ದಿಕ್ಕೆಟ್ಟ ಮನಸ್ಸೊಂದು ಕುಸಿದು ಬಿದ್ದಾಗ…

– ಅಜಯ್ ರಾಜ್.

self-centred

( ಬರಹಗಾರರ ಮಾತು:  ಸ್ಪರ‍್ದಾತ್ಮಕ ಜಗತ್ತಿನಲ್ಲಿ ಮನುಶ್ಯರು ಯಂತ್ರಗಳಾಗಿದ್ದಾರೆ. ತಮ್ಮದೇ ಸಹಪಾಟಿಗಳು ಬದುಕಿನಲ್ಲಿ ಬಿದ್ದಾಗ ಮೇಲೆತ್ತುವ ಸೌಜನ್ಯ ತೋರದೆ ಮಾನವೀಯತೆಯನ್ನು ಮರೆತಿದ್ದಾರೆ. ಅಂತಾ ಮನಸ್ತಿತಿ ಕುರಿತು ಬರೆದ ಕವಿತೆಯಿದು)

ಬೆಳಗಾಗುತ್ತಲೇ ಎದ್ದು
ಗಂಗೆಯಲಿ ಮಿಂದು
ಸೂಟುಬೂಟುಗಳ ದರಿಸಿ ಆಪೀಸಿನೆಡೆಗೆ
ನಾಗಾಲೋಟವೇ ಪ್ರತಿನಿತ್ಯವಿಂದು

ಮನವೆಂಬ ಮರ‍್ಕಟದೊಳಗೆ
ನೂರೊಂದು ಸಂಕಟ
ಕೌಟುಂಬಿಕ ಕಲಹ, ನಿತ್ಯ ನೂರು ವಿರಹ
ಹಾ…! ಬದುಕು ಜಿಗುಪ್ಸೆಯ ವಿಶಿಶ್ಟ ಬರಹ

ಆಪೀಸಿನ ಗೋಡೆಗಳ ನಡುವೆ
ಯಂತ್ರ ತೊಟ್ಟಿಲುಗಳೊಳಗೆ
ಸಿಗಬಹುದೆ ಶಾಂತಿ…?
ಏನಯ್ಯ ನೀನು…? ಬಯಸಿದರಿದನು ಇನ್ನು
ಬ್ರಾಂತಿಯೊಂದೇ ಕಟ್ಟಿಟ್ಟ ಬುತ್ತಿ

ಹತಾಶೆ ಬೆನ್ನಟ್ಟಿ ಬರುತಿದೆ
ಆಶಾಕಿರಣ ತೊಡರುತ್ತಿದೆ
ಕುಸಿದು ಬಿದ್ದೆ ನಾನು, ತಡೆಯಲಾರದಿನ್ನು
ಕ್ಲಿಶ್ಟತೆಯಲಿ ಕನಸು ಕಮರಿಹೋಗುತ್ತಿದೆ

ಸಾಮಾನ್ಯ ಸ್ಪಂದನೆಗೆ ನನ್ನೊಳ ಬಯಕೆ
ಚೀತ್ಕರಿಸುತ್ತಿದೆ
ಪರಮನೋ, ಪಾಮರನೋ
ದಾವಿಸಿ ಬಾರಯ್ಯಾ
ನಾ ನಿನ್ನದೇ ಕಚೇರಿಯ
ಸಹೊದ್ಯೋಗಿ ಗೆಳೆಯ

ಕೈ ಹಿಡಿದು ಮೇಲೆತ್ತಿ ರುಣಿಯಾಗಿಸು
ಜೋತು ಬಿದ್ದು ಜಡವಾಗಿಹ ದೇಹದಲಿ
ಸಂಚಲನ ಮೂಡಿಸು
ಹೆಗಲು ಕೊಟ್ಟು ಸಾಂತ್ವನಿಸುವುದೇ
ನೈಜ ಮಾನವೀಯತೆ
ದಿಕ್ಕೆಟ್ಟ ಮನಸ್ಸೊಂದು ಕುಸಿದು ಬಿದ್ದಾಗ!!

( ಚಿತ್ರ ಸೆಲೆ: buzzle.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: