ಬರೀ ಇನ್ನೂರಕ್ಕೆ ಕಾರು ಹೊಸದಾಗಿಸಿ
200 ರೂಪಾಯಿಗಳು ಇದಕ್ಕೇನು ಮಹಾ ಬೆಲೆ, ಅದು ಇವತ್ತಿನ ದುಬಾರಿ ದಿನಗಳಲ್ಲಿ ಇಶ್ಟಕ್ಕೆ ಏನು ಸಿಗುತ್ತೆ ಅಂತ ನಮ್ಮಲ್ಲಿ ಹಲವರು ಗೊಣಗುತ್ತಲೇ ಇರುತ್ತಾರೆ. ಪಕ್ಕದ ಬೀದಿಯ ದರ‍್ಶಿನಿ ಹೋಟೆಲೊಂದರಲ್ಲಿ ಗೆಳೆಯನೊಂದಿಗೆ ದೋಸೆ ಸವಿದು, ಕಾಪಿ ಹೀರುವುದರಲ್ಲಿ ಕಾಲಿಯಾಗಿರುತ್ತೆ ಅಲ್ಲವೇ! ಆದರೆ ಇದೇ 200 ರೂಪಾಯಿಗಳಿಗೆ ಬಂಡಿಯ(Car) ಬಿಡಿ ಬಾಗಗಳು/ನೆರಬಿಡಿಗಳು (Accessory) ದೊರೆಯುತ್ತವೆ ಅನ್ನೋದು ನಿಮಗೆ ಗೊತ್ತಾ? ನಂಬಿಕೆ ಬರುತ್ತಿಲ್ಲವಾ? ಹಾಗಾದ್ರೆ ಅವ್ಯಾವು ಏನು ಎಂದು ತಿಳಿದುಕೊಳ್ಳಲು ಮುಂದೆ ಓದಿ.
1.ಗಾಳಿ ಕಳೆಯೇರಿಸುಕ (Air Freshener):
ಇಂದಿನ ಹೆಚ್ಚಿನ ಬಂಡಿಗಳಲ್ಲಿ ಕಳೆಯೇರಿಸುಕಗಳ (Freshners) ಬಳಕೆ ಇದ್ದೇ ಇರುತ್ತದೆ. ಹೆಚ್ಚಿನ ಹೊತ್ತು ಬಂಡಿಗಳನ್ನು ಹೊರಗಡೆ ಇಲ್ಲವೇ ನಿಲ್ದಾಣಗಳಲ್ಲಿ ನಿಲ್ಲಿಸಿ, ಆಮೇಲೆ ಬಂಡಿಯೇರಿದಾಗ ತಿಳಿಯಾದ ಶುದ್ದ ಗಾಳಿಯ ಬೇಕಿನಿಸುತ್ತದೆ. ಒಳ್ಳೆಯ ವಾಸನೆ ಸೂಸುತ್ತ ಗಾಳಿ ತಿಳಿಗೊಳಿಸಿ ಮನಸ್ಸಿಗೆ ಮುದ ನೀಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತವೆ ಈ ಗಾಳಿ ಕಳೆಯೇರಿಸುಕಗಳು. ಬಂಡಿ ಬಾಗಗಳ ಅಂಗಡಿಗಳಲ್ಲಿ, ಮಿನ್ಕೊಳುಕೊಡೆ (E-commerce) ತಾಣಗಳಲ್ಲಿ ಇವುಗಳನ್ನು ಕೊಳ್ಳಬಹುದಾಗಿದೆ. ಸುಮಾರು 200 ರೂಪಾಯಿಗಳಿಂದ ಶುರುವಾಗಿ ಹೆಚ್ಚಿನ ಬೆಲೆಗಳಲ್ಲಿ ದೊರೆಯಲಿವೆ. ನಿಮ್ಮ ಬಂಡಿಯಲ್ಲೂ ಒಂದಿದ್ದರೆ ಚೆನ್ನ.
2.ಟಯ್ರಿನ ಗಾಳಿ ಒತ್ತಡ ಅಳಕ (Tire pressure gauge):
ಟಯ್ರಿನ ಗಾಳಿ ತುಂಬಿಸಲು ಸಾಮಾನ್ಯವಾಗಿ ನಾವು ಬೀದಿ ಪಕ್ಕದ ಅಂಗಡಿಗೋ ಇಲ್ಲವೇ ಹತ್ತಿರದ ಪೆಟ್ರೋಲ್ ಬಂಕಿಗೋ ಹೋಗುತ್ತೇವೆ. ಈ ಅಂಗಡಿಗಳಲ್ಲಿ ಸಿಗುವ ಗಾಳಿಯೊತ್ತಡ ಅಳಕಗಳು (Air pressure Gauge) ಹಲವು ಸಾರಿ ಒಳ್ಳೆಯ ಗುಣಮಟ್ಟದ್ದಾಗಿರುವುದಿಲ್ಲ ಇಲ್ಲವೇ ಹಲವು ವರುಶಗಳಿಂದ ಬಳಸಲ್ಪಟ್ಟು ತಮ್ಮ ಅಳವುತನ (efficiency) ಕಳೆದುಕೊಂಡಿರುತ್ತವೆ. ಇಂತ ಅಂಗಡಿಗಳಲ್ಲಿ, ನಾವು ಕಾರು ಟಯ್ರಿನಲ್ಲಿ ಗಾಳಿತುಂಬಿಸಿದಾಗ ಅದರ ಒತ್ತಡ ಹೆಚ್ಚು/ಕಡಿಮೆಯಾಗಿರುತ್ತದೆ. ಇದು ಬಂಡಿಗೆ ಒಳ್ಳೆಯದಲ್ಲ, ಟಯ್ರುಗಳು ಪಂಕ್ಚರ್‌ಗಳಾಗುವುದುಂಟು. ಇದನ್ನು ತಪ್ಪಿಸಲು ನಿಮ್ಮ ನೆರವಿಗಾಗಿ ಸ್ವಂತ ಗಾಳಿಯೊತ್ತಡ ಅಳಕ ಇಟ್ಟುಕೊಂಡರೆ ಒಳಿತು. ಬೀದಿ ಪಕ್ಕದ ಅಂಗಡಿಯಲ್ಲಿ ಟಯ್ರಿನಲ್ಲಿ ಗಾಳಿ ತುಂಬಿಸಿದಾಗ ನೀವೇ ಅಳೆದು ನೋಡಿ ಕಚಿತಪಡಿಸಿಕೊಳ್ಳಬಹುದು ಮತ್ತು ಟಯ್ರಿನ ಆಯಸ್ಸನ್ನು ಹೆಚ್ಚಿಸಿಕೊಳ್ಳಬಹುದು. ಸುಮಾರು 150 ರೂಪಾಯಿಗಳ ಆರಂಬಿಕ ಬೆಲೆಯಲ್ಲಿ ಸಿಗುವ ಈ ಅಳಕಗಳು ಹೆಚ್ಚಿನ ದರಗಳಲ್ಲೂ ಸಿಗುತ್ತವೆ.
3.ಹಲಬಳಕೆ ಮುಟ್ಟು (Multipurpose tool):
ಹಳಬಳಕೆ ಮುಟ್ಟು (Multipurpose tool) ಬಂಡಿಯಲ್ಲಿ ಇಟ್ಟುಕೊಂಡಿದ್ದರೆ ಯಾವಾಗಲೂ ಒಳ್ಳೆಯದು. ಇವುಗಳಲ್ಲಿ ಹೊಳೆಯುವ ದೀಪ, ಕತ್ತರಿಸಲು ಕತ್ತರಿ/ಕಿರುಗತ್ತಿ, ಬಡಿಯಲು ಸುತ್ತಿಗೆ, ಹೀಗೆ ಹಲವು ಅಣಿಗೆಗಳು(tool) ಒಂದರಲ್ಲೇ ಇದ್ದು ನಿಮಗೆ ಅವಗಡ, ಅನಾಹುತಗಳಾದಾಗ, ನಿಮ್ಮ ಬಂಡಿಯ ಮಿಂಕಟ್ಟು (Battery) ಕಯ್ ಕೊಟ್ಟಾಗ ಇಲ್ಲವೇ ಕಾಡಿಗೆ ಸುತ್ತಾಟಕ್ಕೆ ಹೋದಾಗ ನೆರವಿಗೆ ಬರುತ್ತವೆ. ಇಶ್ಟೆಲ್ಲಾ ಕೆಲಸಕ್ಕೆ ಬರುವ ಈ ಹಲಬಳಕೆ ಮುಟ್ಟು ಬರೀ 200 ರೂಪಾಯಿಗಳಿಗೆ ಮಾತ್ರ.
