಕಾಂತೀಯ ಅಲೆಗಳ ಕುಬ್ಜ ತರಂಗಗಳು ಅಂದರೆ ನೀಲಾತೀತ ಕಿರಣಗಳು 320 -390 ನ್ಯಾನೋ ಮೀಟರ್, ಕಣ್ಣಿಗೆ ಕಾಣಿಸುವ ಬೆಳಕಿನ ಕಿರಣಗಳು ಮತ್ತು ಉದ್ದನೆ ಅಲೆಯ ಐಆರ್ (ಇನ್‍ಪ್ರಾರೆಡ್)ಕಿರಣಗಳು ಬೂಮಿಯ ಮೇಲೆ ಬೀಳುತ್ತವೆ ಮತ್ತೆ ಇವುಗಳ ಮೂರನೇ ಒಂದು ಬಾಗದಶ್ಟು ಪ್ರತಿಪಲನಗೊಂಡು ವಾಯುಮಂಡಲಕ್ಕೆ ವಾಪಸಾಗುತ್ತವೆ. ಉಳಿದ ಮೂರನೆ ಎರಡು ಬಾಗ ಬೂಮಿ ಮತ್ತು ಸಮುದ್ರ ಹೀರಿಕೊಳ್ಳುತ್ತವೆ. ಪ್ರತಿಪಲನಗೊಂಡ ಐಆರ್ ಕಿರಣಗಳ ತರಂಗಗಳ ಉದ್ದ 20,000-40,000 ನ್ಯಾನೋ ಮೀಟರ್ ಆಗಿರುತ್ತವೆ. ಬೂಮಿಯ ಮೇಲಿರುವ ಕಪ್ಪು ಕಾಯಗಳು(ಬ್ಲಾಕ್ ಬಾಡಿಸ್) ಕಿರಣಗಳನ್ನು ಹೀರಿಕೊಂಡು ಪುನಹ ವಾಯುಮಂಡಲಕ್ಕೆ ಉದ್ದ ತರಂಗ ಕಿರಣಗಳಾಗಿ ಹಿಂತಿರುಗಿಸುತ್ತವೆ.ಇವು ಬ್ರಾಡ್‌ರೆಂಜ್ ತರಂಗಗಳಾಗಿದ್ದು ಇವುಗಳ ಉದ್ದ 1200–40,000 ನ್ಯಾನೋ ಮೀಟರ್ ಆಗಿರುತ್ತವೆ ಮತ್ತು ಅವುಗಳ ಸಮತಲವು ಹೆಚ್ಚು ಅಂದರೆ 12,000 ನ್ಯಾನೋ ಮೀಟರ್. ಬೂಮಿಯಿಂದ ವಾಪಸ್ಸಾಗುವ ಕಿರಣಗಳು ಹೆಚ್ಚು ಶಾಕದಿಂದ ಪ್ರಬಾವಿತವಾಗಿರುತ್ತವೆ. ಸೂರ‍್ಯನ ಅಪರಿಮಿತ ಶಾಕವು ಗಿಡ್ಡ ತರಂಗಗಳಲ್ಲಿ ಹೊರ ಹಾಕುತ್ತಿರುತ್ತದೆ, ಜತೆಗೆ ಬೂಮಿಯಿಂದ ವಾಪಸ್ಸಾಗುವ ತರಂಗಗಳು ಉದ್ದನೆ ತರಂಗಗಳಾಗಿದ್ದು ಅವು ಕೂಡ ಶಾಕವುಳ್ಳದ್ದಾಗಿರುತ್ತವೆ. ಅಲ್ಲದೇ ವಾತಾವರಣದಲ್ಲಿರುವ ಹಸಿರು ಮನೆ ಅನಿಲಗಳು ಶಾಕವನ್ನು ಹೀರಿಕೊಂಡು, ಬೂಮಿಗೆ ಅಂಟಿಕೊಂಡಿರುವ ಟ್ರೋಪೊಸ್ಪಿಯರ್‍ನ 33 ಡಿಗ್ರಿ ಸೆಲ್ಸಿಯಸ್‌ನಶ್ಟು ಶಾಕ ಹೆಚ್ಚಿಸುತ್ತವೆ. ಆದ್ದರಿಂದ ಬೂಮಿ ಮೇಲಿರುವ ಜೀವಿಗಳ ಮೇಲೆ ಹಸಿರು ಮನೆ ಪರಿಣಾಮ ಬೀರುತ್ತದೆ .
ಹಸಿರು ಮನೆ ಉಪಯೋಗಿ ಪರಿಣಾಮಗಳು:
ಹಸಿರುಮನೆ ಪರಿಣಾಮವಿಲ್ಲದ ಈ ನೈಸರ‍್ಗಿಕ ಬೂಮಿಯ ತಾಪಮಾನವು ಸಾಮಾನ್ಯವಾಗಿ ಸರಾಸರಿ 18 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಅಂದರೆ ಬೂಮಂಡಲದ ಈಗಿನ ಸರಾಸರಿ ಶಾಕವು 15 ಡಿಗ್ರಿ ಸೆಲ್ಸಿಯಸ್ ಮಾತ್ರ ಆದರೆ ಬೂಮಿಯ ಮೇಲಿರುವ ಜೀವಿಗಳಿಗೆ ಈ ತಾಪಮಾನದಲ್ಲಿ ಜೀವನ ನಡೆಸುವುದು ಸಾದ್ಯವಾಗುವುದಿಲ್ಲ. ಆದಕಾರಣ ಬೂಮಿಯ ಮೇಲಿನ ಸರಾಸರಿ ಶಾಕವು ಹೆಚ್ಚಾದರೆ ಜೀವಿಗಳಿಗೆ ಹೆಚ್ಚು ಅನುಕೂಲವಾಗಿರುತ್ತದೆ. ಹಾಗಿದ್ದರೂ ಹಸಿರು ಮನೆ ಅನಿಲಗಳ ತೀವ್ರತೆಯಿಂದ ಅನೇಕ ತೊಡುಕುಗಳಾಗುತ್ತವೆ.
ಹಸಿರು ಮನೆ ಪರಿಣಾಮ” ಎಂದು ಕರೆಯಲು ಕಾರಣಗಳೇನು?
ಶೀತವಲಯ ದೇಶಗಳಲ್ಲಿ ಹಸಿರು ಮನೆಯಲ್ಲಿ(ಗಾಜಿನ ಮನೆ) ಹೊರಗಡೆ ಶಾಕಕ್ಕಿಂತ ಹೆಚ್ಚು ಶಾಕವಿರುತ್ತದೆ. ಹಸಿರುಮನೆಗಳಲ್ಲಿ ಸೂರ‍್ಯನಬೆಳಕು ಪಾರದರ‍್ಶಕ ಗಾಜಿನ ಮುಕಾಂತರ ಬೂಮಿಗೆ ತಲಪುತ್ತದೆ, ಬೂಮಿಯಿಂದ ಪ್ರತಿಪಲನಗೊಂಡ ಶಾಕವು ಅತವಾ ಇನ್‍ಪ್ರಾ ರೆಡ್ ಕಿರಣಗಳು ವಾತಾವರಣಕ್ಕೆ ರವಾನಿಸುವುದು ಸಾದ್ಯವಾಗುವುದಿಲ್ಲ. ಆದುದರಿಂದ, ಇನ್‍ಪ್ರಾರೆಡ್ ತರಂಗಗಳ ಹೆಚ್ಚು ಬಾಗವನ್ನು ಗಾಜು ಹೀರಿಕೊಳ್ಳುತ್ತವೆ ಮತ್ತು ಒಳ ವಾತಾವರಣವು ಹೆಚ್ಚು ಶಾಕದಿಂದ ಕೂಡಿರುತ್ತದೆ. ಅಲ್ಲದೆ ಅದು ಗಿಡಗಳನ್ನು ಬೆಳೆಯಲಿಕ್ಕೆ ಪೋಶಣೆ ಕೊಡುತ್ತದೆ. ಜಾಗತಿಕ ಮಟ್ಟದಲ್ಲಿ ಊಹಿಸಿದರೆ ಹಸಿರು ಮನೆ ವಾತಾವರಣವು, ಗಾಜಿನ ಮನೆಯ ವಾತಾವರಣದಂತೆ ಇರುತ್ತದೆ.
ಹಸಿರು ಮನೆ ಅನಿಲಗಳ ಗುಣಗಳು:
ಕಾರ‍್ಬನ್ ಡೈಯಾಕ್ಸೈಡ್, ಮಿತೇನ್, ನೈಟ್ರಸ್ ಆಕ್ಸೈಡ್‍ಗಳು, ಓಜೋನ್, ಹ್ಯಾಲೋಕಾರ‍್ಬನ್‍ಗಳು (ಕ್ಲೋರೋ ಪ್ಲೂರೋ ಕಾರ‍್ಬನ್,ಹೈಡ್ರೋ ಪ್ಲೂರೋ ಕಾರ‍್ಬನ್ ಮುಂತಾದವುಗಳು) ಮತ್ತು ನೀರಿನ ಆವಿ. ಇವು ಬೆಳಕಿನಲ್ಲಿ ಪಾರದರ‍್ಶಕವಾಗಿರುತ್ತವೆ. ಬೆಳಕಿನ ಕಿರಣಗಳನ್ನು ಉದ್ದನೇಯ ತರಂಗಗಳನ್ನಾಗಿ (4000–20,000 ನ್ಯಾನೋ ಮೀಟರ‍್) ವಾಯುಮಂಡಲಕ್ಕೆ ಪುನಹ ಪ್ರತಿಪಲಿಸುತ್ತವೆ.
ಹಸಿರು ಮನೆ ಅನಿಲಗಳ ಉತ್ಪಾದನೆ:
ಹಲವು ಹಸಿರು ಮನೆ ಅನಿಲಗಳು ಪ್ರಕ್ರುತಿಯಲ್ಲಿ ಕೈಗಾರಿಕೆಗಳಲ್ಲಿ ಮತ್ತು ಜೀವನ ವೈಕರಿಗಳಿಂದ ಉತ್ಪತ್ತಿಯಾಗುತ್ತವೆ. ಜತೆಗೆ ಹೊಸ ಹಸಿರು ಮನೆ ಅನಿಲಗಳನ್ನು ಹುಟ್ಟುಹಾಕುತ್ತವೆ. ಕಾರ‍್ಬನ್ ಡೈಯಾಕ್ಸೈಡ್, ಮೀತೆನ್, ನೈಟ್ರಸ್ ಆಕ್ಸೈಡ್‍ಗಳು, ಓಜೋನ್, ಹ್ಯಾಲೋಕಾರ‍್ಬನ್‍ಗಳು (ಸಿ ಎಪ್ ಸಿಗಳು) ಮತ್ತು ನೀರಿನ ಆವಿಗಳ ಪರಿಣಾಮ, ಅವುಗಳ ಆಯಸ್ಸು, ಮತ್ತು ಉತ್ಪಾದನೆಯನ್ನು ಅವಲೋಕಿಸೊಣ.
ಕಾರ‍್ಬನ್ ಡೈಯಾಕ್ಸೈಡ್: ಇತರೆ ಹಸಿರು ಮನೆ ಅನಿಲಗಳಿಗಿಂತ ಕಾರ‍್ಬನ್ ಡೈಯಾಕ್ಸೈಡ್ ಅತಿ ಹೆಚ್ಚು ಪ್ರಮಾಣದಲ್ಲಿರುವ ಅನಿಲ. ಇದು ಕೈಗಾರಿಕಾ ಕ್ರಾಂತಿ ಆಗುವುದಕ್ಕಿಂತ ಮೊದಲು ವಾತಾವರಣದಲ್ಲಿ 275 ಪಿಪಿಮ್ (ಪಾರ‍್ಟ್ಸ ಪರ್ ಮಿಲಿಯನ್) ಕಾರ‍್ಬನ್ ಡೈಯಾಕ್ಸೈಡ್ ಇದ್ದಿತೆಂದು ಮತ್ತು ಈಗ 330 ಪಿಪಿಮ್ ಇದೆಯೆಂದು ಸಾಬೀತಾಗಿದೆ. ಕಾರ‍್ಕಾನೆಗಳಲ್ಲಿ ಬಳಸಿದ ಇಂದನಗಳಾದ ಕಲ್ಲಿದ್ದಲು, ತೈಲಗಳು(ಪೆಟ್ರೋಲಿಯಮ್ ಗುಂಪಿನ ವಸ್ತುಗಳು), ಜತೆಗೆ, ಪ್ರಕ್ರುತಿಯಲ್ಲಿ ತಯಾರಾಗುವ ಇತರೆ ಇಂದನಗಳು ಉರಿದು ತಯಾರಾದ ಐದು ಬಿಲಿಯನ್ ಟನ್ ಕಾರ‍್ಬನ್ ಡೈಯಾಕ್ಸೈಡ್ ವಾತಾವರಣಕ್ಕೆ ಸೇರುತ್ತದೆ. ಇದಕ್ಕೆ ಕಾರಣ ಬೇಸಾಯದ ಜಮೀನಿನ ಬಳಕೆಯಲ್ಲಿ ಬದಲಾವಣೆ ಮತ್ತು ಮರಗಳನ್ನು ಕಡಿಯುವುದು. ಗಿಡಮರಗಳಿಲ್ಲದೆ, ಕಾರ‍್ಬನ್ ಡೈಯಾಕ್ಸೈಡ್‍ನ್ನು ಬಳಸುವ ದ್ಯುತಿಸಂಶ್ಲೇಶಣೆ ಕ್ರಿಯೆ ಕಡಿಮೆಯಾಗಿ ವಾತಾವರಣದಲ್ಲಿ ಕಾರ‍್ಬನ್ ಡೈಯಾಕ್ಸೈಡ್ ಸೇರುತ್ತದೆ. ಜತೆಗೆ ಮರಗಿಡಗಳ ನಶಿಸುವಿಕೆಯಿಂದ ಮತ್ತು ಕಾಡಿನ ಬೆಂಕಿಯಿಂದ ಸಹ ಕಾರ‍್ಬನ್ ಡೈಯಾಕ್ಸೈಡ್ ಹೆಚ್ಚಾಗುತ್ತಿದೆ.
ಮೀತೆನ್: ವಾತಾವರಣದಲ್ಲಿ ಎರಡನೇ ಸ್ತಾನದಲ್ಲಿರುವ ಈ ಅನಿಲವು ಮಾನವನ ಚಟುವಟಿಕೆಗಳಿಂದ ಸ್ರುಶ್ಟಿಸಿದ ಅನಿಲ. ಇದೀಗ 1.7 ಪಿಪಿಮ್ ಇದೆ ಮತ್ತು ಅದರ ಮಟ್ಟ ಪ್ರತಿವರ‍್ಶ ಸರಾಸರಿ 1% ಹೆಚ್ಚಾಗುತ್ತಿದೆ. ಬತ್ತದ ಗದ್ದೆಗಳು, ದನಕರುಗಳ ಸಗಣಿ, ಗೆದ್ದಲು ಹುಳುಗಳು, ನೀರು ನಿಂತಿರುವ ಸ್ತಳಗಳು, ಹಳ್ಳಕೊಳ್ಳಗಳಲ್ಲಿ ತುಂಬಿರುವ ಕೊಳೆತು ನಾರುವ ವಸ್ತುಗಳು. ಆಮ್ಲಜನಕ ರಹಿತ ಪ್ರದೇಶಗಳಲ್ಲಿ ವಾಸಿಸುವ ಮೀತೆನೋಜೆನಿಕ್ ಬ್ಯಾಕ್ಟೀರಿಯಾಗಳು ಅವಯವ ವಸ್ತುಗಳಲ್ಲಾಗುವ ರಸಾಯನಿಕ ಕ್ರಿಯೆಯಿಂದ ಮೀತೆನ್ ಉತ್ಪತ್ತಿಯಾಗುತ್ತದೆ. ಮೀತೆನ್, ಕಲ್ಲಿದ್ದಲು ಗಣಿಗಳಲ್ಲಿ ಸಹಜವಾಗಿ ಉತ್ಪತ್ತಿಯಾಗುತ್ತದೆ.
(ತಿಟ್ಟ ಸೆಲೆ:physique-chimie-college.fr, farrellfile.com)
1 Response
[…] ಈ ಹಿಂದಿನ ಬರಹದಲ್ಲಿ ತಿಳಿದುಕೊಂಡಂತೆ ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲಗಳು ಇನ್ನೂ ಇವೆ.ಅವುಗಳನ್ನು ತಿಳಿಯೋಣ ಬನ್ನಿ. […]