4. ಬೀಗದ ಕಯ್ ಹೊದಿಕೆ (Key covers):
ಬೀಗದ ಕಯ್ಗೇಕೆ ಹೊದಿಕೆ ಮಾರಾಯ್ರೆ ಅಂತೀರಾ? ಬಹಳಶ್ಟು ಬಂಡಿಗಳ ಬೀಗದ ಕಯ್ ಹೆಚ್ಚಾಗಿ ಮೇಲಿನ ಬಾಗ ಪ್ಲ್ಯಾಸ್ಟಿಕ್‌ನಿಂದ ಮಾಡಿರುತ್ತಾರೆ. ಅಪ್ಪಿತಪ್ಪಿ ಕೆಳಗೆ ಬಿದ್ದಾಗ ಈ ಪ್ಲ್ಯಾಸ್ಟಿಕ್ ಬಿದ್ದು ಒಡೆದು ಹೋಗಬಹುದು ಇಲ್ಲವೇ ಹಾಳಾಗಬಹುದು. ನಿಮ್ಮ ಅಲೆಯುಲಿಯೊಂದಿಗೆ (Mobile) ಈ ಬೀಗದ ಕಯ್ಯನ್ನು ಜೇಬಿನಲ್ಲಿ ಇಟ್ಟಾಗ ಅಲೆಯುಲಿ ಮೇಲೆ ಗೀರು ಬಿದ್ದು ಅದರ ತೆರೆ ಹಾಳಾಗಬಹುದು. ಅದಕ್ಕೆಂದೇ ಬೀಗದ ಕಯ್ ಮೇಲ್ಬಾಗದ ಪ್ಲ್ಯಾಸ್ಟಿಕ್‌ಗೆ ಮೆತ್ತನೆಯ ಸಿಲಿಕಾನ್ ಹೊದಿಕೆ ಹಾಕಿದರೆ, ಸುಳುವಾಗಿ ಜೇಬಿನಲ್ಲಿಟ್ಟುಕೊಂಡು ಓಡಾಡಬಹುದು. ಇವುಗಳು ನಾವು ನಮ್ಮ ಅಲೆಯುಲಿಗೆ ತೊಡಿಸುವ ಮಯ್ ಹೊದಿಕೆಯಂತೆ ಎನ್ನಬಹುದು. 170 ರೂ.ಗಳಿಂದ ಶುರುವಾಗಿ 350 ರೂ.ಗಳ ಬೆಲೆಯಲ್ಲಿ ವಿವಿದ ಬಂಡಿಗಳ ಬೀಗದ ಕಯ್‌ಗೆ ಸಿಲಿಕಾನ್ ಹೊದಿಕೆಗಳು ಸಿಗುತ್ತವೆ.
5.ಜಾರದ ಚಾಪೆ (Anti slip mat):
ಬಂಡಿಯಲ್ಲಿ ಸಾಕಶ್ಟು ಸರಕು ಚಾಚು, ಸರಕು ಗೂಡುಗಳಿದ್ದರೂ ಕೆಲವೊಂದು ವಸ್ತುಗಳು ಬಂಡಿ ಓಡಿಸುವಾಗ ನಮ್ಮ ಮುಂದೆಯೇ ಕಾಣಬೇಕು ಇಲ್ಲವೇ ಅಕ್ಕ ಪಕ್ಕದಲ್ಲೇ ಇರಬೇಕು ಎಂಬ ಆಸೆ ಕೆಲವರಿಗೆ. ಇದರಲ್ಲಿ ಪ್ರಮುಕವಾಗಿ ಅಲೆಯುಲಿ, ತಂಪು ಕನ್ನಡಕ, ನಾಣ್ಯಗಳು ಮುಂತಾದವು. ಸಾಕಶ್ಟು ಸಾರಿ ಇವುಗಳನ್ನು ನಾವು ತೋರುಮಣೆ (Dashboard) ಮುಂದೆ ಬಿಸಾಕಿರುವುದುಂಟು. ಬಂಡಿಗೆ ತಡೆಯೊಡ್ಡಿದಾಗ (Brake) ಇವುಗಳು ತೋರುಮಣೆಯಿಂದ ಪದೇ ಪದೇ ಜಾರಿ ಕೆಳಗೆ ಬೀಳುತ್ತವೆ. ಇದೊಂತರ ಕಿರಿಕಿರಿ ಇದ್ದಂತೆ. ಇದರಿಂದ ತಪ್ಪಿಸಿಕೊಂಡು ಹಾಯಾಗಿ ಪಯಣಿಸಲು ನೀವು ತೋರುಮಣೆಯ ಮೇಲ್ಗಡೆ ಜಾರದ ಚಾಪೆ ಬಳಸಬಹುದಾಗಿದೆ. ಸುಮಾರು 80 ರೂಪಾಯಿಗಳಲ್ಲಿ ಸಿಗುವ ಜಾರದ ಈ ಕಿರುಚಾಪೆಗಳು ನಿಮ್ಮ ವಸ್ತುಗಳು ತೋರುಮಣೆಯಿಂದ ಜಾರದಂತೆ ತಡೆಹಿಡಿಯುತ್ತದೆ.
6.ಮಡಚಿಡಬಲ್ಲ ಕಪ್ ಸೇರುವೆಗಳು (Fold-able cup holders):
ಕೆಲವು ಬಂಡಿಗಳಲ್ಲಿ ಸಾಕಶ್ಟು ಕಪ್ ಸೇರುವೆಗಳು (holders) ಇರುವುದೇ ಇಲ್ಲ. ಕಾಪಿ ಹೀರುತ್ತ ಜುಮ್ಮನೆ ಬಂಡಿಯಲ್ಲಿ ಸಾಗಬೇಕೆಂದುಕೊಳ್ಳುವವರಿಗೆ, ತಮ್ಮ ಕಾಪಿ ಕಪ್ ಇಲ್ಲವೇ ತಂಪುಕುಡಿಗೆಯ (cold drink) ಟಿನ್‌ಗಳಿಗೆ ಜಾಗವೇ ಇರುವುದಿಲ್ಲ ಎಂಬ ನಿರಾಶೆ. ಇದಕ್ಕೆ ಚಿಂತಿಸದಿರಿ. ಬೇಕೆಂದಾಗ ಬಳಸಿ, ಬೇಡವಾದಾಗ ಮಡಚಿಡಬಲ್ಲ ಕಪ್ ಸೇರುವೆಗಳು ಇದೀಗ ಮಾರುಕಟ್ಟೆಯಲ್ಲಿ ಬಂದಿವೆ.
ರೂ.175 ರಿಂದ ಹಿಡಿದು ಹೆಚ್ಚಿನಬೆಲೆಗಳಲ್ಲಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ಕಪ್ಪು,ಕಂದು ಹೀಗೆ ವಿವಿದ ಬಣ್ಣಗಳ ಆಯ್ಕೆಯಲ್ಲಿ ಬಂದಿದ್ದು ನಿಮಗಿಶ್ಟದಂತೆ ಇವುಗಳನ್ನು ಬಂಡಿಯಲ್ಲಿ ಸೇರಿಸಿ ಬಳಸಿಕೊಳ್ಳಬಹುದು.
7.ಕುತ್ತಿಗೆ ದಿಂಬು (Neck cushion):
ದೂರದ ಊರುಗಳಿಗೆ ಪಯಣ ಮಾಡುವಾಗ ತಲೆಯೊರುಗಗಳ (Headrest) ಮೇಲೆ ತಲೆ ಚಾಚಿ ಬಂಡಿ ಓಡಿಸುವಾಗ ಇಲ್ಲವೇ ಪಯಣಿಸುತ್ತಿದ್ದರೆ ಕತ್ತು ನೋವು ಬರುವುದು ದಿಟ. ಇದನ್ನು ದೂರವಾಗಿಸಲು ಕತ್ತಿನ ದಿಂಬು ಬಳಸಿಕೊಳ್ಳಬಹುದು. ಬಗೆ ಬಗೆಯ ಬಣ್ಣಗಳಲ್ಲಿ ವಿವಿದ ಜವಳಿ ಬಳಸಿ ಮಾಡಿದ ದಿಂಬುಗಳು ಕಯ್ಗೆಟಕುವ ಬೆಲೆಯಲ್ಲಿ ಮಾರಾಟಕ್ಕಿವೆ. ಒಂದು ಜೊತೆ ಕುತ್ತಿಗೆ ದಿಂಬುಗಳು ಸುಮಾರು 120 ರೂ.ಗಳಿಗೆ ಸಿಗಲಿವೆ. ನೀವು ಮೇಲಿಂದ ಮೇಲೆ ಕಾರಿನಲ್ಲಿ ದೂರದ ಪಯಣ ಮಾಡುವವರಾಗಿದ್ದರೆ ಇವುಗಳನ್ನು ಬಳಸಿ ಕತ್ತು ನೋವಿಗೆ ಗುಡ್ ಬಾಯ್ ಹೇಳಬಹುದು.
8.ಬಂಡಿ ಒರೆಸಲು ಬಟ್ಟೆ (Car cleaning cloth):
ಎಲ್ಲೆಡೆ ದೂಳು ತುಂಬಿದ ಇಂದಿನ ವಾತಾವರಣದಲ್ಲಿ ನಾವು ಹದುಳವಾಗಿರುವುದಲ್ಲದೇ (Healthy) ನಮ್ಮ ಸುತ್ತಲಿನ ವಸ್ತುಗಳನ್ನು ಹಸನಾಗಿಡುವುದು ಅಶ್ಟೇ ಮುಕ್ಯವಾಗಿರುತ್ತದೆ. ನಾವು ಬಳಸುವ ಬಂಡಿಗಳು ಕೂಡ ಇದಕ್ಕೆ ಹೊರತಾಗಿಲ್ಲ. ಕಸಕಡ್ಡಿಗಳು, ದೂಳು ಕೇವಲ ನಮ್ಮ ಮಯ್ಯೊಳಿತಿಗಲ್ಲದೇ ಬಂಡಿಯ ಬಾಳ್ವಿಕೆಗೂ ಕೆಡುಕುಂಟು ಮಾಡಬಲ್ಲವು. ಚಿಕ್ಕಪುಟ್ಟ ಕಸದ ದೂಳಿನ ಕಣಗಳು ಬಂಡಿಯೊಂದರ ಮೇಲೆ ಹರಡಿಕೊಂಡಿರುವುದು ಸಾಮಾನ್ಯ. ಅದನ್ನು ನಾವು ಮಾಮೂಲಿ ಬಟ್ಟೆಯಿಂದ ಒರೆಸಿದಾಗ ಈ ದೂಳಿನ ಕಣಗಳು ಬಂಡಿ ಹೊರಮಯ್ ಸೇರಿ ಬಣ್ಣವನ್ನು ಹದಗೆಡಿಸಬಲ್ಲವಂತೆ. ಇದಕ್ಕೆ ಕಿರು ನಾರಿನಿಂದಾದ (Micro Fiber) ಬಟ್ಟೆಗಳನ್ನು ಬಳಸುವುದು ತಕ್ಕುದಾದದು. ಈ ಕಿರುನಾರು ಒಳಗೊಂಡ ಬಟ್ಟೆಗಳು ಹೆಚ್ಚು ಮೆತ್ತನೆಯಾಗಿ ನಿಮ್ಮ ಬಂಡಿಯ ಬಣ್ಣವನ್ನು ಎಂದಿನಂತೆ ಕಾಪಾಡಿಕೊಂಡು ಕಸವನ್ನು ದೂರಗೊಳಿಸಬಲ್ಲವು. ಅಯ್ಯೋ ಒರೆಸಲು ಬಟ್ಟೆ ಯಾವುದಾದರೇನು ಎಂದು ಅಸಡ್ಡೆ ತೋರಿದರೆ ದುಬಾರಿ ಬೆಲೆ ತೆರಬೇಕಾದೀತು! ಅಂದಹಾಗೆ ಈ ಬಟ್ಟೆಗಳು ತುಸು ದುಬಾರಿಯಾದರೂ 200-250 ರೂಪಾಯಿಗಳಿಗೆ ದೊರಕುತ್ತವೆ.
9.ಕೂರುಮಣೆ ಹಿಂಬದಿ ಸರಕು ಚೀಲಗಳು (seat back pockets):
ಸುದ್ದಿ ಹಾಳೆ, ಕಡತ, ಪೆನ್ನು, ನೀರಿನ ಬಾಟಲಿ ಮುಂತಾದವುಗಳಿಗೆ ನಿಮ್ಮ ಬಂಡಿಯಲ್ಲಿ ಜಾಗವೇ ಇಲ್ಲವೆಂದು ದೂರಬೇಡಿ. 200-300 ರೂ. ಬೆಲೆಬಾಳುವ ಕೂರುಮಣೆಯ ಹಿಂಬದಿಗೆ ಸೇರಿಸಬಲ್ಲ ಕಿರು ಸರಕು ಚೀಲಗಳು ನಿಮ್ಮ ಈ ಕೊರತೆಯನ್ನು ನೀಗಿಸಲಿವೆ. ಬಂಡಿಯ ಹಿಂಬದಿಯ ಕೂರುಮಣೆಗೆ ನೇತು ಹಾಕಿಕೊಂಡು ಚಿಕ್ಕ ಪುಟ್ಟ ದಿನಬಳಕೆಯ ಮುಂತಾದ ವಸ್ತುಗಳನ್ನು ಸಾಗಿಸಲು ಇವು ಬಲು ಸಹಕಾರಿ.
10.ತಿರುಪುಳಿ ಸೆಟ್ (Screwdriver set):
ಮನೆಗಳಲ್ಲಿ ಯಾವಾಗಲೂ ನೆರವಿಗೆ ಬರುವ ತಿರುಪುಳಿ(Screwdriver) ಸೆಟ್‌ವೊಂದು ಬಂಡಿಗಳಲ್ಲೂ ಹೊಂದಿದ್ದರೆ ಕಶ್ಟಕಾಲದ ಗೆಳೆಯನಿದ್ದಂತೆ. ಚಿಕ್ಕ ಚಿಕ್ಕ ಜೋಡಿಸುವಿಕೆ, ತಿರುಪು ಮೊಳೆಯನ್ನು (Screw) ತೆರೆಯಲು ಇವುಗಳ ನಮ್ಮ ಜೊತೆಗಿದ್ದರೆ ಕೆಲಸ ಬಲು ಸುಲಬ. ಹಲವಾರು ಗಾತ್ರದಲ್ಲಿ ಸಿಗುವ ತಿರುಪುಳಿಗಳ ಸೆಟ್ ನೀವು ಹೊಂದಿರಲೇಬೇಕಾದ ಅಗತ್ಯ ವಸ್ತುಗಳಲ್ಲೊಂದು. ಇವುಗಳು ಆರಂಬಿಕ ಬೆಲೆ 200 ರೂಪಾಯಿಗಳು ಹಾಗೂ ಅದರ ಮೇಲ್ಪಟ್ಟ ಬೆಲೆಗೆ ದೊರಕುತ್ತವೆ.
ಬಂಡಿಯ ಬಗೆ, ಆಕಾರ, ಗಾತ್ರಕ್ಕೆ ತಕ್ಕಂತೆ ಈ ಮೇಲಿನ ಎಲ್ಲ ವಸ್ತುಗಳ ಬೆಲೆಗಳು ಆಗಾಗ ಹೆಚ್ಚು ಕಡಿಮೆಯಾಗುವ ಸಾದ್ಯತೆ ಹೆಚ್ಚು. ನಿಮಗೆ ಕೊಳ್ಳಲು ಆಸಕ್ತಿಯಿದ್ದರೆ ವಿವಿದ ಮಿನ್ಕೊಳುಕೊಡೆಗಳಲ್ಲಿ, ನಿಮ್ಮ ಹತ್ತಿರದ ಬಿಡಿಬಾಗಗಳ ಅಂಗಡಿಗಳಲ್ಲಿ ದರಗಳನ್ನು ಹೋಲಿಸಿ ನೋಡಬಹುದು.
(ಮಾಹಿತಿ ಮತ್ತು ತಿಟ್ಟ ಸೆಲೆ:cartoq.com, ikuzocaraccessories.com, keyzone.in, mytools.co.nz, snapdeal.com, wisegeek.org)
ಇತ್ತೀಚಿನ ಅನಿಸಿಕೆಗಳು